ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೆಂಕಟಸುಬ್ರಹ್ಮಣ್ಯಂ ಅಯ್ಯರ್


ವೆಂಕಟಸುಬ್ರಹ್ಮಣ್ಯಂ ಅಯ್ಯರ್ 


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತವನ್ನು ಪ್ರಸಿದ್ಧಗೊಳಿಸಿದವರಲ್ಲಿ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಪ್ರಮುಖರು.

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಕೇರಳದ ಪಾಲ್ಘಾಟಿನಲ್ಲಿ 1921ರ ಜುಲೈ 21ರಂದು ಜನಿಸಿದರು. ಮುಂದೆ ಅವರು ಬೆಳೆದದ್ದು ಪುತ್ತೂರು ತಾಲ್ಲೂಕಿನ ಕಾಂಚನ ಗ್ರಾಮದಲ್ಲಿ. ತಂದೆ ವೆಂಕಟರಮಣ ಅಯ್ಯರ್ ಅವರು ಮತ್ತು ತಾಯಿ ಆನಂದಲಕ್ಷ್ಮೀ ಅವರು.  ಇವರದ್ದು ಸಂಗೀತಗಾರರ ಮನೆತನ, ತಾಯಿಯೇ ಮೊದಲ ಗುರು.

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು ಸಂಗೀತದ ಉನ್ನತ ಶಿಕ್ಷಣವನ್ನು ಚೆಂಬೈ ವೈದ್ಯನಾಥ ಭಾಗವತರ್, ಜಿ.ಎನ್‌. ಬಾಲಸುಬ್ರಹ್ಮಣ್ಯಂ, ಸಿ.ಎನ್‌. ಶಾಸ್ತ್ರಿ ಮುಂತಾದವರ ಬಳಿ ಗಳಿಸಿದರು.  ಮಂಗಳೂರಿನ ಕಾಂಚನ ಮನೆಯಲ್ಲಿ ಸಂಗೀತ ದಿಗ್ಗಜರಾದ ಎನ್‌.ವಿ. ಮೂರ್ತಿ, ಶೇಷಾಮಣಿ, ಗೋಪಿನಾಥ, ಚೆಂಬೈ, ಟಿ. ಚೌಡಯ್ಯ, ಸಿ.ಆರ್. ಮಣಿ, ಮುಂತಾದವರ ಸಮಾವೇಶ ಆಗಾಗ್ಗೆ ನಡೆಯುತ್ತಿತ್ತು.  ಸದಾ ಗಾಯನ ಸಂಗೀತದ ಬಗ್ಗೆ ಚರ್ಚೆ ಇರುತ್ತಿತ್ತು.  

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು ಕೊಲ್ಲೂರಿನ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮೊದಲ ಗಾಯನ ಕಚೇರಿ ನೀಡಿದರು. ಗುರುಗಳಾದ ಚೆಂಬೈರವರಿಂದ  ಪ್ರಶಂಸೆಯ ಆಶೀರ್ವಾದ ದೊರೆಯಿತು. ಇವರ ಕಚೇರಿಗಳಿಗೆ ವಿದ್ವಾನ್‌ ಟಿ. ಚೌಡಯ್ಯನವರು ಹಲವಾರು ಬಾರಿ ಪಿಟೀಲುವಾದನದ ಸಹಕಾರ ನೀಡಿದ್ದರು. 

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು ಕಾಂಚನದಲ್ಲಿ ಗುರುಕುಲ ಪದ್ಧತಿಯ ಸಂಗೀತಶಾಲೆ ಆರಂಭಿಸಿದರು. ಇವರೊಡನೆ ಜೊತೆಗೂಡಿದವರು ಸೋದರಮಾವ ಮೃದಂಗ ವಿದ್ವಾನ್ ಕೆ.ಇ. ಕೃಷ್ಣ ಅಯ್ಯರ್. ವೆಂಕಟಸುಬ್ರಹ್ಮಣ್ಯಂ ಅಯ್ಯರ್  ಅವರು 1953ರಲ್ಲಿ ಯಕ್ಷಗಾನ ಕಲಾಕೇಂದ್ರ ಸ್ಥಾಪಿಸಿದರು. 1959ರಲ್ಲಿ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಆರಂಭಿಸಿ ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜ – ಪುರಂದರ ಆರಾಧನೆ, ಶ್ಯಾಮಶಾಸ್ತ್ರಿ ಜನ್ಮದಿನೋತ್ಸವಗಳಲ್ಲಿ ಹಿರಿಕಿರಿಯ ಗಾಯಕರನ್ನು ಆಹ್ವಾನಿಸಿ ಸಂಗೀತ ಕಚೇರಿಗಳನ್ನು ಏರ್ಪಡಿಸುತ್ತಿದ್ದರು. 1966ರಲ್ಲಿ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಈ ಶಾಲೆಯಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ದೊರಕಿತು. ಪ್ರಾಥಮಿಕ, ಪ್ರೌಢಶಾಲೆಗಳನ್ನೂ  ಆರಂಭಿಸಿದರು. ದೈವಭಕ್ತರಾಗಿದ್ದು ಹಲವಾರು ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ಮಾಡಿದರು.

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರಿಗೆ ಅನೇಕ ಗೌರವಗಳು ಸಂದಿದ್ದವು. ಅವರು 1982ರ ಜನವರಿ 21ರಂದು ನಿಧನರಾದರು.  ಇವರ ಪುತ್ರ ಕಾಂಚನ ವಿ ಸುಬ್ಬರತ್ನಂ ಕರ್ನಾಟಕ ಕಲಾಶ್ರೀ ಪುರಸ್ಕೃತರು.  ಮೊಮ್ಮಕ್ಕಳಾದ ಕಾಂಚನ ಎಸ್. ಶ್ರೀರಂಜನಿ ಮತ್ತು ಕಾಂಚನ ಎಸ್. ಶ್ರುತಿರಂಜನಿ ಅವರು ಕಾಂಚನ ರಂಜನಿ ಸಹೋದರಿಯರೆಂದು ಸಂಗೀತ ಲೋಕದಲ್ಲಿ ಪ್ರಸಿದ್ಧರು.

On the birth anniversary of Venkata Subrahmaniayam Iyer 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ