ಕೆ.ಎಸ್. ಚಿತ್ರಾ
ಕೆ.ಎಸ್.ಚಿತ್ರಾ
ದಕ್ಷಿಣ ಭಾರತೀಯ ಚಿತ್ರರಂಗದ ಸುಶ್ರಾವ್ಯ ಹಿನ್ನಲೆ ಗಾಯಕಿ ಕೆ. ಎಸ್. ಚಿತ್ರಾ ಅವರು ಕಳೆದ ಮೂರು ನಾಲ್ಕು ದಶಕಗಳಲ್ಲಿನ ಪ್ರಧಾನ ಹೆಸರು.
ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ 1963ರ ಜುಲೈ 27ರಂದು ತಿರುವನಂತಪುರದಲ್ಲಿ ಜನಿಸಿದರು. ತಂದೆ ಕೃಷ್ಣನ್ ನಾಯರ್ ಮತ್ತು ತಾಯಿ ಶಾಂತಾ ಇಬ್ಬರೂ ಸಂಗೀತ ಸಾಧಕರು.
ತಂದೆಯವರಿಂದ ಸಂಗೀತದ ಕಲಿಕೆ ಮತ್ತು ತಾಯಿಯವರಿಂದ ವೀಣೆ ಕಲಿಕೆ ಪ್ರಾರಂಭಿಸಿದ ಚಿತ್ರಾ ಅವರು ಡಾ. ಕೆ. ಓಮನಕುಟ್ಟಿ ಅವರಲ್ಲಿ ಹೆಚ್ಚಿನ ಸಂಗೀತ ಸಾಧನೆಯನ್ನು ಮಾಡಿದರು. ಸಂಗೀತದಲ್ಲಿ ಕೇರಳ ವಿಶ್ವವಿದ್ಯಾನಿಲಯದಲ್ಲಿ, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದ ಚಿತ್ರಾ ಅವರು 1978 ರಿಂದ 1984 ಅವಧಿಯಲ್ಲಿ ಸತತ 6 ವರ್ಷಗಳ ಕಾಲ ಭಾರತ ಸರ್ಕಾರದಿಂದ ರಾಷ್ಟೀಯ ಪ್ರತಿಭಾನ್ವೇಷಣಾ ವಿಧ್ಯಾರ್ಥಿವೇತನ ಪಡೆದರು.
1979 ವರ್ಷದಲ್ಲಿ ಎಂ. ಜಿ. ರಾಧಾಕೃಷ್ಣನ್ ಅವರು ಚಿತ್ರಾ ಅವರನ್ನು ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ಕರೆತಂದರು. ಅಟ್ಟಹಾಸಂ, ಸ್ನೇಹಪೂರ್ವಂ ಮೀರಾ, ನಾನ್ ಏಕನ್ನು ಅವರು ಪ್ರಾರಂಭದಲ್ಲಿ ಹಾಡಿದ ಕೆಲವು ಮಲಯಾಳಂ ಚಿತ್ರಗಳು. ಕೆ. ಜೆ. ಏಸುದಾಸ್ ಅವರೊಂದಿಗೆ ಭಾರತ ಮತ್ತು ವಿದೇಶಗಳಲ್ಲಿ ಗಾಯನ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡರು. ಸುಮಾರು 1985-1986ರ ವೇಳೆಗೆ ಚಿತ್ರಾ ಅವರು ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲೂ ವ್ಯಾಪಿಸಿದರು.
1986ರಲ್ಲಿ ಇಳಯರಾಜರ ಸಂಗೀತದಲ್ಲಿ ತಮಿಳಿನ ಸಿಂಧು ಭೈರವಿ ಚಿತ್ರದ ಗಾಯನಕ್ಕೆ ಪ್ರಥಮ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೆ. ಎಸ್. ಚಿತ್ರಾ ಅವರು, 1986ರಲ್ಲಿ ಮಲಯಾಳಂನ ನಕಾಕ್ಷತಂಗಳ್, 1989ರಲ್ಲಿ ಮಲಯಾಳಂನ
ವೈಶಾಲಿ, 1996ರಲ್ಲಿ ತಮಿಳಿನ ಮಿನ್ಸಾರ ಕಣವು, 1997ರಲ್ಲಿ ಹಿಂದಿಯ ವಿರಾಸಾತ್, 2004ರಲ್ಲಿ ತಮಿಳಿನ ಆಟೋಗ್ರಾಫ್ ಚಿತ್ರದ ಗಾಯನಗಳಿಗಾಗಿ 6 ಬಾರಿ ರಾಷ್ಟ್ರೀಯ ಚಲನಚಿತ್ರ ಶ್ರೇಷ್ಟ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.
ಚಿತ್ರಾ ಅವರಿಗೆ ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರಪತಿಗಳಿಂದ ಶ್ರೇಷ್ಟ ಮಹಿಳಾ ಸಾಧಕಿಯರಿಗೆ ಸಂದ ಪ್ರಶಸ್ತಿ, ಅನೇಕ ರಾಜ್ಯಗಳ ಚಲನಚಿತ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಗೌರವಗಳ ಮಹಾಪೂರವೇ ಹರಿದಿದೆ.
ಚಿತ್ರಾ ಅವರು 1986ರಲ್ಲಿ ಕನ್ನಡದಲ್ಲಿ ಮೊದಲು ಜಿ.ಕೆ. ವೆಂಕಟೇಶ್ ಅವರ ನಿರ್ದೇಶನದಲ್ಲಿ ಪ್ರೀತಿ ಚಿತ್ರದಲ್ಲಿ ಹಾಡಿದರು. ಮುಂದೆ ಅವರು ಕನ್ನಡದಲ್ಲೇ 2000 ಕ್ಕೂ ಹೆಚ್ಚು ಹಾಡು ಹಾಡಿದ್ದಾರಂತೆ. ತಕ್ಷಣಕ್ಕೆ ನೆನಪಿಗೆ ಬರುವ ಅವರ ಕೆಲವು ಹಾಡುಗಳೆಂದರೆ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಕೋಟಿ ಪಲ್ಲವಿ ಹಾಡುವ ಕನಸು ಇದು, ಓ ಮೆಘಗಳ ಬಾಗಿಲಲಿ ಚಂದ್ರಮುಖಿ, ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ, ಮನಸೇ ಓ ಮನಸೇ ಎಂಥಾ ಮನಸೇ, ಎಲೆ ಹೊಂಬಿಸಿಲೆ ಎಲೆ ತಂಪೆಲರೆ, ನೆನಪುಗಳ ಮಾತು ಮಧುರಾ, ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ, ಈ ಹೃದಯ ಹಾಡಿದೆ, ತುಂತುರು ಇಲ್ಲಿ ನೀರ ಹಾಡು ಮುಂತಾದವು. ಅಂತೆಯೇ ಬಾಂಬೆ ಚಿತ್ರದ ಕಣ್ಣಾಲನೆ ಕೂಡಾ ಇಂದೂ ಖುಷಿ ಕೊಡುತ್ತೆ.
ಸರಾಗವಾಗಿ ಹಾಡುತ್ತ ನಾಲ್ಕು ದಶಕಗಳಿಗೂ ಹೆಚ್ಚು ಸಾಧನೆ ಮಾಡಿ ವಿಶ್ವದಾದ್ಯಂತ ಹೆಸರು ಮಾಡಿರುವ ಕೆ. ಎಸ್. ಚಿತ್ರಾ ಅವರ ಗಾಯನ ನಮ್ಮನ್ನು ನಿರಂತರ ತಣಿಸುತ್ತಿರಲಿ. ಅವರಿಗೆ ಬೇಕಾದ ಸಂತಸ, ನೆಮ್ಮದಿ ಮತ್ತು ಸಾಧನೆಯ ಸಂತೃಪ್ತಿ ದೊರಕುತ್ತಿರಲಿ.
On the birth day of great playback singer K. S. Chitra, Chithra
ಕಾಮೆಂಟ್ಗಳು