ಭಾಗೀರಥಿ ನದಿ
ಭಾಗೀರಥಿ
ಇಂದು ಭಾಗೀರಥಿ ಜಯಂತಿ. ಭಾಗೀರಥಿ ಗಂಗಾನದಿಯ ಉಗಮ ನಾಮ. ಕಮಠ ಹಿಮಪರ್ವತದ ಬುಡದಲ್ಲಿ ಸುಮಾರು 2364 ಮೀಟರ್ ಎತ್ತರದಲ್ಲಿ ಗೋಮುಖ ಎಂಬಲ್ಲಿ ಹುಟ್ಟಿ ಅಲ್ಲಿಂದ ಸುಮಾರು 25 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ತೆಹ್ರಿಘರ್‍ವಾಲ್ ಜಿಲ್ಲೆಯ ಗಂಗೋತ್ರಿ ಧಾಮದಲ್ಲಿ ಈ ನದಿ ಗೋಚರವಾಗುತ್ತಂದೆಂಬುದು ಭೌಗೋಲಜ್ಞರ ಅಭಿಪ್ರಾಯ. ಈ ಗಂಗೋತ್ರಿಯಲ್ಲಿ ಗಂಗೆ, ಯಮುನೆ, ಸರಸ್ವತಿ, ಲಕ್ಷ್ಮಿ, ಪಾರ್ವತಿ ಮತ್ತು ಅನ್ನಪೂರ್ಣೆಯರ ಸ್ವರ್ಣಪ್ರತಿಮೆಗಳಿರುವ ಮಂದಿರವೂ ಭಗೀರಥ ಗಂಗೆಯ ಸಮ್ಮುಖದಲ್ಲಿ ಕೈಜೋಡಿಸಿ ನಿಂತಿರುವ ಪ್ರತಿಮೆಯೂ ಇವೆ. ಈ ಧಾಮದ ಸುತ್ತಲೂ ದೇವದಾರುವಿನ ಅರಣ್ಯವಿದೆ. ಅಲ್ಲಿಂದ ಕೆಳಗೆ ಹರಿದ ಭಾಗೀರಥಿಗೆ ಕೇದಾರಗಂಗಾ ನದಿ ಬಂದು ಸೇರುತ್ತದೆ. ಮುಂದೆ ಅರ್ಧ ಕಿಮೀ ಕೆಳಗೆ ಬಂದರೆ ಭಾಗೀರಥಿ ನದಿ ಅಲ್ಲಿರುವ ಒಂದು ಶಿವಲಿಂಗದ ಮೇಲೆ ದುಮುಕುತ್ತದೆ. ಇಲ್ಲಿಗೆ ಅನತಿ ದೂರದಲ್ಲಿ ಹರಶಿಲ ಎಂಬ ಸ್ಥಳವಿದ್ದು ಇಲ್ಲಿಂದ ಕೈಲಾಸ ಹಾಗೂ ಮಾನಸ ಸರೋವರಗಳಿಗೆ ಹೋಗುವ ದಾರಿಯಿದೆ. ಇದರ ಸಮೀಪದಲ್ಲಿಯೇ ಶ್ಯಾಮಪ್ರಯಾಗ ಎಂಬಲ್ಲಿ ಭಾಗೀರಥಿಗೆ ಶ್ಯಾಮಗಂಗಾ ನದಿ ಬಂದು ಸೇರುತ್ತದೆ. ಭಾಗೀರಥಿ ನದಿಯ ದಡದಲ್ಲಿ ಅನೇಕ ಪ್ರಾಚೀನ ಮಂದಿರಗಳಿರುವ ಉತ್ತರಕಾಶಿ ಎಂಬ ನಗರವಿದೆ. ಇಲ್ಲಿಯ ವಿಶ್ವನಾಥ, ಏಕಾದಶರುದ್ರ ಮತ್ತು ಶಕ್ತಿ ಮಂದಿರಗಳು ಪ್ರಮುಖವಾದವು. ಉತ್ತರ ಕಾಶಿಯಿಂದ ಕೆಳಗೆ ಬಂದರೆ ಧಾರಾಸು ಎಂಬ ಸ್ಥಳವಿದೆ. ಇಲ್ಲಿಂದ ಯಮುನೋತ್ರೀ ಧಾಮಕ್ಕೆ ಮಾರ್ಗವಿದೆ. ಧಾರಾಸಿಯಿಂದ ಮುಂದೆ 45 ಕಿಮೀ ದೂರದಲ್ಲಿರುವ ಭಿಲಂಗನಾ ನದಿ ಸೇರುತ್ತದೆ. ಸಂಗಮದ ಬಳಿಯೇ ಉತ್ತರ ಕಾಶಿ ಜಿಲ್ಲೆಯ ಪ್ರಸಿದ್ಧವಾದ ಟಹರಿ ನಗರವಿದೆ. ಇದು ಮೊದಲು ಮಹಾರಾಜ ಸುದರ್ಶನ ಶಾಹನ ರಾಜಧಾನಿಯಾಗಿತ್ತು. ಇಲ್ಲಿ ಬದರೀನಾಥ ಹಾಗೂ ಕೇದಾರನಾಥ ಮಂದಿರಗಳಿವೆ. ಇಲ್ಲಿಂದ ಮೂಲ ಕೇದಾರಕ್ಕೆ ಹೋಗಲು ರಸ್ತೆ ಇದೆ. ಟಹರಿಯಿಂದ ಕೆಳಗೆ ಹರಿದ ಭಾಗೀರಥಿಗೆ ದೇವಪ್ರಯಾಗದ ಬಳಿ ಅಲಕನಂದಾ ನದಿ ಸೇರುತ್ತದೆ. ಇಲ್ಲಿ ರಘುನಾಥ ಮಂದಿರ ಮತ್ತು ಕೆಲವು ಬ್ರಾಹ್ಮೀಲಿಪಿಯ ಪುರಾತನ ಶಾಸನಗಳಿವೆ. ಈ ಸಂಗಮಸ್ಥಳ ಅತ್ಯಂತ ರಮಣೀಯ ಹಾಗೂ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿದ್ದ ಮುಂದೆ ಹರಿದ ಭಾಗೀರಥಿಯ ದೊಡ್ಡ ಪ್ರವಾಹವೇ ಲೋಕ ಪ್ರಸಿದ್ಧ ಗಂಗಾನದಿ.
ಪೂರ್ವದಲ್ಲಿ ಅಯೋಧ್ಯಾನಗರಿಯಲ್ಲಿ ಸಗರನೆಂಬ ಚಕ್ರವರ್ತಿ ಇದ್ದ. ಅವನಿಗೆ ಇಬ್ಬರು ಹೆಂಡತಿಯರು. ಹಿರಿಯಳಾದ ಕೇಶಿನಿ ಧರ್ಮಿಷ್ಠೆ. ಕಿರಿಯವಳಾದ ಸುಮತಿಗೆ ಆಸೆ ಹೆಚ್ಚು. ಸಗರ ತನ್ನ ಪತ್ನಿಯರೊಂದಿಗೆ ತಪಸ್ಸು ಮಾಡಿದ. ಭಗುಮುನಿಗಳು ತೃಪ್ತರಾಗಿ ವರ ನೀಡಿದರು. ರಾಜಾ ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶವನ್ನು ನಡೆಸುವ ಒಬ್ಬ ಮಗನಾಗುತ್ತಾನೆ, ಇನ್ನೊಬ್ಬಳಿಗೆ ಅರವತ್ತು ಸಾವಿರ ಪುತ್ರರು ಹುಟ್ಟುತ್ತಾರೆ ಎಂದರು.
ಕೇಶಿನಿ ಒಬ್ಬ ಮಗ ಸಾಕು ಎಂದಳು, ಸುಮತಿ ಅರವತ್ತು ಸಾವಿರ ಮಕ್ಕಳನ್ನು ಬೇಡಿದಳು. ಕೇಶಿನಿಯ ಮಗ ಅಸಮಂಜ ವಿಕ್ಷಿಪ್ತ ಸ್ವಭಾವದವನು, ದುಃಖಪ್ರೇಮಿ, ಬೇರೆಯವರ ತೊಂದರೆಗಳಿಗೆ ಸಂತೋಷಪಡುವವನು. ಅಸಮಂಜನಿಗೆ ಅಂಶುಮಂತನೆಂಬ ಮಗ ಜನಿಸಿದ. ಅವನು ವೀರ, ವಿನಯಿ ಮತ್ತು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಸುಮತಿ ಸೋರೆಕಾಯಿಯಂಥ ಪಿಂಡವನ್ನು ಹಡೆದಳು. ಆ ಪಿಂಡ ಒಡೆದು ಅರವತ್ತು ಸಾವಿರ ಶಿಶುಗಳು ಬಂದವು.
ಸಗರ ಒಂದು ಮಹಾಯಜ್ಞವನ್ನು ಮಾಡಬೇಕೆಂದು ನಿಶ್ಚಯಿಸಿ ಗುರುಗಳೊಂದಿಗೆ ಯೋಜನೆ ಮಾಡಿದ. ಯಜ್ಞ ಪ್ರಾರಂಭವಾಯಿತು. ಯಜ್ಞದ ಕುದುರೆಯನ್ನು ಅಂಶುಮಂತ ರಕ್ಷಿಸಿಕೊಂಡು ನಡೆದ. ಆಗ ಇಂದ್ರ ಮಾಯೆಯಿಂದ ರಾಕ್ಷಸ ಶರೀರವನ್ನು ಧರಿಸಿ ಯಜ್ಞದ ಕುದುರೆಯನ್ನು ಅಪಹರಿಸಿಕೊಂಡು ಹೋದ. ಋತ್ವಿಜರು, ರಾಜಾ ಯಜ್ಞಾಶ್ವವನ್ನು ಯಾರೋ ಅಪಹರಿಸಿದ್ದಾರೆ. ಅದನ್ನು ಬೇಗನೇ ತರಿಸು. ಯಜ್ಞದ ಕುದುರೆ ದೊರಕದಿದ್ದರೆ ಯಜ್ಞಭಂಗವಾಗಿ ನಮ್ಮೆಲ್ಲರಿಗೂ ಕೇಡಾಗುತ್ತದೆ ಎಂದು ಒತ್ತಾಯಿಸಿದರು. ಸಗರ ಚಕ್ರವರ್ತಿ ತನ್ನ ಅರವತ್ತು ಸಾವಿರ ಮಕ್ಕಳಿಗೆ ಹೇಳಿದ, ಪುತ್ರರೇ, ಇಂಥ ಪವಿತ್ರವಾದ ಯಜ್ಞಕ್ಕೆ ಅಡ್ಡವಾಗಿ ರಾಕ್ಷಸರು ಹೇಗೆ ಬಂದರೋ ತಿಳಿಯದು. ನೀವು ಹೋಗಿ ಆ ಯಜ್ಞಾಶ್ವವನ್ನು ಹುಡುಕಿ ತನ್ನಿ. ಆ ಕಾರ್ಯಕ್ಕೆ ಏನು ಬೇಕೋ ಅದನ್ನು ಮಾಡಿ. ಬೇಕಾದರೆ ನೆಲವನ್ನು ಸೀಳಿ, ಸಮುದ್ರವನ್ನು ಬರಿದು ಮಾಡಿ ಎಂದ. ತಂದೆಯ ಆಜ್ಞೆಯಂತೆ ಈ ಮಕ್ಕಳು ಭೂಮಿಯ ಇಂಚು, ಇಂಚನ್ನು ಶೋಧಿಸತೊಡಗಿದರು. ಹರಿತವಾದ ಆಯುಧಗಳಿಂದ, ಶೂಲಗಳಿಂದ ನೆಲವನ್ನು ಭೇದಿಸತೊಡಗಿದರು. ದೇವತೆಗಳು ಭೀತರಾಗಿ ಬ್ರಹ್ಮನ ಬಳಿಗೆ ತೆರಳಿ, `ಸಗರ ಪುತ್ರರು ಒಂದೇ ಸಮನೆ ಭೂಮಿಯನ್ನು ಅಗೆಯುತ್ತಿದ್ದಾರೆ. ಇದರಿಂದ ಭೂಮಿಗೆ ಮುಂದೆಂದೂ ತುಂಬಿಕೊಳ್ಳಲಾಗದ ನಷ್ಟವಾಗುತ್ತದೆ. ಇದನ್ನು ತಡೆಯಬೇಕು` ಎಂದರು.
ಆಗ ಬ್ರಹ್ಮ ಹೇಳಿದ ಮಾತು ಇದು:
ಪಥಿವ್ಯಾಶ್ಚಾಪಿ ನಿರ್ಭೇದೋ ದಷ್ಟ ಏವ ಸನಾತನಃ
ಸಗರಸ್ಯ ಚ ಪುತ್ರಾಣಾಂ ವಿನಾಶೋ ದೀರ್ಘಜೀವಿನಾಮ್
(ವಾಲ್ಮೀಕಿ ರಾಮಾಯಣ, ಸರ್ಗ 40, ಶ್ಲೋಕ 4)
ಹೀಗೆ ಭೂಮಿಯ ಛೇದನ ಕಾರ್ಯ ಪ್ರತಿ ಕಲ್ಪದಲ್ಲೂ ಸನಾತನವಾಗಿ ನಡೆಯುತ್ತಲೇ ಇದೆ. ಇದರಿಂದ ಅಲ್ಪಾಯುಗಳಾದ ಸಗರ ಪುತ್ರರ ವಿನಾಶವೂ ಆಗುತ್ತದೆ.
ಅಹಂಕಾರಿಗಳಾದ ಸಗರ ಪುತ್ರರು ಕುದುರೆಯನ್ನು ಹುಡುಕುವುದಕ್ಕಾಗಿ ಭೂಮಿಯನ್ನು ಸೀಳಿ, ಸೀಳಿ ಧ್ವಂಸಮಾಡಿದರು. ಕೊನೆಗೆ ಕಪಿಲಾವತಾರದಲ್ಲಿದ್ದ ಸನಾತನವಾದ ವಾಸುದೇವನನ್ನು ಕಂಡರು. ಅವನ ಪಕ್ಕದಲ್ಲೇ ಯಜ್ಞಾಶ್ವ ಮೇಯುತ್ತಿತ್ತು. ಅವನೇ ಕುದುರೆಯ ಕಳ್ಳನಿರಬೇಕೆಂದು ಅವನ ಮೇಲೆ ಆಕ್ರಮಣ ಮಾಡಲು ಹೋದಾಗ ಆ ಋಷಿಗೆ ಉಗ್ರಕೋಪ ಬಂದು ಒಮ್ಮೆ ಹೂಂಕಾರ ಮಾಡಿದ. ಆಗ ಬಂದ ಜ್ಞಾಲೆಯಲ್ಲಿ ಸಗರನ ಅರವತ್ತು ಸಾವಿರ ಮಕ್ಕಳು ಸುಟ್ಟು ಬೂದಿಯಾಗಿ ಹೋದರು.
ಭೂಮಿಯನ್ನು ಬಗೆದು ಬಗೆದು ಬರಿದು ಮಾಡುವಾಗ ಮುಂದೆಂದೂ ತುಂಬಿಕೊಳ್ಳಲಾಗದ ಅನಾಹುತವನ್ನು ಮಾಡುತ್ತಿದ್ದೇವೆ ಎಂಬುದು ಗಮನಕ್ಕೇ ಬರುವುದಿಲ್ಲವಲ್ಲ. ಆ ಬ್ರಹ್ಮನ ಮಾತೂ ಕಿವಿಯ ಮೇಲೆ ಬೀಳುವುದಿಲ್ಲ. ಹೀಗೆ ಭೂಮಿ ಛೇದನ ಮಾಡುವವರು ಅಲ್ಪಾಯುಷಿಗಳಾಗಿ ವಿನಾಶ ಹೊಂದುತ್ತಾರೆ ಎಂದು ಬ್ರಹ್ಮ ಅಂದು ಹೇಳಿದ ಮಾತು ಇಂದೂ ಅಂಥವರ ಗಮನಕ್ಕೆ ಬರುವುದು ಒಳ್ಳೆಯದು. ಹಾಗೆ ಮಾಡಿದವರು ಜೀವನದಲ್ಲಿ, ಯಶಸ್ಸಿನ ಪಯಣದಲ್ಲಿ, ಅಧಿಕಾರದ ಸಿಂಹಾಸನದಲ್ಲಿ ಬಹಳ ಕಾಲ ಬದುಕದೇ ವಿನಾಶಕ್ಕೆ ನುಗ್ಗುತ್ತಿರುವುದನ್ನು ಕಂಡಾಗ ಪುರಾಣದ ಕಥೆಗಳು ಬರೀ ಕಥೆಗಳಾಗಿರದೇ ಸಾಂಕೇತಿಕವಾದ ಶಾಶ್ವತ ಸತ್ಯಗಳಾಗಿವೆ ಎನ್ನಿಸುತ್ತದೆ.
ಇಕ್ಷ್ವಾಕು ವಂಶದ ದೊರೆಯಾದ ಭಗೀರಥ ದಿಲೀಪನ ಮಗ. ಮಹಾಸಾಹಸಿ. ತನ್ನ ತಾತ ಸಗರ ಚಕ್ರವರ್ತಿಯ ಅರುವತ್ತು ಸಹಸ್ರ ಮಕ್ಕಳು ಮುನಿಶಾಪದಿಂದ ಸುಟ್ಟು ಬೂದಿಯಾಗಿದ್ದು ಸದ್ಗತಿ ಕಾಣದೆ ಇರುವ ಸಂದರ್ಭದಲ್ಲಿ ಅವರ ಉದ್ಧರಕ್ಕಾಗಿ ದೇವಗಂಗೆಯನ್ನು ಕುರಿತು ಉಗ್ರವಾಗಿ ತಪಸ್ಸುಮಾಡಿದ.
ದೇವಗಂಗೆಯು ಒಪ್ಪಿ ಭೂಮಿಗೆ ಧುಮ್ಮಿಕ್ಕುವಾಗ ಅದರ ರಭಸಕ್ಕೆ ಭೂಮಂಡಲವೇ ಕೊಚ್ಚಿಹೋಯಿತು. ಅದನ್ನು ತಡೆಯಲು ಶಿವನನ್ನು ಒಪ್ಪಿಸಿದ. ಅದರಂತೆ ಧುಮ್ಮಿಕ್ಕುವ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ಧರಿಸಿದ. ಆದರೆ ಗಂಗೆ ಶಿವನ ಜಡೆಯಲ್ಲೇ ಅಡಗಿ ಹೋದಾಗ ಮತ್ತೆ ಭಗೀರಥ ಶಿವನನ್ನು ಪ್ರಾರ್ಥಿಸಿ ಗಂಗೆಯನ್ನು ಅವನ ಜಟೆಯಿಂದ ಬಿಡಿಸಿಕೊಂಡು ಬಂದ.
ಹೀಗೆ ಗಂಗೆ ಅವತರಿಸುವಾಗ ಜಹ್ನು ಎಂಬ ರಾಜನ ಯಜ್ಞ ಶಾಲೆಯ ಮೇಲೆ ಹರಿದು ಅದು ಕೊಚ್ಚಿಹೋಯಿತು. ಇದ್ದರಿಂದ ಕೋಪಗೊಂಡ ಜಹ್ನು ಆ ಗಂಗೆಯನ್ನು ಆಪೋಶನ ತೆಗೆದುಕೊಂಡ. ಭಗೀರಥನ ಸ್ತೋತ್ರದಿಂದ ಮತ್ತೆ ಗಂಗೆಗೆ ಬಿಡುಗಡೆ ಸಿಕ್ಕಿ ಸಗರಪುತ್ರರ ಬೂದಿ ರಾಶಿಯ ಮೇಲೆ ಹರಿದಳು.
ಆಕೆ ಹರಿದದ್ದು ಹೇಗೆ ಎಂದು ಬೇಂದ್ರೆ ಅಜ್ಜನ ಗಂಗಾವತರಣ ನೆನೆದರೆ ಸಂತೋಷ ಆಗುತ್ತದಲ್ಲವೆ...
ಗಂಗಾವತರಣ
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹನಿಸಿ ಬಾ ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ
ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ
ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಕೊಳೆಯ ತೊಳೆವವರು ಇಲ್ಲ ಬಾ ಬೇರೆ
ಶಕ್ತಿಗಳು ಹೊಲ್ಲ ಬಾ ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ
ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದಮ್ ದಮ್ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ ಬಾಳು ಬೆಳಕಾಗಿ ಬೆಳೆದು ಬಾ ಕೈ ತೊಳೆದು ಬಾ ಮೈ ತೊಳೆದು ಬಾ
ಇಳಿದು ಬಾ ತಾಯಿ ಇಳಿದು ಬಾ ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ ದತ್ತ ನರಹರಿಯ ಮುತ್ತೆ ಬಾ ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಹೀಗೆ ದೇವಗಂಗೆ ಬಂದಳು. ಸಗರ ಪುತ್ರರಿಗೆ ಸದ್ಗತಿ ದೊರಕಿತು. ಹೀಗೆ ನಿರಂತರ ಪ್ರಯತ್ನದಿಂದ ಭಗೀರಥ ತನ್ನ ಪಿತೃಗಳನ್ನು ಉದ್ಧರಿಸಿ ಧನ್ಯನಾದ. ಈ ಪ್ರಸಂಗ ರಾಮಾಯಣದಲ್ಲಿ ಬರುತ್ತದೆ.
ಭಗೀರಥನಿಗೆ ಹಂಸಿಯೆಂಬ ಮಗಳಿದ್ದಳೆಂದೊ ಅವಳನ್ನು ಕೌತ್ಸುಮುನಿ ಮದುವೆಯಾಗಿದ್ದನೆಂದೂ ಧರ್ಮಸ್ವರೂಪ ಮತ್ತು ಅನುಷ್ಠಾನದ ವಿಷಯವಾಗಿ ಭಗೀರಥ ಬ್ರಹ್ಮನೊಂದಿಗೆ ಸಂವಾದ ಮಾಡಿದನೆಂದೂ ಮಹಾಭಾರತದಿಂದ ತಿಳಿದುಬರುತ್ತದೆ.
ಪ್ರಾಚೀನ ಕಾಲದ ಗೌಡ, ಪಾಂಡವ, ರಾಜಮಹಲ್ ಹಾಗೂ ನವದ್ವೀಪ ಮೊದಲಾದ ರಾಜರ ರಾಜಧಾನಿಗಳೂ ಈ ನದಿಯ ದಡದಲ್ಲಿಯೇ ಇದ್ದುವೆಂದು ಹೇಳಲಾಗುತ್ತದೆ.
ನಮ್ಮ ದೇಶ ಪುಣ್ಯಭೂಮಿ ಎಂದು ಭಾವಿಸಿರುವ ಭಾರತೀಯ ಮನಗಳಿಗಂತೂ ಭಾಗೀರಥಿ ಮತ್ತು ಗಂಗೆ ಎಂಬುದು ಅಂತರಂಗಕ್ಕೆ ನಿರಂತರ ಧನ್ಯತೆ ಹುಟ್ಟಿಸುವ ಪ್ರವಹಿನಿ.
Bhagirathi River
ಕಾಮೆಂಟ್‌ಗಳು