ಜೆ.ಆರ್.ಡಿ. ಟಾಟ
ಜೆ.ಆರ್.ಡಿ. ಟಾಟ
'ಜೆ ಆರ್ ಡಿ ಟಾಟಾ' ಎಂದೇ ಪ್ರಖ್ಯಾತರಾದ ಮಹಾನ್ ಉದ್ಯಮಿ ಭಾರತರತ್ನ ಜಹಾಂಗೀರ್ ರತನ್ಜಿ ದಾದಾಭಾಯಿ ಟಾಟಾ.
ಜೆ ಆರ್ ಡಿ ಟಾಟಾ 1904ರ ಜುಲೈ 29ರಂದು ಜನಿಸಿದರು. ಭಾರತದ ಕೈಗಾರಿಕಾವಲಯದ ಇತಿಹಾಸದಲ್ಲಿ ಟಾಟಾ ಸಂಸ್ಥೆ ಮತ್ತು ಜೆ.ಆರ್.ಡಿ. ಟಾಟಾ ಪ್ರಧಾನ ಹೆಸರು. ಭಾರತದ ಬೃಹತ್ ಉದ್ದಿಮೆಯಾದ ಟಾಟಾ ಸಂಸ್ಥೆಯನ್ನು 53 ವರ್ಷಗಳ ಕಾಲ ಮಾರ್ಗದರ್ಶಿಸಿ ವಿಶ್ವದ ಪ್ರಧಾನ ಸಂಸ್ಥೆಗಳಲ್ಲಿ ಒಂದನ್ನಾಗಿ ರೂಪಿಸಿದ ಕೀರ್ತಿ ಜೆ.ಆರ್.ಡಿ ಟಾಟಾ ಅವರದ್ದು. ಟಾಟಾರವರ ಉತ್ಪಾದನೆ, ಉಕ್ಕಿನಿಂದ ಪ್ರಾರಂಭಿಸಿ, ವಿದ್ಯುತ್ ಶಕ್ತಿ, ಮೊಟಾರ್ ಕಾರು, ಬೃಹತ್ ವಾಹನಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿ ತಂತ್ರಜ್ಞಾನ, ಕೈಗಡಿಯಾರ; ದಿನನಿತ್ಯದ ಬಳಕೆ ಉಪ್ಪು, ಸಾಬೂನ್, ಶ್ಯಾಂಪೂ, ಟೀ, ಕಾಫೀ, ಹೆಂಗೆಳೆಯರ ಸೌಂದರ್ಯವರ್ಧಕ ಪರಿಕರಗಳು ಹೀಗೆ ಕೊನೆ ಮೊದಲಿಲ್ಲದ್ದು.
ಜೆ.ಆರ್.ಡಿ. ಟಾಟಾರವರು, ಆರ್.ಡಿ ಟಾಟಾರವರ ಪುತ್ರರು. 'ಜಮ್ ಸೆಟ್ ಜಿ ನುಝರ್ ವಾರ್ನ್ ಜಿ ಟಾಟಾ' ಅವರು ತಮ್ಮ ಮಕ್ಕಳಾದ 'ಸರ್ ದೊರಾಬ್ ಟಾಟಾ'ಹಾಗೂ 'ಸರ್ ರತನ್ ಟಾಟಾ' ಅವರಷ್ಟೇ ಪ್ರಾಮುಖ್ಯತೆಯನ್ನು 'ಆರ್.ಡಿ.ಟಾಟಾ' ರವರಿಗೂ, ಕೊಡುತ್ತಿದ್ದರು. ಏಕೆಂದರೆ ಆರ್.ಡಿ.ಯವರು ತುಂಬಾ ವ್ಯವಹಾರಜ್ಞಾನ ಹೊಂದಿದವರಾಗಿದ್ದರು. ಮೇಲಾಗಿ ಮೇಧಾವಿ ಮತ್ತು ಉದ್ಯಮವನ್ನು ಪ್ರಗತಿಯತ್ತ ಒಯ್ಯುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಮುನ್ನಡೆಯುತ್ತಿದ್ದರು. ತಮ್ಮ ತರುವಾಯ ಟಾಟಾ ಉದ್ಯಮದ ಜವಾಬ್ದಾರಿಯನ್ನು ಹೊರಬಲ್ಲ ಒಬ್ಬ ಸಮರ್ಥ ಪ್ರವರ್ತಕನಂತೆ ಈತ ಅವರಿಗೆ ಗೋಚರಿಸಿದರು. ಜೆ.ಆರ್.ಡಿಯವರಿಗೆ ತಂದೆಯವರ ಗುಣಗಳೆಲ್ಲ ರಕ್ತಗತವಾಗಿ ಬಂದಿತ್ತು.
ಜೆ.ಆರ್.ಡಿ. ಅವರ ವಿಧ್ಯಾಭ್ಯಾಸ ಮೊದಲು ಫ್ರಾನ್ಸ್, ಜಪಾನ್ ಮತ್ತು ಭಾರತದಲ್ಲಿ ನಡೆಯಿತು. ಮುಂದೆ ತಂದೆಯವರ ಆದೇಶದಂತೆ 1925ರ ವರ್ಷದಲ್ಲಿ ಮುಂಬೈನಲ್ಲಿ 'ಟಾಟಾ ಸನ್ಸ್ ಕಂಪೆನಿ'ಯ ಅಪ್ರೆಂಟಿಸ್ ಆಗಿ, ಪಾದಾರ್ಪಣೆ ಮಾಡಿದರು. ಅಂದಿನ ದಿನಗಳಲ್ಲಿ ಅವರಿಗೆ ದೇಶ ಭಾಷೆಗಳೆಲ್ಲಾ ಹೊಸದು. ಗುಜರಾತಿ, ಹಿಂದಿ ಸರಿಯಾಗಿ ಬರುತ್ತಿರಲಿಲ್ಲ. ಅವರು ವಿಮಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಅಂದಿನ ದಿನದಲ್ಲಿ ಸಂಸ್ಥೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಪೀಟರ್ಸನ್ ಅವರ ಮೂಲಕ ಜೆ. ಆರ್. ಡಿ ಯವರಿಗೆ ಕಂಪೆನಿಯಲ್ಲಿ ನಡೆಯುವ ಪತ್ರವ್ಯವಹಾರಗಳು ಮತ್ತು ಅದಕ್ಕೆ ಸ್ಪಂದಿಸುವ ಬಗೆ ಹೇಗೆ ಎನ್ನುವ ಸ್ಥೂಲ ಪರಿಚಯವಾಯಿತು. ಅದೇ ವರ್ಷ, ಅಂದರೆ 1925ರಲ್ಲಿ ಜೆ ಆರ್ ಡಿ ಯವರ ತಂದೆ ಆರ್. ಡಿ ಟಾಟಾ ಅವರು ಪ್ಯಾರಿಸ್ ನಲ್ಲಿ ತೀರಿಕೊಂಡರು. ಇಂಥಹ ಪರಿಸ್ಥಿತಿಯಲ್ಲಿ ಜೆ.ಆರ್.ಡಿ. ಅವರಿಗೆ ತಮ್ಮ ತಂದೆ ನಿರ್ವಹಿಸುತ್ತಿದ್ದ ನಿರ್ದೇಶಕ ಹುದ್ದೆಯ ಕಾಯಕದೊಡನೆ ಮನೆಯ ಜವಾಬ್ದಾರಿಯನ್ನು ಸಹಾ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿತು. ತಮ್ಮ ತಂದೆ ಟಾಟಾ ಸಂಸ್ಥೆಯಲ್ಲಿ ಮಾಡಿದ್ದ ಸಾಲದ ಹೊರೆಯನ್ನು ತೀರಿಸುವ ಜವಾಬ್ದಾರಿ ಕೂಡಾ ಜೆ.ಆರ್.ಡಿ. ಅವರ ಮೇಲೆ ಬಂತು.
ಜೆ.ಆರ್.ಡಿ. ಅವರು ತಮ್ಮ 15ನೆಯ ವಯಸ್ಸಿನಲ್ಲೇ ಪ್ಯಾರಿಸ್ ನಗರವನ್ನು ವಿಮಾನದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಸಾಹಸಪೂರ್ಣ ಆನಂದವನ್ನು ಅನುಭವಿಸಿದ್ದರು. ಅವರಿಗೆ ವಿಮಾನಯಾನವೆಂದರೆ ಅಪಾರವಾದ ಪ್ರೀತಿ. ಅಂದಿನ ದಿನಗಳಲ್ಲಿ ಜೆ.ಆರ್.ಡಿ. ಭಾರತದಲ್ಲಿ ಪೈಲೆಟ್ ಲೈಸೆನ್ಸ್ ಪಡೆದ ಪ್ರಥಮ ಭಾರತೀಯರಾಗಿದ್ದರು. 1930ರಲ್ಲಿ ನೆವಿಲ್ ವಿನ್ಸೆಂಟ್ ಎಂಬ ಅಂಗ್ಲ ಪೈಲೆಟ್ ಭಾರತದ ಸ್ಥಳೀಯ ಜನರನ್ನು ತಮ್ಮ ಪುಟ್ಟ ವಿಮಾನದಲ್ಲಿ ಕುಳ್ಳಿರಿಸಿಕೊಂಡು ನಗರ ಪ್ರದಕ್ಷಿಣೆ ಮಾಡಿಸುವ ಕಾಯಕದಲ್ಲಿ ನಿರತರಾಗಿದ್ದರು. ಸಾಹಸಿ, ಹಾಗೂ ಮಹತ್ವಾಕಾಂಕ್ಷಿಯಾಗಿದ್ದ ಅವರು, ವಿಮಾನಾಸಕ್ತ ಜೆ.ಆರ್.ಡಿ. ಅವರನ್ನು ಈ ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಿದರು. ಆಗಿನ್ನೂ ಜೆ.ಆರ್.ಡಿ. ಅಸ್ಪಷ್ಟ ಹೆಜ್ಜೆಗಳನ್ನು ಟಾಟಾ ಸಾಮ್ರಾಜ್ಯದಲ್ಲಿ ಇಡುತ್ತಿದ್ದ ಕಾಲ. ಟಾಟಾ ಸಂಸ್ಥೆಯ ಆಗಿನ ಡೈರೆಕ್ಟರ್ ಆಗಿದ್ದ 'ಸರ್ ದೊರಾಬ್ಜಿ ಟಾಟಾ' ರವರ ಮನವೊಲಿಸಿ ‘ಟಾಟಾ ಏರ್ಲೈನ್ಸ್’ ಅಸ್ತಿತ್ವಕ್ಕೆ ಬರಲು ಪ್ರೇರಣೆಯಾದರು. ಈ ಹೊಸ ಸಂಸ್ಥೆ, ಮೊದಲಿಗೆ, 'ಟಾಟಾ ಸನ್ಸ್' ಸಂಸ್ಥೆಯ ಒಂದು ಚಿಕ್ಕ ಅಂಗವಾಗಿ ಪ್ರಾರಂಭವಾಗಿತ್ತು. ‘ಅಕ್ಟೋಬರ್ 15, 1932’, ಭಾರತದ ವಿಮಾನಯಾನದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಿನ. ಆ ದಿನ ಜೆ.ಆರ್.ಡಿ. ಅವರು ತಾವೊಬ್ಬರೇ ಕರಾಚಿಯಿಂದ ಅಹ್ಮದಾಬಾದ್ ಮುಖಾಂತರವಾಗಿ ಬೊಂಬಾಯಿಗೆ ವಿಮಾನದ ಹಾರಾಟ ಮಾಡಿದರು. ಸೂಕ್ಷ್ಮಮತಿಯಾಗಿದ್ದು, ಸಮಯಪ್ರಜ್ಞೆ ಹಾಗೂ ದೂರದೃಷ್ಟಿ ಹೊಂದಿದ್ದ ಜೆ.ಆರ್.ಡಿ. ಅವರು ವಿಮಾನಯಾನದ ಬಹುಮುಖ ಸಾಧ್ಯತೆಗಳನ್ನು ಗ್ರಹಿಸಿದ್ದರು. ಯುವ ಜೆ.ಆರ್.ಡಿ.ಯವರಿಗೆ, 'ಸ್ಪೋರ್ಟ್ಸ್ ಕಾರು'ಗಳನ್ನು ವೇಗವಾಗಿ ಓಡಿಸುವುದು ಕೂಡಾ ಸಂತಸದ ವಿಷಯವಾಗಿತ್ತು.
ಟಾಟಾ ಸನ್ಸ್ ಕಂಪೆನಿಯ ನಿರ್ದೇಶಕರಾಗಿದ್ದ, ಅನುಭವಿ 'ಸರ್ ನವರೊಸ್ ಜಿ ಸಕ್ಲಾಟ್ ವಾಲ' ಅವರು 1938ರಲ್ಲಿ ಲಂಡನ್ ನಲ್ಲಿ ಮರಣಹೊಂದಿದರು. ಅವರು ಸರ್. ದೊರಾಬ್ಜಿ ಅವರ ನಂತರದಲ್ಲಿ ಟಾಟಾ ಸನ್ಸ್ ಕಂಪೆನಿಯ ಪ್ರಧಾನ ನಿರ್ದೇಶಕರಾಗಿದ್ದರು. ಅವರ ಮರಣದ ನಂತರ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದ ಟಾಟಾ ಸನ್ಸ್ ಕಂಪೆನಿಯನ್ನು ನಡೆಸಲು ಒಬ್ಬ ಸಮರ್ಥವ್ಯಕ್ತಿಯ ಆವಶ್ಯಕತೆಯಿತ್ತು. ಟಾಟಾ ಸನ್ಸ್ ಆಡಳಿತ ಮಂಡಳಿ ಜೆ.ಆರ್.ಡಿ. ಅವರನ್ನು ಟಾಟಾ ಸನ್ಸ್ ಸಂಸ್ಥೆಯ ಪ್ರಧಾನ ನಿರ್ದೇಶಕರನ್ನಾಗಿ ನೇಮಿಸಿತು. ಹೀಗೆ 26 ಜುಲೈ 1938ರಲ್ಲಿ ಪ್ರಾರಂಭವಾದ ಈ ಕಾರ್ಯ ನಿರ್ವಹಣೆ 25 ಮಾರ್ಚ್ 1991ರ ವರೆಗೆ ನಿರಂತರವಾಗಿ ಮುಂದುವರೆಯಿತು. ಅವರು ತಮ್ಮ ಕೊನೆಯದಿನಗಳವರೆಗೆ 'ಟಾಟಾ ಸಂಸ್ಥೆ'ಯ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.
1946ರಲ್ಲಿ, ಜೆ. ಆರ್. ಡಿ. ಟಾಟಾರವರ ಪ್ರೀತಿಯ ಸಂಸ್ಥೆ ಟಾಟಾ ಏರ್ಲೈನ್ಸ್ ಸ್ವತಂತ್ರ ಕಂಪೆನಿಯಾಯಿತು. ಅದಾದ ಎರಡು ವರ್ಷಗಳ ನಂತರದಲ್ಲಿ ಜೆ.ಆರ್.ಡಿ. 'ಟಾಟಾ ಏರ್ ಲೈನ್ಸ್ (ಇಂಟರ್ನ್ಯಾಷನಲ್)' ಸ್ಥಾಪಿಸಿದರು. 1953ರಲ್ಲಿ ಭಾರತದ ಉದ್ಯಮಗಳು ರಾಷ್ಟ್ರೀಕರಣವಾದಾಗ ಜೆ.ಆರ್.ಡಿ. ಎರಡು ಕಂಪೆನಿಗಳ ನಿರ್ದೇಶಕತ್ವಕ್ಕೆ ರಾಜೀನಾಮೆಕೊಟ್ಟರು. ಜೆ ಆರ್ ಡಿ ಒಬ್ಬ ಸಾಹಸಿ, ವಾಣಿಜ್ಯೋದ್ಯಮಿ, ತಾಂತ್ರಿಕ ವಿಷಯಗಳನ್ನು ಚೆನ್ನಾಗಿ ಅರಿತವರು, ಮೇಲಾಗಿ ಆಡಳಿತವನ್ನು ಚೆನ್ನಾಗಿ ನುರಿತವರು. ವಿಮಾನಯಾನದ ಬಗ್ಗೆ, ಕಾರ್ ರೇಸ್ ಬಗ್ಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು, ಆಧುನಿಕ ಮ್ಯಾಗಜೈನ್ ಗಳನ್ನು ಓದಿ ವಿಷಯಸಂಗ್ರಹಿಸಿದ್ದರು. 1982ರಲ್ಲಿ ತಮ್ಮ ‘78 ನೇ ಹುಟ್ಟುಹಬ್ಬ’ದ ದಿನದಂದು, ಟಾಟಾ ತಮ್ಮ ಚಾರಿತ್ರ್ಯಿಕ ಹಾರಾಟವನ್ನು ಇನ್ನೊಮ್ಮೆ ಮಾಡಿತೋರಿಸಿದರು. ಇದು ಅಂದಿನ ನವಯುವಕರನ್ನು ಹುರಿದುಂಬಿಸಲು, ಹಾಗೂ ಅವರಿಗೆ ವಿಮಾನಯಾನದಲ್ಲಿ ಆಸಕ್ತಿಮೂಡಿಸಲು ತೆಗೆದುಕೊಂಡ ಒಂದು ಕ್ರಮವಾಗಿತ್ತು. ಆಗ ಟಾಟಾ ಕಂಪೆನಿಯ ಸುಪರ್ದಿನಲ್ಲಿ ಒಟ್ಟು 14 ಕಂಪೆನಿಗಳಿದ್ದವು. ವಾಣಿಜ್ಯ ವಾಹನಗಳು, ಇಂಜಿನಿಯರಿಂಗ್, ಹೋಟೆಲ್ಗಳು, ಏರ್ ಕಂಡೀಶನರ್ ಹಾಗೂ ರೆಫ್ರಿಜರೇಟರ್ಗಳು, ಕನ್ಸಲ್‍ಟೆನ್ಸಿ ಸರ್ವಿಸಸ್, ಇನ್‍ಫರ್ಮೇಶನ್ ಟೆಕ್ನಾಲಜಿ, ಕನ್ಸ್ಯೂಮರ್ ಸರ್ವಿಸಸ್, ಕನ್ಸ್ಯೂಮರ್ ಡ್ಯೂರಬಲ್ಸ್, ಟಿಸಿಎಸ್ ಇತ್ಯಾದಿ. ಅಂದು ಟಾಟಾ ಸಂಸ್ಥೆಯಿಂದ ನಾವೇನೋ ಸಾಧಿಸಿಬಿಡುತ್ತೇವೆ ಎಂದು ವಿಮಾನಯಾನವನ್ನು ಕಿತ್ತುಕೊಂಡು ಹಾಳುಗೆಡವಿದ ಸಾರ್ವಜನಿಕ ಉದ್ಯಮವನ್ನು ಕಂಡಾಗ ಇವೆಲ್ಲಾ ಇಂತಹ ಜೆ.ಆರ್.ಡಿ. ಅಂತಹ ಮಹಾನ್ ಛತ್ರದಡಿಯಲ್ಲೇ ಇದ್ದಿದ್ದರೆ ಚೆನ್ನಿತ್ತೇನೋ ಎಂದೆನಿಸುತ್ತದೆ.
ಜೆ.ಆರ್.ಡಿ. ಅವರು ಅಧಿಕಾರ ಕೈಗೆತ್ತಿಕೊಂಡಾಗ 1939ರಲ್ಲಿ ಟಾಟಾ ಸಂಸ್ಥೆಯ ಒಟ್ಟು ಆಸ್ತಿಯ ಮೊತ್ತ 62 ಕೋಟಿ ಅಥವಾ 620 ಮಿಲಿಯ ರುಪಾಯಿಗಳು. 1960ರಲ್ಲಿ ಅದು 100 ಬಿಲಿಯನ್. 14 ಕಂಪೆನಿಗಳಿಂದ ಮಾರಾಟ 2.8 ಬಿಲಿಯನ್. 1993 ರಲ್ಲಿ ಅದರ ವಹಿವಾಟು 150 ಬಿಲಿಯನ್ನುಗಳು. ಈ ಅವಧಿಯ ನಡುವೆ ಅವರು ಲೆಕ್ಕವಿಲ್ಲದಷ್ಟು ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸಿದ್ದರು. 1964-91ರ ವೇಳೆಯಲ್ಲಿ, ಭಾರತ ಸರ್ಕಾರದ ಕಂಟ್ರೋಲ್ ರಾಜ್ ನೀತಿಯಿಂದ ಟಾಟಾ ಸಂಸ್ಥೆ ಅಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಬೆಳೆಯಲು ಸಹಾಯವಾಗಲಿಲ್ಲ. ಜೆ.ಆರ್.ಡಿ.ಟಾಟಾರವರಿಗೆ ಇದರ ಬಗ್ಗೆ ಅಸಮಾಧಾನವಿತ್ತು. ಸರ್ಕಾರದಲ್ಲಿ ಬೆಳವಣಿಗೆಗೆ ಪೂರಕವಾದ ಮನೋಭಾವವಿದ್ದಿದ್ದಲ್ಲಿ ಇನ್ನೂ ಮಹತ್ತಿನದನ್ನು ಸಾಧಿಸಬಹುದಾಗಿತ್ತು ಎಂಬುದು ಜೆ.ಆರ್.ಡಿ. ಅವರ ಖಚಿತ ಅಭಿಪ್ರಾಯವಾಗಿತ್ತು. ಈ ಸಮಯದ ನಂತರದಲ್ಲಿ ಭಾರತವು ಮುಕ್ತ ಮಾರುಕಟ್ಟೆ ಯುಗಕ್ಕೆ ಮುಖ ಮಾಡಿದಂತೆ ಈ ಸಂಸ್ಥೆ ಬೆಳೆದಿರುವ ರೀತಿ ಜೆ.ಆರ್.ಡಿ. ಅವರ ಅಂದಿನ ಚಿಂತನೆಗಳಿಗೆ ಕನ್ನಡಿ ಹಿಡಿದಂತಿದೆ.
ಜೆ.ಆರ್.ಡಿ. ಅವರು, ಟಾಟಾ ಉದ್ಯಮ ಕ್ಷೇತ್ರದ ವಿವಿಧ ಹಂತಗಳಲ್ಲಿನ ಅಧಿಕಾರಿಗಳ ಕಾರ್ಯವನ್ನು ಪರಿಶೀಲಿಸಿ ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಟ್ಟು, ಅವರಿಗೆ ಮುಂದುವರೆಯಲು ಅಗತ್ಯವಾದ ಸಹಾಯವನ್ನು ಮಾಡುತ್ತಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಅನೇಕ ಪ್ರತಿಷ್ಠಿತ ಪ್ರತಿಭೆಗಳನ್ನು ಗುರುತಿಸಿದರು.
ಸುಧಾ ಮೂರ್ತಿ ಅವರು ಮೂಡಿಸಿದ ಲೇಖನವೊಂದರ ನೆನಪಾಗುತ್ತಿದೆ. ಅಂದು ಸುಧಾ ಮೂರ್ತಿಯವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಟಾಟಾ ಸಂಸ್ಥೆಯಿಂದ ಪುರುಷ ಅಭ್ಯರ್ಥಿಗಳಿಗಾಗಿ ಇಂಜಿನಿಯರಿಂಗ್ ಹುದ್ದೆಗೆ ಆಹ್ವಾನ ನೀಡಲಾಗಿತ್ತು. ಇದನ್ನು ಕಂಡ ಸುಧಾ ಮೂರ್ತಿ ಮಹಿಳೆಯರಿಗೆ ಈ ಹುದ್ದೆಗೆ ಆಹ್ವಾನವೇಕಿಲ್ಲ ಎಂದು ಒಂದು ಪೋಸ್ಟ್ ಕಾರ್ಡಿನಲ್ಲಿ ಜೆ.ಆರ್.ಡಿ. ಅವರಿಗೆ ಪತ್ರ ಬರೆದರು. ಜೆ.ಆರ್.ಡಿ. ಅವರು ಅಂದು ಆ ಪತ್ರ ಓದಿ ತಕ್ಷಣವೇ ಕಾರ್ಯ ಪ್ರವೃತ್ತರಾದರು ಎಂದರೆ ಅವರು ಎಷ್ಟರಮಟ್ಟಿಗೆ ಸಮಗ್ರವಾಗಿ ಪ್ರತಿಯೊಂದನ್ನೂ ಶ್ರದ್ಧೆಯಿಂದ ಗಮನಿಸುತ್ತಿದ್ದರು ಎಂಬ ಅರಿವಾಗುತ್ತದೆ. ಸುಧಾ ಮೂರ್ತಿಯವರು ಆ ಲೇಖನದಲ್ಲಿ ಟಾಟಾ ಸಂಸ್ಥೆಯಿಂದ ಹೊರಬಂದು ತಾವು ತಮ್ಮ ಪತಿ ನಾರಾಯಣ ಮೂರ್ತಿ ಅವರೊಂದಿಗೆ ಸ್ವಂತ ಉದ್ಯಮ ಸ್ಥಾಪಿಸಲಿದ್ದೇವೆ ಎಂದಾಗ ಜೆ.ಆರ್.ಡಿ. ಹೇಳಿದರಂತೆ “ನೀವು ಖಂಡಿತ ಯಶಸ್ವಿಯಾಗುತ್ತೀರಿ. ಹಾಗೆ ಯಶಸ್ವಿಯಾದಾಗ ದೇಶಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ” ಎಂದು. ಈ ಮಾತು ವಿದೇಶದ ವಾತಾವರಣದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ಜೆ.ಆರ್.ಡಿ. ಅವರಿಗಿದ್ದ ಈ ಭಾರತ ಭೂಮಿಯ ಬಗೆಗಿನ ಪ್ರೇಮವನ್ನು ಮತ್ತು ಸಾಮಾಜಿಕ ಜವಾಬ್ಧಾರಿಗಳ ಕುರಿತ ಕಾಳಜಿಗಳನ್ನು ತೋರುತ್ತದೆ.
ಬೇರೆ ಉದ್ಯಮಗಳಿಗೆ ಹೋಲಿಸಿದಲ್ಲಿ ಟಾಟಾ ಸಂಸ್ಥೆ ಪ್ರಾರಂಭದಲ್ಲೇ ಕೆಲಸಗಾರರಿಗೆ ಅನೇಕ ಸೌಕರ್ಯಗಳನ್ನು ಕಲ್ಪಿಸಿತ್ತು. 1912ರಲ್ಲೆ ಟಾಟಾ ಸಂಸ್ಥೆ ತನ್ನ ಕಾರ್ಮಿಕರಿಗೆ 8 ಗಂಟೆ ಕೆಲಸದ ಅವಧಿಯನ್ನು ಅಳವಡಿಸಿತ್ತು. ಅಂದಿನ ದಿನಗಳಲ್ಲಿ ಯೂರೋಪ್ ನಲ್ಲೂ 12 ಗಂಟೆ ಕಾಲದ ಕೆಲಸದ ನಿಯಮವಿತ್ತು. 1920ರಲ್ಲೇ ತಮ್ಮ ಕರ್ಮಚಾರಿಗಳಿಗೆ ಸಂಬಳಯುಕ್ತ ರಜೆ, ಪ್ರಾವಿಡೆಂಟ್ ಫಂಡ್ ಮುಂತಾದ ಸೌಲಭ್ಯಗಳನ್ನು ನೀಡಿತ್ತು. ಇನ್ನಿತರ ಕಂಪೆನಿಗಳು ಇಂತಹ ಸೌಲಭ್ಯಗಳ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲದ ಕಾಲವದು. ಇಂಥಹ ನೀತಿಗಳಿಂದ ಟಾಟಾ ಸಂಸ್ಥೆ ನಮ್ಮದೇಶದ ಅತ್ಯಂತ ಭಾರಿ ಉದ್ಯಮಗಳನ್ನು ಪ್ರಪ್ರಥಮವಾಗಿ ಸ್ಥಾಪಿಸುವದರ ಜೊತೆಗೆ, ಅನೇಕ ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಕೂಡಾ ಜನತೆಗೆ ಕೊಟ್ಟು, ಭಾರತದ ಉದ್ಯಮವಲಯದಲ್ಲಿ ಮಂಚೂಣಿಯಲ್ಲಿ ಮುಂದುವರೆಯಲು ಸಹಾಯವಾಯಿತು.
ಜೆ.ಆರ್.ಡಿ. ಅವರು ಭಾರತಕ್ಕೆ ನೀಡಿರುವ ಮಹತ್ವದ ಕಾಣಿಕೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತಾದ ಶೈಕ್ಷಣಿಕ ಪದ್ಧತಿಗಳ ಅಭಿವೃದ್ಧಿ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಪ್ರೋತ್ಸಾಹಗಳು ಪ್ರಧಾನವಾದದ್ದು. ಅಂದಿನ ದಿನಗಳಲ್ಲಿ ಬೆಂಗಳೂರಿನ ಈಗಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಟಾಟಾ ಇನ್ಸ್ಟಿಟ್ಯೂಟ್ ಎಂದೇ ಕರೆಯಲ್ಪಡುತ್ತಿತ್ತು. ಜೆ ಆರ್ ಡಿ ಅವರು 1932ರಲ್ಲಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಪ್ರಾರಂಭಿಸಿ ಐವತ್ತು ವರ್ಷಗಳ ಕಾಲ ಅದರ ಸೂತ್ರಧಾರಿಯಾಗಿದ್ದರು. 1941ರ ವರ್ಷದಲ್ಲಿ ಈ ಟ್ರಸ್ಟ್ ಏಷ್ಯಾ ಖಂಡದಲ್ಲೇ ಪ್ರಪ್ರಥಮವಾದ ‘ಟಾಟಾ ಮೆಮೋರಿಯಲ್ ಸೆಂಟರ್ ಫಾರ್ ಕ್ಯಾನ್ಸರ್, ರಿಸರ್ಚ್ ಅಂಡ್ ಟ್ರೀಟ್ ಮೆಂಟ್' ಸಂಸ್ಥೆಯನ್ನು ಸ್ಥಾಪಿಸಿತು. 1936ರಲ್ಲಿ 'ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್' ಸ್ಥಾಪಿತವಾಯಿತು. 1945ರ ವರ್ಷದಲ್ಲಿ ‘ದಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್’ ಮತ್ತು 'ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥೆಗಳನ್ನು ಹುಟ್ಟುಹಾಕಿತು.
ಜೆ ಆರ್ ಡಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದವು. 1993ರ ವರ್ಷದಲ್ಲಿ ಜಿನಿವಾ ನಗರಕ್ಕೆ ಹವಾ ಬದಲಾವಣೆಗೆಂದು ತೆರಳಿದ್ದ ಜೆ ಆರ್ ಡಿ ಅವರು ಅಲ್ಲಿಯೇ ನವೆಂಬರ್ ತಿಂಗಳ 29ರಂದು ನಿಧನರಾದರು. ಬದುಕಿನಲ್ಲಿ ಅನಂತತೆಯ ಕೈಗಾರಿಕಾ ಸಾಗರವನ್ನು ಸೃಷ್ಟಿಸಿದ ಶಕಪುರುಷನೊಬ್ಬನನ್ನು ನಾಡು ಕಳೆದುಕೊಂಡಿತು. ಆದರೆ ಜೆ.ಆರ್.ಡಿ. ಬೆಳೆಸಿದ ಹಲವು ಅನರ್ಘ್ಯ ರತ್ನಗಳು ಇಂದೂ ಟಾಟಾ ಸಂಸ್ಥೆಯನ್ನು ಮುಂಚೂಣಿಯಲ್ಲಿರಿಸಿದ್ದು ಜೆ.ಆರ್.ಡಿ. ಪರಂಪರೆಯನ್ನು ಯಶಸ್ವಿಯಾಗಿ ಮುಂದುವರೆಸಿವೆ. ಸೂಕ್ತವಾದ ವ್ಯಕ್ತಿಯೊಬ್ಬ ಬಿತ್ತಿದ ಬೀಜ ಎಂದೂ ವ್ಯರ್ಥವಾಗದು. ಈ ಮಹಾಪುರುಷನ ಹುಟ್ಟುಹಬ್ಬದಂದು ಇಂತಹ ಮಹಾಪುರುಷರು ನಿರಂತರ ಉದಯಿಸಿ ನಮ್ಮ ಈ ಲೋಕವನ್ನು ಸದಭಿರುಚಿ, ಸುವ್ಯವಸ್ಥೆಗಳಿಂದ ಮುನ್ನಡೆಸಲಿ ಎಂದು ಹಾರೈಸೋಣ.
On the birth anniversary of great industrialist Bharat Ratna JRD Tata
ಕಾಮೆಂಟ್‌ಗಳು