ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೀನಾಕುಮಾರಿ



ಮೀನಾಕುಮಾರಿ


ಭಾರತೀಯ ಚಿತ್ರರಂಗದಲ್ಲಿ ಮೀನಾಕುಮಾರಿ ಅವರ ಹೆಸರು ಅಜರಾಮರವಾದದ್ದು.  ಪರಿಣೀತಾ, ಬೈಜು ಭಾವ್ರಾ, ಚಾರ ದಿಲ್ ಚಾರ ರಹೇನ್, ಸಾಹೀಬ್ ಬೀಬಿ ಔರ್ ಗುಲಾಮ್,  ಫಾಕೀಜಾ ಮುಂತಾದ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಮೀನಾಕುಮಾರಿ ಅಮರರಾಗಿದ್ದಾರೆ. 

ಪರ್ಷಿಯಾದ ಆಲಿ ಭಕ್ಷ್ ಹಾಗೂ ರಂಗಭೂಮಿ ಕಲಾವಿದೆ ಇಕ್ಬಾಲ್ ಬೇಗಂ ದಂಪತಿಗಳ ಮೂರನೇ ಮಗಳಾಗಿ ಹುಟ್ಟಿದವರು ಮೀನಾಕುಮಾರಿ.  ಅವರು ಹುಟ್ಟಿದ್ದು 1932ರ ಆಗಸ್ಟ್ 1ರಂದು. ಮೀನಾಕುಮಾರಿ ಎಂಬುದು ಅವರ ತಂದೆ ತಾಯಿಗಳು ಇಟ್ಟ ಹೆಸರಲ್ಲ. ಮುಹಾಜಾಬೀನ್ ಬಾನು ಎಂಬ ಈ ಹುಡುಗಿಯ ಹೆಸರನ್ನು ಚಿತ್ರರಂಗ ತನ್ನ ಅವಶ್ಯಕತೆಗಳಿಗೆ ಬದಲಿಸಿಕೊಂಡಿತು. 

ಈ ಚಿತ್ರರಂಗವೆಂಬ ಇತಿಹಾಸದಲ್ಲಿ ಬಹಳಷ್ಟು ಜನ ತಮ್ಮ ಬದುಕಿನ ಅವಶ್ಯಕತೆಗಳಿಗಾಗಿ ಇಲ್ಲಿಗೆ ಅರಸಿಬಂದಿದ್ದಾರೆ.  ಭೀಕರ ಬಡತನದಲ್ಲಿದ್ದ ಕುಟುಂಬದ ಈ ಹುಡುಗಿ ಹುಟ್ಟಿದಾಗ ಅವರ ತಂದೆ ತಾಯಿಯ ಬಳಿ ವೈದ್ಯ ಶುಶ್ರೂಷೆ, ಮಗುವಿನ ಪಾಲನೆಗಳಿಗೂ  ಹಣವಿರಲಿಲ್ಲವಂತೆ.  ಅಪ್ಪ ಆಲಿ ಭಕ್ಷ್ ಹೊಟ್ಟೆ ಪಾಡಿಗಾಗಿ ಸ್ಟುಡಿಯೋಗಳಿಗೆ ಅಲೆದಾಡುತ್ತಿದ್ದ.  ತನ್ನ ಮಗಳಿಗೆ ಕೂಡಾ ಶಾಲೆಗೆ ಹೋಗಬೇಕು, ಎಲ್ಲ ಮಕ್ಕಳಂತೆ ಆಡಬೇಕು ಎಂದು ಹುದುಗಿದ್ದ  ಆಶಯವನ್ನು ಈತ ತನ್ನ ಕಷ್ಟಗಳ ಮಸುಕಿನಲ್ಲಿ ಕಾಣದಾದ.   ಏಳನೆಯ ವಯಸ್ಸಿನಲ್ಲೇ ಈ ಹುಡುಗಿ ತನ್ನಂತೆಯೇ ಸ್ಟುಡಿಯೋಗಳಲ್ಲಿ ಅವಕಾಶಗಳಿಗಾಗಿ ಅಲೆಯುವುದನ್ನು ವಿಧಿಸಿಬಿಟ್ಟ.  ತನ್ನ ಆಶಯಗಳನ್ನೆಲ್ಲಾ ತನ್ನೊಡಲಿನಲ್ಲಿ ಅಡಗಿಸಿಕೊಂಡ  ಏಳು ವಯಸ್ಸಿನ ಪುಟ್ಟ ಬಾಲೆ ‘ಬೇಬಿ ಮೀನಾಕುಮಾರಿ’ಯಾಗಿ  ‘ಫರ್ಜ್ ಹಿ ವತನ್’ ಚಿತ್ರಕ್ಕೆ ಬಣ್ಣ ಹಚ್ಚಿದಳು.

1949ರ ವೀರ ಘಟೋತ್ಕಚ, 1950ರ ವರ್ಷದ ಶ್ರೀ ಗಣೇಶ್ ಮಹಿಮಾ, 1952ರ ವರ್ಷದ ಅಲ್ಲಾವುದ್ಧೀನ್ ಅದ್ಭುತ ದೀಪ ಮುಂತಾದವು ಮೀನಾಕುಮಾರಿಯವರ ಪ್ರೌಢ ವಯಸ್ಸಿನ ಪ್ರಾರಂಭದಲ್ಲಿನ ಕೆಲವು ಚಿತ್ರಗಳು.  1952ರ ವರ್ಷದಲ್ಲಿ ಮೂಡಿಬಂದ ಪ್ರಸಿದ್ಧ ಚಿತ್ರ ‘ಬೈಜುಭಾವ್ರ’ ಮೀನಾಕುಮಾರಿ ಅವರಿಗೆ ಪ್ರಶಸ್ತಿ, ಪ್ರಸಿದ್ಧಿಗಳೆಲ್ಲವನ್ನೂ ತಂದುಕೊಟ್ಟಿತು. 

ಮುಂದೆ ಕಣ್ಣೀರು ಹರಿಸುವ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದ ಮೀನಾಕುಮಾರಿ ಅವರ ಅಭಿನಯ ‘ಪರಿಣೀತ’, ‘ದೇರಾ’, ‘ಏಕ್ ಹಿ ರಾಸ್ತಾ’, ‘ಶಾರದಾ’, ‘ದಿಲ್ ಅಪನಾ ಔರ್ ಪ್ರೀತ್ ಪರಾಹೀ’  ಚಿತ್ರಗಳಲ್ಲಿ ಎಲ್ಲೆಲ್ಲೂ ಜನಮೆಚ್ಚುಗೆ ಪಡೆದವು.  ‘ಅಝಾದ್', ‘ಮಿಸ್ ಮೇರಿ', ‘ಶರ್ತ್', ‘ಕೋಹಿನೂರ್' ಮುಂತಾದವು ಅವರ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದವು.

ಗುರುದತ್ ಅವರ ‘ಸಾಹೀಬ್ ಬೀಬಿ ಔರ್ ಗುಲಾಂ'(1962) ಚಿತ್ರದ  ಚೋಟಿ ಬಹು ಪಾತ್ರದಲ್ಲಿ ಮೀನಾ ಮದ್ಯವ್ಯಸನಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ ವ್ಯಾವಹಾರಿಕವಾಗಿಯೂ ಅಪಾರ ಯಶಸ್ಸು ಕಂಡಿತು.   ಈ ಪಾತ್ರಾಭಿನಯ  ಭಾರತೀಯ ಚಲನಚಿತ್ರರಂಗದ ಶ್ರೇಷ್ಠ ಅಭಿವ್ಯಕ್ತಿಗಳಲ್ಲೊಂದು ಎಂದು ಹೆಸರಾಗಿದೆ.  ಒಂದು ರೀತಿಯಲ್ಲಿ ಇದು ಮೀನಾಕುಮಾರಿ ಅವರ ಬದುಕಿನ ತದ್ರೂಪಿನಂತಿದೆ ಎಂಬ ಮಾತೂ ಇದೆ.

‘ಸಾಹೀಬ್ ಬೀಬಿ ಔರ್ ಗುಲಾಂ’  ಚಿತ್ರದ ಜನಪ್ರಿಯತೆಯಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಮೀನಾಕುಮಾರಿ  ಅವರ ಯಶಸ್ಸು ತುತ್ತತುದಿಯವರೆಗೆ ಏರಿತ್ತು.  ‘ದಿಲ್ ಏಕ್ ಮಂದಿರ್', ‘ಕಾಜಲ್', ‘ಪೂಲ್ ಔರ್ ಪತ್ತರ್'  ಮುಂತಾದ ಎಲ್ಲ ಚಿತ್ರಗಳಲ್ಲೂ,  ಶ್ರೇಷ್ಠ ಅಭಿನಯದ ಪ್ರಶಸ್ತಿಗೆ ಅವರ ಹೆಸರು ನಾಮಾಂಕಿತಗೊಂಡಿದ್ದವು.

1952ರಲ್ಲಿ ಮೀನಾ ಕುಮಾರಿ  ಖ್ಯಾತ ಬಾಲಿವುಡ್ ನಿರ್ದೇಶಕ, ವಿವಾಹಿತ ಕಮಲ್ ಅಮ್ರೋಹಿ ಅವರನ್ನು ಪ್ರೀತಿಸಿ ಮದುವೆಯಾದರು. ಮದುವೆ ನಂತರದಲ್ಲಿ  ಮೀನಾ ಕುಮಾರಿ   ಚಿತ್ರನಿರ್ಮಾಣ ಮಾಡಹೊರಟರು. ಮೊತ್ತ ಮೊದಲಿಗೆ ‘ದೀರಾ' ಚಿತ್ರವನ್ನು ನಿರ್ಮಾಣ ಮಾಡಿದರು.  ಅದು ಅವರಿಬ್ಬರ ಪ್ರೇಮಕಥೆಯಾಗಿತ್ತು. ನಂತರ ಮತ್ತೊಂದು ಚಿತ್ರಕ್ಕೆ ಮುಹೂರ್ತ ನಡೆಯಿತು. ಅದುವೇ ‘ಫಾಕೀಜಾ'.   ಆದರೆ ಅದು ಪರದೆಗೆ ಬರಲು ಮುಂದಿನ 14 ವರ್ಷಗಳನ್ನು ತೆಗೆದುಕೊಂಡಿತು.

ಮೀನಾಕುಮಾರಿ ಅವರ ಪ್ರೇಮದ ಬದುಕಿನಲ್ಲಿ ಉಂಟಾದ ಸೋಲು 1964ರ ವರ್ಷದಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತ್ತು.   ಚಿತ್ರರಂಗದ ಗಲ್ಲಾಪೆಟ್ಟಿಗೆಯಲ್ಲಿನ  ಸೋಲೂ ಅವರನ್ನು ಹಿಂಬಾಲಿಸಿತ್ತು.   ಇಂತಹ ಕ್ಷಣಗಳಲ್ಲಿ, ಮೀನಾಕುಮಾರಿ ಕುಡಿತಕ್ಕೆ ಶರಣಾದರಂತೆ.  ಅನಾರೋಗ್ಯಕ್ಕೀಡಾದ ಅವರನ್ನು ದೇಶ ವಿದೇಶದ ಚಿಕಿತ್ಸೆಗಳು ಗುಣಪಡಿಸಲು ವಿಫಲವಾದವು. 

1972ರಲ್ಲಿ ‘ಫಾಕೀಜಾ' ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದಾಗ ಕುಂಟುತ್ತಿತ್ತಂತೆ.  31 ಮಾರ್ಚ್ 1972ರ ದಿನ ಮೀನಾ ಕುಮಾರಿ ತಮ್ಮ ನಲವತ್ತರ ಹರಯದಲ್ಲಿ ಎಲ್ಲವನ್ನೂ  ಬಿಟ್ಟು ಹೋದರು.  ಇದಕ್ಕೇ ಕಾಯುತ್ತಿತ್ತೇನೋ ಎನ್ನುವಂತೆ,  ಗಳಿಕೆಯಲ್ಲಿ ಚೇತರಿಸಿದ ‘ಫಾಕೀಜಾ’ ಚಿತ್ರವು ಅದ್ಧೂರಿಯ ವ್ಯಾವಹಾರಿಕ  ಯಶಸ್ಸು ಮತ್ತು ಜನಪ್ರಿಯತೆಗಳನ್ನು ತನ್ನದಾಗಿಸಿಕೊಂಡಿತು. 

ಹುಟ್ಟುವ ಹೊತ್ತಿನಲ್ಲಿ ಜೊತೆಗೆ ತಂದಿದ್ದ ಬಡತನ ಮೀನಾಕುಮಾರಿಯವರನ್ನು  ಸಾವಿನ ಸಂದರ್ಭದಲ್ಲೂ ಜೊತೆಗೂಡಿತ್ತು.  ದುರಂತದ ಚಿತ್ರಗಳು ಯಶಸ್ವಿಯಾಗುವಷ್ಟು ದುರಂತದ ಬದುಕುಗಳು ಯಶಸ್ಸಿನ ಹಾದಿ ಹಿಡಿಯುವುದಿಲ್ಲ.  ಬಣ್ಣದ ಲೋಕವೆಂಬ ಚಿತ್ರರಂಗ, ತನ್ನ ಒಡಲಲ್ಲಿ ಅನೇಕ ದುರಂತಗಳನ್ನು ಅಡಗಿಸಿಕೊಂಡಿದೆ.  ಇವಕ್ಕೆಲ್ಲಾ ಪ್ರಾತಿನಿಧಿಕವೋ ಎಂಬಂತದ್ದು ಮೀನಾಕುಮಾರಿ ಅವರ ಬದುಕು. ಇದು ಶ್ರೇಷ್ಠ ಅಭಿವ್ಯಕ್ತಿ ಹೊರಹೊಮ್ಮಿಸಿ, ತನ್ನೊಳಗಿನಲ್ಲಿ ದುಃಖವನ್ನು ಗುಪ್ತಗಾಮಿನಿಯಾಗಿಸಿಕೊಂಡ  ಮಾನವ ಜೀವಿಯೊಬ್ಬರ ನಿಜ ಬದುಕಿನ ಯಾತ್ರೆ.

On the birth anniversary of great actress Meena Kumari 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ