ಬಿಮಲ್ ರಾಯ್
ಬಿಮಲ್ ರಾಯ್
ಬಿಮಲ್ ರಾಯ್ ಭಾರತೀಯ ಚಿತ್ರರಂಗ ಕಂಡ ಮಹಾನ್ ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕ ಹೀಗೆ ಮಹಾನ್ ಪ್ರತಿಭಾ ಸಂಗಮರು. ಅವರ ಬಹುತೇಕ ಚಿತ್ರಗಳು ಸಾಮಾಜಿಕ ಕಳಕಳಿಯನ್ನು ಅಭಿವ್ಯಕ್ತಿಸಿದಂತಹವು.
ಬಿಮಲ್ ರಾಯ್ 1909ರ ಜುಲೈ 12 ರಂದು ಜನಿಸಿದರು. ಮೂಲತಃ ಅವರು ಪಶ್ಚಿಮ ಬಂಗಾಳದವರು, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು.
ಬಿಮಲ್ ರಾಯ್ ಕೊಲ್ಕತ್ತಾದಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ಬೆಂಗಾಲಿ ಭಾಷೆಯ ಚಿತ್ರಗಳಲ್ಲಿ ದುಡಿದವರು. ಅಲ್ಲಿಂದ ಕೆಲಸ ಅರಸಿ 1950ರಲ್ಲಿ ಮುಂಬೈಗೆ ಬರುವಾಗ, ಜೊತೆಯಲ್ಲಿ ಹೃಷಿಕೇಶ್ ಮುಖರ್ಜಿ, ನಬೆಂದು ಘೋಷ್, ಅಸಿತ್ ಸೇನ್, ಸಲೀಲ್ ಚೌಧರಿಯಂತಹ ಪ್ರತಿಭಾನ್ವಿತರ ತಂಡವನ್ನೂ ಕರೆತಂದರು. ವಿಭಿನ್ನ ಚಿತ್ರಗಳನ್ನು ಮಾಡುವ ಮೂಲಕ, ಚಿತ್ರರಂಗಕ್ಕೆ ಭದ್ರ ನೆಲೆ ಕಲ್ಪಿಸಿ, ಭವ್ಯ ಪರಂಪರೆಗೆ ಕಾರಣಕರ್ತರಾದರು.
ಬಿಮಲ್ ರಾಯ್ ಮೂಲತಃ ಛಾಯಾಗ್ರಾಹಕರು. ಅವರಿಗೆ ನಿರೂಪಣಾ ತಂತ್ರ ಕರಗತವಾಗಿತ್ತು. ಜೊತೆಗೆ ಹಳ್ಳಿ, ಅಲೆದಾಟ, ಅನುಭವ ಜೊತೆಗಿತ್ತು. 22 ಚಿತ್ರಗಳಿಗೆ ನಿರ್ದೇಶಕರಾಗಿ, 7 ಚಿತ್ರಗಳಿಗೆ ನಿರ್ಮಾಪಕರಾಗಿ, 6 ಚಿತ್ರಗಳಿಗೆ ಸಂಕಲನಕಾರರಾಗಿ, 10 ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಭಾರತೀಯ ಚಿತ್ರ ಚರಿತ್ರೆಯಲ್ಲಿ ಅಮರರಾದರು.
ಅರವತ್ತರ ದಶಕದಲ್ಲಿ ತೆರೆಕಂಡ ‘ಮಧುಮತಿ’, ಆ ಕಾಲಕ್ಕೇ ಸತತವಾಗಿ ಎರಡು ವರ್ಷ ಪ್ರದರ್ಶನ ಕಂಡಿತು. ಅತ್ಯುತ್ತಮ ಚಿತ್ರವೆಂಬ ರಾಷ್ಟ್ರೀಯ ಚಿತ್ರ ಪ್ರಶಸ್ತಿ ಪುರಸ್ಕಾರದ ಜೊತೆಗೆ ಒಂಭತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದು ದಾಖಲೆ ನಿರ್ಮಿಸಿತ್ತು. ದಿಲೀಪ್ ಕುಮಾರ್, ವೈಜಯಂತಿಮಾಲ, ಪ್ರಾಣ್, ಜಾನಿವಾಕರ್ ಮುಂತಾದವರ ಅಭಿನಯ, ಋತ್ವಿಕ್ ಘಟಕ್ ಕತೆ ಮತ್ತು ಚಿತ್ರಕಥೆ, ಶೈಲೇಂದ್ರರ ಗೀತೆ, ಹೃಷಿಕೇಶ್ ಮುಖರ್ಜಿಯವರ ಸಂಕಲನ, ದಿಲೀಪ್ ಗುಪ್ತಾರ ಛಾಯಾಗ್ರಹಣ, ಸಲೀಲ್ ಚೌಧರಿ ಸಂಗೀತ, ಮುಖೇಶ್, ಮನ್ನಾ ಡೇ, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಮುಬಾರಕ್ ಬೇಗಂ, ಸಬಿತಾ ಚೌಧರಿಯವರು ಹಿನ್ನೆಲೆ ಗಾಯನ ಇವೆಲ್ಲವುಳ ಜೊತೆ ಕಲಾತ್ಮಕ ಮತ್ತು ಜನಪ್ರಿಯ ಅಂಶಗಳನ್ನು ಸಮಾನವಾಗಿ ಹದವಾಗಿ ಬೆರೆಸಿದಂತಹ ಚಿತ್ರ ‘ಮಧುಮತಿ’. ಅದೊಂದು ಪ್ರೇಮಕಥೆ.
ಬಿಮಲ್ ರಾಯ್ 1952ರಲ್ಲಿ ‘ಮಾ’, 1953 ರಲ್ಲಿ ‘ದೋ ಬಿಘಾ ಜಮೀನ್', ‘ಪರಿಣೀತಾ’, 1954ರಲ್ಲಿ ‘ಬಿರಜ್ ಬಹೂ’ ಮತ್ತು 1955 ರಲ್ಲಿ ‘ದೇವದಾಸ್’ ತರಹದ ವಿಶಿಷ್ಟ ಚಿತ್ರಗಳನ್ನು ಮಾಡಿದ್ದರು.
ಬಿಮಲ್ ರಾಯ್ ಅವರ ‘ದೋ ಬಿಘಾ ಜಮೀನ್’ ಭಾರತೀಯ ಚಲನಚಿತ್ರರಂಗದಲ್ಲಿ ಕ್ರಾಂತಿ ಮಾಡಿದ ಚಿತ್ರಗಳ ಪೈಕಿ ಒಂದು. ಈ ಚಿತ್ರ ಹಳ್ಳಿಯ ಬಡ ರೈತನ ಸಮಸ್ಯೆ-ಸಂಕಷ್ಟಗಳ ಸರಮಾಲೆಯನ್ನು ಬೆಳ್ಳಿತೆರೆಯ ಮೇಲೆ ಸಮರ್ಥವಾಗಿ ಬಿಡಿಸಿಟ್ಟಂತದ್ದು. ಐವತ್ತರ ದಶಕದ ದೇಶದ ಸಾಮಾಜಿಕ ಸ್ಥಿತಿಯನ್ನು ಯಥಾವತ್ ತೆರೆದಿಟ್ಟ ಚಿತ್ರವಾದ ಇದು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾಯಿತು. ‘ದೊ ಬಿಘಾ ಜಮೀನ್’ ಚಿತ್ರದ ಕತೆ ರವೀಂದ್ರನಾಥ್ ಠಾಗೋರ್ ಅವರ ಕವನದಿಂದ ಸ್ಪೂರ್ತಿ ಪಡೆದು ಸಲೀಲ್ ಚೌಧರಿ ಬರೆದದ್ದು. ಆ ಕತೆಗೆ ಹೃಷಿಕೇಷ್ ಮುಖರ್ಜಿ ಚಿತ್ರಕಥೆ ರಚಿಸಿದರು. ಸಂಕಲನವನ್ನೂ ಅವರೇ ಮಾಡಿದರು. ಸಲೀಲ್ ಚೌಧರಿ ಸಂಗೀತ ಸಂಯೋಜಿಸಿದರು, ಕಮಲ್ ಬೋಸ್ ಛಾಯಾಗ್ರಹಣವಿತ್ತು. ಚಿತ್ರದ ಮುಖ್ಯ ಪಾತ್ರವಾದ ಬಡರೈತನಾಗಿ ಬಾಲರಾಜ್ ಸಹಾನಿ, ಆತನ ಮಡದಿ ಪಾರ್ವತಿಯಾಗಿ ನಿರೂಪಾ ರಾಯ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು. ಅದೊಂದು ನೆಲ ನೆಚ್ಚಿ ಬದುಕುವ, ಶಂಭು-ಪಾರ್ವತಿ, ಮಗ ಕನ್ಹಯ್ಯಾ, ವಯೋವೃದ್ಧ ತಂದೆ ಸೇರಿ ನಾಲ್ಕು ಜನರಿರುವ ಪುಟ್ಟ ಕುಟುಂಬ. ಆ ಕುಟುಂಬಕ್ಕೆ ಆಸರೆಯಾಗಿರುವುದು ಒಂದೂವರೆ ಎಕರೆ ಜಮೀನು. ಬರಗಾಲ, ಬಡತನದಿಂದಾಗಿ ಆ ಕುಟುಂಬಕ್ಕೆ ಎದುರಾಗುವ ಸಾಲು ಸಾಲು ಸಮಸ್ಯೆಗಳು, ಸಾಹುಕಾರನ ಕಿರುಕುಳ, ಕೂಲಿಗಾಗಿ ಕೊಲ್ಕತ್ತಾ ನಗರದಲ್ಲಿ ರಿಕ್ಷಾ ಎಳೆಯುವ ರೈತ, ಕಳ್ಳನಾಗುವ ಮಗ, ಅಪಘಾತಕ್ಕೀಡಾಗುವ ಪತ್ನಿ, ದುಡಿದ ದುಡ್ಡನ್ನೆಲ್ಲ ಚಿಕಿತ್ಸೆಗೆ ಖರ್ಚು ಮಾಡಿ ಬರಿಗೈಲಿ ಹಳ್ಳಿಗೆ ವಾಪಸಾಗುವ, ಅದೇ ಸಮಯಕ್ಕೆ ಸಾಲದ ಹಣಕ್ಕಾಗಿ ಭೂಮಿ ಹರಾಜಾಗುವ, ಅದನ್ನು ಕಂಡು ಶಂಭು ಹುಚ್ಚನಾಗುವ, ಕೊನೆಗೆ ಎಲ್ಲವನ್ನು ಕಳೆದುಕೊಂಡು ಹಳ್ಳಿ ತೊರೆಯುವ… ರೈತನ ಬದುಕಿಗೇ ಕ್ಯಾಮರಾ ಇಟ್ಟು ಚಿತ್ರೀಕರಿಸಿದಂತಿರುವ ‘ದೋ ಬಿಘಾ ಜಮೀನ್’ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದು.
1957 ರಲ್ಲಿ ಬಂದ, ನರ್ಗಿಸ್, ರಾಜಕುಮಾರ್, ಸುನಿಲ್ ದತ್ ನಟಿಸಿದ್ದ, ಮೆಹಬೂಬ್ ಖಾನ್ ನಿರ್ದೇಶನದ ‘ಮದರ್ ಇಂಡಿಯಾ’ ಚಿತ್ರ ಬಿಮಲ್ ರಾಯ್ ರ ‘ದೋ ಬಿಘಾ ಜಮೀನ್’ ಚಿತ್ರದ ಮುಂದುವರೆದ ಭಾಗದಂತಿತ್ತು. ಇದು ಸಾಮಾಜಿಕ ಸಮಸ್ಯೆಗಳಿಗೆ ಭಾರತೀಯ ಚಿತ್ರರಂಗ ಸ್ಪಂದಿಸುವ ನಿಟ್ಟಿನಲ್ಲಿ ಬಹಳ ಮುಖ್ಯವಾದ ನಡೆಯಾಗಿತ್ತು. ಹೀಗೆ ಬಿಮಲ್ ರಾಯ್ ಉತ್ತಮ ಪಂಕ್ತಿ ಹಾಕಿಕೊಟ್ಟವರು.
‘ದೋ ಬಿಘಾ ಜಮೀನ್’ನಲ್ಲಿ ಕೃಷಿಕನ ಕಣ್ಣೀರಿನ ಕತೆ, ‘ಸುಜಾತಾ’ದಲ್ಲಿ ಅಸ್ಪೃಶ್ಯತಾಚರಣೆ, ‘ಬಂಧಿನಿ’ಯಲ್ಲಿ ಮಹಿಳೆಯರ ತುಮುಲ-ತಳಮಳ… ಹೀಗೆ ಬಿಮಲ್ ರಾಯ್ ಅವರ ಚಿತ್ರಗಳಲ್ಲಿ ಸಾಮಾಜಿಕ ಪ್ರಜ್ಞೆ ನಿರಂತರವಾಗಿ ಅಭಿವ್ಯಕ್ತಗೊಂಡಿತ್ತು
ಬಿಮಲ್ ರಾಯ್ 1966ರ ಜನವರಿ 8ರಂದು ನಿಧನರಾದರು.
On the birth anniversary of great Director Bimal Roy
ಕಾಮೆಂಟ್‌ಗಳು