ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಳಕಳ ಭಟ್ಟ



 ಪಳಕಳ ಸೀತಾರಾಮಭಟ್ಟ


ಕನ್ನಡ ಸಾಹಿತ್ಯ ಲೋಕದಲ್ಲಿ ಲವಲವಿಕೆಯ ಮಕ್ಕಳ ಕಥೆ ಮತ್ತು ಪದ್ಯಗಳಿಗೆ ಹೆಸರಾದವರಲ್ಲಿ ಪಳಕಳ ಸೀತಾರಾಮ ಭಟ್ಟರು ಪ್ರಮುಖರು.  ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಪತ್ರಿಕೆಗಳಾದ ಕಥಾವಳಿ, ಬಾಲಚಂದ್ರ, ಸುವಾಸಿನಿ, ಪಾಪಚ್ಚಿ, ತುತ್ತೂರಿ ಮುಂತಾದ ಪತ್ರಿಕೆಗಳಿಂದ ಮೊದಲುಗೊಂಡು ಈ ಕಾಲದ ಸುಧಾ, ತರಂಗ, ಕರ್ಮವೀರ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯವಾಣಿ, ವಿಜಯ ಕರ್ನಾಟಕ ಹೀಗೆ ಎಲ್ಲೆಡೆ ಅವರ ಕತೆ ಪದ್ಯಗಳು ಮೂಡಿಬಂದಿದ್ದವು.  

ಸೀತಾರಾಮ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಹತ್ತಿರದ ಪಳಕಳದಲ್ಲಿ 1930ರ ಜುಲೈ 5 ರಂದು ಜನಿಸಿದರು.  ತಂದೆ ಈಶ್ವರ ಭಟ್ಟರು.  ತಾಯಿ ಲಕ್ಷ್ಮೀ ಅಮ್ಮ. ಸೀತಾರಾಮ ಭಟ್ಟರ  ಪ್ರಾರಂಭಿಕ ಶಿಕ್ಷಣ ಪಳಕಳದ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣ ಮೂಡಬಿದಿರೆಯಲ್ಲಿ ನಡೆದು ಮುಂದೆ ಅವರು ಖಾಸಗಿಯಾಗಿ ಓದಿ ಎಂ.ಎ, ಬಿ.ಎಡ್‌. ಪದವಿಗಳನ್ನು ಗಳಿಸಿದರು. 

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಉದ್ಯೋಗವನ್ನಾರಂಭಿಸಿದ ಸೀತಾರಾಮ ಭಟ್ಟರು ಮೂಡಬಿದಿರೆಯ ಜೈನ್‌ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ 1988ರಲ್ಲಿ ನಿವೃತ್ತರಾದರು. ಶಾಲಾಬಾಲಕನಾಗಿದ್ದಾಗ ಸೋದರತ್ತೆ ಚೆನ್ನಕ್ಕ ಹೇಳುತ್ತಿದ್ದ ಕಥೆಗಳು, ಪಂಜೆಯವರ ಕಥೆ ಮತ್ತು ಕವಿತೆಗಳನ್ನು ಓದಿ ಪ್ರಭಾವಿತರಾಗಿ ತಾವೂ ಹೈಸ್ಕೂಲಿಗೆ ಬರುತ್ತಿದ್ದಂತೆ ಕಥೆ, ಕವನಗಳನ್ನು ರಚಿಸತೊಡಗಿದರು. ಗುರುಗಳಾದ ರಘುಚಂದ್ರಶೆಟ್ಟಿ, ಶ್ರೀಕಾಂತ ರೈ ಮತ್ತು ಸಾಹಿತಿ ರಾ.ಮೊ. ವಿಶ್ವಾಮಿತ್ರ ಇವರುಗಳ ಒತ್ತಾಸೆಯಿಂದ ಇವರು ಬರೆದ ಹಲವಾರು ಕತೆಗಳು ಅಂದಿನ ಪತ್ರಿಕೆಗಳಾದ ಕಥಾವಳಿ, ಬಾಲಚಂದ್ರ, ಸುವಾಸಿನಿ, ಪಾಪಚ್ಚಿ, ತುತ್ತೂರಿ ಮುಂತಾದವುಗಳಲ್ಲಿ ಪ್ರಕಟವಾಗತೊಡಗಿದವು. 

ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರದಲ್ಲಿಯೂ ಕೃತಿ ರಚಿಸಿರುವ ಪಳಕಳ ಸೀತಾರಾಮ ಭಟ್ಟರು ಚಿಣ್ಣರ ಹಾಡುಗಳು, ಕಿರಿಯರ ಕಿನ್ನರಿ, ತಿಮ್ಮನ ತುತ್ತೂರಿ, ಮುಂತಾದ 35ಕ್ಕೂ ಹೆಚ್ಚು ಪದ್ಯ ಸಂಕಲನಗಳು; ಗಡಿಬಿಡಿ ಗುಂಡ, ಕುಂಟುಂ ಕುಟುಂ ಕಪ್ಪೆಯಣ್ಣ ಮುಂತಾದ 100ಕ್ಕೂ ಹೆಚ್ಚು ಮಕ್ಕಳ ಕಥಾ ಸಂಕಲನಗಳು; ಏಕಲವ್ಯ, ಭಕ್ತ ಧ್ರುವ, ಮಾದನೂ ಹುಲಿಯೂ, ಅವಿವೇಕಿ ರಾಜ ಅರೆಹುಚ್ಚು ಮಂತ್ರಿ ಮೊದಲಾದ 15 ಕ್ಕೂ ಹೆಚ್ಚು ನಾಟಕ, ಪ್ರಹಸನಗಳನ್ನು ರಚಿಸಿ ಪ್ರಕಟಿಸಿದರು,  ಈಶ್ವರ ಚಂದ್ರ ವಿದ್ಯಾಸಾಗರ್, ಭಾರತ ರತ್ನ, ಮಕ್ಕಳ ಮಿತ್ರ ಮುಂತಾದ ಮಕ್ಕಳ ಪ್ರಬಂಧ, ಕಾದಂಬರಿಗಳು; ಪ್ರೌಢರಿಗಾಗಿ ಚುಟುಕು ಚೂರು ಜಿನುಗು ಜೇನು, ಪಂಚಾಮೃತ ಮುಂತಾದವು ಸೇರಿ ಅವರು ಒಟ್ಟು 163 ಕೃತಿಗಳನ್ನು ಪ್ರಕಟಿಸಿದ್ದರು. 

ಪಳಕಳ ಸೀತಾರಾಮ ಭಟ್ಟರು ಮಕ್ಕಳ ಸಾಹಿತ್ಯ ರಚನೆಗಾಗಿ ತಮ್ಮನ್ನು  ತಾವು ಸಜ್ಜುಗೊಳಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರ 1959 ಮತ್ತು  1961ರಲ್ಲಿ  ನಡೆಸಿದ ಮಕ್ಕಳ ಸಾಹಿತ್ಯ ರಚನೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅವರು ರಾಜ್ಯದ ಮಕ್ಕಳ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಮಕ್ಕಳ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. 1983-87ರ ಅವಧಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಯ ಅಧ್ಯಕ್ಷರಾಗಿ,  1996 ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷರಾಗಿ, 2004ರಲ್ಲಿ ನಡೆದ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಮಕ್ಕಳ ಮನೋವಿಕಾಸಕ್ಕಾಗಿ ಸಾಹಿತ್ಯ ರಚಿಸುವಂತೆ ಕರೆ ನೀಡಿದ್ದಲ್ಲದೆ ಅದರಂತೆ ಹಲವಾರು ಕೃತಿಗಳನ್ನು ರಚಿಸಿ ಮಾರ್ಗದರ್ಶಕರಾದರು. 

ಪಳಕಳ ಸೀತಾರಾಮ ಭಟ್ಟರು ತಾವು ರಚಿಸಿದ ಮಕ್ಕಳ ಸಾಹಿತ್ಯದ ಪ್ರಕಟಣೆಗಾಗಿ ‘ಶಿಶುಸಾಹಿತ್ಯಮಾಲೆ’ಯನ್ನು ಪ್ರಾರಂಭಿಸಿ ಅನೇಕ  ಕೃತಿಗಳನ್ನು ಹೊರತಂದಿದ್ದಲ್ಲದೆ ಮಿತ್ರರಾದ ಕೂರಾಡಿ ಸೀತಾರಾಮ ಅಡಿಗ, ಬಿ. ಶ್ರೀನಿವಾಸರಾವ್‌ ಮುಂತಾದವರೊಡನೆ ಸೇರಿ ದಕ್ಷಿಣ ಕನ್ನಡದ ಉಡುಪಿ, ಕಾಸರಗೋಡು ತಾಲ್ಲೂಕಿನ ‘ಮಕ್ಕಳ ಸಾಹಿತ್ಯ ವೇದಿಕೆ’, ‘ಮಕ್ಕಳ ಸಾಹಿತ್ಯ ಸಂಗಮ’ ಮುಂತಾದವುಗಳ ಸ್ಥಾಪಕ ಅಧ್ಯಕ್ಷರಾಗಿ ಮಕ್ಕಳ ಸಾಹಿತ್ಯ ಪ್ರಚಾರ, ಪ್ರಸಾರವನ್ನು ಹಲವಾರು ರೀತಿ ಕೈಗೊಂಡರು. ಇವರ ಮಕ್ಕಳ ರಚನೆಗಳು ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕನ್ನಡ ಪಠ್ಯಗಳ ‘ಅದಮ್ಯ ಚೇತನ’ ಮತ್ತು ‘ಕನ್ನಡ ಪರಿಮಳ’ ಕವನ ವಾಚನ ಮಾಲೆಯಲ್ಲಿ  ಸೇರ್ಪಡೆಯಾಗಿರುವುದಲ್ಲದೆ ‘ಮಕ್ಕಳ ಮಾಣಿಕ್ಯ’ ಎಂಬ ಧ್ವನಿ ಸುರುಳಿಯೂ ಬಿಡುಗಡೆಯಾಗಿತ್ತು. 

ಪಳಕಳ ಸೀತಾರಾಮ ಭಟ್ಟರು ಸಾರ್ವಜನಿಕವಾಗಿಯೂ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು ಸಹಕಾರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸ್ಥಳೀಯ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಅಧ್ಯಕ್ಷರಾಗಿ, ಭೂರಹಿತ ಕುಟುಂಬಗಳಿಗೆ ನಿವೇಶನಗಳು ದೊರೆಯುವಂತೆ ಮಾಡಿ ಬಡವರ ಬದುಕಿನ ಬೆಳಕಾಗಿ ಹಲವಾರು ಜನ ಹಿತ ಕಾರ್ಯಗಳಲ್ಲೂ ಭಾಗಿಯಾಗಿದ್ದರು. 

ಪಳಕಳ ಸೀತಾರಾಮ ಭಟ್ಟರಿಗೆ  ಮಕ್ಕಳ ಸಾಹಿತ್ಯದ ಕೊಡುಗೆಗಾಗಿ ಕೆಂದ್ರೀಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತ್ತು.  ಇದಲ್ಲದೆ  ಮದರಾಸು ಸರಕಾರದಿಂದ ಮಕ್ಕಳ ಸಾಹಿತ್ಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜರತ್ನಂ ದತ್ತಿನಿಧಿ ಪ್ರಶಸ್ತಿ,  ವಸುದೇವ ಭೂಪಾಳಂ ದತ್ತಿ ನಿಧಿ ಪ್ರಶಸ್ತಿ, ನವದೆಹಲಿಯ ಬಾಲಶಿಕ್ಷಾ ಪರಿಷತ್‌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಮಕ್ಕಳ ಸಾಹಿತ್ಯ ಬಹುಮಾನ,  ಶಿವರಾಮ ಕಾರಂತ ಪ್ರತಿಷ್ಠಾನ ಗೌರವ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವ  ಸಂದರ್ಭದಲ್ಲಿ ಸನ್ಮಾನ, ಕರ್ನಾಟಕ ಬಾಲ ವಿಕಾಸ ಅಕಾಡಮಿ ಗೌರವ ಪ್ರಶಸ್ತಿ,  ಬೋಳಂತ ಕೋಡಿ ಕನ್ನಡ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.. 

ಪಳಕಳ ಸೀತಾರಾಮ ಭಟ್ಟರು ಅಂದಿನ ದಿನಗಳಲ್ಲೇ ತಮ್ಮ ಜೀವಮಾನದ ಸಂಪಾದನೆಯಿಂದ ಒಂದು ಲಕ್ಷ ರೂ.ಗಳ ನಿಧಿಯೊಂದಿಗೆ ‘ಪಳಕಳ ಪ್ರತಿಷ್ಠಾನ’ ಸ್ಥಾಪಿಸಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ವೈದ್ಯಕೀಯ ನೆರವನ್ನೂ ಪ್ರತಿಷ್ಠಾನದ ಮೂಲಕ ಕೈಗೊಂಡು ಜನಸೇವೆಯಲ್ಲಿಯೂ ನಿರತರಾಗಿದ್ದ ವಿಶಿಷ್ಟ ವ್ಯಕ್ತಿ.

ಪಳಕಳ ಸೀತಾರಾಮ ಭಟ್ಟರು 2017 ವರ್ಷದ ಸೆಪ್ಟೆಂಬರ್ 25ರಂದು ನಿಧನರಾದರು.

Photo courtesy: Mukunda AN Sir 

Great writer for children Palakala Seetharama Bhatta 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ