ಭೂಸನೂರಮಠ
ಆರ್. ಸಿ. ಭೂಸನೂರಮಠ
ಆರ್. ಸಿ. ಭೂಸನೂರಮಠ ಅವರು ವೃತ್ತಿಯಲ್ಲಿ ಆಕಾಶವಾಣಿಯಲ್ಲಿ ಜವಾಬ್ಧಾರಿಯುತ ಸೇವೆ ಸಲ್ಲಿಸಿ ಹೆಸರಾದವರಷ್ಟೇ ಅಲ್ಲದೆ ಬರಹದಲ್ಲೂ ಸೇವೆ ಸಲ್ಲಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆ ವಾಸ ಅನುಭವಿಸಿದರು. ಯುದ್ಧ ಸಮಯದಲ್ಲಿ ಗಡಿಯಲ್ಲಿ ನಿಂತು ಸಾವಿಗಂಜದೆ ಸುದ್ಧಿ ರವಾನಿಸಿದರು.
ಆರ್. ಸಿ. ಭೂಸನೂರಮಠ ಅವರು ಧಾರವಾಡ ಜಿಲ್ಲೆಯ ಕೌಜಲಗಿಯಲ್ಲಿ 1925ರ ಡಿಸೆಂಬರ್ 9ರಂದು ಜನಿಸಿದರು. ತಂದೆ ಚನ್ನವೀರಯ್ಯ. ತಾಯಿ ಚನ್ನವೀರಮ್ಮ. ಅವರ ಪ್ರಾರಂಭಿಕ ಶಿಕ್ಷಣ ನಡೆದ ಊರು ಕೌಜಲಗಿ. ಅವರದ್ದು ಬಡತನದ ಬದುಕು. ಅದರೂ ಕಲಿಕೆಯಲ್ಲಿ ಅಪಾರ ಉತ್ಸಾಹ. 1939ರಲ್ಲಿ ಹಿಂದಿ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಡಾ. ಮೆಹತಾ ಸುವರ್ಣ ಪದಕ ಪಡೆದರು.
ಆರ್. ಸಿ. ಭೂಸನೂರಮಠ ಅವರು ರಾಣಿ ಬೆನ್ನೂರು ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ಅಲ್ಲಿಗೆ ಹೋದರೆ, ಆ ಸ್ಕೂಲಿನ ಆಡಳಿತಾಕಾರಿ ಸಿದ್ದಪ್ಪನವರು ಮುಂದೆ ಓದಲು ಪ್ರಚೋದಿಸಿದರು. 1942ರ ಸ್ವಾತಂತ್ರ್ಯ ಚಳವಳಿಗೆ ಇಳಿದು ಸೆರೆವಾಸ ಅನುಭವಿಸಿದರು. ಸೆರೆಮನೆಯಲ್ಲಿ ವೇಳೆ ಕಳೆಯಲು ವಚನಗಳ ಪಠನ ಮಾಡುತ್ತಿದ್ದರು. ಇದನ್ನು ಕೇಳುತ್ತಿದ್ದ ಜೊತೆಗಾರ ಮುಸ್ಲಿಮ್ ಕೈದಿಯ ಬದುಕಿಗೆ ಹೊಸ ದಾರಿ ಕಂಡಿತಂತೆ.
ಆರ್. ಸಿ. ಭೂಸನೂರಮಠ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸಿ ತೇರ್ಗಡೆಯಾದರು. 1948ರಲ್ಲಿ ಕರ್ನಾಟಕ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿ ಪಡೆದರು.
ಆರ್. ಸಿ. ಭೂಸನೂರಮಠ ಅವರು ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ನೌಕರಿಗ ಸೇರಿದ ನಂತರ ಎಂ.ಎ. (ಇಂಗ್ಲಿಷ್) ಪದವಿ ಗಳಿಸಿದರು. 1961ರಲ್ಲಿ ಪಬ್ಲಿಕ್ ಸರ್ವೀಸ್ ಕಮೀಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಗೋವಾ, ಭೂಪಾಲ್, ಇಂಫಾಲ (ಮಣಿಪುರ), ಅಗರ್ತಲ (ತ್ರಿಪುರ) ಮುಂತಾದ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು. ಮುಂದೆ ಬೆಂಗಳೂರು ಆಕಾಶವಾಣಿ ಕೇಂದ್ರದ ಅಸಿಸ್ಟೆಂಟ್ ಸ್ಟೇಷನ್ ಡೈರೆಕ್ಟರಾಗಿ ನೇಮಕಗೊಂಡರು.
ಆರ್. ಸಿ. ಭೂಸನೂರಮಠ ಅವರು 1965ರಲ್ಲಿ ಯುದ್ಧದ ಸುದ್ದಿ ಸಂಗ್ರಹಕ್ಕೆ ಇಂಫಾಲಕ್ಕೆ ತೆರಳಿ, ಸಾವು ನೋವುಗಳಿಗಂಜದೆ, ಬಾಂಬ್ ದಾಳಿಯನ್ನೂ ಲೆಕ್ಕಿಸದೆ ತಾಜಾಸುದ್ದಿ ರವಾನೆ ಮಾಡಿದರು. ಇಂದಿರಾಗಾಂಧಿಯವರು ಇವರ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್. ಸಿ. ಭೂಸನೂರಮಠ ಅವರು ಕೆಲಸದ ನಡುವೆಯೂ ಅನೇಕ ಕೃತಿಗಳನ್ನು ರಚಿಸಿದರು. ಜೇಂಗೊಡ, ಕನಸಿನ ರಾಣಿ ಇವರ ಕವಿತಾ ಸಂಕಲನಗಳು. ಭಕ್ತಿ ಭಂಡಾರಿ ಮತ್ತು ಇತರ ನಾಟಕಗಳನ್ನು ರಚಿಸಿದರು. ಹಿಂದಿ ಭಾಷೆಯಲ್ಲಿ 'ಪ್ಯಾರಕೆ ಬೇಂಟ್' ಎಂಬ ಏಕಾಂಕ ನಾಟಕಗಳ ಸಂಗ್ರಹ ಪ್ರಕಟಿಸಿದರು.
ಆರ್. ಸಿ. ಭೂಸನೂರಮಠ ಅವರ 'ಜೇಂಗೊಡ' ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ ಸಂದಿತು. ಹಿಂದಿ ಏಕಾಂಕ ನಾಟಕ ಸಂಗ್ರಹಕ್ಕೆ ಮಧ್ಯಪ್ರದೇಶ ಸರಕಾರದ ಮಾಧವರಾವ್ ಸಪ್ರೆ ಬಹುಮಾನ ಸಂದಿತು. ಇವರ 'ಭಕ್ತಿ ಭಂಡಾರಿ' ಹಿಂದಿ ಏಕಾಂಕ ನಾಟಕ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಯು. ತರಗತಿಗಳಿಗೆ ಪಠ್ಯ ಪುಸ್ತಕವಾಗಿ ಆಯ್ಕೆಯಾಗಿತ್ತು.
ಆರ್. ಸಿ. ಭೂಸನೂರಮಠ ಅವರು 2006ರ ಜುಲೈ 5ರಂದು ಈ ಲೋಕವನ್ನಗಲಿದರು.
On the birth anniversary of R. C. Bhusanur Mutt
ಕಾಮೆಂಟ್ಗಳು