ಗಣೇಶ್ ಕಾಸರಗೋಡು
ಗಣೇಶ್ ಕಾಸರಗೋಡು
ಗಣೇಶ್ ಕಾಸರಗೋಡು ಕನ್ನಡ ಸಿನಿಮಾಲೋಕದ ಪ್ರಸಿದ್ಧ ಪತ್ರಕರ್ತರು. ಅವರ ಬರವಣಿಗೆಗಳು ಸಿನಿಮಾಲೋಕದ ಬಣ್ಣ ಬಣ್ಣದ ಸುದ್ಧಿಗಳನ್ನು ಮಾತ್ರಾ ಬಿಂಬಿಸದೆ ಕಲಾಲೋಕದ ಬದುಕಿನ ಸೂಕ್ಷ್ಮತೆಗಳನ್ನು ಸಂವೇದನಾತ್ಮಕವಾಗಿ ಬಿಂಬಿಸುತ್ತ ಬಂದಿವೆ.
ನವೆಂಬರ್ 22 ಗಣೇಶ್ ಅವರ ಜನ್ಮದಿನ. ತಂದೆ ಡಿ. ಸುಬ್ರಾಯ ಆಚಾರ್ಯ. ತಾಯಿ ಶಾಂಭವಿ. ಗಣೇಶ್ ಕಾಸರಗೋಡು ಅವರು ಹುಟ್ಟಿ, ಬೆಳೆದು, ವ್ಯಾಸಂಗ ನಡೆಸಿದ್ದು ಕಾಸರಗೋಡಿನಲ್ಲಿ. ಅವರು ಕನ್ನಡ ಎಂ.ಎ. ಪದವಿಯಲ್ಲಿ ರ್‍ಯಾಂಕ್ ವಿಜೇತರು.
ಗಣೇಶ್ ಕಾಸರಗೋಡು ಅವರು 1980ರ ಸುಮಾರಿಗೆ ಸಿನಿಮಾ ಪತ್ರಕರ್ತರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಅದಕ್ಕೆ ಮುಂಚೆ ಐದಾರು ತಿಂಗಳುಗಳ ಕಾಲ ಕಾಸರಗೋಡಿನ ಬಳಿಯ ಕುಂದಂಗುಳಿ ಗ್ರಾಮದ ಸರ್ಕಾರಿ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಆದರೆ ಆ ಉದ್ಯೋಗ ತಮ್ಮ ಜಾಯಮಾನಕ್ಕೆ ಒಗ್ಗದ ಕಾರಣ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದರು.
ಗಣೇಶ್ ಕಾಸರಗೋಡು ಅವರ ವೃತ್ತಿ ಬದುಕು ಆರಂಭವಾದದ್ದು 'ಚಿತ್ರದೀಪ' ಸಿನಿಮಾ ಪತ್ರಿಕೆಯ ಮೂಲಕ. ಆನಂತರದ ವರ್ಷಗಳಲ್ಲಿ ಚಿತ್ರತಾರ, ಅರಗಿಣಿ, ಅಭಿಮಾನಿ, ಸಂಚು, ಚಕೋರಿ, ತಾಯಿ, ಕ್ರೀಡಾಭಿಮಾನಿ, ಸಂಯುಕ್ತ ಕರ್ನಾಟಕ, ಕರ್ಮವೀರ, ವಿಜಯ ಕರ್ನಾಟಕ, ಟೈಮ್ಸ್ ಆಫ್ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಪೂರ್ಣಾವಧಿಯ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಮಂಗಳ, ಹಾಯ್ ಬೆಂಗಳೂರ್, ರೂಪತಾರ, ಸೂರ್ಯ, ಚಿತ್ರ, ಕಾರವಲ್, ಆಂದೋಲನ, ರಾಯಚೂರು ವಾಣಿ ಮೊದಲಾದ ಪತ್ರಿಕೆಗಳಿಗಾಗಿ ಅರೆಕಾಲಿಕ ಅಂಕಣಕಾರರಾಗಿಯೂ ದುಡಿದಿದ್ದರು. ಅವರ ಅಂಕಣಗಳಲ್ಲಿ ವ್ಯಾಪ್ತಿ ಪ್ರದೇಶದಿಂದ ಹೊರಗೆ, ಚದುರಿದ ಚಿತ್ರಗಳು, ಕುಶಲವೇ ಕ್ಷೇಮವೇ, ಮೌನ ಮಾತಾದಾಗ, ಮಾಯಾ ಬಜಾರ್, ಸಂಚಾರದಲ್ಲಿ ಪದನಿಸ, ಮಾನಸ ಸರೋವರ, ಕಾಸರಗೊಡ್ಕರ್ ಉಪ್ಪಿನಕಾಯಿ, ಬೆಂಗಳೂರು ಪೋಸ್ಟ್, ಪರದೆ, ಸೈಡ್ ವಿಂಗ್, ಫ್ಲಾಶ್ ಬ್ಯಾಕ್, ಬೆಳ್ಳಿತೆರೆಯ ಬಂಗಾರದ ಗೆರೆ ಇತ್ಯಾದಿ ಸೇರಿವೆ.
ಗಣೇಶ್ ಕಾಸರಗೋಡು ಅವರ ಪ್ರಕಟಿತ ಕೃತಿಗಳಲ್ಲಿ ನೆನಪಿನಂಗಳದಲ್ಲಿ ಶಂಕರನಾಗ್; ಬೆಳ್ಳಿ ತೆರೆಯ ಅಮೃತ ಕಳಶ: ರವಿಚಂದ್ರನ್; ಗುರಿ-ಹೆಗ್ಗುರಿ; ಕನ್ನಡದ ಕಣ್ಮಣಿ : ಕಾಳಿಂಗರಾಯರು; ಪ್ರೀಮಿಯರ್ ಬಸವರಾಜಯ್ಯ; ಬಣ್ಣ ಮಾಸಿದ ಬದುಕು, ನೂರು ಚಿತ್ರಗಳು - ನೂರಾರು ನೆನಪುಗಳು-ಚಿಗುರಿದ ಕನಸುಗಳು; ಸ್ಫೂರ್ತಿಯ ಸೆಲೆ: ರಮೇಶ್ ಅರವಿಂದ್; ಆಫ್ ದಿ ರೆಕಾರ್ಡ್; ಚದುರಿದ ಚಿತ್ರಗಳು; ಮೌನ ಮಾತಾದಾಗ; ಹೇಗಿದ್ದ ಹೇಗಾದ ಗೊತ್ತಾ?; ಶುಭಂ: ಹಳೆಯ ಸಿನಿಮಾದ ಕೊನೆಯ ಫ್ರೇಮು; ಕನ್ನಡ ಚಿತ್ರರಂಗದ ಲೆಜೆಂಡ್‍ಗಳ ಕೊನೆಯ ದಿನಗಳು ಮುಂತಾದವು ಸೇರಿವೆ.
ಗಣೇಶ್ ಕಾಸರಗೋಡು ಅವರ ಟಿವಿ ಕಾರ್ಯಕ್ರಮಗಳಲ್ಲಿ ಬಣ್ಣ ಮಾಸಿದ ಬದುಕು, ಚದುರಿದ ಚಿತ್ರಗಳು, ಅಂತರಂಗ - ಬಹಿರಂಗ, ಮಾನಸ ಸರೋವರ, ತಾರೆಯರ ಮನೆ - ಮನ, ಚಿತ್ರರಂಜಿನಿ, ಮೂವರು ತಾರೆಯರ ಅಂತರಂಗ ಬಹಿರಂಗ : ವಿಷ್ಣುವರ್ದನ್ - ಅಂಬರೀಷ್ -ಶಂಕರನಾಗ್ ಮುಂತಾದ ವೈವಿಧ್ಯಗಳಿವೆ.
ಗಣೇಶ್ ಕಾಸರಗೋಡು ಅವರ ಪ್ರಕಟಿತ ಕೃತಿಗಳಲ್ಲಿ ಚದುರಿದ ಚಿತ್ರಗಳು, ಮೌನ ಮಾತಾದಾಗ, ನೆನಪಿನಂಗಳದಲ್ಲಿ ಶಂಕರನಾಗ್, ಹೇಗಿದ್ದ ಹೇಗಾದ ಗೊತ್ತಾ?, ಕ್ರೇಜಿಸ್ಟಾರ್ ರವಿಚಂದ್ರನ್, ಕಲಾಭಿಮಾನಿ ಬಾಲಣ್ಣ, ಸ್ಪೂರ್ತಿಯಿಂದ ರಮೇಶ್, ನೂರು ಚಿತ್ರಗಳು ನೂರಾರು ನೆನಪುಗಳು, ಆಫ್ ದಿ ರೆಕಾರ್ಡ್, ಗುರಿ ಹೆಗ್ಗುರಿ, ಚಿಗುರಿದ ಕನಸುಗಳು, ಗಾನಗಂಧರ್ವ ಕಾಳಿಂಗರಾಯರು, ಹುಲಿಕಲ್ ನಟರಾಜ್ ಬದುಕು, ಪತ್ತೇದಾರಿ ಪಿತಾಮಹ ನರಸಿಂಹಯ್ಯ, ಪ್ರೀಮಿಯರ್ ಬಸವರಾಜ, ಖಾಸಗಿ ಪುಟಗಳು, ಬದುಕು ಮುಗಿಸುವ ಮುನ್ನ, ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್, ಅಂತರಂಗ ಬಹಿರಂಗ ದರ್ಶನ, ಬೆಳ್ಳಿತೆರೆಯ ಬಂಗಾರದ ಗೆರೆ, ಪ್ರೀತಿಯಿಂದ ರಮೇಶ್, ಫೇಸ್ 2 ಫೇಸ್, ಹುಚ್ಚು ಮನಸ್ಸಿನ ನೂರುಮುಖಗಳು ಮುಂತಾದ ವಿಶಾಲ ವ್ಯಾಪ್ತಿಗಳಿವೆ. ಇವುಗಳಲ್ಲಿ 'ನೆನಪಿನಂಗಳದಲ್ಲಿ ಶಂಕರನಾಗ್' ಎಂಬ ಪುಸ್ತಕವನ್ನು 'ಕರ್ನಾಟಕ ಅಂಧರ ವಿಮೋಚನಾ ವೇದಿಕೆ'ಯ ಗೆಳೆಯರು ಅತ್ಯಪೂರ್ವವಾದ ಬ್ರೈಲ್ ಲಿಪಿಗೆ ತರ್ಜುಮೆ ಮಾಡಿ ಪುಸ್ತಕ ಹೊರ ತಂದಿದ್ದಾರೆ. ಈ ಮೂಲಕ ಶಂಕರನಾಗ್ ಬದುಕನ್ನು ಅಂಧ ಮಿತ್ರರೂ ಓದುವಂತೆ ಮಾಡಿದ್ದಾರೆ.
ಗಣೇಶ್ ಕಾಸರಗೋಡು ಅವರಿಗೆ 'ಚದುರಿದ ಚಿತ್ರಗಳು' ಪುಸ್ತಕಕ್ಕೆ ರಾಜ್ಯ ಸರ್ಕಾರದ 2012ನೇ ಸಾಲಿನ 'ಸಿನಿಮಾ ಪುಸ್ತಕ ಪ್ರಶಸ್ತಿ' ಸಂದಿದೆ. ಕರ್ನಾಟಕ ರಾಜ್ಯ ಮಾಧ್ಯಮ ಪ್ರಶಸ್ತಿಯೂ ಸಂದಿದೆ. ಇದಲ್ಲದೆ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ, ಪತ್ರಕರ್ತರ ವೇದಿಕೆ ಪ್ರಶಸ್ತಿ, ವೈಯೆನ್ಕೆ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ , ಹಲೋ ಗಾಂಧಿನಗರ್ ಪ್ರಶಸ್ತಿ, ದಿ ನ್ಯೂ ಇಂಡಿಯನ್ ಟೈಮ್ಸ್ ಪ್ರಶಸ್ತಿ, ಇಂಡಿವುಡ್ ಎಕ್ಸಲೆಂನ್ಸ್ ಪ್ರಶಸ್ತಿ, ದಿ ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ಸಾಹಿತ್ಯ ರಾಜ್ಯ ಪ್ರಶಸ್ತಿ, ದಾವಣಗೆರೆ 'ಜಿಲ್ಲಾ ಸಮಾಚಾರ' ವರ್ಷದ ವ್ಯಕ್ತಿ ಪ್ರಶಸ್ತಿ, ರಾಘವೇಂದ್ರ ಚಿತ್ರವಾಣಿ ಸಿನಿಮಾ ಸಾಹಿತ್ಯ ಪ್ರಶಸ್ತಿ, ಮೀಡಿಯಾ ಅಚೀವ್ಮೆಂಟ್ ಅವಾರ್ಡ್, ಹೂಗಾರ ಸ್ಮಾರಕ ಪ್ರಶಸ್ತಿ ಹುಟ್ಟೂರ ಸನ್ಮಾನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಗಣೇಶ್ ಕಾಸರಗೋಡು ಅವರು ಅಷ್ಟೊಂದು ಸಾಧಿಸಿದ್ದರೂ, ಸಾಮಾನ್ಯರಾದ ನಮ್ಮಂತಹವರಿಗೂ ತೋರುವ ಪ್ರೀತಿ, ಸರಳತೆ, ಸಜ್ಜನಿಕೆ, ಮಗುವಿನಂತಹ ಗುಣ ಅಪ್ಯಾಯಮಾನವಾದದ್ದು. ಮಹಾನ್ ಸಾಧಕ, ಸರಳ ಸಹೃದಯಿ, ಆತ್ಮೀಯ ಗಣೇಶ್ ಕಾಸರಗೋಡು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Ganesh Kasaragod Sir
ಕಾಮೆಂಟ್‌ಗಳು