ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಸ್ತಿ ಅವರ ಯಶೋಧರಾ



ಮಾಸ್ತಿ ಅವರ 'ಯಶೋಧರಾ'

ತೊಂಬತ್ತರ ದಶಕದಲ್ಲಿ ಮಾಸ್ತಿ ಅವರ ಕುರಿತು ನಮ್ಮ ಎಚ್ಎಮ್‍ಟಿ ಕನ್ನಡ ಸಂಪದ'ದ ಆಶ್ರಯದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿರಾಯರು ಒಂದು ಅದ್ಭುತ ಉಪನ್ಯಾಸವನ್ನು ನೀಡಿದರು. ಮಾಸ್ತಿಯವರ ಸಾಹಿತ್ಯದ ಆಳವನ್ನು ಬಿಡಿಬಿಡಿಯಾಗಿ ಅವರು ತೆರೆದಿಟ್ಟ ಆ ಕ್ಷಣ ನನ್ನ ಬದುಕಿಗೆ ಒಂದು ಹೊಸ ಬೆಳಕು ಕೊಟ್ಟ ಅಮೂಲ್ಯ ಕ್ಷಣಗಳಲ್ಲೊಂದು ಎಂಬುದು ನನ್ನ ಅಂತರಾಳದ ಅನಿಸಿಕೆ.  

ಅವರು ಪ್ರಸ್ತಾಪಿಸಿದ ಸಮಗ್ರ ಮಾಸ್ತಿ ಪರಿಚಯದಲ್ಲಿ ನನ್ನನ್ನು ಹಿಡಿದು ಅಲಗಿಸಿದ್ದು 'ಯಶೋಧರಾ'.  ಬುದ್ಧ ತಾನು ಸಿದ್ಧಾರ್ಥನಾಗಿ ಬಿಟ್ಟು ಹೊರಟ ಕಪಿಲವಸ್ತುವಿಗೆ ಇಂದು ಬುದ್ಧನಾಗಿ ಬಂದಿದ್ದಾನೆ.  ಯಶೋಧರೆಯ ಸಖಿ ಬಂದು ಯಜಮಾನಿಯ ಬಳಿ ಅರುಹಿದಳು: "ಯಶೋಧರೆ, ಅದೇನೆಂದು ಬಣ್ಣಿಸಲಿ ಆ ತೇಜದ ಪ್ರವಾಹವನ್ನು, ಆ ಬುದ್ಧನನ್ನು.  ಅವನ ಹಿಂದೆ ಹತ್ತು ಸಾವಿರ ಶಿಷ್ಯರು, ಅಬ್ಬಾ!".
ಯಶೋಧರೆ ಹೇಳಿದಳಂತೆ: "ಹತ್ತು ಸಾವಿರ ಮನೆಯ ದೀಪಂಗಳು ನಂದಿದವುಂ!".  (ನನ್ನ ಅಸ್ಪಷ್ಟ ನೆನಪಿನಿಂದ ಬರೆದಿದ್ದು.  ತಪ್ಪಿದ್ದರೆ ಕ್ಷಮೆ ಇರಲಿ🌷🙏🌷)

ಇದು ನನಗೆ ಮರೆಯಲಾಗದ ಒಂದು ಭಾವ.  ಅಂದಿನಿಂದ ಯಶೋಧರಾ ನನ್ನ ಮನವನ್ನಾವರಿಸಿದ್ದಾಳೆ.  ಹೀಗಾಗಿ ಮಾಸ್ತಿಯವರ 'ಯಶೋಧರಾ'ಳನ್ನು ಇಲ್ಲಿ ಕಾಣಿಸಬೇಕೆಂಬ ಆಸೆ ಬಹಳ ಕಾಲದ್ದು.  ಈ ಕೆಲಸವನ್ನು ಸುಬ್ಬುಲಕ್ಷ್ಮಿ ಅವರಿಗಲ್ಲದೆ ಇನ್ಯಾರಿಗೆ ತಾನೇ ಒಪ್ಪಿಸಲು ಸಾಧ್ಯ.  ಹೀಗೆ ಮತ್ತೊಮ್ಮೆ ಮತ್ತೊಂದು ದಿವ್ಯ ಕೊಡುಗೆ  'ಯಶೋಧರಾ' ಮೂಲಕ ಸುಬ್ಬುಲಕ್ಷ್ಮಿಯವರ ವ್ಯಾಖ್ಯಾನ ಇದೋ ನಿಮ್ಮ ಮುಂದೆ ಇಂದಿನಿಂದ ಆರಂಭಗೊಂಡಿದೆ.

ಸೂತ್ರಧಾರನ ಪ್ರಸ್ತಾವನೆ

ಆದಿಯಲಿ ಜಗದಾದಿದೈವಕಭಿನಮಿಸಿ ನುಡಿಗೆ ನಾಡಿಗೆ ಶುಭವ ನೀಡೆಂದು ಬೇಡಿ, ಪೂರ್ವದಲಿ ಜನಕಾಗಿ ಸಲೆ ದುಡಿದು ಶ್ರಮಿಸಿ ಧನ್ಯತೆಯೊಳಾಳ ಹಿರಿಯರ ಹೆಸರ ಹಾಡಿ, ನಾಟ್ಯಾದಿ ಕಲೆಯುಪಾಸಕಕುಲಕೆ ಮಣಿದು ನೆರೆದಿರುವ ಆರ್ಯ ಮಿತ್ರರಿಗೆ ಕೈಮುಗಿದು ತೋರಲಿರುವೆವು ಒರ್ವ ಸೋದರನು ಹೆಣೆದ ದೃಶ್ಯವೊಂದಿದನು; ನನ್ನಾಶಯವ ಬಗೆದು ಗುಣವಿಹುದೆ ಕೊಂಡು ದೋಷವನೆಲ್ಲ ಸಹಿಸಿ ಬಂಧುಗಳೆ ನಮ್ಮೊಳೀದಿನ ಅನುಗ್ರಹಿಸಿ

ಪ್ರಾಲೇಯ ಗಿರಿತಟದ ಕಪಿಲವಸ್ತುವಿಗೆ ವರುಷವಿರ್ಛಾಸಿರದ ಹಿಂದೆ ಅವತರಿಸಿ, ಶಾಕ್ಯಕುಲಮೌಳಿಮಣಿಯೆಂದೆನಿಸಿ ಭುವಿಗೆ ಸತ್ಯವನು ಸಾರಿ ಮಾನವರನುದ್ಧರಿಸಿ, ಬುದ್ಧನೆಂಬನ್ವರ್ಥನಾಮವನು ಕ್ಷಿತಿಯ ರಕ್ಷೆಯಾಗಿರಲಿರಿಸಿ, ದಿವಕಂದು ಮರೆದ ಗುರುವರನ ಚಾರಿತ್ರದೊಂದು ಸಂಗತಿಯ ನಟಿಸುವೆವು ನಿಮ್ಮೆದುರು ಶಂಕೆಯನು ತೊರೆದು. ಆರ್ಯ ಸಂಸ್ಕೃತಿಯ ಬದ್ಧ ಪ್ರೇಮಿಗಳಿಗೆ ಬುದ್ಧನನು ಕುರಿತಿಹುದೆ ಗುಣ ದೃಶ್ಯದೊಳಗೆ.

ಇಂತಿರಲು ಇಕೊ ನೋಡಿ ಅಂದು ಸಿದ್ದಾರ್ಥ ತತ್ತ್ವದರಕೆಯಲ್ಲಿ ಸತಿ ಸುತ ಪಿತರನುಳಿದು ತಪಕೆ ಸಾರಿದಮೇಲೆ ಹತ್ತಬುದ ಹತ್ತು ಯುಗದ ಬೇಸರ ತರಲು ಅದನೆಲ್ಲ ಕಳೆದು

ಅವನ ಕಾಂತಾಮಣಿ ಯಶೋಧರಾ ದೇವಿ, ಒಂದಿರುಳು ಭೀಕರದ ಕನಸೊಂದ ಕಂಡು, ಮುಂದೆ ಇನ್ನೇನಹುದೊ ಎಂದೆನುತ ಜೀವ ನಡುಗಿರಲು, ಬಹನೋವ ಮುನ್ನವೇ ಉಂಡು, ಸುಖದ ರಸ ಬತ್ತಿರುವ ಬಾಳುವೆಯ ತೊರೆಯ ಬರಿಮರಳ ನೋಡಿ ಬೇಯುತಲಿರುವ ಪರಿಯ.
*********************************

ಪರಿಚಯ

ಜಗತ್ತಿಗೆ ಬೆಳಕನ್ನು ನೀಡಿದ ಬುದ್ಧನ ಕಥೆಯು ಎಲ್ಲರಿಗೂ ಗೊತ್ತಿದೆ. ಆದರೆ ಪ್ರತಿಯೊಬ್ಬ ಸಾಧಕನ ಬದುಕಿನಲ್ಲಿ ಯಾವುದೋ ರೂಪದಲ್ಲಿ ಒಂದು ಶಕ್ತಿಯ ಪ್ರೇರಣೆ ಇರುತ್ತದೆ. ಬುದ್ಧನನ್ನು ನೆನಪಿಸಿಕೊಳ್ಳುವವರಿಗೆ ಅವನ ಪೂರ್ವಾಶ್ರಮದ ಮಡದಿ ಯಶೋಧರಾ ಹೆಚ್ಚು ಪರಿಚಯವಿರುವುದಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿದ್ದವಳಿಗೆ ಇದ್ದಕ್ಕಿದ್ದಂತೆ ಬಂದ ಬರಸಿಡಿಲೆಂದರೆ ತನ್ನ ಪತಿಯು ತನ್ನನ್ನು ಮತ್ತು ಎಳೆಯ ಮಗುವನ್ನು ಬಿಟ್ಟು ಹೊರಟದ್ದು...ನಂತರ ಅವಳು ಬದುಕಿದ ರೀತಿ, ಮಗುವನ್ನು ಬೆಳೆಸಿದ್ದು, ಅವನಲ್ಲಿ ತನ್ನ ನೆಮ್ಮದಿ ಕಂಡುಕೊಳ್ಳಲು. ಪ್ರತಿಕ್ಷಣವೂ ಅವಳಿಗೆ ತನ್ನ ಪತಿಯದೇ ಚಿಂತೆ. ಮಗನ ಬಗ್ಗೆ ಆತಂಕ. ಇಂತಹ ಯಶೋಧರಾ ಳ ಜೀವನವನ್ನು ಪರಿಚಯಿಸಬೇಕೆಂಬುದು ತಿರು ಶ್ರೀಧರರ ಮನದಾಸೆ. ಇದಕ್ಕೆ ಅಕ್ಷರ ರೂಪವನ್ನು ಕೊಡಲು ನನಗೆ ಪ್ರೇರಣೆ ನೀಡಿದವರೂ ಅವರೇ. ನನ್ನ ಮನದಲ್ಲೂ ಯಶೋಧರಾ ತುಂಬಾ ಗಾಢವಾಗಿ ಉಳಿದ ಪಾತ್ರ. ಮಾಸ್ತಿಯವರು ತಮ್ಮ ನಾಟಕದಲ್ಲಿ ಈ ಪಾತ್ರವನ್ನು ರೂಪಿಸಿರುವ ರೀತಿ ಮನನೀಯ. ಈಗ ಇದನ್ನು ನನಗೆ ತಿಳಿದ ಮಟ್ಟಿಗೆ ಸಂಕ್ಷಿಪ್ತ ರೂಪದಲ್ಲಿ ಸಾರಾಂಶವನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡಿದ್ದೇನೆ. ಸಹೃದಯರಾದ ತಾವುಗಳು ಸ್ವೀಕರಿಸಿ ತಮ್ಮ ಸಲಹೆಗಳನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ನಮಸ್ಕಾರ.

"ಗದ್ಯರೂಪದಲ್ಲಿ ಸಾರಾಂಶ*

ಸಾಮಾನ್ಯವಾಗಿ ನಾಟಕ ಆರಂಭವಾಗುವುದು ಸೂತ್ರಧಾರನ ಮಾತುಗಳಿಂದ. ಇಡೀ ನಾಟಕದ ಒಂದು ಹಿನ್ನೆಲೆ, ವಸ್ತುವಿನ ಹಿರಿಮೆ, ಮುಖ್ಯ ಸಂಗತಿಗಳನ್ನು ವಿವರಿಸುತ್ತ ಒಂದು ರೀತಿಯಲ್ಲಿ ನಮ್ಮ ಮನಸ್ಸನ್ನು ಸಿದ್ಧಗೊಳಿಸುತ್ತಾನೆ ಸೂತ್ರಧಾರ.
ಪ್ರಾರಂಭದಲ್ಲಿ ದೈವಕ್ಕೆ ನಮಿಸಿ, ಹಿರಿಯರನ್ನು ಸ್ಮರಿಸಿ, ಸ್ನೇಹಿತರು, ಬಂಧುಗಳಿಗೆ ತಲೆಬಾಗಿ ಒಬ್ಬ ಸೋದರನು ಹೆಣೆದ ದೃಶ್ಯರೂಪವನ್ನು ತಂದಿರುವುದಾಗಿಯೂ, ದೋಷಗಳಿದ್ದರೆ ಸಹಿಸಿ ಗುಣಗಳನ್ನು ಮಾತ್ರ ಸ್ವೀಕರಿಸಬೇಕೆಂದೂ ಸಭಿಕರಲ್ಲಿ ಮನವಿ ಮಾಡಿಕೊಳ್ಳುತ್ತಾನೆ.
ಹಿಮಾಲಯಕ್ಕೆ ಸಮೀಪದಲ್ಲಿರುವ ಕಪಿಲ ವಸ್ತು ಎಂಬ ಊರಿನಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಅವತರಿಸಿ ಜನರಿಗೆ ಜ್ಞಾನದ, ಸತ್ಯದ ಬೆಳಕನ್ನು ತೋರಿದ ಬುದ್ಧ ಎಂಬ ಅನ್ವರ್ಥನಾಮದಿಂದ ಭೂಮಿಗೆ ಶ್ರೀ ರಕ್ಷೆಯನ್ನು ಇತ್ತ ವ್ಯಕ್ತಿಯ ಜೀವನದ ಒಂದು ಘಟನೆಯೇ ಇಂದಿನ ನಾಟಕದ ವಸ್ತುವಾಗಿದೆ.

ಅಂದು ಸಿದ್ಧಾರ್ಥನೆಂಬ ರಾಜಕುಮಾರ ತನ್ನ ತಂದೆ, ತಾಯಿ, ಹೆಂಡತಿ ಮಗು ಎಲ್ಲರನ್ನೂ ತೊರೆದು ಹೊರಟು ಹತ್ತು ವರ್ಷಗಳಾಗಿವೆ. ಅದು ಅವನ ಹೆಂಡತಿ ಯಶೋಧರಾಳಿಗೆ ಹತ್ತು ಯುಗದಂತಾಗಿದೆ. ಅದರಲ್ಲೇ ಒಂದು ದಿನ ಭೀಕರ ಕನಸೊಂದ ಕಂಡು ಮುಂದೆ ಇನ್ನೇನು ಇದೆಯೋ ಎಂದು ಭಯಗೊಂಡಿದ್ದಾಳೆ. ಬರಿಯ ಮರಳ ತೋಡಿ ನೀರು ಕಾಣದ ಹಾಗೆ ಬೇಗೆಯಲ್ಲಿ ಬೇಯುತ್ತಿರುವ ಪರಿಯ ನೋಡಿ ಎನ್ನುತ್ತ ಸೂತ್ರಧಾರ ನಮ್ಮನ್ನು ಯಶೋಧರಾ ಬಳಿಗೆ ಸೆಳೆಯುತ್ತಾನೆ. ಈಗ ನಾಟಕ ಆರಂಭವಾಗುತ್ತದೆ.




ಸ್ಥಾನ ೧

(ಕಪಿಲವನ್ನುವಿನ ಅರಮನೆಯಲ್ಲಿ ಯಶೋಧರೆಯ ಅಂತಃಪುರ, ಯಶೋಧರಾ ಒಬ್ಬಳೇ ಚಿಂತಾಮಗ್ನಳಾಗಿ ಕುಳಿತಿರುವಳು. ಎದುರಿಗೆ ಒಂದು ಪೀಠದ ಮೇಲೆ ಒಂದು ಪಠ ಇದೆ.)

ಯಶೋ  __   ಅಂಬಿಕೇ ಶಾರಿಕೇ
ಅಂಬಿಕೆ __   ಮಾಜಿ ಬಂದೆ.
ಯಶೋ__    ರಾಹುಲನ ಪಾಠವಿನ್ನೂ ಮುಗಿಯಲಿಲ್ಲವೆ ? ಏಕೆ ಇನ್ನೂ ಅವನು ಬರಲಿಲ್ಲ ?
ಅಂಬಿಕೆ __   ಆಗಲೇ
ಇತ್ತ ಬಂದರು ತಾಯಿ, ಬರುವಾಗ ಶಾರಿಕೆ ಹೂವ ತರಲೆಂದು ನಂದನಕೆ ಹೊರಟಿರಲಾಗಿ ತಾಯ್ಗೆ ತಾನೂ ಹೂವ ತಹೆನೆಂದು ಅವಳೊಡನೆ ಉದ್ಯಾನದೆಡೆಗೆ ಹೋದರು.
ಯಶೋ__    ಒಳ್ಳೆದಾಯಿತು.
ಇಲ್ಲಿ ಬಾ. ಆ ಪಠವನಿಲ್ಲಿ ತಂದಿರಿಸು.

(ಅಂಬಿಕೆ ಪಠವನ್ನು ಯಶೋಧರೆಯ ಪೀಠದ ಬಳಿ ತಂದಿರಿಸುವಳು, ಯಶೋಧರೆ ಅದನ್ನೇ ನೋಡುತ್ತ ಕಣ್ಣೀರನ್ನಿಕ್ಕುವಳು.) 
ಅಂಬಿಕೆ__    ಮಾಜೀ.
(ಯಶೋಧರಾ ಮಾತನಾಡುವುದಿಲ್ಲ,) 
ಮಾಜೀ
(ಎಂದು ಕಣ್ಣೀರನ್ನೊರಸುವಳು.)
 ಏನು ಇದು ? ಏಕೆ ?
ಯಶೋ  __  ಏಕೆಂದು ಕಾಣೆಯಾ ಅಂಬಿಕೆ? ಕೇಳುವೆಯ? ಹತ್ತು ವರುಷದ ದಿವಸ ಕರಗಿ ಮರುಗಿದ ಹದನ ಹೊಸತಾಗಿ ಹೇಳಲೇನೇ?
ಅಂಬಿಕೆ__    ಅಮ್ಮಾಜಿ, ಇಂದದರ ಮಾತೇನು? ನಮ್ಮ ಜೀವದ ಜೀವ ನಮ್ಮೆಲ್ಲರನು ತೊರೆದು ತೆರಳಿ ಬಹುದಿನವಾಯ್ತು. ಹಳದಾದ ಬೇನೆಯನು ಇಂತು ನೆನೆಯುತ ಇಂದು ಹೊಸದ ಮಾಡುವಿರೇಕೆ? ನೀವಿಂತು ನೋಯುತಿರೆ ನಾ ನೋಡುತಿರಲಾರೆ.

ಯಶೋ __   ಅಂಬಿಕೆ, ಅಂಬಿಕೆ 
ಈ ಒಂದು ಹಳೆಯ ನೋವನು ತಡೆಯುವೆನೆ ನನಗೆ  ತ್ರಾಣವಿಲ್ಲ, ನಾನು ಸೋತೆನೇ ಅಮ್ಮಾ. ನಾನು ಬದುಕಿರುವೆನೆಂತೋ ನಾನೆ ಕಾಣೆನೇ. ದೇಹವನು ಕೊಟ್ಟ ದೇವರು ಕಣ್ಣೀರನೆಳೆಸುತಿರೆ ಉಸಿರಳೆಯುತಿಹೆನಮ್ಮ, ಊಟ ಉಪಚಾರಗಳು ಮೊದಲಿಂದ ನಡೆದಂತೆ ನಡೆಯುತಿರೆ ನಾನವನು ವಾಡಿಕೆಯ ಮಹಿಮೆಯಲಿ ಒಪ್ಪಿ ನಡೆಯುತಲಿಹೆನು, ಒಡಲ ಹೊರೆಯುತಲಿಹೆನು, ಏಕೆಂದು ಅರಿಯದೆ. ಒಮ್ಮೊಮ್ಮೆ ಬಾಳಿನೆಳೆ ಎಳೆಯುತಿಹ ರೀತಿಯನು ನಿಂತು ನಿಟ್ಟಿಸಿ ನೋಡಿ ಇದು ಏನೊ ಕನಸೆಂದು ತೋರಿ ಬೆಚ್ಚುವೆನಮ್ಮ, ಯಾವುದೋ ಬಾಳು ಇದು ಯಾರೊ ಬಾಳುತಲಿಹರು, ನಾನು ನೋಡುತಲಿಹೆನು. ಎಂದು ತೋರಿಹುದೆನಗೆ ಅಂಬಿಕೆ. ಹಳೆದಾದ ಈ ನನ್ನ ನೋವು ದಿನದಿನಕೆ ಹೊಸಹೊಸತಾಗಿ, ಉಪವನದ ಅಶ್ವತ್ಥ ನೆಲೆಯ ಕಟ್ಟೆಯ ಕೆದರಿ ಬೇರೂರಿ ಬೆಳೆದಂತೆ, ನನ್ನ ಜೀವನ ಸೀಳಿ
ಬೆಳೆಯುತಿರುವುದು ತಾಯಿ. ತಡೆಯಲಾರೆನು ನಾನು ; ತಡೆಯಲಾರೆ : ನಾನು ತಡೆಯಲಾರೆ.

ಅಂಬಿಕೆ __   ಮಾಜಿ.
ನನ್ನಾಣೆ ಸುಮ್ಮನಿರಿ : ನಮ್ಮ ರಾಹುಲನಾಣೆ. ತಡೆಯಲಾರೆ ಎನಲು ತಡೆಯಲಾರದು ದೇವಿ ; ನಮ್ಮ ನೋವನು ನೋಡಿ ನೋವವರ ಸಲುವಾಗಿ ಮನವ ಬಿಗಿಹಿಡಿವೆನೆನೆ ತಾನಾಗಿ ತಡೆಯುವುದು, ಆ ಬಾಲಕನ ನೋಡಿ ಸುಮ್ಮನಿರಿ.

ಯಶೋ __   ಅಂಬಿಕೆ, ಬಾಲಕನ ನೋಡಿ ತಣಿಯದೆ ಮನದೆ ತಪಿಸುವೆನು. ನನ್ನೆರೆಯನಾ ರೂಪು ನನ್ನೆರೆಯನಾ ನೋಟ ನನ್ನ ಮನದಾಣ್ಮನಾ ನಡೆ ಎಲ್ಲ ಇಲ್ಲಿಹವು. ಇವನ ಹಿಡಿದಿರುವಂದು ಅವನಿಲ್ಲದುದ ನೆನೆದು ನೋಯುವೆನು, ಬೇಯುವೆನು ; ಅವನಿದ್ದ ಕಾಲದಲಿ ಚೆನ್ನಾಗಿ ನೋಡದಿದ್ದೆನೆ ಎಂದು ದುಃಖಿಪೆನು. ಬಾಲಕನ ನೋಡಿದೊಡೆ ತಣಿದಿರುವ ಬಗೆ ನನಗೆ ಇಲ್ಲವಾಯಿತು, ಅಂಬಿಕೆ.

____________________________

ಗದ್ಯರೂಪದಲ್ಲಿ ಸಾರಾಂಶ

ಯಶೋಧರೆಗೆ ಮಗ ರಾಹುಲ ಇನ್ನೂ ಬಾರದೆ ಇರುವ ಬಗ್ಗೆ ಯೋಚನೆಯಾಗಿದೆ. ಕಳವಳದಲ್ಲಿ ಇರುಳು ಕಂಡ ಕನಸು ಇನ್ನಷ್ಟು ಕೆಣಕುತ್ತಿದೆ. ತನ್ನ ವಿಶ್ವಾಸದ ದಾಸಿ ಅಂಬಿಕೆಯನ್ನು ಪ್ರಶ್ನಿಸುವಳು. ಅವಳ ಮನದ ಕಾತರ ಕಣ್ಣೀರಾಗಿದೆ. ಅಂಬಿಕೆ ಸಮಾಧಾನ ಹೇಳುವಳು.ಯಶೋಧರ ತನ್ನ ಗಂಡ ಬಿಟ್ಟು ಹೋದ ಸಂಗತಿಯನ್ನೇ ನೆನೆದು ಅಳುತ್ತಿರುವಳು ಎಂದು ಅವಳ ಊಹೆ.

ತನಗೆ  ಆ ನೋವನ್ನು ತಡೆಯಲು ತ್ರಾಣವಿಲ್ಲ. ಏನೋ ಒಂದು ರೀತಿ ಯಾರದೋ ಬಾಳೆಂಬಂತೆ ಬಾಳುತಿರುವೆನು. ಆ ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಎಂದು ಹೇಳುವಳು. 

ಅಂಬಿಕೆಯು ಮಗನಸಲುವಾಗಿಯಾದರೂ ನೋವನ್ನು ಮರೆಯಬೇಕೆನ್ನುವಳು. ನೀವು ಅತ್ತರೆ ಅವನಿಗೆ ನೋವಾಗುತ್ತದೆ.
 ಎನ್ನುವಳು. ಅದಕ್ಕೆ ಯಶೋಧರಾ ತನ್ನ ಮಗ ಅವನ ತಂದೆಯಂತೆಯೆ ಇರುವನು. ನಾನು ಅವರಿದ್ದ ಕಾಲದಲ್ಲಿ ಚೆನ್ನಾಗಿ ನೋಡಲಿಲ್ಲ. ಈಗ ಮಗನಲ್ಲಿ ನೋಡುತ್ತಿರುವೆನು. ಇದಕ್ಕೂ ಎಲ್ಲಿ ಕುಂದು ಬರುವುದೋ ಎಂಬ ಚಿಂತೆ ಕಾಡುತ್ತಿದೆ ಅವಳಿಗೆ. ಅದಕ್ಕೆ ಕಾರಣ ಅವಳು ಕಂಡ ಕನಸು....




ಅಂಬಿಕೆ  __ಮಾಜಿ, ನೊಂದಿರಿ.
ನಾನರಿಯೆನೆ ?

ಯಶೋ__  ಕೇಳು, ಅಂಬಿಕೆ ನೀನರಿಯೆ. ಎಂತರಿಯಬಹುದು ಇನ್ನೊಬ್ಬರ ನೋವ ? ಆಣ್ಮ ನನ್ನನು ಬಿಟ್ಟು ಹೊರಟುಹೋದುದು ತಿಳಿದ ಕ್ಷಣದಲ್ಲಿ ನನ್ನ ಮನದಲ್ಲಿ ಹುಟ್ಟಿದಾ ಬೇನೆ ಕಾವು ನೋವುಗಳು ಮನೆಯನು ಮೊದಲು ತುಂಬಿದವು ; 
ತುಂಬಿದವು ನಗರವನು, ಉಪವನೋದ್ಯಾನವನು ; ತುಂಬಿದವು ಸಾಗರದ ಕೂಪವನು ; ಆಗಸದ
ಆಳವರಿಯದ ಅಂತರಾಳವನು ತುಂಬಿದವು ; ಸೂರ್ಯಮಂಡಲದಿಂದ ಹೊರಹೊಮ್ಮಿ ಬರುತಿರುವ ಹೊನ್ನ ಕಿರಣದ ನಡುವೆ ಉಕ್ಕಾಗಿ ಸೇರಿದವು ; 
ಲೋಕಕೇ ಶಾಂತಿಯನು ತರುವ ಚಂದ್ರನ ಕಾಂತಿ 
ನನ್ನೊಳಗ ಬೆಳಗದವೊಲೆನ್ನ ಹೃದಯದ ಮಧ್ಯೆ ಕತ್ತಲೆಯ ಕೋಟೆಯನ್ನು ಕಟ್ಟಿದವು. ಇಷ್ಟು ದಿನ 
ಇಂತು ನನ್ನನು ಕವಿದ ದುಃಖ ನಿನ್ನೆಯ ಇರುಳು ಮರಳಿ ಮಸಗಿತು, ನನ್ನ ಆತ್ಮವನು ಮುಳುಗಿಸಿತು.
ಅಂಬಿಕೆ __   ಅಮ್ಮಾಜಿ, ನನ್ನಾಣೆ. ಏನಿದೇನಿದು ಮಾತು ! ಎಂತ ಬೇನೆಯನಾದರೂ ನುಂಗಿಕೊಂಡಿರುವ ನಿಮ್ಮಿಂದ ಇಷ್ಟು ಮಾತನು ನುಡಿಸುತಿಹುದೇನು ? ಏನಾಯ್ತು ? ಹೇಳಿರಿ. ಮನಕೆ ಧೈರ್ಯವ ತನ್ನಿ.

ಯಶೋ__  (ಸಮಾಧಾನ ಮಾಡಿಕೊಂಡು) ಕಳೆದಿರುಳು ನಾನೊಂದು ಕನಸ ಕಂಡೆನೆ ತಾಯಿ ; 
ಅದರಿಂದ ಇನಿತು ಕಳವಳಕೆ ನಾ ಸಿಲುಕಿಹೆನು. ಹೇಳುವುದಕೇ ಬಾಯಿಬರದು.

ಅಂಬಿಕೆ__  ಏನವ್ವ ಅದು ?
ಯಶೋ __ ಅದು ನನ್ನ ಮನಸ್ಸಿಗೆ ಆಮಂಗಳವ ಸೂಚಿಸಿತು. ಅದರಿಂದ ನೆನೆವುದಕೆ ಕೂಡ ಒಪ್ಪದು ಜೀವ. 
ಏನು ಕನಸೋ ! ಇನ್ನು ಏನೇನು ಬರುವುದೋ ! 
ಮಾವನನು ಅಂದೆ ಕೇಳಿದೆನು : ನನ್ನಾಣ್ಮನನು ಹಿಂಬಾಲಿಸುವೆನು, ಅವನೆಲ್ಲಿದ್ದರಲ್ಲಿಹೆನು, ನನಗೆ ಆಣತಿ ನೀಡಿ ಎಂದಂದೆ ಬೇಡಿದೆನು. ಬೇಡವೆಂದರು, ಮೋಡಿ ಬೇಡೆಂದು ಬೇಡಿದರು; 
ಬಾಲಕನ ಸಲುವಾಗಿ ಸುಮ್ಮನಿರು, ನಿನ್ನ ರಸ ಇಲ್ಲಿಗೇ ಬರಬಹುದು ತಾಳಮ್ಮ, ಎಂದರು ;
ನನ್ನ ವಯಸನು ನೋಡು, ನಿನ್ನ ನೋವಲಿ ನನಗೆ 
ಭಾಗವಿರುವುದ ನೋಡು. ಸಹಿಸಮ್ಮ, ಎಂದರು.
 ಮನದ ದನಿ ಇನ್ನೊಂದು ಮಾತನುಸುರುತಲಿತ್ತು : 
ಹೋಗು ಅವನಿರುವೆಡೆಗೆ ; ನಿಲ್ಲದಿರು ಇಲ್ಲಿ ; ಅವನಿರುವ ಹಳುವ ನಗರೋಪವನ ನಂದನ, ಅವನಿಲ್ಲದಿಹ ನಗರ ನಿನ್ನ ಪಾಲಿಗೆ ಹಳುವ ; ಸೀತೆಯನು ಮರೆತೆಯಾ ? ಸಾವಿತ್ರಿ ದಮಯಂತಿ 
ಚಂದ್ರಮತಿಯರ ಮಾತ ಕಾಣೆಯಾ ? ನಿಲ್ಲದಿರು ; ನಿಲ್ಲದಿರು ಇಲ್ಲಿ : ನಿಲ್ಲದಿರು ಇಲ್ಲಿ.
ಎಂದು ಹೇಳಿದ ಮನದ ಕೂಗ ಕೇಳದೆ ನಾನು ಹಿರಿಯರಾಣತಿಯೆಂದು ನಿಂತೆನೀ ಹಳುವದಲಿ ; 
ಹಳುವದಲಿ ನಿಂತು ಬಾಲಕನ ಸಾಕಿದೆನು ; ಅವನು ಬೆಳೆದುದನು ನೋಡಿದೆನು, ಹಿಂದಣ ನೋವ 
ತುಸ ಮರೆತ ರೀತಿಯಲಿ ಕಂಡೆನು. ಇಂತಿರಲು ಮರೆವೆಯೇತಕೆ ಎಂದು ಮನವಿಂತು ಕೆರಳಿ ಕನಸ ಕಂಡಿತು ಅಂಬಿಕೆ ; ಕನಸ ಕಂಡಿತು.
ಅಂಬಿಕೆ__  ಏನವ್ವ ಈ ಕನಸು ?
______________________________

ಗದ್ಯರೂಪದ ಸಾರಾಂಶ


ಯಶೋಧರಾ ಅಂಬಿಕೆಯೊಂದಿಗೆ ತನ್ನ ನೋವನ್ಬು ಹೇಳಿಕೊಳ್ಳುತ್ತಿದ್ದಾಳೆ. ಅವಳು ಹಿಂದಿನ ದಿನದ ಇರುಳನ್ನು ನೆನಪಿಸಿಕೊಳ್ಳುತ್ತಿದ್ದಾಳೆ. ಲೋಕಕ್ಕೆ ನೆಳಕನ್ನು ನೀಡುವ ಚಂದ್ರನ ಬೆಳಕನ್ನೂ ಸವಿಯದಂತೆ ಅವಳ ಹೃದಯದಲ್ಲಿ ಕತ್ತಲೆ ತುಂಬಿಕೊಂಡಿದೆ. ಆ ಮನದ ನೋವು ಇಡೀ ಲೋಕವನ್ನು ತುಂಬುವಷ್ಟು ಇದೆಯೆನ್ನುತ್ತಾಳೆ.

ಇದು ಅಂಬಿಕೆಗೆ ಗಾಬರಿ ಹುಟ್ಟಿಸುತ್ತದೆ. ಎಂತೆಂತಹ ನೋವುಗಳನ್ನು ನುಂಗಿರುಚ ರಾಣಿ ಇಂದು ಇಷ್ಟೊಂದು ವಿಹ್ವಲಳಾಗಿರುವುದರ ಬಗ್ಗೆ ಅವಳಿಗೆ ಆತಂಕ. ಯಾಕೆ ಏನಾಯಿತು ಎಂದು ಕೇಳುತ್ತಾಳೆ. ಅದಕ್ಕೆ ಯಶೋಧರಾ ತಾನು ಕಳೆದ ಇರುಳು ಕನಸೊಂದನ್ನು ಕಂಡೆನೆನ್ನುತ್ತಾಳೆ. ಅದನ್ನು ಹೇಳುವುದಕ್ಕೆ ಬಾಯೇ ಬರುತ್ತಿಲ್ಲ.  ಅದೇನು ಎಂದು ಅಂಬಿಕೆ ಕೇಳುತ್ತಾಳೆ.

ಆ ಕನಸು ಅಮಂಗಳವನ್ನು ಸೂಚಿಸುತ್ತದೆಯೆಂಬ ಭಾವ ರಾಣಿಯದು. ಇನ್ನೂ ಏನೇನು ನೋಡಬೇಕೋ ಎನ್ನುವಳು. ಮಾವನನ್ನು ಆಗಲೇ ಕೇಳಿದ್ದೆ. ನನ್ನ ರಮಣನನ್ನು ಹಿಂಬಾಲಿಸುತ್ತೇನೆ ಎಂದು. ಅವನು ಎಲ್ಲಿದ್ದರೆ ಅಲ್ಲಿ ಇರುತ್ತೇನೆ ಎಂದು. ಆದರೆ ಮಾವ ಒಪ್ಪಲಿಲ್ಲ. ಮಗುವಿನ ಸಲುವಾಗಿ ಸುಮ್ಮನಿರು. ನಿನ್ನ ಪತಿಯೇ ಬರಬಹುದು ಎಂದರು. ನಮಗಾಗಿ ಇರು ಎಂದರು. ಹಿಂದೆ ಸೀತೆ, ಸಾವಿತ್ರಿ, ಅನಸೂಯೆಯರು ಕಷ್ಟ ಅನುಭವಿಸಿದ್ದನ್ನು ಉದಾಹರಿಸಿದರು..ನನ್ನ ಮನಸ್ಸು ಇಲ್ಲಿ ಇರಬೇಡ ಎಂದರೂ ಹಿರಿಯರ ಆಣತಿಯಂತೆ ನಿಂತೆ. ಮಗನನ್ನು ಬೆಳೆಸಿದೆ. ಹಿಂದಿನ ನೋವನ್ನು ಮರೆತಂತೆ ಬಾಳಿದೆ. ಆದರೆ ಈಗ ಮತ್ತೆ ಕನಸಿನ ರೂಪದಲ್ಲಿ ಬಂದ ಭೀತಿ ಕಾಡಿದೆ. 





ಯಶೋ __  ಕೇಳಬೇಕೇನೇ ?
ಕೇಳಿ ನನ್ನಂತೆ ನೀನೂ ನಡುಗಬೇಕೇ ?
ಹೇಳುವೆನು ಕೇಳು. ನಿನ್ನೆಯ ರಾತ್ರಿ ನಿದ್ರೆಯಲಿ ನಾನೊಂದು ತೋಟದಲಿ ನಡೆಯುತಿರುವಂತಿರಲು 
ಒಂದು ಹಿರಿಯಾಲದಡಿಯಲಿ ಸೊಗಸ ತಾಣದಲಿ 
ನಿಂದೆನೊಂದರೆನಿಮಿಷ. ನನ್ನ ಬದಿಯಲಿ ವೃಕ್ಷ ಒಂದು ಬಿಳಲನು ಬಿಟ್ಟು ದೂರ ಸರಿಯಿತು ತಾಯಿ. 
ಬಿಳಲ ನೋಡುವ ಭರದಿ ಮರ ಸರಿದುದರಿಯದೆ 
ನಾನಿತ್ತಲೇ ಮನವ ನೆಟ್ಟು ಕೌತುಕದಿಂದ 
ಕುಡಿ ತಳಿರ ನೋಡಿ ಮೆಯ್ ಸವರಿ ಆಹಾ ಎಷ್ಟು ಚೆಂದವಾಗಿಹುದು ಎನ್ನು ತಲಿರಲು, ಏನೋ 
ಆಯಿತು ; ಏನೆಂದು ನಾ ಕಾಣೆ ; ಅಂಜಿ 
ಅತ್ತಿತ್ತ ನೋಡಿದೆನು : ದೂರ ಸರಿದಿರ್ದ ಮರ ಒಂದು ಕೈ ನೀಡಿ ಎಳೆಯನಿಗೆ ಸನ್ನೆಯ ಮಾಡಿ ಬಾ ಎಂದು ಕರೆಯುತಿತ್ತು. ಇತ್ತ ತಿರುಗಿದೆನು. ಎಳೆಯ ಮರ ನನ್ನ ಬಿಟ್ಟದರೆಡೆಗೆ ನಡೆಯಿತು. ಹಾ ಎಂದು ಕೂಗಿ ನಿದ್ದೆಯ ತಿಳಿದು ಎದ್ದೆನು. ಬಾಲಕನು ಮಲಗಿರುವ ಹಾಸಿಗೆಯ ಬಳಿ ಹೋಗಿ 
ಅವನು ಇರುವನೋ ಇಲ್ಲವೋ ಎಂದು ನೋಡಿದೆನು. 
ಹಿಂದೊಮ್ಮೆ ಇಂಥದೇ ಕನಸು ಒಂದಾಗಿತ್ತು. ನಿದ್ದೆ ತಿಳಿದೆದ್ದೆನು. ಪ್ರಾಣೇಶನಿರಲಿಲ್ಲ. 
ಇಂದು ನೋಡಿದ ವೇಳೆ ಎಳೆಯನಿರುವುದು ಕಂಡು, 
ನಾಳೆ ಬರುವುದು ಬರಲಿ, ಇಂದಿವನ ಕಂಡೆನೇ ಇದೆ ಸುಕೃತ, ಎಂದು ಮೆಯ್ ಸವರಿ ಅವನಿಹ ಮಾತು 
ಮರದ ಬಿಳಲಿನ ಕನಸ ರೀತಿ ಕನಸಲ್ಲೆಂದು ಮನಕೆ ನಿಶ್ಚಯಮಾಡಿಕೊಂಡಲ್ಲೆ ಕುಳಿತೆನು; ಉದಯದಿಂದಲು ಅವನು ಕಣ್ಣೆ ಮರೆಯಾಗುವುದೆ 
ಮನದೆ ಭೀತಿಯ ಚೆದರುತಿಹುದು. ಏನಾಗುವುದೊ, 
ಏನ ಗೆಯ್ವೆನೊ, ಕಾಣೆ ಅಂಬಿಕೆ.

ಅಂಬಕೆ __ ಆಮ್ಮಾಜಿ, ಭೀತಿಯನು ಬಿಡಿ ; ನಮ್ಮ ಬಾಲಕನು ಎತ್ತಲೂ ಹೋಹನಲ್ಲ.

ಯಶೋ__  ಆಹ, ಅಂಬಿಕೇ, ಎನ್ನಾಣ್ಮ ಎನ್ನನುಳಿದೆಲ್ಲಿಗಾದರು ಹೋಗಬಹುದೆಂದು ನಾನಂದು ತಿಳಿದೆನೇ ? .. ಕಾರ್ಯದಲ್ಲಿ
ನನ್ನನುಳಿದಾತ ನಡೆದುದೆ ಇಲ್ಲ, ಸತ್ಯವಿದು
ಆಹಾರ, ಕೇಳಿ, ವಿಹಾರ, ಶಯನಾಸನ, 
ಎಲ್ಲ ಸುಖಗಳಲಿ ಎಲ್ಲಾ ಭೋಗಭಾಗ್ಯದಲಿ ನನ್ನ ಸುಖವನು ಮೊದಲು ನೋಡಿ ತಾ ಸುಖಿಸುವರು ; 
ನನ್ನ ಇಷ್ಟವ ಕೇಳಿ ಅನುಸರಿಸಿ ನಡೆಯುವರು. ಕೊನೆಕೊನೆಗೆ ಎಷ್ಟು ಬೆಳೆದಿತ್ತು ಆ ಪ್ರೇಮ ! ನನ್ನಿಂದ ಇವರಿಷ್ಟ ಏನು ತಪ್ಪುವುದೊ 
ಎಂತೊ ಎನ್ನುತೆ ನಾನು ನನಗೆ ಇದು ಅದು ಬೇಕು 
ಎಂಬ ಮಾತನೆ ಬಿಟ್ಟು ಅವರಿಷ್ಟವೇನೆಂದು ಊಹಿಸುವ ನೆಲೆಗೆ ಬಂದಿದ್ದೆನು. 
ಇಂತಿರಲು ಮೋಡವಿಲ್ಲದ ಆಗಸದಿ ಮೊಳೆದ ಸಿಡಿಲಂತೆ 
ಬಂದಿತಾ ಸುಖದಂತ್ಯ: ಬತ್ತಿತೊಲುಮೆಯ ಚಿಲುಮೆ. 
ಶಂಕೆಯಿಲ್ಲದ ಬಾಳನುಳಿದು ಮರೆದರು ಅವರು ; 
ಈ ಬಾಳ ಶೂನ್ಯ ಮಾಡಿದರು. ಎಲ್ಲಾ ಸುಖದಿ ಜೊತೆಗೆ ಕರೆದವರು ಮುಕ್ತಿಯ ಸುಖಕೆ ಒಬ್ಬರೇ ನಡೆದರಮ್ಮಾ : ನನ್ನ ಬಿಟ್ಟು ಮರೆಯಾದರು.

ಅಂಬಿಕೆ__   ನಿಮ್ಮೊಡನೆ ಸಂಸಾರ ಮಾಡುತ್ತ ಬಾಲಕನ ನೋಡುತ್ತ ರಾಜ್ಯವನು ಆಳುತ್ತ ಇಲ್ಲಿಯೇ 
ಮುಕ್ತಿಸುಖವನು ಪಡೆದು ಸುಖಿಸುವರೆ ಅವರಿಗೆ ಪುಣ್ಯವಿಲ್ಲದೆ ಹೋಯಿತು.

ಯಶೋ__  ಇದ್ದು ದೇ ನನಗೆ ? 
ಪುಣ್ಯವೇ ಇದು ಮರುಳೆ ? ಅವರ ಪುಣ್ಯದ ಮಾತ ಅವರು ನೋಡಲಿ, ನನ್ನ ಪುಣ್ಯವೇನಾಯಿತು ?

ರಾಹುಲ.__ (ಒಳಗಿನಿಂದ) ಅಮ್ಮಾ
ಅಂಬಿಕೆ __ ನಮ್ಮ ಆಣ್ಣಾಜಿಯವ್ವಾ.

( ರಾಹುಲನೂ ಶಾರಿಕೆಯೂ ಬರುವರು. ಯಶೋಧರಾ ಬೇಗ ಕಣ್ಣೊರಸಿಕೊಳ್ಳುವಳು.)

ರಾಹುಲ. __ ಅಮ್ಮ

______________________________
ಸಂಕ್ಷಿಪ್ತ ಗದ್ಯ ಸಾರಾಂಶ


ಯಶೋಧರಾ ತನ್ನ ಸಖಿ ಅಂಬಿಕೆಗೆ ತಾನು ಕಂಡ ಕನಸನ್ನು ವಿವರಿಸುವಳು. ಒಂದು ತೋಟದಲ್ಲಿ ಅವಳು ನಡೆಯುತ್ತಿರುತ್ತಾಳೆ. ಅಲ್ಲೊಂದು ದೊಡ್ಡ ಆಲದಮರ. ಅದರ ಕೆಳಗೆ ಒಂದು ನಿಮಿಷ ನಿಲ್ಲುತ್ತಾಳೆ. ವೃಕ್ಷವೊಂದು ಬಿಳಲನ್ಬು ಬಿಟ್ಟು ದೂರ ಸರಿಯಿತು. ಬಿಳಲನ್ನು ನೋಡುವ ಭರದಲ್ಲಿ ಮರ ದೂರ ಸರಿದುದು ಅವಳಿಗೆ ಬೇಗ ತಿಳಿಯಲಿಲ್ಲ. ತಳಿರನ್ನು ಮುಟ್ಟಿ ಅದರ ಸೊಗಸನ್ನು ವರ್ಣಿಸಲು ತಿರುಗಿದಾಗ ಮರ ದೂರವಾದದ್ದು ತಿಳಿಯುತ್ತದೆ. ( ಇಲ್ಲಿ ಅವಳು ತನ್ನ ಪತಿ ತನ್ನನ್ನೂ ಮಗುವನ್ನೂ ಬಿಟ್ಟು ದೂರವಾದದ್ದನ್ನು ಸಮನ್ವಯಗೊಳಿಸಿಕೊಳ್ಳುತ್ತಿದ್ದಾಳೆ )

ಮತ್ತೆ ನೋಡಿದರೆ ಮರ ಎಳೆಯ ಬಿಳಲನ್ನು ತನ್ನೆಡೆಗೆ ಕರೆಯುತ್ತಿದೆ. ಅದು ಮರದ ಕಡೆಗೆ ನಡೆಯುತ್ತಿದೆ...ಬೆಚ್ಚಿ ಬಿದ್ದು ಎಚ್ಚರಾಯಿತು. ಉಳಿದಿರುವ ಮಗನೂ ದೂರವಾದಾನೆಂಬ ಭೀತಿ ಅವಳನ್ನು ಕಾಡುತ್ತಿದೆ. ಹಿಂದೊಮ್ಮೆ ಇಂಥದೇ ಕನಸ ಕಂಡು ಎದ್ದಾಗ ಪತಿ ಇರಲಿಲ್ಲ. ಈಗ ರಾಹುಲ ಎಲ್ಲಿ? ಅವನನ್ನು ಕಂಡು ಮೈ ಸವರಿ ನೆಮ್ಮದಿ ತಾಳಬೇಕಿದೆ. ಕನಸು ಎಂತಹ ಪರಿಣಾಮವೋ ಅರಿಯೆ.  ಎಂದು ಹೇಳುವಳು.

ಅಂಬಿಕೆ ಹಾಗೆಲ್ಲ ರಾಹುಲ ನಿನ್ನ ಬಿಟ್ಟು ಹೋಗುವವನಲ್ಲ ಎನ್ನುವಳು. ಅದಕ್ಕೆ ಯಶೋಧರಾ ನನ್ನ ಗಂಡ ಬಿಟ್ಟು ಹೋಗುವನೆಂದು ತಿಳಿದಿತ್ತೆ ? ಎಲ್ಲ ವಿಷಯದಲ್ಲಿಯೂ ನನ್ನ ಬಿಟ್ಟು ಇರುತ್ತಿರಲಿಲ್ಲ. ಎಲ್ಲ ಸಂದರ್ಭಗಳಲ್ಲಿ ಮೊದಲು ನನ್ನ ಸುಖ ಗಮನಿಸುತ್ತಿದ್ದರು. ಒಬ್ಬರೊಬ್ಬರ ಇಷ್ಟಗಳ ಅರಿತು ಬಾಳುತ್ತಿದ್ದೆವು. ಆದರೆ..‌ಆ ಸುಖದ ಚಿಲುಮೆ ಬತ್ತಿತು. ಎಲ್ಲಾ ಸುಖದಲ್ಲಿ ಜೊತೆಗೆ ಇದ್ದವರು ಮುಕ್ತಿಯ ಸುಖಕ್ಕೆ ನನ್ನ ಬಿಟ್ಟು ಹೊರಟರಲ್ಲ? 

ಅವರಿಗೆ ಇಲ್ಲಿಯ ಸುಖವನ್ನು ಅನುಭವಿಸಲು ಪುಣ್ಯವಿಲ್ಲದೆ ಹೋಯಿತು ಎಂದು ಅಂಬಿಕೆ ಹೇಳುವಳು. ಅದಕ್ಕೆ ರಾಣಿ ಈ ಪುಣ್ಯ ನನಗೆ ಬೇಕಿತ್ತೆ? ಎಂದು ಅಳುವಳು. ಮಗ ಬಂದ ಸದ್ದಾಗಲು ಕಣ್ಣೊರೆಸಿಕೊಳ್ಳುವಳು. ಅಮ್ಮಾ ಎನ್ನುತ್ತ ರಾಹುಲ ಬರುವನು.





ರಾಹುಲ.__ ಇಲ್ಲಿ ನೋಡಮ್ಮ ಇದು ಎಷ್ಟು ಒಳ್ಳೆಯ ಹೂವು ! 
ನಿನಗಾಗಿ ನಾನೆ ಆರಿಸಿ ತಂದೆನಮ್ಮಯ್ಯ. 

ಯಶೋ__  ನನ್ನಯ್ಯ, ಹೌದಲ್ಲ ! ಎಷ್ಟು ಒಳ್ಳೆಯ ಹೂವು 
ಎಷ್ಟು ಚೆನ್ನಾಗಿಹುದು ಈ ಹೂವು !

ರಾಹುಲ__. ಅದು ನೋಡು 
ಎಲೆಯ ಮರೆಯಲ್ಲಿ ಅವಿತುಕೊಂಡು ಕೇಳಿಸದಂತೆ 
ನನ್ನ ಹಿಡಿ ನೋಡೋಣ, ಎಂದು ಹೇಳುತ್ತಲಿತ್ತು. ಇಣಿಕಿ ನೋಡುತ ಹಿಡಿದುಕೊಳ್ಳುವರೊ ಎನ್ನುತ್ತ 
ಆಟವಾಡುತಲಿತ್ತು. ಆಗ ಅದ ಹಿಡಿದೆನು,

ಯಶೋ __ ಭಯಪಡುತಲಿಹ ಹೂವ ಹಿಡಿಯಬಾರದು ಅಣ್ಣ. 

ರಾಹುಲ__. ನಿಜವಾದ ಭಯವಲ್ಲ ಅಮ್ಮಯ್ಯ. ಭಯದಂತೆ ತೋರಿಸುತ ಆಟಕ್ಕೆ ಕಣ್ಣು ಮುಚ್ಚಾಡುವುದು. ಕಳ್ಳ ಹೂ. ನಮ್ಮ ಶಾರಿಕೆ ಮರದ ಮರೆಯಲ್ಲಿ ಅವಿತು ಹಾ ಹೂ ಎಂದು ಕರೆವಂತೆ ಕರೆಯುವುದು : ಹಿಡಿಯದಿದ್ದರೆ ಕೋಪಮಾಡುವುದು. ಅಮ್ಮಯ್ಯ. 
ಏನಮ್ಮ ನೀನು ಅತ್ತಿರುವೆ ? ಕಣ್ಣೀರೇಕೆ ?

ಯಶೋ__   ಕಣ್ಣೀರೆ ? ಅಂಬಿಕೆ, ಕಣ್ಣು ಏನಾಗಿದೆಯೆ ?
ಅಂಬಿಕೆ __ ಏನಾಯಿತೋ ಮಾಜಿ, ಧೂಳು ಬಿದ್ದಿರಬಹುದೊ?

ರಾಹುಲ.__ ನಿನ್ನ ಕಣ್ಣೂ ಕೆಂಪಗಾಗಿದೆ. ಇಬ್ಬರೂ ಅತ್ತಿರುವಿರಿ, ಅಮ್ಮ, ನೀನು ಚಿಂತಿಸಬೇಡ. 
ಮೂರು ದಿವಸದ ಹಿಂದೆ ತಾತನನು ಕೇಳಿದೆನು. 
ಅವರು ಆಗಲಿ ಎಂದು ಹೇಳಿದಾರಮ್ಮಯ್ಯ. ಅಣ್ಣನನ್ನು ಕರೆತರಲು ನಾನೆ ಹೋಗುವೆನಮ್ಮ

ಯಶೋ__  ( ಬೆಚ್ಚಿ) ಅಂಬಿಕೇ,  ಕೇಳಿದೆಯ ?ಎರಡನೆಯ ಪುಣ್ಯ ? ಅಂದು ಫಲಿಸಿತು ಮೊದಲನೆಯದು. ಇಂದೀಗ ಫಲಿಸುತಿದೆ ಇನ್ನೊಂದು.
(ಮಗನನ್ನು ಅಪ್ಪಿಕೊಂಡು)
ಅಣ್ಣಯ್ಯ, ಬೇಡ. ನಿಮ್ಮ ತಂದೆಯನು ಕರೆತರಲು ನಾ ಹೋಗುವೆನು. 
ನೀನಿಲ್ಲಿ ತಾತನೆಡೆ ಪಾಠಗಳ ಕಲಿಯುತ್ತ ಆಟವಾಡುತ ನಾಲ್ಕು ದಿನವಿರಲು ನಾ ಬಹೆನು. ನನ್ನಯ್ಯ, ನೀ ಹೋಗಿ ಕರೆತರುವೆನೆನ್ನದಿರು.

ರಾಹುಲ. __ ಯಾಕಮ್ಮ ಭಯಪಡುವೆ ? ಅಣ್ಣ ನಮ್ಮನು ಬಿಟ್ಟು ಹೊರಟುಹೋದಂತೆ ನಾನೂ ಹೊರಟುಹೋಗುವೆನು, ಮರಳಿ ಬಾರೆನು, ಎಂದು ಭಯಪಡುವೆಯೇನಮ್ಮ? 
ನಾನಂತು ಮಾಡೆನಮ್ಮಾ; ನೀನು ಅಂಜದಿರು.
ಯಶೋ__   ಅಂಬಿಕೆ, ಹೋಗಿ ರಾಜರಿಗೆ ಬಿನ್ನಹ ಮಾಡು ; ಒಂದು ಕ್ಷಣ ಇತ್ತ ದಯಮಾಡಬೇಕೆಂದರುಹು.

(ಅಂಬಿಕೆ ಹೋಗುವಳು.)
ಹಾ ನನ್ನ ವಿಧಿಯೇ, ಕನಸು ನಿಜವಾಯಿತು. ನಿಜವೆ ಕನಸಾಯ್ತು; ಬಾಳುವೆ ಮರೀಚಿಕೆಯಾಯ್ತು.
_________________________________"
ಸಂಕ್ಷಿಪ್ತ ಗದ್ಯ ರೂಪದ ಸಾರಾಂಶ

ರಾಹುಲ ಕೈತುಂಬಾ ಹೂಗಳನ್ನು ತಂದಿದ್ದಾನೆ. ಅದರ ಸೊಗಸನ್ಬು ವರ್ಣಿಸುತ್ತಾನೆ.  ತಾಯಿಗಾಗಿ ತಂದಿರುವನು. ಎಲೆಯ ಮರೆಯಲ್ಲಿ ಇಣುಕಿ ನೋಡುತ್ತಿದ್ದ ಆ ಹೂಗಳ ಚೆಲುವನ್ನು ಕಂಡು ಆಸೆಯಾಗಿ ತಂದೆ ಎನ್ನುವನು. ತಾಯಿಯೂ ಸಂತೋಷಿಸುವಳು. ಭಯ ಪಡುತ್ತಿರುವ ಹೂವನ್ನು ಹಿಡಿಯಬಾರದು ಎಂದು ತಿಳಿ ಹೇಳುವಳು. ಅದಕ್ಕೆ ಅದು ನಟನೆಯ ಭಯವೆಂದೂ ಹಿಡಿಯದಿದ್ದರೆ  ನೋವಾಗುವುದು ಎಂದು ಹೇಳುತ್ತ ತಾಯಿಯ ಮುಖವನ್ನು ಗಮನಿಸಿ ಅವಳು ಅತ್ತಿರುವಳು ಎಂದು ತಿಳಿದು ಕಾರಣ ಕೇಳುವನು. ಧೂಳು ಬಿದ್ದಿರಬಹುದೆಂಬ ನೆಪ ಹೇಳಿದರೆ ಒಪ್ಪುವುದಿಲ್ಲ. ಅಂಬಿಕೆಯೂ ಅತ್ತಿರುವುದು ಅವನಿಗೆ ಗೊತ್ತಾಗುತ್ತದೆ.  ಸಮಾಧಾನ ಹೇಳುತ್ತಾನೆ.

ಅಳಬೇಡಮ್ಮ. ಚಿಂತಿಸಬೇಡ. ಅಪ್ಪಾಜಿಯವರನ್ನು ಕರೆದುಕೊಂಡು ಬರಲು ನಾನೇ ಹೋಗುತ್ತೇನೆ. ತಾತನನ್ನು ಕೇಳಿದ್ದೇನೆ. ಒಪ್ಪಿದ್ದಾರೆ ಎನ್ನಲು ರಾಣಿಗೆ ಭಯವಾಗುವುದು. ಕನಸು ನೆನಪಾಗುವುದು. ಎರಡನೆಯ ಪುಣ್ಯವೇ ಅಂಬಿಕೆ? ಎಂದು ಕೊರಗುವಳು. ಮಗನನ್ನು ಅಪ್ಪಿಕೊಂಡು ನೀನು ಹೋಗಕೂಡದು ಕಂದಾ. ನಾನೇ ಹೋಗುವೆನು ಎನ್ನುವಳು.

ರಾಹುಲನು ತಾಯಿಗೆ ಧೈರ್ಯ ಹೇಳುವನು. ಅಪ್ಪಾಜಿ ನಿನ್ನನ್ನು ಬಿಟ್ಟು ಹೊರಟು ಹೋದಂತೆ ನಾನು ಹೋಗುವುದಿಲ್ಲ ಎಂದು ಸಮಾಧಾನ ಹೇಳುವನು. 

ಅಂಬಿಕೆಗೆ ಯಶೋಧರಾ  ತನ್ನ ಮಾವ ಶುದ್ದೋಧನ ಮಹಾರಾಜರನ್ನು ಕರೆತರಲು ಹೇಳಿ ಕಳಿಸುವಳು. 



(ಪಠದ ಅಡಿಗೆ ತಲೆಯಿಟ್ಟು ದುಃಖಿಸುವಳು. ರಾಹುಲನು ಹೂಗಳನ್ನು ಪೀಠದ ಮೇಲೆ ಹಾಕುವನು. ತಾಯ ಹೆರಳಿಗೆ ಒಂದು ಹೂವನ್ನಿಟ್ಟು ನೋಡುವನು. ಅಷ್ಟುವೇಳೆಗೆ ರಾಜನೂ, ಅಂಬಿಕೆಯೂ ಬರುವರು.)

ರಾಜ.__ ಅಮ್ಮಾಜಿ, ಬಂದಿಹೆನು.

ಯಶೋ__  (ಎದ್ದು ಬಂದು ನಮಸ್ಕರಿಸಿ) ಪೀಠವನು ಕೊಳಬೇಕು. 
ನಾನು ಬಹುದಿನದಿಂದ ನಿಮ್ಮ ಬೇಡುತಲಿದ್ದೆ. ಸೋದರಿಯ ಸುತೆಯೆಂದು ಎಳೆತನದಲೇ ನನ್ನ ಕರೆದುತಂದಿರಿ, ಸಾಕಿ ಸಲಹಿದಿರಿ ; ಸೊಸೆಯಾಗಿ ಮನೆಗೆ ಹೊಗಿಸಿದಿರಿ, ಬಾಳುವೆಯನುದ್ಧರಿಸಿದಿರಿ.
ಕನಸಿನಲಿ ಎಣಿಸಲಾಗದ ಸೌಖ್ಯಗಳ ನಾನು
ನಿಮ್ಮ ಅರಮನೆಯಲ್ಲಿ ಅನುಭವಿಸಿ ಸುಖಿಸಿದೆನು.

ರಾಜ __ ನನ್ನ ಅರಮನೆಯಲ್ಲಿ ?

ಯಶೋ __ ನಮ್ಮ ಅರಮನೆಯಲ್ಲಿ. 
ನಿಮ್ಮ ಐಶ್ವರ್ಯದಲಿ ಕಣಮಾತ್ರವನೂ ನನಗೆ ಇಲ್ಲವೆನ್ನದೆ ನನ್ನ ಪರಿಪಾಲಿಸಿರುವಿರಿ. ಪತಿಯನಿತ್ತಿರಿ; ಬಾಳ ದೇವರಾಗಿರಲೆಂದು : ಪತಿಯನಿನ್ನೊಮ್ಮೆ ನೀಡಿರಿ : ನನ್ನ ರಕ್ಷಿಸಿರಿ.

ರಾಜ.__  ಏನಮಾಡೆಂದು ಕೇಳುವೆ ?

ಯಶೋ_,  ನಮ್ಮ ಅಣ್ಣಾಜಿ 
ತಂದೆಯನು ಕರೆತರಲು ಹೋಗುವೆನು ಎನಲಾಗಿ ನೀವು ಒಪ್ಪಿದಿರಂತೆ. ನಾನು ನಿಮ್ಮನು ಮೊದಲೆ ಬೇಡಿಕೊಂಡಿದ್ದೆ. ನಾನವರೆಡೆಗೆ ಹೋಗುವೆನು ಇವನನಿಲ್ಲಿಯೆ ನಿಲಿಸಿಕೊಳ್ಳಿರಿ.

ರಾಜ.__ ಅಮ್ಮಾಜಿ, ಬಾಲಕನು ತಂದೆಯನು ಕರೆತರುವೆನೆಂದೆನಲು ಕೇವಲ ವಿನೋದದಲಿ ಆಗಬಹುದೆಂದೆನು. ನಮ್ಮ ಕುವರನ ಕರೆದುತರಬೇಕು ಎನಲಾಗಿ ಹೋಹ ಬೇಹಿಲ್ಲವೇ ? ಎಳೆಯನನು ಕಳುಹುವರೆ ?

ರಾಹುಲ.__   ಏನು ತಾತ, ಮುನ್ನ ಹೋಗಬಹುದೆಂದವರು ಈಗ ಉಂಟೇ ಎಂದು ಹೇಳುವಿರಿ ? ದೊಡ್ಡವರು 
ನನಗೊಂದು ಮಾತನಾಡುತ ತಾಯಿ ಕೇಳಿದರೆ ಬೇರೊಂದು ಮಾತ ಹೇಳುವಿರೊ ? ನಾ ಹೋಗುವನು 
ಅಮ್ಮ ಇಂದಳುತಲಿದ್ದರು. ಅಣ್ಣ ಬಾರದಿರೆ ಅಳುತಲೇ ಇರುವರು. ನಾ ಹೋಗಿ ಕರೆತಹೆನು.

ಯಶೋ __  ಕೇಳಿದಿರ ಹಸುಳೆಯಾಡುವ ಮಾತ ? ನನಗೋ ನಿನ್ನೆ ನೋಡಿದ ಒಂದು ಕನಸು ಮನವನು ತುಡುಕಿ 
ಉಸಿರಿಂದ ಉಸಿರು ಕಳವಾಗಿ ಚೇತನವೆಲ್ಲ ಬೆಂಡಾಗಿ ಹೋಗಿಹುದು ; ಒಣಗಿ ತರಗಾಗಿಹುದು.

ರಾಜ.__ ಹೌದು, ಅಂಬಿಕೆ ಕನಸ ಮಾತ ಹೇಳಿದಳೆನಗೆ. 
ನಿಜದಿಂದ ಬಂದಿರುವ ನೋವು ಸಾಕಾಗಿರಲು ಕನಸೊಂದು ಬೇರೆ ನಿನ್ನನು ಹಿಂಸೆಪಡಿಸುತಿದೆ.

ಯಶೋ__  ಇಂದು ಇರುಳಾಗುವುದು ; ಇನ್ನೇನ ಮಾಡುವ ; 
ನಿದ್ದೆಯಲಿ ಮುಳುಗಲಿನ್ನಾವ ಕನಸಿನ ಮೊಸಳೆ ಹಿಡಿಯುವುದೊ ; ಇನ್ನೆನಿತು ತೊಳಲಬೇಕೋ, ಎಂದು 
ಚೇತನಗಳೆಲ್ಲ ಭೀತಿಯಲಿ ಕಲಕಿಹವೆನಗೆ. ನನ್ನನುದ್ಧರಿಸಬೇಕು.
(ಮಂಡಿಯೂರಿ ನಮಸ್ಕರಿಸುವಳು )

ರಾಜ.__ ಏಳು, ಅಮ್ಮಾಜಿ :
 ನಿನ್ನ ದುಃಖವ ನಾನು ಕಾಣೆನೇ ? ಏಳಮ್ಮ.

(ಯಶೋಧರಾ ಎದ್ದು ಕುಳಿತುಕೊಳ್ಳುವಳು.)
 ನೀ ಬಲ್ಲೆಯಲ್ಲಿ ನಿನ್ನಾಣ್ಯ ಸಂನ್ಯಾಸವನು ಸ್ವೀಕರಿಸಿಹನು ಎಂದು ? ನೀ ಹೋಗಿ ಆತನನು ನೋಡುವುದು ಸರಿಯಪ್ಪುದೇ ?

ಯಶೋ__  ಹೋಗಿ ಕೇಳುವೆನು
________________________________

ಸಂಕ್ಷಿಪ್ತ ಗದ್ಯ ಸಾರಾಂಶ

ಅಂಬಿಕೆಯೊಂದಿಗೆ ರಾಜ ಬರುವನು. ಯಶೋಧರಾ ನಮಸ್ಕರಿಸಿ ಕುಳಿತುಕೊಳ್ಳಲು ಪೀಠ ತೋರಿಸುವಳು. ಬಹು ದಿನಗಳಿಂದ ನಾನು ನಿಮ್ಮನ್ನು ಬೇಡುತ್ತಿದ್ದೆ. ಸೋದರಿಯ ಸುತೆಯಾದ ನನ್ನನ್ನು ಮನೆ ತುಂಬಿಸಿಕೊಂಡಿರಿ. ಕನಸಲ್ಲೂ ಎಣಿಸಲಾಗದ ಸೌಖ್ಯವನ್ನು ನಾನು ನಿಮ್ಮ ಅರಮನೆಯಲ್ಲಿ ಕಂಡೆ. ನನ್ನ ಅರಮನೆಯೇ? ಅದು  ನಿನ್ನದಲ್ಲವೆ? ರಾಜ ಹೇಳಲು ತಿದ್ದಿಕೊಳ್ಳುವಳು. ಅಂದು ಪತಿಯನ್ನಿತ್ತು ಸಲಹಿದಿರಿ. ಇಂದು ಮತ್ತೊಮ್ಮೆ ಪತಿಯನ್ನು ನೀಡಿರಿ ಎಂದು ಬೇಡುವಳು.

ಏನು ಮಾಡಲಿ? ಎಂದು ರಾಜ ಕೇಳಿದಾಗ ಮಗ ತಂದೆಯನ್ನು ಕರೆತರುವೆನೆಂದು ಕೇಳಲು ನೀವು ಒಪ್ಪಿದಿರಂತೆ  ನಾನು ಹೋಗುವೆನೆಂದು ಬೇಡಿಕೊಂಡಿದ್ದೆನಲ್ಲವೆ? .ಎಂದಾಗ ರಾಜನು ಕುವರನು ಕೇಳಿದಾಗ ಸುಮ್ಮನೆ ಹಾಗಂದಿದ್ದು.   ಏಕೆ? ಬೇರೆ ಯಾರೂ ಇಲ್ಲವೆ? ಎಳೆಯನನ್ನು ಕಳಿಸುತ್ತೇನೆಯೆ? 

ಈಗ ರಾಹುಲನು ತಾತನೊಂದಿಗೆ ಹಠ ಹಿಡಿದನು. ಮೊದಲು ಕಳಿಸುವೆನೆಂದು ಹೇಳಿ ಈಗ ಇಲ್ಲವೆನ್ನುವುದು ಸರಿಯೆ ತಾತ? ಅಮ್ಮ ಅಳುತ್ತಿರುವಳು. ನಾನು ಹೋಗಿ ತಂದೆಯನ್ನು ಕರೆತರುತ್ತೇನೆ. 
ಯಶೋಧರಾ ತನ್ನ ಕನಸನ್ನು ನೆನಪಿಸಿಕೊಂಡು ನೊಂದಾಗ ಅದು ತನಗೆ ಗೊತ್ತು. ಅಂಬಿಕೆ ಹೇಳಿದ್ದಾಳೆ ನಿಜದಲ್ಲಿರುವ ನೋವು ಸಾಲದು ಎಂದು ಕನಸಲ್ಲೂ ಬರಬೇಕೆ? ರಾಜನೂ ನೊಂದು ಹೇಳುವನು.

ಮತ್ತೆ ಈ ರಾತ್ರಿ ಏನಾಗುವುದೋ ಎಂಬ ಚಿಂತೆಯೆಂದು ಯಶೋಧರಾ ನುಡಿಯುವಳು. ಇನ್ನಾವ ಕನಸೆಂಬ ಮೊಸಳೆ ಹಿಡಿಯುವುದೋ ಎಂಬ ಭೀತಿ ಆಕೆಗೆ. ನನ್ನನ್ನು ಉದ್ಧರಿಸಿರಿ ಎಂದು ನಮಸ್ಕರಿಸುವಳು.

ನಿನ್ನ ಗಂಡ ಸಂನ್ಯಾಸ ಸ್ವೀಕರಿಸಿರುವನು ಎಂಬುದನ್ನು ನೀನೂ ಬಲ್ಲೆ. ನೀನು ಹೋಗಿ ಅವನನ್ನು ನೋಡುವುದು ಸರಿಯೇ? ಎನ್ನಲು ನಾನು ಹೋಗಿ ಅವರನ್ನೇ ಕೇಳುವೆನು ಎನ್ನುವಳು.



ರಾಜ. _ ಸಂನ್ಯಾಸಿಯಾದವನು ಸತಿಯ ನೋಡುವ ಮಾತು ಸಂಪ್ರದಾಯಕೆ ವಿರೋಧ.

ಯಶೋ__  ಪೂರ್ವದಲಿ ಗಾರ್ಗಿ ಸಂನ್ಯಾಸದಲಿ ತನ್ನ ಪತಿಯೊಡನೆ ಕಾನನಕೆ ತೆರಳಿದಳು ಎಂದು ಕೇಳಿದೆನು. ನಾನಂತೆಯೇ ಸಂನ್ಯಾಸವನು ಕೊಂಡು ಪತಿಯೆಡೆಗೆ ಸಾರಿದರೆ...

ರಾಜ__.  ಈಗ ನೀನಿಹ ರೀತಿ ಸಂನ್ಯಾಸವಲ್ಲವೆ?

ಯಶೋ __  ಆಣ್ಣ ಸಂನ್ಯಾಸಿಯಾಗಿಹರೆಂಬುದನು ನೆನೆವ
ಸಾಧನೆಯ ವೇಷವಿದು. ಇಂದು ನಿಜದಲಿ ನಾನು ಸಂನ್ಯಾಸವನು ಕೊಂಡು ಪತಿಯೆಡೆಗೆ ಸಾರಿದರೆ... ಪತಿಯೆಡೆಗೆ ಸಾರುವರೆ   

ರಾಜ. ___,ಪತಿಯೆಡೆಗೆ ಸಾರುವರೆ  ಸಂನ್ಯಾಸವನು ಕೊಳಲು ಅದನು ಸಂನ್ಯಾಸವೆನ್ನುವುದೆಂತು ಅಮ್ಮಾಜಿ ?

ಯಶೋ__   ನನಗೆ ಕವಿದಿರುವ ಮಂಕನು ನೆನೆಯೆ ನನಗೇ ನಗೆ ಬರುತಲಿದೆ, ಅಂತೆ ಅಳು ಬರುತಲಿದೆ. ಇನ್ನು ಏನಮಾಡುವುದೊ ತೋರದು. ಎಂತು ನಡೆಯಲಿ ? ನೀವೆ ಅಪ್ಪಣೆಮಾಡಿ. ಅದರಂತೆ ನಡೆಯುವೆನು.

ರಾಜ__.  ಕುವರನಿಗೆ ಹೇಳಿ ಕಳುಹಿಸುವ, ಅವನಿಷ್ಟವನು ತಿಳಿದು ಅದರಂತೆ ನಡೆಯುವ.

ಯಶೋ _ ಆಗಬಹುದು.
ಇಂದೆ ಬೇಹನು ಕಳುಹಿ.

ರಾಜ.__ ಕಳುಹುವೆನು. ಯಾರಲ್ಲಿ ?

ರಾಹುಲ.__ ತಾತ ಅಣ್ಣನ ನೋಡೆ ಯಾರನೋ ಕಳುಹುವಿರ ? ನಾ ಹೋಗಿಬರುವೆ. ನನ್ನನು ಕಳುಹಿ.

ಯಶೋ__  ಅಣ್ಣಯ್ಯ
ಮೊದಲು ಬೇಹಿನ ಜನರು ಹೋಗಿ ಅವರಿಚ್ಛೆಯನು ತಿಳಿದು ಮರಳಲಿ. ಮತ್ತೆ ನೀನು ಹೋಗುವೆಯಂತೆ.

ರಾಹುಲ__.  ಮತ್ತೆ ಹೋಗುವುದಂತೆ ! ಮತ್ತೆ ! ನಾನೊಲ್ಲೆ. ನಾನೀಗಲೇ ಹೋಗಬೇಕು. ನಿಮಗೇನು ? ಅಣ್ಣನನು ನೋಡಿಹಿರಿ : ನೋಡಬೇಕೆಂದಾಸೆ ಅಷ್ಟು ಬಲವಾಗಿಲ್ಲ. ನಾನವರ ನೋಡಿಲ್ಲ. ಇನ್ನೆಷ್ಟು ದಿನಕೆ ನೋಡುವುದು ? ಅಮ್ಮಾಜಿ, ನಿನಗೆ ಭಯ ಬೇಡಮ್ಮ, ನಾ ಮರಳಿ ಬಹೆನಮ್ಮ ನಿಜವಾಗಿಯೂ ಬಹೆನು, ಅಲ್ಲಿಯೇ ನಿಲೆನಮ್ಮ ;
ನನ್ನ ಕಳುಹಿಸಮ್ಮ ; ಅವರ ನಾ ಕರೆತಹೆನು. ತಾತ ನನ್ನನು ಕಳುಹಿ.; ನಾ ಮರಳಿ ಬರುವೆನು. ಅಣ್ಣನನು ನೋಡಬೇಕೆಂದು, ಅವರೊಡನಿದ್ದು ಮಾತಾಡಬೇಕೆಂದು, ನನಗೆ ಬಹು ಆಸೆಯಿದೆ.

ರಾಜ. __ ಇರಲಿ ಸುಮ್ಮನಿರಣ್ಣ.

ಯಶೋ  __ ಕನಸು ನಿಜವಾಯಿತು. ಕನಸಿನಲಿ ಕಂಡ ಹುಲಿ ನಿಜದೊಳೆದುರಿಗೆ ಬಂದು, ಕೊಡು ನಿನ್ನ ಜೀವವನು, ಎಂದು ಕೇಳುತಲಿಹುದು.

ರಾಹುಲ__.  ಅಮ್ಮಾಜಿ, ನಾನು ಬರುವೆನೋ ಇಲ್ಲವೋ ಎಂದು ನಿನಗೆ ಭಯವಿಹುದಾಗೆ ನನ್ನ ಜೊತೆಯಲ್ಲಿ ನಮ್ಮ ಅಂಬಿಕೆಯ ಕಳುಹಮ್ಮ, ನಾವಿಬ್ಬರೂ ಹೋಗಿ ಅಣ್ಣನನು ಕರೆದೆತಹವಮ್ಮ. ಒಪ್ಪಮ್ಮ.

ರಾಜ.   __ಆಂಬಿಕೆ.

ಅಂಬಿಕೆ __  ಸ್ವಾಮಿ.

ರಾಜ.__  ಬಾಲನಾಡಿದ ಮಾತ ಕೇಳಿದೆಯ ? ಏನೆಂಬೆ ?

ಅಂಬಿಕೆ __  ಕೇಳಿದೆ. ಅಮ್ಮಾಜಿ ಭಯಪಡುತಲಿಹರು. ತಾವರಿಯದಿಹದೇನುಂಟು ?

_____________________________    
ಸಂಕ್ಷಿಪ್ತ ಗದ್ಯ ಸಾರಾಂಶ


ಸಂನ್ಯಾಸಿಯಾದವನನ್ನು ಅವನ ಹೆಂಡತಿ ನೋಡುವುದು ಸಂಪ್ರದಾಯಕ್ಕೆ ವಿರುದ್ಧ ಎಂದು ರಾಜನ ನಂಬಿಕೆ. ಅದಕ್ಕೆ ಯಶೋಧರಾ ಗಾರ್ಗಿ ತನ್ನ ಗಂಡನೊಡನೆ ತಾನೂ ಸಂನ್ಯಾಸ ಕೈಗೊಂಡು ನಡೆದಳು. ನಾನೂ ಹಾಗೆಯೇ ಮಾಡುತ್ತೇನೆಂದಳು. ರಾಜನು ಈಗ ನೀನು ಬದುಕುತ್ತಿರುವ ರೀತಿಯೂ ಸಂನ್ಯಾಸದಂತೆಯೇ ಅಲ್ಲವೆ ಎನ್ನುವನು.

ಆದರೆ ನಿಜವಾಗಿಯೂ ತಾನು ಸಂನ್ಯಾಸ ತೆಗೆದುಕೊಳ್ಳುವೆನೆನ್ನುತ್ತಾಳೆ. ಗಂಡನೆಡೆಗೆ ಹೋಗುವ ಕಾರಣಕ್ಕೆ ಸಂನ್ಯಾಸ ತೆಗೆದುಕೊಂಡರೆ ಅದು ಸರಿಯಲ್ಲವೆನ್ನುತ್ತಾನೆ ರಾಜ. ಅದಕ್ಕೆ ಅವಳು ತನ್ನ ಅವಸ್ಥೆಗೆ ತನಗೆನಗು ಮತ್ತು ಅಳು ಎರಡೂಬರುತ್ತಿದೆ ಎನ್ನುತ್ತಾಳೆ. ಏನು ಮಾಡಲೂ ತೋರುತ್ತಿಲ್ಲ. ನೀವೇ ಹೇಳಿ ಎನ್ನುತ್ತಾಳೆ.

ಮಗನ ಬಳಿಗೆ ಬೇಹಿನವರನ್ನು ಕಳಿಸಿ ಅವನ ಆಶಯವನ್ನು ತಿಲಿಯಬಯಸಿ ಬೇಹಿನವರನ್ನು ಕರೆಯಲು ಹೇಳುತ್ತಾನೆ. ಅಷ್ಟರಲ್ಲಿ ರಾಹುಲನು ಅಣ್ಣನನ್ನು ನೋಡಲು ಯಾರೋ ಯಾಕೆ ಹೋಗಬೇಕು? ನಾನೇ ಹೋಗುವೆನೆಂದನು. ಯಶೋಧರಾ ಮಗನಿಗೆ ಮೊದಲು ಅವರು ಹೋಗಿ ಬರಲಿ. ಆಮೇಲೆ ನೀನು ಹೋಗುವೆಯಂತೆ ಎಂದರೆ ಅವನು ಒಪ್ಪಲಿಲ್ಲ. 

ನೀವೇನೋ ಅವರನ್ನು ಈಗಾಗಲೇ ನೋಡಿರುವಿರಿ. ಆದರೆ ನಾನು ನೋಡಿಯೇ ಇಲ್ಲ. ನಾನು ಹೋಗುತ್ತೇನೆ. ಭಯ ಬೇಡ. ಖಂಡಿತ ಮರಳಿ ಬರುತ್ತೇನೆ. ಅವರನ್ನು ನೋಡಬೇಕೆಂದು, ಮಾತನಾಡಿಸಬೇಕೆಂದು ನನಗೆ ಬಹಳ ಆಸೆ. ದಯವಿಟ್ಟು ಕಳಿಸಿ ಎಂದು ತಾತನನ್ನು ಬೇಡುವನು. ತಾನು ಕಂಡ ಕನಸು ನಿಜವಾಗುತ್ತಿದೆಯೆಂದು ತಾಯಿ ಕೊರಗುವಳು .ರಾಹುಲನು ಅವಳಿಗೆ ಸಮಾಧಾನ ಹೇಳುತ್ತ ತನ್ನೊಂದಿಗೆ ಅಂಬಿಕೆಯನ್ನೂ ಕಳಿಸಲು ಹೇಳುವನು. ರಾಜ ಅಂಬಿಕೆಯನ್ನು ಕೇಳುವನು. ಅಮ್ಮಾಜಿ ಭಯಪಡುತಲಿಹರು. ನಿಮಗೆ ತಿಳಿದೇ ಇದೆ ಎಂದಳು ಅಂಬಿಕೆ.

( ಮುಂದುವರೆಯುತ್ತದೆ )



ರಾಜ. __ ಅಮ್ಮಾಜಿ, ಏನೆಂಬೆ? ಅಂಬಿಕೆಯ ಜೊತೆಯಲ್ಲಿ ರಾಹುಲನ ಕಳುಹಿಸಲು ಧೈರ್ಯವಾಗಿರಬಹುದು. ಏನಹೇಳುವೆ?

ಯಶೋ__   ನನಗೆ ಯಾವುದೂ ತೋಚದಿದೆ. ಅವರ ನೋಡುವ ಪುಣ್ಯ ನನ್ನ ಈ ಕಣ್ಣಳಿಗೆ ಇರುವುದೋ ಇಲ್ಲವೋ ನಾನರಿಯೆ. ಬಾಲಕನು ತನ್ನ ತಂದೆಯ ನೋಡಬೇಕೆಂದು ಆಶಿಸಲು ಬೇಡವೆನ್ನುವುದು ಸರಿಯೇ ಎಂದು ಆಂತರ್ಯ ಸಂದೇಹದೊಳಗಿಹುದು. ಕಳುಹುವುದು ಸರಿಯೆಂದು ನಿಮಗೆ ತೋರಿದರೆ ಕಳುಹಿರಿ. ಬೇಡನೆವೆ ನಾನು."

ರಾಹುಲ__. ಅಮ್ಮಾ, ಎಷ್ಟು ಒಳ್ಳೆಯವಳಮ್ಮಾ ನೀನು ! ಅಂಬಿಕೇ, ನಡೆ, ಹೋಗಿ ಅಣ್ಣನನು ಕರೆತರುವ ತಾತಾ ನಾ ಹೋಗಿಬರಲೆ ? ಅಮ್ಮಾಜೀ, ನಾವು ಹೋಗಿ ಬರೋಣವೇನಮ್ಮ ?

ಯಶೋ__   ಆಹಾ
ಏನು ಉತ್ಸಾಹವಿದು ! ಅಪ್ಪಾಜಿ ಹೋಗಿಬಾ. ಅಣ್ಣಯ್ಯ, ನನ್ನ ಮರೆಯದಿರಣ್ಣ. ನಿಮ್ಮಣ್ಣ ನಮ್ಮ ಮರೆತರು, ನನ್ನ ಬದುಕೆಲ್ಲ ಬಯಲಾಯ್ತು. ಅವರು ಬಿಟ್ಟಂತೆ ನೀನೆನ್ನ ಕೈಬಿಡಬೇಡ. ಹೋಗಿಬಾ, ಹೋಗಿಬಾ ; ಅಂಬಿಕೆ, ಜೊತೆಯೊಳಿರು; ನನ್ನ ಮರೆಯದಿರು.

ಅಂಬಿಕ.__  ನನ್ನಾಣೆ ಮರೆವೆನೆ ತಾಯಿ ?

ಯಶೋ__   ಮರೆತರೂ ತಪ್ಪಲ್ಲ. ಅದು ನನ್ನ ವಿಧಿ ಎಂಬೆ

ರಾಜ. __ ನಿನ್ನ ವಿಧಿ ಕೆಟ್ಟುದೆಂದೆಣಿಸದಿರು ಅಮ್ಮಾಜಿ. ನಿನ್ನರಸನೀಗ ಲೋಕಕೆ ಪೂಜ್ಯನೆನಿಸಿಹನು. ರಾಜ್ಯವಾಳುವುದೆಂಬ ಕಿರಿಯ ಹಿರಿಮೆಯನುಳಿದು, ಜಗದ ಜೀವಗಳ ಉದ್ಧರಿಪ ಹಿರಿಹಿರಿಮೆಯನು ಆಳವಟ್ಟು, ರಾಜ ಅಧಿರಾಜ ವೃಂದಗಳಿಂದ ಓಲೈಸಿಕೊಳ್ಳುತ್ತ ಚಕ್ರಾಧಿಪತಿಯಂತೆ ನಿಂದಿಹನು. ಏಕೆ ಚಿಂತಿಸುವೆ ? ಈ ಬಾಲಕನು ನಿನ್ನ ಈ ಹತ್ತು ವರುಷದ ತಪವೆ ಮೆಯ್‌ವೆತ್ತು, ನಿನ್ನಾಣ್ಮನನು ಕರೆಯಹೊರಟಂತೆ ಹೊರಟಿಹನು, ವಿಧಿಯರಿತುನಡೆವ ಹವನದಲಿ  ಉದಾತ್ರಗಳು ಸ್ವರಹಿಡಿದು ಸೊಗಸಾಗಿ ನುಡಿದ ಶಕ್ತಿಯ ಮಂತ್ರ ದೇವರನು ತರುವಂತೆ ನಮ್ಮ ಈ ಬಾಲಕನು ನಮ್ಮ ಸಿದ್ಧಾರ್ಥನನು ಬಿಡದೆ ತಂದೇತಹನು. ಬಾ ನನ್ನ ಅಣ್ಣಯ್ಯ, ತಾಯಿಗಭಿವಂದಿಸು. ಬಹು ಹಿರಿಯ ಜೀವವಯ್ಯಾ ನಿನ್ನ ತಾಯಿಯದು; ಬಹು ಹಿರಿಯ ತಪ ಪುಣ್ಯ. ಬೀಳ್ಕೊಳುವ ಮೊದಲಲ್ಲಿ ಹರಕೆಯನು ಕೊಳು. ಇಲ್ಲಿ ಬಾ, ಒಮ್ಮೆ ವಂದಿಸು. ತಾಯ್ತಂದೆಗಳ ಪುಣ್ಯ ನಿನ್ನಲ್ಲಿ ಫಲಿಸಲಿ. ಸಿದ್ದಾರ್ಥನನು ಕರೆದುತಹ ಕಾರ್ಯದಲಿ ನೀನು ಸಿದ್ದಾರ್ಥನಪ್ಪಂತೆ ದೇವರ್ಕಳೆಸಗಲಿ

(ರಾಹುಲನು ಇವರಿಗೆ ನಮಿಸುವನು. ತೆರೆ ಬೀಳುವುದು.)

__________________________
ಸಂಕ್ಷಿಪ್ತ ಗದ್ಯ ಸಾರಾಂಶ


ರಾಹುಲನನ್ನು ಅಂಬಿಕೆಯ ಜೊತೆಯಲ್ಲಿ ಕಳಿಸಿದರೆ ಧೈರ್ಯವೆಂದು ರಾಜ ಹೇಳಲು ಯಶೋಧರಾ ಳಿಗೆ ಏನೂ ತೋಚದ ಸ್ಥಿತಿ. ತನ್ನ ಗಂಡನನ್ನು ನೋಡುವ ಪುಣ್ಯ ತನ್ನ ಕಣ್ಣುಗಳಿಗೆ ಇಲ್ಲವೇನೋ. ಮಗನಾದರೂ ನೋಡಲಿ ಎನಿಸುವುದು. ಕಳಿಸಬಹುದೆಂದು ತೋರಿದರೆ ಕಳಿಸಿ ಎನ್ನುವಳು.

ರಾಹುಲನಿಗೆ ಉತ್ಸಾಹ ಉಕ್ಕುವುದು. ಅಂಬಿಕೆ ಹೊರಡೋಣವೇ ಎನ್ನುವನು. ಆ ಕ್ಷಣದಲ್ಲಿ ಅವನಿಗೆ ತನ್ನ ಅಮ್ಮ ಎಂದಿಗಿಂತ ಬಹಳ ಒಳ್ಳೆಯಚಳಾಗಿ ಕಂಡಳು!  ಅವನ ಉತ್ಸಾಹವನ್ನು ಕಂಡ ಯಶೋಧರಾ ತನ್ನನ್ನು ಮರೆಯದಿರು ಎಂದು ಕೇಳಿಕೊಳ್ಳುವಳು. ಅವರು ಬಿಟ್ಟಂತೆ ನೀನು ನನ್ನ ಕೈ ಬಿಡಬೇಡ ಎನ್ಬುವಾಗ ಅವಳ ನೋವಿನ ಆಳ ತಿಳಿಯುತ್ತದೆ. ಅಂಬಿಕೆಗೂ ಮಗನ ಜೊತೆಯಲ್ಲಿಯೇ ಇರಲು ಎಚ್ಚರಿಸುವಳು. ನಾನು ಮರೆಯುವೆನೆ ತಾಯಿ? ಎಂದು ಅಂಬಿಕೆ ಹೇಳಲು ಮರೆತರದು ನನ್ನ ವಿಧಿ..ಎಂದು ಹೇಳುವಳು.

ರಾಜ ಸಮಾಧಾನ ಹೇಳುವನು. ನಿನ್ನ ಗಂಡ ಕೇವಲ ಇಲ್ಲಿ ರಾಜನಾಗದೆ ಎಲ್ಲ ಚತ್ರವರ್ತಿಗಳಿಂದಲೂ ಪೂಜೆಗೊಳ್ಳುತ್ತಲಿರುವನು. ಚಿಂತಿಸದಿರು. ನಿನ್ನ ಹತ್ತು ವರ್ಷದ ತಪಸ್ಸು ಮೈವೆತ್ತಂತೆ ನಿನ್ನ ಮಗ ನಿನ್ನ ಗಂಡನನ್ನು ಕರೆತರಲು ಹೊರಟಿಹನು. ಯಜ್ಞಗಳಲ್ಲಿ ಮಂತ್ರಗಳು ದೇವತೆಗಳನ್ನು ಒಲಿಸಿ ತರುವಂತೆ ಇವನು ತನ್ನ ತಂದೆಯನ್ನು ಕರೆತರುವನು. 

ಮೊಮ್ಮಗನನ್ನು ಕರೆದು ತಾಯಿಗೆ ನಮಸ್ಕರಿಸಲು ಹೇಳುವನು. ನಿನ್ನ ತಾಯಿ ಬಹು ಪುಣ್ಯಜೀವಿ ಎನ್ನುವನು. ಸಿದ್ಧಾರ್ಥನನ್ನು ಕರೆತರುವಲ್ಲಿ ನೀನು ಸಪಲನಾಗುವಂತೆ ದೇವತೆಗಳು ಹರಸಲಿ ಎನ್ನುವನು. ಇಲ್ಲಿ ಬಳಸಿರುವ ಸಿದ್ಧಾರ್ಥನಪ್ಪಂತೆ ಎರಡೂ ಅರ್ಥ ಕೊಡುತ್ತದೆ. ಹಿಡಿದ ಕೆಲಸದಲ್ಲಿ ಸಫಲನಾಗು ಎನ್ನುವುದು ಇಲ್ಲಿನ ಆಶಯ. ಆದರೆ ಮುಂದೆ ತಂದೆಯಂತೆಯೇ ಆಗುವನೆಂಬ ಭವಿಷ್ಯ ಸೂಚಕ ಅರ್ಥವೂ ಇಲ್ಲಿದೆ.

( ಮೊದಲಸ್ಥಾನ ಮುಗಿಯಿತು. )




( ದೂರದಲ್ಲಿ  ಅಂಬಿಕೆ, ರಾಹುಲ, ಬುದ್ಧನ ಶಿಷ್ಯ ಮಾನಂದ, ಒಬ್ಬ ಸೇವಕ ಬರುವರು. )

ಮಾನಂದ__  ಅದುವೆ ಶ್ರಾವಷ್ಟಿ, ಅಕೊ ಅಲ್ಲಿ ನಗರದ ಎಡಕೆ ವಿಸ್ತಾರವಾಗಿ ಚಿತ್ರದೆಗೆಯ್ದ ಗಿಳಿಯಂತೆ ಕಂಗೊಳಿಪ ಆ ಹಸುರ ಸರಸಿಯೇ ಜೇತವನ. ಅಲ್ಲಿಯೇ ನಮ್ಮ ಗುರು ಮೂರು ಲೋಕಗಳ ಗುರು ಬುದ್ಧಗುರುವೆಂಬ ಹೆಸರಿಂದ ದಿವಿಜರ ತಿಳಿವ ಭೂಮಿಯಲಿ ಮಾನವರ ತಿಳಿವಾಗಿ ಮೂಡಿಹರು ; ಸ್ವರ್ಗದಲಿ ಹರಿದಿಂದ್ರನಂದನವ ಸಲೆ ಬೆಳೆಸಿ ದೇವರನು ಹೊರೆಯುತ್ತಿದ್ದಾ ವ್ಯೋಮಗಂಗೆಯನು ನೆಲಕೆ ಪೂರ್ವದಿ ಭಗೀರಥನು ಸೆಳೆತಂದಂತೆ, ಮನುಜರಿಗೆ ದುಸ್ಸಾಧ್ಯವೆನಿಪ ತಿಳಿವಿನ ಹೊನಲ ಅಮೃತರಸವನು ಜನದ ಮುಂದೆ ಹರಿಯಿಸುತಿಹರು. ಗಂಗೆಯಿರ್ತಡಿಯಲ್ಲಿ ಬೆಳೆವ ಶಾಲಿಯ ಬಯಲು ಇವರ ವಾಣಿಯಲ್ಲಿ ಬೆಳೆದಿಹ ಮನದ ಬಯಲಂತೆ ಹಸುರಲ್ಲ; ದಗೆಗೊಂಡು ಗಂಗೆಯಲಿ ಮಿಂದವರು ಇವರ ನುಡಿಯಿಂದ ಸಂಸಾರಿಗಳು ಸುಖಿಪಂತೆ ಸುಖಿಸಲಾರರು; ಇಲ್ಲಿ ಮನದ ಮಲ ಹರಿವಂತೆ ಅಲ್ಲಿ ಮೆಯ್ ಶುದ್ಧಿಯಾಗದು.

ಅಂಬಿಕೆ __ ಈಗ ಬುದ್ಧಗುರು ಅಲ್ಲಿಹರೆ?
 
ಮಾನಂದ.__  ಒಂದು ಸಪ್ತಾಹ ಅಲ್ಲಿದ್ದಿ ಹರು. ಇನ್ನೊಂದು ಸಪ್ತಾಹ ಅಲ್ಲಿಯೇ ಇರಬಹುದು.
ಅಂಬಿಕೆ __ ಅವರ ಉಪದೇಶ ಕೇಳುವ ಜನಕೆ ಬಹು ಹಿತವೆ?
ಮಾನಂದ__. ಅಮೃತರಸದಂತೆ ಹಿತ. 

ಅಂಬಿಕೆ  __  ಬಹು ಜನರು ಇಂತೆಯೇ ಅದನು ಹೊಗಳುವರು.

ಮಾನಂದ__. ಜನ ಹೊಗಳಿ ಹೇಳುವ ಮಾತು ಮನದ ಮೆಚ್ಚಿಗೆಯ ಅರ್ಧವ ತಿಳಿಸಲಾರದು;. ಗುರುವಿನುಪದೇಶವಾಣಿಯ ಅನಂತಗುಣದಲ್ಲಿ ಒಂದಂಶವನು ತೋರಲಾರದು. ಲೋಕಗಳ ಎಲ್ಲ ತಿಳಿವುಗಳು ಒಂದೇ ಜೀವರತ್ನದಲಿ ಒಂದುಗೂಡಿದ ತೆರದೆ ತೋರ್ಪುದಾತನ ಜೀವ

ಅಂಬಿಕೆ__   ಈಗ ಹೋದೊಡೆ ದೊರೆವುದೇ ಅವರ ದರ್ಶನ ?

ಮಾನಂದ__. ದೊರೆಯುವುದು. ಈ ಮೊದಲೆ ವಿಶ್ರಾಂತಿಯಿಂದೆದ್ದು ಗುರುದೇವರೈತಂದು ವನದ ಮಧ್ಯದೊಳಿರುವ ವಟವೃಕ್ಷದಡಿ ನೆರೆದ ಜನವನಾಶೀರ್ವದಿಸಿ, ವೇದಿಕೆಯ ಮೇಲೆ ಬಿಜಯಂಗೈದು, ಹೇಳುವರ ನೋವನೆಲ್ಲವ ಕೇಳಿ ಸಂತೈಸಿ, ಕೇಳುವರ ಸಂದೇಹಗಳ ಹರಿಸಿ ಶಾಂತಿಯನು ಕೊಡುತಿಹರು. 

ಅಂಬಿಕೆ__  ಪುಣ್ಯವಂತರು ಜನರು. ನೀವು ಆ ಗುರುವರರ ಮುಖ್ಯ ಶಿಷ್ಯರೊಳೊಬ್ಬರಿರಬೇಕು.

ಮಾನಂದ.__     ಶಿಷ್ಯರಲಿ ನಾನೊಬ್ಬನೆನಬಹುದು ; ಮುಖ್ಯರಲಿ ನಾನಲ್ಲ. ನಮ್ಮ ಗುರುದೇವರೆಡೆ ನಿಲುವ ಶಿಷ್ಯರ ಮಧ್ಯೆ ನನಗೆ ಕಿರಿಯವರಿಲ್ಲ.

ಅಂಬಿಕೆ__  ಅವರ ಶಿಷ್ಯರು ಈಗ ಬಹುಕಡೆಯೊಳಿಹರಲ್ತೆ ?

ಮಾನಂದ__. ವಾರಣಾಶಿಯೊಳವರು ಧರ್ಮಚಕ್ರವ ಹರಿಯಬಿಟ್ಟ ಮೊದಲಿಂದೀಗ ಐದು ವರುಷದಲಿ, ಮಗಧರ ರಾಜಗೃಹದಿಂದ, ಪಾಟಲೀಗ್ರಾಮ ರಾಮಗ್ರಾಮ ಗಾಂಧಾರ, ಬೆಲುವ ವೈಶಾಲಿ ಭೋಗಗ್ರಾಮ ಕುಶಿನಾರ, ಶ್ರಾವಷ್ಟಿ ಸಾಕೇತ ಕೋಶಾಂಬಿ ಚಂಪಕ, ಪಿಪ್ಪಲೀವನ ಗಯಾಶೀರ್ಷ ಕೋಟಿಗ್ರಾಮ, ಉರುವೆಲಾ ಕೋಸಲ ಅನುಪ್ರಿಯ ಚಾಲಕ, ಆರ್ಯಋಷಿ ದೇಶದೀ ಕೊನೆಯಿಂದ ಆ ಕೊನೆಗೆ ಇವರ ವಾಣಿಯನು ಕೇಳದ ನಾಡು ಒಂದಿಲ್ಲ. 
ಅಂಬಿಕೆ __ ಆ ಪುಣ್ಯವಿಲ್ಲದುದು ನಮ್ಮ ನಾಡಿಗೆ ಮಾತ್ರ. 
ಮಾನಂದ__. ಯಾವುದಾ ನಾಡು ?
ಅಂಬಿಕೆ __ ಉತ್ತರಕೋಸಲದ ನಾಡು.
ಮಾನಂದ__.  ನೀವು ಬಹುದಲ್ಲಿಂದಲೇ ?

ರಾಹುಲ__   (ಅಂಬಿಕೆಗೆ ಮಾತ್ರ) ನೋಡು, ಅಂಬಿಕೆ, ನಾವು ಯಾರೆಂಬುದನು ನಾನೆ ಹೇಳುವೆ, ನೀನು ಯಾರಿಗೂ ಹೇಳಬೇಡೆಂದು ಬೇಡಿದೆನಲ್ಲ.

ಅಂಬಿಕೆ__  ಹೇಳುವೆನೆ ಅಣ್ಣಯ್ಯ? (ಮಾನಂದನಿಗೆ) ನಾವು ಕೋಸಲದವರು ಗುರುದೇವರೆಮ್ಮ ನಾಡಿಗೆ ಬಂದ ನೆನವಿಲ್ಲ. ಅದರಿಂದ ಅಂತೆಂದೆ. ಈಗ ನಾವಾವನಕೆ ಹೋಗಲೆಳೆಸುವೆವು.

ಮಾನಂದ__.  ನಾನಲ್ಲಿಗೇ ಹೊರಟಿಹೆನು. ನೀವು ಜೊತೆಯಲೆ ಬರುವುದಾಗೆ ಸಂತಸದಿಂದ ಒಡನೆ ಕರೆದೊಯ್ಯುವೆನು.

ಅಂಬಿಕೆ__  ಇದಕ್ಕಾಗಿ ವಂದನೆ.
ಏನೆಂಬಿರಣ್ಣಯ್ಯ ?

ರಾಹುಲ__.   ಹೋಗೋಣ ಅಂಬಿಕೆ ನಾನು ಬೇಡಿದುದು ನೆನಪಿರಲಿ, ಏನು?
( ಎಲ್ಲರೂ ಹೋಗುವರು )

********************************
ಸಂಕ್ಷಿಪ್ತ ಗದ್ಯ ಸಾರಾಂಶ

ಇದು ಎರಡನೇ ಸ್ಥಾನ. ಶ್ರಾವಸ್ಟಿ. ಸ್ವಲ್ಪ ದೂರದಲ್ಲಿದೆ. ಮಾನಂದನೆಂಬ ಬುದ್ಧನ ಅನುಯಾಯಿ ಅಂಬಿಕೆ, ರಾಹುಲರಿಗೆ ಸಿಕ್ಕಿದ್ದಾನೆ. ತನ್ನ ಗುರುವನ್ನು ಹೊಗಳುತ್ತ ವರ್ಣಿಸುತ್ತಾನೆ. ಭೂಮಿಗೆ ದೇವತೆಗಳ ಅರಿವನ್ನು ನೀಡಲೆಂದು ಬಂದವನು. ಭಗೀರಥ ಗಂಗೆಯನ್ನು ತಂದಂತೆ ಜ್ಞಾನ ಗಂಗೆಯನ್ನು ಹರಿಸುತ್ತಿರುವನು. ಇವರ ನುಡಿಗಳು ಸಂಸಾರಿಗರಿಗೆ ಗಂಗೆಯಲ್ಲಿ ಮಿಂದಂತೆ ಭಾಸವಾಗುವವು. ಮನಸಿನ ಮಲ ಹರಿದು ಶುದ್ಧರಾಗುವರು...

ಈಗ ಬುದ್ಧದೇವರು ಅಲ್ಲಿ ಇರುವರೆ? ಎಂದು ಅಂಬಿಕೆ ಪ್ರಶ್ನಿಸುವಳು. ಒಂದು ಸಪ್ತಾಹದಿಂದ ಇದ್ದಾರೆ. ಇನ್ನೂ ಒಂದು ಸಪ್ತಾಹ ಇರಬಹುದು.  ಎನ್ನುವನು. ಅವರ ಉಪದೇಶ ಜನರಿಗೆ ಬಹಳ ಹಿತವಾಗಿರಬಹುದು ಎಂದು ಅವಳೆನ್ನಲು ಅಮೃತರಸದಂತೆ ಹಿತವೆನ್ನುವನು. ಜನರು ಹೀಗೆ ಹೊಗಳುವರು. ಆದರೆ ಜನರು ಹೊಗಳುವ ಮಾತುಗಳು ಅವನ ಉಪದೇಶದ ಒಂದಂಶವನ್ಬೂ ತೋರಿಸವು. ಏಕೆಂದರೆ ಎಲ್ಲಾ ಜೀವರತ್ನಗಳನ್ನೂ ಒಂದೇ ಸೂತ್ರದಲ್ಲಿ ಇಟ್ಟಂತೆ ಅವನ ನುಡಿಗಳು. ಈಗ ಹೋದರೆ ಅವರ ದರ್ಶನ ದೊರೆಯುವುದೇ? ಎಂಬ ಅಂಬಿಕೆಯ ಪ್ರಶ್ನೆಗೆ  ದೊರೆಯುವುದು ಎಂಬ ಉತ್ತರ ಬರುತ್ತದೆ. ಜನರ ಸಂದೇಹಗಳನ್ನು ನಿವಾರಿಸಿ ಶಾಂತಿಯ ನೀಡುತ್ತಿರುವನು.
ಅಂಬಿಕೆಯು ಮಾನಂದನನ್ನು ಬುದ್ಧನ ಮುಖ್ಯ ಶಿಷ್ಯನೆಂದು ಕರೆದಾಗ ಅವನು ವಿನಯದಿಂದ ನಿರಾಕರಿಸುತ್ತ ಮುಖ್ಯ, ಅಮುಖ್ಯ ಎಂಬುದಿಲ್ಲ. ಎಲ್ಲರೂ ಇಲ್ಲಿ ಸಮಾನರು. ಅವರ ಶಿಷ್ಯರು ಈಗ ಹಲವಾರು ಪ್ರದೇಶಗಳಲ್ಲಿ ಇರುವರೆಂದು ಅವುಗಳನ್ನು ಹೆಸರಿಸುವನು. ಅದರಲ್ಲಿ ತಮ್ಮ ನಾಡು ಕೋಸಲಕ್ಕೆ ಇನ್ನೂ ಆ ಪುಣ್ಯ ದೊರಕಿಲ್ಲವೆಂದಾಗ ಇವರ ಸ್ಥಳ ಕೇಳುವನು. ಅಷ್ಟರಲ್ಲಿ ರಾಹುಲನು ಅಂಬಿಕೆಗೆ ಎಚ್ಚರಿಸುವನು. ನಾವು ಯಾರೆಂಬುದನ್ನು ಆಮೇಲೆ ತಾನೇ ಹೇಳುವ ಆಸೆ ಅವನದು..

ಎಲ್ಲರೂ ಹೋಗುವರು.

( ಬುದ್ಧನು ಕುಳಿತು ಉಪದೇಶ ಮಾಡುತ್ತಿದಾನೆ. ಹತ್ತಿರ ಆನಂದ, ಸಾರಿಪುತ್ರ, ಮುಂದುಗಡೆ ಊರಜನ ಕುಳಿತಿದ್ದಾರೆ.)

ಬುದ್ಧ__.  ಒಳಗೆ ಬೆಳಗುವ ಬೆಳಕ ಸರಿಪಡಿಸಿಕೊಳಬೇಕು. ಬಡವನಿಗೆ ಮನೆಯೊಳೇ ನಿಧಿಯೊಂದ ಹುಗಿದಿಟ್ಟು ಎಲ್ಲಿರುವುದೆಂದು ಹೇಳಿದ ರೀತಿ, ಮನುಜನಿಗೆ ಅವನೊಳಗೆ ನಿಲಿಸಿರುವ ಬುದ್ಧಿ. ಅದರಿಂದವನು ಒಳಗಿರುವ ಅರಿವ ಶಕ್ತಿಯ ಆಳವನಾರೈಸಿ ಹಿರಿದಾಗುವಂತೆಸಗಬೇಕು. ತಿಳಿವಿನ ಚಿಲುಮೆ ಅನುದಿನದ ಸುಖದುಃಖದಿಂದ ಬಗ್ಗಡವಾಗಿ ಕೆಡುತಿರಲು ಸಾವಧಾನದಿ ಮನವ ನಿಲ್ಲಿಸುತ, ಕದಡು ತಳಕಿಳಿವಂತೆ, ಭಾವ ತಿಳಿಯಪ್ಪಂತೆ, ಶಾಂತಚಿತ್ತವನು ಸಾಧಿಸಬೇಕು. ಇದುವೆ ತಪ, ಇದೆ ಧರ್ಮ, ಇದೆ ಯಾತ್ರೆ, ಇದೆ ಮುಕ್ತಿ, ಕಲ್ಯಾಣ. ಈ ಸ್ಥಿತಿಯ ಸಾಧಿಸಲು ಎಲ್ಲರೂ ತೊಡಗುವುದು. (ಮಾನಂದ, ಅಂಬಿಕೆ, ರಾಹುಲ, ಸೇವಕ ಬರುವರು.)

ಮಾನಂದ__.   ಉಪದೇಶ ನಡೆಯುತಿದೆ. ಒಂದು ಕಡೆ ಕುಳ್ಳಿರಿ. ಇದು ಆದಮೇಲೆ ಪ್ರಸಾದವನು ಕೊಡುವರು; ಆಗ ಆಶಿಷವ ಬೇಡುವಿರಂತೆ.

(ಎಲ್ಲರೂ ಕುಳಿತುಕೊಳ್ಳುವರು.)

ಬುದ್ಧ.__  ಎಲ್ಲರೂ. ಎಲ್ಲರೂ ಈ ಸ್ಥಿತಿಯ ಪಡೆಯೆ ಯತ್ನಿಸಬೇಕು. ಅರಿಯದವ ನಾನು. ಅಲ್ಪನು, ಕಿರಿಯವನು, ನನಗೆ ಇದು ಸಾಧ್ಯವೇ ಎಂದು ಸಂದೇಹಪಡಬೇಡ. ಒಳ್ಳಿದನು ಮಾಡುವೆನು ಎಂದು ಯತ್ನಿಸುವವನಿಗೆ
ವಿಶ್ವವೇ ನೆರವಾಗಿ ನಿಲ್ಲುವುದು. ಸೃಷ್ಟಿಯಲ್ಲಿ ಶುಭವ ಸಾಧಿಸುತಿರುವ ಪರಶಕ್ತಿ ಯಾವುದೋ ಅದು, ಅಂಥ ಮಾನವನ ಹೃದಯದಲಿ ಮನೆಮಾಡಿ, ಅವನು ನೆನೆವ ಮಹಾಕಾರ್ಯಗಳವನಿಂದ ನಡೆಯಿಸುವುದು ; ಅವನನುದ್ಧಾರಮಾಡುವುದು ; ಲೋಕಕಲ್ಯಾಣವನು ಅವನಿಂದ ತರಿಸುವುದು, ನಿಂತಿರುವ ನೆಲೆಯಿಂದ ತಪದ ಶಾಂತಿಯ ನೆಲೆಯ ದೂರವನು ನೋಡಿ ಭಯಪಡಬೇಡ ; ಬಾಲಕನು ಅಕ್ಷರವ ಕಲಿಯತೊಡಗಿದ ವೇಳೆ ವೇದಾಂತ ಎನಿತು ದೂರವೊ ಎಂದು ಭಾವಿಸಲು ಫಲವೇನು ತಪದ ಫಲ ಕಣ್ಣಿಗೆ ಕಾಣದಿದೆ, ಬರಿ ಮಾತು ಎಂದು ವಿಚಿಕಿತ್ಸೆಯಲಿ ಮನವ ಕುಂಠಿಸಬೇಡ : ತೀರದಲಿ ನಿಂತು ಸಾಗರವ ನೋಡುವ ಕಣ್ಗೆ ಒಂದೆ ಹರಿದಾರಿ ನೀರಿನ ಹರಹು ಕಾಣುವುದು. ನಾವೆಯಲಿ ಕುಳಿತು ಮುಂಬರಿದು ಹೋದಂತೆಲ್ಲ ಹರಿದಾರಿ ಹರಿದಾರಿ ಎದುರುಗೊಳ್ಳುತಬಹುದು. ಬದ್ಧ ಸಾಧಕನು ಹಿಂದಣಜ್ಞಾನವನು ಮನಗಂಡು ಇನ್ನು ಸಾಧನೆಯಿಲ್ಲವೆಂದು ನೆನೆವುದು ಬೇಡ : ಹಿಮಗಿರಿಯನೇರುವನು, ಹಿಂದಿರುಗಿ ನೋಟವನು ಬಯಲಮೇಲ್ವಾಯ್ಸಿ, ಆಹಾ ಎನಿತು ಏರಿದೆನು, ಇನ್ನು ಏರುವ ಕೆಲಸವಿಲ್ಲ, ಎನೆ ಫಲವೇನು ? ಅವನ ಗೆಯ್ದಕೆ ಕಾದ ಕೆಲಸ ಹಿಮಗಿರಿಯಾಗಿ ಅವನ ಹಿಂಗಡೆಯಲೇ ಒಟ್ಟೆಸಿ ನಿಂತಿಹುದು. ಸಾಧಿಸಿದೆ ನಾನೆಂಬ ಅಭಿಮಾನವೂ ಬೇಡ ; ಬೇಡ ನಾನಲ್ಪನೆಂಬಭಿಮಾನ ವಿಪರೀತ;
ಬೇಡ ಸಾಧನೆಯ ಪಥವಿಹುದರಲಿ ವಿಷಿಕಿತ್ಸೆ ಅವನವನು ತನ್ನ ಸಧ್ಯಃಸ್ಥಿತಿಯ ನೆಲೆಯಿಂದ ತನ್ನ ತಾನೇ ತಿದ್ದಿ ಕೊಳಲು ಯತ್ನಿಸಬೇಕು.  ಅಲ್ಪ ನಾನೆಂದವನು ತಾನೆ ಹಿರಿದಾಗುವನು ; ತನ್ನ ಪಥವನು ತಾನೆ ಕಾಣುವನು ; ಕಂಡುದನು ಸಾಧಿಸುತ ಮುಂದೆ ನಡೆವನು ; ಮುಂದೆ ನಡೆನಡೆದು ತಾ ಮುಕ್ತನಾಗುವನು ; ಅಂತೆಯೇ ಆ ತಾನು ಲೋಕಗಳ ಕಲ್ಯಾಣದಾವಾಸವಾಗುವನು.

(ಅಂಬಾಪಾಲಿ ಸೇವಕರೊಡನೆ ಹಣ್ಣು ಹಂಪಲು ಇಟ್ಟಿರುವ ತಟ್ಟೆಗಳನ್ನು ತೆಗೆಯಿಸಿಕೊಂಡು ಬರುವಳು.)

ಅಂಬಾ __  ಜಯ ಬುದ್ಧ ಗುರುದೇವ ಜಯ ಶುದ್ಧ ಚಾರಿತ್ರ ಜಯ ತ್ರಿಲೋಕಾಚಾರ್ಯ ಜಯ ಜಗನ್ಮತ್ರ ಜಯ ಪತಿತಪಾವನಾ ಜಯ ಹೆ ದೀನಾವನಾ ಜಯ ದೇಶಿಕೇಂದ್ರ ಜಯ ಉದ್ಧಾರಕರ್ತ ಜಯ ಭುವನಪೂಜ್ಯ ಜಯ ಧವಳಕೀರ್ತಿ ಜಯ ಹೆ ಮಮ ಗುರುನಾಥ ಕಾರುಣ್ಯಮೂರ್ತಿ

 ( ಎಂದು ನಮಸ್ಕರಿಸುವಳು. ಫಲಪುಷ್ಪಗಳನ್ನು ಸಮರ್ಪಿಸುವಳು.) 
*******************************

ಸಂಕ್ಷಿಪ್ತ ಗದ್ಯ ಸಾರಾಂಶ


ಬುದ್ಧನು ಉಪದೇಶ ಮಾಡುತ್ತಿರುವನು. ಊರ ಜನ, ಶಿಷ್ಯರು ಕುಳಿತಿದ್ದಾರೆ.

ನಾವು ನಮ್ಮ ಒಳಗಿನ ಬೆಳಕನ್ನು ಸರಿಪಡಿಸಿಕೊಳ್ಳಬೇಕು. ಹುಗಿದಿಟ್ಟ ನಿಧಿ ಎಲ್ಲಿದೆಯೆಂದು ಅರಿಯದೆ ತೊಳಲಾಡುವಂತೆ ನಮ್ಮ ಒಳಗಿನ ಶಕ್ತಿಯನ್ನು ಅರುಯದೆ ಇದ್ದೇವೆ. ತಿಳಿವಿನ ಚಿಲುಮೆ ಅನುದಿನದ ಸುಖ ದುಃಖದಿಂದ
ಬಗ್ಗಡವಾಗಿರುವುದನ್ನು ಮನದ ಸಾವಧಾನತೆಯಿಂದ ತಿಳಿಗೊಳಿಸಬೇಕಿದೆ. ಇದೇ ತಪಸ್ಸು, ಧರ್ಮ, ಮುಕ್ತಿ ಎಲ್ಲವೂ ಆಗಿದೆ.ನಾನು ಅಲ್ಪ ತಿಳಿಯದವನು ಎಂದು ಕೊರಗುವುದು ಬೇಡ. ದರ್ಮದ ದಾರಿಯಲ್ಲಿ ನಡೆಯಲು ಎಲ್ಲರೂ ಬದ್ಧರಾಗಬೇಕು. ಒಳಗಿನ ಅರಿವಿನ ಬೆಳಕು ಮುಖ್ಯ ಎಂದೆಲ್ಲ ಹೇಳುವನು. ಎಲ್ಲರೂ ಮಂತ್ರಮುಗ್ಧರಾಗಿ ಕುಳಿತು ಕೇಳುತ್ತಿರುವರು.

ಆ ವೇಳೆಗೆ ಮಾನಂದ ಅಂಬಿಕೆ, ರಾಹುಲ ಎಲ್ಲ ಬರುವರು. ಉಪದೇಶ ನಡೆಯುತ್ತಿರುವುದರಿಂದ ಒಂದೆಡೆಗೆ ಕುಳ್ಳಿರಲು ಅವರುಗೆ ಸೂಚಿಸಿದ ಮಾನಂದ ತಾನೂ ಕುಳಿತುಕೊಳ್ಳುವನು.ಬುದ್ಧನಮಾತುಗಳು ಮುಂದುವರೆದವು.

ಯಾರೂ ತಮ್ಮ ಬಗ್ಗೆ ತಾವು ಕೀಳರಿಮೆ ಪಟ್ಟುಕೊಳ್ಳಬಾರದು. ಸೃಷ್ಟಿಯಲ್ಲುರುವ ಯಾವುದೋ ಶಕ್ತಿ ಎಲ್ಕವನ್ನೂ ಸಾಧಸುತ್ತಿರುವುದು. ಅದು ಮಾನವನ ಮನದಲ್ಲಿ ಮನೆ ಮಾಡಿ ಮಹಾಕಾರ್ಯಗಳನ್ನು ನಡೆಸುವುದು.  ಮಕ್ಕಳು ಅಕ್ಷರವ ಕಲಿತಂತೆ ಅದು ನಿಧಾನವಾಗಿ ಸಾಗುವುದು. ಹಾಗೆಂದು ಅದನ್ನು ಇಲ್ಲವೆಂದುಕೊಳ್ಳಬಾರದು. ಸಮುದ್ರದ ತೀರದಲ್ಲಿ ನಿಂತು ನೋಡಿದರೆ ಸ್ವಲ್ಪ ಮಾತ್ರವೇ ಕಾಣುವ ಸಮುದ್ತ ಅಗಾಧವಾಗಿರುವುದು. 
ಹಿಮಗಿರಿಯನ್ನು ಏರಿದವನು ಬಯಲನ್ನು ನೋಡಿ ಇನ್ನು ಏರುವುದು ಏನೂ ಇಲ್ಲ ಎನ್ನಬಾರದು. ಅವನ ಕರ್ತವ್ಯ ಇದ್ದೇ ಇರುತ್ತದೆ. ಎಲ್ಲವನ್ನೂ ಸಾಧಿಸಿದೆನೆಂಬ ಅಭಿಮಾನ ಸಲ್ಲದು. ಹಾಗೇ ನನ್ನಿಂದ ಆಗದು ಎಂಬ ಕೀಳರಿಮೆಯೂ ಸಲ್ಲದು‌ ತನ್ನನ್ನು ತಾನು ಸದಾ ತಿದ್ದಿಕೊಳ್ಳುತ್ತಲೇ ಇರಬೇಕು. ಅಲ್ಪ ತಾನೆಂದವನು ಆಗ ತಾನಾಗಿ ಹಿರಿದಾಗುವನು. ತನ್ನ ದಾರಿಯನ್ನು ತಾನೇ ಕಾಣುವನು. ಮುಂದೆ ಸಾಗುವನು. 

ಅಷ್ಟು ಹೊತ್ತಿಗೆ ಅಂಬಾಪಾಲಿ ಹಣ್ಣುಹಂಪಲುಗಳನ್ನಿಟ್ಟಿರುವ ತಟ್ಟೆಯನ್ನು ತರುವಳು. ಬುದ್ಧನಿಗೆ ಜಯ ಜಯ ವೆನ್ನುತ್ತ ನಮ್ಮನ್ನು ಉದ್ಧರಿಸುವವನಿಗೆ ಜಯವಾಗಲಿ ಎಂದು ಫಲಸಮರ್ಪಣೆ ಮಾಡುವಳು.



ಜಯ ಭುವನಪೂಜ್ಯ ಜಯ ಧವಳಕೀರ್ತಿ ಜಯ ಹೆ ಮಮ ಗುರುನಾಥ ಕಾರುಣ್ಯಮೂರ್ತಿ (ಎಂದು ನಮಸ್ಕರಿಸುವಳು. ಫಲಪುಷ್ಪಗಳನ್ನು ಸಮರ್ಪಿಸುವಳು).

-ಬುದ್ಧ__.  ಬಾರ ಅಂಬಾಪಾಲಿ ; ಬಾರ ತಾಯಿ ; ಕುಳ್ಳಿರು.
ನಾನು ಅಲ್ಪನು ಎಂದ ಮಾನವನು ಲೋಕಗಳ ಕಲ್ಯಾಣದಾವಾಸವಾಗುವನು. ಆಗವನು ತನ್ನನಲ್ಪನು ಎಂದು ಹಳಿವುದಕು ತಾನು ತನ್ನೊಡವೆಯಲ್ಲೆಂಬುದನು ಅರಿಯುವನು ತಾನೆಂಬುದುಂಟು : ವಿಶ್ವದ ಒಡವೆಯಾಗಿ ; ತನ್ನೊಡವೆಯಾಗಿ ಇಲ್ಲ. ತಾನು ಎನ್ನುವುದು ವಿಶ್ವಜೀವನದ ವಟವೃಕ್ಷದಾನಂತ್ಯದಲಿ ಏನೊಂದು ಕಣವಾಗಿ, ಬೇರಿನಲಿ, ತಾಳಿನಲಿ, ಶಾಖೆ ಉಪಶಾಖೆಯಲಿ ಕಾಂಡದಲಿ ಎಲೆಗಳಲಿ, ಎಲ್ಲಿಯೋ ಅಲ್ಲಿ ಬೆರೆತಿರುವುದು; ತಾ ತನ್ನ ಅರಿತಿರುವುದು ಅಂತೆ ಮರೆತಿರುವುದು.
ನಾನು ನಾನು ನಾನು, ನನ್ನದಿದು ನನ್ನ ದದು, ಎಂಬ ಅತಿಮಮತೆಯುರುಮುರುಳುತನದಲಿ ಈ ಮರದ ಶಾಖೆಯಲಿ ಕಾ ಜೀವ ಕರುಟಂತಹುದು : ತನ್ನೆಡೆಗೆ ಬಂದ ರಸವನು ಲೋಭದಲಿ ಹೀರಿ, ತನ್ನ ಸುತ್ತಲೆ ರಕ್ಷೆಯೊಂದು ರೇಖೆಯ ಹಾಕಿ, ತಾಯಿ ತರುವಿನ ಬಾಳಿನಿಂದ ಬೇರೆಯದಾಗಿ ಕೆಟ್ಟು ಹೋಗುವುದು. ತನ್ನೆಡೆಗೆ ಹರಿದೈ ತಂದ ಜೀವರಸದಲಿ ಸುಖಿಸಿ ಮುಂದೆ ಅದ ಹರಿಯಬಿಡ ತಾನು ಸುಖವನುಂಡು ತಾಯಿ ತರುವಿನ ಬಾಳು ಹಸನಾಗಿ ಬೆಳೆವಂತೆ ಸಾಹಾಯ ಮಾಡುವುದು. ಲೋಕಕಲ್ಯಾಣವನು ಸಾಧಿಸುವ ಮಾನವನು ತಾನೆಂಬುದೊಂದು ಬರಿಮಾಯೆ ಎಂದೆನಬೇಡ ; ತಾನಲ್ಲದುಳಿದುದೆಲ್ಲವು ಮಾಯೆ ಎನಬೇಡ ; ಸತತವೂ ಬೆಳೆಯುತಿಹ ಹಿರಿದೊಂದು ಬಾಳಿನಲಿ ತಾನಿಂದು ಬಗೆದಿಹೆನು, ಮುಂದೆ ಏನಾಗುವೆನೊ ಅದನು ಆ ಸತತವೂ ಬೆಳೆವ ಬಾಳರಿತಿಹುದು, ಈ ಕ್ಷಣದೊಳಿಲ್ಲಿ ನನ್ನಿಂದ ಒಳಿತಾಗಲಿ, ನನ್ನಿಂದ ನಾಲ್ಕು ಜೀವಕೆ ಸೌಖ್ಯ ದೊರೆಯಲಿ, ನಾನೆಂಬುದಿಂತು ಸಾರ್ಥಕವಾಗಲಿ, ಎಂದು ಸತತವೂ ಪರಹಿತವ ಸಾಧಿಸುತಲಿರುವುದು. ಸ್ವಸ್ತು, ಶುಭಮಸ್ತು, ಶಾಂತಿರಸ್ತು.
 ( ಎಂದು ಹೇಳಿ ಎರಡು ಕ್ಷಣ ಧ್ಯಾನದಲ್ಲಿ ಮಗ್ನನಾಗುವನು . ಅವನು ಕಣ್ತೆರೆದಮೇಲೆ )

 ಅಂಬಾ__   ಗುರುದೇವ, ನಾಳಿನಲಿ ನನ್ನ ಮನೆಗೈತಂದು ನಿಮ್ಮಡಿಯ ಧೂಳಿನಿಂದದನು ಪಾವನಮಾಡಿ ಸೇವಕಳ ಅಲ್ಪ ಆತಿಥ್ಯವನು ಸ್ವೀಕರಿಸಿ ನನ್ನ ಮನ್ನಿಸಬೇಕು ಎಂದು ಬೇಡಲುಬಂದೆ. ದಯೆಗೆಯ್ದು ಇದ ಸಲಿಸಬೇಕು.

ಬುದ್ಧ.__  ಆಗಲಿ ತಾಯಿ.
ಅಂಬಾ__   ನಾನು ಧನ್ಯಳು. ಇಲ್ಲಿ ನೆರೆದಿರುವವರೆಲ್ಲರೂ ನಾಳೆ ಗುರುದೇವರೊಡನೈತಂದು ನಮ್ಮಲ್ಲಿ ಆತಿಥ್ಯ ಸ್ವೀಕರಿಸಬೇಕೆಂದು ಬೇಡುವೆನು. 
ಎಲ್ಲರೂ __  ಅಂತೆ ಆಗಲಿ ತಾಯಿ. ಬರುವೆವು ಬರುವೆವು.

 ( ಶಿಷ್ಯನೊಬ್ಬನು ಅಷ್ಟು ಹೂವನ್ನು ತಂದು ಬುದ್ಧನ ಹತ್ತಿರ ಇಡುವನು ) 
ಆನಂದ.__  ಎಲ್ಲರೂ ಬನ್ನಿರಿ. ಪ್ರಸಾದವನ್ನು ಕೊಳ್ಳಿರಿ.

( ಒಬ್ಬೊಬ್ಬರೂ ಬಂದು ಪ್ರಸಾದವನ್ನು ತೆಗೆದುಕೊಳ್ಳುವರು )
ಅಂಬಿಕೆ__   ( ಮಾನಂದನಿಗೆ ) ನಮ್ಮ ಮಾತನು ಈಗ ಬಿನ್ನಯಿಸಲಾಗುವುದೆ?
 ಮಾನಂದ.   ಬನ್ನಿರಿ ; ಅರಿಕೆ ಮಾಡುವೆನು.
(ಬುದ್ಧನಿಗೆ ನಮಸ್ಕರಿಸಿ)

ಗುರುದೇವರಲಿಬಿನ್ನಪ, ಉತ್ತರದ ಕೋಸಲದ ನಾಡಿಂದ ಬಂದಿರುವ ಇವರು ಗುರುಸಾನ್ನಿಧ್ಯದಲಿ ಏನೊ ಮನವಿ ಮಾಡಲಪೇಕ್ಷಿಸುವರು.

ಬುದ್ಧ__.  ಬಹು ಸಂತೋಷ. ಉತ್ತರದ ಕೋಸಲವು ನಮ್ಮ ಜನ್ಮದ ನಾಡು ; ಶಾಕ್ಯರ ಪರಾಕ್ರಮದ ನೆಲೆಬೀಡು. ಅಲ್ಲಿಂದ ಬಂದಿರೇ ? ಕಪಿಲವಸ್ತುವನು ನೋಡಿರುವಿರೇ ?

 (ರಾಹುಲನು ಬಂದು ಅಣ್ಣಾ ಎಂದು ಅಪ್ಪಿಕೊಂಡು ಅಳುವನು.)

 ಆಹ! ಏನಯ್ಯ ಇದು ? ಕಂದ ಏನಾಯಿತು ? ಭಯ ಬೇಡ. ಏನಾಯ್ತು ? ತಾಯ್ತಂದೆ ಇಲ್ಲವೇ ?
(ಅಂಬಿಕೆ ಬಂದು ನಮಸ್ಕರಿಸುವಳು)

ಯಾರಿವರು ? ಅಂಬಿಕೆ ? ನೀನಿಲ್ಲಿ ಬಂದಿಹೆಯ ? ಬಾಲಕನು ಯಾರು ? ಕುಮಾರನೆ ? ಸಂತೋಷ ಬಾರಣ್ಣ, ಕುಳ್ಳಿರು. ಅಂಬಿಕೆ, ಕುಳ್ಳಿರು. ಎಲ್ಲರೂ ಕ್ಷೇಮವೆ ? ಸಂತೋಷ, ಸಂತೋಷ, ಆನಂದ, ನೋಡು ನಿನ್ನಳಿಯನೈತಂದಿಹನು.

ಆನಂದ.__  ರಾಹುಲ, ಬಾರಣ್ಣ ; ಬಾ ನನ್ನ ನಪ್ಪಿಕೊ. ನೀನಾಗಿ ಬಂದು ನನ್ನೆದೆಯಾಸೆಗಳನೆಲ್ಲ ತುಂಬಿದೆಯ ?

ಅಂಬಾ  __ ಗುರುಗಳ ಕುಮಾರರೇ ? ನನ್ನಾಣೆ ಇದಕೇನು ಸಂದೇಹ ? ನಮ್ಮ ದೇವರ ರೂಪ ಪ್ರತಿಯಾಗಿ ಕಾಣುತಿದೆ. ಗುರುವೆ, ನಾನೀತನನು ಮುಟ್ಟಬಹುದೆ ?

ಬುದ್ಧ.__  ಮುಟ್ಟಬೇಕು, ಅಂಬಾಪಾಲಿ. ಶುದ್ಧ ಮಾನಸರೆಲ್ಲ ಅವನ ಮೆಯ್‌ಮನಗಳನು ಮುಟ್ಟಿ ಅವನನು ಶುದ್ಧಚೇತನನ ಮಾಡಿರಿ.

(ಎಲ್ಲರೂ ಬಂದು ರಾಹುಲನನ್ನು ಮುದ್ದಿಸುವರು. ಕೆಲವರು ಅವನ ಕಾಲನ್ನು ಮುಟ್ಟಿ ನಮಸ್ಕರಿಸುವರು.)
###################
ಸಂಕ್ಷಿಪ್ತ ಗದ್ಯ ಸಾರಾಂಶ

ಬುದ್ಧನು ತನ್ನ ಉಪದೇಶವನ್ನು ಮುಂದುವರೆಸುತ್ತಾನೆ. ನಾನು ಅಲ್ಪನೆಂಬ ಕೀಳರಿಮೆ ಬೇಡ. ಹಿರಿಯನೆಂಬ ಹೆಗ್ಗಳಿಕೆಯೂ ಬೇಡ. ತಾನು ಎನ್ನುವುದು ವಿಶ್ವವೆಂಬ ವಟವೃಕ್ಷದಲ್ಲಿ ಬೆರೆತು ಕರಗಿ ಹೋಗಬೇಕು. ಅದರ ಯಾವುದೋ ಒಂದು ಭಾಗವಾಗಬೇಕು. ನಾನು, ನನ್ನದಿದು ಎಂಬ ಭಾವ ದೂರವಾಗಲಿ. ಈ ಜೀವನವೊಂದು ಕರಟದಂತೆ. ಎಲ್ಲಾ ರಸವನ್ನು ಹೀರಿ ತನ್ನ ಸುತ್ತ ಕೋಟೆ ರಚಿಸಿಕೊಂಡಂತೆ. ತಾಯಿ ವೃಕ್ಷದಿಂದ ಬೇರೆಯಾದ ಸಸಿ ಬೆಳೆದುಬಿಳಲಾಗಿ ತಾನು ಸ್ವತಂತ್ರ ವೃಕ್ಷವಾಗುವಂತೆ ಈ ಬಾಳು. ತಾನು ಎಂಬುದು ಒಂದು ಮಾಯೆ. ಅದನ್ನು ಉಳಿದುದೆಲ್ಲವೂ  ಸಹಾ ಕ್ಷಣಿಕ. ಸತತವೂ ಸೆಳೆಯುವ ಈ ಮಾಯೆಯನ್ನು ಗೆಲ್ಲುವುದೇ ಗುರಿ.ಹಿಂದಿನ ಜನ್ಮಗಳ ಕರ್ಮಫಲದಿಂದ ಇಂದು ನಾನು. ಮುಂದೆ ಏನಿದೆಯೋ ಬಲ್ಲವರಿಲ್ಲ. ಈ ಕ್ಷಣದಲ್ಲಿ ನನ್ನಿಂದ ಜಗತ್ತಿಗೆ ಒಳಿತಾಗಲಿ.  ನಾಲ್ಕಾರು ಜೀವಗಳಿಗೆ ಸೌಖ್ಯ ದೊರೆಯಲಿ. ಎಲ್ಲರಿಗೂ ಶುಭವಾಗಲಿ. ಶಾಂತಿ ದೊರೆಯಲಿ
(ಎರಡು ಕ್ಷಣ ಧ್ಯಾನದಲ್ಲಿ ಮಗ್ನನಾಗುವನು.  ಅವನು ಕಣ್ತೆರೆದ ಮೇಲೆ ಅಂಬಾಪಾಲಿಯು ಅವನನ್ಬು ತನ್ನ ಮನೆಗೆ ಬಂದು ಆತಿಥ್ಯವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸುವಳು. ಆಗಲಿ ಎಂದು ಬುದ್ಧ ಒಪ್ಪುವನು. ಅಲ್ಲಿರುವವರನ್ನೆಲ್ಲ ಆಹ್ವಾನಿಸುವಳು. ಎಲ್ಲರಿಗೂ ಹೂವಿನ ಪ್ರಸಾದ ದೊರೆಯುವುದು. 
ಈಗ ಅಂಬಿಕೆಯು ಬುದ್ಧನನ್ಬು ಮಾತನಾಡಿಸಲು ಸಿದ್ಧಳಾಗುವಳು. ಮಾನಂದನು  ಅವರನ್ನು ಬುದ್ಧನಿಗೆ ಕೋಸಲದ ನಾಡಿನಿಂದ ಬಂದವರೆಂದು ಪರಿಚಯಿಸುವನು. ಕಪಿಲವಸ್ತುವನ್ನು ನೋಡಿರುವಿರಾ ಎನ್ನುವಷ್ಟರಲ್ಲಿ ರಾಹುಲ ಅಣ್ಣಾ ಎಂದು ಬುದ್ಧನನ್ನು ಅಪ್ಪಿಕೊಂಡು ಅಳುವನು.
ಅವನನ್ನು ಭಯಪಡದಿರು ಎಂದು ಸಮಾಧಾನ ಪಡಿಸುವಷ್ಟರಲ್ಲಿ ಅಂಬಿಕೆ ಕಾಣುವಳು. ರಾಹುಲನು ತನ್ನ ಮಗನೆಂದು ಬುದ್ಧನಿಗೆ ತಿಳಿಯುವುದು. ಸಂತೋಷಪಟ್ಟು ಆನಂದನಿಗೆ ಪರಿಚಯಿಸುವನು. ಅಲ್ಲಿದ್ದವರಿಗೆಲ್ಲ ಗುರುಗಳ ಕುಮಾರನನ್ನು ಕಂಡು ತುಂಬಾ ಸಂತೋಷವಾಗುವುದು. ಆನಂದನಿಗೆ ತನ್ನ ಸೋದರಳಿಯನನ್ನು ಕಂಡು ತುಂಬಾ ಸಮಾಧಾನವಾಗುವುದು. ಅಂಬಾಪಾಲಿಯು ಮಗುವನ್ನು ಮುಟ್ಟಬಹುದೆ ಎಂದು ಕೇಳಲು ಬುದ್ಧನು ಅಗತ್ಯವಾಗಿ ಎನ್ನುವನು. ಎಲ್ಲರೂ ಅವನ ಮೈ ಮನಗಳನ್ನು ಮುಟ್ಟಿ ಶುದ್ಧಚೇತನನನ್ನಾಗಿ ಮಾಡಿರಿ ಎನ್ನುವನು.


(ಎಲ್ಲರೂ ಬಂದು ರಾಹುಲನನ್ನು ಮುದ್ದಿಸುವರು. ಕೆಲವರು ಅವನ ಕಾಲನ್ನು ಮುಟ್ಟಿ ನಮಸ್ಕರಿಸುವರು.)


ರಾಹುಲ.__  ನನಗೇನು ನಮಿಸುವಿರಿ ? ಬಾಲಕಗೆ; ಹಿರಿಯರು ? ಸಾಕು ಬಿಡಿರಿ ; ಬಿಡಿರಿ. (ಎಂದು ಬಿಡಿಸಿಕೊಂಡು)

ರಾಹುಲ__.  ಅಣ್ಣ ಗುರುದೇವರಲಿ ನಾನೊಂದು ಮಾತ ಬೇಡಲು ಬಂದೆ.
ಆನಂದ__.  ಏನದು ?

ರಾಹು__   ತಾತ ಕಾದಿಹರು. ನಮ್ಮಮ್ಮಾಜಿ ಆಳುತಿಹರು. ಅದರಿಂದ ನೀವು ಊರಿಗೆ ಬಂದು ತಾತ ಅಮ್ಮಾಜಿ ಇವರ ಸಂತೈಸಬೇಕು. ಇದನು ನಿಮಗೆ ಹೇಳುವ ಎಂದೆ ನಾವೀಗ ಬಂದಿಹುದು.

ಬುದ್ಧ.__  ಸರಿಯಾದ ಮಾತನಾಡಿದೆ ಮಗು ; ದಿಟ ನುಡಿದೆ. ನಿಮ್ಮ ಊರಿಗೆ ಇನಿತರೊಳೆ ಬರುವ ಎಂದೇ ಯೋಚಿಸುತ್ತಲಿದ್ದೆವು. ಈಗ ನೀ ಕರೆಯುತಿಹೆ. ಬರುವೆವಣ್ಣ.

ರಾಹು__   ಭಾಪುರೇ, ಅಂಬಿಕೆ, ಕೇಳು : ಅಣ್ಣ ಊರಿಗೆ ಬರಲು ಒಪ್ಪಿದರು. ಅಣ್ಣಾ ನಾಳೆ ಹೊರಡೋಣವೇ ಅಣ್ಣಾ ?

ಬುದ್ದ__.  ನಾಳೆ ? ನಾಳೆ ಅಂಬಾಪಾಲಿ ಔತಣಕೆ ಕರೆದಿಹರು; ಬರುವೆವೆಂದಿಹೆವು ನಾವು.

ಅಂಬಾಪಾಲಿ __  ಗುರುಗಳಡಿಯಲಿ
ನಾನು ಬಿನ್ನಪ ಮಾಡಬಹುದೆನಲು ಹೇಳುವೆನು.
ಬುದ್ಧ__.  ಹೇಳು ತಾಯಿ.

ಅಂಬಾ __  ತಮ್ಮನು ನೋಡುವಾಸೆಯಲಿ ತಮ್ಮ ಪಿತೃದೇವರೂ ರಾಣಿಯವರೂ ಅಲ್ಲಿ ಕಾದಿರುವ ವೇಳೆಯಲಿ ನನ್ನ ಔತಣಕಾಗಿ ಗುರುಗಳಿಲ್ಲಿರಬೇಕು ಎಂದು ನಾನೆಳಸುವೆನೆ ? ನಾಳೆಯೇ ಕಪಿಲವಸ್ತುವಿನ ಕಡೆ ತೆರಳುವುದು ಮನಕೆ ಬರುವೊಡೆ ಅದಕೆ ನನ್ನ ಒಪ್ಪಿಗೆಯುಂಟು.

ಬುದ್ದ__.  ತಾಯಿ, ಅಂಬಾಪಾಲಿ, ನಿನ್ನ ಯೋಚನೆ ಒಳಿತು ; ಬಲ್ಲೆವು. ಆದರೆಮಗಿಂತ ಆತುರದ ನಡೆ ಒಳಿತಲ್ಲ. ನಾಳೆ ಭಿಕ್ಷೆಯ ನೀನು ನೀಡುವೊಡೆ ನಾವು ಕೊಳಬೇಕು. ಆಮೇಲೆ ಮುಂದಿನ ಪಯಣ.

ಅಂಬಾ__   ಗುರುದೇವರಿಚ್ಛೆಯೇ ನನ್ನಿಚ್ಛೆ. ನಾಳಿನಲಿ ನನ್ನ ಆತಿಥ್ಯವನು ಸ್ವೀಕರಿಸೆ ಸಂತಸ.

ಬುದ್ಧ__.  ಸರಿ, ನಾವು ನಾಡಿದ್ದು ಜನ್ಮಭೂಮಿಯ ಕುರಿತು ತೆರಳುವೆವು.

అంಬಾ__.  ಗುರುದೇವ ನಾನು ನಿಮ್ಮೊಡನೆ ಬರಲು ಅಪ್ಪಣೆಯಾಗಬೇಕು.

ಬುದ್ದ__.  ಅದಕೇನಡ್ಡಿ ?

అంಬಾ __  ಗುರುದೇವರೆಳೆತನದಿ ಬೆಳೆದ ಅರಮನೆ ಊರ ನೋಡಲೆನಗಾಸೆ.

ಬುದ್ದ__.  ಬಹು ಸೊಗಸಾದ ಊರು ಅದು; ಸೊಗಸಾದ ಅರಮನೆ ; ಸೊಗಸಾದ ಉದ್ಯಾನ. ಗೋಮತಿಯ ತಿಳಿನೀರ ಹೊಳೆ ಅಂಚಿನಂತೆಸೆವ ವರ್ಣವರ್ಣದ ಚೆಲುವಿನಾರಾಮಗಳ ಮಧ್ಯೆ ಮುಗಿಲ ಮುಟ್ಟುವ ತೆರದೆ ಬೆಳೆದಿರುವ ಸೌಧಗಳ ವೃಂದವಾ ಕಪಿಲವಸ್ತು.

ಅಂಬಾ __  ನೀವು ಬಾಲ್ಯದಲ್ಲಿ ಬಹು ಸುಖದ ಮಧ್ಯೆ ಬೆಳೆದಿರಬೇಕು.

ಬುದ್ಧ__.  ಅಹುದು.
ಬಹು ಸುಖದ ಮಧ್ಯೆ ಬೆಳೆದೆನು. ನಾನು ದಿನ ಕಳೆದು ಜನಿಸಿದೊರ್ವನೆ ಪುತ್ರನೆಂದು ತಾಯಿ, ತಂದೆ, ವಾತ್ಸಲ್ಯ ವಿಭ್ರಾಂತಿಯಿಂದೆನ್ನ ಸಲಹಿದರು. ಸತತವೂ ಕೊಡೆಹಿಡಿದು ನಿಲುವ ಸೇವಕರೆನಿತು; ಆಟದಲಿ ಜೊತೆಯಾಗಿ ನೆರೆವ ಬಾಲಕರೆನಿತು ; ಪಾಠದಲಿ ನೇಹದಲಿ ಕಲಿಪ ಗುರುವರರೆನಿತು ; ನಮ್ಮ ಜಾಬಾಲಿಗಳನೀಗಳೂ ನೆನೆಯುವೆನು.- ಉಪವನದಿ ನಾವು ನಡೆಯುವ ದಾರಿಗಳ ಬದಿಗೆ ಕೆಂದಾವರೆಯ ಸರಸಿಯಲ್ಲಿ, ಬಿಳಿದಾವರೆಯ ಸರಸಿಯಿನ್ನೊಂದಲ್ಲಿ ; ಇಲ್ಲಿ ಮಲ್ಲಿಗೆ, ಅಲ್ಲಿ ಜಾಜಿ ಸೇವಂತಿಗೆ ಸಂಪಿಗೆ : ಒಂದು ಕಡೆ ಮರದ ಸಾಲಿನ ನಡುವೆ ಮೂಡಲನು ನೋಡುತಿರೆ ನೇಸರುದಯಿಸಿ ಬರುವ ಉತ್ಸವದ ಚೆಲುನೋಟ ಇನ್ನೊಂದು ಕಡೆ ಅಂತೆ ಮರದ ಸಾಲಿನ ನಡುವೆ ಅವನಸ್ತಮಾನದುಬ್ಬಟೆ ; ಇರುಳು ಸುಳಿದು ಬರೆ ಚಂದ್ರನನು ಒಂದೊಂದು ಗಳಿಗೆ ತಲೆಯಲ್ಲಿ ಧರಿಸಿ ತಂಗಿಯರು ತೊಡಲೆಂದು ಕೊಡುವುವೋ ಎಂಬಂತೆ ಸಾಲಿನಲ್ಲಿ ನಿಂತಿರುವ ತರುರಾಜಿ. ಸೌಂದರ್ಯ ಸೊಕ್ಕಿ ಹರಿಯಿತು ನನ್ನ ಸುತ್ತಲೂ ಎಳೆತನದಿ ಸಂಗೀತ ಸುಖದೂಟ ಸವಿಮಾತು ನರುಗಂಪು ; ದೇಹ ನೋವನು ಕಾಣದಂತೆ ಬಳಸಿದ ಪ್ರೇಮ ; ಜನರಿಂತೆ ಸತ್ಯವಂತರು ಪರಾಕ್ರಮಿಗಳು, ಧೀರರು ಉದಾರಿಗಳು ಗುಣಪಕ್ಷಪಾತಿಗಳು, ಚೆಲುವ ನಾಡಿನಲಿ ಬೆಳೆದೆನು ನಾನು ಬಾಲ್ಯದಲಿ ; ಚೆಲುವಿನಟ್ಟಿಯ ತೆರೆಯ ತೊಟ್ಟಿಲಲಿ ತೂಗಿದೆನು.

ಅಂಬಾ__   ಆ ಚೆಲುವಿನಂಬುಧಿಯ ತೂಗುಮಂಚವ ಬಿಟ್ಟು ನನ್ನಂಥ ದೀನ ಪತಿತರನು ರಕ್ಷಿಸಲೆಂದು ಈ ಕಷ್ಟಜೀವನಕೆ ಮನವ ಬಾಗಿಸಿದಿರೇ ಗುರುದೇವ ಕರುಣಾಳು !

ಬುದ್ದ. __ ಈಗ ನಾನಿಹ ತಾಣ ಆ ಚೆಲುವಿನಬ್ಧಿಯನು ಒಳಗೊಂಡ ಅರ್ಣವ. ಅಲ್ಲಿ ಒಂದೆಡೆ ಹಿಡಿದು ಸೇರಿಸಿದ ಚೆಲುವನೇ ಇಲ್ಲಿ ಎಲ್ಲೆಡೆಯಲೂ ಹರಡಿಹುದ ಕಾಣುವೆನು. ಅಲ್ಲಿ ಯಾವುದು ಕೃತಕವಾಗಿ ಕಣ್ಣೆಸೆದುದೋ ಅದೆ ಸಹಜ ಭಾವದಲಿ ಕಣ್ಣ ಕೊಳುತಿಹುದಿಲ್ಲಿ. ಅಲ್ಲಿದ್ದ ಸೌಭಾಗ್ಯವೆಲ್ಲ ಇಲ್ಲಿಯು ಇಹುದು
ಅಲ್ಲಿ ಮಂಟಪ : ಇಲ್ಲಿ ನ್ಯಗೋಧದಾರಾಮ. ಅಲ್ಲಿ ಸೌಧ ; ಇಲ್ಲಿ ಈ ವಿಯತ್ಪ್ರಾಸಾದ. ಅಲ್ಲಿ ಉಪವನ ; ಇಲ್ಲಿ ಕಾನನ. ಯಾವುದೂ ಅಲ್ಲಿಹುದು ಇಲ್ಲಿ ಇಲ್ಲದೆ ಇಲ್ಲ ; ಇಲ್ಲಿಹುದು ಹಲಕೆಲವು ಅಲ್ಲಿಲ್ಲ. ನೋಡಬಲ್ಲುದೆ ಮನಸು   ಸೃಷ್ಟಿಯಲಿ ಎಲ್ಲೆಡೆಯು ಜೀವಗಳ ಯಾವುದೇ ಒಂದೆ ಸೌಂದರ್ಯಪರ್ಯಂಕ ತೂಗುತಲಿಹುದು.
#####################

ಸಂಕ್ಷಿಪ್ತ ಗದ್ಯ ರೂಪ


ಎಲ್ಲರೂ ರಾಹುಲನನ್ನು ಮುದ್ದಿಸುವರು. ನಮಸ್ಕರಿಸುವರು. ತನಗೇಕೆ ನಮಸ್ಕರಿಸುವಿರಿ ಎಂದು ಸಂಕೋಚ ಪಡುವನು. ತನ್ನ ತಾತ ಮತ್ತು ತಾಯಿ ಕಾಯುತ್ತುರುವರೆಙದೂ ಬುದ್ಧನು ಊರಿಗೆ ಬರಬೇಕೆಂದೂ ಕೇಳಿಕೊಳ್ಳುವನು. ಅದಕ್ಕೆ ಬುದ್ಧನು ಆಗಲಿ ಎನ್ನುವನು. ನಾಳೆಯೇ ಹೋಗೋಣ ಎನ್ನಲು ಅಂಬಾಪಾಲಿಯು ಕರೆದಿರುವುದರಿಂದ ಅದನ್ನು ಮುಗಿಸಿ ಹೊರಡೋಣ ಎಂದಾಗ ಅಂಬಾಪಾಲಿಯು ತನ್ನ ಸಲುವಾಗಿ ನಿಲ್ಲುವುದು ಬೇಡ. ಅಲ್ಲಿ ಕಾಯುತ್ತಿರುವ ತಂದೆ ಮತ್ತು ಹೆಂಡತಿಯನ್ಬು ನೋಡುವುದು ಆಗಲಿ ಎನ್ನುವಳು.ಅದಕ್ಕೆ ಬುದ್ಧನು ಒಪ್ಪುವುದಿಲ್ಲ. ನಾಳಿದ್ದು ಕಪಿಲವಸ್ತುವಿಗೆ ಹೋಗೋಣ ಎನ್ನುವನು. ರಾಹುಲನಿಗೆ ತುಂಬಾ ಸಂತೋಷ. ಅಂಬಾಪಾಲಿಯೂ ಅವರೊಡನೆ ತೆರಳಲು ಅಪ್ಪಣೆ ಕೇಳುವಳು. ಬುದ್ಧ ಸಮ್ಮತಿಸುವನು.

ಬುದ್ಧ ತನ್ನ ಹುಟ್ಟೂರು, ಅರಮನೆ, ಉದ್ಯಾನ ಎಲ್ಲವನ್ನೂ ಸ್ಮರಿಸಿಕೊಂಡು ಹೊಗಳುವನು. ತಾನು ಬಾಲ್ಯದಲ್ಲಿ ಬಹಳ ಸುಖವಾಗಿ ಬೆಳೆದ ಬಗ್ಗೆ ಹೇಳುವನು. ಆಟ ಪಾಠಗಳಲ್ಲಿ ಜೊತೆಗಿದ್ದವರು, ಸೇವಕರು, ಎಲ್ಲರನ್ನೂ ನೆನಪಿಸುವನು.ಅವನ ಕಣ್ಣ ಮುಂದೆ ಅರಮನೆಯ ಸೊಗಸು, ಉದ್ಯಾನದಲ್ಲಿ ಅರಳಿರುತ್ತಿದ್ದ ಹೂಗಳು, ಫಲ ತುಂಬಿದ ವೃಕ್ಷಗಳು, ಕೊಡೆ ಹಿಡಿಯುತ್ತಿದ್ದವರು, ಪ್ರಾಣಿ ಪಕ್ಷಿಗಳು, ಪ್ರಕೃತಿಯ ಸೌಂದರ್ಯ ಎಲ್ಲವೂ ಮೂಡುತ್ತಿದೆ. ಅಲ್ಲಿರುವವರು ಆಸಕ್ತಿಯಿಂದ ಎಲ್ಲವನ್ಬೂ ಆಲಿಸುತ್ತಾರೆ.
ಅಂಬಾಪಾಲಿಯು ಅಂತಹ ಸುಖವನ್ನು ತೊರೆದು ತಮ್ಮನ್ನೆಲ್ಲ ಉದ್ಧರಿಸಲು ಬಂದ ಬುದ್ಧ ಕರುಣಾಳು ಎನ್ನುವಳು.

ಮುಂದೆ ಬುದ್ಧ ಹಿಂದಿನ ಮತ್ತು ಈಗಿನ ಪ್ರಕೃತಿ, ಉದ್ಯಾವ, ಅರಮನೆ, ಜೀವನದ ಅರಿವು ಮತ್ತು ಗುರಿ ಎಲ್ಲವನ್ನೂ ತುಲನೆ ಮಾಡುತ್ತ ಎರಡಕ್ಕೂ ಬಾಹ್ಯದಲ್ಲಿ ಅಷ್ಟೇ ಅಂತರ. ಅಂತರಂಗದಲ್ಲಲ್ಲ ಎನ್ನುವನು. ಕೃತಕವಾಗಿ ಬೆಳೆಸಿದ ಉದ್ಯಾನ ಮತ್ತು ಸಹಜವಾಗಿ ಬೆಳೆದಿರುವ ಕಾನನ ತನಗೆ ಎರಡೂ ಒಂದೇ ಎನ್ನುವನು. ಅಲ್ಲಿ ಮಂಟಪವಾದರೆ ಇಲ್ಲಿ ಮರದ ನೆರಳು. ಅಲ್ಲಿ ಸೌಧವಿದ್ದರೆ ಇಲ್ಲಿ ವ್ಯಗ್ರೋಧವೃಕ್ಷ. ಅಲ್ಲಿರುವುದು ಇಲ್ಲಿರುವುದು ಎಲ್ಲವೂ ಒಂದೇ. ರೂಪ ಬೇರೆ. ಅರಿತರೆ ಬೇಧವಿಲ್ಲ. ಸೃಷ್ಟಿಯಲ್ಲಿ ಎಲ್ಲ ಜೀವಿಗಳು ಯಾವುದೋ ಸೌಂದರ್ಯದ ಪಲ್ಲಂಕದಲ್ಲಿ ತೂಗುತ್ತಿರುವವು. ಹೀಗೆ ಬುದ್ಧ ಸಹಜತೆ ಮತ್ತು ಕೃತಕತೆಗಳನ್ನು ಸಮನ್ವಯಗೊಳಿಸಿ ಎಲ್ಲವನ್ನೂ ಸಮ ಭಾವದಿಂದ ಸ್ವೀಕರಿಸುವ ಉದಾತ್ತತೆಯನ್ನು ತೋರಿಸಿದ್ದಾನೆ.


(ಲಿಚ್ಛವಿಯ ಧರ್ಮಮಲ್ಲ ದಾನಮಲ್ಲರು ಪ್ರವೇಶಿಸುವರು )

ಧರ್ಮ.__  ಗುರುದೇವ ವಂದಿಪೆವು.
ದಾನ. __ ವಂದನೆ.

ಬುದ್ಧ__.  ಶುಭಮಸ್ತು, ಬನ್ನಿ : ಲಿಚ್ಛವಿಯಿಂದ ಎಂದು ಬಂದಿರಿ ?

ಧರ್ಮ__.  ಇಂದು. ನಮ್ಮ ಪಿತೃದೇವರೈತಂದಿಹರು.
ಬುದ್ಧ__.  ಸಂತೋಷ. ಸೌಖ್ಯವಾಗಿರುವರೇ, ನೀವೆಲ್ಲ ಸೌಖ್ಯವೇ ?

ಧರ್ಮ__.  ಗುರುಗಳಾಶೀರ್ವಾದದಿಂದ ಎಲ್ಲರು ಸೌಖ್ಯ. ನಾಳೆ ಇಲ್ಲೊಂದು ಉತ್ಸವವನೇರ್ಪಡಿಸಿಹೆವು: ಅದಕೆ ಗುರುದೇವರೈತಂದು ಆತಿಥ್ಯವನು ಸ್ವೀಕರಿಸಬೇಕೆಂದು ಬೇಡುವೆವು.

ಬುದ್ಧ __  ನಾಳೆ  ನಾವು ಅಂಬಾಪಾಲಿಯೌತಣಕೆ ಒಪ್ಪಿಹೆವು. ಬೇರೆಲ್ಲಿಯೂ ಬರುವುದಾಗದು.

ಧರ್ಮ__.  ತಾವು  ಬಿಜಮಾಡಬೇಕೆಂದು ರಾಜರಿಗೆ ಬಹು ಆಸೆ. ನಾವು ಕರೆತರುವೆನೆಂದೇ ಭರದಿ ಬಂದೆವು. ಈಗ ಅಂಬಾಪಾಲಿಯೌತಣದ ಸಲುವಾಗಿ ನಮ್ಮ ಕೈಬಿಡಬಾರದೆಂದು ಸಂಪ್ರಾರ್ಥಿಪೆವು.

ಆನಂದ__    ಧರ್ಮಮಲ್ಲರೆ, ನಿಮಗೆ ತಿಳಿಯದಿಹ ಮಾತೆ ಇದು ? ಈಗ ನಿಮ್ಮ ಔತಣಕೆ ಬರಲಾಗಿ ನಿಮಗೆಂದು ತಾಯಿ ಅಂಬಾಪಾಲಿಯನು ಬಿಟ್ಟತೆರನಹುದು. ನೀವಿದನಪೇಕ್ಷಿಸುವರಲ್ಲ.

ಧರ್ಮ__.  ಗುರುದೇವರು ರಾಜರಿಗೆ ಯಾವ ಉತ್ತರ ಹೇಳಿಕಳುಹುವರು ?

ಬುದ್ಧ__.   ನಾಳೆ ಅಂಬಾಪಾಲಿಯೌತಣಕೆ ರಾಜರೂ ದಯಮಾಡಬೇಕೆಂದು ಹೇಳಿ.

ಅಂಬಾ __  ನಾನೇ ಬಂದು  ಔತಣವ ಹೇಳುವೆನು : ನಾಗರಸ್ತ್ರೀ ಬಂದು ರಾಜರನು ಕರೆವುದೇ ಎಂದು ಶಂಕಿಸಬೇಡಿ. ರಾಜರೈಶ್ವರ್ಯದಂತೆನಗೆ ಐಶ್ವರ್ಯವಿದೆ ; ಗುರುದೇವರಿಂದ ಅದ ಪಾವನತೆಯೊಂದಿದೆ.

(ಮಲ್ಲರಾಜನು ಪ್ರವೇಶಿಸುವನು.)

ಮಲ್ಲ.__  ಗುರುಗಳಿಗೆ ವಂದನೆ.

ಬುದ್ಧ.__  ಶುಭಮಸ್ತು, ದಯಮಾಡಿ.

ಮಲ್ಲ.__  ಬಾಲಕರು ಸರಿಯಾಗಿ ಅರಿಕೆ ಮಾಡುವರೋ  ಮಾಡರೋ ಎಂದು ನಾನೇ ಬಂದೆ.
(ಮಗನು ತಂದೆಗೆ ಎಲ್ಲವನ್ನೂ ಹೇಳುವನು;)
ಸಂತೋಷ__. ನಾಳೆ ಅಂಬಾಪಾಲಿಯೌತಣಕೆ ಬಹೆವಾವು ; ನಾಡಿದ್ದು ನಮ್ಮ ಗೃಹವನು ಉದ್ಧರಿಸಬೇಕು;

ಬುದ್ಧ.__  ನಾಳಿದ್ದು ನಾವು ಉತ್ತರದ ರಾಷ್ಟ್ರದ ಕುರಿತು ಪಯಣ ಮಾಡುವೆವು. ನಾಳೆಯ ದಿವಸ ನೀವೆಲ್ಲ ನಮ್ಮ ಶಿಷ್ಯಳ ಗೃಹಕೆ ದಯೆಗಯ್ವುದನು ಕೇಳಿ ಆನಂದವಾಗಿಹುದು. ಕೃಪೆಯಿಂದ ಬರಬೇಕು.

ಮಲ್ಲ.__  ನಿಮ್ಮ ಸಾನಿಧ್ಯದಲ್ಲಿ ದೊರೆವ ಅನ್ನವೆ ಅಮೃತ. ಎಲ್ಲಿ ಅದು ದೊರೆವುದೊ ಅದುವೆ ದೇವಾಲಯ. ನಿಮ್ಮ ಪಾದವ ಮುಟ್ಟಿ ಗುರುವೆಂದ ಜೀಪನಿಗೆ ನಾಗರ ಹೀನಳಲ್ಲ: ರಾಷ್ಟ್ರಾಧಿಪತಿ ಮೇಲಲ್ಲ. ನಾನು ಹಿರಿಯನು ವಿಂಬಹಂಕಾರ  ಅವನಾತ್ಮದಲ್ಲಿ ಮೊಳೆಯಲಾರದು.

ಬುದ್ಧ.__ ತಮ್ಮಂತೆ  ಅರಿತವರು ನಮ್ಮ ಸಂಘದ ಶಿರೋರತ್ನಗಳು, ತಮ್ಮ ನಡೆಯಿಂದುಳಿದ ಜನದ ನಡೆ ತಿದ್ದಲಿ, ಇನ್ನು ಹೊರಡೋಣ.
ಎಲ್ಲರೂ __   ವಂದನೆ, ಮದನೆ.

(ನಮಸ್ಕರಿಸುವರು. ಬುದ್ಧನು ಆಶೀರ್ವದಿಸುವನು. ತೆರೆ ಬೀಳುವುದು )
######################3
ಸಂಕ್ಷಿಪ್ತ ಗದ್ಯ ಸಾರಾಂಶ


ಅದೇ ವೇಳೆಗೆ ಲಿಚ್ಛವಿಯ ಮಲ್ಲರಾಜನ ಮಕ್ಕಳಾದ ಧರ್ಮಮಲ್ಲ ಮತ್ತು ದಾನಮಲ್ಲರು ಬಂದು ನಮಸ್ಕರಿಸುವರು. ಬುದ್ಧನು ಆಶೀರ್ವದಿಸಿ ಕುಶಲ ವಿಚಾರಿಸುವನು. ಅವರು ಬುದ್ಧನನ್ನು ತಮ್ಮ ಅರಮನೆಗೆ ಔತಣಕ್ಕೆ ಆಹ್ವಾನಿಸಲು ಬಂದಿರುವರು.

ಆದರೆ ತಾವೆಲ್ಲರೂ ನಾಳೆ ಅಂಬಾಪಾಲಿಯ ಮನೆಗೆ ಹೋಗುತ್ತಿರುವುದಾಗಿ ಬುದ್ಧನು ಹೇಳಲು ಅವರಿಗೆ ನಿರಾಸೆಯಾಗುವುದು. ತಮ್ಮನ್ಬು ಒಪ್ಪಿಸಿಯೇ ಬರುತ್ತೇವೆಂದು ತಂದೆಯವರಿಗೆ ತಿಳಿಸಿರುವುದಾಗಿ ಹೇಳಿದಾಗ ರಾಜನೂ ಅಂಬಾಪಾಲಿಯ ಮನೆಗೇ ಬರಲಿ ಎಂದು ಬುದ್ಧ ನುಡಿವನು. ನಿಮ್ಮ ಮನೆಗೆ ಬಂದರೆ ತಾಯಿ ಅಂಬಾಪಾಲಿಯನು ಬಿಟ್ಟಂತಾಗುವುದು. ಅದು ಹಾಗಾಗುವುದು ಬೇಡವೆಂದು ಹೇಳುವನು. ಅಂಬಾಪಾಲಿಯೂ ಮತ್ತೊಮ್ಮೆ ಆಹ್ವಾನಿಸುವಳು. ಗುರುದೇವನ ಕೃಪೆಯಿಂದ ತನ್ನಲ್ಲಿಯೂ ರಾಜನಂತೆ ಐಶ್ವರ್ಯವಿಹುದೆನ್ನುವಳು. ಅಷ್ಟರಲ್ಲಿ ಮಲ್ಲರಾಜನೇ ಆಗಮಿಸುವನು.

ತನ್ನ ಮಕ್ಕಳು ಸರಿಯಾಗಿ ಕರೆಯುವರೋ ಇಲ್ಲವೋ ಎಂದು ನಾನೇ ಬಂದೆನೆನಲು ಧರ್ಮಮಲ್ಲನು ತಂದೆಗೆ ಎಲ್ಲ ವಿಚಾರ ಹೇಳುವನು. ಅದಕ್ಕೆ ರಾಜನು ಸಂತೋಷ. ಹಾಗೇ ಆಗಲಿ. ನಾಳೆ ಅಂಬಾಪಾಲಿಯ ಔತಣಕ್ಕೆ ನಾವು ಬರುವೆವು. ನಾಡಿದ್ದು ನಮ್ಮ ಮನೆಗೆ ಬಂದು ಉದ್ಧರಿಸಬೇಕೆಂದು ಕೇಳುವನು. 

ಬುದ್ಧನು ನಾಳಿದ್ದು ಉತ್ತರದ ರಾಷ್ಟ್ರದ ಕಡೆಗೆ ಪಯಣ ಹೊರಟಿರುವುದಾಗಿ ಹೇಳಿ ತನ್ನ ಶಿಷ್ಯೆಯ ಗೃಹಕ್ಕೆ ಎಲ್ಲರೂ ಬರುತ್ತಿರುವುದು ತನಗೆ ಸಂತಸ ಎನ್ನುವನು. ಅದಕ್ಕೆ ರಾಜನು ಗುರುದೇವರು ಇರುವಲ್ಲಿ ದೊರೆಯುವ ಅನ್ನವು ಅಮೃತದಂತೆ ಪ್ರಸಾದವು.  ಗುರುವಿನ ಅನುಗ್ರಹ ದೊರೆತ ನಾಗರಸ್ತ್ರೀ ಪವಿತ್ರಳು. ರಾಷ್ಟ್ರಾಧಿಕಾರಿ ಮೇಲಲ್ಲ. ಎಲ್ಲರೂ ಒಂದೇ ಎನ್ನಲು ಬುದ್ಧನಿಗೆ ಪರಮ ಸಂತೋಷವಾಗುವುದು. ಇಂತಹಾ ಅರಿವು ಇರುವವರು ನಮ್ಮ ಜೊತೆಯಲ್ಲಿ ಇರುವುದು ನಮ್ಮ ಪುಣ್ಯ ಎನ್ನುವನು. ಎಲ್ಲರೂ ನಮಿಸುವರು.


( ಕಪಿಲವಸ್ತುವಿನ ಮುಂದೆ ಒಂದು ತೋಪಿನ ಬಳಿ ದಾರಿಯಲ್ಲಿ ಇಬ್ಬರು ಬ್ರಾಹ್ಮಣ ತರುಣರು ಬರುವರು )

ಕೌಂಡಿನ್ಯ.__  ಈ ಮತವನೇನೆಂದು ಕರೆಯುವುದು?
ಕೌಶಿಕ. __ ಏನೆಂದು ಕರೆಯಬೇಕೆಂದು ನಿನ್ನಭಿಲಾಷೆ??
ಕೌಂಡಿನ್ಯ.__  ನನಗೆ ಇದು ನಾಸ್ತಿಕ್ಯವೆಂದು ಕಾಣುವುದು, ಮನುಜನ ಕರಣ ಕಾಂಬ ತತ್ತ್ವಗಳಿಹವು  ಉಳಿದುದೊಂದೂ ಇಲ್ಲ, ಎಂಬ ಮತ ನಾಸ್ತಿಕವೆನಲು ಸಂಶಯವೇನು ?
 ಕೌಶಿಕ__.  ಇಷ್ಟೆಲ್ಲದಿನ್ನಾವುದಿದೆಯೆಂದು ನೀನೆಂಬೆ ?
ಕೌಂಡಿನ್ಯ.__   ನಾನೆಂದೆ! ನಾನೇನನೆಂಬೆ ? ನೀನೇನೆಂಬೆ ? ನೀನು ಕೂಡ ನಾಸ್ತಿಕನ ತೆರದೆ ನುಡಿಯುತಿಹೆ. 
ಕೌಶಿಕ. __ ಆ ಮಾತನಾಮೇಲೆ ಚರ್ಚಿಸುವ, ಕರಣಗಳು ಕಾಣದಿಹ ತತ್ತ್ವ ಇವೆ ಎಂಬೆ. ಅವು ಯಾವವು ?
 ಕೌಂಡಿನ್ಯ__.  ದೇವರು ? ಪರಲೋಕ ?

ಕೌಶಿಕ.__  ಹೊಸ ಮತದ ಗುರುಗಳು ದೇವರಿಲ್ಲ ಎಂದು ಹೇಳಿದರೆ ? ಇಹನೆಂದು ಬಲ್ಲವರು ಹೇಳಿರಿ, ಉಳಿದವರಿಗಾ ಮಾತು ಬೇಡ, ಎಂದರು. ನಿಮ್ಮ ಯೋಗ್ಯತೆಗೆ ನಿಲುಕದಿಹ ತತ್ತ್ವಗಳ ಚರ್ಚೆಯಲಿ ಕಾಲವನು ಕಳೆಯದಿರಿ ಸಾಧ್ಯವಾದುದನು ತಿಳಿಯಿರಿ ; ತಿಳಿದ ತತ್ತ್ವವನು ಆಚರಿಸಿ ಎನ್ನುವರು. ಇದರಲ್ಲಿ ತಪ್ಪೇನು ? ಪರಲೋಕವೇ ? ಒಳಿತು, ಪರಲೋಕವಿರಬಹುದು ; ನೋಡಿದವರದನು ವರ್ಣಿಸಲಿ : ಸಾಮಾನ್ಯರು ಇರುವ ಈ ಲೋಕದಲ್ಲಿ ಸರಿಯಾಗಿ ನಡೆಯಿರಿ.  ಅಲ್ಲಿ ಏನೇನೊ ಇದೆ, ಏನನೋ ಮಾಡುವೆವು ಎಂಬ ಬಯಲ ಭ್ರಾಂತಿಯಲಿ ಇಲ್ಲಿ ಎದುರೊಳಿದ ವಸ್ತುಗಳ ಮರೆತು ಕರ್ತವ್ಯಗಳ ಕಡೆಗಣಿಸಿ ಮರುಳಾಗಬೇಡಿರಿ, ಎನ್ನುವರು. ಇದು ತಪ್ಪೆ ? 

ಕೌಂಡಿನ್ಯ.__  ಅದರಲೂ ಏನನೋ ಹೇಳಿದನೆ!  ನಾನೆಂದು ಭಾವಿಸುವ ನಾವು ನೀವೆಲ್ಲ ಭಾವದ ಧಾರೆ; ಕಾಲವೆಂಬುದು ಇರವ ಕಣವ ಪೋಣಿಸಿದೊಂದು ಹಾರ ; ನೂರಾರು ಹನಿ ಒಂದರೊಡನೊಂದಿರಲು ಎಲ್ಲವೂ ಎಳೆಯಾಗಿ ಕಾಂಬಂತೆ, ಮುತ್ತುಗಳು ಸರದಿ ಕೋದಿರಲೊಂದು ಮೌಕ್ತಿಕದ ನಾಳವೂ, ಕೊಳ್ಳಿ ಸುತ್ತುತಿರೆ ಬೆಂಕಿಯದೊಂದು ಚಕ್ರವೂ ಕಾಂಬಂತೆ, ಬಿಡಿಬಿಡಿಯ ಅನುಭವದ ಕಣ ಹಲವು ಒಂದನೊಂದನುಸರಿಸಿ ನಾನು ನೀನಾಗಿಹುದು; ನಾನೆಂಬುದೊಂದಿಲ್ಲ ಕಾಲವೇ ನಿಜವಲ್ಲ; ಎಂದು ಹೇಳಿದನಲ್ತೆ.
ಕೌಶಿಕ. __ ನಾಸ್ತಿಕ್ಯವೋ ಇದು ?
ಕೌಂಡಿನ್ಯ.__  ನನಗೆ ಇದು ನಾಸ್ತಿಕ್ಯ.

ಕೌಶಿಕ.__  ಕಂಡುದನು ಇದೆ ಎನಲು, ಕಾಣದುದು ಇಲ್ಲವೆಂಬನು ಇವನು ನಾಸ್ತಿಕನು ಎಂದು ಜರೆಯುವೆ. ಕಂಡುದನು ತೀರ ನೆಚ್ಚದಿರು, ಆರಯಿಸೆ ಸತ್ಯ ತಿಳಿಯುವುದು ಎನೆ, ಕಂಡುದನು ಇಲ್ಲೆಂದು ಹೇಳುವನು, ಎಚ್ಚರಿಕೆ, ಈ ಪ್ರಾಣಿ ನಾಸ್ತಿಕನು, ಎಂಬೆ. ಬ್ರಹ್ಮನೆ ಬಂದರೂ ನೀನು ಮೆಚ್ಚುವಂತಿಲ್ಲ.

ಕೌಂಡಿನ್ಯ. __ ಈತನಿಗೆ ಜಾಬಾಲಿಗಳು ಬಾಲ್ಯದಲ್ಲಿ ಪಾಠ ಹೇಳಿದರಂತೆ ಅಹುದೇನು ?

ಕೌಶಿಕ. __ ಅಹುದೆಂದು ಕೇಳಿದೆನು. ಇವನ ಉಪದೇಶದಲಿ ಅವರ ಮಾತಿನ ಛಾಯೆ ಕಾಣುವುದು.

ಕೌಂಡಿನ್ಯ__ ಇನ್ನೇನು ? ಅದರಿಂದಲೇ ಇವನ ವಾದ ನಾಸ್ತಿಕ ವಾದ ಎಂದು ತಿಳಿಯದೆ ?

ಕೌಶಿಕ.__  ಅಣ್ಣ, ನಿನ್ನಂಥ ಪಂಡಿತರು ಬಾಲವನು ನೋಡಿ ಇಲಿ ಇಂತಿಹುದು ಎಂಬುದನು ಗ್ರಹಿಸುವರು. ನಾನಂತ ಮಾರ್ಜಾಲನಲ್ಲ. ಬಾ ಹೋಗೋಣ. ಹಿರಿಯರನು ತೆಗಳುವರೆ ಕೆಲಕಾಲ ಕಳೆಯಲಿ.

ಕೌಂಡಿನ್ಯ.__  ಸರಿ, ಹೋಗು, ನಿನ್ನ ಮಾತಿಗೆ ಏನು ?
(ಎಂದು ಮುಂದೆ ಹೋಗುವರು. ಒಬ್ಬ ಮುದುಕಿ, ಒಬ್ಬ ಯುವತಿ, ಅವಳ ಸಣ್ಣ ಮಗು ಬರುವರು.)

ಮುದುಕ__.  ಏನು ಮುಖವೇ ಅಮ್ಮ, ಏನು ಆ ಶಾಂತಿ ! ಎಷ್ಟು ಗಂಭೀರ ಆ ಭಾವ ! ಆಡಿದ ಮಾತು ಹಾಲಿನಲಿ ಜೇನು ಸರಿಯನು ಬೆರಸಿದಂತೆ ಸವಿ ! ನಮ್ಮಪ್ಪ ಎಷ್ಟು ತಪವನು ಮಾಡಿ ಈ ತಿಳಿವ ಸಾಧಿಸಿದನೋ ! ರಾಜಕುವರನಾಗಿದ್ದವನು ಎಲ್ಲವನು ತೊರೆದು ಕಾಡಿನಲಿ ದೇಹವ ದುಡಿಸೆ ಜ್ಞಾನ ಬಹುದೇನು ಆಶ್ಚರ್ಯ ?

ಯುವತಿ  __ ಆ ಕಣ್ಣಿನಲಿ ಏನು ಕನಿಕರವಮ್ಮ!  ಎದುರಿನಲಿ ಕುಳಿತಿದ್ದ ಒಂದು ಸಾವಿರ ಜನದಿ ಯಾರನೂ ಬಿಡದಂತೆ ಒಂದು ನೋಟದಲಿ ಸೇರಿಸಿಕೊಂಡು, ನೀವೆಲ್ಲ ನನ್ನವರು ನಾನು ನಿಮ್ಮವನು ಎನ್ನುವ ತೆರದೆ, ಎಲ್ಲರನು ನೋಡಿದರು. ನನಗೆ ಇವರನು ನೋಡಿ ಎಳೆಯತನದಲಿ ಕಂಡ ಮರೆತೊಬ್ಬ ಅಣ್ಣನೋ ಎಂದು ತೋರಿತು. ಬಹಳ ಸತ್ಯವಂತರು ಇವರು.

ಮಗು __  ಅಮ್ಮ, ಅಲ್ಲಿಗೆ ಅವರು ಬಂದರಲ್ಲಾ ಆಗ, ನೀನು ನನ್ನನು ಭುಜದ ಮೇಲಿರಿಸಿಕೊಂಡಾಗ ಅವರು ನನ್ನನು ನೋಡಿ ನಕ್ಕರಮ್ಮಾ!

ಯುವತಿ __  ಆಹಾ! ನಿಜವಾಗಿ ?
ಮಗು __  ನಿಜವಾಗಿ. ಅವರಲ್ಲಿ ಬಂದರೇ ಆಗ ನಾನಿದ್ದ ಕಡೆ ನೋಡಿದರು. ನಾನು ಎಲ್ಲರೊಂದಿಗೆ ನಮತ್ಕಾರ ಎಂದೆ. ಅದಕ್ಕೆ ನಕ್ಕರು. ಬಹಳ ಒಳ್ಳೆಯವರಮ್ಮಾ ಅವರು.
( ಮುಂದೆ ಹೋಗುವರು. ಭಾರದ್ವಾಜ, ವಸಿಷ್ಠ, ಗೌತಮ ಬರುವರು )
#######################

ಸಂಕ್ಷಿಪ್ತ ಗದ್ಯ ಸಾರಾಂಶ

ಕೌಂಡಿನ್ಯ ಮತ್ತು ಕೌಶಿಕರೆಂಬ ಇಬ್ಬರು ಬ್ರಾಹ್ಮಣರು ಬುದ್ಧನ ಬಗ್ಗೆ ಮಾತನಾಡುತ್ತ ಬರುತ್ತಿದ್ದಾರೆ. ಕೌಂಡಿನ್ಯನಿಗೆ ಬುದ್ಧನು ನಾಸ್ತಿಕನಿರಬೇಕೆಂಬ ಭಾವನೆ. ಕೌಶಿಕನಿಗೆ ಬುದ್ಧನ ಮಾತುಗಳ ಬಗ್ಗೆ ವಿಶ್ವಾಸವಿದೆ. 

ನಮ್ಮ ಯೋಗ್ಯತೆಗೆ ಮೀರಿದ ವಿಷಯಗಳ ಚರ್ಚೆಯಲ್ಲಿ ಕಾಲ ಕಳೆಯಬೇಡಿ ಎಂದು ಬುದ್ಧ ಹೇಳಿದ್ದಾನೆಯೇ ಹೊರತು ದೇವರಿಲ್ಲವೆಂದಾಗಲೀ, ಸ್ವರ್ಗ ನರಕಗಳ ಬಗೆಯಾಗಲೀ ಹೇಳಿಲ್ಲ. ಕರ್ತವ್ಯಗಳನ್ನು ಕಡೆಗಣಿಸಿ ಮರುಳಾಗದಿರಿ ಎಂದಿದ್ದಾನೆ ಎಂದು ಕೌಶಿಕನು ವಿವರಿಸುವನು. 

ಆದರೂ ಕೌಂಡಿನ್ಯನಿಗೆ ಸ್ವಲ್ಪ ಅನುಮಾನ. ಬುದ್ಧನ ಮಾತುಗಳ ಅಂತರಾರ್ಥ ಅವನಿಗೆ ಸಂಪೂರ್ಣ ತಿಳಿಯದಾಗಿದೆ. ಮುತ್ತುಗಳ ಪೋಣಿಸಿದ ಹಾರದಲ್ಲಿನ ನಾಳದಂತೆ, ಬೆಂಕಿಯ ಚಕ್ರದಂತೆ ಭಾವಗಳ ಧಾರೆಯೆಂದು ಹೇಳಿದ್ದನ್ಬು ಅವನು ನಾಸ್ತಿಕ್ಯವೆಂದೇ ಭಾವಿಸಿದ್ದನು.
ಕಂಡದ್ದನ್ನು ಇದೆ ಎಂದು ಹೇಳುತ್ತಾನಲ್ಲದೆ ಕಾಣದ್ದರ ಬಗ್ಗೆ ಬುದ್ಧ ಚರ್ಚಿಸುವುದಿಲ್ಲ. ಅವನ ಉಪದೇಶಗಳು ಸರಳವಾಗಿವೆಯೆಂದು ಕೌಶಿಕನು ಸಮರ್ಥಿಸಿದಾಗ ಕೌಂಡಿನ್ಯನಿಗೆ ಇನ್ನೂ ಅನುಮಾನ. ಹಿಂದೆ ಜಾಬಾಲಿಗಳು ಬುದ್ಧನ ಗುರುಗಳಾಗಿದ್ದರಿಂದ ಅವರ ನಾಸ್ತಿಕ ಭಾವವೇ ಇವನಲ್ಲೂ ಇದೆಯೆಂದು ಅವನ ವಾದ.  ಹೀಗೇ ವಾದ ಮಾಡುತ್ತ ಅವರು ಮುಂದೆ ಸಾಗುವರು. ಆಗ ಮುದುಕಿಯೊಬ್ಬಳ ಜೊತೆಗೆ ಯುವತಿ ಮತ್ತು ಒಂದು ಮಗು ಬರುವರು.

ಅವರು ಆಗ ತಾನೇ ಬುದ್ಧನನ್ನು ನೋಡಿಕೊಂಡು, ಅವನ ಉಪದೇಶವನ್ನು ಕೇಳಿಕೊಂಡು ಬರುತ್ತಿರುವರು. ಅವರ ಮನಸ್ಸಿಗೆ ಸಂತಸವಾಗಿದೆ. ಮಗುವಿಗೂ ಸಂತಸ. ಅವರೆಷ್ಟು ಒಳ್ಳೆಯವರು ಎನ್ನುತ್ತದೆ. ತನ್ನನ್ನು ನೋಡಿ ನಕ್ಕರೆಂದೂ, ತಾನೂ ಎಲ್ಲರಂತೆ ನಮಸ್ಕಾರ ( ಇಲ್ಲಿ ಮಗು ತನ್ನ ತೊದಲು ನುಡಿಯಲ್ಲಿ ನಮತ್ಕಾರ ಎಂದಿರುವುದು ಹಿತವಾಗಿದೆ ) ಮಾಡಿದೆನೆಂದೂ ಹೇಳುತ್ತದೆ.  ಮುದುಕಿ ಮತ್ತು ಯುವತಿ ಬುದ್ಧನ ಕಣ್ಣುಗಳಲ್ಲಿ ತುಂಬಿದ್ದ ಕರುಣೆಯನ್ನು ಸ್ಮರಿಸಿಕೊಳ್ಳುತ್ರಾರೆ. ಎಲ್ಲರಿಗೂ ನಾನು ನಿಮ್ಮವನು, ನಿಮ್ಮೊಂದಿಗೆ ಇರುತ್ತೇನೆ ಎಂಬ ಭರವಸೆಯ ಮಾತುಗಳ ಬಗ್ಗೆ ಹೇಳಿಕೊಂಡು ಸಂಭ್ರಮಿಸುವರು. ಹೀಗೇ ಮಾತನಾಡುತ್ತ ಮುಂದೆ ಸಾಗುವರು.


(ಮುಂದೆ ಹೋಗುವರು. ಭಾರದ್ವಾಜ, ವಾಸಿಷ್ಟ, ಗೌತಮ ಬರುವರು,)

ಭಾರ.__   ನಮ್ಮೆದುರು ಹುಟ್ಟಿ ನಮ್ಮೆದುರು ಬೆಳೆದವರೆಲ್ಲ ಹಗುರದಲಿ ನಮ್ಮ ಮರುಳೆಂಬ ದಿನ ಬಂದಿತು ; ಆದಿಯರಿಯದ ಸನಾತನ ಧರ್ಮವನು ಕೆದಕಿ ತಪ್ಪುಗಳ ತೋರಿಸುವ ವಿಷಗಳಿಗೆ ಒದಗಿತು; ಅವತಾರ ದೈವವೆನಿಸಿದ ರಾಮಚಂದ್ರನಿಗೆ ಜನ್ಮವಿತ್ತವಳ ನಾಡಾದ ಈ ಕೋಸಲಕೆ ಆರ್ಯಧರ್ಮವ ಹಳಿದು ಅವನು ಮಾನವನೆಂದು ಕೀಳುಮಾತನು ಹೇಳಿ ನಗುವ ಗತಿ ಕವಿದಿತು; ಬಾಲ ಬಾಲಿಶರು ಗುರುಪೀಠಗಳನೇರಿದರು ; ಧರ್ಮದೇವತೆ ತನ್ನ ಸಿಂಹಾಸನವನುಳಿದು ಪಾತಾಳದೆಡೆಗೆ ತೆರಳಿದನು.


ಗೌತಮ__.   ಭಾರದ್ವಾಜ, ಏಕೆ ಕೆರಳುವೆ ಇಂತು? ಅಲ್ಲಿಯೂ ನೀನಿಂತೆ ಕೋಪದಲಿ ನುಡಿದು ವಾದದ  ನೆಲೆಯ ಮರೆಸಿದೆ.  అ ಸತ್ಯ ಸಂಸ್ಥಾಪನೆಗೆ  ಕೋಪ ಒಂದಾಯುಧವೆ?  ತಡೆದುಕೊ ಮೆಲುನುಡಿಯೊಳೆಲ್ಲವೂ ನಡೆಯುವುದು.


ಭಾರದ್ವಾಜ__.   ತಡೆದುಕೊಳ್ಳುವುದು ಕೆಲಜನಕೆ ಬರುವುದು.   ನನಗೆ ನಮ್ಮ ಧರ್ಮವ ತೆಗಳುವರ ಸಿಗಿವೆನೆನಿಸುವುದು.

 

ವಾಸಿಷ್ಠ.__  ಧರ್ಮವನು ತೆಗಳಿದುದು ಏನು? ಸಿದ್ಧಾರ್ಥನಿಗೆ ನಮ್ಮ ಜಾಬಾಲಿಗಳ ಉಪದೇಶ ಹಿರಿದಾಗಿ ಅದನವನು ಮುಂದುವರಿಸಿಹನು. ಇಷ್ಟರಲೇನು? ಕೆಲಕಾಲ ಕಳೆಯೆ ತಿಳಿಯುವನು


ಭಾರದ್ವಾಜ__.   ಆ ಕಾಲದಲಿ ಈಗಲೇ ಪ್ರಾಂತ್ಯವೆನಿಸಿರುವ  ಕೋಸಲ ಭೂಮಿ ಹೊಲೆಗಲಿಸಿ ಹಾಳಾಗಿ ಕೆಸರಿನಲಿ ಕೂರುವುದು. ಕಾಡುಜನರೇ ಇವರ ಶಿಷ್ಯರು, ವೇಶೈಯರು ಇವರಿಗೌತಣವ ನೀಡುವರು; ಅಂತ್ಯಜರೆಲ್ಲ ಈತನಿಗೆ ಉತ್ತಮರು; ಉತ್ತಮರ ಸರಿಜೋಡು, ಇಲ್ಲದೇ ಉತ್ತಮರಿಗಿಂತ ಒಕ್ಕೈ ಮೇಲು. ಎಂತು ಸಹಿಸಲಿ ನಾನು ಈ ಧರ್ಮನಾಶವನು? ಈ ಅಧರ್ಮೋದ್ಧಾರ ಕಾರ್ಯವನು ? ವಾಸಿಷ್ಟ, ನೀನಿಂತು ಸುಮ್ಮನಿರೆ ಧರ್ಮ ಉಳಿಯುವುದೆಂತು ?


ವಾಸಿಷ್ಟ__.  ನಿನ್ನ ಧರ್ಮೋತ್ಸಾಹ ನನ್ನೊಳುದ್ಭವಿಸದಿರೆ ನಾನೆಂತು ಕಾದಲಿ ? ನನಗೆ ತೋರುತಲಿದೆ. ನೀನು ಧರ್ಮದಲ್ಲಿ ಅಪಚಾರವನು ಬಗೆಯುತಿದೆ.


ಭಾರದ್ವಾಜ__.   ನಾನು ? ಧರ್ಮದಲ್ಲಿ ಅಪಚಾರಮಾಡುತಲಿಹೆನೆ ? ಆಡು ಎಂತು?


ವಾಸಿಷ್ಠ.  __    ನೋಡು, ಧರ್ಮವನ್ನು ನಾನು ನೀನು ಉಳಿಸುವೆವು ಎಂಬಲ್ಲಿ ಧರ್ಮ ಎಂಬುದು ಎನಿತು ಕಿರಿದಾಯ್ತು? ನಮ್ಮ  ಸಿದ್ದಾರ್ಥನಂತ್ಯಜರಲ್ಲಿ  ಕನಿಕರವ ತೋರಿದೊಡೆ ಧರ್ಮವಳಿಯುವುದಾದರೆ: ಆ ಧರ್ಮವಾವ ಧರ್ಮ ? ಹೇಳುವುದ ಕೇಳು. ಸಾವಧಾನದಿ ವಿಚಾರಿಸು, ಧರ್ಮವನು ಬೆಳೆಸು. ಅವತಾರ ದೈವವೆಂದಾ ರಾಮಚಂದ್ರನನು ಪತಿತಪಾವನನೆಂದು ನಾವೆ ಹೊಗಳುವೆವಲ್ತೆ ? ಪತಿತರನು ಮುಟ್ಟಿ ಪಾವನಗೈವ ಆತ್ಮಬಲ ನನಗಿಲ್ಲ ನಿನಗಿಲ್ಲವೆನ್ನು, ಬಲ ಇರುವವನು ಅವರನುದ್ಧರಿಸುವೆನು ಎಂದು ಯತ್ನಿಸೆ ಅದನು ಧರ್ಮಕ್ಕೆ ವಿರೋಧವೆನಲೇಕೆ ?


ಭಾರದ್ವಾಜ__.  ಗೌತಮ, ನೀನೇನನೆಂಬೆ ?


ಗೌತಮ__.  ಭಾರದ್ವಾಜ, ತಿಳಿದವರು ಯಾವುದನು ಹೇಳಿದೊಡೆ ಅದನು ಕೇಳುವೆ ನಾನು : ನಮ್ಮವರ ಧರ್ಮ ಇದು. ಧರ್ಮ ಧರ್ಮ ಎಂದು ಯಾವುದನು ಕರೆಯುವೆವೊ ಅದು ಜಗವ ಧರಿಸಿಹುದು. ಒಬ್ಬರಿಬ್ಬರ ಮಾತು ನಡೆಯಿಂದ ಆ ಧರ್ಮ ಕೆಟ್ಟು ಹೋಹುದೆ ? ಎಲ್ಲವನು ಧರಿಸಿ ಹಿಡಿದಿರುವ ಧರ್ಮವಾವುದು ಎಂದು ತಿಳಿಯುವರೆ, ತಾಳ್ಮೆಯಲಿ ಎಲ್ಲರಾಂತರ್ಯದಲಿ ಸುಳಿವ ಧರ್ಮದ ಅಡಿಯ ಸಪ್ಪುಳನು ಕೇಳಬೇಕು. ನಮ್ಮ ಹೃದಯದಲಿ ಸುಳಿವುದೋ ಅದು ಎಂದು ಏಕಾಂತದಲಿ ಕೇಳಿ ಅದನು ಇದರಲಿ ಇದನು ಅದರಲಿ ಸಮನ್ವಯಿಸಿ ಧರ್ಮಪದಗತಿಯನನುಸರಿಸಿ ಊಹಿಸಬೇಕು. ತತ್ತ್ವದ ವಿಚಾರದಾರಂಭದಲೆ ಕೋಪಗೊಳೆ

ಉದ್ವೇಗದಲ್ಲೋಲಕಲ್ಲೋಲದಲಿ ಮನಕೆ ಧರ್ಮದೇವತೆಯ ಮೆಲುನಡೆಯ ಸುಳಿವರಿಯದು. ಧರ್ಮ ಬಹುಮುಖದಿಂದ ನುಡಿಯುವುದು, ಬಹುದೂರ ಹರಿಯುವುದು, ಬಹುವೇಳೆ ಕಣ್ಣಿಂದ ಮರೆಯುವುದು, ಗಾಳಿಯಡಿಗುರುತ ಮರಳಿನ ಮೇಲೆ ಕಾಂಬವೊಲು ಸೂಕ್ಷ್ಮಧರ್ಮದ ಅರಿವು. ತಾಳ್ಮೆಯಿರಬೇಕು ಧರ್ಮವನು ಪೊರೆವೆವೆಂಬರಿಗೆ : ನಮ್ಮನ್ನರಿಗೆ.


(ಎನ್ನುತ್ತ ಮುಂದೆ ಹೋಗುವರು. ಇಬ್ಬರು ಹುಡುಗರು ಬರುವರು.)   

*****************************

ಸಂಕ್ಷಿಪ್ತ ಗದ್ಯ ಸಾರಾಂಶ

ಭಾರದ್ವಾಜರಿಗೆ ಬುದ್ಧನ ಬಗ್ಗೆ ಸ್ವಲ್ಪ ಗೊಂದಲ. ನಮ್ಮ ಕಣ್ಣೆದುರು ಹುಟ್ಟಿ ಬೆಳೆದವನು ಈಗ ಜಗತ್ತಿಗೆ ಬೆಳಕನ್ನು ನೀಡುತ್ತಲಿರುವನು. ಸನಾತನ ಧರ್ಮವನ್ನು ಬದಿಗಿಟ್ಟು ತನ್ನದೇ ಕ್ರಿಯೆಗಳಿಂದ ಧರ್ಮವನ್ನು ಕೆಡಿಸುತ್ತಿರುವನು ಎಂದು ಅವರಿಗೆ ಕೋಪ. ಇಂತಹವರಿಂದ ಧರ್ಮ ಉಳಿದೀತೆ ಎಂದು ಚಿಂತೆ.

ಗೌತಮ ಸಮಾಧಾನ ಹೇಳುವರು. ನಿಧಾನವಾಗಿ ಯೋಚಿಸಿದರೆ ಎಲ್ಲವೂ ಸರಿಹೋಗುವುದು ಎನ್ನುವರು. ಆದರೆ ಭಾರದ್ವಾಜರಿಗೆ ಕೋಪ ಹೆಚ್ಚಾಗಿದೆ. ಅವರ ಪ್ರಕಾರ ಬುದ್ಧನು ಸನಾತನ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾನೆ. ವಾಸಿಷ್ಠರೂ ಕೆಲವು ದಿನಗಳ ಬಳಿಕ ಎಲ್ಲ ತಿಳಿಯಾಗುವುದು ಎಂದು ಸಮಾಧಾನ ಮಾಡಲು ಪ್ರಯತ್ನಿಸುವರು.

ಬುದ್ಧನು ಎಲ್ಲರನ್ನೂ ಸಮಾನವಾಗಿ ಕಾಣುವುದು, ಎಲ್ಲರ ಮನೆಗಳಿಗೂ ಹೋಗುವುದು, ಸಲ್ಲದವರು ಇವನಿಗೆ ಔತಣ ಮಾಡುವುದು ಇದೆಲ್ಲ ಕಂಡು ಭಾರದ್ವಾಜರಿಗೆ ಇಷ್ಟವಾಗುವುದಿಲ್ಲ. ಈ ರೀತಿಯ ಧರ್ಮನಾಶವನ್ನು ಹೇಗೆ ಸಹಿಸುವುದು ಎಂದು ಅವರ ಚಿಂತೆ. ತನ್ನಂತೆ ಈ ಇಬ್ಬರೂ ಯೋಚಿಸಲಿ ಎಂದು ಅವರ ಆಸೆ. ಆದರೆ ಗೌತಮ ತಟಸ್ಥ. ವಾಸಿಷ್ಠರು ಸಹನಶೀಲರು. ಭಾರದ್ವಾಜರ ವಿಚಾರಸರಣಿ ಅವರಿಗೆ ಇಷ್ಟವಾಗುತ್ತಿಲ್ಲ. ಧರ್ಮವನ್ನು ಅಪಚಾರಗೊಳಿಸುತ್ತಿರುವವರು ನೀವೇ ಎಂದು ಭಾರಸ್ವಾಜರಿಗೆ ಹೇಳಿಬಿಡುವನು

ವಾಸಿಷ್ಠರು ಧರ್ಮದ ವ್ಯಾಖ್ಯೆಯನ್ನು ಮಾಡುತ್ತ ಸಿದ್ಧಾರ್ಥನು ಅಂತ್ಯಜರಲ್ಲಿ ಕನಿಕರ ತೋರಿಸುವುದರಲ್ಲಿ ತಪ್ಪಿಲ್ಲ. ರಾಮಚಂದ್ರನನ್ನು ಪತಿತಪಾವನನೆಂದು ಕರೆಯುವುದಿಲ್ಲವೆ? ಬುದ್ಧ ಧರ್ಮವಿರೋಧಿಯಲ್ಲವೆನ್ನುವನು. ಗೌತಮರು ಇದಕ್ಕೆ ಏನೆನ್ನುವರೆಂದು ಭಾರದ್ವಾಜ ಕೇಳುವನು.

ಗೌತಮರು ಅದಕ್ಕೆ ತಿಳಿದವರು ಯಾವುದನ್ನು ಸರಿ ಎನ್ನುವರೋ ಅದನ್ನು ಕೇಳುವವನು ನಾನು ಎನ್ನುವರು. ಬುದ್ಧನು ಅನುಸರಿಸಿರುವ ಧರ್ಮ ಯಾವುದೆಂದು ತಿಳಿಯಬೇಕೆಂದರೆ ತಾಳ್ಮೆಯಿಂದ ಅದರ ಆಂತರ್ಯವನ್ನು ತಿಳಿಯಬೇಕು. ಅದು ಹೃದಯದಲ್ಲಿ ಸುಳಿದು ಅರಿವು ಮೂಡಿಸುತ್ತದೆ. ಧರ್ಮದ ಗತಿಯನ್ನು ಅರಿತು ನಡೆಯಬೇಕು. ಇಂದಲ್ಲ ನಾಳೆ ಅದು ಸಿದ್ಧಿಸುತ್ತದೆ. ಧರ್ಮವು ಬಹುಮುಖದಿಂದ ನುಡಿಯುವುದು ಮತ್ತು ನಡೆಯುವುದು. ಬಹಳ ಬೇಗ ಸುಳಿದು ಮರೆಯಾಗುವ ಅರಿವು ಧರ್ಮ. ಮರಳಿನ ಮೇಲೆ ಗಾಳಿಯ ಹೆಜ್ಜೆಯನ್ನು ಕಾಣಲಾಗದು ಅಂತೆಯೇ ಧರ್ಮದ ಅರಿವು. ಇದನ್ನರಿಯಲು ನಮ್ಮಂತವರಿಗೆ ತಾಳ್ಮೆಯಿರಬೇಕು ಎನ್ನುವರು. 

ಹೀಗೇ ಮಾತನಾಡುತ್ತ ಹೊರಡುವರು. ಇಬ್ಬರು ಹುಡುಗರು ಬರುವರು.



( ಇಬ್ಬರು ಹುಡುಗರು ಬರುವರು )

ಒಬ್ಬನು __  ನನಗೆ ನೋಡೆಷ್ಟು ಸಕ್ಕರೆ.
ಇನ್ನೊಬ್ಬನು__   ನೋಡು ನನಗೆಷ್ಟು.

.ಒಬ್ಬನು __   ನನಗೆ ಹೆಚ್ಚು.
ಇನ್ನೊಬ್ಬನು__   ನನಗೆ ಹೆಚ್ಚು.

ಒಬ್ಬನು __  ನನಗೇ ಹೆಚ್ಚು.

ಇನ್ನೊಬ್ಬನು__   ನನಗೆ ಹೆಚ್ಚೆನ್ನುತಿರೆ ಪ್ರತಿಯಾಗಿ ಹೇಳುವೆಯ ? ಬಾ ನಿನಗೆ ಕೊಡುತ್ತೇನೆ.

ಒಬ್ಬನು__   ಧೈರ್ಯವಿದ್ದರೆ ಕೊಡು. ನೋಡೋಣ. ಕೊಟ್ಟಷ್ಟ ಹಿಂದಕ್ಕೆ ಕೊಳ್ಳುವೆ.
 (ಇಬ್ಬರೂ ಜಗಳ ಮಾಡುವರು. ಜಾಬಾಲಿ ಧನಪಾಲ ಬರುವರು.)
ಜಾಬಾಲಿ __   ಎಲ ಎಲಾ ಏನೊ ಇದು ಪುಂಡಾಟ !
 (ಧನಪಾಲ ಅವರನ್ನು ಬಿಡಿಸುವನು.)

ಇನ್ನೊಬ್ಬನು __  ನೋಡಿವನು.

ಧನಪಾಲ__.  ಅವನೇನು ? ನಿನ್ನನೂ ನೋಡಿದೆನು. ಏನು ಇದು ?

ಇನ್ನೊಬ್ಬನು __  ನನ್ನ ಸಕ್ಕರೆ ಹೆಚ್ಚು ಎಂದೆ ; ನನ್ನದು ಹೆಚ್ಚು ಎಂದು ಅವನೆಂದ ; ಯಾರದು ಹೆಚ್ಚು ನೋಡೋಣ ಎಂದು ಗುದ್ದಾಡಿದೆವು,

ಜಾಬಾಲಿ__   ಚೆನ್ನಾಯ್ತು ಅಣ್ಣಾ, ಇದೆಕಿಷ್ಟು ಗಲಭೆ ಮಾಡುವರೆ ?
ಒಬ್ಬನು__   ಇದು ಗಲಭೆಯೋ? ಅಲ್ಲಿ ದೊಡ್ಡವರು ನೀವೆಲ್ಲ ಮಾಡಿದ ಗಲಭೆ? ಅದನು ಕೇಳುವರಿಲ್ಲ.
ಧನಪಾಲ.__  ಎಲ ಎಲಾ ಪೋರಾ, 
ಎಷ್ಟು ಮಾತೊ ?
ಇನ್ನೊಬ್ಬ ( ಇಬ್ಬರನ್ನೂ ಚೆನ್ನಾಗಿ ನೋಡಿ) ತಾತ ಜಾಬಾಲಿಗಳು  ಕಣೋ ಅಯ್ಯೋ ತಪ್ಪಾಯ್ತು, ಮನ್ನಿಸಿ, ಬಾರೊ ಹೋಗುವ

(ಎಂದು ಹುಡುಗರು ಹೊರಟುಹೋಗುವರು. ಚಾಬಾಲಿ ಧನಪಾಲ ದಾರಿಯ ಪಕ್ಕದ ಒಂದು ಕಲ್ಲುಮಂಚದ ಮೇಲೆ ಕುಳಿತುಕೊಳ್ಳುವರು )

ಜಾಬಾಲಿ  __ ಸುಟಿಯಾದ ಹುಡುಗರು.
ಧನ.  __ಫಟಿಂಗರು.
ಜಾಬಾಲಿ  __ ಬಾಲಕನು ದಿಟವನೇ ಹೇಳಿದನು. ನಾವು ಹಿರಿಯರು ಅಲ್ಲಿ ಚರ್ಚೆಮಾಡಿದುದಿಂತೆ ಆಯ್ತು. ನನ್ನದು ಧರ್ಮ ಧರ್ಮ ನನ್ನದು ಎಂದು ಮನದೊಳದನವಿತಿಟ್ಟು ಹಿರಿದು ಯಾವುದು ಎಂದು ಯುದ್ಧ ಮಾಡಿದವಲ್ಲೆ ಏನಿದೆಯೊ ತೋರಿಸುವುದಿಲ್ಲ; ಏನಿದೆಯೆಂದು ನೋಡಿ ತಿಳಿಯುವುದಿಲ್ಲ ; ಜಗಳದಲಿ ತೊಡಗುವೆವು. ಮಾನವನ ಮಾತೆ ಇಂತಾಗಿಹುದು. ಧರ್ಮವನು ಮುಂದಿಟ್ಟು ಅದರ ಹೆಸರಿನಲಿ ಹೊಡೆದಾಡುವುದು.  ಧರ್ಮ ಹಿರಿದೆಂದು ತೋರುವೆನೆಂದು ಹೇಳುತ್ತ ನಾನು ಹಿರಿಯನು ಎಂದು ತೋರಿಸುವ ಸಲುವಾಗಿ ಮಾತಮಲ್ಲರು ಕಾಳಗದ ಕಣಕೆ ಇಳಿಯುವೆವು. ದೈವಕೆ ನಿವೇದನ, ಊಟವೆಂಬುದು ನಮಗೆ ಎಂಬಂತೆ ಈ ಎಲ್ಲ ಜಗಳವೂ ನೆಪ ಮಾತ್ರ ಧರ್ಮವನು ಕುರಿತಿಹುದು : ನಿಜವಾಗಿ ನೋಡುವರೆ ನಮ್ಮ ಹೆಮ್ಮೆಯ ತೃಪ್ತಿಗೆಂದೆ ಮೆಯ್ಗೊಂಡಿಹುದು. ಇದರಿಂದಲೇ ನಮ್ಮ ವೇದಗಳೊಳುದಯಿಸಿದ. ಜ್ಞಾನವಾಹಿನಿ ಸರಸ್ವತಿ ಸ್ವಲ್ಪ ಕಾಲದಲೆ ಶಾಸ್ತ್ರಗಳ ಮರುಭೂಮಿಯಲಿ ಹೊಲಬು ತಿಳಿಯದೆ ವಾದದಲಿ ಇಂಗಿ ಕಣ್ಣಿಂದ ಮರೆಯಾಯಿತು. 

ಧಬಪಾಲ__.    ಗುರುಗಳೇ ಇವರು ನಿಮ್ಮಿಂದ ಕಲಿತುದಕಿಂತ ಮುಂದೆ ಏನನು ಕಲಿತರು ? ಏನ ಹೇಳುವರು ?

ಜಾಬಾಲಿ __   ಕಲಿತುದು ಹೇಳುವುದು ಮುಂದಿಹುದೆ ಎನಬೇಡ. ಮುಂದಿಹುದು ನಿಜ. ಆದರಿದು ಇವರ ಹಿರಿಮೆಯಲಿ ಮುಖ್ಯಾಂಶವಲ್ಲ, ಈತನಲಿ ಹಿರಿದಾವುದೆನೆ ಬಾಳುವೆಯ ದಾರಿ. ನನ್ನಲ್ಲಿ ಕಲಿತನಪ್ಪುದು; ಕಲಿತಲ್ಲಿ ಬಿಡಲಿಲ್ಲ ; ಬಾಳೊಳದ ತಂದನು ; ಮನೆಮಂದಿಯನು ತೊರೆದು ದೇಶದಲ್ಲಿ ನಡೆದನು. ಗುರುದೇವ ಆಲಾರ ಕಾಲಾಮರನು ಸೇರಿ ಉಪದೇಶವನು ಕೊಂಡು ಬಾಳಿನಲಿ ತಂದನು. ರಾಮ ಗುರುವಿನ ಶಿಷ್ಯ ಉದ್ದಾರಕರೆಡೆ ಸಾರಿ ಅವರೊರೆದುದನು ಕೇಳಿ ಬಾಳಿನಲಿ ನೋಡಿದನು. ಆಮೇಲೆ ವರ್ಷಾಂತರವನು ವನದಲಿ ಕಳೆದು ಧ್ಯಾನದಲಿ ನಿಂದನು, ಸತ್ಯವನು ಕಂಡನು; ಕಂಡ ಸತ್ಯವ ಮರಳಿ ಬಾಳಿನಲಿ ತಂದನು; ಜಗಕೆ ಒರೆದಿಹನು. ವೀಣೆಯ ತಂತಿ ಸುಸ್ವರವ ನೀಡುವೊಡೆ ಅತಿಯಾಗಿ ಬಿಗಿಯಲಾಗದು ಅದನು, ಅತಿಯಾಗಿ ಸಡಿಲಿಸಲು ಆಗದು, ಎಂಬನೇ ಈ ಮಧ್ಯಮಾರ್ಗ ಇವನುಪದೇಶದಲ್ಲಿ ಮುಖ್ಯ. ಇದೆ ಇವನ ವಿಜಯಪಥ : ಇದೆ ಇವನ ಹಿರಿಮೆ. ನೆನೆದು ಗುರುವೆಂಬನೀತನು ಎನ್ನ : ಇವನೆನಗೆ ಗುರುವೆಂದು ನಾ ಮನದಿ ಬಲ್ಲೆನು,'
 ಧನಪಾಲ. __ ಇವರ ಉಪದೇಶದಲಿ ನಿಮ್ಮ ಉಪದೇಶಕೂ ಮುಂದಾದುದಾವುದು ?

ಜಾಬಾಲಿ   __.   ಅದರರಿವು ಬಹು ತೊಡಕು  ಮೊದಲು ದೇವರು ಎಂಬ ತತ್ತ್ವವನು ಕುರಿತು, ಎರಡನೆಯದಾಗಿ ಪ್ರತ್ಯಕ್ಷ ಎಂಬುದರರ್ಥ ಏನು ಎಂಬುದ ಕುರಿತು, ಮೂರನೆಯದಾಗಿ ಲೋಕಗಳ ಕಲ್ಯಾಣ ಸೂತ್ರದಲಿ ಸೇರಿರುವ ಸಾವು ನೋವಿನ ಕರಿಯ ಮಣಿಯನು ಸಮರ್ಥಿಸುವ  ರೀತಿಯನು ಕುರಿತು : ಈ ಮೂರು ವಿಷಯದಲಿ ಈತನುಪದೇಶ ನಮ್ಮವರ ಉಪದೇಶವನು ಮುಂದುವರಿಸಿಹುದು. ರಾಮಾಯಣದ ಕಾಲದಲಿ ನಮ್ಮ ಹಿರಿಯರು ರಚಿಸಿದಾ ತತ್ತ್ವ ಸೌಧಕೆ ಇಂತು ಮಂಗಲ ಹೇಮ ಕಲಶವನು ಹಚ್ಚಿಹುದು.
(ನಾಲ್ಕು ಜನ ಬರುವರು.)

ಜನ.__   ಜಯ ಬುದ್ಧ ಗುರುದೇವ ಜಯ ಶುದ್ಧ ಚಾರಿತ್ರ (ಎಂದು ಹಾಡುತ್ತ ಹೋಗುವರು. ಇವರೂ ಅವರ ಜೊತೆಯಲ್ಲಿ ಮುಂದುವರಿಯುವರು.)
#####################

ಸಂಕ್ಷಿಪ್ತ ಗದ್ಯ ಸಾರಾಂಶ


ಬಾಲಕರಿಬ್ಬರು ಸಕ್ಕರೆಯ ಬಗ್ಗೆ ಜಗಳವಾಡುವಾಗ ಜಾಬಾಲಿ ಮತ್ತು ಧನಪಾಲರು ನಡುವೆ ಬರುವರು. ಗಲಭೆ ಮಾಡಬೇಡಿರಿ ಎಂದರೆ ಬಾಲಕರು ಬುದ್ಧನೆದುರಿನಲ್ಲಿ ದೊಡ್ಡವರು ಮಾಡಿದ ಗಲಭೆ ಸರಿಯೆ ಎನ್ನುವರು. ಈ ಇಬ್ಬರಿಗೆ ಆ  ಮಾತು ಚಿಂತನೆಗೆ ಹಚ್ಚುವುದು.

ಹೌದಲ್ಲವೆ ! ನಾವು ನಮ್ಮ ಧರ್ಮ ಹೆಚ್ಚು, ನಮ್ಮದೇ ಹೆಚ್ಚು ಎಂದೆಲ್ಲ ಹೋರಾಡಿದೆವಲ್ಲ. ನಿಜವಾದ ಧರ್ಮದ ಅರಿವು ಯಾರಿಗೂ ಬೇಕಿಲ್ಲ. ದೇವರ ಹೆಸರಿನಲ್ಲಿ ಹೊಡೆದಾಡುವೆವು. ದೇವರಿಗೆ ನಿವೇದನ. ನಮಗೆ  ಊಟವೆಂಬಂತೆ ಇದು. ಇದೆಲ್ಲ ನಮ್ಮ ಹೆಮ್ಮೆಯ ತೃಪ್ತಿಗಾಗಿ ಮಾಡಿಕೊಂಡ ರಗಳೆಗಳು.ಹಾಗಾಗಿಯೇ ಜ್ಞಾನವಾಹಿನಿ ಸರಸ್ವತಿ ಇಂಗಿಹೋಗಿದ್ದು ಹೀಗೇ ಮಾತನಾಡುವರು.

ಜಾಬಾಲಿಯ ಶಿಷ್ಯ ನಾಗಿ ಸಿದ್ಧಾರ್ಥನು ಕಲಿತದ್ದೇನು ಎಂದು ಧನಪಾಲನಿಗೆ ಯೋಚನೆ. ಅದಕ್ಕೆ ಜಾಬಾಲಿಯು ಕಲಿತದ್ದು ಬಿಡದೆ ಬೆಳಸಿಕೊಂಡು ತನ್ನ ಅರಿವಿನ ಹಿರಿಮೆಯಲ್ಲಿ ಬಾಳುವೆಯ ದಾರಿಯನ್ನು ಕಂಡುಕೊಂಡದ್ದು ಅವನ ದೊಡ್ಡತನವೆನ್ನುವನು. ಇಲ್ಲಿ ರಾಮನ ಉದಾಹರಣೆಯನ್ನೂ ತರುತ್ತಾರೆ. ಗುರುಗಳಿಂದ ಕಲಿತದ್ದನ್ನು ವನವಾಸ ಕಾಲದಲ್ಲಿ ಬಳಸಿಕೊಂಡು ಸತ್ಯವನ್ನು ಕಂಡನೆಂದು ವಿವರಿಸುವರು. ವೀಣೆಯ ತಂತಿಯನ್ನು ಅತಿಯಾಗಿ ಬಿಗಿ ಮಾಡಬಾರದು. ಹಾಗೆಂದು ಸಡಿಲವೂ ಇರಕೂಡದು. ಇದರಂತೆ ಬಾಳಿನ ರೀತಿ. ಬಾಲ್ಯದಲ್ಲಿ ನನ್ನಲ್ಲಿ ಕಲಿತುದರಿಂದ ಗುರುವೆಂದು ಅವನು ನನ್ನನ್ನು ಗೌರವಿಸುವನು. ಆದರೆ ಅವನೇ ನನಗೆ ಗುರುವಾಗಿಹನು. 

ಇವನ ಉಪದೇಶದಲ್ಲಿ ನಿಮ್ಮ ಉಪದೇಶಕ್ಕಿಂತ ಮಿಗಿಲಾದುದು ಏನಾದರೂ ಇದೆಯೆ ಎಂಬ ಪ್ರಶ್ನೆಗೆ  ಹೌದು ಎನ್ನುವನು. ಮೊದಲಿಗೆ ದೇವರು ಎಂಬ ತತ್ತ್ವವನ್ನು ನಂತರ ಪ್ರತ್ಯಕ್ಷ ಎಂಬುದರ ಅರ್ಥವನ್ನು ಮತ್ತೆ ಲೋಕಗಳ ಕಲ್ಯಾಣ ಸೂತ್ರವನ್ನು ವಿವರಿಸುವಲ್ಲಿ ಇವನದು ನನ್ನದಕ್ಕಿಂತ ಮಿಗಿಲಾದ ಉಪದೇಶವೆಂದು ಜಾಬಾಲಿಯು ವಿವರಿಸುವನು. ಹಿಂದಿನ ತತ್ತ್ವಸೌಧಕ್ಕೆ ಹಿಡಿದ ಸುವರ್ಣದ ಕಲಶದಂತೆ.
 (ಜನರು ಬುದ್ಧನ ಜಯಘೋಷದೊಂದಿಗೆ ಬರುವರು )




ಸ್ಥಾನ ೫

ಯಶೋಧರೆಯ ಅಂತಃಪುರ,
 ಯಶೋಧರೆ __   ಅಂಬಿಕೆ. ಈಗ ನಗರಕೆ ಬರುವರೇ ಅವರು ಅಂಬಿಕೆ ?
ಅಂಬಿಕೆ __   ಹೌದು ಮಾಜೀ.

ಯಶೋಧರಾ  __ ಎದುರುಗೊಳಲೆಂದು ಬಹಳ ಜನ ಹೋಗಿಹರೆ ?

ಅಂಬಿಕೆ  __ ಊರು ಊರೇ ಹೊರಟುಹೋಗಿಹುದು.

ಯಶೋಧರಾ__   ಊರು ಊರೇ ಅವರನೆದುರುಗೊಳಹೋಗುವುದು ; ನಾನು ಹೋಗುವುದು ಸಲ್ಲದು. ನನ್ನ ಪುಣ್ಯವನು ಏನೆಂದು ಹಳಿಯಲಿ ? ಕಪಿಲವಸ್ತುವಿನಲ್ಲಿ ಎಳೆತನದೊಳವರಿರ್ದ ಕಾಲದಲ್ಲಿ ಅಷ್ಟಿಷ್ಟು ತಿಳಿದವರು ತಿಳಿಯದಿದ್ದವರು ; ಅರಮನೆಯಲ್ಲಿ ಇನಿತನಿತು ಸೇವೆಗೆಯ್ದವರು ಗೆಯ್ಯದವರು; ದೂರದಲಿ ನಿಂತು ಕೈಮುಗಿದವರು ; ದಾರಿಯಲಿ ಹೋಗುತಿರೆ ನೆರೆಯವರ ಕುರಿತು ಅಕೊ ನೋಡಲ್ಲಿ ಅರಗುವರ ಸಿದ್ದಾರ್ಥ ಹೋಗುತಿಹನೆಂದವರು ; ಗುರುತಿಲ್ಲದಿದ್ದವರು, ಇದ್ದವರು, ಬರಿ ಅವರ ಹೆಸರ ಕೇಳಿದ್ದವರು, ಕೇಳದೆಯೆ ಇದ್ದವರು : ಎಲ್ಲರೂ, ನಮ್ಮವನು ನಮ್ಮ ರಾಜಕುಮಾರ ನಮ್ಮ ಗುರು ಎಂದು, ಸಂಭ್ರಮಿಸಿ ನನ್ನಾಣ್ಮನನು ನೋಡಬಹುದು. ದೇಹ, ಮನ, ಉಸಿರು ಎಲ್ಲವನು ಅವನುಸಿರು ಮನ ದೇಹದಲ್ಲಿ ಬೆರೆಸಿ ಒಂದಾಗಿ ಬಾಳಿನೊಂದರ್ಧವಾಗಿದ್ದವಳು ನಾನಿಂದು ನೋಡಬಾರದು.

ಅಂಬಿಕೆ__   ಮಾಜಿ, ದೇವಿಯರು ಗುರುಗಳನ್ನು ನೋಡಬಹುದೆಂದೆನ್ನ ಮನದರಿಕೆ.

ಯಶೋಧರಾ__   ಏನು ಇದು ಅಂಬಿಕೆ ? ಆಣ್ಮನನು ನೀನೂ ಗುರುವಾಗಿ ಮಾಡಿಕೊಂಡಿರುವೆಯಾ ?

ಅಂಬಿಕೆ__   ಅಮ್ಮಾಜಿ ಅವರ ನೋಡುವವರೆಗೆ, ಅರಗುವರ, ಸಿದ್ಧಾರ್ಥ, ಶಾಕ್ಯರಾಜಕುಮಾರ ಪತಿ ಪುತ್ರ ದೊರೆ ತಂದೆ. ಎಂದು ಅವರವರು ಅವರವರ ಸಂಬಂಧವನು ನೆನೆಯುವುದು ಸಾಧ್ಯವಾಗುವುದು; ನೋಡಿದ ಎಲ್ಲರೂ ಆತನನು ಗುರುವೆಂದೆ ಕರೆಯುವರು.

ಯಶೋಧರಾ__   ಎನ್ನರಸನೆನ್ನ ಬಿಟ್ಟಂದು ಲೋಕವನೆಲ್ಲ ಬಿಟ್ಟರೆಂದೆಣಿಸಿದ್ದೆ ನಾನು. ಆರಯಿಸುವರೆ ಎನ್ನ ಮಾತ್ರವೆ ಅವರು ಬಿಟ್ಟಂತೆ ತೋರುತಿದೆ. ಉಳಿದೆಲ್ಲ ಮಂದಿಯೂ ಬಳಗವೂ ಲೋಕವೂ ಈಗಳೂ ಆತನಿಗೆ ಪ್ರಿಯ; ಆತನೆಲ್ಲರಿಗೆ ಗುರುವಾಗಿ ಪೂಜ್ಯನಾಗಿಹರು. ನಾನೊಬ್ಬಳೇ ತ್ಯಾಜ್ಯಳಾತನಿಗೆ, ವರ್ಜ್ಯಳು. ನಾನು ಒಬ್ಬಳು ಅವರ ಎನ್ನವನೆಂದು ಕರೆಯಲಾಗದ ಪಾಪಿ.

ಅಂಬಿಕೆ__   ಮಾಜಿ, ಇಂತಹ ಮಾತನಾಡದಿರಿ. ನಿಜವಾಗಿ ಗುರುದೇವರೊಂದನೂ ಬಿಡಲಿಲ್ಲ. ಜಗವನೇ ಕಟ್ಟಿಕೊಂಡಿಹರು. ಜಗವೆಲ್ಲ ಪ್ರಿಯವಾತನಿಗೆ ; ಎಲ್ಲ ಜಗಕೂ ಪ್ರಿಯನು ತಾನು.  ನಿಮ್ಮಿಂದ ಜಗ ಅವರ ಪಡೆಯಿತು. ನಿಮ್ಮ  ಪುಣ್ಯದ ಫಲವೆ ಲೋಕವನು ಅವರ ರೂಪದಲಿ ಸಲಹುತಲಿಹುದು.

ಯಶೋಧರಾ__   ಅಂಬಿಕೆ ಸಾಕಿನ್ನು ಸುಮ್ಮನಿರು. ಮೊದಲೆಲ್ಲ ನನ್ನ ಕಷ್ಟವ ನೋಡಿ ಕನಿಕರಿಸುತ್ತಿದ್ದವಳು ನೀನೆನಗೆ ತತ್ತ್ವವನು ಕಲಿಸುವುದೆ ?

ಅಂಬಿಕೆ__   ಅಮ್ಮಾಜಿ ನಿಮಗೆ ನಾನೇನ ಕಲಿಸುವೆನು ? ಇಂದಿನವರೆಗೆ ಎನ್ನ ಸಲಹುವ ಒಡತಿ ಎಂದು ಓಲೈಸಿದೆನು. ಇನ್ನು ಒಡತಿಯಲ್ಲಿ ಗುರುಪತ್ನಿಯನು ಕಾಣುವೆನು. 

ಯಶೋಧರಾ __  ನೀನೆನಗೆ ಗುರುಪತ್ನಿ ಪಟ್ಟವನು ಕಟ್ಟುತಿರು. ಗುರುಮಾತ್ರ ನನ್ನ ಗುರುತಿಸನು. ಏನಂಬಿಕೆ, ರಾಹುಲನ ತೆರದೆ ನೀನೂ ನನ್ನ ಕೈ ಬಿಟ್ಟು ಗುರುಗಳನು ಹಿಂಬಾಲಿಸುವೆಯ ? ಕನಸಿನೊಳಂದು ಊಳಿಗದ ಮಂದಿಯೂ ನನ್ನನುಳಿಯುವರೆಂದು ಕಾಣಲಿಲ್ಲ.

ಅಂಬಿಕೆ  __ ಮಾಜಿ, ನಾ ನಿಮ್ಮ ಬಿಡುವೆನೆ ? ಯಾವ ಸುಖಕಾಗಿ ಬಿಡಲಿ ? ಮುಕ್ತಿಗಾಗಿಯೆ ? ನೀವು ಮನವೊಪ್ಪಿ ಕೈಯೆತ್ತಿ ಕೊಡದಿಹ ಒಂದು ಲವಲೇಶ ಸುಖವನಾದರು ನಾನು ಒಲ್ಲೆನು. ಎಳೆಯತನದಿಂದಲೂ ಸೇವೆಯಲಿ ಜೊತೆಗಿದ್ದು ನೀವು ಬಿಟ್ಟುದನೇ ಪ್ರಸಾದವೆಂದನುಭವಿಸಿ ಬಾಳುವೆಯ ನಡೆಸಿಹೆನು. ಎರಡನೆಯ ಪಂಕ್ತಿಯಲಿ ಸುಖಿಸುವುದು ನನಗೆ ಅಭ್ಯಾಸವಾಗಿಹುದವ್ವ, ಇಂದು ಆತುರಪಡೆನು.

ಯಶೋಧರಾ __  ಅಂಬಿಕೆ, ಮುಳಿಯದಿರು.
ಆಣ್ಮನನು ನೋಡಲಾಗದೆ ಎಂಬ ಬೇನೆಯಲಿ ಏನನೋ ನುಡಿದೆನು. ದಿಟವೆಂದು ನೆನೆಯದಿರು.

(ದೂರದ ಕಹಳೆ ಓಲಗ ವೇದಘೋಷ ಜನದ ಗದ್ದಲ ಕೇಳುವುದು.
ಅಂಬಿಕೆ  __ ಬಿಜಗೆಯ್ದ ರೊಡೆಯರು.
ಯಶೋಧರಾ __   ಎಂಥ ಉದ್ಯೋಷವಿದು! ಶಾಕ್ಯರಾನಂದಾಬ್ದಿ ಮೇರೆವರಿದಿಹುದಿಂದು. ಬಳಿಗೆ ಬರುತಿದೆ ಘೋಷ. ಬೀದಿಗೈ ತಂದರೆ ?

ಅಂಬಿಕೆ __  (ಕಿಟಕಿಯ ಬಳಿ ನಿಂತು)
ಹೌದು ಮಾಜೀ...

ಯಶೋಧರಾ __  ಏನು ಸದ್ದೆಲ್ಲ ನಿಂತಿಹುದು

ಅಂಬಿಕೆ __  ಇಲ್ಲಿ ನಿಂದೆಲ್ಲವನು ನೋಡಬಹುದಮ್ಮಾಜಿ.
ಯಶೋಧರಾ__   ನಾನಲ್ಲಿ ನಿಂತು ನೋಡಿದೊಡೆ ಎನ್ನೀ ದೃಷ್ಟಿ ಆ ದಿವ್ಯ ದೇಹವನು ಸೋಕಿ ಇನ್ನೇನಶುಭ ತಾಗುವುದೊ, ನಾನಲ್ಲಿ ಬಂದು ನೋಡುವುದಿಲ್ಲ. ನೀನೆನ್ನ ಕಣ್ಣಾಗು. ನೋಡಿದುದ ಬಣ್ಣಿಸು. ಕಣ್ಣಿನಿಂದೀಂಟುವುದ ಕಿವಿಗಳಿಂದೀಂಟುವೆನು.

#######################
ಸಂಕ್ಷಿಪ್ತ ಗದ್ಯ ಸಾರಾಂಶ

ಯಶೋಧರಾ ಅಂಬಿಕೆಯೊಂದಿಗೆ ಮಾತನ್ನಾಡುತ್ತಿರುವಳು. ಬುದ್ಧನನ್ನು ನೋಡಲು ಊರಿಗೆ ಊರೇ ಸಡಗರದಿಂದ ಇರುವಾಗ ತಾನು ಮಾತ್ರ ನೋಡುವಂತಿಲ್ಲ ಎಂಬ ನೋವು. ಸಂನ್ಯಾಸಿಯಾದವನನ್ನು ಪೂರ್ವಾಶ್ರಮದ ಪತ್ನಿ ನೋಡಬಾರದೆನ್ನುವ ಸಂಪ್ರದಾಯ ಯಾರು ತಂದರೋ ಎನ್ನುವಲ್ಲಿ ಅವಳ ದುಃಖ ವ್ಯಕ್ತವಾಗುತ್ತದೆ. ಬುದ್ಧನನ್ನು ನೋಡಲು ಅರಮನೆಯ ಸೇವಕರು, ಗೊತ್ತಿದ್ದವರು, ಗೊತ್ತಿಲ್ಲದವರು, ಪರಿಜನರು, ಪುರಜನರು ಹೀಗೆ ಎಲ್ಲರೂ ನೆರೆದಿರುವಾಗ ತಾನು ಮಾತ್ರ ಇದರಿಂದ ಹೊರತಾದವಳೆಂಬ ನೋವು ಅವಳದು.

ಅವಳು ಗುರುಗಳನ್ನು ನೋಡಬಹುದೆಂದು ಅಂಬಿಕೆಯ ಭಾವನೆ. ಅಂಬಿಕಯೂ ಗುರುಗಳೆಂದು ಹೇಳಿದ್ದು ಕೇಳಿ ಯಶೋಧರಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಅದಕ್ಕೆ ಅಂಬಿಕೆಯು ಅವನನ್ನು ನೋಡುವ ತನಕ ಅವನು ರಾಜಕುಮಾರ, ಸಿದ್ಧಾರ್ಥ, ಗಂಡ, ಮಗ ಎಲ್ಲ ಭಾವಗಳು. ನೋಡಿದ ನಂತರ ಬರುವುದು ಗುರು ಎಂಬ ಭಾವ ಅಷ್ಟೇ ಎನ್ನುವಳು. 

ಯಶೋಧರಾ ಸಿದ್ಧಾರ್ಥ ತನ್ನನ್ನು ಮಾತ್ರ ಬಿಟ್ಟಿರುವುದು ಎಂದು ಬೇಸರಿಸುವಳು. ಅಂಬಿಕೆಯು ಸಮಾಧಾನ ಹೇಳುವಳು. ಗುರು ಯಾವುದನ್ನೂ ಬಿಡಲಿಲ್ಲ. ಇಡೀ ಜಗತ್ತನ್ನೇ ಕಟ್ಟಿಕೊಂಡಿರುವರು. ನಿಮ್ಮಿಂದಾಗಿ ಜಗತ್ತು ಅವರನ್ನು ಪಡೆಯಿತು ಎನ್ನಲು ಯಶೋಧರಾ ನೀನೂ ನನಗೆ ತತ್ತ್ವವನ್ನು ಹೇಳುವೆಯಾ ಎಂದು ಕೇಳಲು ಅಂಬಿಕೆಯು ಇದುವರೆಗೂ ಅವಳನ್ನು ಒಡತಿಯೆಂದಷ್ಟೇ ನೋಡುತ್ತಿದ್ದವಳು ಇದೀಗ ಗುರುಪತ್ನಿಯೆಂದು ಇನ್ನಷ್ಟು ಪೂಜ್ಯ ಭಾವ ಹೊಂದಿರುವಳು. ಗುರು ತನ್ನನ್ನು ಕೈ ಬಿಟ್ಟು ಹೋದರು. ನೀನೂ ಬಿಡುವೆಯಾ ಎಂದು ಯಶೋಧರಾ ಕೇಳಲು ಅಂಬಿಕೆಯು ಸಾಧ್ಯವೇ ಇಲ್ಲ ಎನ್ನುವಳು. ಅವಳಿಗೆ ಇನ್ನಾವ ಆಸೆಗಳೂ ಇಲ್ಲ. ಒಡತಿಯ ಸೇವೆಯೊಂದೇ ಅವಳ ಗುರಿ. 

ಅಷ್ಟರಲ್ಲಿ ವೇದಘೋಷ ಕೇಳುವುದು. ಬುದ್ಧನು ಬಂದಿರುವನೆಂದು ತಿಳಿಯಿತು. ಕಿಟಕಿಯ ಮೂಲಕ ನೋಡಬಹುದೆಂದು ಅಂಬಿಕೆ ಹೇಳಿದ್ದಕ್ಕೆ ಯಶೋಧರಾ ಒಪ್ಪುವುದಿಲ್ಲ. ನೀನೇ ನನ್ನ ಕಣ್ಣಾಗು. ನಾನು ಕಿವಿಯಾಗುವೆನು. ಎಲ್ಲವನ್ನೂ ವರ್ಣಿಸು ಎನ್ನುವಳು. ಇಲ್ಲಿ ಅವಳ ಆಸೆ, ಬೇಸರ, ನೋವಿನ ಉತ್ಕಂಟತೆ ವ್ಯಕ್ತವಾಗಿದೆ.


ಅಂಬಿಕೆ__   ರಾಜವೀಧಿಯ ನಡುವೆ ದಿಬ್ಬಣವ ನಿಲಿಸಿಹರು; ಐದೆಯರು ಬಂದು ಆರತಿಯನೆತ್ತು ತಲಿಹರು.

ಯಶೋಧರಾ  __  ವಿವರವನು ಒಕ್ಕಣಿಸು. ಅವರೆಲ್ಲಿ ನಿಂದಿಹರು ? ವೇಷ ಭೂಷಣವೇನು ? ಬಳಿಯೊಳಾರಾರಿಹರು!

ಅಂಬಿಕೆ__    ರಾಜವೀಧಿಯ ತುಂಬ ಹಿಂಗಡೆಗೆ ಊರಜನ ಕಿಕ್ಕಿರಿದು ನಿಂದಿಹುದು. ಮುಂಗಡೆಗೆ ಎಡಬಲಕೆ ಸಾಲಾಗಿ ಬಿರುದ ಕಾಪಿನ ಸೇನೆ ನಿಂದಿಹುದು. ಇತ್ತ ಪಟ್ಟದ ಆನೆ, ಅತ್ತ ಪಟ್ಟದ ಕುದುರೆ; ನಡುವೆ ಓಲಗದ ಜನ; ಬದಿಯಲೇ ದ್ವಿಜ ತಂಡ. ಐದೆಯರು ಮಂಗಲದ್ರವ್ಯ, ಕಲಶ ಕನ್ನಡಿ ಆರತಿಯ ತಟ್ಟೆಗಳ ಹಿಡಿದು ನಿಂದಿಹರಲ್ಲೆ. ಇಷ್ಟು ನೆರವಿಯ ಮಧ್ಯೆ ಗುರುದೇವ ನಿಂತಿಹರು. ಬಲಕೆ ರಾಜರು, ಅವರ ಜೊತೆಯಲೇ ಅಣ್ಣಯ್ಯ ; ಎಡಕೆ ಜಾಬಾಲಿ ವಾಸಿಷ್ಠ ಗುರುಗಳು; ಅಲ್ಲೆ ಆನಂದ ಮೊದಲಾದ ಸಾರಿಪುತ್ರರು : ಇತ್ತ ಊರ ಸೌಮಂಗಲಿಯರಾರತಿಯನೆತ್ತುವರೆ ಮನೆ ಮನೆಯ ಮುಂದೆ ಹರಿವಾಣಗಳ ಹಿಡಿದಿಹರು ; ಕೆಲರು ಮಕ್ಕಳನ್ನು ಮೇಲಕೆ ಎತ್ತಿ ಗುರುಗಳನ್ನು ನೋಡೆಂದು ತೋರುತಿರುವರು. ಕೆಲರು ಬಾಲಕರು ತಾಯದಿರ ಸೆರಗ ಕೈಯಲಿ ಹಿಡಿದೊ ಬಾಯ್ಗಿಟ್ಟೊ ಭ್ರಮೆಗೊಂಡರೆಂಬಂತೆ ನಿಂದಿಹರು.

ಯಶೋಧರಾ  __ ಆಣ್ಮ ಎಂತು ನಿಂದಿಹರು ಎಂತಿಹರು, ಬಣ್ಣಿಸಿ ಹೇಳು.

ಅಂಬಿಕೆ __   ಹುಣ್ಣಿಮೆಯ ಆಗಸದಿ ತಾರೆಗಳ ಮಧ್ಯದಲಿ ತುಂಬಿ ತೊಳಗುವ ಚಂದ್ರನಂತೆ ತೊಳಗುತಲಿಹರು. ನಮ್ಮ ಪುಷ್ಕರಣಿಯಲ್ಲಿ ಶ್ರಾವಣದ ಉದಯದಲಿ ರಾಯತಾವರೆ ಉಳಿದ ತಾವರೆಯ ಬಳಗದಲಿ ಅರೆಬಿರಿದು ಬೆಳಗುವವೊಲರೆನಗೆಯೊಳೆಸೆದಿಹರು. ಹಸುಗೂಸಿನಂತೆ ಮುದ್ದಾಗಿರುವ ಮುಖಮುದ್ರೆ ; ನಿಮ್ಮ ಮುಖದಲಿ ನನಗೆ ಕಾಂಬ ಕನಿಕರ ಎಳಮೆ ; ಹಿರಿಯ ರಾಜರ ಮುಖದ ಗಾಂಭೀರ್ಯ ಹಿರಿಹಿರಿಮೆ ; ಲೋಕವನೆ ಆವರಿಸಿ ಸಂರಕ್ಷಿಸುವೆನೆಂಬ ಕಾರುಣ್ಯರಸ ಒಸರಿ ಹೊಳೆಯುತಿಹ ನಯನಗಳು ; ಧೀರವಾಗಿಹ ನಿಲುವು ; ತಾವರೆಯ ಬಣ್ಣದಲಿ ಶೋಭಿಸುವ ಉತ್ತರೀಯ ; ಮಕುಟವೆನೆ ಮೇಲೆ ಹಿಡಿದೆತ್ತಿ ಕಟ್ಟಿರುವ ಜಟೆ.

ಯಶೋಧರಾ __  ಆಹ ಅಂಬಿಕೆ,
ಯಾವ ಪುಣ್ಯವ ಮಾಡಿ ನೀನಿದನು ನೋಡುತಿಹೆ ?ನಾನೇಕೆ ಮಾಡದಾದೆನೊ ಅದನು ಪೂರ್ವದಲ್ಲಿ!  ಇಲ್ಲವೇ ಸತಿಯಾದ ನಾರಿ ಸಂನ್ಯಾಸದಲ್ಲಿ ಪತಿಯ ನೋಡುವುದು ಸಲ್ಲದು ಎಂಬ ಧರ್ಮದಲ್ಲಿ ಮತದಲೇ ತಪ್ಪಿಹುದೊ ? ನನಗಿಂತೆ ತೋರುತ್ತಿದೆ ಇದು ಯಾವ ಮತ, ಯಾವ ಧರ್ಮ ? ಇದು ತಹುದೆ?  ಬಾಳುಗಳ ಸೀಳಿ ಮನೆಗಳ ಮುರಿದು ಹೃದಯಗಳ ಪುಡಿಮಾಡಿ ಕಣ್ಣೀರ ಕಾಲ್ವೆಯಲ್ಲಿ ಕದಡಿಸುವ ಈ ಧರ್ಮ ಮತಗಳೇತರ ಧರ್ಮ ಮತಗಳು ? ಲೋಕಗಳ ಶುಭವನಿವು ಸಾಧಿಸುವುವೆನ್ನುವುದು ಬರಿಯ ಭ್ರಾಂತಿಯ ಮಾತು. ಉಸಿರುಸಿರ ಬೆಸೆವ ಮತವೆನಲು ಒಪ್ಪುವುದು. ಬೆಚ್ಚ ಬೆಸುಗೆಯ ಬಿಡಿ ಜೀವಗಳ ಕುದಿಸುವುದು ಮತವೆನಲು ಸಲ್ಲದು.
(ಒಂದು ಕ್ಷಣ ಬಿಟ್ಟು)
ಮುಂದೆ ಬರುತಿರುವರೇ ಅಂಬಿಕೆ ?

ಅಂಬಿಕೆ __  ಅಹುದು. ಮೆರವಣಿಗೆ ಅರಮನೆಯ ಮುಂಬದಿಯ ಸಾರಿತು.

ಯಶೋಧರಾ __  ಅವರೇನ ಮಾಡುತಿರುವರು ?
ಅಂಬಿಕೆ __  ಬಾಗಿ ನಮಿಸುತಿಹ ಪ್ರಜೆಯ ಹರಸುತಲಿಹರು.

ಯಶೋಧರಾ__   ನನ್ನ ಮನಸಿನ ಕಣ್ಣು ಅದ ವಿಭಾಗಿಸಿ ನೋಡಿ ಸಂತೋಷಗೊಳುತಿಹುದು. ಸಂಜೆಬೆಳಗನು ತೊಟ್ಟು ಮುಗಿಲೊಂದ ತಲೆಗಿಟ್ಟು ಹಿಮಗಿರಿಯ ಶೃಂಗವೊಂದಾಶ್ವೀಜಮಾಸದಲಿ ತಪ್ಪಲಿನ ವನಗಳನು  ಹರಸುವವೊಲಿಹರಹುದು. ತುರುಗಿ ನಿಂತಿಹ ಜನಸ್ತೋಮದಲಿ ಒಂದು ಮುಖ ಇಲ್ಲವೆಂಬುದನವರ ದೃಷ್ಟಿ ಒರೆಯಿತೆ ಮನಕೆ? ಇಲ್ಲವೇತಕೆ ಎಂದು ಬಗೆ ಇನಿಸು ಕಲಕಿತೇ ? ಹಾ ವಿಧಿಯೆ. ಎನ್ನೆದೆಗೆ ಎನ್ನ ಈ ಆಸೆಗಳ ಭರದ ಓಟವ ತಡೆವ ನೆಲಗಟ್ಟನೀಡದೆ ಸಡಿಲಮಾಡಿದೆಯೇಕೆ ಅದನು ? ನಾನೇನಾದೆ ? (ಕೈ ಕಣ್ಣಿಗಿಟ್ಟು ದುಃಖಿಸುವಳು. ಮರಳಿ ಸಹಿಸಿಕೊಂಡು) ಅಂಬಿಕೆ, ಸುಮ್ಮನೆಯೆ ಕುಳಿತೇನಮಾಡುತಿಹೆ ? ಆಣ್ಮ ನೈತರವಿನೀ ಮಂಗಳಮುಹೂರ್ತದಲಿ ಮರುಳೆನ್ನ ಕಣ್ಣಶುಭವಾರಿಯನು ಸೂಸುತಿರೆ ಬೇಡವೆನಬಾರದೇನೆ ? ಏಳು, ತ್ವರೆಮಾಡು. ಹರಿವಾಣ ಒಂದ ತಾ, ಅಂಬಿಕೆ. ಅರಸರಿಗೆ, ನಿನ್ನ ಗುರುವಿಗೆ, ಅರ್ಪಿಸುವ ಉಪಾಯನಗಳನು ಅದರೊಳಿಡು.

ಅಂಬಿಕೆ  __ ಅಪ್ಪಣೆ.
ಯಶೋಧರಾ __  ಅಂತೆ ನನ್ನ ರಸನಿಗೆ ಮನವೊಪ್ಪಿ ಚೆಲುವಾದ ನನ್ನ ಅಂದಿನ ವಸ್ತ್ರ ಅಮೃತರುಚಿ ಚೀನಾಂಬರವನು ತೆಗೆದಿರಿಸು ; ಅವರು ಮನವೊಪ್ಪುವಂದದೊಳಂದುಗೆಯ್ದಂತೆ ಧಮ್ಮಿಲ್ಲವನು ರಚಿಸು. ಮೆಯ್ಯ ಸಿಂಗರಿಸು. ಮಂಗಳದ್ರವ್ಯಗಳ ನೀನೊಯ್ದು ನನಗಾಗಿ ಪಾದದಲಿ ಅರ್ಪಿಸುತಲಿರುವಂದು ನಾನಿಲ್ಲೆ ನೆನವಿನಲಿ ಪೂಜಿಪೆನು. ನೋಡಬಹುದೆಂಬ ಆ ಜಡವಸ್ತುನಿಚಯವನು ಅಲ್ಲಿ ಒಪ್ಪಿಸಿಕೊಳುತ ಅವರ ಮನದಲಿ ನನ್ನ ನೆನವು ಸುಳಿವಾಕ್ಷಣದಿ, ನನ್ನ ಚೇತನಗಳನು, ಭಾವನೆಯ ದೇಹವನು, ಇಲ್ಲಿಂದಲೇ ನಾನು ಪದತಲದೊಳಿರಿಸುವೆನು. ಸಿಂಗರಿಸು ಬಾರ, ಪೂಜೆಯ ಉಪಾಯನಗಳಲ್ಲಿ ಹಿರಿಯುಪಾಯನ ದೇಹನೈರ್ಮಲ್ಯ, ಆದರಿಂದ ವಿಮಲಮನ ಅಮಲಾತ್ಮ ಸಿದ್ದಿ ಪುವು ಎಂಬರಲೆ. ಕದಡಿರುವ ನನ್ನ ಮನ ತಿಳಿಯಾಗುವುದೊ ಏನೊ,  ಬಾ. ಬೇಗ ಸಿಂಗರಿಸು. ಹತ್ತು ವರುಷದ ಹಿಂದೆ ಬಿಟ್ಟು ಎಲ್ಲಿಯೊ ಹೊರಟುಹೋಗಿದ್ದ ಜೀವಕಳೆ ಮರಳಿ ಬಂತೆಂದು ಶಾಕ್ಯರ ನಾಡು ಉಸಿರೆಳೆದು, ಊರು ಉಕ್ಕಡ ಕಾಡು ನಗರ ಅರಮನೆಯೆಲ್ಲ ಸಂಭ್ರಮ ಸುಖೋಚ್ಛ್ವಾಸದಿಂದ ತುಂಬಿಹ ವೇಳೆ ನಾನು ಶೋಕದ ದೀರ್ಘನಿಶ್ವಾಸದುಬ್ಬೆಯಲಿ ಗಳಿಗೆಯನು ಏಕೆ ಬೇಯಿಸಲಿ ? ನನ್ನೆದೆಯರಸು ದೂರ ಹೋಗಿರ್ದವರು ಬಳಿಗೆ ಬಿಜಗೆಯ್ದು ದೇ ಸಂತೋಷವೆಂಬೆನು. ಬಾ, ಏಳು, ತ್ವರೆಮಾಡು.

 (ರಾಹುಲನೂ ಅಂಬಾಪಾಲಿಯೂ ಪ್ರವೇಶಿಸುವರು.)

ರಾಹುಲ__.  ಅಮ್ಮಾಜಿ, ನಿಮ್ಮ ನೋಡುವರೆ ಅಂಬಾಪಾಲಿ ಬಂದಿಹರು

(ಎಂದು ಹೇಳಿ ಹೊರಟು ಹೋಗುವನು.)
******************************
ಸಂಕ್ಷಿಪ್ತ ಗದ್ಯ ಸಾರಾಂಶ

ಯಶೋಧರಾ ಅಂಬಿಕೆಗೆ ಅರಮನೆಯ ಬೀದಿಯಲ್ಲಿ ನಡೆಯುತ್ತಿದ್ದುದನ್ನು ವಿವರಿಸಲು ಹೇಳುವಳು. ಊರಿಗೆ ಊರೇ ಅಲ್ಲಿ ನೆರೆದಿದೆ. ಎಲ್ಲೆಲ್ಲೂ ಸಂಭ್ರಮ. ಸ್ತ್ರೀಯರು ಆರತಿಯನ್ನು ಎತ್ತುತ್ತಿರುವರು. 
ಬುದ್ಧನ  ಪಕ್ಕದಲ್ಲಿ ರಾಜ ಶುದ್ಧೋದನ, ಮಗ ರಾಹುಲ ಇರುವರು. ಪಟ್ಟದ ಆನೆ, ಪಟ್ಟದ ಕುದುರೆ, ಚತುರಂಗಬಲ, ಪ್ರಜೆಗಳು, ದ್ವಿಜ ಸಮೂಹ, ಜಾಬಾಲಿ ವಾಸಿಸ್ಠ ಗುರುಗಳು ಎಲ್ಲರೂ ಇರುವರೆಂದು ಅಂಬಿಕೆ ವಿವರಿಸುವಳು. ಯಶೋಧರೆಗೆ ತನ್ನ ಆಣ್ಮ ಹೇಗಿದ್ದಾನೆಂದು ತಿಳಿಯುವ ಕಾತರ. ಅಂಬಿಕೆ ಬುದ್ಧ ನನ್ನು ವರ್ಣಿಸುವಳು.

ಶ್ರಾವಣದ ಸಮಯದ ತಾವರೆಗಳ ನಡುವೆ ರಾಯತಾವರೆಯಂತೆ ಕಂಗೊಳಿಸುತ್ತಿರುವನು. ಅವನು ಉಟ್ಟಿರುವ ದುಕೂಲವು ಯಶೋಧರೆಯ ಮನದ ಕಾಂತಿಯಂತೆ ಪ್ರಕಾಶಿಸುತ್ರಿರುವುದು. ಮುಖದಲ್ಲಿ ಮಂದಹಾಸವು ತಾನೇ ತಾನಾಗಿರುವುದು. ಕಣ್ಣುಗಳು ಹೊಳೆಯುತ್ತಿರುವವು. ಮುಕುಟದಲ್ಲಿ ಜಟೆಯು ಶೋಭಿಸುತ್ತಿದೆ ಎಂದು ಅಂಬಿಕೆ ವರ್ಣಿಸುವಳು.

ಅಂಬಿಕೆಗಿರುವ ಪುಣ್ಯ ತನಗಿಲ್ಲವಲ್ಲ ಎಂಬ ನೋವು ರಾಣಿಯನ್ನು ಕಾಡುತ್ತಿದೆ. ಸಂನ್ಯಾಸಿಯಾದ ಪತಿಯನ್ನು ಪತ್ನಿಯು ನೋಡಬಾರದೆನ್ಬುವುದು ಯಾವ ಧರ್ಮ? ಇದು ನಿಜಕ್ಕೂ ಧರ್ಮವೆ ? ಮನೆಗಳನ್ನು ಮನಗಳನ್ಬು ಹೃದಯಗಳನ್ನು ಸೀಳಿ ಕಣ್ಣೀರಲ್ಲಿ ಮುಳುಗಿಸುವ ಈ ಧರ್ಮ, ಮತಗಳೇತಕೆ ಬೇಕು? ಎಂದು ತೊಳಲುತ್ತಾಳೆ.

ಮುಂದೆ ಬರುತ್ತಿರುವರೆಂದು ಅಂಬಿಕೆಯಿಂದ ತಿಳಿಯುತ್ತದೆ. ಅದನ್ನು ವರ್ಣಿಸಿ ಹೇಳುವಳು ಅಂಬಿಕೆ. ಹೆಂಗಸರು ಆರತಿಯನ್ನು ಮಾಡುತ್ತಿರುವುದು, ಚಿಕ್ಕಮಕ್ಕಳನ್ನು ಎತ್ತಿಕೊಂಡು ಗುರುಗಳನ್ನು ತೋರುಸುತ್ತಿರುವುದು, ಪ್ರಜೆಗಳ ಕಡೆ ಕರುಣೆಯಿಂದ ಬುದ್ಧ ನೋಡುತ್ತಿರುವುದು ಎಲ್ಲ ವಿವರಗಳು ಬರುತ್ತವೆ.

ಎದೆಯಲ್ಲಿ ಅಷ್ಟೆಲ್ಲಾ ನೋವಿದ್ದರೂ ಸಹಿಸಿಕೊಳ್ಳುವಳು. ತನ್ನ ಪತಿ ಬರುತ್ತಿರುವ ಈ ಶುಭಘಳಿಗೆಯಲ್ಲಿ ತಾನು ಕಣ್ಣೀರು ಹಾಕುವುದು ಒಳ್ಳೆಯದಲ್ಲ ಎನ್ಬುವಳು‌ . ಬುದ್ಧನಿಗೆ ಅರ್ಪಿಸಲು ಹಣ್ಣು ಕಾಯಿ ಮುಂರಾದವುಗಳನ್ನು ಹರಿವಾಣದಲ್ಲಿ ಜೋಡಿಸಲು ಹೇಳುವಳು. ಮಂಗಳದ್ರವ್ಯಗಳನ್ನು ನನ್ನ ಪರವಾಗಿ ಅವರ ಪಾದಗಳಲ್ಲಿ ಅರ್ಪಿಸು ಎನ್ನುವಳು. ಆ ಸಮಯದಲ್ಲಾದರೂ ತನ್ನ ನೆನಪು ಮೂಡಬಹುದೇ ಎಂಬ ಆಸೆ ಅವಳಿಗೆ. ಪಾಪ...

ತನ್ನನ್ನೂ ಸಿಂಗರಿಸಲು ಹೇಳುವಳು. ಬಹು ದೂರ ಹೋಗಿದ್ದವರು ಈಗ ಹತ್ತಿರ ಬಂದಿರುವುದೇ ಸೌಭಾಗ್ಯ. ದೇಹನೈರ್ಮಲ್ಯ ಮನಸ್ಸನ್ನೂ ಚೇತನಗೊಳಿಸಲಿ. ಈ ಸಮಯದಲ್ಲಿ ಶೋಕದ ನಿಟ್ಟುಸಿರು ಬಾರದಿರಲಿ ಎನ್ನುವಳು.. ಆ ವೇಳೆಗೆ ರಾಹುಲನೂ ಅಂಬಾಪಾಲಿಯೂ ಬರುವರು.




ರಾಹುಲ__.  ಅಮ್ಮಾಜಿ, ನಿಮ್ಮ ನೋಡುವರೆ ಅಂಬಾಪಾಲಿ ಬಂದಿಹರು .
( ಎಂದು ಹೇಳಿ ಹೊರಟು ಹೋಗುವನು,)

ಯಶೋಧರಾ__   ಬರಬೇಕು. ನೀವೆ ಅಂಬಾಪಾಲಿ?

ಅಂಬಾ __  ಅಹುದು. ಆ ದಾಸಿ ನಾನೇ. ಬಹಳ ದಿನದಿಂದ  ಗುರುಪತ್ನಿಯಡಿಯ ಸೇವಿಸುವಾಸೆಯೊಳಗಿರ್ದು ಇಂದು ಆ ಪುಣ್ಯ ಕೈಸೇರೆ ಬಳಿಸಾರಿಹೆನು.

ಯಶೋಧರಾ__  ಗುರುಗಳಡಿಯನು ಸೇವಿಸುವ ನಿಮ್ಮ ನೋಡುವರದು ನಮ್ಮನ್ನರದು ಪುಣ್ಯ. ನೀವವರ ಪರಿವಾರ ; ನಾವು ಅವರಿಗೆ ಪೆರರು.

ಅಂಬಾ __  ನೀವರಿಯದಿಹ ಮಾತೆ?  ನಮ್ಮ ಗುರುದೇವರಿಗೆ ಮೂರು ಲೋ ಕದೊಳೆಲ್ಲ ಪೆರರೆಂಬರೇ ಇಲ್ಲ. ಜಗದ ಜೀವಿಗಳೆಲ್ಲ ಗುರುಗಳಿಗೆ ಒಂದೇ ಕುಟುಂಬ.

ಯಶೋಧರಾ__   ಅವರನು ಬಲ್ಲ ಎಲ್ಲರೂ ಇಂತೆ ನುಡಿಯುವಿರಿ. ನೀವವರಲ್ಲಿ ಉಪದೇಶ ಪಡೆದಿರಾ ?

ಅಂಬಾ __  ತಾಯೆ ನಾನಾರೆಂದು ಏನೆಂದು ನೀವು ಕಾಣಿರಿ. ನಾನು ಪೂರ್ವದಲಿ ನಾಗರ ಸ್ತ್ರೀಯಾಗಿ ಬಾಳಿದೆನು. ನಿಮ್ಮಂಥ ಪಾವನರು ಆ ಬಾಳಕಥೆಯ ಕೇಳ್ವುದು ಕೂಡ ಸರಿಯೆನಿಸಲಾರದು. ಇಂತಿರಲು ಒಂದು ದಿನ ಗುರುಗಳು ಅನಾಥ ಪಿಂಡಿಕನ ವನಕೈ ತಂದು ಧರ್ಮವನು ಬೋಧಿಸುತಲಿಹರೆಂಬ ನುಡಿ ಕೇಳಿ ನಾನಲ್ಲಿ ಹೋದೆನು. ದಾರಿ ತಿಳಿಯದ ಜನಕೆ ದಾರಿ ಯಾವುದು ಎಂದು ಅವರು ಹೇಳಿದ ಮಾತ ಕೇಳಿದೆನು. ಅಂದಿನಿಂದವರಡಿಯ ಸೇವೆಯಲಿ ಎಲ್ಲ ಉಪದೇಶಗಳ ಸಾರವನು ಕಂಡಿಹೆನು. ಉಪದೇಶ ಪಡೆವುದಕೆ ಎನಗಾವ ಅರ್ಹತೆ ? ವೇದಪಾರಗರಾದ ವಿಪ್ರರು, ಶಾಸ್ತ್ರದಲಿ ಈಸಿ ಕಡೆಸಾರಿರುವ ಪಂಡಿತರು, ಯೋಗದಲಿ ಕರಣಗಳ ನಾದಿರುವ ತವಸಿಗಳು, ಇವರೆಲ್ಲ ಗುರುಗಳಲ್ಲಿ ಉಪದೇಶ ಪಡೆಯುವರು. ಅಲ್ಪಜ್ಞೆ ಪತಿತೆ ಪಾಮರೆ ನಾನು ಉಪದೇಶ ಪಡೆವುದಕೆ ಏಸರವಳಾಗುವೆನು ? ಆದರೂ ಇದು ದಿಟವು.. ವಿಪ್ರರನು, ಶಾಸ್ತ್ರವೇತ್ತರನು ಯುಕ್ತಾತ್ಮರನು ಮುಂದೆ ನಡೆಯಿಸಬಲ್ಲ ನಮ್ಮ ಗುರು  ನಮ್ಮಂತ ಸಾನಾನ್ಯ ಜನರನೂ ಮುಂಬರಿಸಿ ಪೊರೆಯುವರು. ಒಂದೆ  ಮಾತನು ಆಡಿ ಒಂದೆ ನೋಟದಿ ನೋಡಿ 'ಯಾದ ದಾರಿಯಲಿ ನಡೆವುದೊಂದಲ್ಲದೆ ಇದೆಲ್ಲ ಬಾಳ್ವೆಯೂ ವ್ಯರ್ಥವೆದಂರಿಸುವರು ; ಉದ್ದಾರವಾಗುವುದು ಎಂತೆಂದು ತೋರುವರು. ಬಾಳಕೂಪದಲಿ ದುರ್ವೃತ್ತಿಪಂಕದೊಳಿರ್ದು ಇವರ ಕೃಪೆಯಿಂದ ಉದ್ಧೃತವಾದ ಹತ್ತಾರು ಸಾಸಿರದ ಜೀವದಲಿ ನನ್ನದೂ ಒಂದು.

ಯಶೋಧರಾ __  ಉಪದೇಶ ಪಡೆದ ಮಹಿಳೆಯರುಂಟೆ ಶಿಷ್ಯರಲಿ ?

ಅಂಬಾ __  ನಾನಾರನೂ ಅರಿಯೆ. ಮಗಧರಾಜರ ಕುವರಿ ಗೃಧ್ರಕೂಟದಲಿ ಶುಕ್ಲಾದೇವಿ ಎಂಬಾಕೆ ಏಕಾಕಿಯಾಗಿ ತಾಪಸ್ಯದೊಳಗಿಹರೆಂದು ನಮ್ಮ ಗುರುಗಳನು ಗುರುವೆಂದು ಕರೆಯುವರೆಂದು ಕೇಳಿಹೆನು. ಉಪದೇಶ ಪಡೆದಿಹರೊ ಇಲ್ಲವೊ ಕಾಣೆನು.

ಯಶೋಧರಾ __  ತಾಯಿ ಅಂಬಾಪಾಲಿ ನೀವೆಲ್ಲ ನಮ್ಮ ನಗರಕೆ ಬಂದುದೆಮಗೆ ಬಹು ಸಂತೋಷ.  ಕಪಿಲವಸ್ತುವನು ಶ್ರಾವಷ್ಟಿ ಎಂದೇ ಎಣಿಸಿ ಇಳಿವ ಬೀಡಾರವನು ನಿಮ್ಮ ಗೃಹವೆಂದೆಣಿಸಿ ಸತ್ಕಾರದಲಿ ಕಾಂಬ ಕೊರತೆಗಳ ಮನ್ನಿಸಿ ಆತಿಥ್ಯವನು ಕೊಂಡು ನಮ್ಮ ಸುಖಪಡಿಸಿರಿ.

ಅಂಬಾ __  ಅಪ್ಪಣೆ. ಎನಗಿನ್ನು ಸತ್ಕಾರಗಳೆ ಬೇಡ.  ತಮ್ಮನೂ ತಾವಿರುವ   ತಾವನ್ನು ನೋಡುವುದೇ ಕಣ್ಣುಗಳಿಗೊಂದು ಹಬ್ಬವಾಗಿದೆ ನನಗೆ. ಪ್ರೇಮದಲಿ ತಾವಾಡಿದೆರಡು ಮಾತಿನ ಕರುಣೆ ಕುಡಿಯಿಡುವ ಲತೆಗೆರೆದ ಕುಡಿಕೆ  ತಿಳಿನೀರಂತೆ ಒಲಿದೋಡಿಬಂದ ಹಸುಳೆಗೆ ಕೊಟ್ಟ ಹಾಲಂತೆ. ಆಸೆಯಲಿ ಬಳಿಸಾರಿದೀ ಎನ್ನ ಚೇತನಕೆ ಆಪ್ಯಾಯಮಾನವಾಗಿವೆ ದೇವಿ. ಗುರುಗಳಲಿ ಯಾವ ಕೃಪೆಯನು ಕಂಡೆನೋ  ಅದೇ ಕೃಪೆಯನು ಗುರು ಪತ್ನಿಯಲಿ ಕಂಡು ಆನಂದಿಸುತಿಹೆನು.

  ಯಶೋಧರಾ__   ನಿಮ್ಮೊಳಿಹ ಪ್ರೇಮವೇ ಇನಿತನೂ ತೋರುತಿದೆ. 
ಅಂಬಾ __  ಮರಳಿ ದರ್ಶನವ ಕೊಳ್ಳುವೆನು. 

ಯಶೋಧರಾ__   ಸಂತೋಷ. ಅಂಬಿಕೆ, ಕಟ್ಟೆಯನು ತಂದೆಯಾ ?
ಅಂಬಿಕೆ __  ಮಾಜೀ, ಇದೋ ತಂದೆ.  ( ತರುವಳು )
ಯಶೋಧರಾ __  ಕೊಂಡೊಯ್ದು ಅದನವರಿಗರ್ಪಿಸು. ನಾನು ಇಲ್ಲಿಂದಲೇ ವಂದಿಸುವೆನೆಂದರುಹು. 
( ಅಂಬಾಪಾಲಿ ಹೋಗುವಳು ) 
ಅಂಬಿಕೆ __  ಅಪ್ಪಣೆ ( ಎಂದು ಬಾಗಿಲಿಗೆ ಹೋಗಿ ಮರಳಿ ಬಂದು )  ಮಾಜಿ, ತಮ್ಮನು ನೋಡಲಿರಬೇಕು ಅಣ್ಣಯ್ಯ ಆನಂದರನು ಕರೆದು ತರುತಿಹರು. 
ಯಶೋಧರಾ __  ಬರಲಿ. ನೀ ನಡೆ.
######################

ಸಂಕ್ಷಿಪ್ತ ಗದ್ಯ ಸಾರಾಂಶ

ಯಶೋಧರಾ ಅಂಬಾಪಾಲಿಯನ್ನು ಸ್ವಾಗತಿಸುವಳು. ಅಂಬಾಪಾಲಿಯು ನಮಸ್ಕರಿಸುವಳು. ಬಹಳ ದಿನಗಳಿಂದ ಗುರುಪತ್ನಿಯನ್ನು ನೋಡುವ ಆಸೆಯಿತ್ತು. ಅದು ಇಂದು ನೆರವೇರಿತು ಎನ್ನುವಳು. ಸದಾ ಗುರುಗಳ ಸೇವೆಯಲ್ಲಿರುವ ನೀನೇ ಅವರ ಪರಿವಾರವೆಂದೂ ತಾನು ಪರಳು ಎಂದೂ ಯಶೋಧರಾ ನುಡಿಯುವಳು .ಅದಕ್ಕೆ ಜಗದ ಜೀವಿಗಳೆಲ್ಲ ಅವನವರೇ ಎಂದು ಉತ್ತರಿಸುವಳು.

ಅವರಲ್ಲಿ ಉಪದೇಶ ಪಡೆದಿರುವಿರಾ ಎಂದು ಅಂಬಾಪಾಲಿಗೆ ಪ್ರಶ್ನಿಸುವಳು ಯಶೋಧರಾ. ಅದಕ್ಕೆ ಅವಳು ತಾನು ನಾಗರಸ್ತ್ರೀ ಎಂದೂ, ಬುದ್ಧನ ಉಪದೇಶ ಕೇಳುತ್ತಾ ಕೇಳುತ್ತಾ ಅವನ ಶಿಷ್ಯೆಯಾದೆನೆಂದೂ ಹೇಳುವಳು. ಉಪದೇಶ ಪಡೆಯುವ ಅರ್ಹತೆ ತನಗಿಲ್ಲ. ಅದೆಲ್ಲ ವೇದಪಾರಂಗತರಿಗೆ, ವಿ ಪ್ರರಿಗೆ, ಪಂಡಿತರಿಗೆ, ತಪಸ್ವಿಗಳಿಗೆ ಸಲ್ಲುತ್ತದೆ. ನಾನು ಅಲ್ಪಜ್ಞೆ. ಪತಿತಳು, ಪಾಮರಳು ಎನ್ನುವಳು. ಆದರೂ ಗುರು ತನ್ನ ಮೇಲೆ ಕರುಣೆ ತೋರಿದರು. ಇದು ಸತ್ಯ.ಇವರ ಕೃಪೆಯಿಂದ ಉಧೃತವಾದ ಸಾವಿರಾರು ಜೀವಗಳಲ್ಲಿ ನಾನೂ ಒಬ್ಬಳು ಎನ್ನುವಳು.

ಉಪದೇಶ ಪಡೆದ ಮಹಿಳೆಯರೂ ಇರುವರೆ ಎಂದು ಕೇಳಿದ ಯಶೋಧರೆಯ ಪ್ರಶ್ನೆಗೆ ಅರಿಯೆನೆಂದು ಹೇಳುತ್ತಾ ಮಗಧರಾಜಕುವರಿ ಶುಕ್ಲಾದೇವಿ ಏಕಾಂಗಿಯಾಗಿ ತಪಸ್ಸಿನಲ್ಲಿ ಇದ್ದಾರೆ. ಉಪದೇಶ ಆಗಿದೆಯೋ ಇಲ್ಲವೋ ಗೊತ್ತಿಲ್ಲ ಎನ್ನುವಳು.

ಅಂಬಾಪಾಲಿಗೆ ಯಶೋಧರಾ ಉಪಚಾರದ ಮಾತುಗಳನ್ನು ಹೇಳುವಳು. ಪ್ರೀತಿಯಿಂದ ತನ್ನನ್ನು ಕಂಡು ಮಾತನಾಡಿಸಿದ್ದನ್ನು ತನ್ನ ಪುಣ್ಯವೆಂದು ಅಂಬಾಪಾಲಿ ಹೇಳುವಳು. ಚಿಗುರುತ್ತಿರುವ ಬಳ್ಳಿಗೆ ನೀರೆರೆದಂತೆ, ಒಲಿದು ಓಡಿಬಂದ ಮಗುವಿಗೆ ಹಾಲು ಕುಡಿಸಿದಂತೆ ಆಪ್ಯಾಯಮಾನವಾದ ನಿಮ್ಮ ಮಾತುಗಳು ನನಗೆ ಕೃಪೆಮಾಡಿದವು ಎಂದು ಹೊರಡಲು ಅಪ್ಪಣೆ ಬೇಡುವಳು.  ಅಂಬಿಕೆ ತಟ್ಟೆಯನ್ನು ಜೋಡಿಸಿ ತರುವಳು. ಅದನ್ನು ಗುರುಗಳಿಗೆ ಅರ್ಪಸು. ನಾನು ಇಲ್ಲಿಂದಲೇ ನಮಿಸುವೆನೆಂದು ಹೇಳುವ ಹೊತ್ತಿಗೆ ಆನಂದ ಬರುತ್ತಿರುವನೆಂದು ತಿಳಿಯುವುದು.  ಅವನು ಯಶೋಧರೆಯ ಸೋದರಳಿಯ.



(ಆನಂದ ರಾಹುಲರು ಬರುವರು.)

ಯಶೋಧರಾ__   ಬನ್ನಿ ಆನಂದ ಗುರುಗಳೆ
ಆನಂದ.__  ಗುರುಗಳಾನಂದ ಅತ್ತೆ ಪದಕೆ ನಮಿಪೆನು.
ಯಶೋಧರಾ __  . ಐದು ವರುಷದ ಹಿಂದೆ ಗುರುವೆಡೆಗೆ ಹೋಹಂದು ಯಾರಿಗೂ ಹೇಳದೆಯೆ ಹೊರಟುಹೋದಳಿಯನಿಗೆ ಇಂದು ಅತ್ತೆಯ ನೆನವು ಬಂದಿತೇ ? ಶುಭಮಸ್ತು. ಆನಂದ, ಕುಳ್ಳಿರು. ಸೌಖ್ಯವಾಗಿರುವೆಯಾ ? ಆಣ್ಮ ಸುಖವಾಗಿರುವರೇ ?

ಆನಂದ.__  ಅತ್ತೆ, ಅವರ ಸುಖ ಜನಕಾಗಿ ದುಡಿಯುವುದು ನಡೆಯುವುದು ನುಡಿಯುವುದು ಈ ಸುಖವನವರು ಪರಿಮಿತಿ ಮರೆತು ಪಡೆದಿಹರು

ಯಶೋಧರಾ  __ ಎಂದಾದರೂ ನಮ್ಮ ನೆನೆವರೇ ?

ಆನಂದ. __(ಸ್ವಲ್ಪ ಸಾವಕಾಶ ಮಾಡಿ)
ಆಗಾಗ ಅವರ ಬಾಲ್ಯದ ಮಾತನೊಮ್ಮೊಮ್ಮೆ ಹೇಳುವರು.  ಅಂಥ ವೇಳೆಯಲಿ ನೆನೆಯುವುದುಂಟು.

ಯಶೋಧರಾ  __ ನೆನೆವರೇ?
ತಂದೆಯನು ? ಪುತ್ರನನು ?

ಆನಂದ. __ ತಂದೆಯನು ಹಲವುಸಲ
ನೆನೆದಿಹರು ; ಪುತ್ರನನು ಒಮ್ಮೆ ನೆನೆದುದ ಬಲ್ಲೆ.
ಯಶೋಧರಾ__   ನನ್ನನ್ನು ?

ಆನಂದ.  __  ತಮ್ಮನ್ನು ?

 ಯಶೋಧರಾ__   ಅಹುದು, ನನ್ನನ್ನು.

-ಆನಂದ. __ ಕಂಡಂತೆ ತಮ್ಮ ಕುರಿತಾಡಿದುದ ನಾನರಿಯೆ. ಒಮ್ಮೊಮ್ಮೆ ಧರ್ಮಿಷ್ಠೆಯಾದ ಸತಿ ಎಂತಿಹಳು ಏನಗೆಯಳು ಎಂದು ವರ್ಣಿಸಿರುವುದ ಬಲ್ಲೆ. ಆಗ ತಮ್ಮನು ಕುರಿತು ನುಡಿಯುತಿಹರೆಂದೆನಗೆ ತೋರಿಹುದು

ಯಶೋಧರಾ  __ ಏನೆಂದು ಹೇಳಿಹರು?

ಆನಂದ.__  ಸಂಸಾರ ಏನೆಂಬುದನೆ ಕಾಣದಿಹನಾನು ಆ ನುಡಿಗೆ ಕಿವಿಗೊಟ್ಟುದಿಲ್ಲ. ಏನಂದರೋ ನೆನಪಿಲ್ಲ.

ಯಶೋಧರಾ__   ತಪಕೆ ಸಾರಿದವರೆನ್ನನು ನೆನೆಯಬಹುದೆಂತು ?

ಆನಂದ.__  ಅತ್ತೆ, ಅವರಾರಾತ್ರಿ ಮನೆ ಮಠವ ತೊರೆವಂದು ನೊಂದ ಪರಿಯನು ಕೇಳಿ ನಮ್ಮ ಮನ ಕರಗುವುದು.

ಯಶೋಧರಾ __  ನೊಂದರೇ ತಾವು ? ನಮ್ಮೆಲ್ಲರನು ನೋಯಿಸಿ ?

ಆನಂದ.__  ಜಗದ ಹಿತವನು ಸಾಧಿಸುವ ಕಾರ್ಯದಲ್ಲಿ ಗುರು ತಮ್ಮ ತನ್ನವರ ಸೌಖ್ಯವನು ಕಡೆಗಣಿಸಿದರು.

ಯಶೋಧರಾ __  ಇರುವ ಮನೆಯನ್ನು ಸುಟ್ಟು ಊರ ಬೆಳಗುವರಂತೆ.

ಆನಂದ. __ ಮನೆಯ ಸುಟ್ಟರೊ 
 ತಮ್ಮ ದೀಪವನು ಕೊಟ್ಟರೋ, ಊರ ಬೆಳಗಿದುದು ನಿಜ.

ಯಶೋಧರಾ __  ನೀನಿಂತು ಮಾವನಿಗೆ ವಹಿಸಿಕೊಂಡಾಡುವುದು ಸಹಜ. ಅವರೆಡೆಯಿರ್ದು ನಾವು ಮಾಡದೆ ಬಿಟ್ಟ ಶುಶ್ರೂಷೆಗಳನೆಲ್ಲ ಮಾಡುತಿಹೆ, ಸಂತೋಷ ; ಯಾರಿಂದಲಾದರೂ ಆಣ್ಮನಿಗೆ ಸೇವೆ ಸಂದೊಡೆ ಸಾಕು, ಬಹುಜನರು ಅವರನಾಶ್ರಯಿಸಿಹರೆ ?

ಆನಂದ.__  ಲೆಕ್ಕವಿಲ್ಲದ ಮಂದಿ.
ಅವರ ಹೆಸರನು ಕೇಳಿ ಮನೆ ಮಂದಿಯನು ಬಿಟ್ಟು ಹೊರಟುಬಂದವರೆನಿತು ! ಎಲ್ಲಿಯೋ ಬಂದವರು ಉಪದೇಶವನು ಕೇಳಿ ಊರಿಗೇ ಹೋಗದೆ ನಿಂದ ಜನರಿನ್ನೆನಿತು ! ಮನೆ ಮಠವ ಬಿಡದಂತೆ ಸಂಸ್ಕೃತಿಯದಂದುಗದ ಬಲೆಯ ಕಂಡಿಗಳಿಂದ ಕ್ಷಣ ಮಾತ್ರವಾದರೂ ತಲೆಯ ಹೊರಗಡೆಗಿಟ್ಟು ಬಿಡುಗಡೆಯ ಆಕಾಶವೆಂತಿಹುದು ಎಂಬುದನು

ಯಶೋಧರಾ__   ಹತ್ತು ಸಾಸಿರ ಮನೆಯ ಬೆಳಕುಗಳು ನಂದಿದುವು ; ಇಲ್ಲವೇ ಮಸಕಾದುವು. ಅಯ್ಯೋ ನನ್ನಂತೆ ಎಷ್ಟು ಸಾವಿರ ಮಂದಿ ನೋಂದರೋ. ಇದವೊಂದು ಯಶೋ ಹೆಮ್ಮೆ ಯೆಂದುಸುರುತಿಹೆಯೇ ನೀನು ! ಅದು ಸರಿಂಕೆ ಹೆಣ್ಣುಸುರಿಗಲ್ಲದಿದರುಮ್ಮಳದ ಅರಿವಹುದೆ ? ಎನಗೆ ರಕ್ಷಕರು ಬೇರೆಯ ಜನರು ಇರ್ದರು. ನೀನು ರಕ್ಷಿಸಲೆ ಬೇಕೆಂಬ ಜನ ಇರಲಿಲ್ಲ, ಆದರೂ ನಿಮ್ಮ ಮಾವನು ನೀನು ಹೋದಂದು ಅರಮನೆಗೆ ನೆರೆಮನೆಗೆ ಊರಿಗೆ ನಾಡಿಗೆ ಎನಿತು ಉಬ್ಬಸವಾಯ್ತು ! ಇದಕೆ ಮಿಗಿಲಿನ ಎನಿತ ಬೇಗುದಿಯೊಳೆನಿತು ಹೆಂಡಿರು ನೊಂದು ಬೆಂದರೊ ನಿಮ್ಮ ಉಪದೇಶದಲಿ ! ಇದನೇಕೆ ನೆನೆಯರಿ ? ನೋವ ಬೀಜವ ಬಿತ್ತಿ ಹುಲುಸಾದ ಬೆಳೆ ತೆಗೆದು ಬೇನೆಯನ್ನವ ಬಡಿಸಿ ಕಣ್ಣೀರುಗಳ ಕುಡಿಸಿ ಹೆಮ್ಮೆಪಡುತಿರುವಿರೇ ತಪಸಿಗಳು ? ಮನಸಿನಲಿ ಕಲ್ಮಷಗಳಿಹವೆಂದು ಮನೆಗಳನ್ನು ಬಿಟ್ಟೋಡಿ ಹೆಂಡಿರನು ಮಕ್ಕಳನು ಬೇಯಿಸಲು ತ್ಯಾಗವೇ ? ವನದೊಳಿಹ ಪೊದೆಗಳನು ಜಯಿಸುವೊಡೆ ಕಿಚ್ಚಿಕ್ಕಿ ಹುಲ್ಲೆ ಮರಿಗಳ ಸುಡುವ ನೀತಿಯಿದು.

(ಅಂಬಿಕೆ ಪ್ರವೇಶಿಸುವಳು.)
ಅಂಬಿಕೆ __ಏನಾಯ್ತು ? ಇಷ್ಟು ಬೇಗನೆ ಬಂದೆ ?
ಅಂಬಿಕೆ  __ (ಆತುರದಿಂದ) ಅಮ್ಮಾಜಿ, ತಾವು ಗುರುಗಳ ನೋಡಬಹುದಂತೆ
ಯಶೋಧರಾ__   ಅಹುದೆ, ( ಎಂದು ಸಂಭ್ರಮದಿಂದೆದ್ದು ಮತ್ತೆ ಕುಳಿತು } ಯಾರು ಹೇಳಿದರು?

ಅಂಬಿಕೆ  __ ಗುರುದೇವರೇ ಹೇಳಿದರು.
ಯಶೋಧರಾ __  ಏನು ನಡೆಯಿತು ಹೇಳು
ಅಂಬಿಕೆ __  ಹರಿವಾಣವನತೋರಿಹುದು
 ಬಳಿಗೆ ಹೋದೆನು. ಸಾರಿಪುತ್ರರಿಗೆ ಗುರುಗಳು ಏನೋ ತಿಳುಹುತ್ತಿರ್ದರು. ತಟ್ಟೆಯನು ಅವರ ಮುಂದಿಟ್ಟು ಮಂಡಿಯೂರಿದೆ ನಾನು. ಅವರದಕೆ ಒಳ್ಳಿತಾಗಲಿ ಎಂದು, ಏನು ಇದು ಅಂಬಿಕೆ, ಎಂದು ಕೇಳಿದರು. ನಮ್ಮರಸಿಯರು ತಮ್ಮೆಡೆಗೆ ಈ ಉಪಾಯನಗಳನ್ನು ಕಳುಹಿರುವರೆಂದೆನು..

*********************************
ಸಂಕ್ಚಿಪ್ತ ರೂಪ

ಆನಂದನಿಗೆ ಯಶೋಧರಾ ಅತ್ತೆಯಾಗಬೇಕು. ಅವನು ಬುದ್ಧನೊಂದಿಗೆ ಇದ್ದುಬಿಟ್ಟಿದ್ದ. ಈಗ ಇವಳನ್ನು ನೋಡಲು ಬಂದಿದ್ದಾನೆ. ಅವನ ಮೂಲಕ ತನ್ನ ಆಣ್ಮನ ಕ್ಷೇಮ ಸಮಾಚಾರ ತಿಳಿಯುವ ಕಾತರ ಇವಳಿಗೆ. ತನ್ನನ್ನು, ಮಗನನ್ನು ನೆನಪು ಮಾಡಿಕೊಳ್ಳುವರೇ ಎಂದು ಕೇಳುತ್ತಾಳೆ. ಆತನೊಂದಿಗೆ ಬಹಳ ಜನ ಶಿಷ್ಯರು ಇರುವ ಬಗ್ಗೆ ಕೇಳುತ್ತಾಳೆ. ಸಾವಿರಾರು ಜನ ಮನೆಯನ್ನು ತೊರೆದು ಬಂದು ಗುರುಗಳ ಅರಿವಿನ  ಉಪದೇಶದಲ್ಲಿ  ಇರುವರೆಂದು ಆನಂದ ಹೇಳಲು ಸಾವಿರಾರು ಮನೆಗಳ ದೀಪಗಳು ಆರಿದವು ಎಂದು ವ್ಯಥೆಯಿಂದ ಹೇಳುವಳು. ಅವಳ ಬಗ್ಗೆ ನಮ್ಮಲ್ಲಿ ಮೂಡುವ ಕನಿಕರಕ್ಕೆ ಕೊನೆಯಿಲ್ಲ. ಆನಂದನು ಗುರುಗಳು ತಮ್ಮ ಹುಟ್ಟೂರನ್ನು ಆಗಾಗ್ಗೆ ನೆನಪಿಸಿಕೊಂಡು ಹೊಗಳಿದ್ದನ್ನು ಹೇಳುವನು. 

ಹೆಂಡತಿಯ ಬಗ್ಗೆ ನೇರವಾಗಿ ಏನನ್ನೂ ಹೇಳದಿದ್ದರೂ ಪರೋಕ್ಷವಾಗಿ ಅವಳು ಉತ್ತಮ ಸತಿಯೆಂದು ಹೇಳಿದ್ದನ್ನು ನೆನಪು ಮಾಡಿಕೊಂಡು ಹೇಳುವನು. ಸಂಸಾರ ಎಂದರೆ ಏನೆಂದು ತಿಳಿಯದ ತಾನು ಆ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಎನ್ನುವನು. ಅವರಿಗಾಗಿ ಮನೆ ಮಠ ತೊರೆದು ಹೋದವರ ಮನೆಗಳಲ್ಲಿ ನೊಂದ ಹೆಣ್ಣುಗಳ, ವೃದ್ಧ ತಾಯಿ ತಂದೆಯರ ಅಳಲನ್ನು ಕೇಳುವವರಾರು ಎಂದು ಯಶೋಧರಾ ಅಳಲುವಳು. ಆನಂದನಿಗೆ ತನ್ನ ಮಾವನ ಬಗ್ಗೆ ಹೆಚ್ಚಿನ ಗೌರವ. ಅವನ ಉಪದೇಶ ಕೇಳಿ ಬಂದವರು ಮತ್ತೆ ಮನೆಯ ಬಗ್ಗೆ ಚಿಂತಿಸಲಿಲ್ಲ ಎನ್ನುವನು.

ಹತ್ತು ಸಾವಿರ ಮನೆಗಳ ದೀಪಗಳು ನಂದಿದವು ಇಲ್ಲವೇ ಮಂಕಾದುವು ಎಂದು ಯಶೋಧರಾ ನೊಂದುಕೊಂಡು ನುಡಿಯುವಳು. ಹೆಣ್ಣಿನ ಮನದ ಅಳಲು ಅವರೇನು ಬಲ್ಲರು ಎಂದು ನಿಟ್ಟುಸಿರು ಬಿಡುವಳು. ನೋವಿನ ಬೀಜ ಬಿತ್ತಿ ಹುಲುಸಾದ ಬೆಳೆ ತೆಗೆದು ಬೇನೆಯ ಅನ್ನ ಬಡಿಸಿದವರಿಗೇನು ಗೊತ್ತು ಹೆಣ್ಣುಗಳ ಒಳಮನದ ಉಮ್ಮಳ ಎಂದು ಕೇಳುವಾಗ ಅವಳು ಎಲ್ಲ ನೊಂದ ಹೆಣ್ಣುಗಳಿಗೆ ಪ್ರತಿನಿಧಿಯಾಗಿ ಕಾಣುವಳು.

ಅಷ್ಟರಲ್ಲಿ ಅಂಬಿಕೆ ಬಂದು ಗುರುಗಳನ್ನು ಯಶೋಧರಾ ನೋಡಬಹುದು ಎಂಬ ಶುಭವಾರ್ತೆಯನ್ನು ಹೇಳುವಳು. ಅದನ್ನು ಕೇಳಿ ಯಶೋಧರಾ ಸಂಭ್ರಮಪಟ್ಟರೂ ಸಂಯಮದಿಂದ ವಿವರವಾಗಿ ಹೇಳು ಎಂದಾಗ ಅಂಬಿಕೆ ಗುರುಗಳಿಗೆ ನೀವು ಕಳಿಸಿದಿರೆಂದು ಹರಿವಾಣವನ್ನು ಕೊಟ್ಟೆ ಎನ್ನುವಳು.



ಯಶೋಧರಾ__   ಅಡಿಗಳಿಗೆ ಅರ್ಪಿಸಿದರೆನ್ನ ಬಾರದಿಇತ್ತೆ ?

ಅಂಬಿಕೆ__   ಹೆಣ್ಣಾದ ಮಾತ್ರಕೇ ಅಷ್ಟು ಅಗ್ಗವೆ ಮಾಜಿ ? ಅಡಿಯ ನುಡಿ ಅರ್ಪಣೆಯ ನುಡಿ ನಿಮಗೆ ಇಷ್ಟವಿರೆ ಸತಿಯಾದ ನೀವು ಆಡಿರಿ. ನಾನು ಆಡಲೆ ? ನೀವೆನಗೆ ರಾಣಿ. ನಿಮ್ಮನು ಕಡಿಮೆ ಮಾಡಲೆ ? ಈ ಉಪಾಯನಗಳನು ಕಳುಹಿರುವರೆಂದೆನು. ಶುಭಮಸ್ತು ಎಂದರು. ಕಳುಹಿದುದು ನೀವೆಂದು ತಿಳಿಯಿತೋ ಇಲ್ಲವೋ ನಾ ಕಾಣೆ. ಇದನೆಂತು ಅರಿಯಿಸುವೆನೋ ಎಂದು ನಾನು ಚಿಂತಿಸುತ್ತಿರಲು, ದೂರದೊಳಗಿರ್ದ ಅಂಬಾಪಾಲಿ ಗುರುಗಳಿಗೆ, ದೇವಿ ಗುರುಪತ್ನಿ ಇಲ್ಲಿಗೆ ಬಂದು ಗುರುಗಳನ್ನು ನೋಡುವುದು ಸರಿಯೊ ಸಲ್ಲದೊ ಎಂಬ ಶಂಕೆಯಲಿ ತಾವು ತರಲಿಲ್ಲ, ಕಳುಹಿರುವರು, ಎಂದರು. ಗುರು ಅದಕೆ, ಯಾರಾದರೂ ಇಲ್ಲಿ ಬರಬಹುದು, ನಾವು ಹೊಗಳುತಲಿರುವ ಧರ್ಮ ಸಮವರ್ತ್ಮದಲಿ, ಇವರು ಬರಬಾರದು, ನೋಡಬಾರದು ಅವರು, ಎಂಬ ನಿಯಮನ ನಿಷೇಧಗಳಿಲ್ಲ, ಎಂದರು.

ಆಗ ಅಂಬಾಪಾಲಿ ನನ್ನ ಒಂದೆಡೆಗೊಯ್ಯ,  ಸಾರಿಪುತ್ರರ ನಾನು ಕೆಲಕೆ  ಓಡಿ ಬಂದೆನು ಮಾಜಿ,

(ಯಶೋಧರೆ ಸುಮ್ಮನಿರುವಳು.)

ಸುಮ್ಮನಿರುವಿರೆ ಮಾಜಿ, ತಳುವಲೇತಕೆ ?

ಯಶೋಧರಾ__   ಆಣ್ಮ ಬರಹೇಳು ಎಂದರೇ?

ಅಂಬಿಕೆ__   ಬರಲು ತಪ್ಪಿಲ್ಲವೆಂದರು ಮಾಜಿ.

ಯಶೋಧರಾ__  ಆನಂದ. ಅಣ್ಣನನು ಅಲ್ಲಿ ನೋಡಲೆ ?

ಆನಂದ __   ಅದಕೆ ಏನಡ್ಡಿ ?

ಯಶೋಧರಾ__   ಬರಲಿ ಎಂದೆನಲಿಲ್ಲ. ಬರಹೇಳು ಎನಲಿಲ್ಲ ; ಬರಲು ತಪ್ಪಿಲ್ಲವೆಂದರು. ಎಂತು ಹೋಗುವೆನು? ಹೋಗಿ ಎದುರಲಿ ನಿಲಲು ನುಡಿಸುವರೊ ನುಡಿಸದು ಯಾವ ಧೈರ್ಯದೊಳವರ ಬಳಿಸಾರಿ ನಿಲ್ಲಲಿ ?

ಆನಂದ__.  ನುಡಿಸದಿರುವರೆ ಅತ್ತೆ ? ತನ್ನವರ ಮನಗಳನ್ನು ಸಂತೋಷಪಡಿಸಲೆಂದೇ ನೂರು ಯೋಜನವ ನಡೆದುಬಂದಿಹರರಲ್ತೆ ?

ಯಶೋಧರಾ __  ನೂರು ಯೋಜನದಗಲ ಸಾಗರಕೆ ಸೇತುವೆಯ ಕಟ್ಟಿ ಸೇನೆಯ ನಡೆಸಿ, ಪ್ರಿಯೆಯನುಳಿದಿರಲಾರೆನೆಂದು ಬಹು ಹಂಬಲಿಸಿ ಸತಿಗಾಗಿ ಹಗೆಗಳನ್ನು ಸದೆದ ಸಾಕೇತದಲ್ಲಿ ಸೀತೆಯನು ಬಾರೆಂದು ಕರೆಕಳುಹಿ ಬಂದಂದು ಮೊಗವನೊಂದೆಡೆಗೆ ತಿರುಹಿದನಂತೆ. ಆನಂದ, ಈ ಕತೆಯನೀ ಕೇಳಿ ಅರಿಯೆಯಾ? ಸತಿಗಾಗಿ ಇನಿತುಮಾಡಿದನೆಂದು ಜನ ಎಂದು ನಾಣ್ಕವಿದುವಂತೆ. ಆತನ ವರ್ತನೆಯ ನೋಡಿ ವಶಿಯೆಂದು ಲೋಕ ಮೆಚ್ಚಿತು. ಸತಿಯ ಗತಿಯೇನು? ಗಂಡು ನಾಚಿತು ಅಣ್ಣ, ನಾಣದೇ ಹೆಣ್ಣು? ಇಲ್ಲವೇ ತನ್ನುಡೆಯನಿವನು ಧರಿಸಿದನೆಂದು  ಗಂಡುಡೆಯ ತಾನು ಧರಿಸುವುದು ತರವಪ್ಪುದೋ? ನೂರು ಯೋಜನ ದೂರ ದೇಶದಂತರವ ಕಳೆದವರು ಮನಸು ಮನಸಿನಮಧ್ಯದಭ್ಯಂತರವನಂತೆ ಉಳುಸಿಕೊಂಡಿರಬಹುದು.

ಅಂಬಿಕೆ __  ಅಮ್ಮಾಜಿ, ಈ ಮೊದಲು ನೋಡಲಾಗದೆ ಎಂದು ನೊಂದಿರೇ. ನೋಡುವುದು ದೋಷವಲ್ಲೆಂಬರ ? ಬಂದು ನೋಡಿರಿ. 

ಯಶೋಧರಾ__ನೋಡುವೆನು ಅಂಬಿಕೆ__. ಎಲ್ಲಿಯಾದರು ಕುಳಿತು ಮರೆಯಿಂದ ನೋಡುವೆನು. ಬಳಿಗೇಕೆ ಸಾರಲಿ ?

ಆನಂದ__ ಇಂತೇಕೆ ನೆನೆಯುವಿರಿ ಅತ್ತೆ ? ಬರಬೇಕೆಂದೆ ಗುರುಗಳಭಿಮತವೆಂದು ತೋರುವುದು.

ಯಶೋಧರಾ__   ಆನಂದ ಅಭಿಮತವನೂಹಿಸುವೆವೇಕೆ ? ಎನ್ನಾಣ್ಮನನು ನೋಡಬಹುದೆಂದಾಯ್ತು. ಸಾವಿರದ ಗುಂಪಿನಲಿ ಎಲ್ಲಿಯೋ ಯಾವಾಗಳೇ ಸೇರಿ ನೋಡುವೆನು. ಎಲ್ಲರಂತಲ್ಲ, ಪೂರ್ವಾಶ್ರಮದ ಸತಿ, ಎಂದು ಕೃಪೆಯ ತೋರುವುದಾಗೆ ಇಲ್ಲಿಗೇ ಬಿಜಗೆಯ್ದು  ನನ್ನ ಸೇವೆಯ ಕೊಳಲಿ.

ಅಂಬಿಕೆ __ಇಂತೆಂಬರೇ ಮಾಜಿ ?

ಯಶೋಧರಾ__   ಏನೆಂದೆನಂಬಿಕೆ ? ನಗರಿಗೈತಂದಿಹರು; ಅರಮನೆಗೆ ಬಂದಿಹರು ; ನೋಡುವುದು ತಪ್ಪಲ್ಲ ; ಇಲ್ಲಿ ಬರುವುದು ತಪ್ಪೆ, ಕಪ್ಪವೆ ? ಬರಬೇಕು. ನಾನೊಂದು ವಸ್ತುವೆಂದವರು ಎಣಿಸುವುದಾಗೆ ನಾ ಹೇಳಲೇಕೆ ? ತಾವೇ ಇಲ್ಲಿ ಬರುವರು ; ನೋಡುತ್ತಿರು.

ಆನಂದ __ಅತ್ತೆ, ಗುರುಗಳಿಗೆ ನಿಮ್ಮರ್ಥವನು ಯಾರಾದರೂ ಹೇಳಬೇಕು ಹೇಳದೆ ಇರಲು ಬರುವರೋ ಇಲ್ಲವೋ ?

ಯಶೋಧರಾ__   ನೀ ಹೇಳು ಆನಂದ. ಅತ್ತೆಯಾಗಿಹ ನಾನು ಅಳಿಯನಾಗಿಹ ನೀನು ಎಳೆಯತನದಿಂದಲೂ ಜೊತೆಯಲೇ ಬೆಳೆದೆವು. ವಾವೆಯಲಿ ಚಿಕ್ಕಮ್ಮ, ಬೆಳೆದುದರೊಳಕ್ಕಯ್ಯ, ಯುವರಾಣಿಯಾದಂದು ಅತ್ತೆ, ಇನ್ನಿಗಳೋ ಗುರುವಿನಂದಿನ ಪತ್ನಿ ; ಇನಿತು ವಿಧದಲಿ ನಾನು ನಿನ್ನ ಸೇವೆಗೆ ಪಾತ್ರಳಾಗಿಹೆನು. ಗುರುಗಳಿಗೆ ನನ್ನ ಅಭಿಮತವ ತಿಳುಹುವುದ ನೀ ಕೈಕೊಂಡು ಉಪಕಾರಮಾಡು.

ಆನಂದ__.  ಆಗಲಿ, ಅತ್ತೆ, ತಿಳುಹುವೆನು. ಅಂಬಿಕೆ  __ ಊಳಿಗದ ಹೆಣ್ಣು ಮಾಡುವುದೊಂದು ಅರಿಕೆಯಿದೆ. 

ಆನಂದ.__  ಹೇಳು.

ಅಂಬಿಕೆ__   ಗುರುಗಳಿಗೆ ಈ ಮಾತನರುಹುವುದರಲಿ ಅಪಚಾರವಾಗದಿರಬೇಕು.

ಯಶೋಧರಾ__   ಕೇಳಾನಂದ, ಹೆಣ್ಣಾದ ಮಾತ್ರಕೆ ಅಗ್ಗವೇ ಎಂದವಳು ಈಗ ಅಪಚಾರಕಂಜುವಳು. 

ಅಂಬಿಕೆ  __ ಆಗಣಮಾತು ತಗ್ಗಿ ನುಡಿದುದು ತಾಯಿ. ಈಗ ಕಳುಹುವ ಮಾತು ಸೆಟೆತು ನಿಂತಿರುವಂತೆ ತೋರುವುದು.

ಯಶೋಧರಾ __  ಆನಂದ, ಆಣ್ಮನಿಗೆ ನನ್ನಬಿನ್ನಹವ ಸಲ್ಲಿಸಿ ಮಾತು ದರ್ಪದಲಿ ನುಡಿದುದಲ್ಲೆಂದರುಹು. ಇದು ನಿಜ. ಮೆಲುಹು ಮರೆಸಿದ ಬಿರುಸು ಮೆಲುಹಾಗಿ ತೋರುವುದು. ಎನಿಸು ಮೆಲುಹಾದರೂ ಮೇಲೆ ಬಿರುಸನು ಹೊದೆಯೆ ಬಿರುಸಾಗಿ ಕಾಣುವುದು. ಎನಗಹಂಕೃತಿಯಿಲ್ಲ. ಆಣ್ಮನಿಗೆ ಬೇಡವಾದೆನೆ ಎಂಬಬ ಬೇನೆಯಲಿ ನುಡಿದಿಹೆನು. ಸರಿಯಾಗಿ ಬಿನ್ನಯಿಸು.

ಆನಂದ.__  ಅಪ್ಪಣೆ.

**************************"*******

ಸಂಕ್ಷಿಪ್ತ ಸಾರಾಂಶ

ಅಂಬಿಕೆ ಗುರುಗಳಿಗೆ ಕೊಟ್ಟೆ ಎಂಬುದನ್ನು ಪಾದಗಳಿಗೆ ಅರ್ಪಿಸಿದೆ ಎಂದು ಹೇಳಬೇಕು ಎಂದು ಯಶೋಧರಾ ತಿದ್ದುವಳು. ಪತಿಯ ಮೇಲಿನ ಗೌರವ, ಪ್ರೀತಿ ವ್ಯಕ್ತವಾಗುತ್ತದೆ. ಅದಕ್ಕೆ ಅಂಬಿಕೆಯು ರಾಣಿಗೆ ತಕ್ಕಂತೆ ಹೇಳಿದ್ದೇನೆ ಎನ್ನುವಳು. ಆಣ್ಮನಿಗೆ ತಾನು ಕಳಿಸಿದ್ದು ಎಂದು ತಿಳಿಯಿತೇ ಇಲ್ಲವೇ ಎಂಬ ಆತಂಕ ರಾಣಿಗೆ. ಅಂಬಾಪಾಲಿಯಿಂದ ಅದು ತಿಳಿಯಿತಲ್ಲದೆ ಗುರುಪತ್ನಿಯು ಗುರುಗಳನ್ನು ನೋಡಲು ಬಯಸಿದ್ದಾರೆ ಎಂದೂ ತಿಳಿಯಿತು ಎನ್ನುವಳು ಅಂಬಿಕೆ.


ಬರಲಿ ಎನ್ನಲಿಲ್ಲ. ಬರಬಹುದು ಎಂದರು ಎಂದು ತಿಳಿದಾಗ ಯಶೋಧರೆಗೆ ನೋವು. ಗುರುಗಳ ಧರ್ಮದಲ್ಲಿ ಎಲ್ಲರೂ ಒಂದೇ. ಅವರು ಬರಬಾರದು ಇವರು ಬರಬಾರದು ಎಂಬುದಿಲ್ಲ ಎಂದು ಅವರು ಹೇಳಿದ್ದನ್ನು ಅಂಬಿಕೆ ತಿಳಿಸುವಳು.


ಆನಂದನ ಸಲಹೆ ಕೇಳಿದಾಗ ಹೋಗಲು ಅಡ್ಡಿಯಿಲ್ಲ ಎನ್ನುವನು. ಆದರೆ ಹಿಂದೆ ಶ್ರೀರಾಮ ರಾವಣನನ್ನು ಕೊಂದು ಸೀತೆಗೆ ಬರಲು ತಿಳಿಸಿ ಅವಳು ಬಂದಾಗ ಬೇರೆಡೆ ಮುಖ ತಿರುಗಿಸಿ ನಿರಾಕರಿಸಿದ ಸಂಗತಿ ನೆನಪಿಸುವಳು. ತನ್ನನ್ನು ತನ್ನಾಣ್ಮ ನುಡಿಸುವರೊ ಇಲ್ಲವೊ ಎಂಬ ಚಿಂತೆಗೆ ಆನಂದ ಸಮಾಧಾನ ಹೇಳುವನು. ಆದರೂ ಅವಳಿಗೆ ಆತಂಕ. ಹೆಣ್ಣು ಎಷ್ಟಾದರೂ ಹೆಣ್ಣೇ. ಗಂಡುಡುಗೆ ತೊಟ್ಟಮಾತ್ರಕ್ಕೆ ಗಂಡಾಗುವುದಿಲ್ಲ. ಗಂಡನಿಗೆ ಮನದಲ್ಲಿ ತನ್ನ ಬಗ್ಗೆ ಯಾವ ಭಾವನೆ ಇದೆಯೋ ಎಂದು.


ಅಂಬಿಕೆಯು ತನ್ನರಾಣಿಯ ಮನದ ದುಗುಡ ಕಂಡು ಆಗ ಅಷ್ಟು ಕಾತರದಿಂದ ದರ್ಶನಕ್ಕೆ ಹಂಬಲಿಸಿದವರು ಈಗ ಅವರೇ ಬರಲು ಹೇಳಿದಾಗ ಚಿಂತಿಸಬಹುದೆ ಎನ್ನುವಳು. 


ಎಲ್ಲಿಯಾದರೂ ಮರೆಯಲ್ಲಿ ಕುಳಿತು ನೋಡಿದರಾಯಿತು ಎಂದುದಕ್ಕೆ ಆನಂದನೂ ಒತ್ತಾಯಿಸುವನು. 


ಸಾವಿರದ ಗುಂಪಿನಲ್ಲಿ ನಾನೂ ಒನ್ನಳು ಎಂದಾದರೆ ಎಲ್ಲಿಯೋ ಮೂಲೆಯಲ್ಲಿ ಕುಳಿತು ನೋಡಿದರಾಯಿತು. ತನ್ನ ಪೂರ್ವಾಶ್ರಮದ ಸತಿ ಎಂಬ ಭಾವ ಇದ್ದರೆ ಅವರೇ ಇಲ್ಲಿಗೆ ಬರಲಿ ಎನ್ನುವಳು. ಅಷ್ಟರಮಟ್ಟಿಗೆ ಅವಳ ನೋವಿನ ಆಳ ಇದೆ. ಇವರಿಬ್ಬರಿಗೆ ಆಶ್ಚರ್ಯ. 


ನೂರಾರು ಯೋಜನ ಬಂದವರಿಗೆ ಮನಸಿಗೆ ಹತ್ತಿರವಾದವರ ಬಳಿಗೆ ಬರಲು ಕಷ್ಟವೆ? ಅದಕ್ಕೆ ಆನಂದನು ಗುರುಗಳಿಗೆ ನಿಮ್ಮ ಅಂತರಾರ್ಥವನ್ನು ಯಾರಾದರೂ ಹೇಳಬೇಕು.  ಇಲ್ಲದಿದ್ದರೆ ಅವರಿಗೆ ತಿಳಿಯುವುದಾದರೂ ಹೇಗೆ ಎನ್ನಲು ಅವನೇ ಆ ಕೆಲಸ ಮಾಡಬೇಕು ಎಂದು ತಿಳಿಸುವಳು. ಅದಕ್ಕವನು ಒಪ್ಪುವನು.

 ಅಂಬಿಕೆ ಹೇಳುವುದನ್ನು ಹಿತಕರವಾಗಿ ಬಿರುಸಿಲ್ಲದೆ ಹೇಳಲು ಕೇಳಿಕೊಳ್ಳುವಳು.

ಯಶೋಧರೆ ಅಚ್ಚರಿಯಿಂದ ಅಂಬಿಕೆಯನ್ನು ನೋಡುವಳು.  ಮತ್ತೆ ಅವಳ ಮನವರಿತು ಹೇಳುವಳು.  ಒಳಗಿನ ವಿರುಸವನ್ನು ಮೃದು ಮರೆಸಿದಾಗ ಮೃದುವಾಗಿಯೇ ತೋರುವುದು ಎಂದು. ಮೇಲೆ ಬಿರುಸಿದ್ದರೂ ಒಳಗೆ ಮೃದು ಇರುವುದು ಎನ್ನುತ್ತ ಆನಂದನಿಗೆ  ಆಣ್ಮನಿಗೆ ಬೇಡವಾದೆನೆ ಎಂಬ ನೋವಿನಲ್ಲಿ ನುಡಿದಿರುವುದಾಗಿ ತಿಳಿಸು ಎನ್ನಲು ಅವನು ಅಪ್ಪಣೆ ಎಂದು ಹೊರಡಲು ಅನುವಾಗುವನು.



ಸ್ಥಾನ ೬

( ಯಶೋಧರೆಯ ಅಂತಃಪುರ, ಯಶೋಧರೆ, ಅಂಬಿಕೆ )

ಅಂಬಿಕೆ __  ನೀವು ಹೇಳಿದ ಮಾತ ಆನಂದರಿಂದ ಗುರು ನಿನ್ನೆಯೇ ಕೇಳಿ ತಿಳಿದಿರಬೇಕು. ಆದರೂ ಬರುವರೋ ಇಲ್ಲವೋ ತಿಳಿದಿಲ್ಲ.

ಯಶೋಧರಾ  __ ಇದುವರೆಗೆ
ಬರಲಿಲ್ಲವೆಂದು ತಿಳಿದಿಹುದಲ್ಲ : ಸಾಲದೆ?

ಅಂಬಿಕೆ __  ಅಮ್ಮಾಜಿ, ನೀವು ಕೋಪಿಸಬೇಡಿ. ದಾಸಿಗಿದು ಅಧಿಕಪ್ರಸಂಗವೆನಬೇಡಿ. ಈ ಮಧ್ಯಾಹ್ನ ಊರಜನಕುಪದೇಶ ಹೇಳುವರು ಗುರುಗಳು ಸಜ್ಜೆಯಲಿ ಕುಳಿತು ಬೋಧಿಪರಂತೆ. ಪಕ್ಕದಲ್ಲಿ ಚಿತ್ರಶಾಲೆಯ ಬಾಗಿಲೆಡೆ ತೆರೆಯ ಮರೆಯಿಂದ ನೀವು ಅವರನು ನೋಡಿ, ಮಾಜಿ. ನಾಚಿಕೆ ಬೇಡ. ಹತ್ತು ವರುಷದ ದಿವಸ ಆಗಲಿದ್ದು ಬಳಿಸಾರಿ ಒಂದು ಮನೆಯಲೆ ಇರುತ ಪತಿಯ ನೋಡದೆ ಈ ಯಾವ ದೈವಕೆ ಪ್ರೀತಿ? ನೋಡುವರೆ ಆಸೆ ಇದೆ. ನೋಡಬಹುದೆಂದಿಹರು ; ಇನ್ನು ಬಿಡಲೇಕೆ?

ಯಶೋ.ಧರಾ  __    ಎನ್ನಂತೆ ಆಣ್ಮನೂ ಹತ್ತು ವರುಷದ ದಿವಸ ಅಗಲಿದ್ದು ನಾನಿರುವ ತಾಣಕೇ ಬಂದಿಹರು. ಆದರೂ ನೋಡಬೇಕೆಂಬಾಸೆಯಲಿ ಸಿಲುಕಿ ತೊಳಲದಿರುವರು ನೋಡು. ಇವರ ಸತಿಯಾದವಳು ಇವರಂತೆ ದೃಢಚಿತ್ತಳಾಗಿ ಇರಬಾರದೇಕೆ ? ಕೇಸರಿಗೆ ಸತಿಯೆನಿಸಬೇಕೆಂಬ ಜೀವದೆದೆ ಹರಿಣಿಯವೊಲಂಜುಕುಳಿಯಾಗಿಹುದು ತಕ್ಕುದೇ?
ಆಸೆಯಿದೆ, ಅವಕಾಶವಿದೆ: ಆದರಾಸೆಯನು ಮುಚ್ಚು ಮರೆಯಲಿ ಇಂತು ಸಲಿಸುವುದು ಸರಿಯೆಂದು ತೋರದಿದೆ. ಇದರಿಂದ ನಾನಂತು ಮಾಡೆನು.

( ಬಾಗಿಲಲ್ಲಿ ಅಂಬಾಪಾಲಿ ಕಾಣುವಳು )
ಬನ್ನಿ ಅಂಬಾಪಾಲಿ

ಅಂಬಾಪಾಲಿ__   ವಂದಿಪೆನು  ದೇವಿಯರೆ, ಗುರುದೇವರಿತ್ತಲೈತಹಲಿಹರು. ಅದ ತಮಗೆ ಅರುಹಬಂದೆನು.
ಯಶೋಧರಾ __  ತಾಯಿ, ತಂಗಿ, ಅಂಬಾಪಾಲಿ, ಎಂಥ ಸಂತಸದ ವಾರ್ತೆಯನು ತಂದು ಅರುಹಿದಿರಿ.  ಈ ಹಾರವನು ಕೊಳ್ಳಿರಿ. ನನ್ನಸಂತಸವ ಇಮ್ಮಡಿಸಿ.

ಅಂಬಾಪಾಲಿ__   ಗುರುಗಳ ಪ್ರಸಾದವನು ಕೊಳ್ಳುವಂತೆ ಇದನು ಕೊಳುವೆನು.

ಯಶೋಧರಾ __   ಅಂಬಿಕೆ, ನನ್ನ ಹೆರಳಿನಲಿ ಹೂವಿದೆಯೆ ನೋಡು', ಸರಿ ಮಾಡು. ಚೀನಾಂಬರವ ಮೇಲು ಸೇಲೆಯನು ಕೊಡು, ಪೀಠವನ್ನು ಸರಿಪಡಿಸು.
(ಅಂಬಾಪಾಲಿಯನ್ನು ಕುರಿತು )
ನಿಮ್ಮೊಡನೆ ಹೇಳಿಕಳುಹಿದರೆ ?

ಅಂಬಾಪಾಲಿ  __ ಆನಂದರನುಕರೆದು, ಇಲ್ಲಿಗೆ ಪೋಪ, ಎಂದು ಅಪ್ಪಣೆಮಾಡೆ, ಕೇಳಿ ನಾನೇ ಇತ್ತ ಅರುಹಬಂದೆನು ದೇವಿ.

ಯಶೋಧರಾ__   ಸಂತೋಷ.

 ( ಅಷ್ಟು ಹೊತ್ತಿಗೆ ಅಂಬಿಕೆ ಹಾರವನ್ನು  ನೋಡಿ ಸಂಪಡಿಸಿ ಉತ್ತರೀಯವನ್ನು ತಂದು ಹೊದಿಸುವಳು. ಬುದ್ಧರೂ ಆನಂದನೂ ಬಾಗಿಲಲ್ಲಿ ಕಾಣುವರು )

ಯಶೋಧರಾ __  ಅಂಬಿಕೆ, ಅಣ್ಣಯ್ಯನನು ಕರೆಸು. ತಟ್ಟೆಯನು ತಾ.
( ಬುದ್ಧನು ಒಳಗೆ ಬರಲು ತಟ್ಟೆಯನ್ನು ಅಡಿಯ ಬಳಿ ಇಟ್ಟು ನಮಸ್ಕಾರ ಮಾಡುವಳು )
ಯಶೋಧರಾ__   ಅಡಿಯ ಮುಟ್ಟಬಹುದೇ ಕೇಳು.
ಬುದ್ಧ.__  ಮುಟ್ಟಿದರೆ ತಪ್ಪಿಲ್ಲ. ಮುಟ್ಟದಿರೆ ಒಳಿತು.
ಯಶೋಧರಾ__   ತಪ್ಪಲ್ಲದಿರುವುದೇ ಸಾಕೆನಗೆ. ( ಎಂದು ಪಾದವನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವಳು)
ಬುದ್ಧ.__  ದೇವಿಯರು ಏನಗೈದೊಡೆ ಅದುವೆ ಒಳಿತು.
( ಎಲ್ಲರೂ ಒಂದು ಕ್ಷಣ ಮೌನವಾಗಿರುವರು. ಅಂಬಿಕೆ ಅಂಬಾಪಾಲಿ ಒಬ್ಬರಿಗೊಬ್ಬರು ಸನ್ನೆ ಮಾಡಿಕೊಂಡು ಸ್ವಲ್ಪ ದೂರ ಹೋಗುವರು )
( ಮುಂದುವರಿಯುವುದು )
*********************************"
ಸಂಕ್ಷಿಪ್ತ ಸಾರಾಂಶ


ಯಶೋಧರೆಗೆ ಇದುವರೆಗೂ ಬುದ್ಧ ಬರಲಿಲ್ಲವೆಂಬ ಆತಂಕ. ಬರುವನೋ ಇಲ್ಲವೋ ಎಂಬ ಸಂದೇಹ.  

ಅಂಬಿಕೆಯು ಆ ದಿನ ಸಂಜೆಯಲ್ಲಿ ಊರಿನ ಜನರಿಗೆ ಉಪದೇಶ ಮಾಡುವ ಕಾರ್ಯಕ್ರಮವಿದೆಯೆಂದೂ ಮರೆಯಲ್ಲಿ ಕುಳಿತು ನೋಡಬಹುದೆಂದೂ ಹೇಳುವಳು. ಆದರೆ ರಾಣಿಗೆ ಅದು ಇಷ್ಟ ಆಗುವುದಿಲ್ಲ. ಪತಿಯು ತನ್ನನ್ನು ನೋಡಬಹುದು ಎಂದಿರುವರು. ಆದರೆ ನೋಡಲಿ ಎಂದು ನೇರವಾಗಿ ಹೇಳಿಲ್ಲ. ಇದು ಯಾವ ದೈವಕ್ಕೆ ಪ್ರೀತಿ? ಹತ್ತು ವರುಷಗಳಿಂದ ದೂರವಿದ್ದ ತನಗೆ ಇರುವ ತೊಳಲಾಟ ಅವರಿಗಿಲ್ಲ.  ಇಂತವರ ಸತಿಯಾಗಿ ನಾನು ಸೋಲಬೇಕೆ? ಅವರು ಸಿಂಹದಂತೆ ಇರುವಾಗ ನಾನು ಜಿಂಕೆಯಂತೆ ಅಂಜಿ ಬಾಳಬೇಕೆ? ಇದು ಅವರಿಗೆ ತಕ್ಕ ಸತಿಯ ಕ್ರಮವಲ್ಲ. ಮರೆಯಲ್ಲಿ ನೋಡಲಾರೆ ಎಂದು ದೃಢವಾಗಿ ನುಡಿಯುವಳು. ಮನದಲ್ಲಿ ಆಸೆ ನಿರಾಸೆಗಳ ಮಿಶ್ರ ಭಾವ.

ಅಂಬಾಪಾಲಿ ಅವಸರದಿಂದ ಬರುವಳು. ನಮಸ್ಕರಿಸುತ್ತ ಗುರುಗಳು ಬರುತ್ತಿರುವರು ಎಂಬ ಸುದ್ದಿಯನ್ನು ಹೇಳುವಳು. ಸಂತಸದ ಸುದ್ದಿಯನ್ನು ಹೇಳಿದ ಅವಳಿಗೆ ಯಶೋಧರಾ ಕೊರಳ ಮುತ್ತಿನಹಾರವನ್ನು ಕೊಡುವಳು. ಅದನ್ನು ಪ್ರಸಾದದ ರೂಪದಲ್ಲಿ ಅಂಬಾಪಾಲಿಯು ಸ್ವೀಕರಿಸುವಳು.

ಈಗ ಯಶೋಧರೆಗೆ ಸಂಭ್ರಮ ಸಡಗರ. ಆಣ್ಮನೆದುರಿಗೆ ತಾನು ಹೇಗೆ ಹೇಗೋ ಇರಬಾರದೆಂಬ ಭಾವನೆ. ಹಾಗಿದ್ದರೆ ಅದು ಶ್ರೇಯಸ್ಕರವಲ್ಲವೆಂಬ ನಂಬಿಕೆ. ಹೆರಳನ್ನು ಸರಿಪಡಿಸಲು, ಹೂವನ್ನು ಮುಡಿಸಲು ಅಂಬಿಕೆಗೆ ಹೇಳುವಳು.

ಮಧ್ಯದಲ್ಲಿ ಅಂಬಾಪಾಲಿಯನ್ಬು ಕುರಿತು ನಿಮ್ಮೊಡನೆ ತಾನಾಗಿ ಹೇಳಿ ಕಳಿಸಿದರೆ? ಎಂದು ಕೇಳುವಳು. ಅದಕ್ಕೆ ಅವಳು ಆನಂದನ ಬಳಿ ಇಲ್ಲಿಗೆ ಬರುವ ಬಗ್ಗೆ ಹೇಳುತ್ತಿದ್ದುದನ್ನು ಕೇಳಿ ನಿಮಗೆ ತಿಳಿಸಲು ಓಡಿ ಬಂದೆ ಎನ್ನುವಳು.  ಅಷ್ಟರಲ್ಲಿ ಬುದ್ಧಮತ್ತು ಆನಂದರು ಬಾಗಿಲಿನಲ್ಲಿ ಕಾಣಿಸುವರು.

ಅಂಬಿಕೆಗೆ ಮಗನನ್ನು ಕರೆಸಲು ಹೇಳಿ ತಟ್ಟೆಯನ್ನು ತರಿಸಿ ಒಳ ಬಂದ ಬುದ್ಧನ ಅಡಿಗಳಲ್ಲಿ ಇಟ್ಟು ನಮಸ್ಕರಿಸುವಳು. ಪಾದಗಳನ್ನು ಮುಟ್ಟಿ ನಮಸ್ಕರಿಸುವ ಆಸೆ. ಆದರೆ ಮುಟ್ಟಬಹುದೋ ಬಾರದೋ ಎಂದು ಅನುಮಾನ. ಮುಟ್ಟಬಹುದೆ ಕೇಳು ಎಂದು ಅಂಬಿಕೆಯ ಮೂಲಕ ಕೇಳುವಳು. ಅದಕ್ಕೆ ಬುದ್ಧನು ಮುಟ್ಟಿದರೆ ತಪ್ಪಿಲ್ಲ. ಮುಟ್ಟದಿದ್ದರೆ ಒಳಿತು ಎಂದು ಮಾರ್ಮಿಕವಾಗಿ ನುಡಿದಾಗ ತಪ್ಪಲ್ಲವೆಂದು ಯಶೋಧರಾ ಪಾದಗಳನ್ನು ಮುಟ್ಟಿ ನಮಸ್ಕರಿಸುವಳು. ಅಂಬಿಕೆಯೂ ಅಂಬಾಪಾಲಿಯೂ ಪರಸ್ಪರ ಸನ್ನೆ ಮಾಡಿಕೊಂಡು ಸ್ವಲ್ಪ ದೂರ ಸರಿಯುವರು. 

ಹತ್ತು ವರ್ಷಗಳ ನಂತರದ ದರ್ಶನದ ಈ ದೃಶ್ಯ ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ.




ಬುದ್ಧ. __ ದೇವಿಯರು ಏನಗೆಯ್ದೊಡೆ ಅದುವೆ ಒಳಿತು.
(ಎಲ್ಲರೂ ಒಂದು ಕ್ಷಣ ಮೌನವಾಗಿರುವರು. ಅಂಬಾಪಾಲಿ ಅಂಬಿಕೆ ಸನ್ನೆ ಮಾಡಿಕೊಂಡು ಸ್ವಲ್ಪ ದೂರ ಹೋಗುವರು.)

ಯಶೋಧರಾ__   ಆನಂದ, ಪೀಠವನು ಕೊಡು. ದೇವರಲ್ಲಿ ಮಂಡಿಸಬೇಕು

ಬುದ್ದ. __  ಕುಳ್ಳಿರಿ ಆನಂದ ಕುಳಿತುಕೊ. ದೇವಿಯರು ನೋಡಕೂಡದೊ ಎಂದು ಸಂಶಯದೊಳಿಹರೆಂದು .  ಆನಂದ ಹೇಳಿದನು. ಆ ನಿಯಮವೆಮಗಿಲ್ಲ. ಹೋಹೆಡೆಗೆ ಹೋಗುವುದು, ನುಡಿಯುವೆಡೆ ನುಡಿ ಎಲ್ಲ ಎಡೆಯಲ್ಲಿಯೂ ಸರಿಯಾಗಿ ನಡೆಯುವುದು, ಇದ ಕಲಿಯಬೇಕು ಸಂನ್ಯಾಸಿ; ಬಹುದಿನದಿಂದ ನೋಡದಿರ್ದಿಹರು, ನೋಡಲಿ, ಎಂದು ಬಂದೆವು.

ಯಶೋಧರಾ __  ಬೇಗೆಯಲಿ ಬೆಂದ ಜೀವಕೆ ಇಂದು ತಣ್ಪಾಯ್ತು, ನಮ್ಮಳಿಯ ಆನಂದನಿಗೆ ನಾನು ಚಿರಋಣಿ.

ಬುದ್ಧ.__  ಬಹುತೆರನ ಯೋಚನೆಯ ಮಾಡಿ ನೊಂದಿಹರೆಂದು ಆನಂದ ಹೇಳಿದನು. ಚಿಂತೆಯೇ ಕಷ್ಟ. ಮನೆಬಾಗಿಲಿಗೆ ಬರುವ ಹಾವನಟ್ಟುವ ರೀತಿ ಮನದ ಬಾಗಿಲಿನಿಂದ ಅದನಟ್ಟುತಿರಬೇಕು ಅಭ್ಯಾಗತನ ಕಂಡು ಗೃಹಕೆ ಕರೆದೊಯ್ದಂತೆ ಮನದೊಳೆಡೆಗೊಟ್ಟು ಕುಳ್ಳಿರಿಸಿ ಪೂಜಿಸಲು ಅದು ದುರ್ವಾಸನಾಗುವುದು.

ಯಶೋಧರಾ __  ಇದ ನಾನು ಅರಿತಿಹೆನು.

ಬುದ್ಧ.__  ಪತಿ ಈತನೆಂದೆನ್ನ ಜೀವ ಸೂರ್ಯನೊಳಂದು ಸತಿಯಾದವಳ ಜೀವರಾಜೀವ ಕೆಳೆಗಂಡು ಮಲರಿತೆಂತಂತೆ ಆ ಪತಿಯಾತ್ಮದಾರಾಮ ಸತಿಯೊಲುಮೆಯುಸಿರಿನ ವಸಂತ ಮಾರುತನಿಂದ ನಿದ್ದೆ ತಿಳಿದರಳಿ ತನ್ನೆದೆಯ ನರುಗಂಪಿನಲಿ ತನ್ನ ತಾನರಿತುಕೊಂಡುದು. ಇದಕೆ ಸಂಶಯವೆ? 'ಆ ಪ್ರೇಮವಂದೆನ್ನ ಹೃದಯರಸದೊಳಿಟ್ಟ ಸಮ್ಮೋದದೊಂದು ನಂದಾದೀಪ ಈಗಳೂ ಎನ್ನ ಅಂತರ್ಯವನು ತೃಪ್ತಿಯಲಿ ಬೆಳಗುತಿದೆ. ಇರುಳು ತಮವನು ತಾಗಿ ಬಾಂದಳದ ಚೆಲುವಾಗಿ ಬೆಳಕ ಬೀರಿದ ತಾರೆ, ಹಗಲು ನೇಸರ ನೆರೆದು, ಮರೆಯಿಂದ ಜಗವ ಬೆಳಗುವವೊಲಾ ತಣಿವೆನಗೆ ಸಿದ್ಧಿಯಿಂದೊದವಿದ ಮನಃಪ್ರಸಾದದಿ ಬೆರೆದು ಬಳಿಸಾರಿ ಬಂದ ಆತ್ಮಗಳ ಸುಖಗೊಳಿಸುತಿದೆ. ಪತಿಗೆ ಬೇಡದೆ ಹೋದೆನೆಂದು ನೆನೆದುದು ಸಾಕು; ಚಿಂತೆಯನು ಸಾಧಿಸುವ ಈ ತಪಶ್ಚರ್ಯೆಯನು ಕೊನೆಮಾಡಿ ಇನ್ನು ಶಾಂತಿಯನರಸಿ.

ಯಶೋಧರಾ__   ಎನ್ನಮನ ಈ ಅನುಗ್ರಹದ ಮಾತುಗಳಿಂದಲೇ ಶಾಂತಿಯನ್ನು ಪಡೆದಿಹುದು. ಇನ್ನೆನಗೆ ಚಿಂತೆಯೆಂಬುದೇ ಇಲ್ಲ. 

ಬುದ್ಧ. __ ಯಾವುದೋ ಸಂದೇಹವಿಹುದು

ಯಶೋಧರಾ__   ಸಿಟ್ಟಾಗದಿರೆಕೇಳುವುದು ಎರಡು ಮಾತಿದೆ.
ಬುದ್ದ __   ಕೇಳಬೇಕು.

ಯಶೋಧರಾ__   ಈಗ ನನ್ನನು ನೋಡಬಹುದೆನಲು ಮನೆ ಬಿಟ್ಟು ವನಕೆ ಹೋಗುವ ಕಾರ್ಯವೇನಿತ್ತು ? ಎಳೆವೆಣ್ಣು ಪತಿಯೆ ಪರದೈವ, ಎರೆಯನೆ ತನ್ನ ಸರ್ವಸ್ವ, ಹಸುಳೆಯೇ ಜೀವ, ಎಂದೊಲವಿನೋಲಾಟದಲಿ ಸುಖವಾಗಿ ಇದ್ದವಳ ದುಃಖದಲಿ ಮುಳುಗಿಸಿ" ಹೊರಟುಹೋದುದು ಏಕೆ ?

(ಬುದ್ದನು ಸುಮ್ಮನಿರುವನು.)

ಯಶೋಧರಾ __  ಆನಂದ, ಕೇಳಿದುದು
ಅಪರಾಧವಾಯಿತೋ ?

ಬುದ್ಧ   __  ಇಲ್ಲ; ಕೇಳಿರಿ.

ಯಶೋಧರಾ  __ ಇನ್ನು ಏನ ಕೇಳಲಿ ನಾನು? ನನ್ನಂತೆ ನೂರು ಜನ ನೋಯುತಿರುವುದೆ ಎಂದು ನೆನೆದು ನಾ ನೋಯುವೆನು.  ಹೋಹಂದು ನನಗೆ ಹೇಳದೆ ಹೋದುದೇತಕೆ ? ಮುಕ್ತಿಮಾರ್ಗವನರಸಿ ಹೋಹವರು ಸತಿಯರಿಗೆ ತಿಳಿಸಿ ಹೋಗುವುದಾಗದೆ?ಬೇಡವೆಂಬರು, ತಡೆವರು, ಎಂದು ಭೀತಿಯೆ? ಧರ್ಮದಲಿ ನಡೆಯೆ ಸತಿಯಾದವಳು ತಾನು ತಡೆಯಾಗಿ ನಿಲುವಳೇ ?

(ಒಂದು ಕ್ಷಣ ಸುಮ್ಮನಾಗುವಳು. ಮರಳಿ) ಹತ್ತು ವರುಷದ ಮೇಲೆ ಮರಳಿ ಬಿಜಗೆಯ್ದ ವರ ಬಿರುಸಾದ ನುಡಿಯಿಂದ ದುಷ್ಕರಿಸುತಿಹೆನಹುದು

ಬುದ್ಧ.  __. ಇದೆ ಎನಗೆ ಸತ್ಕಾರ. ಸಮಚಿತ್ತನಾಗಿಹೆನು. ಹೇಳುವುದನೆಲ್ಲ ಸಂತಸದಿಂದ ಕೇಳುವೆನು. 

ಯಶೋಧರಾ __  ಲೋಕಕೇ ಧರ್ಮವನು ಕಲಿಸುವರು ಬಂದಿರಲು ತಿಳಿಯದುದನರುಹಿ ಕಲಿಯುವ ಎಂದೆ ನುಡಿಯುವೆನು. ಪತಿ ತೆರಳಬಾರದೆಂದೇ ಪತ್ನಿ ತಡೆಯುವೊಡೆ ಕೆಡೆದು ನಡೆವುದು ಪತಿಗೆ ತಕ್ಕುದೇ ? ಎರಡುಸಿರು ಒಂದಾಗಿ ಬೆರೆವ' ಎಂದೊಪ್ಪಿ ಜೊತೆಯಾಗಿರುತ ಎರಡರಲಿ ಒಂದು ಸಂಬಂಧ ಸಾಕೆನಲಾಗಿ ಅಲ್ಲಿಗೇ ಅವರ ಒಪ್ಪಂದ ಕೊನೆಯಾಗುವುದೆ? ಎರಡನೆಯ ಜೀವ ಒಪ್ಪುವ ಮುನ್ನ ದಾಂಪತ್ಯ ಮುಗಿಯಬಹುದೆಂತು ?

ಆನಂದ __  (ಎದ್ದು )
ನಾ ಸ್ವಲ್ಪ ದೂರದೊಳಿರಲೆ ?

ಬುದ್ಧ.__  ಇಷ್ಟದಂತೆಸಗು.

ಯಶೋಧರಾ __  ಬೇಡ, ಇಲ್ಲಿಯೇ ಇರು. ಸಂನ್ಯಾಸಿ ಪತಿ ಅವನ ಪೂರ್ವಾಶ್ರಮದ ಸತಿ ಇರುವರೇ ಜೊತೆಯೊಳಿದ್ದರು ಎನಲು ಜನತೆಯಲಿ ಅಲ್ಲಸಲ್ಲದ ಮಾತು ಬರಬಹುದು. ಆಣ್ಮನಿಗೆ ಇಂತೊಂದಪಖ್ಯಾತಿ ಬರುವಂತೆ ನಡೆಯುವೆನೆ? ಈಗ ಸಂದಿಹ ಯಶದ ರಜತಗಿರಿ ಮುಗಿಲೇರಿ ಧವಳಗಿರಿಯಾಗಲಿ, ಜಗಕೆ ಹಿರಿದೆನಿಸಲಿ. ಅಲ್ಲದೆಯೋ ನಾನು ಕೇಳುವ ಮಾತ ಹಲಜನರು ಕೇಳುತಿರುವರು. ಅವರ ಸಂಶಯವ ಹರಿಸುವರೆ ಏನಹೇಳುವುದೆಂದು ನೀವು ಅರಿತಿರಬೇಕು. ದೂರುವುದಕೆಂದು ನುಡಿವವಳಲ್ಲ ನಾನಿಂತು ; ಧರ್ಮಸೂಕ್ಷ್ಮವನರಿಯಲೆಂದೆ ಕೇಳುತಲಿಹೆನು.

*********************************
ಸಂಕ್ಷಿಪ್ತ ಸಾರಾಂಶ

ಬುದ್ಧ ಒಳಗೆ ಬಂದು ಕುಳಿತುಕೊಂಡು ಯಶೋಧರೆಗೆ ಸಮಾಧಾನ ಹೇಳುವನು. ಇಷ್ಟು ವರ್ಷಗಳ ಚಿಂತೆ ಸಾಕು. ನೋಡಬಹುದೆ ಎಂದು ಕೇಳಿದ್ದಕ್ಕೆ ಬಂದೆನು. ಸಂನ್ಯಾಸಿಗೆ ಯಾವುದೇ  ನಿಯಮಗಳಿಲ್ಲ. ಕರೆದಲ್ಲಿಗೆ ಹೋಗುವುದು, ಉಪದೇಶ ಮಾಡುವುದು ಕಲಿಯಬೇಕು ಸಂನ್ಯಾಸಿ ಎನ್ನುವನು. ಅವನ ಸಾಂತ್ವನದ ಮಾತುಗಳಿಂದ ಯಶೋಧರೆಯ ಮನಸ್ಸು ನಿರಾಳವಾಯಿತು.

ಮನೆಯ ಬಾಗಿಲಿಗೆ ಬರುವ ಹಾವನ್ನು ಬಡಿದು ಅಟ್ಟುವ ಹಾಗೆ ಚಿಂತೆಯನ್ನು ದೂರ ಮಾಡಬೇಕೆಂದು ಮತ್ತೆ ಬುದ್ಧ ನುಡಿದನು.

ಸತಿಯ ಪ್ರೇಮದ ನಂದಾದೀಪದ ಬೆಳಕು ಇನ್ನೂ ತನ್ನೆದೆಯಲ್ಲಿಉರಿಯುತ್ತಿರುವುದು. ಇದರಲ್ಲಿ ಸಂಶಯ ಬೇಡ ಎಂದು ಬುದ್ಧ ಹೇಳಿದಾಗ ಪತಿಗೆ ಬೇಡವಾದೆನೆ ಎಂಬ ಬೇನೆಯಲ್ಲಿ ನರಳುತ್ತಿದ್ದ ತನ್ನೆದೆಗೆ ತಂಪು ಮೂಡಿತು. ಇನ್ನು ಚಿಂತಿಸುವುದಿಲ್ಲ ಎಂದು ಯಶೋಧರಾ ನುಡಿಯುವಳು. ಅವನು ಹೇಳಿದಂತೆ ಇನ್ನು ಶಾಂತಿಯನ್ನು ಅರಸುವುದಾಗಿ ಹೇಳುವಳು. ಆದರೂ ಅವಳ ಮುಖದಲ್ಲಿ ಏನೋ ಸಂದೇಹ ಗುರುತಿಸಿದ ಬುದ್ಧ ಅದೇನೆಂದು ಕೇಳುವನು. 

ಈಗ ತನ್ನನ್ನು ನೋಡಬಹುದೆಂದವರು ಅಂದು ಮನೆ ಬಿಟ್ಟು  ಹೋಗುವ ಅಗತ್ಯವೇನಿತ್ತು?  ಪತಿಯೇ ಪರದೈವ, ಹಸುಳೆಯೇ  ಜೀವವೆಂದಿದ್ದವಳನ್ನು ದುಃಖದ ಹೊಳೆಯಲ್ಲಿ ಮುಳುಗಿಸಿ ಹೋಗಿದ್ದು ಏಕೆ? ಇದು ಯಶೋಧರಾ ಪ್ರಶ್ನೆ.  ನನ್ನಂತೆ ನೂರಾರು ಜನ ನೋಯುತಿಹರು. ಹೋಗುವ ಮುನ್ನ ಹೇಳಿಯಾದರೂ ಹೋಗಬೇಕಿತ್ತು. ತಡೆದರೆ ಎಂಬ ಸಂಶಯ ಕಾಡಿತೆ? ಧರ್ಮದಲ್ಲಿ ನಡೆಯುವವರಿಗೆ ಸತಿಯಾದವಳು ತಡೆಯಾಗುವಳೆ? ಹತ್ತು ವರ್ಷಗಳ ಬಳಿಕ ಬಂದವರನ್ನು ದೂರುತ್ತಿರುವುದಕ್ಕೆ ಕ್ಷಮೆಯಿರಲಿ ಎಂದು ಹೇಳುವಳು.

ಇದೇ ನನಗೆ ಸತ್ಕಾರ. ಸಮಚಿತ್ತನಾಗಿರುವೆ. ಹೇಳುವುದನ್ನೆಲ್ಲ ಕೇಳುವೆನೆಂದು ಬುದ್ಧ ಸಮಾಧಾನಿಸುವನು. ಅದಕ್ಕೆ ಯಶೋಧರೆ ಪತಿ ತೆರಳಬಾರದೆಂದು ಸತಿ ತಡೆದರೆ ತೆರಳುವುದು ಧರ್ಮವಾಗುವುದೆ? ಎರಡನೆಯ ಜೀವ ಒಪ್ಪುವಮುನ್ನ ದಾಂಪತ್ಯ ಕೊನೆಯಾಗಬಹುದೆ? ಎನ್ನುವಳು. ಆನಂದನು ಸ್ವಲ್ಪ ಹೊರಗಿರುವೆನೆನ್ನಲು ಯಶೋಧರೆ ಬೇಡ ಎನ್ನುವಳು. ಪೂರ್ಚಾಶ್ರಮದ ಸತಿಯೊಡನೆ ಗುರುಗಳು ಒಬ್ಬರೇ ಇದ್ದರು ಎಂದು ಲೋಕ ಮಾತನಾಡುವುದು ಬೇಡ. ಯಾವುದೇ ಕಾರಣಕ್ಕೂ ತನ್ನ ಆಣ್ಮನಿಗೆ ಅಪವಾದ ಬರಬಾರದು ಎನ್ನುವುದು ಅವಳ ನಿಲುವು. ನಾನು ಕೇಳುತ್ತಿರುವ ಮಾತು ಕೇವಲ ನನ್ನದು ಮಾತ್ರ ಅಲ್ಲ. ಹಲಜನರು ಕೇಳುತ್ತಿರುವರು. ಅದಕ್ಕಾಗಿ ಕೇಳಿದೆ ಅಷ್ಟೆ. ಪತಿಯ ಯಶಸ್ಸು ಇನ್ನಷ್ಟು ಬೆಳೆಯಲಿ ಎಂಬುದೇ ನನ್ನಾಸೆ ಎಂದಳು.


ಬುದ್ಧ.__  ( ಒಂದು ಕ್ಷಣ ಬಿಟ್ಟು )

ಧರ್ಮಸೂಕ್ಷ್ಮವನರಿವ ಮನ ತನ್ನ ಸುಖದಿಂದ ಧರ್ಮವನು ಅಳೆಯಲಾಗದು. ಮೂಲ ಸೂತ್ರವಿದು.  ನಾನೆಂಬ ಭಾವನೆಯ ಹೆಚ್ಚಿಸುವ ಬಾಳ್ವದುಕು ಧರ್ಮಪಥವನು ಬಿಟ್ಟು ಅಲೆಯುತಿದೆ ನಿಶ್ಚಯ ಎನ್ನಿಂದ ಅನ್ಯರಿಗೆ ಒಳಿತಾಗಲೆಂಬುದೇ ಸದ್ಯ ಪ್ರಮಾಣ ಧರ್ಮದೊಳಿರುವೆವೆಂಬುದಕ್ಕೆ,
(ಒಂದು ಕ್ಷಣ ಸುಮ್ಮನಿರುವನು.)

ಸಂಸಾರವೆಂಬ ದುಷ್ಟಾರ ಕೂಪಾರದಲಿ ಹುಟ್ಟು ಬೆಳೆ ಅಳಿ ಎಂಬ ಆವರ್ತದಲ್ಲಿ ಸಿಲುಕಿ ತೊಳಲುತಿಹ ಜೀವವನು ರಕ್ಷಿಸುವುದೆಂತೆಂದು ತಿಳಿವುದಕೆ ನಾನಂದು ಮನೆಯಿಂದ ತೆರಳಿದೆನು. ಸಂಸಾರದಲ್ಲಿ ಹೇಸಿ ವನದ ಶಾಂತಿಯನೆಳಸಿ ತಪಕೆ ಸಾರಿದೆನಲ್ಲ. ಸುಖವೆನ್ನ ಬಳಸಿತ್ತು. ಜನದ ಮಂಗಳಕಾಗಿ ಸೌಖ್ಯಗಳ ತೊರೆದೆನು; ಕಷ್ಟಗಳ ವರಿಸಿದೆನು; ಬೇನೆಯಲಿ ಧುಮುಕಿದೆನು.
(ಇನ್ನೊಂದು ಕ್ಷಣ ಬಿಟ್ಟು)

ಎನ್ನ ಕೈಹಿಡಿದಾಕೆ ಧರ್ಮಿಷ್ಠೆ, ದೃಢಚಿತ್ತೆ, ಎಂಬುದನು ಮೊದಲಿಂದ ಬಲ್ಲೆನು ; ಸೌಖ್ಯದಲಿ ಎಂತು ನೆರವಾಗಿ ನಿಂತಳೊ ಅಂತೆ ಧರ್ಮದಲಿ ನೆರವಪ್ಪಳಾಕೆ ಎಂದರಿವೆನು. ಆದರೂ ಒಡನೆಯೇ ಒಪ್ಪಲಾರಳು; ಇನ್ನು ತಾಯ್ತಂದೆ ಮಿತ್ರ ಜನ ಪರಿವಾರ ಎಲ್ಲವೂ ತಡೆಯುವುದು; ತಡೆಯೆ ನಿಲಲಾಗದು : ಇನ್ನು ಚರ್ಚೆಗಳೇಕೆ ? ಮಾಳ್ವುದನು ಮಾಳ್ವುದು ; ಎಂಬ ಭಾವನೆಯಿಂದ ಪರಿತಾಪತಿಮಿರ ಧೈತ್ಯಜ್ಯೋತಿಯನ್ನು ಮುಸುಕಿ ತರ್ಜಿಸುತಲಿರೆ ಅದಕೆ ಎಡೆಗುಡದೆ ನಡೆದೆನು.

(ಮರಳಿ ಸುಮ್ಮನಿದ್ದು)

ತಿಳಿವ ಸಾಧಿಸೆ ಮನುಜ ವನಕೆ ಹೋಗುವುದೇಕೆ,
ಮನೆಯೊಳಿರು ಇಲ್ಲಿದ್ದು ಧರ್ಮದಲಿ ನಡೆವವರ  ಇದಬಹುದು.  ತನ್ನ ಮರೆವುದ ಧರ್ಮ. ತಾಯಾದ ಉಸಿರೆಲ್ಲ ಇರ್ದೆಡೆಯೊಳೇ  ಇದನು ಸಾಧಿಪುದು. ಇಂತೇ ಕೋಟಿಜೀವದಲೊಂದು  ಜೀವ ಪರತೃಪ್ತಿಯಲಿ ಮುಕ್ತಿಯನು ಸಾಧಿಸುವುದುಂಟು. ಕೋಟಿಯಲೊಂದು. ಸಾಮಾನ್ಯ ಚೇತನರೊ?  

ದಿನದಿನದ ಬಾಳುವೆಯ ಹಿರಿಕಿರಿಯ ನಡೆಗಳಲಿ, ಮರುತದಿಂದಲೆಯೆದ್ದ ಜಲಧಿಯ ತರಂಗಮಾಲೆಯ ನಡುವೆ ತೇಲುತಿಹ ಬೆಂಡಂತೆ, ಬವಣೆಯಲ್ಲಿ ಜೀವನವ ಕಳೆವರು. ಇಂದು ಎನಗಿರುವ ಅನುಭವ ಅಂದು ಇರ್ದುದೇ ವನಕೆ ತೆರಳುವ ಕಾರ್ಯವಿರಲಿಲ್ಲ. ಆದೊಡೆ ಅಂದು ಮನೆಯನು ಬಿಟ್ಟು ವನಕೆ ತೆರಳದೆ ನಿಲಲು ಇಂದಿನನುಭವ ಬರುವ ಬೇರೊಂದು ತೆರನಿಲ್ಲ. ಆಸವಪ್ರಾಶ್ಯಗಳ  ಸೇವಿಸಿದ ದೃಢದೇಹ ಸೋಂಕ ತಡೆವಂತೆ, ತಪದಿಂದ ದೃಢವಾದಾತ್ಮ ಸಂಸ್ಕೃತಿಯ ನಡುವೆ ಸುಳಿದೂ ಶಾಂತವಾಗಿರುವುದು.
( ಮುಂದುವರೆಯುವುದು )
********************"************
ಸಂಕ್ಷಿಪ್ತ ಸಾರಾಂಶ

ಇಡೀ ಭಾಗ ಬುದ್ಧನ ಮಾತುಗಳಿಂದಲೇ ಮುಂದುವರೆದಿದೆ. ಯಶೋಧರೆಯ ಪ್ರಶ್ನೆಗಳಿಗೆ ಉತ್ತರಿಸುತ್ತ ಧರ್ಮಸೂಕ್ಷ್ಮವನ್ನು ಅರಿಯುವ ಮನಸ್ಸು ತನ್ನ ಸುಖದಿಂದ ಧರ್ಮವನ್ನು ಅಳೆಯಲು ಆಗುವುದಿಲ್ಲ. ಇದು ಮೂಲ ಸೂತ್ರ. ನಾನು ನನ್ನದೆಂಬ ವಿಚಾರವನ್ನು ಬಿಟ್ಟು ನನ್ನಿಂದ ಇತರರಿಗೆ ಒಳ್ಳೆಯದಾಗಲಿ ಎಂದು ಬದುಕಿಸರೆ ಅಲ್ಲಿ ಧರ್ಮವು ಆಚರಣೆಯಲ್ಲಿದೆ ಎಂದರ್ಥ.

ಸಂಸಾರಚಕ್ರದಲ್ಲಿ ಸಿಲುಕಿರುವ ಜೀವವನ್ನು ಮುಕ್ತಿಯ ಮಾರ್ಗದಲ್ಲಿ ನಡೆಸುವುದು ಹೇಗೆಂಬ ವಿಚಾರದಲ್ಲಿ ಅಂದು ಮನೆಯನ್ನು ತೊರೆದೆನೆಂದು ಹೇಳುವನು. ಜಗತ್ತಿನ ಮಂಗಳಕ್ಕಾಗಿ ಕಷ್ಟಗಳನ್ನು, ಬೇನೆಬೇಗೆಗಳನ್ನು ಸಹಿಸಿ ತಪಸ್ಸನ್ನು ಆಚರಿಸಿ ಅರಿವಿನ ಬೆಳಕನ್ನು ಕಂಡೆನು. 

ನನ್ನ ಕೈ ಹಿಡಿದವಳು ಧರ್ಮಿಷ್ಠೆಯೆಂದು ಮೊದಲಿನಿಂದಲೂ ಅರಿತಿದ್ದರಿಂದ ತಿಳಿಸಿ ಹೋಗುವ ಕೆಲಸ ಮಾಡಲಿಲ್ಲ. ಮನೆಯವರು ತಡೆಯಬಹುದು ಎಂಬ ಅಳುಕೂ ಇತ್ತು. ಸುಖದಲ್ಲಿ ಹೇಗೆ ಜೊತೆಯಾಗಿದ್ದಳೋ ಹಾಗೆಯೇ ಧರ್ಮದಲ್ಲಿಯೂ ನೆರವಾಗುವಳೆಂಬ ನಂಬಿಕೆ ಇತ್ತು ಎನ್ನುವನು.  ಪರಿತಾಪವನ್ನು ಧೈರ್ಯದ ದೀಪದಿಂದ ಮರೆಸಿ ನಡೆದೆನು ಎಂದು ವಿವರಿಸುವನು. 

ಅರಿವನ್ನು ಸಾಧಿಸಲು ಮನೆಯಲ್ಲಿದ್ದರೆ ಆಗದೇ, ಕಾಡಿಗೇ ಹೋಗಬೇಕೇ ಎಂಬ ಪ್ರಶ್ನೆಗೆ ಉತ್ತರವಾಗಿ ಕೋಟಿಯಲ್ಲೊಂದು ಜೀವ ಹಾಗೆ ಸಾಧಿಸಬಹುದು. ಸಾಮಾನ್ಯರಿಗೆ ಸಾಧ್ಯವಿಲ್ಲವೆನ್ನುವನು.  ಈಗ ನನಗಿರುವ ಅನುಭವ ಅಂದು ಇರಲಿಲ್ಲ. ಇದ್ದಿದ್ದರೆ ಹೋಗಬೇಕಾಗಿರಲಿಲ್ಲ ಆದರೆ ಅದು ಅನಿವಾರ್ಯವಾಗಿತ್ತು. ಹಾಗೆ ಹೋಗದೆ ಇದ್ದಿದ್ದರೆ ಇಂದಿನ ಅನುಭವ ಬರುತ್ತಿರಲಿಲ್ಲ. ಔಷಧ ಗಳಿಂದ ಶರೀರ  ದೃಢವಾಗುವಂತೆ ತಪದಿಂದ ಆತ್ಮದೃಢವಾಗುವುದು. ಆಗ ಸಮಾಜದ ಎಲ್ಲ ರೀತಿಯ ಅನುಭವಗಳ ನಡುವೆಯೂ ಶಾಂತಚಿತ್ತನಾಗಿರುವುದು ಸಾಧ್ಯವಾಗುತ್ತದೆ ಎಂದು ನಿಧಾನವಾಗಿ ನಡುನಡುವೆ ನಿಲ್ಲಿಸುತ್ತ ವಿವರಿಸುವನು.


ಬುದ್ಧ ತನ್ನ ಮಾತುಗಳನ್ನು ಮುಂದುವರಿಸುತ್ತಾನೆ.

(ಇನ್ನೊಂದು ಕ್ಷಣ ಬಿಟ್ಟು)
ಪತಿಯಾದವನು ಸತಿಯ ಸಮ್ಮತಿಯ ಪಡೆಯದೆ ದಾಂಪತ್ಯವನು ಮುಗಿಸಬಾರದೆಂಬುದು ಸತ್ಯ. ಆದರೆಮ್ಮಯ ಧರ್ಮದಲಿ ವಿರಾಗವೆ ಮುಖ್ಯ; ದಾಂಪತ್ಯ ಕೊನೆಯಾಯಿತೆಂಬ ಮಿತಿ  ಗೌಣ. ಸಾಧನವ ಮುಗಿಸಿ ಸತಿ ಇರುವೆಡೆಗೆ ಬರಬಹುದು; ಧರ್ಮದಲಿ ಎರಡುಸಿರು ಜೊತೆಯಾಗಿ ಇರಬಹುದು ಸ್ವಾರ್ಥವನು ಮರೆಯುವರೆ ಅದು ಇದಕೆ ಇದು ಅದಕೆ ನೆರವಾಗಿ ಗುರುವಾಗಿ ಶುಭವ ಸಾಧಿಸಬಹುದು.
( ಕೊನೆಗೆ )

ನುಡಿದ ನುಡಿ ಮನಕೆ ಸಮ್ಮತವೆ?

ಯಶೋ__ ಪತಿ  ವರ್ಜಿಸಿದ ಭಂಗಿತಳು ನಾನೆಂಬ ಭಯವೊಂದು ಹರಿಯಿತು. ಉಳಿದುದನು ಮನ ಒಪ್ಪದಿಹುದು,

ಬುದ್ಧ__ ಇದು ಸಹಜ
ಹೆತ್ತು ಸಲಹುವುದು ಮಾತೆಯ ಧರ್ಮ, ತೊರೆವುದನು  ಸುಲಭದಲಿ ಒಪ್ಪಲಾರದು ಅವಳ ಚೇತನ, ಪುರುಷನಾದರು ತನ್ನ ಆಂತರ್ಯವನು ಮಥಿಸಿ ಇದನರಿಯಬೇಕು. ಅಂತರ್ವೃತ್ತಿಯೆಲ್ಲವೂ ಶ್ರುತಿ ಸೇರಿ ಒಂದಾಗಿ ಬೆರೆವ ಮೊದಲೀ ಧರ್ಮ ಮನುಜನಿಗೆ ಒಪ್ಪದು.

(ರಾಹುಲನು ಬರುವನು.)

ರಾಹುಲ___ಮಾಜಿ ಬರಹೇಳಿದೆಯ

ಯಶೋ___ಬಾರಣ್ಣ, ನಿಮ್ಮ ತಂದೆಗೆ ನಮಿಸು.

ರಾಹುಲ___ಆಗಲೇ ನಮಿಸಿದೆನು ಅಮ್ಮಾಜಿ.

ಯಶೋ___ಜಗಕೆ ಗುರುವಾಗಿಹರು.
ಅವರಿಂದ ಉಪದೇಶವನು ಕೊಳು.

ರಾಹುಲ___ಅಣ್ಣಾ,  ಉಪದೇಶಮಾಡು.

ಬುದ್ಧ___ ಮಗುವನು ಎನಗೆ ಕೊಡುವುದಕೆ ಮನಸು ಒಪ್ಪುವುದೆ?

ಯಶೋ___ ಎನ್ನನು ನೀವು ಬಿಡದಿರಲು ಜಗವನೇ ನಿಮಗೆ ಬಿಡುವರೆ ನಾನು ಒಪ್ಪುವೆನು. ನನಗೆ ಉಪದೇಶವನು ಕೊಡಬೇಕು.

ಬುದ್ಧ___ ಇದುವರೆಗೆ ಏನ ಹೇಳಿದೆನೊ ಅದೆ ಉಪದೇಶ.

ಯಶೋ___ ದೀಕ್ಷೆಯನು ಬೇಡುವೆನು.

ಬುದ್ಧ__  ಸ್ತ್ರೀಯರಿಗೆ ದೀಕ್ಷೆ ಎನ್ನುವುದಿಲ್ಲ.

ಯಶೋ___ ಜಗದೊಳರ್ಧವ ಬಿಟ್ಟು ಉಳಿದರ್ಧ ಮಾತ್ರಕೇ ಅನ್ವಯಿಸುವುದು ಧರ್ಮಬೇ? ಧರ್ಮಖಂಡನದು; ಹೋಳುಮಾಡಿದ ಧರ್ಮ.

ಬುದ್ಧ___ ಇದುವರೆಗೆ ಸ್ತ್ರೀಯರಿಗೆ
ದೀಕ್ಷೆಯನು ಕೊಟ್ಟಿಲ್ಲ

ಆನಂದ___ಗುರುದೇವರಲಿ ಅರಿಕೆ. 
ಹೆಣ್ಣಾದ ಮಾತ್ರವೇ ದೀಕ್ಷೆ ಕೊಡೆವೆನ್ನುವುದು ಧರ್ಮದಲಿ ఒండు ಕುಂದಾಗುವುದು.

ಬುದ್ಧ___ ಆನಂದ, ಆ ಮಾತನಲ್ಲಿ ಬಿಡು.

ಆನಂದ___ ನೂರಾರು ಜನರಿದನು
ಬೇಡುತಿರುವರು. ನಮ್ಮ ಧರ್ಮದಲ್ಲಿ ನಮ್ಮ ಗುರು ಮೊದಲ ಭಿಕ್ಷುಗಳಾದ ರೀತಿಯಲ್ಲಿ ಗುರುಪತ್ನಿ ಮೊದಲು ಭಿಕ್ಷುಣಿಯಾಗಲೆಂದು ನಾವೆಳಸುವವು. ತಾಯಿ, ಅಂಬಾಪಾಲಿ

ಅಂಬಾ___ ಬಂದೆ
( ಅವಳೂ ಅಂಬಿಕೆಯೂಬರುವರು ) 

ಆನಂದ___ ಗುರುದೇವರಲಿ ಗುರುಪತ್ನಿ ದೀಕ್ಷೆಯನು ಬೇಡುತಿರುವರು ನೋಡಿ.

ಅಂಬಾ___ಇದನ್ನು ದಯೆಗೆಯ್ಯಬೇಕೆಂದು ನಾನಡಿಮುಟ್ಟಿ ಬೇಡಿಕೊಂಬೆನು.

ಆನಂದ__ ಎಲ್ಲರೂ ಇಂತೆ ಬೇಡುವರು

ಬುದ್ಧ___ ಸ್ತ್ರೀಯರಿಗೆ ದೀಕ್ಷೆ ಕೊಡುವೊಡೆ ನಾನು ಮೊಳೆಯಿಟ್ಟ ಧರ್ಮದಾಯುಷ್ಯದಲಿ ಅರ್ಧ ಅಳಿವುದು.

ಯಶೋ __ಆಹ!
ಸ್ತ್ರೀಯೆಂಬುದಿಷ್ಟಲ್ಪವಾಯಿತೇ ?

ಬುದ್ಧ___ ಅಂತಲ್ಲ;
ಸ್ತ್ರೀಗೆ ಇದರಿಂದ ಕುಂದಿಲ್ಲ. ಶ್ರಮಣರಿಗೆ ವ್ರತ ತಪೋನುಷ್ಠಾನ ಕಷ್ಟತರವಾಗುವುದು ; ಹಲಜೀವ ಸೋಲುವುದು ; ವ್ಯವಹರಣೆ ಕೆಡುವುದು

ಯಶೋ___ಪುರುಷರನು ಮಾತ್ರ ಸಲಹುವುದಾಗೆ ಒಂದು  ಯುಗ,  ಸ್ತ್ರೀಪುರುಷರನು ಸಲಹೆ ಅರ್ಧ ಯುಗ. ಇರ್ವರೂ ಮುಕ್ತರಾಗಲಿ, ಅರ್ಧ ಯುಗವೆ ಸಾಕೆಂಬೆನು.

ಅಂಬಾ___ಇದೆ ನಮ್ಮ ಅಭಿಮತ.

ಬುದ್ದ___ಧರ್ಮವನು ನಿಲಿಸಲು ಬಹು ಕಠಿನ ನಿಯಮಗಳನಿರಿಸಬೇಕಾಗುವುದು.

ಯಶೋ___ಎಲ್ಲ ನಿಯಮಕು ಒಪ್ಪುವೆವು.

ಬುದ್ಧ___ಅಂತೆ ಆಗಲಿ.

ಯಶೋ__ಬದುಕಿದೆನು ನಾನು. (ವಂದಿಸುವಳು.)

ಅಂಬಾ___ ಬದುಕಿದೆ ನಾನು ( ವಂದಿಸುವಳು )

ಅಂಬಿಕೆ___ನಾನೂ
ಬದುಕಿದೆನು. ಮಾಜಿ ನಾನೂ ಜೊತೆಗೆ ಬರುವೆನು.

(ವಂದಿಸುವಳು : ರಾಜ, ಸಾರಿಪುತ್ರ ಮುಂತಾದವರು ಬರುವರು)
*********************************

ಸಂಕ್ಷಿಪ್ತ ಗದ್ಯ ಸಾರಾಂಶ

ಬುದ್ಧನ ಮಾತುಗಳು ಸಾಗಿವೆ.  ದಾಂಪತ್ಯ ಕೊನೆಯಾಯಿತು, ಸತಿಯ ಅನುಮತಿ ಪಡೆಯಬೇಕು ಎಂಬುದೆಲ್ಲ ಗೌಣ ಎನ್ನುವನು. ಸ್ವಾರ್ಥವನ್ನು ಬಿಡಬೇಕು ಅಷ್ಟೆ ಎಂಬುದು ಅವನ ಭಾವ. ಇದೆಲ್ಲ ಅರ್ಥವಾಯಿತೆ ಎನ್ನಲು ಯಶೋಧರಾ ಸ್ವಲ್ಪಮಟ್ಟಿಗೆ ಅರ್ಥವಾದರೂ  ನಾನು ಪತಿಯಿಂದ ವರ್ಜಿತಳು ಎಂಬ ಭಾವ ಹಾಗೇ ಇದೆ ಎನ್ನುವಳು. ಬುದ್ಧ ಅವಳಿಗೆ ಸಮಾಧಾನ ಹೇಳುವನು. ರಾಹುಲ ಅಲ್ಲಿಗೆ ಬರಲು ತಂದೆಗೆ ನಮಸ್ಕರಿಸಲು ತಾಯಿ ಹೇಳುವಳು. ಆಯಿತೆನ್ನಲು ಈಗ ಗುರುವಾಗಿಹನು. ಉಪದೇಶ ಪಡೆ ಎನ್ನುವಳು. ಮಗನನ್ನು ತನಗೆ ಶಿಷ್ಯನಾಗಿ ಕೊಡಲು ಮನಸ್ಸಿಗೆ ಒಪ್ಪಿಗೆಯೆ ಎಂದಾಗ  ನನಗೂ ಉಪದೇಶ ಕೊಡಿರಿ ಎನ್ನುವಳು.

ಇದುವರೆಗೆ ಹೇಳಿದ್ದೆಲ್ಲವೂ ಉಪದೇಶವೇ ಎಂದು ಬುದ್ಧ ಹೇಳಿದಾಗ ದೀಕ್ಷೆಯನು ಕೊಟ್ಟು ಶಿಷ್ಯಳನ್ನಾಗಿ ಮಾಡಿಕೊಳ್ಲಿರಿ ಎನ್ನುವಳು. ಇಲ್ಲಿಂದ ಆ ಕಾಲದಲ್ಲಿದ್ದ ಸ್ತ್ರೀಯರ ಬಗೆಗಿನ ಭಾವ ತಿಳಿಯುತ್ತದೆ. ತನ್ನ ಧರ್ಮದಲ್ಲಿ ಸ್ತ್ರೀಯರಿಗೆ ದೀಕ್ಷೆ ಎನ್ನುವುದು ಇಲ್ಲವೆನ್ನುವನು ಬುದ್ಧ. ಅವಳಿಗೆ ನೋವಾಗುವುದು. ಜಗತ್ತು ಇರುವುದೇ ಸ್ತ್ರೀ ಮತ್ತು ಪುರುಷ ಎಂಬ ಎರಡು ಶಕ್ತಿಗಳಿಂದ. ಹೀಗಿರುವಾಗ ಅರ್ಧಕ್ಕೆ ಮಾತ್ರ ಮಹತ್ವ ಕೊಟ್ಟು ಉಳಿದ ಅರ್ಧವನ್ಬು ಕಡೆಗಣಿಸುವುದೆಂದರೆ ಅದು ಯಾವ ಧರ್ಮ? ಇದು ಅವಳ ಪ್ರಶ್ನೆ. ಒಂದರ್ಥದಲ್ಲಿ ಎಲ್ಲ ನೊಂದ ಸ್ತ್ರೀಯರದು ಕೂಡಾ.

ಆನಂದನು ಬುದ್ಧನಿಗೆ ಅನುನಯದಿಂದ ಒಪ್ಪಿಸಲು ಪ್ರಯತ್ನಿಸುವನು.  ಗುರುಪತ್ನಿ ಮೊದಲ ಭಿಕ್ಷುಣಿಯಾಗಲಿ ಎನ್ನುವುದು ತಮ್ಮೆಲ್ಲರ ಆಸೆ ಎನ್ನುವನು. ಅಂಬಾಪಾಲಿಗೂ ಇದು ತಿಳಿದು ಅವಳೂ ದೀಕ್ಷೆಗಾಗಿ ಬೇಡುವಳು. 

ಸ್ತ್ರೀಯರಿಗೆ ದೀಕ್ಷೆ ಕೊಟ್ಟರೆ ತಾನು ಬೆಳೆಸಿದ ಧರ್ಮದಲ್ಲಿ ಅರ್ಧ ಅಳಿಯುವುದು ಎಂದು ಬುದ್ಧ ನುಡಿದಾಗ ಯಶೋಧರಾ ತುಂಬಾ ನೋವಿನಿಂದ ಸ್ತ್ರೀಯರೆನ್ನುವುದು ಇಷ್ಟು ಅಲ್ಪವಾದ ವಸ್ತುವಾಯಿತೇ ಎಂದು ತೊಳಲುವಳು.

ಅದಕ್ಕೆ ಸಮಾಧಾನ ಹೇಳುತ್ತ ಸ್ತ್ರೀಯರು ಸೇರಿಕೊಂಡರೆ ಪುರುಷರಿಗೆ ತಪಸ್ಸು , ಅನುಷ್ಠಾನ ಕಷ್ಟವಾಗಬಹುದು, ಮನಸ್ಸು ಸೋಲಬಹುದು ಇತ್ಯಾದಿ ಮಾತುಗಳು ಬುದ್ಧನವು. ಆದರೆ ಯಶೋಧರಾ ಅದಕ್ಕೆ ಒಪ್ಪುವುದಿಲ್ಲ. ಧರ್ಮವನ್ನು ನಿಲ್ಲಿಸಲು ಎಂತಹ ಕಠಿಣ ನಿಯಮಗಳನ್ನು ಬೇಕಾದರೂ ಸಹಿಸಬಲ್ಲೆವು ಎನ್ನುವಳು. ಅವಳ ಧೀರೋದಾತ್ತ ಗುಣವು ಇಲ್ಲಿ ವ್ಯಕ್ತವಾಗಿದೆ. 

ಕೊನೆಗೂ ಬುದ್ಧ ಒಪ್ಪುವನು. ಆಗ ಎಲ್ಲರಿಗೂ ಸಂತಸವಾಗುವುದು. ಸಧ್ಯ, ಬದುಕಿದೆವು ಎನ್ನುವರು. 

( ಆಗ ಅಲ್ಲಿಗೆ ರಾಜ ಮುಂತಾದವರು ಬರುವರು. )


ರಾಜ__ಏನು ಇದು, ಆನಂದ ?
(ಆನಂದನು ಎಲ್ಲವನ್ನೂ ಹೇಳುವನು.)

ರಾಜ__ಅಂತೆ ? ಒಳಿತಾಯಿತು.
ತನ್ನಾಣ್ಮ ಸಂನ್ಯಾಸವನು ಕೊಂಡನೆಂಬುದನು ಕೇಳ್ದಂದೆ ಕಾಷಾಯವಸ್ತ್ರವನು ಧರಿಸಿದಳು. ಅಂದು ತಾನೇ ಧರಿಸಿದಾ ದೀಕ್ಷೆಯನು ಇಂದು ಗುರುವಾದ ಪತಿಯಿಂದ ಇನ್ನೊಮ್ಮೆ ಪಡೆದಿಹಳು. ತಾಯಿ, ನಿನ್ನಯ ನೋವ ನೋಡಲಾರದೆ ನಾನು ಬಹು ನೊಂದೆನಮ್ಮ. ಅದು ಇಂದು ಕೊನೆಯಾಯಿತು. ಎನಗಿನ್ನು ಚಿಂತೆ ಅನಿತಿಲ್ಲ. ನಿಮ್ಮನು ಕಳುಹಿ ಒಬ್ಬನೇ ಇರಬೇಕು ; ಅದು ಕಷ್ಟವಾಗುವುದು. ಆದರೂ ನಿಮ್ಮ ಸುಖಕಾಗಿ ಅದ ಸಹಿಸುವೆನು.

ಬುದ್ಧ__ಸದ್ಯದಲಿ ದೇವಿ ಭಿಕ್ಷುಣಿ ಇಲ್ಲಿಯೇ ನಿಂದು ಹತ್ತು ವರುಷಗಳಿಂದ ಗೆದ್ದ ತಪವನು ಇಲ್ಲೆ ಮುಂದುವರಿಸುವರು. ರಾಹುಲನ ನಾನೊಯ್ಯುವೆನು.

ಯಶೋ__(ಅಂಬಿಕೆಗೆ) ಇದೆ ನಿಯಮ ಅಂಬಿಕೆ.

ಅಂಬಿಕೆ  (ಎತ್ತಲೋ ನೋಡುತ್ತಿದ್ದು)
ಮಾಜಿ ಏನೆಂದಿರಿ ?

ರಾಜ__ರಾಹುಲನ ? ಅವನಿಗೂ ದೀಕ್ಷೆಯನು ಕೊಟ್ಟುದೇ ?

ಬುದ್ಧ__ರಾಹುಲನ ತಾಯಿ ಅವನಿಗೆ ದೀಕ್ಷೆ ಬೇಡಿದರು: ಕೊಡುವೆನು.

ರಾಜ__ ಎಳೆಸಸಿಯ ಕಿತ್ತು ಒಣಗಿಸಿ ಇಂತು ವಂಶವನು ಮುಗಿಸುವರೆ?ಹಿರಿಯರನು ಕೇಳದೆ ಎಳೆಯರಿಗೆ ದೀಕ್ಷೆಯನು ಕೊಡಬಾರದೆಂಬೆನು. 

ಬುದ್ಧ__ ಒಪ್ಪಿದೆನು.

ರಾಜ__ ಸಂತೋಷ, ಎನ್ನ ಜೀವಿತದಲ್ಲಿ
ಒಂದು ವರುಷ ಎರಡು ವರುಷದಲ್ಲಿ ಒಮ್ಮ ಇಲ್ಲಿಗೈ ತಂದು ಅಗಲಿಕೆಯ ನೋವನು ಹರಿಸಿ ಸಂತಯಿಸಬೇಕು. ಮನುಜನಿಗೆ ವೃದ್ಧಾಪ್ಯದಲಿ ಎಳೆಯ ಜೀವವನು. ಅದರಲಿಯು ತನ್ನಿಂದೊಗೆದ ಎಳೆಯದನು ನೋಡೆ, ಬಳಿಸಾರುತಿಹ ಮೃತ್ಯು ಭೈರವಸ್ಸನ ಒಂದು ಮೃದುಗೀತದಂತಹುದು. 

ಬುದ್ಧ__ಅಂತೆ ಆಗಲಿ; ಬಂದು ಸೇವಿಪೆವು.

ಯಶೋ __ನಾನಿಲ್ಲೆ ಇರುತಿಹೆನು. ಸುತನಂತೆ. ಸುತನ ಈ ಸುತನಂತೆ, ಸೇವಿಸುತ ಇಲ್ಲಿಯೇ ಸಿದ್ದಿಯನು ಕಾಣುವೆನು. 

ರಾಜ__ಸಂತೋಷ, ಅಮ್ಮಾಜಿ.

ಯಶೋ__ ಎನಗಿಂದಣಾನಂದ ಅಚ್ಛಿನ್ನವಪ್ಪಂತೆ ಆಶಿಷವ ಕೊಡಬೇಕು.

ರಾಜ__ ಅಂತೆ ಆಗಲಿ ತಾಯಿ. ನಿನ್ನ ಮನಸಿನ ಹರುಷ ಜಗಕೆಲ್ಲ ಹರಡಲಿ ; ಸೃಷ್ಟಿಯೇ ಸುಖಿಸಲಿ.

ಅಂಬಾ__ಜಯ ಬುದ್ಧ ಗುರುದೇವ ಜಯ ಶುದ್ಧ ಚಾರಿತ್ರ 
ಜಯ ತ್ರಿಲೋಕಾಚಾರ್ಯ ಜಯ ಜಗನ್ಮತ್ರ 
ಜಯ ಪತಿತ ಪಾವನಾ ಜಯಹೆ ದೀನಾವನಾ
ಜಯ ದೇಶಿಕೇಂದ್ರ ಜಯ ಉದ್ಧಾರಕರ್ತ ಜಯ ಭುವನ ಪೂಜ್ಯ ಜಯ ಧವಳ ಕೀರ್ತಿ
 ಜಯಹೆ ಮಮ ಗುರುನಾಥ ಕಾರುಣ್ಯಮೂರ್ತಿ

(ಎಲ್ಲರೂ ಬುದ್ದನಿಗೆ ನಮಿಸುವರು, ತೆರೆ ಬೀಳುವುದು )
_______________ಶುಭಂ____________

ಸಂಕ್ಷಿಪ್ತ ಸಾರಾಂಶ


ರಾಜ ಆ ವೇಳೆಗೆ ಅಲ್ಲಿಗೆ ಬರುವನು. ಆನಂದ ಎಲ್ಲವನ್ನೂ ವಿವರಿಸುವನು. ಯಶೋಧರಾ ಳ ನೋವು ಇಂದಿಗೆ ಕೊನೆಯಾಯಿತಲ್ಲ ಎಂದು ರಾಜನಿಗೆ ಸಮಾಧಾನ. ಒಳ್ಳೆಯದಾಯಿತು ಎನ್ನುವನು. ಬುದ್ಧ ಮನೆ ಬಿಟ್ಟು ಹೋದ ದಿನದಿಂದಲೇ ಯಶೋಧರಾ ಕಾಷಾಯ ವಸ್ತ್ರ ಧರಿಸಿ ಸನ್ಯಾಸಿನಿಯಂತೆಯೇ ಇದ್ದಳು. ಈಗ ಪತಿಯಿಂದಲೇ ಉಪದೇಶ ಸಿಕ್ಕಿರುವುದು. ಬಿಟ್ಟಿರುವುದು ಕಷ್ಟವಾದರೂ ಅವರ ಸುಖಕ್ಕಾಗಿ ಸಹಿಸಿಕೊಳ್ಳುವೆ ಎನ್ನುವನು.

ಆಗಬುದ್ಧನು ಯಶೋಧರಾ ಇಲ್ಲಿಯೇ ಭಿಕ್ಷುಣಿಯಾಗಿದ್ದು ಹತ್ತು ವರ್ಷಗಳಿಂದ ಮಾಡಿದ ತಪವನ್ನು ಮುಂದುವರಿಸಲಿ. ರಾಹುಲನನ್ನು ಕರೆದೊಯ್ಯುವೆ ಎನ್ನುವನು. ರಾಜನಿಗೆ ಆಶ್ಚರ್ಯ. ರಾಹುಲನ ತಾಯಿಯೇ ಮಗನಿಗೆ ಉಪದೇಶ ಕೊಡಿ ಎಂದಿಹರು ಎಂದು ಬುದ್ಧ ಹೇಳಲು ರಾಜ ಒಪ್ಪುವುದಿಲ್ಲ. ವಂಶದ ಕುಡಿಯನ್ನು ಹಿರಿಯರ ಅನುಮತಿ ಕೇಳದೆಯೇ ಹೀಗೆ ಕಳಿಸುವುದು ಸರಿಯೆ ಎಂದು ನೊಂದು ಹೇಳಿದಾಗ ಬುದ್ಧ ಒಪ್ಪುವನು. 

ವರುಷಕ್ಕೋ ಎರಡು ವರುಷಕ್ಕೋ ಒಮ್ಮೆ ಇಲ್ಲಿಗೆ ಬಂದು ಈ ವೃದ್ಧನ ಮನಸ್ಸಿಗೆ ಸಂತಸ ಕೊಡಬೇಕು. ಆಗ ಮೃತ್ಯುವಿನ ರುದ್ರ ಸ್ವರವೂ ಮೃದುಗೀತವಾಗುತ್ತದೆ. ಎಂದು ರಾಜ ಕೇಳಿಕೊಳ್ಳಲು ಬುದ್ಧ ಆಗಲಿ  ಎನ್ನುವನು. ಎಲ್ಲರಿಗೂ ಸಂತಸವಾಗುತ್ತದೆ.

ಯಶೋಧರಾ ರಾಜನಿಗೆ ಸಮಾಧಾನ ಹೇಳುವಳು. ತಾನು ಅವನ ಮಗನಂತೆ, ಆ ಮಗನ ಮಗನಂತೆ ಜೊತೆಯಿದ್ದು ನೋಡಿಕೊಳ್ಳುವೆನು. ಪತಿಯ ಉಪದೇಶ ಪಾಲಿಸುವೆನು ಎನ್ನುವಳು. ಅವಳ ಮನದ ವ್ಯಸನ ದೂರವಾಗಿ ಸಮಾಧಾನ ಮೂಡಿದೆ.

ಅಂಬಾಪಾಲಿಯು ಗುರುವಿನ ಮಹಿಮೆಯನ್ನು ಕುರಿತು ಸ್ತೋತ್ರ ಮಾಡುವಳು. ಜಯ ಜಯವೆಂದು ಹಾಡುವಳು. ಎಲ್ಲರೂ ನಮಿಸುವರು.
( ತೆರೆ ಬೀಳುವುದು )


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ