ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿ ದಯಾನಂದ ಸರಸ್ವತಿ


ಸ್ವಾಮಿ ದಯಾನಂದ ಸರಸ್ವತಿ 

ಸ್ವಾಮಿ ದಯಾನಂದ ಸರಸ್ವತಿ ಅವರು ವೇದಾಂತದ ವಿಶಿಷ್ಟ, ಸಾಂಪ್ರದಾಯಿಕ ಶಿಕ್ಷಕರಾಗಿದ್ದರು. ಅವರಿಗಿದ್ದ ಆಳವಾದ ತಿಳುವಳಿಕೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಕುರಿತಾಗಿಯೂ ಇದ್ದ ಸೂಕ್ಷ್ಮ ತಿಳುವಳಿಕೆ ಅವರನ್ನು ಕೇಳುಗರಿಗೆ ಇಷ್ಟವಾಗುವಂತಹ ಅಪರೂಪದ ಶಿಕ್ಷಕರನ್ನಾಗಿ ಮಾಡಿತು.

ಸ್ವಾಮಿ ದಯಾನಂದ ಸರಸ್ವತಿ ಅವರು 1930ರ ಆಗಸ್ಟ್ 15ರಂದು ತಮಿಳಿನಾಡಿನ ತಿರುವಾರೂರ್ ಜಿಲ್ಲೆಯ ಮಂಜಕ್ಕುಡಿ ಎಂಬಲ್ಲಿ ಜನಿಸಿದರು. ಅವರ ಅಂದಿನ ಹೆಸರು ನಟರಾಜನ್.  ತಂದೆ ಗೋಪಾಲ ಅಯ್ಯರ್.  ತಾಯಿ ವಾಲಂಬಾಳ್.  ಚಿಕ್ಕವಯಸ್ಸಿನಲ್ಲೇ ತಂದೆ ನಿಧನರಾಗಿ ಕುಟುಂಬಕ್ಕಾಗಿ ದುಡಿಯತೊಡಗಿದರು. 17ನೇ ವರ್ಷಕ್ಕೆ ಓದು ಮುಗಿಸಿ ಬದುಕನ್ನರಸಿ ಚೆನ್ನೈಗೆ ಬಂದು ಇಂಗ್ಲಿಷ್ ಕಲಿತು ಪತ್ರಕರ್ತರಾದರು.  ಕೆಲಕಾಲ ಬೆಂಗಳೂರಿನಲ್ಲಿ ವಾಯುಸೇನೆಯಲ್ಲಿದ್ದರು.  ಸ್ವತಂತ್ರ ಪ್ರವೃತ್ತಿಯಿದ್ದ ಇವರಿಗೆ ಅದು ರುಚಿಸದೆ ಪುನಃ ಪತ್ರಿಕೆಗೆ ಬಂದರು.

ಸ್ವಾಮಿ ದಯಾನಂದ ಸರಸ್ವತಿ ಅವರು ಸ್ವಾಮಿ ಚಿನ್ಮಯಾನಂದರ ಪ್ರಭಾವಕ್ಕೊಳಗಾದರು.  ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಪಿ. ಎಸ್. ಸುಬ್ರಮಣ್ಯ ಅಯ್ಯರ್ ಅವರಿಂದ ಸಂಸ್ಕೃತ ಕಲಿತರು. ಬಹಳ ಕಾಲ ಸ್ವಾಮಿ ಚಿನ್ಮಯಾನಂದರ ಜೊತೆ ಇದ್ದರು.  1961ರಲ್ಲಿ ಸ್ವಾಮಿ ಪವನಾನಂದರ ಬಳಿ ವೇದಾಂತದ ಅಧ್ಯಯನಕ್ಕೆ ಬಂದರು.  1962ರಲ್ಲಿ ಸನ್ಯಾಸ ಸ್ವೀಕರಿಸಿದರು. ವ್ಯಾಪಕ ಅಧ್ಯಯನ ಕೈಗೊಂಡರು.  ವೇದಾಂತ ಉಪನಿಷತ್ತುಗಳ ಉಪನ್ಯಾಸ ನೀಡಿದರು. 

ಸ್ವಾಮಿ ದಯಾನಂದರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಹಾಗೂ 1976 ರಿಂದ ಪ್ರಪಂಚದಾದ್ಯಂತ ವೇದಾಂತವನ್ನು ಕಲಿಸಿದರು. ಅವರು ಅಮೆರಿಕದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ,  ಅಂತರರಾಷ್ಟ್ರೀಯ ಸಮಾವೇಶಗಳಲ್ಲಿ, ಯುನೆಸ್ಕೋ ಮತ್ತು ವಿಶ್ವಸಂಸ್ಥೆಯಲ್ಲಿ ಮಾತನಾಡಿದರು. ಮಿಲೇನಿಯಮ್ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಿದರು. ಸ್ವಾಮಿ ದಯಾನಂದರ ಮಾರ್ಗದರ್ಶನದಲ್ಲಿ, ಪ್ರಪಂಚದಾದ್ಯಂತ ವೈದಿಕ ಬೋಧನೆಗಾಗಿ ಹಲವಾರು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಭಾರತದಲ್ಲಿರುವ ಮೂರು ಪ್ರಮುಖ ಕೇಂದ್ರಗಳೆಂದರೆ ಋಷಿಕೇಶದಲ್ಲಿರುವ ಆರ್ಷ ವಿದ್ಯಾ ಪೀಠ, ಕೊಯಮತ್ತೂರಿನ ಆರ್ಷ ವಿದ್ಯಾ ಗುರುಕುಲಂ ಮತ್ತು ನಾಗಪುರದ ಆರ್ಷ ವಿಜ್ಞಾನ ಗುರುಕುಲಂ. ಅಮೆರಿಕದ ಪೆನ್ಸಿಲ್ವೇನಿಯಾದ ಸೇಲರ್ಸ್‌ಬರ್ಗ್‌ನಲ್ಲಿರುವ ಆರ್ಷ ವಿದ್ಯಾ ಗುರುಕುಲಂ ಮುಖ್ಯ ಕೇಂದ್ರವಾಗಿದೆ. ಪ್ರಸ್ತುತ, ಭಾರತ ಮತ್ತು ವಿದೇಶಗಳಲ್ಲಿ ಕನಿಷ್ಠ ಅರವತ್ತು ಕೇಂದ್ರಗಳಿವೆ, ಅದು ವೇದಾಂತ ಬೋಧನೆಯ ಸಂಪ್ರದಾಯವನ್ನು ಹೊಂದಿದೆ.

ಬೋಧನೆಯ ಜೊತೆಗೆ, ಸ್ವಾಮಿ ದಯಾನಂದ ಅವರು ವಿವಿಧ ಲೋಕೋಪಕಾರಿ ಪ್ರಯತ್ನಗಳನ್ನು ಪ್ರಾರಂಭಿಸಿದರು ಮತ್ತು ಬೆಂಬಲಿಸಿದರು. ಸೇವೆಗಾಗಿಯೇ ಮೂಡಿದ ಅಖಿಲ ಭಾರತ ಸಂಘಟನೆಯು (AIM), ನವೆಂಬರ್ 2000 ರಲ್ಲಿ ಉದ್ಘಾಟನೆಯಾಯಿತು.  ಇದು ಭಾರತದ ಹಿಂದುಳಿದ ಪ್ರದೇಶಗಳಲ್ಲಿನ ಹಳ್ಳಿಗರಿಗೆ ವೈದ್ಯಕೀಯ, ಶೈಕ್ಷಣಿಕ, ಪೌಷ್ಟಿಕಾಂಶ ಮತ್ತು ಮೂಲಸೌಕರ್ಯ ಸಹಾಯವನ್ನು ಒದಗಿಸುತ್ತಿದೆ.

ಸ್ವಾಮಿ ದಯಾನಂದ ಸರಸ್ವತಿ ಅವರು 2015ರ ಸೆಪ್ಟೆಂಬರ್ 23ರಂದು ನಿಧನರಾದರು.

On Rememberance Day of Swami Dayananda Saraswathi of Arsha Vidhya fame 🌷🌷🌷





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ