ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾರಾಸಿಂಗ್


 ದಾರಾಸಿಂಗ್ 


ನಿತ್ಯ ಹಸನ್ಮುಖಿ, ವಜ್ರಕಾಯದ ಕುಸ್ತಿಪಟು,  ರಾಮಾಯಣ ಧಾರಾವಾಹಿಯ ವಾಯುಪುತ್ರ ಹನುಮಾನ್, ನೂರಾರು ಚಿತ್ರಗಳ ನಟ, ಚಿತ್ರೋದ್ಯಮಿ,  ರಾಜ್ಯಸಭಾ ಸದ್ಯಸ್ಯ ಹೀಗೆ ಪ್ರಸಿದ್ಧರಾಗಿದ್ದವರು  ದಾರಾಸಿಂಗ್.

ದಾರಾಸಿಂಗ್ ಅವರ ಮೂಲ ಹೆಸರು ದೀದಾರ್ ಸಿಂಗ್ ರಾಂಧವ.  ಅವರು 1928ರ ನವೆಂಬರ್ 19ರಂದು ಪಂಜಾಬಿನ ಮಾಜಾಹ್ ಪ್ರದೇಶದ ಧರ್ಮುಚಾಕ್ ಎಂಬ ಹಳ್ಳಿಯಲ್ಲಿ ಜನಿಸಿದರು.

ದಾರಾಸಿಂಗ್ 1947ರಲ್ಲಿ ಹೊಟ್ಟೆಪಾಡಿಗಾಗಿ ಸಿಂಗಾಪುರಕ್ಕೆ ಬಂದರು. ಅಲ್ಲಿ ಹರ್ನಾಮ್  ಸಿಂಗ್ ಎಂಬುವರಲ್ಲಿ ಕುಸ್ತಿ ಕಲಿಯಲಾರಂಭಿಸಿದರು. ಸ್ವಾಭಾವಿಕವಾದ ಎತ್ತರದ ಕಾಯ ಮತ್ತು ಶಿಸ್ತಿನ ವ್ಯಾಯಾಮಗಳಿಂದ ಮೂಡಿದ ಅವರ ಮೈಕಟ್ಟು ಎಂತಹವರನ್ನು ದಂಗುಬಡಿಸುವಂತಹದ್ದಾಗಿತ್ತು. ಅವರು,   ಆರು ಅಡಿ 2 ಇಂಚು ಎತ್ತರ, 53 ಇಂಚಿನ ಎದೆ ಮತ್ತು 127ಕೆಜಿ ತೂಕಗಳಿಂದ‍ ಆಜಾನುಬಾಹುವಾಗಿದ್ದರು. 

ದಾರಾಸಿಂಗ್ 1947ರಿಂದ 1983ರವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಪಟುವಾಗಿ ಪ್ರಸಿದ್ಧರಾದರು.  ಟಾರ್ಲೊಕ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಆಫ್ ಮಲೇಷ್ಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. 1954ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಆದರು. ಆ ಕಾಲದ ಘಟಾನುಘಟಿ ಕುಸ್ತಿಪಟುವಾಗಿದ್ದ ಕಿಂಗ್ ಕಾಂಗ್ ಅವರನ್ನು ಪರಾಜಯಗೊಳಿಸಿ 1959ರಲ್ಲಿ ಕಾಮನ್ ವೆಲ್ತ್ ಚಾಂಪಿಯನ್ ಪಟ್ಟ ಪಡೆದರು. ಜಾರ್ಜ್ ಗೋರ್ಡಿಯೆಂಕೋ ಮತ್ತು ಜಾನ್ ಡಿಸಿಲ್ವಾ ಅವರಿಗೂ ಸೋಲಿನ ರುಚಿ ಉಣಿಸಿದ್ದರು. 1969ರಲ್ಲಿ ಅಮೆರಿಕಾದ ಲೋವ್ ಥೆಝ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಬಲಾಢ್ಯ ಕುಸ್ತಿಪಟುವಾಗಿ ದಾರಾಸಿಂಗ್ ರುಸ್ತುಂ ಎ ಹಿಂದ್, ರುಸ್ತುಂ ಎ ಪಂಜಾಬ್ ಎಂಬ ಬಿರುದುಗಳಿಗೆ ಪಾತ್ರರಾಗಿದ್ದರು. ಅವರು 1983ರಲ್ಲಿ ಸ್ಪರ್ಧಾತ್ಮಕ ಕುಸ್ತಿ ಭಾಗವಹಿಕೆಗೆ  ವಿದಾಯ ಘೋಷಿಸಿದರು.

1950ರ ದಶಕದಲ್ಲಿ ಚಿತ್ರರಂಗಕ್ಕೆ ಬಂದ ದಾರಾಸಿಂಗ್  ತಮ್ಮದೇ ವರಸೆಗಳಿಗೆ ಹೆಸರಾಗಿದ್ದರು. ದಾರಾಸಿಂಗ್ ಹಿಂದಿ ಮತ್ತು ಪಂಜಾಬಿ ಸಿನಿಮಾಗಳ ನಿರ್ಮಾಪಕರಾಗಿ, ನಿರ್ದೇಶಕರಾಗಿ ಹಾಗೂ ಕಥೆಗಾರರಾಗಿಯೂ ದುಡಿದಿದ್ದರು. 1952ರಲ್ಲಿ ದಾರಾಸಿಂಗ್ ಸಾಂಗ್ಡಿಲ್ ಎಂಬ ಹಿಂದಿ ಚಿತ್ರದಲ್ಲಿ ಮೊತ್ತ ಮೊದಲಿಗೆ ಅಭಿನಯಿಸಿದರು. ಆರ್ ಸಿ ತಲ್ವಾರ್ ಅವರು ನಿರ್ಮಿಸಿ, ನಿರ್ದೇಶಿಸಿದ ಈ ಚಿತ್ರಕ್ಕೆ ರಮಾನಂದ್ ಸಾಗರ್ ಅವರ ಚಿತ್ರಕಥೆ ಇತ್ತು. ದಿಲೀಪ್ ಕುಮಾರ್, ಮಧುಬಾಲಾ ಮುಖ್ಯಭೂಮಿಕೆಯಲ್ಲಿದ್ದರು. ಸಾಂಗ್ಡಿಲ್ ಸಿನಿಮಾಕ್ಕೆ ಚಿತ್ರಕಥೆ ಬರೆದ ರಮಾನಂದ್ ಸಾಗರ್ 1987ರಲ್ಲಿ ತಾವು ನಿರ್ದೇಶಿಸಿದ ರಾಮಾಯಣ ಧಾರಾವಾಹಿಯಲ್ಲಿ ದಾರಾಸಿಂಗ್ ಅವರಿಗೆ ಹನುಮಾನ್ ಪಾತ್ರ ನೀಡಿ  ಜನಪ್ರಿಯಗೊಳಿಸಿದರು.

ಸ್ಟಂಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ದಾರಾ ಸಿಂಗ್ 1962ರಲ್ಲಿ ಬಾಬುಭಾಯಿ ಮಿಸ್ಟ್ರಿ ಅವರ 'ಕಿಂಗ್ ಕಾಂಗ್' ಸಿನಿಮಾದಲ್ಲಿ ನಟಿಸಿದರು. ಮುಮ್ತಾಜ್ ಮತ್ತು ದಾರಾಸಿಂಗ್ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈ ಜೋಡಿ 16 ಹಿಂದಿ ಸಿನಿಮಾಗಳಲ್ಲಿ ನಟಿಸಿತ್ತು.

ರುಸ್ತುಂ ಎ ಬಾಗ್ದಾದ್, ಅವಾರಾ ಅಬ್ದುಲ್ಲಾ, ಆಯಾ ತೂಫಾನ್, ಲುಟೇರಾ, ನೌಜವಾನ್, ಡಾಕು ಮಂಗಲ್ ಸಿಂಗ್, ಚೋರೋಂಕಾ ಚೋರ್, ಮೇರಾ ನಾಮ್ ಜೋಕರ್, ವಾರಂಟ್, ಮರ್ದ್, ಕಲ್ ಹೋ ನಾ ಹೋ, ಜಬ್ ವಿ ಮೆಟ್ ಸೇರಿದಂತೆ ದಾರಾಸಿಂಗ್ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಿರಂತರವಾಗಿ ಮಿಂಚಿದ್ದರು.

ಕುಸ್ತಿ ಮತ್ತು ನಟನೆಯಲ್ಲಿ ಹೆಸರಾಗಿದ್ದ ದಾರಾ ಸಿಂಗ್ 1998ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ರಾಜ್ಯಸಭೆಗೆ ಆಯ್ಕೆಯಾದ ಮೊದಲ ಕ್ರೀಡಾಪಟುವಾಗಿದ್ದ ಅವರು, 2003ರಿಂದ 2009ರವರೆಗೆ ಮೇಲ್ಮನೆ ಸದಸ್ಯರಾಗಿದ್ದರು. 

ದಾರಾಸಿಂಗ್ 2012ರ ಜುಲೈ 11ರಂದು ಮುಂಬೈನಲ್ಲಿ ನಿಧನರಾದರು. ರಾಮಾಯಣದಲ್ಲಿ ಅಮರ ಆಂಜನೇಯರಾಗಿದ್ದ ದಾರಾಸಿಂಗ್ ಅವರ ನೆನಪು ಎಂದೆಂದೂ ಅಮರ.


Dara Singh 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ