ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಿ ವಿಷ್ಣುವರ್ಧನ್


 ಭಾರತಿ ವಿಷ್ಣುವರ್ಧನ್


ಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು ಭಾರತಿ.  ಭಾರತಿ ಭಾರತದ ಬಹುಭಾಷೆಗಳ ಚಲನಚಿತ್ರಗಳನ್ನು ಬೆಳಗಿದ ಪ್ರತಿಭೆ.

ಭಾರತಿಯವರು  ‘ಗೀತ್ ಗಾಯಾ ಪತ್ಥರೋನೆ’ ಹಿಂದೀ ಚಲನಚಿತ್ರದಲ್ಲಿ ಮೊದಲು ಬಾಲನಟಿಯಾಗಿ ಅಭಿನಯಿಸಿದ್ದರು.   ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಕನ್ನಡ ಚಿತ್ರವಾದರೂ ಮೊದಲು ಬಿಡುಗಡೆಯಾಗಿದ್ದು ‘ದುಡ್ಡೇ ದೋಡ್ದಪ್ಪ’.  ಅದು 1964ರ ವರ್ಷ.  ಅಂದರೆ ಭಾರತಿಯವರು ಚಿತ್ರರಂಗದಲ್ಲಿ ತಮ್ಮ ಐದೂವರೆ ಮಹತ್ವಪೂರ್ಣ ದಶಕಗಳನ್ನು ಕಂಡವರು.    ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ  ಈ ಐದೂ ಭಾಷೆಗಳಲ್ಲಿ ಯಶಸ್ಸು ಕಂಡ ಕೀರ್ತಿ ಭಾರತಿಯವರದ್ದು.  ಕನ್ನಡದಲ್ಲಿ ರಾಜ್ ಕುಮಾರ್, ಕಲ್ಯಾಣ್ ಕುಮಾರ್,  ವಿಷ್ಣುವರ್ಧನ್, ಅನಂತನಾಗ್, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ಮೆಹಮೂದ್, ವಿನೋದ್ ಖನ್ನ;  ತೆಲುಗಿನಲ್ಲಿ ಅಕ್ಕಿನೇನಿ, ಎನ್. ಟಿ. ಆರ್; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ, ಜೆಮಿನಿ, ಮುತ್ತುರಾಮನ್ ಹೀಗೆ ಅವರು ನಟಿಸದ ಶ್ರೇಷ್ಠ ನಟರೇ ಇಲ್ಲದಿರುವಷ್ಟು ಜನಪ್ರಿಯತೆ ಅವರದ್ದು.  ಜೊತೆಗೆ ಆಕೆ ತನ್ನ ಯುವ ದಿನಗಳಲ್ಲಿ ಉತ್ತಮ ಆಟಗಾರ್ತಿ ಹಾಗೂ ನೃತ್ಯಗಾತಿಯಾಗಿದ್ದರು.  

ಕನ್ನಡ ಚಿತ್ರರಂಗದಲ್ಲಿ  ಗಂಗೆ ಗೌರಿ, ನಮ್ಮ ಸಂಸಾರ, ಮೇಯರ್ ಮುತ್ತಣ್ಣ, ಬಾಳು ಬೆಳಗಿತು, ಮಿಸ್ ಬೆಂಗಳೂರು, ಹೃದಯ ಸಂಗಮ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಕುಲ ಗೌರವ, ದುಡ್ಡೇ ದೊಡ್ಡಪ್ಪ, ಬೀದಿ ಬಸವಣ್ಣ, ಭಲೇ ಜೋಡಿ, ಸಂಧ್ಯಾರಾಗ, ಹಸಿರು ತೋರಣ, ಸ್ವಯಂವರ,ಶ್ರೀಕೃಷ್ಣದೇವರಾಯ, ಬಂಗಾರದ ಮನುಷ್ಯ, ದೂರದ ಬೆಟ್ಟ, ಬಿಡುಗಡೆ, ದೇವರಗುಡಿ, ನಾಗರಹೊಳೆ, ಭಾಗ್ಯಜ್ಯೋತಿ, ಕಾವೇರಿ, ಬಂಗಾರದ ಜಿಂಕೆ, ಋಣಮುಕ್ತಳು ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ  ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ.  

‘ನಾಗರಹಾವು’ ಚಿತ್ರದಿಂದ ಕನ್ನಡದಲ್ಲೊಂದು ಅಪೂರ್ವ ಪ್ರತಿಭೆಯಾಗಿ ಬೆಳಗಿದ ವಿಷ್ಣುವರ್ಧನ್ ಅವರನ್ನು ವರಿಸಿದ ಭಾರತಿಯವರು ಮುಂದೆ ವಿಷ್ಣುವರ್ಧನ್ ಅವರ ಯಶಸ್ಸಿನ ಹಾದಿಯಲ್ಲಿ ನೆರಳಿನಂತೆ ನಡೆದರು.  ಅಷ್ಟೊಂದು ಸಾಧಿಸಿದ್ದರೂ ಸರಳತೆ, ಸಹೃದಯತೆಗಳಿಗೆ ಹೆಸರಾದವರು ಭಾರತಿ.

“ಚಿತ್ರರಂಗಕ್ಕೆ ಬಂದು ಐದು ದಶಕಗಳು  ಕಳೆದವು. ನನ್ನ ಅನ್ನವನ್ನು ಭಗವಂತ ಇಲ್ಲಿಯೇ ಇಟ್ಟಿದ್ದ. ಈಗ ಐದು ದಶಕಗಳ ನಂತರ ಹಿಂತಿರುಗಿ ನೋಡಿದಾಗ ಸಂತೃಪ್ತಿ, ಖುಷಿ, ಹೆಮ್ಮೆ ಎನ್ನಿಸುತ್ತದೆ.   ವಿಷ್ಣುವರ್ಧನ್ ಅವರೊಂದಿಗೆ ಮದುವೆಯಾದ ಬಳಿಕ ನಡೆದ ಸಾಕಷ್ಟು ಅಹಿತಕರ ಘಟನೆ ನನ್ನ ಮನದಲ್ಲಿವೆ. ನನ್ನಿಂದಾಗಿ ಅವರಿಗೆ ತೊಂದರೆ ಆಗುತ್ತಿದೆ ಎಂದು ಹಲವು ಸಲ ಅನಿಸಿದೆ. ಯಾಕೆಂದರೆ, ನಾವಿಬ್ಬರೂ ಮದುವೆಯಾಗುವುದು ಎಷ್ಟೋ ಜನರಿಗೆ ಇಷ್ಟವಿರಲಿಲ್ಲ. ಅದರಿಂದಾಗಿ ಈ ಕಹಿ ಘಟನೆಗಳು ನಡೆದವು. ನಾನು ಅದನ್ನು ವಿಷ್ಣು ಅವರಲ್ಲಿ ಹೇಳಿದಾಗ, ‘ಭಗವಂತ ನಮ್ಮ ಜತೆಯಲ್ಲಿ ಇರುವಾಗ ಏನೂ ತೊಂದರೆಯಾಗಲ್ಲ. ಅದನ್ನೆಲ್ಲ ಹೆಚ್ಚು ಚಿಂತೆ ಮಾಡಬೇಡ’ ಅನ್ನುತ್ತಿದ್ದರು." ಹೀಗೆ  ತಮ್ಮ ಕಳೆದ ಐದು ದಶಕಗಳ ಚಿತ್ರರಂಗದಲ್ಲಿನ  ಮಿಶ್ರ ಭಾವಗಳನ್ನು  ಭಾರತಿಯವರು ನೆನಪುಗಳನ್ನು ಒಮ್ಮೆ ಹೇಳಿದ್ದರು.

ವಿಷ್ಣುವರ್ಧನ್ ಅವರು ಈ ಲೋಕದಲ್ಲಿ ಇಲ್ಲದಿರುವ ಬದುಕು ಚಿತ್ರಪ್ರೇಮಿಗಳಿಗೇ ಇನ್ನೂ ಅರಗಿಸಿಕೊಳ್ಳಲು ಕಷ್ಟವಾಗಿರುವ ಸ್ಥಿತಿ ನಿರ್ಮಿಸಿದೆ ಎಂದ ಮೇಲೆ ಭಾರತಿ ಅವರ ಜೀವನದಲ್ಲಿ ಇಂತಹ ನಷ್ಟದ ಬಗ್ಗೆ ಬೇರೆ ಹೇಳಬೇಕಿಲ್ಲ.  ಭಾರತಿ ಅವರಿಗೆ ಈ ನಷ್ಟವನ್ನು ಬರಿಸುವ ಶಕ್ತಿ ಒದಗಲಿ, ಅವರ ಬದುಕಿನಲ್ಲಿ ನೆಮ್ಮದಿ ಶಾಂತಿ ತುಂಬಿರಲಿ.  

ಇಂಥಹ ಅಪೂರ್ವ ಸಾಧಕಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಂದಿದೆ.   ರಾಷ್ಟ್ರಮಟ್ಟದಲ್ಲಿ ಪದ್ಮಶ್ರೀ ಗೌರವ ಸಂದಿದೆ. ವಿಷ್ಣುವರ್ಧನರ ನೆನಪಿನಲ್ಲಿ ಅವರು ನಡೆಸುತ್ತಿರುವ ಮತ್ತು ಯೋಜಿಸಿರುವ ಕಾರ್ಯಗಳೆಲ್ಲ ಅವರಿಗೆ ಸಂತಸ ಸಂತೃಪ್ತಿ ತರಲಿ ಎಂದು ಆಶಿಸುತ್ತಾ ಭಾರತಿ ವಿಷ್ಣುವರ್ಧನ್ ಅವರಿಗೆ ಜನ್ಮದಿನದ ಶುಭ ಹಾರೈಸೋಣ.

On the birth day of our great actress Bharathi Vishnuvardhan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ