ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೆಮ್ಮಂಗುಡಿ ಅಯ್ಯರ್


 ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್


ಕರ್ನಾಟಕ ಸಂಗೀತದ ಮಹಾನ್ ಸಾಧನೆ ಮತ್ತು ಸೇವೆಗೈದವರಲ್ಲಿ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಒಬ್ಬರು. 

ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ 1908ರ ಜುಲೈ 25ರಂದು ತಂಜಾವೂರು ಜಿಲ್ಲೆಯ ತಿರುಕ್ಕೋಡಿಕಾವಲ್ ಎಂಬಲ್ಲಿ ಜನಿಸಿದರು.  ತಂದೆ ರಾಧಾಕೃಷ್ಣ ಅಯ್ಯರ್.  ತಾಯಿ ಧರ್ಮಸಂವರ್ಧಿನಿ ಅಮ್ಮಾಳ್.  ಬಾಲ್ಯದ 4ನೇ ವರ್ಷದವರೆಗೆ ಶೆಮ್ಮಂಗುಡಿ ಅವರು ತಮ್ಮ ಸೋದರ ಮಾವ ಮಹಾನ್ ಪೀಟಿಲು ವಾದಕರಾದ ತಿರಕ್ಕೋಡಿಕಾವಲ್ ಕೃಷ್ಣ ಅಯ್ಯರ್ ಅವರ ಆಶ್ರಯದಲ್ಲಿದ್ದರು. ಅವರ ನಿಧನಾನಂತರ ತಿರುವಾರೂರು ಜಿಲ್ಲೆಯ ಶೆಮ್ಮಂಗುಡಿಯಲ್ಲಿ ತಮ್ಮ ತಂದೆ ತಾಯಿಯರ ಬಳಿಗೆ ಬಂದರು. ಎಂಟನೇ ವಯಸ್ಸಿನಿಂದ ತಮ್ಮ ಸಹೋದರಸಂಬಂಧಿ ನಾರಾಯಣಸ್ವಾಮಿ ಅಯ್ಯರ್ ಅವರಿಂದ ಸಂಗೀತ ಕಲಿಯಲು ಆರಂಭಿಸಿದರು. ಮುಂದೆ ಇವರಿಗೆ ಪ್ರಸಿದ್ಧ ಗೋಟು ವಾದ್ಯ ವಿದ್ವಾಂಸರಾದ ತಿರುವಾಡಿಮಾರ್ತೂರ್ ಸಖಾರಾಮ್ ರಾವ್ ಅವರಿಂದ ಶಿಸ್ತುಬದ್ಧತೆಯ ಶಿಕ್ಷಣ ದೊರಕಿತು.  ಇದನ್ನು ತಮ್ಮ ಜೀವನದ ಪ್ರಮುಖ ತಿರುವು ಎಂದು ಶೆಮ್ಮಂಗುಡಿ ಭಾವಿಸಿದ್ದರು. ಮಂದೆ  ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರಲ್ಲಿ ಶ್ರದ್ಧಾ ಶಿಷ್ಯತ್ವ ನಡೆಸಿದರು.

ಶೆಮ್ಮಂಗುಡಿ 1926ರಲ್ಲಿ ಕುಂಭಕೋಣಂನಲ್ಲಿ ತಮ್ಮ ಮೊದಲ ಕಚೇರಿ ನೀಡಿದರು. 1927ರಲ್ಲಿ ಮದ್ರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ  ಇವರ ಕಚೇರಿ ನಡೆಯಿತು. ಇದು ಶೆಮ್ಮಂಗುಡಿ ಅವರನ್ನು ಮಹಾನ್ ಸಂಗೀತಕಾರರ ಪ್ರಮುಖವಾಹಿನಿಗೆ ತಂದಿತು.  ಅವರ ಸಂಗೀತದಲ್ಲಿ ಅಪ್ಪಟ ಶಾಸ್ತ್ರೀಯತೆ ಇದ್ದಾಗ್ಯೂ  ಹೊಸತನವಿತ್ತು.  ಧ್ವನಿಯಲ್ಲಿ ಗಡಸುತನವಿದ್ದರೂ ಸಂಗೀತದ ಪ್ರಸ್ತುತಿಯಲ್ಲಿ ಶ್ರೋತೃಗಳ ಹೃದಯ ಸಂವೇದಿಸುವ ಮಾರ್ದವತೆಯಿತ್ತು.

ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು ಮತ್ತು ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಮಹಾರಾಜ ಸ್ವಾತಿ ತಿರುನಾಳರ ಕೃತಿಗಳ ಪ್ರಸಾರ ಕಾರ್ಯವನ್ನು ಮಾಡಿದ ಪ್ರಮುಖರೆನಿಸಿದ್ದಾರೆ.  1934ರಲ್ಲಿ ಇವರ ಅಪಾರ ಸಂಗೀತ ಜ್ಞಾನ ಮತ್ತು ಪಾಂಡಿತ್ಯದಿಂದ ಪ್ರಭಾವಿತರಾದ ತಿರುವಾಂಕೂರು ಮಹಾರಾಣಿ ಸೇತು ಪಾರ್ವತಿ ಬಾಯಿ ಅವರು ಸ್ವಾತಿ ತಿರುನಾಳರ ಕೃತಿಗಳನ್ನು ಪರಿಷ್ಕರಿಸಿ ಜನಪ್ರಿಯಗೊಳಿಸಲು ತಿರುವನಂತಪುರಕ್ಕೆ ಬರಲು ಆಹ್ವಾನ ಇತ್ತರು. ಮುತ್ತಯ್ಯ ಭಾಗವತರ ನಂತರದಲ್ಲಿ ಶೆಮ್ಮಂಗುಡಿ ಅವರು ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತ ವಿದ್ಯಾಲಯದ ಪ್ರಾಚಾರ್ಯರಾಗಿ 23 ವರ್ಷಗಳ ಕಾಲದ ಸುದೀರ್ಘ ಸೇವೆ ಸಲ್ಲಿಸಿದರು. ತಮಗೆ 55 ವರ್ಷ ವಯಸ್ಸಾದಾಗ ಈ ಜವಾಬ್ಧಾರಿಯನ್ನು ಜಿ. ಎನ್. ಬಾಲಸುಬ್ರಹ್ಮಣ್ಯಂ ಅವರಿಗೆ ವಹಿಸಿದರು.  

ಶೆಮ್ಮಂಗುಡಿ ಅವರು ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ 1957ರಿಂದ 1960 ಅವಧಿಯಲ್ಲಿ ಆಕಾಶವಾಣಿಯ ಕರ್ನಾಟಕ ಸಂಗೀತ ಕಾರ್ಯಕ್ರಮಗಳ ಪ್ರಧಾನ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.

ಮುಂದೆ ಶೆಮ್ಮಂಗುಡಿ ಅವರು ತಮ್ಮ 90ರ ವಯಸ್ಸಿನ ವರ್ಷಗಳಲ್ಲೂ ಕಚೇರಿಗಳನ್ನು ನೀಡುತ್ತಾ ಯುವಜನರಿಗೆ ಪಾಠ ಹೇಳುತ್ತಾ  95 ವರ್ಷಗಳ ತುಂಬು ಸಂಗೀತ ಯಾತ್ರೆಯನ್ನು ನಡೆಸಿದರು. ಅವರು ತಮ್ಮ ಕಚೇರಿಗಳನ್ನು ಅಚ್ಚುಕಟ್ಟಾಗಿ ಯೋಜಿಸುವುದಕ್ಕೆ ಹೆಸರಾಗಿದ್ದರು.

1947 ವರ್ಷದಲ್ಲಿ ಇನ್ನೂ ಕಿರಿಯ ವಯಸ್ಸಿನಲ್ಲೇ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಗೆ ಸಂಗೀತ ಕಲಾನಿಧಿ ಗೌರವ ಸಂದಿತು.  ಇದಲ್ಲದೆ ಪದ್ಮಭೂಷಣ, ಪದ್ಮವಿಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡಮಿ ಗೌರವ, ಮಧ್ಯಪ್ರದೇಶದ ಕಾಳಿದಾಸ ಸಮ್ಮಾನ್, ಕೇರಳ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಮುಂತಾದ ಅನೇಕ ಗೌರವಗಳು ಸಂದವು.

ಎಂ. ಎಸ್ ಸುಬ್ಬುಲಕ್ಷ್ಮಿ ಅವರಿಗೂ ಸೇರಿದಂತೆ ಸಂಗೀತ ಲೋಕದಲ್ಲಿ ಅನೇಕರಿಗೆ ಮಾರ್ಗದರ್ಶಕರಾಗಿ ಹೆಸರಾಗಿದ್ದ ಶೆಮ್ಮಂಗುಡಿ ಅವರು ಮುಂದಿನ ಪೀಳಿಗೆಯ ಸಂಗೀತಾಭ್ಯಾಸಿಗಳಿಗೆ 'ಶೆಮ್ಮಂಗುಡಿ ಮಾಮ' ಎಂದೇ ಅಪ್ತರಾಗಿದ್ದರು. ಅವರನ್ನು ಆಧುನಿಕ ಕರ್ನಾಟಕ ಸಂಗೀತದ ಪಿತಾಮಹ ಎಂದು ಕೂಡಾ ಭಾವಿಸುವವರಿದ್ದಾರೆ.

ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ 2003ರ ಅಕ್ಟೋಬರ್ 31ರಂದು ಈ ಲೋಕವನ್ನಗಲಿದರು.

On the birth anniversary of great musician and scholar Semmangudi Sreenivasa Iyer 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ