ವಿ. ದೇಶಿಕಾಚಾರ್
ವಿ. ದೇಶಿಕಾಚಾರ್
ವಿ. ದೇಶಿಕಾಚಾರ್ ವೇಣುವಾದನದಲ್ಲಿ ಪ್ರಖ್ಯಾತರಾಗಿದ್ದವರು. ಇವರು ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಸಹೋದರ.
ದೇಶಿಕಾಚಾರ್ ಹಾಸನ ಜಿಲ್ಲೆಯ ದೊಡ್ಡಗದ್ದುವಳ್ಳಿ ಗ್ರಾಮದಲ್ಲಿ 1924ರ ಆಗಸ್ಟ್ 29ರಂದು ಜನಿಸಿದರು. ಅವರ ತಂದೆ ಎಂ. ವೆಂಕಟೇಶ ಅಯ್ಯಂಗಾರ್ಯರು ವೀಣೆ ಮತ್ತು ಕೊಳಲು ವಾದನಗಳೆರಡರಲ್ಲೂ ಪಾಂಡಿತ್ಯ ಪಡೆದವರಾಗಿದ್ದು ಮೈಸೂರು ಮಹಾರಾಜರ ಸಾಮ್ರಾಜ್ಯದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು. ತಾಯಿ ಸಂಗೀತ ಪ್ರೇಮಿ ಶ್ರೀರಂಗಮ್ಮ. ಅಣ್ಣ ವೈಣಿಕ ವಿದ್ವಾಂಸರಾಗಿ ಜಗತ್ಪ್ರಸಿದ್ಧರಾದ ವೀಣಾ ದೊರೆಸ್ವಾಮಿ ಅಯ್ಯಂಗಾರ್.
ಸಂಗೀತಗಾರರ ಮನೆತನದಲ್ಲಿ ಬೆಳೆದದ್ದರಿಂದ ದೇಶಿಕಾಚಾರ್ಯರಿಗೆ ಸಂಗೀತಾಸಕ್ತಿ ಜನ್ಮಜಾತವಾಗಿತ್ತು. ದೇಶಿಕಾಚಾರ್ ಓದಿನಲ್ಲಿ ಬಿ.ಎಸ್‌ಸಿ. ಪದವೀಧರರಾಗಿದ್ದರು. ಅವರ ಕುಟುಂಬದ ವಲಯಗಳು ಹೇಳಿಕೆಯ ಪ್ರಕಾರ ದೇಶಿಕಾಚಾರ್ಯರು ಸ್ವಯಂ ತಾವೇ ಕೊಳಲಿನಲ್ಲಿ ನಾದವನ್ನು ಕಂಡುಕೊಂಡರಂತೆ. ತಂದೆ ವೆಂಕಟೇಶ ಅಯ್ಯಂಗಾರ್ಯರು ಮಗನ ಆಸಕ್ತಿಯನ್ನು ಕಂಡು ಹೆಚ್ಚು ಮಾರ್ಗದರ್ಶನ ಮಾಡಿದರು. ಮುಂದೆ ವೆಂಕಟಗಿರಿಯಪ್ಪನವರು ಇವರ ಸಂಗೀತ ಗುರುಗಳಾದರು.
ದೇಶಿಕಾಚಾರ್ 1943ರಿಂದ ಕಛೇರಿ ಜೀವನ ಆರಂಭಿಸಿದರು. ದೇಶಿಕಾಚಾರ್ ನಾಡಿನ ಹೆಸರಾಂತ ಸಭೆ ಸಂಸ್ಥೆಗಳಿಂದಲೂ, ಪ್ರತಿಷ್ಠಿತ ವೇದಿಕೆಗಳಿಂದಲೂ ಶ್ರೋತೃಗಳಿಗೆ ವೇಣುನಾದದ ಅಮೃತಪಾನ ಮಾಡಿಸಿದರು. ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ದೇಶಿಕಾಚಾರ್ಯರು ದೂರದರ್ಶನ ಹಾಗೂ ಆಕಾಶವಾಣಿಯಲ್ಲೂ ಹಲವಾರು ಕಾರ್ಯಕ್ರಮ ನೀಡಿದರು. ಅವರ ಕಾರ್ಯಕ್ರಮಗಳು ಆಕಾಶವಾಣಿ ರಾಷ್ಟ್ರೀಯ ಜಾಲದಲ್ಲಿ ಪ್ರಸಾರಗೊಳ್ಳುತ್ತಿದ್ದವು. ಅವರು ಹಲವಾರು ಅಂತರರಾಷ್ಟ್ರೀಯ ಸಂಗೀತ ಸಾಂಸ್ಕೃತಿಕ ಉತ್ಸವಗಳಲ್ಲಿಯೂ ಪಾಲ್ಗೊಂಡಿದ್ದರು.
ಚೆನ್ನೈ ಮ್ಯೂಸಿಕ್ ಅಕಾಡಮಿ ಪ್ರಶಸ್ತಿ, ಬೆಂಗಳೂರಿನ ಮ್ಯೂಸಿಕ್ ಅಕಾಡಮಿಯಿಂದ ಟಿ. ಚೌಡಯ್ಯ ಪ್ರಶಸ್ತಿ, ಮೈಸೂರಿನ ಸರಸ್ವತಿ ಗಾನ ಕಲಾ ಮಂದಿರದ ವೇಣು ಗಾನ ವಿದ್ಯಾವಾರಿಧಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ, ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮತ್ತು ಗಾನ ಕಲಾಭೂಷಣ ಮುಂತಾದ ಪ್ರಶಸ್ತಿಗಳು ದೇಶಿಕಾಚಾರ್ಯ ಅವರನ್ನರಸಿ ಬಂದಿದ್ದವು.
ಅನೇಕ ಶಿಷ್ಯರನ್ನು ತಯಾರುಮಾಡಿದ್ದ ವಿ. ದೇಶಿಕಾಚಾರ್ 2002 ವರ್ಷದಲ್ಲಿ ಈ ಲೋಕವನ್ನಗಲಿದರು. ವಿ. ದೇಶಿಕಾಚಾರ್ ಅಕಾಡೆಮಿಯ ವತಿಯಿಂದ ಪ್ರತಿವರ್ಷ ಅವರ ಸ್ಮರಣೆಯಲ್ಲಿ ಸಂಗೀತೋತ್ಸವಗಳನ್ನು ನಡೆಸಲಾಗುತ್ತಿದೆ.
On the birth anniversary of flutist V. Deshikachar
ಕಾಮೆಂಟ್‌ಗಳು