ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಿನಾಥ ದೇಸಾಯಿ


ಶಾಂತಿನಾಥ ದೇಸಾಯಿ


ಡಾ. ಶಾಂತಿನಾಥ ದೇಸಾಯಿ ನವ್ಯಮಾರ್ಗದ  ಪ್ರಮುಖ ಬರಹಗಾರರೆಂದು ಖ್ಯಾತರಾದವರು.

ಶಾಂತಿನಾಥ ಕುಬೇರಪ್ಪ ದೇಸಾಯಿ 1929ರ ಜುಲೈ 22ರಂದು ಹಳಿಯಾಳ ಎಂಬಲ್ಲಿ ಜನಿಸಿದರು.  ಹಳಿಯಾಳ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಕಾಡು ಪ್ರದೇಶ.  ಅವರ ಪ್ರಾಥಮಿಕ ಶಿಕ್ಷಣ ಅಲ್ಲಿಯೇ  ಆಯಿತು. ಮುಂದೆ ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿದರು. 

ಶಾಂತಿನಾಥ ದೇಸಾಯಿ ಅವರ ಮೇಲೆ ಗಂಗಾಧರ ಚಿತ್ತಾಲರ ಪ್ರಭಾವ ಮೂಡಿತು.  ಚಿಂತನಕಾರ ಮಾನವೇಂದ್ರರಾಯ ಅವರ ಪ್ರಭಾವವೂ ಸೇರಿತು.  ಇಂಗ್ಲಿಷ್‍ನಲ್ಲಿ ವಿಶೇಷ ಅಧ್ಯಯನಕ್ಕೆಂದು ಮುಂಬಯಿಯ ವಿಲ್ಸನ್ ಕಾಲೇಜಿಗೆ ಸೇರಿದರು.  ಮುಂದೆ ಪಿಎಚ್.ಡಿ ಗೌರವ ಬಂತು.  ಬ್ರಿಟಿಶ್ ಕೌನ್ಸಿಲ್ ಶಿಷ್ಯವೃತ್ತಿಯ ಮೇಲೆ ಇಂಗ್ಲೆಂಡಿಗೆ ತೆರಳುವ ಅವಕಾಶ ಲಭಿಸಿತು.  ಹಡಗಿನಲ್ಲಿಯ ಪ್ರವಾಸ ಅನೇಕ ಲೇಖಕರನ್ನು ಸ್ಫುರಿಸಿದಂತೆ, ಶಾಂತಿನಾಥರಿಗೂ ಒಂದು ಉತ್ತಮ ಕತೆಯನ್ನು ಬರೆಯುವುದಕ್ಕೆ ಉಪಯುಕ್ತವಾಯಿತು.  ಅವರನ್ನು ಸಣ್ಣಕತೆಯಲ್ಲಿ ಜನಪ್ರಿಯರನ್ನಾಗಿ ಮಾಡಿದ ‘ಕ್ಷಿತಿಜ’ ಹಡಗಿನಿಂದ ಇಂಗ್ಲೆಂಡಿಗೆ ಹೋಗುವ ಒಬ್ಬ ಮಹಿಳೆಯನ್ನು ಕೇಂದ್ರದಲ್ಲಿರಿಸಿದ ಕತೆ.

ವಿದೇಶದಲ್ಲಿ ಎರಡು ವರ್ಷಗಳಷ್ಟು ವಾಸ್ತವ್ಯಮಾಡಿ ಬಂದ ಶಾಂತಿನಾಥರಿಗೆ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ದೊರಕಿತು.  ಕೆಲವು ವರ್ಷ ಔರಂಗಾಬಾದದಲ್ಲಿ ಪ್ರಾಧ್ಯಾಪಕರಾಗಿದ್ದರು.  ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ವರ್ಷ ರೀಡರ್ ಮತ್ತು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಪ್ರಮುಖರಾಗಿ ಸೇವೆ ಸಲ್ಲಿಸಿ, 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನವನ್ನು ಏರಿದರು.  

1959ರಲ್ಲಿ ದೇಸಾಯಿಯವರ ಮೊದಲಿನ ಸಾಹಿತ್ಯ ಕೃತಿ ಸಣ್ಣಕತೆಗಳ ಸಂಗ್ರಹ ಪ್ರಕಟವಾಯಿತು. 

ಕಾದಂಬರಿ ಶಾಂತಿನಾಥರಿಗೆ ಮೇಲ್ಪಂಕ್ತಿಯ ಬರಹಗಾರನೆನ್ನುವ ಮಾನ್ಯತೆಯನ್ನು ಒದಗಿಸಿತು.  ನವ್ಯಕಾದಂಬರಿ ‘ಮುಕ್ತಿ’(1961) ಬರೆದು ನವ್ಯಮಾರ್ಗವನ್ನು ಕಾದಂಬರಿ ಪ್ರಾಂತ್ಯಕ್ಕೆ ತಂದ ಪ್ರಮುಖರೆಂದು ಅವರು ಖ್ಯಾತರಾದರು.   ಸಣ್ಣಕತೆಯಲ್ಲಿನ ಅವರ ಸಾಧನೆ ಅಷ್ಟೇ ಗಮನಾರ್ಹ.  ‘ಮಂಜುಗಡ್ಡೆ’, ‘ಕ್ಷಿತಿಜ’, ಅವರ ಬಹುಚರ್ಚಿತ ಕತೆಗಳು. ‘ಕೂರ್ಮಾವತಾರ’, ‘ವಾಸನೆ’, ‘...ನಿಖಿಲವಾದದ್ದು’ ಈ ಕತೆಗಳಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸುವ  ವಿಷಯಗಳು ಪ್ರಧಾನರೂಪ ಪಡೆಯುತ್ತವೆ.  'ನಾನಾನ ತೀರ್ಥಯಾತ್ರೆ’ ಒಬ್ಬ ಕುಡುಕನ ಕತೆ.  ಆದರೆ ವಿಲಕ್ಷಣ ಪರಿಣಾಮಕಾರಿ.  ನಾನಾ ಕುಡುಕನೆಂದಲ್ಲ.  ಅವನದೂ ವಿಶ್ವವಿದೆ.  ಅಲ್ಲಿಯ ಅಂತರ್ಯುದ್ಧದಲ್ಲಿ ರಾಮನನ್ನು ಗೆಲ್ಲುವ ರಾವಣನೇ  ಹೀರೋ.  ಜೀವನದ ಬಗೆಗಿನ ಕಹಿ, ಹತಾಶೆಯ ಕಿಂಚಿತ್ ಬಣ್ಣ ಬಳಸಿ ನಾನಾನ ಚಿತ್ರ ಎದ್ದು ನಿಲ್ಲುತ್ತದೆ.  ಅವನ ತೀರ್ಥಯಾತ್ರೆಯ ಉದಾರಕತೆ ಉಳಿದ ಮಹತ್ವದ ದುರಂತಗಳಷ್ಟೇ ಮಹತ್ವದ್ದು.  ‘...ನಿಖಿಲವಾದದ್ದು’ ಕತೆಯಲ್ಲಿಯ ಮನೆಯಾಳು ತನ್ನ ಮಾಲಿಕರ ಸರ್ಟಿಫಿಕೇಟುಗಳನ್ನು ಕದ್ದು ಶಹರಿಗೆ ಹೋಗಿ ನಿಖಿಳವಾಗುವ ಪ್ರಕರಣ ವ್ಯಂಗ್ಯದಿಂದ ತುಂಬಿದರೂ, ಸಿಟ್ಟು, ಬೆಲೆಯಿಲ್ಲದ ಮೌಲ್ಯಗಳನ್ನು ತುಳಿದು ಹೊರದಾಟುವ ಹೊಂಚು ರಹಸ್ಯಮಯತೆಯನ್ನು ತರುತ್ತದೆ.  ಸಾಮಾಜಿಕ – ಸ್ಥಿತ್ಯಂತರಗಳ ಬಗ್ಗೆ ಅತ್ಯಂತ ಸೂಚಕವಾಗಿ ಮೆಲುದನಿಯಲ್ಲಿಯೇ ಎಷ್ಟೆಲ್ಲಾ ಹೇಳಿಹೋಗುತ್ತದೆ. ಹೀಗೆ ಒಂದೊಂದು ಕತೆಗೂ ಒಳದನಿಯಿದೆ.  ‘ನದಿಯ ನೀರು’ ಕತೆಯಲ್ಲಿಯ ವ್ಯಕ್ತಿ ಸುಳ್ಳನ್ನು ಸಮರ್ಥವಾಗಿ ಹೇಳಿದ್ದಾನೆ.  ತನ್ನ ಗೆಳೆಯನನ್ನು ನದಿಯಲ್ಲಿ ಮುಳುಗಿ ಸಾಯುವುದಕ್ಕೆ ತಾನೇ ಕಾರಣನಾಗಿರುವಾಗಲೂ ಅದಕ್ಕೂ ತನಗೂ ಏನೇನೂ ಸಂಬಂಧವಿಲ್ಲವೆಂದು ಚಿಕ್ಕಂದಿನಿಂದ ಬದುಕುತ್ತಾನೆ.  ಆದರೆ ಹೀಗೆ ಬಾಹ್ಯರೂಪದಲ್ಲಿ ಅರಗಿಸಿಕೊಂಡ ಒಂದು ಅನುಭವ ಅವನನ್ನು ಹಿಂಸೆ ಮಾಡದೆ ಉಳಿಯುವಷ್ಟು ನಿಷ್ಠುರನಾಗಿ ಬಾಳಲು ಬಿಟ್ಟಿದೆಯೇ ಎನ್ನುವುದನ್ನು ಸಹ್ಯವಾಗಿ ಇಟ್ಟಿದ್ದಾರೆ.

ಸುಮಾರು ಐವತ್ತಕ್ಕೂ ಹೆಚ್ಚು ಕತೆಗಳನ್ನು ಬರೆದ ದೇಸಾಯಿ ಕಥಾ ಪ್ರಕಾರಗಳಲ್ಲಿ  ಅಪಾರ ಪ್ರಯೋಗಶೀಲತೆಯನ್ನು ತಂದಿದ್ದಾರೆ.  ಅತ್ಯಂತ ಮಿತವಾದ ರೇಖೆಗಳನ್ನು ಉಪಯೋಗಿಸಿ ವ್ಯಕ್ತಿ, ಮನೋವ್ಯಾಪಾರ ಮತ್ತು ಒಂದು ಸಾಮಾಜಿಕ ಸಂಬಂಧವನ್ನು ನಿರ್ಮಿಸುವಲ್ಲಿ ಅವರು ಯಶಸ್ಸು ಗಳಿಸಿದರು. 

ಸೃಜನಶೀಲ ಸಾಹಿತ್ಯಕ ಚಟುವಟಿಕೆಗಳಷ್ಟೇ ವಿಚಾರಶೀಲ ಲೇಖನದ ಕಡೆಗೂ ಗಮನಕೊಟ್ಟ ಶಾಂತಿನಾಥ ದೇಸಾಯಿ ಕನ್ನಡದ ಅತ್ಯುತ್ತಮ ವಿಮರ್ಶಕರು.  ‘ಸಾಹಿತ್ಯ ಮತ್ತು ಭಾಷೆ’, ‘ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ’, ‘ಕನ್ನಡ ಕಾದಂಬರಿ ನಡೆದು ಬಂದ ದಾರಿ’, ‘ನವ್ಯಸಾಹಿತ್ಯದರ್ಶನ’ – ಅವರು ವಿಚಾರ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ.  ಅವರು ಬೇಂದ್ರೆ ಅವರ ಮೇಲೆ ತಯಾರಿಸಿದ ನಿರ್ಬಂಧ ಸಭಿಕರನ್ನು ಮುಗ್ಧಗೊಳಿಸಿತ್ತು.  ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಅದರ ಅಂತಃಸತ್ವವನ್ನು ದಾರ್ಶನಿಕ ಹಿನ್ನೋಟವನ್ನು, ಆಳದಲ್ಲಿ ಹುದುಗಿದ ಮಾನವೀ ಸಭ್ಯತೆಯನ್ನು ಜ್ಞಾನಪೀಠದ ಸಮಿತಿಗೆ ಮಾನ್ಯವಾಗುವಂತೆ ಮಂಡಿಸಿದ್ದರು.   ಗೋಕಾಕರ  ಒಂದು ‘ಜೀವನ ಚಿತ್ರಣ’ದ ಚಿತ್ರೀಕರಣಕ್ಕೆ ಅವರ ವಿವಿಧ ಅಂಗಗಳ ವಿಶಿಷ್ಟತೆ ಹೊರಬರುವಂತೆ ಸಂದರ್ಶನ ಮಾಡಿದ್ದರು.  

‘ಕನ್ನಡದ ಕಾದಂಬರಿ ನಡೆದು ಬಂದ ರೀತಿ’ ಒಂದು ವ್ಯಾಸಂಗಪೂರ್ಣ ಗ್ರಂಥ.   ತಮ್ಮ ‘ಮುಕ್ತಿ’ ಕಾದಂಬರಿಯ ಗುಣ ದೋಷಗಳನ್ನೂ ಬಿಡದೆ ನಮೂದಿಸಿದ್ದು ಅವರ ನಿರ್ದಾಕ್ಷಿಣ್ಯಕ್ಕೆ ಕನ್ನಡಿ ಹಿಡಿಯುತ್ತದೆ.   ‘ನವ್ಯ ಸಾಹಿತ್ಯ ದರ್ಶನ’ ಕೃತಿ ಒಂದು ಸಂದರ್ಭಗ್ರಂಥವೆನ್ನುವಷ್ಟು ಮಹತ್ವದ್ದು.

ಕನ್ನಡದ ಉತ್ತಮ ಕೃತಿಗಳು ಸಾಧ್ಯವಾದಷ್ಟು ಹೊರಭಾಷೆಯ ಓದುಗರಿಗೂ ತಲುಪಬೇಕು ಎನ್ನುವ ಕಳಕಳಿಯನ್ನು ಅವರು ಹೊಂದಿದ್ದರು.  ‘Here Comes Revolution’ ಪಿ. ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’ ಎಂಬ ನಾಟಕದ ಇಂಗ್ಲಿಷ್ ಅನುವಾದ.  ಹಾಗೆಯೇ ‘Awasthe’ ಯು. ಆರ್. ಅನಂತಮೂರ್ತಿ ಅವರ ಕನ್ನಡ ಕಾದಂಬರಿ ‘ಅವಸ್ಥೆ’ಯ ಇಂಗ್ಲಿಷ್ ಅನುವಾದ. ಮರಾಠಿಯ ಆದ್ಯ ಕಾದಂಬರಿಕಾರರಾದ ಹರಿನಾರಾಯಣ ಆಪ್ಟೆ ಕುರಿತಾದ ‘ಮಿ.ಹರಿನಾರಾಯಣ ಆಪ್ಟೆ’ ಎನ್ನುವ ಮರಾಠಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು. 

'ಸೃಷ್ಟಿ’ ಕಾದಂಬರಿಯಿಂದ ಹಿಡಿದು ಶಾಂತಿನಾಥ ದೇಸಾಯಿ ಅವರ ಮುಂದಿನ ಎಲ್ಲ ಕಾದಂಬರಿಗಳಲ್ಲಿ ಸಾಮಾಜಿಕ ಧೋರಣೆಗಳ ಬಗ್ಗೆ ಚಿಂತನೆಯಿದೆ. ‘ಬೀಜ’ ಕಾದಂಬರಿ ಕೂಡ ಗ್ರಾಮಾಂತರದಲ್ಲಿ ಭರಭರನೆ ನಡೆಯುತ್ತಿರುವ ಜಾರುಗುಂಡಿಯ ಕಡೆ ಉರುಳು ಚಿತ್ರಿಸುತ್ತದೆ.  ‘ಅಂತರಾಳ’ ಇನ್ನೊಂದು ಮಹತ್ವಾಕಾಂಕ್ಷೆಯ ಕಾದಂಬರಿ.  ಶಾಂತಿನಾಥರ ಜೀವನ ದೃಷ್ಟಿಯಲ್ಲಿ ಮಾನವೀ ವಿಕಾಸದ ಸಂಕಲ್ಪನೆಯನ್ನು ಕುರಿತು ಇಲ್ಲಿ ಚಿಂತನವಾಗಿದೆ.  ‘ಓಂಣಮೋ’ ಕಾದಂಬರಿ ಹುಟ್ಟಿನಿಂದ ಬಂದ ಅರಿವು, ಇರುವಿನ ಕೊನೆಯ ಅಂತರಾಳದಲ್ಲಿ ಬರೆದ ಕೃತಿ. 

ಶಾಂತಿನಾಥ ದೇಸಾಯಿ 1998ರ ಮಾರ್ಚ್ 26ರಂದು ನಿಧನರಾದರು. 2000ರಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಅರ್ಪಿತಗೊಂಡಿತು.

On the birth anniversary of writer and scholar Dr Shanthinatha Desai 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ