ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಧು ಚಂದ್ರ



ಮಧು ಚಂದ್ರ


ಐಟಿ ಹುಡುಗ್ರೆಲ್ಲಿ ಕನ್ನಡ ಎಲ್ಲಿ ಎತ್ತಣದಿಂದೆತ್ತ ಸಂಬಂಧವಯ್ಯ ಅಂತೀರಾ?  ಇಂದು ಕನ್ನಡದ ಉತ್ಸಾಹವನ್ನು ಮಂದಮಾರುತದಂತೆ ಬೀಸುತ್ತಿರವವರಲ್ಲಿ ಐಟಿ ಹುಡುಗರ ಕೊಡುಗೆ ಸಾಕಷ್ಟಿದೆ ಸ್ವಾಮಿ. ಎಲ್ಲಕ್ಕಿಂತ ಮೊದಲು ಬೇಕು ಶ್ರದ್ಧೆ.

ಈ ಐಟಿ ಹುಡುಗರ ಕನ್ನಡ ಪ್ರೀತಿ ಶ್ರದ್ಧೆ ಬಗ್ಗೆ ಮಾತು ಬಂದಾಗ ನಮ್ಮ ಮಧು ಚಂದ್ರ ನೆನಪಾಗ್ತಾರೆ.  ನಾ ಹೇಳಿದ್ದು ಹನಿಮೂನ್ ಅಲ್ಲ ಕಣ್ರಿ. ಜೇನಿನಂತಹ ಆತ್ಮೀಯ ಸ್ವಭಾವದ, ಚಂದ್ರನಂತೆ ಶೋಭಾಯಮಾನರಾದ ಯುವ ಉತ್ಸಾಹಿ ಗೆಳೆಯ ಮಧು ಚಂದ್ರ ಅವರ ಬಗ್ಗೆ.  ಮಾರ್ಚ್ 8 ಅವರ ಹುಟ್ಟಿದ ದಿನ.  ಸುಂದರ ಹುಡುಗರ ಹುಟ್ಟಿದ ವರ್ಷ 🤔 ಉಷ್ ಸೀಕ್ರೇಟು 😊

ಭದ್ರಾವತಿಯ ಕನ್ನಡದ ವಾತಾವರಣದಲ್ಲಿ ಬೆಳೆದ ಕನ್ನಡದ ಹುಡುಗ ಮಧು ಚಂದ್ರ ತಾವು ಕೆಲಸ ಮಾಡಲು ಇಳಿದ ಮಾಹಿತಿ ತಂತ್ರಜ್ಞಾನದ ಆವರಣದಲ್ಲಿ,  ಕನ್ನಡ ಬಾರದವರಿಗೆ ತನ್ನ ಸಹಮನಸ್ಕರೊಡಗೂಡಿ ಕನ್ನಡ ಕಲಿಸುತ್ತಾ ಬಂದಿದ್ದಾರೆ.  ಇದನ್ನು ಕಳೆದ ಹನ್ನೆರಡು ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದು, ಅವರು ಇದುವರೆವಿಗೂ ಕನ್ನಡ ಕಲಿಸಿದವರ ಸಂಖ್ಯೆ 3000 ಕ್ಕೂ ಹೆಚ್ಚು.  ಇದಕ್ಕಾಗಿ ತಮ್ಮ ದಿನದ ಕಡೇ ಪಕ್ಷ ಒಂದು ತಾಸನ್ನು ಮೀಸಲಿಡುವುದನ್ನು ಅವರು ಸವಿಯಾಗಿ ಅನುಭವಿಸುತ್ತಾ ಬಂದಿದ್ದಾರೆ.‍ ಕನ್ಮಡ ಬಾರದವರನ್ನು ಕನ್ನಡ ಕಲಿಯಲು ಪ್ರೇರೇಪಿಸುವ ಕೆಲಸದಲ್ಲಿ ಅವರು ಇತರ ಕನ್ನಡಿಗರನ್ನೂ  ಪೋಣಿಸಿಕೊಳ್ಳುವುದರಿಂದ ಕನ್ನಡಿಗರೂ ಕೆಲಹೊತ್ತು ಕನ್ನಡದಲ್ಲಿ ಈಜಿ, ಇತರರನ್ನೂ ತಮ್ಮೊಂದಿಗೆ ತರುತ್ತಾರೆ.  ಹೀಗೆ ಎಲ್ಲವನ್ನೂ ಒಟ್ಟಿಗೆ ತರುವುದಲ್ಲವೇ ಕನ್ನಡದ ನಂದನ ವನ ಸೃಷ್ಟಿಸುವ ಕಾರ್ಯ! ಈ ಕನ್ನಡದ ಮಧು ಹಂಚುತ್ತಿರುವ ಮಧು ಚಂದ್ರರ ಕಾರ್ಯ ಶ್ಲಾಘನೀಯ.

ಕನ್ನಡ ಕಲಿಸುವುದೇ ಅಲ್ಲದೆ ಸುಂದರ ಕನ್ನಡದಲ್ಲಿ ಹಲವು ಪತ್ರಿಕೆಗಳಲ್ಲಿ ಲೇಖನ, ಅಂಕಣಗಳನ್ನೂ ಮೂಡಿಸುತ್ತಿರುವ ಕನ್ನಡ ಪ್ರೀತಿಯ ಆತ್ಮೀಯ ಗೆಳೆಯ ಮಧುಚಂದ್ರರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.  ಅವರೊಡನೆ ಸ್ನೇಹ ಭಾಗ್ಯದ ಕೆಲವು ಸವಿಗಳಿಗೆಗಳನ್ನು ಕಳೆದ ಸೌಭಾಗ್ಯ ನನ್ನದಾಗಿರುವುದಕ್ಕೆ ಸಂತೋಷಿಸುತ್ತೇನೆ.


 creative talent and writer Madhu Chandra​

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ