ಹುರುಳಿ ಭೀಮರಾವ್
ಹುರುಳಿ ಭೀಮರಾವ್
ಕನ್ನಡ ಪತ್ರಿಕೋದ್ಯಮದಲ್ಲಿ ಹುರುಳಿ ಭೀಮರಾವ್ ದೊಡ್ಡ ಹೆಸರಾಗಿದ್ದವರು. ಪತ್ರಿಕೋದ್ಯಮಿಯಾಗಿ ಮತ್ತು ಸಾಹಿತಿಯಾಗಿ ಅವರ ಕೊಡುಗೆ ಮಹತ್ವಪೂರ್ಣವಾದದ್ದು.
ಭೀಮರಾಯರು ಶಿವಮೊಗ್ಗ ಜಿಲ್ಲೆಯ ಹುರುಳಿ ಗ್ರಾಮದಲ್ಲಿ 1885ರ ಆಗಸ್ಟ್ 4ರಂದು ಜನಿಸಿದರು. ಇವರ ತಂದೆ ಶಾಮರಾಯರು. ತಾಯಿ ಭಿಷ್ಟಮ್ಮನವರು. ಭೀಮರಾಯರ ಪ್ರಾಥಮಿಕ ವಿದ್ಯಾಭ್ಯಾಸ ಉಡುಪಿಯಲ್ಲೂ, ಮಾಧ್ಯಮಿಕ ಶಿಕ್ಷಣ ಕೆಲವು ಕಾಲ ತೀರ್ಥಹಳ್ಳಿಯಲ್ಲೂ, ಅನಂತರ ಉಡುಪಿ ಕ್ರಿಶ್ಚನ್ ಹೈಸ್ಕೂಲಿನಲ್ಲೂ ನಡೆಯಿತು.
ಮೆಟ್ರಿಕ್ಯುಲೇಷನ್‍ವರೆಗೆ ವಿದ್ಯಾಭ್ಯಾಸ ಮುಂದುವರಿಸಿದ ಭೀಮರಾಯರು ಕೆಲಕಾಲ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಕೆಲಕಾಲ ಕಲ್ಲಿಕೋಟೆಯ ಕಾಲೇಜೊಂದರಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದರು. ಕಲ್ಲಿಕೋಟೆಯಲ್ಲಿ ಇರುವಾಗಲೇ ನೆಡುಂಗಾಡಿ ಬ್ಯಾಂಕ್‍ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಮಂಗಳೂರಿಗೆ ವರ್ಗವಾಗಿ ಬಂದರು. ಅನಂತರ ಪತ್ರಿಕೋದ್ಯಮರಂಗಕ್ಕೆ ಪ್ರವೇಶಿಸಿದರು.
ವಿದ್ಯಾರ್ಥಿದೆಸೆಯಿಂದಲೇ ಲೇಖನ ವ್ಯವಸಾಯದಲ್ಲಿ ತೊಡಗಿದ ಭೀಮರಾಯರು ಮುಂದೆ ತಮ್ಮ ಪೂರ್ಣವೇಳೆಯನ್ನು ಪತ್ರಿಕೋದ್ಯಮಕ್ಕೆ ಮತ್ತು ಸಾಹಿತ್ಯ ಸೇವೆಗೆ ಮೀಸಲಿಟ್ಟರು. ಭೀಮರಾಯರ ಅನೇಕ ಲೇಖನಗಳು ಶ್ರೀಕೃಷ್ಣಸೂಕ್ತಿ, ಕಂಠೀರವ, ಸ್ವದೇಶಾಭಿಮಾನಿ, ಸಾಧ್ವಿ, ತಿಲಕಸಂದೇಶ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
1919ರಲ್ಲಿ ಕಂಠೀರವ ಪತ್ರಿಕೆ ಪ್ರಕಟವಾಗತೊಡಗಿದಾಗ ಅದರಲ್ಲಿ ಹಂಗಾಮಿ ಸಂಪಾದಕರಾಗಿದ್ದ ಭೀಮರಾಯರು, 1932ರ ವೇಳೆಗೆ ಆ ಪತ್ರಿಕೆಯ ಪೂರ್ಣಾವಧಿಯ ಸಂಪಾದಕರಾಗಿ 1967ರಲ್ಲಿ ಅದು ನಿಂತುಹೋಗುವವರೆಗೆ ಸುಮಾರು 35 ವರ್ಷಗಳ ಕಾಲ ಕಂಠೀರವದ ಏಳಿಗೆಗಾಗಿ ದುಡಿದರು. ಇವರು ಸಂಪಾದಕರಾಗಿದ್ದಾಗ ಬರೆಯುತ್ತಿದ್ದ ಸಂಪಾದಕೀಯ ಬರಹಗಳು, ಗುಂಡನ ಗೆಜೆಟ್ ಕಾಲಂಗಳು ಪ್ರಖ್ಯಾತ ವಾಗಿದ್ದವು; ನಿಶಿತ ಬರೆವಣಿಗೆಗೆ, ದಿಟ್ಟ ನಿಲುವುಗಳಿಗೆ ಸಾಕ್ಷಿಯಾಗಿದ್ದವು. ಗುಂಡನ ಗೆಜೆಟ್ ವ್ಯಂಗ್ಯ ವಿಡಂಬನ ಶೈಲಿಗೆ ಹೆಸರಾಗಿತ್ತು. ಕಂಠೀರವ ಪತ್ರಿಕೆಯನ್ನು ಒಂದು ಉತ್ತಮ ವಾರಪತ್ರಿಕೆಯಾಗಿ ಬೆಳೆಸಿ ಪೋಷಿಸುವಲ್ಲಿ ಭೀಮರಾಯರು ವಹಿಸಿದ ಪಾತ್ರ ಮಹತ್ತ್ವದ್ದು.
ಭೀಮರಾಯರು ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ತಾರಾ ಎಂಬ ಐತಿಹಾಸಿಕ ಕಾದಂಬರಿ ಇವರ ಪ್ರಥಮ ಕೃತಿ(1913). ಪಾಪ ಪುಣ್ಯ (ಅನುವಾದಿತ ಕಾದಂಬರಿ, 1923), ಹಾಸನ ಟೋಪಿ (ನೀಳ್ಗತೆ, 1932), ಪಾಪೋಸಿನ ಪಜೀತಿ, ಗುಬ್ಬಿಪಾಯಸ, ಗಡ್ಡದ ಅಜ್ಜಯ್ಯ (ಮೂರು ಮಕ್ಕಳ ಕಥೆಗಳು, 1935) ರಜಿಯಾ ಬೇಗಂ (1944), ಮುರುಕು ದಂಬೂಕು (1947), ಆಧುನಿಕ ಭಾರತ (ಮೂರು ನಾಟಕಗಳು, 1949), ಸ್ವಲ್ಪ ನಗಬಾರದೆ ? (ತುಣುಕು ಹಾಸ್ಯ) - ಇವು ಇವರ ಇತರ ಕೃತಿಗಳು.
ಭೀಮರಾಯರ ಮುರುಕು ಬಂದೂಕು ಮತ್ತು ಹಾಸನ ಟೋಪಿ (ಅಥವಾ ಹಳೆಯ ಮೆಟ್ರಿಕ್) ಕ್ರಮವಾಗಿ ಟಾಮ್ ಬ್ರೌನ್ಸ್ ಸ್ಕೂಲ್ ಡೇಸ್, ರಿಪ್‍ವಾನ್ ವಿಂಕಲ್ ಎಂಬ ಕೃತಿಗಳನ್ನು ಆಧರಿಸಿ ಬರೆದ ಪುಸ್ತಕಗಳು. ಇವುಗಳ ಭಾಷೆ ಹಾಗೂ ಶೈಲಿ ಸರಳವಾಗಿದ್ದು ಓದುಗರನ್ನು ಸೆರೆಹಿಡಿಯುತ್ತವೆ. ಆಂಗ್ಲ ಕಥೆಯ ವಸ್ತುವನ್ನು ಸ್ವಂತ ನೆಲಕ್ಕೆ ಅಳವಡಿಸಿಕೊಂಡು ಆ ಕೃತಿಗಳ ಸಾರವನ್ನು ಕನ್ನಡಕ್ಕೆ ಭಟ್ಟಿ ಇಳಿಸುವಲ್ಲಿ, ವಾಚನಯೋಗ್ಯ ವಾಗಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಇವರ ಗದ್ಯ ಬರವಣಿಗೆಯಲ್ಲಿ ಒಂದು ಹದವಿದೆ; ಪಾಕವಿದೆ. ಅದು ಓದುಗನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು.
1960ರಲ್ಲಿ ಮಣಿಪಾಲದಲ್ಲಿ ನಡೆದ 42ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೀಮರಾಯರು ಕನ್ನಡ ಗದ್ಯಸಾಹಿತ್ಯವನ್ನು ಕುರಿತು ಮಾಡಿದ ಭಾಷಣ ಸಾಹಿತ್ಯಲೋಕದಲ್ಲಿ ಪ್ರಖ್ಯಾತಿ ಪಡೆಯಿತು. ಯಕ್ಷಗಾನ, ನಾಟಕಾಭಿನಯಗಳಲ್ಲಿಯೂ ಇವರಿಗೆ ಅಪಾರ ಆಸಕ್ತಿಯಿತ್ತು.
ಮುದ್ದಣನನ್ನು ಸನಿಹದಿಂದ ಬಲ್ಲವರಾಗಿದ್ದ ಭೀಮರಾಯರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಂದಳಿಕೆ ಲಕ್ಷ್ಮೀನಾರಾಯಣಯ್ಯನೇ ಮುದ್ದಣನೇ ಎಂಬ ವಾದ ಎದ್ದಾಗ ಈ ಎರಡೂ ಏಕವ್ಯಕ್ತಿಯ ಹೆಸರೆಂದೂ ಅದ್ಭುತರಾಮಾಯಣ, ಶ್ರೀರಾಮಪಟ್ಟಾಭಿಷೇಕ, ಶ್ರೀರಾಮಾಶ್ವಮೇಧ ಕೃತಿಗಳ ಕರ್ತೃ ಮುದ್ದಣನೇ ಎಂದು ಸಾಬೀತುಗೊಳಿಸುವಲ್ಲಿ ನೆರವಾದರು. ಕವಿ ಮುದ್ದಣನನ್ನು ಕುರಿತಂತೆ ಇವರು ಬರೆದ ಅನೇಕ ಲೇಖನಗಳು ಪ್ರಕಟಗೊಂಡಿದ್ದವು.
ಹುರುಳಿ ಭೀಮರಾಯರು 1970ರ ಆಗಸ್ಟ್ 4ರಂದು ನಿಧನರಾದರು.
On the birth anniversary of great journalist and writer Huruli Bheemarao
ಕಾಮೆಂಟ್‌ಗಳು