ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗತಿಹಳ್ಳಿ ಚಂದ್ರಶೇಖರ್

ನಾಗತಿಹಳ್ಳಿ ಚಂದ್ರಶೇಖರ್


ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ನಾಡಿನ ಬಹುಮುಖಿ ಪ್ರತಿಭೆ.  ಸಾಂಸ್ಕೃತಿಕ ಲೋಕದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಬರವಣಿಗೆ ಪ್ರಪಂಚದಲ್ಲಿ, ಪತ್ರಿಕಾ ಅಂಕಣಗಳಲ್ಲಿ, ಸಿನಿಮಾ,  ಕಿರುತೆರೆ  ಹೀಗೆ ಅವರು ಸರ್ವವ್ಯಾಪಿಯಾಗಿ ವಿವಿಧ ಸಾಂಸ್ಕೃತಿಕ ನೆಲೆಗಳಲ್ಲಿ ಸಕ್ರಿಯರಾಗಿ ಹೆಸರು ಮಾಡಿದವರು.  

ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ 1958ರ ಆಗಸ್ಟ್ 15ರಂದು  ಚಂದ್ರಶೇಖರ್ ಜನಿಸಿದರು.   ತಂದೆ ತಿಮ್ಮಶೆಟ್ಟಿ ಗೌಡ. ತಾಯಿ ಪಾರ್ವತಮ್ಮ.  ಪ್ರಾರಂಭಿಕ ಶಿಕ್ಷಣವನ್ನು ನಾಗತಿಹಳ್ಳಿಯಲ್ಲಿ ಪಡೆದು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿದರು.  ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ'ಯನ್ನು ಆರಂಭಿಸುವುದರ ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ 'ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ  ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು.  ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ  ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಕನ್ನಡ ಪ್ರಾಧ್ಯಾಪಕರಾಗಿ  ನಾಗತಿಹಳ್ಳಿ ಚಂದ್ರಶೇಖರ್ ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು.  ಇನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು  ‘ಆವರ್ತ’ ಎಂಬ ಕಥೆ ಬರೆದರು.  ಇದುವರೆಗೆ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ 20ಕ್ಕೂ ಹೆಚ್ಚು ಕೃತಿಗಳು ಬೆಳಕು ಕಂಡಿವೆ.  ‘ಹಾಡುಗಳು’, ‘ನನ್ನ ಪ್ರೀತಿಯ ಹುಡುಗನಿಗೆ’, ‘ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ‘ಸನ್ನಿಧಿ’, ‘ಪ್ರೇಮ ಕಥಾ ಸಂಪುಟ’, ‘ಅಕಾಲ’, ‘ಛಿದ್ರ’ ನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನಗಳು.  ‘ಬಾ ನಲ್ಲೆ  ಮಧುಚಂದ್ರಕೆ’, ‘ಚುಕ್ಕಿ ಚಂದ್ರಮರ ನಾಡಿನಲ್ಲಿ’, ‘ವಲಸೆ ಹಕ್ಕಿಯ ಹಾಡು’ ಅವರ ಕಾದಂಬರಿಗಳು.  ‘ಆಯನ’, ‘ಅಮೆರಿಕ! ಅಮೇರಿಕಾ!!’, ‘ದಕ್ಷಿಣ ಧ್ರುವದಿಂ’, ‘ಹೊಳೆದಂಡೆ’ ಮುಂತಾದವು ಅವರ ಪ್ರವಾಸ ಕಥನಗಳು’.  ‘ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದಿರುವ ಅವರ ಆತ್ಮಕಥೆಯಾಗಿದೆ.  ‘ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ.  ಹೀಗೆ ಕಥೆ ಹೇಳುವುದರಲ್ಲಿ ಪ್ರೀತಿಯುಳ್ಳ ನಾಗತಿಹಳ್ಳಿ ಚಂದ್ರಶೇಖರರಿಗೆ ಕಥೆ ಹೇಳುವ ದೃಶ್ಯ ಮಾಧ್ಯಮದ ಕಡೆಯೂ ಒಲವು ಹರಿದು ಬಂತು.   

ಇಂದು ಕನ್ನಡ ಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಚಿತ್ರಗಳು ವಿಶಿಷ್ಟ ಸ್ಥಾನ ಪಡೆದಿವೆ.  ಅವರ ‘ಮಾತಾಡ್ ಮಾತಾಡು ಮಲ್ಲಿಗೆ’ ಸಾಗರಗಳನ್ನು ದಾಟಿ ಕೇನ್ಸ್ ಅಂತಹ ಪ್ರತಿಷ್ಟಿತ ಉತ್ಸವಗಳಲ್ಲಿ ಪ್ರದರ್ಶನ ಕಂಡಿತು.  ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತ ರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾಯಕಗಳು ‘ಕಾಡಿನ ಬೆಂಕಿ’, ‘ಸಂಕ್ರಾಂತಿ’, ‘ಪ್ರಥಮ ಉಷಾ ಕಿರಣ’, ‘ಉದ್ಭವ’, ‘ಊರ್ವಶಿ’ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಮೆರುಗು ನೀಡಿತ್ತು.

1991ರಲ್ಲಿ ಮೂಡಿಬಂದ ‘ಉಂಡು ಹೋದ ಕೊಂಡು ಹೋದ’ ಚಿತ್ರದಿಂದ ಮೊದಲ್ಗೊಂಡಂತೆ, ‘ಬಾ ನಲ್ಲೆ ಮಧು ಚಂದ್ರಕೆ’, ‘ಕೊಟ್ರೇಶಿ ಕನಸು’, ‘ಅಮೆರಿಕ! ಅಮೇರಿಕಾ!!’, ‘ಹೂಮಳೆ’, ‘ನನ್ನ ಪ್ರೀತಿಯ ಹುಡುಗಿ’, ‘ಸೂಪರ್ ಸ್ಟಾರ್’, ‘ಪ್ಯಾರಿಸ್ ಪ್ರಣಯ’, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’, ‘ಒಲವೆ ಜೀವನ ಲೆಕ್ಕಾಚಾರ’, ‘ನೂರೂ ಜನ್ಮಕು’ , 'ಬ್ರೇಕಿಂಗ್ ನ್ಯೂಸ್', ಇಷ್ಟಕಾಮ್ಯ',  ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.  ಕಲಾತ್ಮಕ ಚಿತ್ರಗಳ ಚಿಂತನಾತ್ಮಕ ಗುಣ, ಸಾಮಾಜಿಕ ಚಿತ್ರಗಳ ಸ್ಪಂದನೆ, ಆಧುನಿಕ ಬದುಕಿನ ವೈವಿಧ್ಯಮಯ ವೈರುಧ್ಯ ಇವುಗಳ ಜೊತೆಗೆ ಹಿತಮಿತದ ಸಂಗೀತ, ದೃಶ್ಯ ವೈಭವ ಇವುಗಳನ್ನೆಲ್ಲ ನಾಗತಿಹಳ್ಳಿ ತಮ್ಮ ಸೃಜನಶೀಲ ಸ್ಪರ್ಶದಲ್ಲಿ ಬೆಳ್ಳಿತೆರೆಯಲ್ಲಿ ಅಭಿವ್ಯಕ್ತಿಸಿದ್ದಾರೆ.  ಅವರು ಕನ್ನಡ ಚಿತ್ರರಂಗದಲ್ಲಿನ ಹಲವಾರು ಪ್ರಶಸ್ತಿ, ಗಲ್ಲಾಪೆಟ್ಟಿಗೆಯ ಯಶಸ್ಸುಗಳು ಮತ್ತು ಸೋಲುಗಳನ್ನು ನಾಗತಿಹಳ್ಳಿ ಸಮಭಾವತ್ವದಲ್ಲಿ ಸ್ವೀಕರಿಸಿ ಮುನ್ನಡೆದವರು. ಕಿರುತೆರೆಯಲ್ಲಿ ಭಾಗ್ಯ, ಪ್ರತಿಬಿಂಬ, ಕಾವೇರಿ, ಅಪಾರ್ಟ್ ಮೆಂಟ್, ಪುಣ್ಯ, ಬೆಳ್ಳಿ ಚುಕ್ಕಿ, ಒಲವೆ ನಮ್ಮ ಬದುಕು, ವಟಾರ, ನಡೆ ನುಡಿ, ಇದೇ ಸತ್ಯ, ನಿತ್ಯೋತ್ಸವ ಮುಂತಾದ ಧಾರವಾಹಿಗಳನ್ನು ನಾಗತಿಹಳ್ಳಿ ಪ್ರಸ್ತತಪಡಿಸಿದ್ದಾರೆ.  ಇಂದು ಕನ್ನಡ ಚಿತ್ರರಂಗದಲ್ಲಿ   ಪ್ರಸಿದ್ಧ ಚಿತ್ರಸಂಗೀತ ನಿರ್ದೆಶಕರಾಗಿರುವ ಮನೋಮೂರ್ತಿ ಅವರನ್ನು ಅಮೇರಿಕದ ಸಾಫ್ಟ್ವೇರ್ ಕ್ಷೇತ್ರದಿಂದ ಕನ್ನಡ ಚಿತ್ರ ಸಂಗೀತಕ್ಕೆ ಕರೆತಂದ ಕೀರ್ತಿ ಕೂಡಾ ನಾಗತಿ ಹಳ್ಳಿ ಚಂದ್ರಶೇಖರ್ ಅವರದ್ದು.

ನಾಗತಿಹಳ್ಳಿ ಅವರು ಚಿತ್ರಕಥೆ ರಚಿಸಿದ ಕಾಡಿನ ಬೆಂಕಿ ರಾಷ್ಟ್ರಪ್ರಶಸ್ತಿ ಗಳಿಸಿತು. ಕೊಟ್ರೇಶಿ ಕನಸು, ಹೂಮಳೆ ಮತ್ತು ಅಮೆರಿಕ ಅಮೆರಿಕ ಚಿತ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ  ಪ್ರದೇಶಿಕ ಚಿತ್ರಗಳಾಗಿ ಪ್ರಶಸ್ತಿ ಗಳಿಸಿದವು. ಸಂಕ್ರಾಂತಿ, ಉಂಡುಹೋದ ಕೊಂಡು ಹೋದ, ಕೊಟ್ರೇಶಿ ಕನಸು, ಅಮೆರಿಕ ಅಮೆರಿಕ , ಹೂಮಳೆ, ಪ್ಯಾರಿಸ್ ಪ್ರಣಯ, ಅಮೃತಧಾರೆ, ಮಾತಾಡು ಮಾತಾಡು ಮಲ್ಲಿಗೆ ಚಿತ್ರಗಳಿಗೆ ಹಲವು ರಾಜ್ಯಪ್ರಶಸ್ತಿ ಮತ್ತು ಪುಟ್ಟಣ ಕಣಗಾಲ್ ಹೆಸರಿನಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗಳು ಅವರಿಗೆ ಸಂದಿವೆ. 

ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಪತ್ನಿ ಶೋಭಾ ಅವರೊಂದಿಗೆ ಟೆಂಟ್ ಸಿನಿಮಾ ಎಂಬ ಸಿನಿಮಾ ಶಾಲೆ ನಡೆಸುತ್ತಿದ್ದು ಅನೇಕ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ.

ಈ ಅಪಾರ ಸಾಧನೆಯ ವಿದ್ವತ್ಪೂರ್ಣ ಸೃಜನಶೀಲ ನಾಗತಿಹಳ್ಳಿ ಚಂದ್ರಶೇಖರರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದಾಗಿದೆ.  ಈ ಮಹಾನ್ ಪ್ರತಿಭೆಯನ್ನು ಕನ್ನಡಚಿತ್ರರಂಗ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತಾಗಲಿ.  ನಾಗತಿಹಳ್ಳಿ ಅವರಿಂದ ಅನೇಕ ಮಹತ್ವದ ಸಾಹಿತ್ಯಕ, ಕಲಾತ್ಮಕ, ಸದಭಿರುಚಿಯ ಮನರಂಜನಾತ್ಮಕ ಅಭಿವ್ಯಕ್ತಿಗಳು ನಿರಂತರವಾಗಿ ಹರಿದು ಬರುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

On the birth day of multifaceted talent in literature, cinema and television Nagatihalli Chandrashekhar...

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ