ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಡ್ಯ ರಮೇಶ್


ಮಂಡ್ಯ ರಮೇಶ್

ಮಂಡ್ಯ ರಮೇಶ್ ಪ್ರಸಿದ್ಧ ರಂಗಕರ್ಮಿ ಮತ್ತು ಚಲನಚಿತ್ರ ಕಲಾವಿದರು.

ಮಂಡ್ಯ ರಮೇಶ್ 1964ರ  ಜುಲೈ 14ರಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಜನಿಸಿದರು. ರಮೇಶರ ತಂದೆ ಎನ್‌. ಸುಬ್ರಹ್ಮಣ್ಯ.  ತಾಯಿ ನಾಗಲಕ್ಷ್ಮೀ. ರಮೇಶರು ಓದಿದ್ದು ಬಿ.ಎಸ್ಸಿ ಪದವಿ. ಆದರೆ  ಹೆಚ್ಚು  ಬೆಳೆದದ್ದು ರಂಗಭೂಮಿಯ ಒಡನಾಟದಲ್ಲಿ. 1982ರ ವರ್ಷದಲ್ಲಿ ಅಶೋಕ ಬಾದರದಿನ್ನಿ  ಅವರ  ರಂಗಭೂಮಿ  ಕಾರ್ಯಾಗಾರದಲ್ಲಿ  ಭಾಗವಹಿಸಿದ್ದರು.    ಮುಂದೆ ನಿನಾಸಂ ನಾಟಕಶಾಲೆಯಲ್ಲಿನ ಪದವಿ ಹಾಗೂ ರಂಗಾಯಣದಲ್ಲಿನ  ಕಲಾವಿದರಾಗಿ ಪಡೆದ ಶ್ರೀಮಂತ ಅನುಭವಗಳು ಅವರನ್ನು ಪಕ್ವ ಕಲಾವಿದರನ್ನಾಗಿಸಿದವು.  ಕೆ.ವಿ. ಸುಬ್ಬಣ್ಣ  ಮತ್ತು  ಬಿ. ವಿ.  ಕಾರಂತರಂತಹ  ಶ್ರೇಷ್ಠರೊಂದಿಗೆ  ಕಲಿತು  ದುಡಿದ  ಶ್ರೇಷ್ಠ  ಅನುಭವಗಳವು.   ಮಂಕ, ಮಂಡ್ಯದ ಗೆಳೆಯರ ಬಳಗ, ಮಾಂಡವ್ಯ ಕಲಾ ಸಂಘ, ವೇದಿಕೆ ಮುಂತಾದ ಹಲವಾರು ಸಂಘ ಸಂಸ್ಥೆಗಳೊಡನಾಟ, ಮೈಸೂರಿನ ನಟನ ನಾಟಕಶಾಲೆಯ ಸಂಸ್ಥಾಪಕ, ಮುಖ್ಯಸ್ಥರಾಗಿ ಹೊತ್ತ ಜವಾಬ್ದಾರಿ, ದೇಸಿ ಶೈಲಿಯ ‘ನಟನರಂಗ ಮಂಟಪದ’ ರೂವಾರಿ ಇವೆಲ್ಲಾ ಮಂಡ್ಯ ರಮೇಶ್ ಅವರ ಅಪಾರ ಸಾಧನೆಗಳಲ್ಲಿನ ಕೆಲವೊಂದು ತುಣುಕುಗಳು.

ಮೃಚ್ಛಕಟಿಕ, ಸಂಕ್ರಾಂತಿ,  ಮಾರನಾಯಕ,  ಚೋರ ಚಂದ್ರಹಾಸ,  ನಾಗಮಂಡಲ,  ಅಗ್ನಿ ಮತ್ತು  ಮಳೆ, ಸಾಹೇಬ್ರು ಬರುತ್ತಾರೆ,  ಯುಯುತ್ಸು, ಈ ಕೆಳಗಿನವರು, ಆಲಿಬಾಬ, ನೀಲಿ ಕುದುರೆ, ಗೋವಿನ ಹಾಡು, ನಾಯಿತಿಪ್ಪ, ಯುಗಾಂತ, ವಕ್ರ, ರತ್ನಪಕ್ಷಿ, ಐಲುದೊರೆ, ಚಾಮಚೆಲುವೆ, ಸಂಸಾರದಲ್ಲಿ  ಸನಿದಪ,  ಊರುಭಂಗ ಮುಂತಾದವು  ರಮೇಶರ ಪ್ರಸ್ತುತಿಯ  ಪ್ರಸಿದ್ಧ  ನಾಟಕಗಳಲ್ಲಿ ಸೇರಿವೆ. 

"ಮಂಡ್ಯ ಅಂದ್ರೆ ಇಂಡಿಯಾ..!" "ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ" ಇವು ಹಳೆಯ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಸುಪ್ರಸಿದ್ಧ ನುಡಿಗಟ್ಟುಗಳು.  ಸಕ್ಕರೆ ಸೀಮೆ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆಯ ಜನರೂ ಅಲ್ಲಿ ಬೆಳೆವ ಕಬ್ಬಿನಂತೆ ಮೇಲು ನೋಟಕ್ಕೆ ಒರಟರಾದರೂ ಆಂತರ್ಯದಲ್ಲಿ ಮೃದು-ಮಧುರ..! ತಾಯ್ನೆಲದ ಗುಣವನ್ನೇ ಮೈದುಂಬಿಸಿಕೊಂಡು ತಮ್ಮ ಮೃದು-ಮಧುರ ನಡುವಳಿಕೆಗಳಿಂದಾಗಿ "ಇಂಡಿಯಾ" ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಭಿಮಾನಿ-ಶಿಷ್ಯ ಸಮೂಹವನ್ನು ಹೋದಲ್ಲೆಲ್ಲಾ ಸೃಷ್ಟಿಸುತ್ತಿರುವ ವ್ಯಕ್ತಿ-ರಂಗಭೂಮಿಯ ವಿಶಿಷ್ಟ ಶಕ್ತಿ "ಮಂಡ್ಯ ರಮೇಶ್."

ತನ್ನೆದುರು ಸಿಕ್ಕ ಎಳಯರನ್ನು "ಕಂದಮ್ಮಾ.." ಎಂದೂ, ಹಿರಿಯರು ಮತ್ತು ಸಮವಯಸ್ಕರನ್ನು  "ಗುರುಗಳೇ.." ಎನ್ನುತ್ತಾ, ಎಂದಿಗೂ ಮಾಸದ ಮಂದಹಾಸ, ಸ್ನೇಹಭಾವದೊಂದಿಗೆ ಮೋಡಿ ಮಾಡುವ ಮಂಡ್ಯ ರಮೇಶ್ ಓರ್ವ ಅದ್ಭುತ ಕಲಾವಿದ, ನಿರ್ದೇಶಕ, ಕಲಾಸಂಘಟಕ ಅಷ್ಟೇ ಅಲ್ಲದೇ ಅತ್ಯುತ್ತಮ ರಂಗಶಿಕ್ಷಕರೂ ಹೌದು. ಸಿನಿಮಾ, ಕಿರುತರೆಗಳಲ್ಲಿ ಸಾಕಷ್ಟು ದುಡಿಯುತ್ತಿದ್ದರೂ, ಕಲಾಪ್ರಪಂಚದಲ್ಲಿ ತನಗೊಂದು ಸ್ಥಾನ-ಮಾನ ದೊರಕಿಸಿಕೊಟ್ಟ ರಂಗಭೂಮಿಯನ್ನು ಬದುಕಿನ ಉಸಿರೆಂದು ಭಾವಿಸಿರುವ ಆದರ್ಶವಂತ.

ಅಂದ ಹಾಗೆ ಈ ಹೃದಯವಂತ ಕನಸುಗಾರನ ಕಲ್ಪನೆಯ ಕೂಸೇ "ನಟನ."  ರಂಗಪ್ರಪಂಚದಲ್ಲಿ ತನ್ನನ್ನು ಕೈಹಿಡಿದು ಮುನ್ನಡೆಸಿದ ಭಾರತೀಯ ರಂಗಭೂಮಿಯ ಧ್ರುವವತಾರೆಗಳಾದ ನಿನಾಸಂನ ಕೆ.ವಿ.ಸುಬ್ಬಣ್ಣ, ರಂಗಭೀಷ್ಮ ಬಿ.ವಿ.ಕಾರಂತರ ಹಾದಿಯಲ್ಲೇ ಸಾಗುತ್ತಾ ಕಟ್ಟಿದ ರಂಗನೆಲೆ "ನಟನ".  ಇದು ಇದೀಗ ಒಂದು ಹೆಮ್ಮೆರವಾಗಿ ಬೆಳೆದಿದೆ. ರಂಗಶಿಕ್ಷಣ, ಲಲಿತಕಲೆಗಳ ಕೇಂದ್ರವಾಗಿರುವ "ನಟನ" ತನ್ನ ನಿರಂತರ ಚಲನಶೀಲತೆಯಿಂದಾಗಿ ನಾಡಿನ ರಂಗಚಳುವಳಿಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಗಳಿಸಿದ್ದು, ಅದ್ಭುತ ಶಕ್ತಿಯ ಹೊಸ ಕಲಾವಿದರನ್ನು ತಯಾರಿಸುವ ರಂಗ ಶಾಲೆಯಾಗಿ ರೂಪುಗೊಂಡಿದೆ.

ಮಕ್ಕಳಿಗೆ ಎಳವೆಯಲ್ಲೇ ರಂಗದೀಕ್ಷೆ ನೀಡುವ ಉದ್ದೇಶದಿಂದ ಕಲಿಯುತ್ತಲೇ ನಲಿಯುವ -ನಲಿಯುತ್ತಲೇ ಕಲಿಯುವ ವಿಶಿಷ್ಠ ಪರಂಪರೆಯೊಂದನ್ನು ಹುಟ್ಟು ಹಾಕುತ್ತಿರುವ ಬೇಸಿಗೆ ಶಿಬಿರ "ರಜಾ-ಮಜಾ"- "ನಟನ"ದ ಒಂದು ಟಿಸಿಲು. ಬಾಲ್ಯ ಸಹಜ ಆಟೋಟಗಳು, ತುಂಟಾಟಗಳಿಂದ ವಂಚಿತರಾಗಿರುವ ಭವಿಷ್ಯದ ಪ್ರಜೆಗಳಿಗೆ ಬೇಸಿಗೆ ರಜೆಯನ್ನು ಮಜವಾಗಿ ಸ್ಮರಣೀಯವಾಗಿ ಕಳೆಯುವುದರೊಂದಿಗೆ, ಹಾಡು, ನರ್ತನ, ಅಭಿನಯ, ಕರಕುಶಲ ಕಲೆಗಾರಿಕೆಗಳ ಕಲಿಕೆಯೊಂದಿಗೆ ಸಾಧಕರೊಂದಿಗೆ ಸಂವಾದ ನಡೆಸುವ ಮೂಲಕ ಬದುಕಿನ ಮೂಲಪಾಠಗಳನ್ನೂ ತಿಂಗಳೊಪ್ಪತ್ತಿನಲ್ಲಿ ಕಲಿಸುವ "ರಜಾ-ಮಜಾ"  ಮಂಡ್ಯ ರಮೇಶ್ ಅವರ ಕನಸಿನ ಕೂಸು.

ಆರಂಭವಾದ ಕೆಲವೇ ವರ್ಷಗಳಲ್ಲಿಯೇ ಮೈಸೂರಿನ ಹಲವು ಬಡಾವಣೆಗಳಲ್ಲಷ್ಟೇ ಅಲ್ಲದೇ, ನೆರೆಯ ಮಂಡ್ಯ ಜಿಲ್ಲೆಯ ಪಾಂಡವಪುರ, ದೂರದ ಉಡುಪಿ ಜಿಲ್ಲೆಗಳಲ್ಲೂ "ಮಂಡ್ಯ ರಮೇಶ್ ಅವರ ರಜಾ-ಮಜಾ" ಎಂಬ ಬ್ರಾಂಡ್ ನೇಮ್ ಅಡಿಯಲ್ಲಿ ಶಿಬಿರಗಳು ನಡೆಯುತ್ತಿರುವುದು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ಅಂತೆಯೇ "ರಜಾ-ಮಜಾ" ಹಾಗೂ ನಟನ ರಂಗಶಾಲೆಯ ಮಕ್ಕಳ ಹಾಗೂ ಪೋಷಕರ ಪಾಲಿಗೆ ಮಂಡ್ಯ ರಮೇಶ್ ಕೇವಲ  ನಿರ್ದೇಶಕರಲ್ಲ ..ಫ್ರೆಂಡ್..ಫಿಲಾಸಫರ್ ಮತ್ತು ಗೈಡ್...! ನಿಜವಾದ ಅರ್ಥದಲ್ಲಿ ದಿಗ್ದರ್ಶಕ..!!

ರಮೇಶ್ ನೀನಾಸಂ ತಿರುಗಾಟಯೋಜನೆ, ಕೊಡಗಿನ ಪ್ರಾದೇಶಿಕ ರೆಪರ್ಟರಿಯ ಸ್ಥಾಪಕ, ನಿರ್ದೇಶಕರಾಗಿ, ರಾಜ್ಯ, ಹೊರರಾಜ್ಯಗಳಾದ ಭೂಪಾಲ್‌, ದೆಹಲಿಯ ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ನಟರಾಗಿ, ತಂತ್ರಜ್ಞರಾಗಿ, ಮಂಡ್ಯದ ರಂಗಚಳುವಳಿಯ ನಟ, ನಿರ್ದೇಶಕ, ಸಂಘಟಕರಾಗಿ ಅನೇಕ ಬಗೆಯ  ಕಾರ್ಯನಿರ್ವಹಣೆ ಮಾಡಿದ್ದಾರೆ.  ಕರ್ನಾಟಕ  ನಾಟಕ  ಅಕಾಡೆಮಿ ಸಮಿತಿ,  ಕೇಂದ್ರ ಸರ್ಕಾರದ  ಸಂಸ್ಕೃತಿ  ಇಲಾಖೆಯ ವಿಶೇಷ ತಜ್ಞರ ಸಮಿತಿ,      ರಂಗಾಯಣದ  ನಿರ್ವಹಣಾ  ಸಮಿತಿಗಳಲ್ಲೂ ಅವರ  ಸೇವೆ ಸಂದಿದೆ.  ರಂಗಾಯಣ ತಂಡದೊಂದಿಗೆ ನ್ಯೂಯಾರ್ಕ್‌, ಜರ್ಮನಿ, ಆಸ್ಟ್ರಿಯಾಗಳಲ್ಲಿ ನಾಟಕ ಪ್ರದರ್ಶನ ಮಾಡಿ ಬಂದಿದ್ದಾರೆ. 

ಪ್ರಸಿದ್ಧ  ಚಿತ್ರ  ‘ಜನುಮದ ಜೋಡಿ’ ಮೂಲಕ 1995ರ ವರ್ಷದಲ್ಲಿ  ಚಿತ್ರರಂಗ ಪ್ರವೇಶಿಸಿದ ರಮೇಶ್ 150ಕ್ಕೂ  ಹೆಚ್ಚು  ಚಿತ್ರಗಳಲ್ಲಿ  ನಟಿಸಿದ್ದು,  ತಮ್ಮ ಈ ಜನಪ್ರಿಯ ಓಟವನ್ನು ಮುಂದುವರೆಸಿದ್ದಾರೆ.  ನಾಗಮಂಡಲ, ಕನಸುಗಾರ,  ಮಠ, ಒಗ್ಗರಣೆ  ಮುಂತಾದ  ಪ್ರಸಿದ್ಧ  ಚಿತ್ರಗಳೂ  ಇವುಗಳಲ್ಲಿವೆ.  

ಜನನಿ, ಮನೆತನ, ಫೋಟೋಗ್ರಾಫರ್ ಪರಮೇಶಿ, ಒಂದೇ ಸುಳ್ಳು, ಮಂಥನ, ಯಾಕ್  ಹಿಂಗ್  ಆಡ್ತಾರೋ, ಚಿ. ಸೌ. ಸಾವಿತ್ರಿ  ಮುಂತಾದ ಅನೇಕ ಕಿರುತೆರೆಯ  ಧಾರಾವಾಹಿಗಳಲ್ಲಿ ರಮೇಶ್  ನಟಿಸಿದ್ದಾರೆ. ಕಿರುತೆರೆಯಲ್ಲಿ ಅತ್ಯಂತ  ಜನಪ್ರಿಯವಾದ    ‘ಮಜಾ  ಟಾಕೀಸ್’  ಹಾಸ್ಯಭರಿತ  ಕಾರ್ಯಕ್ರಮದಲ್ಲಿ  ‘ಮಂಡ್ಯ  ಮುದ್ದೇಶ’ನಾಗಿ  ರಮೇಶ್  ನಿರ್ವಹಿಸಿರುವ  ಪಾತ್ರ  ಅತ್ಯಂತ  ಜನಪ್ರಿಯವಾಗಿದೆ.  

ರಮೇಶ್ ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಅಮೆರಿಕದಲ್ಲಿ 'ಕನ್ನಡ ರಂಗಸಿರಿ' ಪ್ರಶಸ್ತಿ, ಸಂಸ್ಕಾರ ಭಾರತಿ  ನಾಟ್ಯ ಸಮಾರೋಹದ ಶ್ರೇಷ್ಠ  ಯುವ  ನಿರ್ದೇಶಕ   ಪ್ರಶಸ್ತಿ,  ನಾಗಮಂಡಲ ಮತ್ತು ಒಗ್ಗರಣೆ ಚಿತ್ರಗಳಲ್ಲಿ  ಅಭಿನಯಕ್ಕಾಗಿ  ಕರ್ನಾಟಕ  ರಾಜ್ಯ ಸರ್ಕಾರದ  ಪ್ರಶಸ್ತಿ, ಕೆ. ವಿ. ಶಂಕರೇಗೌಡ  ರಂಗಭೂಮಿ  ಪ್ರಶಸ್ತಿ, ಉದಯ  ಚಲನಚಿತ್ರ ಪ್ರಶಸ್ತಿ,  ಸಂದೇಶ ಪುರಸ್ಕಾರ,  ಆರ್ಯಭಟ  ಪುರಸ್ಕಾರ  ಮುಂತಾದವು  ಇವುಗಳಲ್ಲಿ  ಸೇರಿವೆ.  ಇನ್ನೂ  ಉನ್ನತಸ್ತರದ ಬಹಳ ಪ್ರಶಸ್ತಿಗಳಿಗೂ ಅವರು ಅರ್ಹರಿದ್ದಾರೆ.  ತಮ್ಮ ಕಿರಿ ವಯಸ್ಸಿನಲ್ಲೇ ಬಹಳಷ್ಟು ಸಾಧಿಸಿರುವ ಮಂಡ್ಯ ರಮೇಶ್ ಅವರಿಗಾಗಿ ಬಹಳಷ್ಟು ಪ್ರಶಸ್ತಿಗಳು ತಾವಾಗಿಯೇ ಹುಡುಕಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.  


ಈ ಮಹಾನ್ ಕನಸುಗಾರನಿಗೆ, ಅಪೂರ್ವ ಸಾಂಸ್ಕೃತಿಕ ಪ್ರಜ್ಞೆಯ ಕ್ರಿಯಾಶೀಲ ಸಾಧಕನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.  ಇವರ ಸಾಧನೆ ನಿರಂತರವಾಗಿ ಬೆಳಗುತ್ತಿರಲಿ.  ಅದಕ್ಕೆ ಸಕಲ ಬೆಂಬಲ, ಸೌಲಭ್ಯ, ಪ್ರೋತ್ಸಾಹ, ಗೌರವಗಳೂ  ದೊರಕುತ್ತಿರಲಿ.  ಅವರ ಬದುಕು ಸುಖ, ಸಂತಸ, ಸೌಭಾಗ್ಯಗಳಿಂದ ತುಂಬಿ ತುಳುಕುತ್ತಿರಲಿ. 

On the birth day of our great talent Mandya Ramesh Natana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ