ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ.ವಿ.ಕೆ. ಶಾಸ್ತ್ರಿ


 ಬಿ. ವಿ. ಕೆ. ಶಾಸ್ತ್ರಿ


ಬಿ. ವಿ. ಕೆ. ಶಾಸ್ತ್ರಿ  ಅವರು ಚಿತ್ರಕಲಾ ಮಹೋದಯರಾಗಿ, ಸಂಗೀತ ಶಾಸ್ತ್ರಜ್ಞರಾಗಿ ಮತ್ತು  ಸಂಗೀತ ವಿಮರ್ಶಕರಾಗಿ ಪ್ರಸಿದ್ಧರಾಗಿದ್ದವರು.  ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. 

ಬಿ.ವಿ.ಕೆ. ಶಾಸ್ತ್ರಿಯವರು 1917ರ ಜುಲೈ 30ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಯ್ಯ.  ತಾಯಿ ಸುಬ್ಬಮ್ಮ. 

ಬಾಲ್ಯದಿಂದಲೇ ಸಂಗೀತದ ಗೀಳು ಹಿಡಿಸಿಕೊಂಡಿದ್ದ ಶಾಸ್ತ್ರಿಗಳು ಭಜನ ಗೋಷ್ಠಿಯೊಂದರಲ್ಲಿ ಹಾಡಿದ್ದನ್ನು ಕೇಳಿದ ಅವರ ಉಪಾಧ್ಯಾಯರಾದ ಸುಬ್ರಹ್ಮಣ್ಯಂ ಎಂಬುವರು ಶಾಸ್ತ್ರೀಯ ಸಂಗೀತ ಕಲಿಯುವಂತೆ ಪ್ರೇರೇಪಿಸಿದರು. ಮುಂದೆ ಮೈಸೂರಿಗೆ ಬಂದ ಶಾಸ್ತ್ರಿಗಳಿಗೆ ಆಸ್ಥಾನ ವಿದ್ವಾಂಸರಾದ ಚಿಕ್ಕರಾಮರಾಯರಲ್ಲಿ ಕ್ರಮಬದ್ಧ ಪಾಠವಾಯಿತು.

ಕಲೆಗಳ ಬಗ್ಗೆ ಶಾಸ್ತ್ರಿಗಳು ಬೆಳೆಸಿಕೊಂಡಿದ್ದ ತೀವ್ರ ಆಸಕ್ತಿಗೆ ಸಾಟಿಯಿಲ್ಲ. ಈ ಸಂಬಂಧವಾಗಿ ಅವರು ಓದದ ಪುಸ್ತಕವಿಲ್ಲ. ವಿಚಾರ ಮಾಡದ ವಿಷಯವಿಲ್ಲ. ಒಂದೇ ಕಲಾ ಪ್ರಕಾರಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳಲಾರದ ಕುತೂಹಲದ ದೃಷ್ಟಿ ಅವರಲ್ಲಿತ್ತು.  ಮೈಸೂರಿನ ಜಯಚಾಮರಾಜೇಂದ್ರ ಟೆಕ್ನಿಕಲ್‌ ಇನ್‌ಸ್ಟಿಟ್ಯೂಟಿನಿಂದ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದು ಅದರಲ್ಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದಿದ್ದ ಶಾಸ್ತ್ರಿಗಳು ತಮ್ಮೊಳಗಿನ ಸೃಜನಶೀಲ ತುಡಿತಗಳಿಂದ ಸಂಗೀತ  ವಿಮರ್ಶಕರಾಗಿ ರೂಪುಗೊಂಡರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೈಸೂರಿನ ‘ಸಾಧ್ವಿ’ ಪತ್ರಿಕೆಯ ಸಂಪಾದಕರಾದ ಅಗರಂ ರಂಗಯ್ಯನವರು ಜೈಲು ಸೇರಿದಾಗ ಶಾಸ್ತ್ರಿಗಳು ಆ ಪತ್ರಿಕೆಯ ಹೊಣೆ ನಿರ್ವಹಿಸಿದರು.   ಮುಂದೆ ಇ. ಆರ್. ಸೇತೂರಾಂ ಅವರಿಂದ ಪ್ರಜಾವಾಣಿಗೆ  ಕಲಾವಿಮರ್ಶೆ ಬರೆಯಲು ಆಹ್ವಾನ ಪಡೆದರು.  ನೃತ್ಯ, ಸಂಗೀತ, ಕಲೆಯ ಬಗ್ಗೆ ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ, ಸುಧಾ, ಜನಪ್ರಗತಿ, ಪ್ರಬುದ್ಧ ಕರ್ನಾಟಕ, ಇಲಸ್ಟ್ರೇಟೆಡ್‌ ವೀಕ್ಲಿ ಮುಂತಾದ ಘನ ಪತ್ರಿಕೆಗಳಲ್ಲಿ ಪ್ರಕಟಗೊಂಡ ಬಿ.ವಿ.ಕೆ. ಯವರ ಲೇಖನಗಳಿಗೆ ಲೆಕ್ಕವಿಲ್ಲ.  ಮುರಳಿ ಕಾವ್ಯನಾಮದಲ್ಲಿ  ಪತ್ರಿಕೆಗಳಿಗೆ ಅವರು  ಬರೆದ ಅನೇಕ ವಿಮರ್ಶಾ ಲೇಖನಗಳು ಹಾಗೂ ಕರ್ನಾಟಕದ ಸಂಗೀತ ವಿದ್ವಾಂಸರ ಸಿದ್ಧಿ-ಸಾಧನೆಗಳ ಕುರಿತಾದ ಲೇಖನಗಳು ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದವು.  

ಆಳವಾದ ಪರಿಶ್ರಮದ ಫಲರೂಪವಾಗಿ ಮೂಡಿದ ಶಾಸ್ತ್ರಿಗಳ  ಕೃತಿಗಳು ಅತ್ಯಂತ ಜನಾದರಣೀಯವಾದವು. Tradtional Paintings of Karnataka ಕನ್ನಡ ಮತ್ತು ಇಂಗ್ಲೀಷ್‌, ಎರಡೂ ಆವೃತ್ತಿಗಳಲ್ಲಿ ಹೊಮ್ಮಿದ ಮಹತ್ವದ  ಕೃತಿ. ಭಾರತೀಯ ಪಾಶ್ಚ್ಯಾತ್ಯ, ಶಾಸ್ತ್ರೀಯ, ಸುಗಮ, ಜಾನಪದ ಮುಂತಾಗಿ ಸಂಗೀತದ ಎಲ್ಲ ಪ್ರಕಾರಗಳು, ಚಿತ್ರ, ನಾಟ್ಯ, ಶಿಲ್ಪ, ನಾಟಕ, ಭಾವಚಿತ್ರ, ಪತ್ರಿಕೋದ್ಯಮ, ಮೊದಲಾದ ಎಲ್ಲ ಕಲಾರಂಗಗಳ ಪ್ರಾಚೀನ ಹಾಗೂ ನವೀನ ರೂಢಿ, ಸಂಪ್ರದಾಯಗಳನ್ನು ಅರಗಿಸಿಕೊಂಡಿದ್ದ ಶಾಸ್ತ್ರಿಯವರ ಈ ವಿಷಯಗಳನ್ನು ಕುರಿತ ಬರಹಗಳ ವ್ಯಾಪ್ತಿ ತುಂಬಾ ವಿಶಾಲವಾದದ್ದು.  ಶಾಸ್ತ್ರಿಗಳು ಮೂರು ತಲೆಮಾರಿನ ಕಲಾವಿದರಲ್ಲಿ ಬಹುಶ್ರುತರನೇಕರ ಆತ್ಮೀಯ ಒಡನಾಟ ಪಡೆದದ್ದರಿಂದ,  ವ್ಯಕ್ತಿ ಚಿತ್ರಣದಿಂದ ಮೊದಲ್ಗೊಂಡು, ಕಲಾ ಪ್ರಪಂಚದ ಗಹನ ವಿಷಯಗಳವರೆಗೆ ಅವರ ಬರಹಗಳ  ಹರಹು ವ್ಯಾಪಿಸಿತ್ತು.

ಶಾಸ್ತ್ರಿಗಳ ಸೇವೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವಾರು ಸಾಂಸ್ಕೃತಿಕ ಶಾಖೆಗಳಾದ ಆಕಾಶವಾಣಿ ಆಯ್ಕೆ ಸಮಿತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಇಂಡಿಯನ್‌ ಕೌನ್ಸಿಲ್‌ ಆಫ್‌ ಕಲ್ಚರಲ್‌ ರಿಲೇಷನ್ಸ್‌, ಸೌತ್‌ ಝೋನ್‌ ಕಲ್ಚರಲ್‌ ಸೆಂಟರ್, ಕೇಂದ್ರ ಲಲಿತಕಲಾ ಅಕಾಡೆಮಿ, ಕಾಳಿದಾಸ ಸಮ್ಮಾನ್‌ ಸಮಿತಿ ಮೊದಲಾದವು ವ್ಯಾಪಕವಾಗಿ ಬಳಸಿಕೊಂಡಿದ್ದವು. ಕರ್ನಾಟಕ ಗಾನಕಲಾ ಪರಿಷತ್ತಿನ ಆರಂಭದ ದಿನಗಳಿಂದಲೂ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದ ಶಾಸ್ತ್ರಿಗಳದ್ದು ಆ ಸಂಸ್ಥೆಯ ಬೆಳವಣಿಗೆಯಲ್ಲಿ  ಹಿರಿಯ ಪಾತ್ರವೆನಿಸಿದೆ.

ದೇಶ, ವಿದೇಶಗಳ ಸಾಂಸ್ಕೃತಿಕ ಉತ್ಸವ ಸಮಿತಿಗಳಲ್ಲಿ ನಾಮಾಂಕಿತರಾಗಿ ಶ್ರಮಿಸಿದ ಶಾಸ್ತ್ರಿಗಳು 1986ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾರ್ಕ್‌ ಶೃಂಗಸಭೆಯ ಅಂಗವಾಗಿ ಏರ್ಪಡಿಸಲಾಗಿದ್ದ ಅಖಿಲ ಭಾರತೀಯ ಸಾಂಸ್ಕೃತಿಕ ಉತ್ಸವ ‘ದಾಕ್ಷಿಣಿ’ಯ ದಕ್ಷ ಸಮನ್ವಯಕಾರರಾಗಿ ಅಪಾರ ಪ್ರಶಂಸೆಗೆ ಪಾತ್ರರಾದರು. ಇಂಥ ಎಲ್ಲ ಚಟುವಟಿಕೆಗಳ ಮೂಲಕ ಅರ್ಹ ಕಲಾವಿದರಿಗೆ ಸಲ್ಲಬೇಕಾದ ಮನ್ನಣೆ, ಸ್ಥಾನಗಳನ್ನು ದೊರಕಿಸಿಕೊಡಲು ಅವರು ಮಾಡಿದ ಯಶಸ್ವೀ ಪ್ರಯತ್ನಗಳು ಅವಿಸ್ಮರಣೀಯವೆನಿಸಿವೆ.

ಆಕಾಶವಾಣಿ ವಾರ್ಷಿಕ ಪುರಸ್ಕಾರ, ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನಾಧ್ಯಕ್ಷರಾಗಿ ಪಡೆದ ಸಂಗೀತ ಕಲಾರತ್ನ,  ರಾಜ್ಯೋತ್ಸವ ಪ್ರಶಸ್ತಿ,  ಕರ್ನಾಟಕ ಲಲಿತಕಲಾ ಅಕಾಡೆಮಿ ಪುರಸ್ಕಾರ, ಮದ್ರಾಸ್ ಮ್ಯೂಸಿಕ್‌ ಅಕಾಡೆಮಿ ಸಲ್ಲಿಸಿದ ಟಿ.ಟಿ.ಕೆ.ಪ್ರಶಸ್ತಿ,  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ,  ದೆಹಲಿ ಲಲಿತಕಲಾ ಅಕಾಡೆಮಿಯಿಂದ ರೀಜನಲ್‌ ಕ್ರಿಟಿಕ್ಸ್ ಅವಾರ್ಡ್,  ಮೈಸೂರು ಟಿ.ಚೌಡಯ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಶಾಸ್ತ್ರಿಗಳಿಗೆ ಸಂದಿದ್ದವು.  ಇವುಗಳಿಗೆ ಕಿರೀಟ ಪ್ರಾಯವಾದದ್ದು ಅವರ 75ನೇ ಪ್ರಾಯದಲ್ಲಿ ಅಭಿಮಾನಿಗಳು ಆತ್ಮೀಯತೆಯಿಂದ ಅದ್ಧೂರಿಯಾಗಿ ಸನ್ಮಾನಿಸಿ ಸಮರ್ಪಿಸಿದ ಅಭಿನಂದನಾ ಗ್ರಂಥ ‘ಮುರಳಿ ವಾಣಿ’.

ತಮ್ಮ ಕೊನೆಯ ವರ್ಷಗಳಲ್ಲಿ ಶಾಸ್ತ್ರಿಗಳಿಗೆ ಬೆಂಗಳೂರಿನ ಅನನ್ಯ ಸಂಸ್ಥೆಯ ಒಡನಾಟ  ಅತ್ಯಂತ ಆಪ್ತವಾಗಿತ್ತು. ತಮ್ಮ ಜೀವನವಿಡೀ ವಿದ್ವತ್ಪೂರ್ಣ ಪ್ರಭೆಯಿಂದ ಪ್ರಕಾಶಿಸುತ್ತಾ ನಿರಂತರವಾಗಿ ಕ್ರಿಯಾಶೀಲರಾಗಿದ್ದ ಬಿ. ವಿ. ಕೆ. ಶಾಸ್ತ್ರಿಗಳು 2003ರ ಸೆಪ್ಟೆಂಬರ್‌ 22ರಂದು ಈ ಲೋಕವನ್ನಗಲಿದರು. 

B.V.K. Shastri

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ