ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ಎನ್. ಮೋಹನ್


ಜಿ. ಎನ್. ಮೋಹನ್

ಕನ್ನಡದ ಬಗ್ಗೆ ವೆಬ್ ಅಂತರಜಾಲದಲ್ಲಿ ಚಿಂತಿಸುವವರಿಗೆ ಮೊದಲು ನೆನಪಾಗುವುದು 'ಅವಧಿ'.  ಇದನ್ನು ಮೂಡಿಸಿದವರು ಜಿ. ಎನ್. ಮೋಹನ್.  ಕಿರುತೆರೆಯಲ್ಲಿ 'ಈಟಿವಿ'ಯನ್ನು ಸಾಂಸ್ಕೃತಿಕ ಮೆರುಗಿನ ವಾಹಿನಿಯಾಗಿ ಬೆಳಗಿಸಿದ್ದ ರೂವಾರಿ ಕೂಡಾ ಅವರೇ ಆಗಿದ್ದರು. ಕನ್ನಡದ ಹೆಸರಾಂತ 'ಬಹುರೂಪಿ' ಪ್ರಕಾಶನದ ಸಾರಥ್ಯ ಸಹ ಇವರದ್ದೇ.‍ ಇಂದು ಜಿ. ಎನ್. ಮೋಹನ್ ಅವರ ಹುಟ್ಟುಹಬ್ಬ.

ಮೋಹನ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಂಗಕಲೆಗಳ ವಿಷಯದಲ್ಲಿ ಪದವಿ ಮತ್ತು ಮಾಧ್ಯಮ ಸಂವಹನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.

ಜಿ.ಎನ್.ಮೋಹನ್ ಹಿಂದೆ ಪ್ರಜಾವಾಣಿಯಲ್ಲಿದ್ದರು. ಸಿಎನ್‍ಎನ್ ಅಂತರರಾಷ್ಟ್ರೀಯ ಪ್ರೊಫೆಷನಲ್ ಪ್ರೊಗ್ರಾಮ್ನಲ್ಲಿ ಭಾಗವಹಿಸಿದ್ದರು. ಈಟಿವಿ ಮತ್ತು ಸಮಯ ಟಿವಿಗಳಲ್ಲಿ ಸಂಪಾದಕರಾಗಿದ್ದರು.‍ ತಮ್ಮದೇ ಆದ ಮೇ ಫ್ಲವರ್ ಮೀಡಿಯಾ ಹೌಸ್ ನಡೆಸಿದರು. ಮಾಧ್ಯಮ ಕೋರ್ಸುಗಳನ್ನು ನಡೆಸಿದ್ದರು.  ಮುಂದೆ 'ಅವಧಿ' ಎಂಬ ಸೊಗಸಾದ ಬ್ಲಾಗ್ ರೂಪಿಸಿದರು. ನಂತರ ಅದನ್ನೇ ದೊಡ್ಡ ಸಾಂಸ್ಕೃತಿಕ ವೇದಿಕೆಯ ಮಟ್ಟಕ್ಕೆ ಬೆಳೆಸಿದರು. ಮತ್ತೊಂದು ಕಿರುತೆರೆಯ ವಾಹಿನಿಗೆ ಅವರ ನೇತೃತ್ವವಿದೆ.  ಸಾಹಿತ್ಯ - ಸಂಸ್ಕೃತಿಗಳನ್ನು  ಹಲವು ರೀತಿಯ ಮಾಧ್ಯಮ ವೈವಿಧ್ಯಗಳಲ್ಲಿ ಮೋಹಕವಾಗಿ ಬೆಸೆದವರು ಮೋಹನ್. ಬಹುರೂಪಿ ಪ್ರಕಾಶನದ ಬಹುರೂಪಗಳೂ ಇವರ ಜಾಣ್ಮೆಯಿಂದ ಹೊಮ್ಮಿವೆ. 

ಜಿ. ಎನ್. ಮೋಹನ್ ಸೊಗಸಾಗಿ ಬರೆಯುವ ಲೇಖಕರು. ಕಾವ್ಯ, ಚಿಂತನೆ, ಅಂಕಣ, ಪ್ರವಾಸ, ಮಾಧ್ಯಮ, ಸಾಹಿತ್ಯ ಪ್ರೀತಿಗಳ ವೈವಿಧ್ಯ ಮೋಹನ್ ಅವರ ಬರಹಗಳಲ್ಲಿದೆ.

ಸೋನೆ ಮಳೆಯ ಸಂಜೆ, ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ ಮೋಹನ್ ಅವರ ಕಾವ್ಯ ಸಂಕಲನಗಳು.

'ನನ್ನೊಳಗಿನ ಹಾಡು ಕ್ಯೂಬಾ' ಮೋಹನ್ ಅವರ ಪ್ರವಾಸ ಕಥನ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ ಸಂದಿದೆ.  ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವೂ ಆಗಿದೆ.

ಮೀಡಿಯಾ ಮಿರ್ಚಿ, ಕಾಫಿ ಕಪ್ಪಿನೊಳಗೆ ಕೊಲಂಬಸ್, ಅಂಕಣ ಬರಹಗಳ ಸಂಕಲನಗಳು.

ಆತ್ಮಕಥನ ಸ್ವರೂಪದ ಬರಹ 'ಡೋರ್ ನಂ. 142'

'ಡಂಕೆಲ್ ಪ್ರಸ್ತಾವನೆ' ಎಂಬುದು ಮಾಧ್ಯಮಗಳ ಮೇಲೆ ಅಂತಹ ಪ್ರಸ್ತಾವನೆ 
ಮೂಡಿದ ಹಿನ್ನೆಲೆಯಲ್ಲಿ ಬಂದದ್ದು.

ಎಕ್ಕುಂಡಿ ನಮನ ಕವಿ ಎಕ್ಕುಂಡಿಯವರಿಗೆ ಗೌರವಾರ್ಪಣೆಯ ಕೃತಿ.

ಪಿ. ಸಾಯಿನಾಥ್ ಮತ್ತು 'ಪರಿ’ ತಂಡದ
'ಈ ಪರಿಯ ಸೊಬಗು', ಶ್ರೀಪಾದ ಭಟ್ ಮತ್ತು ರಂಗಭೂಮಿ ಕುರಿತಂತೆ 'ಸಿರಿಪಾದ' ಮೋಹನ್ ಅವರ ಸಂಪಾದನೆಗಳು.

ಪಿ. ಸಾಯಿನಾಥ್ ಅವರ ಬರಹಗಳ ಅನುವಾದ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಮತ್ತು 'ದಲಿತರು ಬರುವರು ದಾರಿಬಿಡಿ'.

ಜಿ. ಎನ್. ಮೋಹನ್ ಅವರು 2007ರಲ್ಲಿ ಮೂಡಿಸಿದ 'ಅವಧಿ' ಹದಿನಾರು  ಅವಧಿಗಳನ್ನು ದಾಟಿ ಬೆಳೆಯುತ್ತಿದೆ.  ಇದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತವೂ ಆಗಿದೆ. 

'ಅವಧಿ' ಜೊತೆಗೆ ಒಂದೆಡೆ 'ಹಂಬಲ ತೇರಿನ ಭೂಮಿ' ಎಂಬ ವಾಖ್ಯೆಯಿದೆ.  'ಅವಧಿ'. ತಾಣದಲ್ಲಿ  'ಇದು ಕನಸುಗಳ ಬೆಂಬತ್ತಿದ ನಡಿಗೆ' ಎಂಬ ಮಾತಿದೆ.  ಅದರ ಪುಸ್ತಕ ಪ್ರಕಟಣಾ ಅಂಗವಾದ 'ಬಹುರೂಪಿ' ಎಂಬ ಪದ ಕೂಡಾ ಕಾಣುತ್ತದೆ. ಮೋಹನ್ ಅವರ ಕನಸುಗಳ ವ್ಯಾಪ್ತಿ ಎಂಥದು ಎಂಬುವ ಸೂಚ್ಯಗಳಿವು.  ಸೃಜನಾತ್ಮಕ ಕನಸು ಕಂಡವರು ಹರಡುವ ಕನಸುಗಳು ಮತ್ತು ಪ್ರೇರಿಸುವ ಮನಸ್ಸುಗಳು ಕೂಡಾ ಹಲವು ನೂರು.  

ಸೃಜನಶೀಲ ಕನಸುಗಾರ ಜಿ. ಎನ್. ಮೋಹನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


On the birth day of a creative media person G. N. Mohan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ