ಕು. ರ. ಸೀ
ಕು. ರ. ಸೀತಾರಾಮ ಶಾಸ್ತ್ರಿ
ಕು. ರ. ಸೀತಾರಾಮ ಶಾಸ್ತ್ರಿಗಳ ಮಹಾನ್ ಚಿತ್ರಸಾಹಿತಿಗಳಾಗಿ ಅಮರರು.
ನನಗೆ ಕು. ರ. ಸೀತಾರಾಮಶಾಸ್ತ್ರಿಗಳ ಗೀತೆಗಳೆಂದರೆ ಒಂದು ಅಚ್ಚರಿ ತುಂಬಿದ ಆಪ್ತತೆ. ಅವರ ಕುರಿತು ವಿವರ ಸಿಕ್ಕಿರಲಿಲ್ಲ ಎಂಬ ಅತೃಪ್ತಿ ಇತ್ತು. ಇಂತಹ ವಿವರಗಳನ್ನು ಪಡೆಯಬೇಕೆಂದರೆ ಎನ್. ಎಸ್. ಶ್ರೀಧರಮೂರ್ತಿಗಳನ್ನೇ ಓದಬೇಕು. ಶ್ರೀಧರಮೂರ್ತಿಗಳು ತಪಸ್ಸಿನಂತೆ ಹಿರಿಯ ವ್ಯಕ್ತಿಗಳ ಬಾಳನ್ನು ಅರಸಿಹೋಗಿ ಓದುಗನಿಗೆ ತಂದುಕೊಡುತ್ತಾರೆ. ಹಾಗಾಗಿ ಮೊದಲು ಆಪ್ತರಾದ ಎನ್. ಎಸ್. ಶ್ರೀಧರಮೂರ್ತಿ Sreedhara Murthy ಅವರಿಗೆ ಕೃತಜ್ಞತೆ.🌷🙏🌷
ಕು.ರ.ಸೀತಾರಾಮ ಶಾಸ್ತ್ರಿಗಳು 1920ರ ಸೆಪ್ಟಂಬರ್ 22ರಂದು ಜನಿಸಿದರು. ಬಹಳ ಜನ ಅವರ ಹೆಸರನ್ನು ಕು.ರಾ.ಸೀ ಎಂದು ತಪ್ಪು ತಿಳಿದಿದ್ದಾರೆ. ಕು. ರ. ಸೀತಾರಾಮಶಾಸ್ತ್ರಿಗಳ ತಂದೆ ಕುಮಾರಸ್ವಾಮಿಗಳು ನವಗ್ರಹ ಹೋಮ ಮಾಡುವಾಗ ರವಿಕುಂಡದಿಂದ ಎದ್ದ ಬೆಳಕಿನ ಜ್ವಾಲೆ ಅವರ ಧರ್ಮಪತ್ನಿ ಸುಬ್ಬಮ್ಮನವರ ಗರ್ಭವನ್ನು ಪ್ರವೇಶಿಸಿದಂತೆ ಭಾಸವಾಯಿತಂತೆ. ಹೀಗೆ ಜನಿಸಿದ ಮಗನಿಗೆ ರವಿ ಎಂದೇ ಹೆಸರಿಡಬೇಕು ಎನ್ನುವ ಸಂಕಲ್ಪ ಅವರಲ್ಲಿ ಮೂಡಿತು. ಆದರೆ ತಂದೆಯ ಹೆಸರು ಇಡಬೇಕು ಎಂದೇ ಮೊದಲು ನಿರ್ಧಾರ ಕೂಡ ಆಗಿತ್ತು. ಬಹಳ ಯೋಚಿಸಿದ ನಂತರ ರವಿಸೀತಾರಾಮ ಶಾಸ್ತ್ರಿ ಎಂದು ಮಗುವಿಗೆ ಹೆಸರಿಟ್ಟರು. ಹೀಗಾಗಿ ಅವರ ಪೂರ್ಣ ಹೆಸರು ಕುಮಾರಸ್ವಾಮಿ ರವಿಸೀತಾರಾಮ ಶಾಸ್ತ್ರಿ. ಅದರ ಹೃಸ್ವ ರೂಪವಾಗಿ ಅವರು ‘ಕು.ರ.ಸೀ’ ಎಂದು ತಮ್ಮನ್ನು ಕರೆದುಕೊಂಡರು.
ಮೆಲ್ಲುಸುರೀ ಸವಿಗಾನ, ಬಿಂಕದ ಸಿಂಗಾರಿ, ತುಟಿಯ ಮೇಲೆ ತುಂಟ ಕಿರುನಗೆ, ಜೇನಿರುಳು ಜೊತೆಗೂಡಿರಲು, ಅಂಕದ ಪರದೆ ಜಾರಿದ ಮೇಲೆ, ಬಾಳೊಂದು ನಂದನ, ದೇವ ದರುಶನವ ನೀಡೆಯ, ಈ ದೇಹ ಮೂರುದಿನ, ಹಾರುತ ದೂರ ದೂರ, ಜಿಗಿ ಜಿಗಿಯುತ, ಎಲ್ಲಿಹರೋ ನಲ್ಲ, ಸುವ್ವಿ ಸುವ್ವಿ ಸುವ್ವಾಲೆ ಮೊದಲಾದ ಮಧುರ ಗೀತೆಗಳ ಸೃಷ್ಟಿಕರ್ತರು ಕು. ರ. ಸೀತಾರಾಮ ಶಾಸ್ತ್ರಿಗಳು. ಸಲೀಲ್ ಚೌಧರಿಯವರೊಂದಿಗೆ ಸವಾಲು ಹಾಕಿ ಎರಡೇ ನಿಮಿಷದಲ್ಲಿ ದೂರದಿಂದ ಬಂದಂತ ಸುಂದರಾಂಗ ಜಾಣ ಗೀತೆಯನ್ನು ರಚಿಸಿದರಂತೆ. ಶಾಸ್ತ್ರಿಗಳು ಸಿಂಗಾಪುರಕ್ಕೆ ಹೋಗಿ ಮಲೆಯ ಭಾಷೆಯಲ್ಲಿ ಕುರಾನ ಕಾವ್ ಮತ್ತು ಈಮಾನ್ ಚಿತ್ರಗಳನ್ನು ನಿರ್ದೇಶಿಸಿ ಜಾಗತಿಕ ಮನ್ನಣೆ ಪಡೆದವರು. ತೆಲುಗು ಬರಹಗಾರರು ಚಿತ್ರಗೀತೆಯಲ್ಲಿ ರಾಮಾಯಣ ಬರೆದರೆ ಲೇಖನಿಯನ್ನೇ ಎತ್ತಿಡುತ್ತೇನೆ ಎಂದು ಒಡ್ಡಿದ್ದ ಸವಾಲನ್ನು ಸ್ವೀಕರಿಸಿ 'ರಾಮನ ಅವತಾರ' ಎಂಬ ಭವ್ಯ ಗೀತೆಯನ್ನು ರಚಿಸಿದ್ದನ್ನು ಬಿ.ಸರೋಜಾ ದೇವಿ ಅವರು ಗೌರವದಿಂದ ಸ್ಮರಿಸುತ್ತಾರೆ. ಮಹಾನ್ ಚಿತ್ರಸಾಹಿತಿ ಆರ್. ಎನ್. ಜಯಗೋಪಾಲ್ ಅವರಿಗೆ ಕು.ರ.ಸೀ ಎಂದರೆ ಅಪಾರ ಗೌರವವಿತ್ತು.
ಕು. ರ. ಸೀತಾರಾಮ ಶಾಸ್ತ್ರಿಗಳು ಜಗದ್ಗುರು ಶಂಕರಾಚಾರ್ಯರ ಪರಮಭಕ್ತರಾಗಿದ್ದು ತಮ್ಮ ಕವಿತೆಗಳನ್ನು ‘ಶಂಕರತನಯ’ ಎನ್ನುವ ಹೆಸರಿನಲ್ಲಿ ಬರೆದಿದ್ದರು. ಚಿತ್ರರಂಗಕ್ಕೆ ಬರುವ ಮೊದಲೇ ಕೊಲಂಬಿಯಾ ಸಂಸ್ಥೆ ಅವರು ಬರೆದ್ದಿದ್ದ ದೇಶಭಕ್ತಿಗೀತೆಗಳ ಗ್ರಾಮಾಪೋನ್ ಪ್ಲೇಟ್ ಅನ್ನು ಹೊರತಂದಿತ್ತು. ಬಿ.ಜಯಮ್ಮ ಮತ್ತು ಹೊನ್ನಪ್ಪ ಭಾಗವತರ್ ಈ ಗೀತೆಗಳನ್ನು ಹಾಡಿದ್ದು ಇದರಲ್ಲಿನ ‘ಭಾರತ ಭಾಸ್ಕರ’, 'ಮಹಾತ್ಮ ಭಾರತ ಭಾಗ್ಯವಿದಾತ’ ಮೊದಲಾದ ಗೀತೆಗಳು ಜನಪ್ರಿಯ ಕೂಡ ಆಗಿದ್ದವು.
ಕು.ರ. ಸೀ ಅವರ ಕುರಿತು ಇನ್ನೊಂದು ತಪ್ಪು ಕಲ್ಪನೆಯಿದೆ. ಅವರ ಬಹಳ ಜನಪ್ರಿಯವಾದ ‘ವೀರಕೇಸರಿ’ ಚಿತ್ರದ ‘ಮೆಲ್ಲುಸುರೀ ಸವಿಗಾನ’ವನ್ನು ಎಲ್ಲರೂ ‘ಮೆಲ್ಲುಸಿರೇ ಸವಿಗಾನ’ ಎಂದು ಹಾಡುತ್ತಾರೆ. ಸ್ವತ: ಕು.ರ.ಸೀಯವರೇ ಇದು ತಪ್ಪು ಎಂದು ತಿದ್ದಲು ಆ ಕಾಲದಲ್ಲಿಯೇ ಪ್ರಯತ್ನಿಸಿದ್ದರು. ಮೆಲ್ಲುಸಿರೇ ಎಂದರೆ ಸಾಹಿತ್ಯಿಕವಾಗಿ ಕೂಡ ಅರ್ಥ ದೊರಕದು. ಅಪಾರ ಪದಭಂಡಾರವನ್ನೇ ಹೊಂದಿದ್ದ ಕು.ರ.ಸೀ ಇಂತಹ ತಪ್ಪು ಮಾಡಲಾರರು ಎನ್ನುವುದನ್ನೂ ನಾವು ಗಮನಿಸಬೇಕು ಎನ್ನುತ್ತಾರೆ ನಮ್ಮ ಶ್ರೀಧರಮೂರ್ತಿ ಸಾರ್.
ಸಂಪೂರ್ಣ ರಾಮಾಯಣ, ಸಂಪೂರ್ಣ ಮಹಾಭಾರತ, ವಿಜಯನಗರ ಸಾಮ್ರಾಜ್ಯ, ಜಗದ್ಗುರು ಶಂಕರಾಚಾರ್ಯರ ಕುರಿತು ಕು. ರ. ಸೀತಾರಾಮ ಶಾಸ್ತ್ರಿಗಳು ಸಿದ್ದಪಡಿಸಿದ್ದ ಸ್ಕಿಪ್ಟ್ಗಳು ಅಮೂಲ್ಯ ದಾಖಲೆಗಳಂತಿವೆ ಎನ್ನುತ್ತಾರೆ ಎನ್.ಎಸ್.ಎಸ್.
1977ರ ನವಂಬರ್ 12ರಂದು ನಿಧನರಾದಾಗ ಕು.ರ. ಸೀತಾರಾಮ ಶಾಸ್ತ್ರಿಗಳಿಗೆ ಇನ್ನೂ 57 ವರ್ಷ. ಕು. ರ. ಸೀ ಅವರು ಬರೆದದ್ದು ಕೇವಲ 143 ಚಿತ್ರಗೀತೆಗಳು. ಎಲ್ಲವೂ ಮಾಣಿಕ್ಯವೇ. ನಿರ್ದೇಶಿಸಿದ್ದು ಕನ್ನಡದಲ್ಲಿ ಮಹಾಕವಿ ಕಾಳಿದಾಸ, ಸದಾರಮೆ, ಅಣ್ಣ ತಂಗಿ, ರಾಣಿ ಹೊನ್ನಮ್ಮ, ಮನ ಮೆಚ್ಚಿದ ಮಡದಿ, ಬೆರತ ಜೀವ ಮತ್ತು ಕಲ್ಪವೃಕ್ಷ. ಹೀಗೆ ಏಳು ಚಿತ್ರಗಳನ್ನು ತೆಲುಗಿಗೂ ತೆಗೆದು ಕೊಂಡ ಹೋದ ಹೆಗ್ಗಳಿಕೆ ಅವರದು.
ಕು.ರ.ಸೀಯವರ ಮಡದಿ ಆರ್.ಪದ್ಮಿನಿದೇವಿ ಇತ್ತೀಚಿನವರೆಗೂ ಈ ಲೋಕದಲ್ಲಿದ್ದರು. ಶ್ರೀಧರಮೂರ್ತಿಯವರು
ಕು. ರ. ಸೀತಾರಾಮ ಶಾಸ್ತ್ರಿಗಳ ಪುತ್ರಿ ಡಾ. ಆರ್ಯ ಮತ್ತು ಹಲವು ಮಹನೀಯರೊಂದಿಗೆ ಮಾತನಾಡಿ ಕು. ರ. ಸೀ ಅವರ ಬದುಕು-ಸಾಧನೆಗಳ ವಿವರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರಿಗೆ ನಾವು ಕೃತಜ್ಞತೆ ಹೇಳುವ ಮೂಲಕ ಮಹಾನ್ ಸಾಹಿತಿ ಕು. ರ. ಸೀತಾರಾಮ ಶಾಸ್ತ್ರಿಗಳಿಗೆ ನಮಿಸೋಣ.
ಕೃತಜ್ಞತೆ: Sreedhara Murthy Sir 🌷🙏🌷
On birth anniversary of great lyricist, playwright, Director and poet K. R. Seetharama Shastri 🌷🙏🌷
ಕಾಮೆಂಟ್‌ಗಳು