ಡಿ. ಪದ್ಮನಾಭಶರ್ಮ
ಡಿ. ಪದ್ಮನಾಭಶರ್ಮ
ಡಿ. ಪದ್ಮನಾಭಶರ್ಮ ಕಳೆದ ಶತಮಾನದಲ್ಲಿ ಹೆಸರಾಗಿದ್ದ ವಿದ್ವಾಂಸರು.
ಪದ್ಮನಾಭಶರ್ಮ 1915ರ ನವೆಂಬರ್ 27ರಂದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭುವನಹಳ್ಳಿ ಎಂಬಲ್ಲಿ ಜನಿಸಿದರು. ತಂದೆ ದೇವಚಂದ್ರ ಜೋಯಿಸರು. ತಾಯಿ ಚಂದ್ರಮತಮ್ಮ. ಅವರ ಪ್ರಾರಂಭಿಕ ಶಿಕ್ಷಣ ಚಾಮರಾಜನಗರದಲ್ಲಿ ಹಾಗೂ ಪ್ರೌಢಶಾಲೆ ವಿದ್ಯಾಭ್ಯಾಸ ಮಂಡ್ಯದಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ನಂತರ ಬೆಟ್ಟದಪುರದಲ್ಲಿ ಕೆಲಕಾಲ ಮಾಸ್ತರಿಕೆ ನಡೆಸಿದರು. ಮುಂದೆ ಮೈಸೂರಿನ ಟ್ರೈನಿಂಗ್ ಕಾಲೇಜಿನಲ್ಲಿ ಐದು ವರ್ಷ ಅಧ್ಯಯನ ನಡೆಸಿದರು. ಪಂಡಿತ ಪರೀಕ್ಷೆಯ ನಂತರ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ ದೊರೆಯಿತು. ವಾಣಿವಿಲಾಸ ಜ್ಯೂನಿಯರ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತಿ ಹೊಂದಿದರು.
ಪದ್ಮನಾಭಶರ್ಮ ಅವರು ಎಳೆವೆಯಿಂದಲೇ ಸಾಹಿತ್ಯ ರಚನೆ ಮಾಡಿದರು. ಸ್ವಾತಂತ್ರ್ಯ ಚಳವಳಿಗಾರರಿಗೆ ಭಾಷಣ, ಕವನ, ಲಾವಣಿ ಮುಂತಾದ ಬರಹ ಮಾಡಿದರು. ಪ್ರಾಕೃತ, ಹಿಂದಿ, ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಅವರಿಗೆ ಪಾಂಡಿತ್ಯವಿತ್ತು. ಪದ್ಮನಾಭಶರ್ಮರು ಸಾಹಿತ್ಯ, ಸಿದ್ಧಾಂತ, ವ್ಯಾಕರಣ, ಕಾದಂಬರಿ, ಸ್ತೋತ್ರ ಹೀಗೆ ಎಲ್ಲ ಪ್ರಕಾರಗಳಲ್ಲೂ ಕೃತಿರಚನೆ ಮಾಡಿದರು. ತ್ಯಾಗವೀರ ಬಾಹುಬಲಿ, ಭರತ ಬಾಹುಬಲಿ, ಅಭಿನವ ವಾಗ್ದೇವಿ ಕಂತಿ, ಸಮಂತ ಭದ್ರ ಸಂಗತಿ, ವಿಜಯ ಪಾರ್ಶ್ವನಾಥ, ಆದಿನಾಥ ಸಂಗತಿ ಮುಂತಾದುವು ಅವರ ಜೈನಸಾಹಿತ್ಯ ಕೃತಿಗಳು. ನಿರಾಸೆಯ ನಿಟ್ಟುಸಿರು, ಪತಿತ ಪಾವನೆ, ನಲ್ಲೆಯಾಗಲೊಲ್ಲೆ, ದಯಾದೇವಿ, ಸತ್ಯದ ಶೋಧನೆ ಮೊದಲಾದುವು ಅವರ ಕಾದಂಬರಿಗಳು. ಕರ್ನಾಟಕ ಶಬ್ದಾನುಸಾರಕ್ಕೆ ಬರೆದ ‘ನಲ್ನುಡಿಗನ್ನಡಿ’ ವ್ಯಾಖ್ಯಾನ, ಕನ್ನಡ ವ್ಯಾಕರಣ ದರ್ಶನ ಅವರ ವ್ಯಾಕರಣ ಕೃತಿಗಳು. ಜೈನ ಸಾಹಿತ್ಯ ಕಥೆಗಳು ಭಾಗ-೧, ಅಷ್ಟವಿಧಾರ್ಚನ ಕಥೆಗಳು, ಜಂಬೂಸ್ವಾಮಿಯ ಕಥೆಗಳು. ಸಿದ್ಧಾಂತ ಕೃತಿಗಳು-ಸತ್ಕ್ರಿಯಾದರ್ಪಣ, ಆತ್ಮದರ್ಶನ, ಇಷ್ಟೋಪದೇಶ, ರಯಣ ಸಾರ, ನಿಯಮಸಾರ, ಅಣುವ್ರತ ಆಂದೋಲನ ಮೊದಲಾದುವು ಅವರ ಕಥಾಸಾಹಿತ್ಯದಲ್ಲಿವೆ. ವಸಂತ ತಿಲಕೆ, ನಾಲ್ಕಿರುಳ್, ವಿದುಷಿ ಕಂತಿ ಕವಯಿತ್ರಿ, ಮಾಸ್ಟರ ಮಗಳು ಮೊದಲಾದವು ನಾಟಕಗಳು. ಪಿಚ್ಛ ಮತ್ತು ಕಮಂಡಲು, ಅಣುವ್ರತ, ಗೊಮ್ಮಟೇನ ಥುವಿ, ನಿಮ್ಮನ್ನು ನೀವು ತಿಳಿಯಿರಿ, ಧನಂಜಯ ಶಬ್ದಕೋಶವು ಮುಂತಾದ ಇತರ ಕೃತಿಗಳು ಹೀಗೆ ಅವರ ನೂರಕ್ಕೂ ಹೆಚ್ಚು ಕೃತಿಗಳಿವೆ.
ಪದ್ಮನಾಭಶರ್ಮರ ಭರತ ಬಾಹುಬಲಿ, ಸಾಹಸೀ ಸುಭಾಶ್, ಅಮರ ನೆಹರು ಕರ್ನಾಟಕ ಸರ್ಕಾರದಿಂದ ಪಠ್ಯಪುಸ್ತಕವಾಗಿ ಆಯ್ಕೆಯಾಗಿದ್ದವು. ನಲ್ನುಡಿಗನ್ನಡಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜೈನ ಸಾಹಿತ್ಯ ಭೂಷಣ ಪ್ರಶಸ್ತಿ, ರಾಜ್ಯ ಸಂಸ್ಕೃತ ಅಕಾಡಮಿ ಪ್ರಶಸ್ತಿ, ಉತ್ತಮ ಅಧ್ಯಾಪಕ ಪ್ರಶಸ್ತಿ, ಸಿದ್ಧಾಂತ ಶಿರೋಮಣಿ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ದೇವೇಂದ್ರ ಕೀರ್ತಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಡಿ. ಪದ್ಮನಾಭಶರ್ಮ ಅವರು 1995ರ ಜುಲೈ 27ರಂದು ಈ ಲೋಕವನ್ನಗಲಿದರು.
On the birth anniversary of scholar D. Padmanabha Sharma
ಡಿ. ಪದ್ಮನಾಭ ಶರ್ಮ ಅವರು ನನ್ನ ತಾತ..✨🙏
ಸರ್ ನಿಮ್ಮನ್ನು ಸಂಪರ್ಕಿಸಬೇಕು.ನಿಮ್ಮ ದೂರವಾಣಿ ಸಂಖ್ಯೆ ನೀಡಿ ಸರ್