ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಲಮುರಳೀಕೃಷ್ಣ



 ಎಂ. ಬಾಲಮುರಳೀಕೃಷ್ಣ


ಡಾ. ಮಂಗಲಂಪಲ್ಲಿ ಬಾಲಮುರಳೀಕೃಷ್ಣ ಕೃಷ್ಣ ಎಂದರೆ ಅಲ್ಲೊಂದು ಸಂಗೀತ ಸುನಾದದ ಭಾವ ಹೊರಹೊಮ್ಮುತ್ತದೆ.  ಕಳೆದ ಶತಮಾನದ ಸಂಗೀತ ಕ್ಷೇತ್ರದ ಮನಮೋಹಕ ಧ್ವನಿಗಳಲ್ಲಿ ಡಾ. ಬಾಲಮುರಳೀಕೃಷ್ಣರು ಪ್ರಮುಖರು.  

ತಮ್ಮ ಎಂಟನೇ ವಯಸ್ಸಿನಲ್ಲೇ ಸಂಗೀತಕಚೇರಿ ಮಾಡಿದ ಬಾಲಮುರಳೀಕೃಷ್ಣರು 1930ರ ಜುಲೈ 6ರಂದು  ಪಶ್ಚಿಮ ಗೋದಾವರಿ ತೀರದ ಶಂಕರಗುಪ್ತಂ ಎಂಬ ಗ್ರಾಮದಲ್ಲಿ ಜನಿಸಿದರು.   ತಂದೆ ತಾಯಿಯರಿಬ್ಬರೂ ಸಂಗೀತ ರಸಿಕರು.   ಸಂತ ತ್ಯಾಗರಾಜರ ನೇರ ಶಿಷ್ಯ ಪರಂಪರೆಯ ಸಂಗೀತ ಸಾಗರದಲ್ಲಿ ಮಿಂದುಬಂದ ಶ್ರೀ ಪಾರುಪಲ್ಲಿ ರಾಮಕೃಷ್ಣಯ್ಯ ಪಂತುಲು ಅವರ ಶಿಷ್ಯರಾಗುವ ಸೌಭಾಗ್ಯ ಬಾಲಮುರಳಿ ಅವರದಾಯಿತು.

ಅಂದು ಆಂಧ್ರದಲ್ಲಿ ಹುಟ್ಟಿದ ಬಾಲಮುರಳಿ ಮುಂದೆ ವಿಶ್ವಸಮುದಾಯಕ್ಕೆ ಎಲ್ಲ ರೀತಿಯಲ್ಲಿ ತಮ್ಮ ಸಂಗೀತಸಾಗರವನ್ನು ಕೊಂಡೊಯ್ದವರು.    ಅವರು ನಡೆಸಿದ ಸಂಗೀತ ಕಚೇರಿಗಳ ಸಂಖ್ಯೆಯೇ 25000 ಗಡಿಯನ್ನು ಮೀರಿದ್ದು.  ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಹರಿಸಿರುವ ಚಿತ್ರಗೀತೆಗಳು ಅಸಂಖ್ಯವಾಗಿವೆ.  ಅವರಿಗೆ ನುಡಿಸಲು ಬಾರದ ಭಾರತೀಯ ಸಂಗೀತ ವಾದ್ಯವೇ ಇರಲಿಲ್ಲ.  ಕರ್ಣಾಟಕ ಸಂಗೀತದ ಸಾರ್ವಭೌಮತ್ವದ ಜೊತೆಗೆ ಹಿಂದೂಸ್ಥಾನಿ, ಪಾಶ್ಚಿಮಾತ್ಯ ಸಂಗೀತಗಳೆಲ್ಲವೂ ಅವರಿಗೆ ಕರಗತವೇ.  ಅವರಷ್ಟು ಎಲ್ಲ ವಿಧದ ಸಂಗೀತಗಳೊಡನೆ, ವಿವಿಧ ಸಂಗೀತ ಶ್ರೇಷ್ಠರೊಡನೆ ನಡೆಸಿದ ಜುಗಲ್ ಬಂದಿಗಳನ್ನು ನಡೆಸಿದವರಿಲ್ಲ.  ಅವರಷ್ಟು ವಿಭಿನ್ನತೆಯನ್ನು  ಧ್ವನಿ ವೈವಿಧ್ಯ, ಸಂಗೀತಾಬಿಭಿವ್ಯಕ್ತಿ, ಕವಿತ್ವ, ವಾಗ್ಗೇಯಕಾರಿಕೆ, ವಿವಿಧ ಮಾದರಿಯ ಸಂಗೀತಗಳಲ್ಲಿ ಪಾಲ್ಗೊಳ್ಳುವಿಕೆ ,  ಕೃತಿ ವ್ಯಾಪ್ತಿಗಳ ಮೇರೆಯನ್ನು ಮುಟ್ಟಿದ ಸಾಧಕರು ಅಪೂರ್ವವೇ ಸರಿ.  ಅವರ ಸಂಗೀತ ಮೇಧಾವಿತನಕ್ಕೆ ಅವರು ಎಲ್ಲೆಲ್ಲೂ ಗೌರವಾನ್ವಿತರು.

ವಿವಿಧ ಸಂಗೀತ ರಚನೆಗಳ, ವಿವಿಧ ರಾಗಾವಳಿಗಳ ಅವರ ಸಂಗೀತ ಕಚೇರಿಗಳು, ಧ್ವನಿಮುದ್ರಣಗಳು, ಸಿನಿಮಾ ಸಂಗೀತಗಳು ಮೂಡಿಸಿರುವ ತರಂಗಗಳು ಮೋಹಕವಾದವುಗಳು.  “ನಾನು ಹೊಸರಾಗಗಳನ್ನು ಅನ್ವೆಷಿಸಿದ್ದೇನೆ” ಎಂಬ ಅವರ ಘೋಷಣೆ ಅಂದಿನ  ಸಂಗೀತ ವಿದ್ವಾಂಸ ಪರಂಪರೆಯಲ್ಲಿ ವಿವಾದಗಳನ್ನು ಸಾರಿದವು, ಅವರ ಸಂಗೀತ ಕಚೇರಿಗಳಲ್ಲಿ ಅವರ ಧ್ವನಿಯಲ್ಲಿ ಪ್ರಖ್ಯಾತಗೊಂಡ ಕೃತಿಗಾಯನವನ್ನು ಕೇಳ ಹೋದವರಿಗೆ ಯಾವುದೋ ಪರಿಚಯವಿಲ್ಲದ  ನಿಸ್ತೇಜದ ಸಂಗೀತ ಉಣಿಸುವಿಕೆ, ಸ್ವಂತ ರಚನೆಗಳನ್ನೇ ಹೆಚ್ಚು ಹಾಡುವುದು  ಮುಂತಾದ ಪ್ರವೃತ್ತಿಗಳು  ಅಂದಿನ  ದಿನಗಳಲ್ಲಿ ಟೀಕೆಗೆ ಗುರಿಯಾಗುತ್ತಿದ್ದವು.  ನಾನು ಹೊಸತನ್ನು ಅನ್ವೇಷಿಸಲು ಬಯಸಿರುವುದರಿಂದ ಕೆಲವು ಕಾಲ ಸಂಗೀತ ಕಚೇರಿಗಳಿಂದ ದೂರವಿರುತ್ತೇನೆ ಎಂದು ಕೂಡ ಅವರು ಘೋಷಿಸಿದ್ದರು.  ಇಷ್ಟಾದರೂ ಅವರ ಧ್ವನಿ ವೈವಿಧ್ಯ, ಪಾಂಡಿತ್ಯಪೂರ್ಣ ಕೃತಿ ವಿಸ್ತಾರ ಇವುಗಳೆಲ್ಲಾ ಹಲವು ದಶಕಗಳಿಂದ ಮನೆಮಾತಾಗಿವೆ.  ಅವರ ಕಚೇರಿಗಳು ಎಲ್ಲೆಲ್ಲೂ ಅಪಾರ ಜನಸ್ತೋಮವನ್ನು ಆಕರ್ಷಿಸಿವೆ.  ಅವರ ನಂತರದ ತಲೆಮಾರುಗಳು ಸಂಗೀತ ಕಚೇರಿ, ನೃತ್ಯಗಳಲ್ಲಿ ಅವರ ಸೃಷ್ಟಿಗಳನ್ನು ಬಳಸಿಕೊಳ್ಳುತ್ತಿವೆ.

ತ್ಯಾಗರಾಜರ ಪಂಚರತ್ನಕೃತಿಗಳು, ನಗುಮೋಮು, ಎಂದರೋ ಮಹಾನುಭಾವುಲು, ಸಾಮಜವರಗಮನ; ಮೈಸೂರು ವಾಸುದೇವಾಚಾರ್ಯರ ದೇವಾದಿದೇವ; ಮುತ್ತುಸ್ವಾಮಿ ದೀಕ್ಷಿತರ ವಾತಾಪಿ ಗಣಪತಿಂ ಭಜೇ; ಪಲುಕೇ ಬಂಗಾರಮಾಯೇನ, ಪಾಹಿ ರಾಮ ಪ್ರಭೋ ಮುಂತಾದ ಸಕಲ ರಾಮದಾಸ ಕೃತಿಗಳು; ಜಯದೇವ ಕವಿಯ ಅಷ್ಟಪದಿ;  ದಾಸರ ಕೀರ್ತನೆಗಳಾದ ಆಡಿದನೋ ರಂಗ, ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ, ಮುಯ್ಯಕ್ಕೆ ಮುಯ್ಯಾ ತೀರಿತು, ಹೊಡಿ ನಗಾರಿ ಮೇಲೆ ಕೈಯ್ಯಾ, ಕೃಷ್ಣಾ ಎನಬಾರದೇ, ಇಂತಹ ಹಾಡುಗಳನ್ನು ಬಾಲಮುರಳಿ ಅವರ ಧ್ವನಿಯಲ್ಲಿ ಕೇಳಿದಷ್ಟೂ ಮತ್ತೂ ಸವಿಯಬೇಕೆನಿಸುತ್ತದೆ.  ಬಾಲಮುರಳಿ ಅವರು ಕನ್ನಡದ ಚಲಚಿತ್ರಗೀತೆಗಳಲ್ಲಿ ಹಲವು ಮೇರುಮಟ್ಟಗಳನ್ನು ತಲುಪಿದ್ದಾರೆ.  ‘ಹಂಸಗೀತೆ’ ಚಿತ್ರದಲ್ಲಿ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ‘ಮಧ್ವಾಚಾರ್ಯ’ ಚಿತ್ರಕ್ಕೆ ಸಂಗೀತ ಸಂಯೋಜನೆಗಾಗಿ ಅವರಿಗೆ ಪ್ರಶಸ್ತಿಗಳು ಸಂದಿವೆ.  ‘ನಟವರ ಗಂಗಾಧರ’, 'ಜಯ ಜಯ ಜಗದೀಶ', ‘ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ’, ‘ನಂಬಿದೆ ನಿನ್ನ ನಾದ ದೇವತೆಯೇ’, ‘ಕೇಳನೋ ಹರಿ ತಾಳನೋ’, ‘ತನು ನಿನ್ನದು ಜೀವನ ನಿನ್ನದು’, 'ಏನು ಮಾಡಿದರೇನು ಭವ ಹಿಂಗದು', ’ನಾ ನಿನ್ನ ಧ್ಯಾನದೊಳಿರಲು’, ‘ಕೊಳಲನೂದುವ ಚತುರನಾರೆ ಪೇಳಮ್ಮಯ್ಯಾ’, ‘ದೇವರು ಹೊಸೆದ ಪ್ರೇಮದ ದಾರ’, ‘ಇಂದು ಎನಗೆ ಗೋವಿಂದ‘ ಅಂತಹ ಅವರು ಹಾಡಿರುವ ಚಲನಚಿತ್ರದ ಹಾಡುಗಳು ಅವಿಸ್ಮರಣೀಯವಾಗಿವೆ, ಅಜರಾಮರವಾಗಿವೆ.  ಭೀಮಸೇನ ಜೋಶಿ ಅಂತಹ ಪ್ರಖ್ಯಾತ ಹಿಂದೂಸ್ಥಾನಿ ಗಾಯಕರೊಂದಿಗೆ ಬಾಲಮುರಳಿ ಕೃಷ್ಣ ಅವರು ನಡೆಸಿಕೊಟ್ಟಿರುವ  ಹಲವಾರು ಜುಗಲ್ ಬಂದಿ ಗಾಯನಗಳು  ಅಪೂರ್ವವೆನಿಸಿವೆ.

ಬಾಲಮುರಳಿಯವರಿಗೆ ಸಲ್ಲದ ಪ್ರಶಸ್ತಿಗಳಿಲ್ಲ.  ಹಲವು ದೇಶ ವಿದೇಶಗಳ ಡಾಕ್ಟರೇಟ್ಗಳು, ಪದ್ಮವಿಭೂಷಣ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಂಗೀತ ಕಲಾನಿಧಿ, ಹಲವು ಚಿತ್ರಗಳ ಗಾಯನ ಮತ್ತು ಸಂಗೀತಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಹೀಗೆ ಅನೇಕಾನೇಕ ಗೌರವಗಳು ಬಾಲಮುರಳಿಯವರಿಗೆ ಸಂದಿವೆ.

ಬಾಲಮುರಳಿ ಕೃಷ್ಣ ಅವರು 2016ರ ನವೆಂಬರ್ 22ರಂದು ನಿಧನರಾದರು.

On the birth anniversary of great musician Dr. M. Balamuralikrishna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ