ಶ್ರೀದೇವಿ
ಶ್ರೀದೇವಿ
ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲೊಬ್ಬರು.
ಶ್ರೀದೇವಿ 1963ರ ಆಗಸ್ಟ್ 13ರಂದು ಜನಿಸಿದರು. ಶ್ರೀದೇವಿ ಇನ್ನೂ ನಾಲ್ಕು ವರ್ಷವಿದ್ದಾಗಲೇ ಚಿತ್ರರಂಗದಲ್ಲಿ ಬಾಲನಟಿಯಾಗಿ ಹೊರಹೊಮ್ಮಿದ್ದರು. 1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದೀ ಚಲನಚಿತ್ರ ‘ಜೂಲಿ’ಯಲ್ಲಿಯೂ ಅವರು ಬಾಲನಟಿಯಾಗಿ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕ ಶ್ರೀನಾಥರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ ಚಿತ್ರದಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದರು.
ಮುಂದೆ ಶ್ರೀದೇವಿ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಖ್ಯಾತ ಚಿತ್ರಗಳಾದ ಮೂಂಡ್ರು ಮುಡಿಚ್ಚು, ಪದಿನಾರು ವಯದಿನಿಲೆ, ಸಿಗಪ್ಪು ರೋಜಾಕ್ಕಳ್, ಮೀನ್ಡುಂ ಕೋಕಿಲಾ, ಮೂನ್ರಾಂ ಪಿರೈ, ವರುಮಯಿನ್ ನಿರಂ ಸಿವಪ್ಪು, ಪ್ರೇಮಾಭಿಷೇಕಂ, ಆಖರೀ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣಂ ಕ್ಷಣಂ ಮುಂತಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮತ್ತು ಜನಪ್ರಿಯತೆ ಎರಡರಲ್ಲೂ ತಾವೊಬ್ಬ ಮಹತ್ವದ ನಟಿ ಎಂದು ಸಾಬೀತು ಪಡಿಸಿದರು.
ಶ್ರೀದೇವಿ ಹಿಂದೀ ಚಿತ್ರರಂಗದ ಸೊಲ್ವ ಸಾವನ್, ಹಿಮ್ಮತ್ ವಾಲಾ, ಮಾವಾಲಿ, ತೋಹ್ಫ, ಮಾಸ್ಟರ್ಜಿ, ಕರ್ಮ, ಮಿಸ್ಟರ್ ಇಂಡಿಯಾ, ವಕ್ತ್ ಕಿ ಆವಾಜ್, ಚಾಂದನಿ, ಸದ್ಮಾ, ನಗೀನ, ಚಾಲ್ ಬಾಜ್, ಲಮ್ಹೆ, ಖುದಾ ಗವಾಹ್, ಗುಮ್ರಾಹ್, ಲಾಡ್ಲಾ, ಜುದಾಯಿ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಪ್ರತಿಭೆ, ಯಶಸ್ಸುಗಳಿಂದ ರಾರಾಜಿಸಿದ್ದರು.
ಶ್ರೀದೇವಿ 1997ರಲ್ಲಿ ಹಿರಿಯ ನಿರ್ಮಾಪಕ ಬೋನಿ ಕಫೂರ್ ಅವರನ್ನು ವರಿಸಿದರು. ಅಲ್ಲಿಂದ ಸುಮಾರು ಹದಿನೈದು ವರ್ಷಗಳ ನಂತರ, 2012ರ ‘ಇಂಗ್ಲಿಷ್ ವಿಂಗ್ಲಿಷ್’ ಎಂಬ ಚಿತ್ರದಲ್ಲಿ ತಮ್ಮ ಸುಂದರ ಅಭಿನಯದೊಂದಿಗೆ ಮೋಡಿ ಮಾಡಿ ಮತ್ತೊಮ್ಮೆ ತಾನೆಷ್ಟು ಪ್ರತಿಭಾವಂತೆ ಎಂದು ಸಾಬೀತುಪಡಿಸಿದರು. ಇದಲ್ಲದೆ ತಮಿಳಿನ ಪುಲಿ ಮತ್ತು 2017 ವರ್ಷ ತಮ್ಮದೇ ಸಂಸ್ಥೆಯ ‘ಮಾಮ್’ ಚಿತ್ರದಲ್ಲಿ ನಟಿಸಿ ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದರು.
ಹಾಸ್ಯ, ಸಂವೇದನೆ, ಭಾವುಕತೆ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಶ್ರೀದೇವಿ ಅವರಷ್ಟು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದೆಯರು ವಿರಳ.
ಚಿತ್ರರಂಗದಲ್ಲಿ ಪ್ರಸಿದ್ಧಿಗೆ ದ್ಯೋತಕವಾದ ಹಲವಾರು ರೀತಿಯ ನೂರಾರು ಪ್ರಶಸ್ತಿಗಳನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಸ್ವೀಕರಿಸಿದ್ದ ಶ್ರೀದೇವಿ 2013 ವರ್ಷದಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಫೆಬ್ರವರಿ 25, 2018 ದಿನ ಬೆಳಿಗ್ಗೆ ಎದ್ದಾಗ ಒಂದು ದಿಗಿಲಿನ ಸುದ್ಧಿ. ನಾವು ಎಂದೆಂದೂ ಚಿರಯೌವನೆ ಎಂದು ಭಾವಿಸಿದ್ದ ಶ್ರೀದೇವಿ ನಿಧನರಾದರು ಎಂದರೆ ಏನೋ ಕಳೆದುಕೊಂಡ ಭಾವ ಉದ್ಭವವಾಯ್ತು. ಎಲ್ಲರದೂ ಒಕ್ಕೊರಲ ಧ್ವನಿ - “ಅವರು ಇಷ್ಟು ಬೇಗ ಹೊರಟುಹೋಗಬಾರದಿತ್ತು” ಎಂದು. ಇದು ಒಬ್ಬ ಕಲಾವಿದರು ಉಳಿಸಿಹೋಗುವ ಅಪಾರ ಮೌಲ್ಯ ಮತ್ತು ಕಲಾರಸಿಕರ ಹೃದಯಗಳಲ್ಲಿ ಕಾಲಾತೀತವಾಗಿ ಉಳಿಯುವ ಪರಿ.
On the birth anniversary great actress Sridevi
ಕಾಮೆಂಟ್‌ಗಳು