ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತೀಯ ಸಂವಿಧಾನ


 ಭಾರತೀಯ ಸಂವಿಧಾನ

Indian Constitution 

ಭಾರತದ್ದು ಲಿಖಿತ ಹಾಗೂ ಅಧಿನಿಯಮಿತ ಸಂವಿಧಾನ. ಅದು 1949 ನವೆಂಬರ್ 26ರಂದು ಸಂವಿಧಾನ ಸಭೆಯಿಂದ ಅಂಗೀಕೃತವಾಗಿ 1950 ಜನವರಿ 26ರಂದು ಆಚರಣೆಗೆ ಬಂದಿತು. ನ್ಯಾಯ, ಸ್ವಾತಂತ್ರ್ಯ ಸಮತೆ ಮತ್ತು ಭ್ರಾತೃಭಾವಗಳ ಅತ್ಯುಚ್ಚ ಆದರ್ಶ ಮತ್ತು ಧ್ಯೇಯ ಒಳಗೊಂಡಿರುವ ಭಾರತದ ಸಂವಿಧಾನ ಪ್ರಸ್ತಾವನೆ ಮೂಲದಲ್ಲಿ ಕೆಳಗಿನಂತಿತ್ತು:

ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಂಪೂರ್ಣ ಪ್ರಭುತ್ವ ಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯವಾಗಿ ವ್ಯವಸ್ಥೆಗೊಳಿಸುವುದಕ್ಕಾಗಿಯೂ ಭಾರತದ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ನ್ಯಾಯ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮೋಪಾಸನಾಸ್ವಾತಂತ್ರ್ಯ ಹಾಗೂ ಸ್ಥಾನಮಾನ ಮತ್ತು ಅವಕಾಶಸಮತೆ ದೊರೆಯುಂತೆ ಮಾಡುವುದಕ್ಕಾಗಿಯೂ ವ್ಯಕ್ತಿಗೌರವ ರಾಷ್ಟ್ರದ ಏಕತೆ ಸುನಿಶ್ಚಿತವಾಗಿ ನೆಲೆಗೊಳಿಸುವಂಥ ಬಂಧು ಭಾವನೆ ಇವನ್ನು ಸರ್ವರಲ್ಲಿ ವೃದ್ಧಿಗೊಳಿಸುವುಕ್ಕಾಗಿಯೂ ದೃಢಸಂಕಲ್ಪಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ ಈ 1949ನೆಯ ಇಸವಿ ನವೆಂಬರ್ ತಿಂಗಳು ಇಪ್ಪತ್ತಾರನೆಯ ತಾರೀಕಾದ ಇಂದಿನ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ.

1976ರಲ್ಲಿ ಆದ 42ನೆಯ ತಿದ್ದುಪಡಿಯಿಂದ ಪ್ರಸ್ತಾವನೆಯಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯ ಎಂಬ ವಾಕ್ಯಭಾಗದ ಸ್ಥಾನದಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಸಮಾಜವಾದಿಧರ್ಮಾತೀತ ಲೋಕ ತಂತ್ರಾತ್ಮಕ ಗಣರಾಜ್ಯ ಎಂಬವಾಕ್ಯ ಭಾಗವನ್ನೂ 'ರಾಷ್ಟ್ರದ ಏಕತೆ ಎಂಬ ಪದಗಳ ಸ್ಥಾನದಲ್ಲಿ 'ರಾಷ್ಟ್ರದ ಏಕತೆ ಮತ್ತು ಅಖಂಡತೆ ಎಂಬ ಪದಗಳನ್ನೂ ಸೇರಿಸಲಾಗಿದೆ. ಪ್ರಸ್ತಾವನೆಯ ಮೊದಲ ಸಾಲು ಭಾರತ ಗಣರಾಜ್ಯದಲ್ಲಿ ರಾಜಕೀಯ ಅಧಿಕಾರಿ ಜನತೆಯಿಂದ ಪ್ರಾಪ್ತವಾಗುತ್ತದೆಂಬುದನ್ನು ಸ್ಪಷ್ಟೀಕರಿಸುತ್ತದೆ. ಸಂಪೂರ್ಣಪ್ರಭುತ್ವಸಂಪನ್ನ ಎಂಬ ಪದಗಳು ಭಾರತ ಎಲ್ಲ ಬಾಹ್ಯ ಹತೋಟಿಗಳಿಂದ ಮುಕ್ತವಾಗಿರಬೇಕೆಂಬುದನ್ನೂ 'ಸಮಾಜವಾದಿ ಎಂಬ ಪದ ಸಾಮಾಜಿಕಾರ್ಥಿಕ ಕ್ರಾಂತಿಗಾಗಿ ಪರಿಶ್ರಮಿಸಬೇಕೆನ್ನುವ ರಾಷ್ಟ್ರದ ಸಂಕಲ್ಪವನ್ನೂ ಗಣರಾಜ್ಯ ಎಂಬ ಪದ ಭಾರತದಲ್ಲಿ ಯಾವ ತರಹದ ರಾಜಪ್ರಭುತ್ವ ಪದ್ಧತಿಗೂ ಎಡೆಯಿಲ್ಲವೆಂಬುದನ್ನೂ ವಿಶದೀಕರಿಸುತ್ತವೆ. ಭಾರತ ಲೋಕತಂತ್ರಾತ್ಮಕ ದೇಶ. ಅಂದರೆ ಪ್ರಜಾಪ್ರತಿನಿಧಿಗಳಿಂದ ಆಳಲ್ಪಡಬೇಕಾದ ದೇಶ. ಅಖಂಡತೆ ಎಂಬ ಹೊಸತಾಗಿ ಸೇರಿಸಲಾಗಿರುವ ಪದ ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ಹತ್ತಿಕ್ಕಿ ಪ್ರಜೆಗಳು ಭಾರತದ ಪ್ರತಿಯೊಂದು ಭಾಗವೂ ತಮ್ಮದೇ ಮನೆಯೆಂದು ಮನಗಾಣುವಂತಾಗಬೇಕೆಂಬುದನ್ನು ಮಾಡುವುದಕ್ಕೆ ರಾಷ್ಟ್ರದ ನಿರ್ಧಾರವನ್ನು ಸೂಚಿಸುತ್ತದೆ. ಭಾರತದಲ್ಲಿ ಯಾವ ಬಗೆಯ ಧರ್ಮಾಂಧತೆಗೂ ಎಡೆಯಿರುವುದಿಲ್ಲ. ಭಾರತ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕುಗಳ ತಳಹದಿಯ ಮೇಲೆ ಚುನಾಯಿತ ಸಂಸದೀಯ ಪದ್ಧತಿಯ ಸರ್ಕಾರ ಹೊಂದಿರುವ ಸಮಾಜವಾದಿ, ಧರ್ಮಾಂಧತಾರಹಿತ, ಸಂಪೂರ್ಣ ಪ್ರಭುತ್ವಸಂಪನ್ನ ಪ್ರಜಾಸತ್ತಾತ್ಮಕ ಗಣರಾಜ್ಯ. ಸಂವಿಧಾನ ನಾಡಿನ ಮೂಲಕಟ್ಟಳೆ. ಸರ್ಕಾರದ ಪರರ್ವೋಚ್ಚ ಶಕ್ತಿಯ ಉಗ್ರಾಣ, ಅದು ಆ ಶಕ್ತಿಯ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮೊದಲಾದ ವಿವಿಧ ಅಂಗಗಳ ರಚನೆ, ಕಾರ್ಯಾಚರಣೆ, ಅಧಿಕಾರ ಮತ್ತು ಪರಿಮಿತಿಗಳನ್ನೂ ಕೇಂದ್ರ ಮತ್ತು ರಾಜ್ಯಮಟ್ಟಗಳಲ್ಲಿ ಆ ಅಂಗಗಳ ಪರಸ್ಪರ ಸಂಬಂಧಗಳನ್ನೂ ಸರ್ಕಾರ ಹಾಗೂ ಪ್ರಜೆಗಳ ನಡುವಣ ನಂಟನ್ನೂ ವಿವರಿಸುತ್ತದೆ.

ಮಾಹಿತಿ ಕೃಪೆ: ಮೈಸೂರು ವಿಶ್ವಕೋಶ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ