ಕಾಮಿಕ್ಸ್ ಪ್ರಾಣ್
ಪ್ರಾಣ್
ಕನ್ನಡದ ಪತ್ರಿಕೆಗಳನ್ನೊಳಗೊಂಡಂತೆ ಭಾರತದ ಎಲ್ಲ ಪತ್ರಿಕೆಗಳಲ್ಲಿ ತಮ್ಮ ಕಾರ್ಟೂನ್ ಸರಣಿಗಳಿಗೆ ಪ್ರಸಿದ್ಧರಾಗಿದ್ದವರು ಪ್ರಾಣ್. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಯಾವುದೇ ಮ್ಯಾಗಜಿನ್ ಮನೆಗೆ ಬಂದೊಡನೆ ಮೊದಲು ಹುಡುಕುತ್ತಿದ್ದುದು ಪ್ರಾಣ್ ಅವರ ಕಾಮಿಕ್ಸ್ ಕಥಾರೂಪಕಗಳಿಗೆ. ನಿರಂತರ ಬದುಕಿನ ಬವಣೆಗಳ ಮಧ್ಯೆ ಪ್ರಾಣ್ ಅವರ ಚಿತ್ರಕಥಾ ರೂಪಕಗಳಿಂದ, ತಮ್ಮನ್ನೇ ನಲಿವಿನ ಕನ್ನಡಿಯಲ್ಲಿ ಕಂಡುಕೊಂಡು ಹಗುರಗೊಂಡ ಭಾರತೀಯ ಹೃದಯಗಳು ಅಸಂಖ್ಯಾತ!.
ಪ್ರಾಣ್ ಅವರ ಪೂರ್ಣ ಹೆಸರು ಪ್ರಾಣ್ ಕುಮಾರ್ ಶರ್ಮ. ಅವರು ಈಗ ಪಾಕಿಸ್ತಾನದ ಭೂಭಾಗವಾಗಿರುವ ಲಾಹೋರ್ ಬಳಿಯ ಕಸೂರ್ ಎಂಬ ಗ್ರಾಮದಲ್ಲಿ, 1938ರ ಆಗಸ್ಟ್ 15 ರಂದು ಜನಿಸಿದರು. 1947ರ ಬಳಿಕ ಇವರ ಕುಟುಂಬ ಗ್ವಾಲಿಯರ್ ನಗರದಲ್ಲಿ ನೆಲೆಸಿತು.
ಪ್ರಾಣ್ ಅವರು ಗ್ವಾಲಿಯರಿನ ಇವ್ನಿಂಗ್ ಕ್ಯಾಂಪ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ತಮಗೆಲ್ಲಾದರೂ ಡ್ರಾಯಿಂಗ್ ಟೀಚರ್ ಹುದ್ದೆ ದೊರಕಲಿ ಎಂಬ ಆಶಯದಿಂದ ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಗೆ ಹೊರ ಊರಿನ ವಿದ್ಯಾರ್ಥಿಯಾಗಿ ಐದು ವರ್ಷಗಳ ಪದವಿಗೆ ಸೇರಿದರಾದರೂ ಅದನ್ನು ಮಧ್ಯೆ ಕೈಬಿಟ್ಟರು.
ಪ್ರಾಣ್ 1960ರಲ್ಲಿ ದೆಹಲಿ ಮೂಲದ ‘ಮಿಲಾಪ್’ ಪತ್ರಿಕೆಯಲ್ಲಿ ‘ಡಾಬು’ ಎನ್ನುವ ಪಾತ್ರವನ್ನು ಸೃಷ್ಟಿಸುವುದರ ಮೂಲಕ ಕಾಮಿಕ್ಸ್ ವೃತ್ತಿಗೆ ಪಾದಾರ್ಪಣೆ ಮಾಡಿದರು. ಅಂದಿನ ದಿನಗಳಲ್ಲಿ 'ಡಾಬು' ಹೊರತುಪಡಿಸಿ ವಿದೇಶದಿಂದ ಬರುತ್ತಿದ್ದ ಫ್ಯಾಂಟಮ್ ಮತ್ತು ಸೂಪರ್ ಮ್ಯಾನ್ ಕಾಮಿಕ್ಸ್ ಸರಣಿಗಳೇ ಭಾರತದ ಬಹುಭಾಷಾ ನಿಯತಕಾಲಿಕಗಳಲ್ಲಿ ಭಾಷಾ ತರ್ಜುಮೆಗಳೊಂದಿಗೆ ಪ್ರಕಟಗೊಳ್ಳುತ್ತಿದ್ದವು.
1969ರಲ್ಲಿ ಪ್ರಾಣ್ ಅವರು ಹಿಂದೀ ನಿಯತಕಾಲಿಕೆ ‘ಲಾಟ್‍ಪಾಟ್’ನಲ್ಲಿ ‘ಚಾಚಾ ಚೌಧರಿ’ ಎಂಬ ಕಾಮಿಕ್ಸ್ ಮೂಡಿಸಲಾರಂಭಿಸಿದರು. ಇದು ಅವರಿಗೆ ಎಲ್ಲೆಡೆ ಖ್ಯಾತಿ ತಂದಿತು. ಇದಲ್ಲದೆ ಪ್ರಾಣ್ ಅವರು ಶ್ರೀಮತ್‍ಜಿ, ಪಿಂಕಿ, ಬಿಲ್ಲೂ, ರಾಮನ್, ಚನ್ನಿ ಚಾಚಿ ಮುಂತಾದ ಕಾಮಿಕ್ಸ್ ಸರಣಿಗಳನ್ನು ಮೂಡಿಸಲಾರಂಭಿಸಿದರು. ಇವೆಲ್ಲ ಎಲ್ಲ ಭಾರತೀಯ ನಿಯತಕಾಲಿಕೆಗಳಲ್ಲೂ ಮೂಡಿಬರುತ್ತಿದ್ದವು.
ಪ್ರಾಣ್ ಅವರು ವಿಶೇಷವಾಗಿ ಕನ್ನಡ ಪತ್ರಿಕಾಲೋಕದಲ್ಲಿ ಪ್ರಸಿದ್ಧರಾಗಿಬಿಟ್ಟಿದ್ದರು. ಪ್ರಜಾವಾಣಿಯಲ್ಲಿ ಮೂಡಿಬರುತ್ತಿದ್ದ 'ಪುಟ್ಟಿ', 'ರಾಮನ್' ಹಾಗೂ ಸುಧಾದಲ್ಲಿ ಮೂಡುತ್ತಿದ್ದ 'ಶ್ರೀಮತಿ' ಬಲು ಜನಪ್ರಿಯಗೊಂಡಿದ್ದವು.
1983ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಾಣ್ ಅವರ ರಾಷ್ಟ್ರೀಯ ಭಾವೈಕ್ಯತೆಯ ರೂಪಕವಾದ 'ರಾಮನ್ - ಹಮ್ ಏಕ್ ಹೈ' ಕಾಮಿಕ್ಸ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಭಾರತದಲ್ಲಿ ಕಾಮಿಕ್ಸ್ ಲೋಕವನ್ನು ವ್ಯಾಪಕಗೊಳಿಸಿದ ಪ್ರಾಣ್ ಅವರ ಹೆಸರು 1995ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಳಲ್ಲಿ ಸೇರ್ಪಡೆಗೊಂಡಿತು.
2001ರಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಪ್ರಾಣ್ ಅವರಿಗೆ ಜೀವಮಾನ ಸಾಧನೆಯ ಗೌರವವನ್ನು ಅರ್ಪಿಸಿತು. ಪ್ರಾಣ್ ಅವರು ಕೆಲಕಾಲ ತಮ್ಮ ಪುತ್ರ ನಿಖಿಲ್ ಅವರು ಸ್ಥಾಪಿಸಿದ ಪ್ರಾಣ್ಸ್ ಮೀಡಿಯಾ ಇನ್ಸ್ಟಿಟ್ಯೂಟ್ನಲ್ಲಿ ವ್ಯಂಗ್ಯಚಿತ್ರ ಕಲೆಯನ್ನು ಬೋಧಿಸುತ್ತಿದ್ದರು. ಮೌರಿಸ್ ಹಾರ್ನ್ ಅವರ ಪ್ರಕಾರ 'ದ ವರ್ಲ್ಡ್ ಎನ್ಸೈಕ್ಲೋಪೀಡಿಯಾ ಆಫ್ ಕಾಮಿಕ್ಸ್ ' ಪ್ರಾಣ್ ಅವರನ್ನು 'ವಾಲ್ಟ್ ಡಿಸ್ನಿ ಆಫ್ ಇಂಡಿಯಾ' ಎಂದು ಸಂಬೋಧಿಸುತ್ತಿತ್ತು. 'ಚಾಚಾ ಚೌಧರಿ' ಅಮೆರಿಕದಲ್ಲಿರುವ ಇಂಟರ್ ನ್ಯಾಷನಲ್ ಮ್ಯೂಸಿಯಮ್ ಆಫ್ ಕಾರ್ಟೂನ್ ಆರ್ಟ್ಸ್ ಆವರಣದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿದೆ.
ಪ್ರಾಣ್ ಅವರು 2014ರ ಆಗಸ್ಟ್ 5ರಂದು ಈ ಲೋಕವನ್ನಗಲಿದರು. ದೇಶ ಅವರಿಗೆ, 2015ರಲ್ಲಿ ಮರಣೋತ್ತರವಾಗಿ ಪದ್ಮಶ್ರೀ ಗೌರವವನ್ನು ಸಲ್ಲಿಸಿತು.
ಈ ಚಿತ್ರ ಹೇಳುವಂತೆ ಪ್ರಾಣ್ ಈ ಲೋಕದಲ್ಲಿಲ್ಲ. ಅವರು ಸೃಷ್ಟಿಸಿದ ಪಾತ್ರಾಗಳೆಲ್ಲ ಪ್ರಾಣ ತುಂಬಿಕೊಂಡು ಅಮರವಾಗಿವೆ.
Pran of Indian Comics
ಕಾಮೆಂಟ್‌ಗಳು