ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಯ್‍ಟರ್

 


 ಪಾಲ್ ಜೂಲಿಯಸ್ ರಾಯ್‍ಟರ್ 


ಪಾಲ್ ಜೂಲಿಯಸ್ ಅವರು ಜಗತ್ಪ್ರಸಿದ್ಧ ರಾಯ್‍ಟರ್ ಸುದ್ದಿಸಂಸ್ಥೆಯ ಸ್ಥಾಪಕರು. ಮುಂದೆ ಅವರು ಪಾಲ್ ಜೂಲಿಯಸ್ ರಾಯ್‍ಟರ್ ಎಂದು ಹೆಸರಾದರು. 

ಪಾಲ್ ಜೂಲಿಯಸ್ ಹಿಂದಿನ ಪಶ್ಚಿಮ ಜರ್ಮನಿಯ ಕಾಸಲ್ ಎಂಬಲ್ಲಿ 1816ರ ಜುಲೈ 21ರಂದು ಜನಿಸಿದರು. ಯಹೂದ್ಯರಾದ  ಈತ 1844 ರಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ರಾಯ್‍ಟರ್ ಎಂಬುದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. 

ಪಾಲ್ ಜೂಲಿಯಸ್ ಜರ್ಮನಿಯ ಗಾಟೆನ್‍ಜೆನ್‍ನಲ್ಲಿದ್ದ ತಮ್ಮ ಚಿಕ್ಕಪ್ಪನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದರು. ಆಗ ಇವರಿಗೆ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮದ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಪ್ರಸಿದ್ಧ ಭೌತವಿಜ್ಞಾನಿ ಹಾಗೂ ಗಣಿತಜ್ಞ ಕಾರ್ಲ್ ಫ್ರೆಡ್‍ರಿಕ್ ಗಾಸ್ ಅವರ ಪರಿಚಯವಾಯಿತು. 

ಪಾಲ್ ಜೂಲಿಯಸ್ ರಾಯ್‍ಟರ್  1840ರಲ್ಲಿ ಬರ್ಲಿನ್‍ನ ಒಂದು ಪ್ರಕಾಶನ ಸಂಸ್ಥೆ ಸೇರಿ ರಾಜಕೀಯಕ್ಕೆ ಸಂಬಂಧಿಸಿದ ಅನೇಕ ಕಿರು ಹೊತ್ತಿಗೆಗಳನ್ನು ಪ್ರಕಟಿಸಿದರು. ಇದರಿಂದಾಗಿ ಅಧಿಕಾರಿಗಳ ಆಗ್ರಹಕ್ಕೆ ಗುರಿಯಾಗಿ 1848ರಲ್ಲಿ ಬರ್ಲಿನ್ ಬಿಟ್ಟು ಪ್ಯಾರಿಸ್‍ಗೆ ಬಂದರು. ಇಲ್ಲಿಂದ ಪ್ರಕಟಿತ ಸುದ್ದಿಗಳ ಮುಖ್ಯಾಂಶಗಳನ್ನೂ,  ವಾಣಿಜ್ಯ ಸುದ್ದಿಗಳನ್ನೂ ಭಾಷಾಂತರಿಸಿ ಜರ್ಮನಿಯ ಪತ್ರಿಕೆಗಳಿಗೆ ಒದಗಿಸಲಾರಂಭಿಸಿದರು. 

ಪಾಲ್ ಜೂಲಿಯಸ್ ರಾಯ್‍ಟರ್  1850ರಲ್ಲಿ ಜರ್ಮನಿಯ ಅಕೆನ್ ಪಟ್ಟಣದಿಂದ ಬೆಲ್ಜಿಯಮ್‍ನ ಬ್ರಸೆಲ್ಸ್ ನಗರಕ್ಕೆ ಪಾರಿವಾಳಗಳ ಮೂಲಕ ಸುದ್ದಿ ರವಾನಿಸುವ ವ್ಯವಸ್ಥೆಯನ್ನು ಸ್ಥಾಪಿಸಿದರು. 1851ರ ನವೆಂಬರ್ 13ರಂದು ಇಂಗ್ಲೆಂಡಿನಲ್ಲಿ ತಂತಿ ವ್ಯವಸ್ಥೆ ಜಾರಿಗೆ ಬಂದದ್ದು ಸುದ್ದಿಸಂಸ್ಥೆಗಳ ಬೆಳವಣಿಗೆಗೆ ವರವಾಯಿತು. 1851ರಲ್ಲಿ ಇವರು ತಂತಿಯ ಮೂಲಕ ಸುದ್ದಿಯನ್ನು ವಿತರಿಸುವ ತಮ್ಮ ರಾಯ್‍ಟರ್ ಸುದ್ದಿ ಸಂಸ್ಥೆಯನ್ನು ಲಂಡನ್ನಿನ ಸ್ಟಾಕ್ ಎಕ್ಸ್‍ಚೇಂಜ್ ಕಟ್ಟಡದಲ್ಲಿ ಪ್ರಾರಂಭಿಸಿದರು. 

ಪ್ರಥಮವಾಗಿ ಲಂಡನ್ ಮತ್ತು ಪ್ಯಾರಿಸ್ ನಗರಗಳ ನಡುವೆ ವಾಣಿಜ್ಯ ಮಾಹಿತಿಯನ್ನು ಶೀಘ್ರವಾಗಿ ತಲುಪಿಸುವ ಜಾಲ ರಾಯ್‍ಟರ್‍ನಿಂದ ಪ್ರಾರಂಭವಾಯಿತು. ಬ್ಯಾಂಕಿನವರು ಮತ್ತು ವಾಣಿಜ್ಯೋದ್ಯಮಿಗಳು ರಾಯ್‍ಟರ್ ಸೇವೆಯನ್ನು ಬಳಸಿಕೊಂಡವರಲ್ಲಿ ಮೊದಲಿಗರು. 'ಟೈಮ್ಸ್' ನಂಥ ದೊಡ್ಡ ದಿನಪತ್ರಿಕೆಗಳು ರಾಯ್‍ಟರ್‍ನ ಚಂದಾದಾರರಾಗಲು ಹಿಂಜರಿದಾಗ ಟ್ಯಾಬ್‍ಲಾಯ್ಡ್ ಪತ್ರಿಕೆಗಳು ಮಾಹೆಯಾನ 30 ಪೌಂಡ್‍ಗಳನ್ನು ಕೊಟ್ಟು ರಾಯ್‍ಟರ್‍ನ ಪ್ರಥಮ ಚಂದಾದಾರರಾದರು. 19ನೆಯ ಶತಮಾನದ ಅಂತ್ಯದಲ್ಲಿ ರಾಯ್‍ಟರ್‍ನ ಸುದ್ದಿಯನ್ನು ಅಮ್‍ಸ್ಟರ್‍ಡ್ಯಾಮ್, ಬರ್ಲಿನ್ ವಿಯನ್ನಾ ಮತ್ತು ಅಥೆನ್ಸ್ ನಗರಗಳವರೆಗೂ ವಿಸ್ತರಿಸಲಾಯಿತು. ಈ ಮಧ್ಯೆ ಮತ್ತೆರಡು ಸುದ್ದಿ ಸಂಸ್ಥೆಗಳಾದ ಫ್ರಾನ್ಸಿನ ಹವಾಸ್, ಜರ್ಮನಿಯ ಉಲ್ಫ್ ಇವುಗಳೊಂದಿಗೆ ಸುದ್ದಿವಿತರಣೆಯ ಭೌಗೋಳಿಕ ಎಲ್ಲೆಯನ್ನು ವಿಭಾಗಿಸಿಕೊಳ್ಳಲಾಯಿತು. 

ಪಾಲ್ ಜೂಲಿಯಸ್ ರಾಯ್‍ಟರ್   1871ರಲ್ಲಿ ಬ್ಯಾರನ್ ಪದವಿಯನ್ನು ಪಡೆದರು.  1878ರಲ್ಲಿ ರಾಯ್‍ಟರ್ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಸ್ಥಾನದಿಂದ ನಿವೃತ್ತರಾದರು. 1899ರ ಫೆಬ್ರುವರಿ 25ರಂದು ನಿಧನರಾದರು.

ಇಂದು ರಾಯ್‍ಟರ್ ಅಧಿಕೃತ ಕಚೇರಿ ಲಂಡನ್ನಿನ ಫ್ಲೀಟ್ ಸ್ಟ್ರೀಟಿನಲ್ಲಿದೆ. ಮುಂದೆ ಇದು ಬೃಹತ್ ಥಾಮ್ಸನ್  ರಾಯ್‍ಟರ್ಸ್ ಸಮೂಹದ ಭಾಗವಾಯಿತು.  ಇದರಲ್ಲಿ ಸುಮಾರು 2500 ಪತ್ರಕರ್ತರು ಮತ್ತು 600 ಛಾಯಾಗ್ರಾಹಕ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.  ಮೊದಲು ಇದರ ಮುಖ್ಯಕಾರ್ಯವೆಂದರೆ ವಿಶ್ವದೆಲ್ಲೆಡೆಗಳ ಸುದ್ದಿಯನ್ನು ಬ್ರಿಟನ್ ಸುದ್ದಿಮಾಧ್ಯಮಗಳಿಗೆ ವಿತರಿಸುವುದು ಹಾಗೂ ಬ್ರಿಟನ್ನಿನ ಸುದ್ದಿಯನ್ನು ಮತ್ತು ವಿದೇಶಿ ಸುದ್ದಿಯನ್ನು ಪ್ರಪಂಚದ ಇತರ ಸುದ್ದಿ ಮಾಧ್ಯಮಗಳಿಗೆ ತಲುಪಿಸುವುದಾಗಿತ್ತು. ಕ್ರಮೇಣದಲ್ಲಿ ವಿಶ್ವದಾದ್ಯಂತ ವ್ಯಾಪಿಸಿರುವ ಇದರ ಜಾಲದಲ್ಲಿ ವಿದೇಶಿಸುದ್ದಿ ವರದಿಯಲ್ಲಿ ರಾಯ್‍ಟರ್ ಜಗತ್ತಿಲ್ಲಿ ಅಗ್ರಸ್ಥಾನ ಪಡೆದಿದೆ.  ಇದು ಸುಮಾರು155 ದೇಶಗಳಿಗೆ ಸುದ್ಧಿ ವಿತರಿಸುತ್ತಿದೆ. ರಾಯ್‍ಟರ್  ವಿಶ್ವದ ಬಹುತೇಕ ಪ್ರಮುಖ ನಗರಗಳಲ್ಲಿ ತನ್ನ ಬ್ಯೂರೋಗಳನ್ನು ಸ್ಥಾಪಿಸಿದೆ. ತೇನ್‍ಸಿಂಗ್ ಮತ್ತು ಹಿಲರಿ ಜೋಡಿ ಎವರೆಸ್ಟ್ ಶಿಖರವನ್ನು ಏರಿದ ಸುದ್ದಿಯನ್ನು ಜಗತ್ತಿಗೆ ಪ್ರಪ್ರಥಮವಾಗಿ ತಿಳಿಸಿದ್ದು ಸಹಾ ರಾಯ್‍ಟರ್ ಸುದ್ದಿ ಸಂಸ್ಥೆ. 

On the birth anniversary of Paul Julius Reuter

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ