ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಸುನಂದಮ್ಮ


ಟಿ. ಸುನಂದಮ್ಮ

ಟಿ. ಸುನಂದಮ್ಮ ಕನ್ನಡದ ಮಹತ್ವದ ಹಾಸ್ಯ ಸಾಹಿತಿಗಳಲ್ಲಿ ಒಬ್ಬರು.

ಸುನಂದಮ್ಮನವರು 1917ರ ಆಗಸ್ಟ್ 8ರಂದು ಜನಿಸಿದರು. ಸುಮಾರು 1927ರ ಕಾಲ. ಮೈಸೂರು ಬೆಂಗಳೂರು ಬಿಟ್ಟರೆ ಕರ್ನಾಟಕದ ಬೇರೆಡೆ ವಿದ್ಯುತ್ ಸೌಲಭ್ಯ ಕಾಣದ ಕಾಲ.  ಅಜ್ಞಾನ, ಮೂಢ ನಂಬಿಕೆಗಳು ಸಾಕಷ್ಟು ಪ್ರಬಲವಾಗಿದ್ದವು.  ತರೀಕೆರೆಯಲ್ಲಿ ಬಾಲಕಿಯರಿಗೆ ಶಾಲೆಯೇ ಇಲ್ಲ.  ಇದ್ದದ್ದು ಹುಡುಗರ ಶಾಲೆ.  ಆ ಶಾಲೆಗೇ ಡೆಪ್ಯೂಟಿ ಕಮಿಷನರ್ ಅವರ ಮಗಳಾದ ಸುನಂದಮ್ಮ ಅವರನ್ನು ಸೇರಿಸಲಾಯಿತು.  ಶಾಲೆಯಲ್ಲಿ ಆಕೆ ಪ್ರತಿಭಾನ್ವಿತಳಾಗಿ ಬೆಳೆಯುತ್ತಿದ್ದುದನ್ನು ಕಂಡು,  ಅದು ತಮ್ಮ ಗಂಡು ಮಕ್ಕಳಿಗೆ ಅವಮಾನವೆಂದು ಬಗೆದ ಜನ ಈ ಹುಡುಗಿ ಮನೆ ಸೇರಲು ಕಾರಣರಾದರು.  ಆದರೆ ಸುನಂದಮ್ಮನವರ ತಾಯಿ ನಾಗಮ್ಮ ಛಾತಿಯ ಮಹಿಳೆ.  ಶಾಲೆ ಮಗಳನ್ನು ಮನೆಗೆ ಕಳಿಸಿದರೆ ಮಗಳಿಗೆಂದು ಶಾಲೆಯನ್ನೇ ಮನೆಗೆ ತರಿಸಿ ಪಾಠ ಹೇಳಿಸಿ ಲೋಯರ್ ಸೆಕೆಂಡರಿ ಪಾಸು ಮಾಡಿಸಿ ಮಗಳ ಅಕ್ಷರ ಲೋಕದ ಪ್ರವೇಶ ಸುಗಮವಾಗುವಂತೆ ಮಾಡಿದರು.  ತಾಯಿಯ ಒತ್ತಾಸೆಯಿಂದ ಮುಂದೆ ಇಂಟರ್ ಮೀಡಿಯಟ್‍ವರೆಗೂ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತ ಬಂದ ಸುನಂದಮ್ಮನವರು  ವಾಣಿ ವಿಲಾಸ ಕಾಲೇಜಿನಲ್ಲಿ ಕಾಲೇಜಿಗೆ ಮೊದಲಿಗರಾಗಿ ಉತ್ತೀರ್ಣರಾದರು.

ಸುನಂದಮ್ಮ ತನ್ನ ಒಂಭತ್ತನೆಯ ವಯಸ್ಸಿನಲ್ಲಿಯೇ ‘ಹೂವು’ ಎಂಬೊಂದು ಕವನ ಬರೆದರು.

ಹೂವೇ ಹೂವೇ ನೀನೆಲ್ಲಿರುವೆ?
ನಾರಿಯ ತುರುಬೊಳೂ ಇರುವೆ
ಮಾರಪಿತನ ಕೊರೊಳೊಳೂ ಇರುವೆ
ಯಾರು ನೀನೆಂಬುದನು ನಾನರಿತಿರುವೆ

ಬಾಲಸಹಜ ಮುಗ್ಧತೆಯಿಂದ ಮೂಡಿಬಂದ ಈ ಕವನ ಸುನಂದಮ್ಮನವರನ್ನು ಕನ್ನಡ ಸಾಹಿತ್ಯದಲ್ಲಿ ಬರಹಗಾರ್ತಿಯಾಗಿ ದಾಖಲಿಸಿದ ಕೀರ್ತಿಗೆ ಪಾತ್ರವಾಗಿದೆ.  ಅಶ್ವತ್ಥನಾರಾಯಣರು ಸಂಪಾದಿಸಿದ ‘ಮಕ್ಕಳ ಪುಸ್ತಕ’ದಲ್ಲಿ ಇದು ಅಚ್ಚಾದಾಗ ಈ ಬಾಲೆಗೆ ಹಿರಿ ಹಿಗ್ಗು.  

ಸುನಂದಮ್ಮನವರ ತಾತ ಡಿ. ವೆಂಕಟರಾಮಯ್ಯನವರು ಆಗಿನ ಕಾಲದಲ್ಲಿ ವಿದ್ಯಾಧಿಕಾರಿಗಳಾಗಿದ್ದವರು.  ತಾತನ ವಿದ್ವತ್ ಪ್ರೀತಿ, ತಂದೆ ತಾಯಿಯವರ ಓದುವ ಹವ್ಯಾಸ, ವಿವಿಧ ಲೈಬ್ರರಿಗಳಿಗೆ ಮೆಂಬರಾಗಿ ಪುಸ್ತಕ ತಂದು ಓದಲು ಪ್ರೋತ್ಸಾಹಿಸುತ್ತಿದ್ದ ತಂದೆಯ ಒತ್ತಾಸೆ... ಬಾಲಕಿಯ ಆಸಕ್ತಿ... ಎಲ್ಲದರ ಪರಿಣಾಮವಾಗಿ ಹದಿನಾಲ್ಕನೇ ವಯಸ್ಸಿನ ವೇಳೆಗೆ ಸ್ಕಾಟ್, ಡಿಕನ್ಸ್, ವೇಲ್ಸ್, ರೈಡರ್ ಹ್ಯಾಗರ್ಡ್, ಜೇನ್ ಆಸ್ಟಿನ್, ಎಡ್ಗರ್ ವಾಲೇಸ್ ಮುಂತಾದವರ ಕೃತಿಗಳಲ್ಲದೆ  ಕನ್ನಡದ ಗಳಗನಾಥ, ಬಿ.ಪಿ. ಕಾಳೆ,  ಬಿ. ವೆಂಕಟಾಚಾರ್ ಮುಂತಾದವರ ಎಲ್ಲ ಕೃತಿಗಳನ್ನೂ ಓದಿ ಮುಗಿಸಿದ್ದರು.  ಹನ್ನೆರಡರ ಹರೆಯದಲ್ಲೇ ಕಥೆ ಬರೆಯತೊಡಗಿದರು.   ಪರಿಣಾಮ ದಾವಣಗೆರೆಯಲ್ಲಿ ಓದುತ್ತಿದ್ದಾಗಲೇ ದಿನಪತ್ರಿಕೆಗಳಾದ ತಾಯಿನಾಡು, ವಿಶ್ವಕರ್ನಾಟಕ, ನವಜೀವನಗಳ ವಾರದ ಪುರವಣಿಯಲ್ಲಿ ಸುನಂದಮ್ಮ ಕಥೆ ಬರೆಯತೊಡಗಿದರು.  ಹೆಸರಿನ ಕೆಳಗೆ ಹನ್ನೆರಡು ವಯಸ್ಸು ಎಂದು ಕೂಡಾ ಪ್ರಕಟವಾಗುತ್ತಿತ್ತಂತೆ.  

ಹನ್ನೊಂದು ವರ್ಷ ವಯಸ್ಸಿನ ಸುನಂದಮ್ಮ ಅವರಿಗೆ ಅಜ್ಜಿಯ ತಮ್ಮನ ಮಗ ಇಂಟರ್ ಮೀಡಿಯಟ್ ಓದುತ್ತಿದ್ದ ಟಿ. ವೆಂಕಟನಾರಾಯಣಪ್ಪನವರೊಂದಿಗೆ ಮದುವೆಯಾಯಿತು. 

ಮದುವೆಯ ನಂತರವೂ ವಿದ್ಯಾಭ್ಯಾಸ ಮುಂದುವರೆಸುವ ಯೋಗ ಸುನಂದಮ್ಮನವರಿಗೆ ದೊರಕಿತು.  ತಂದೆ ಮ್ಯಾಜಿಸ್ಟ್ರೇಟ್ ಆಗಿದ್ದರಿಂದ ದಾವಣಗೆರೆಗೆ ಹೋದಾಗ ಅಲ್ಲೂ ಬಾಲಕರ ಪ್ರೌಢಶಾಲೆಗೇ ಪ್ರವೇಶ.  ಬೆಲ್ ಆಗುವ ತನಕ ಹೆಡ್ ಮಾಸ್ತರರ ಕೋಣೆಯಲ್ಲಿ ಮರೆಯಲ್ಲಿ ಕುಳಿತಿದ್ದು ಬೆಲ್ ಆದ ಮೇಲೆ ಕ್ಲಾಸಿನಲ್ಲಿ ಆ ಹುಡುಗಿಗೆಂದು ಹಾಕಿದ ಟೇಬಲ್ ಕುರ್ಚಿಯಲ್ಲಿ ಹೋಗಿ ಕೂರಬೇಕಿತ್ತಂತೆ.  ಹೈಸ್ಕೂಲು ಮೂರನೇ ವರ್ಷದಲ್ಲಿ ತಂದೆಗೆ ಬೆಂಗಳೂರಿಗೆ ವರ್ಗವಾಯಿತು.  ವಾಣಿವಿಲಾಸ್ ಇನ್ಸ್ಟಿಟ್ಯೂಟ್ನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಅತಿ ಹೆಚ್ಚಿನ ಅಂಕಗಳ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದರು.  ಇಂಟರ್ ಮೀಡಿಯಟ್ ಓದಿದಾಗ ಇಡೀ ಕಾಲೇಜಿಗೆ ಅವರೇ ಮೊದಲನೆಯವರಾಗಿ ತೇರ್ಗಡೆಯಾದರು.  ಮುಂದೆ ಮಹಾರಾಣಿ ಕಾಲೇಜು ಸ್ಥಾಪಿತವಾಗಿಲ್ಲದಿದ್ದ ಕಾರಣ ಮತ್ತು ಅವರ ಅತ್ತೆ ಮಾವ ಹುಡುಗರ ಕಾಲೇಜಿಗೆ ಸೇರಲು ಒಪ್ಪದಿದ್ದ  ಕಾರಣದಿಂದ ಸುನಂದಮ್ಮನವರ ಓದಿಗೆ ನಿಲುಗಡೆ ಬಂತು.  

ಪತಿ ವೆಂಕಟನಾರಾಯಣಪ್ಪನವರು ಈ ವೇಳೆಗೆ ಬಿ. ಎ ಮುಗಿಸಿ ಪೂನಾದಲ್ಲಿ ಎಲ್.ಎಲ್.ಬಿ ಓದಲು ಹೋದರು.  ಈ ಅವಧಿಯಲ್ಲಿ ಸುನಂದಮ್ಮ ಹಿಂದಿ ಕಲಿತು ಮೂರು ಪರೀಕ್ಷೆಗಳನ್ನು ಉನ್ನತ ದರ್ಜೆಯಲ್ಲಿ ಪಾಸು ಮಾಡಿದರು.  ಅಷ್ಟೇ ಅಲ್ಲ ಟೆನಿಸ್ ಆಡಿದರು, ಬ್ಯಾಡ್ಮಿಂಟನ್ ಆಡಿದರು.

1941ರಲ್ಲಿ ಬೆಂಗಳೂರಿನಲ್ಲಿ ಸಂಸಾರ ಆರಂಭಗೊಂಡಾಗ ಮತ್ತೆ ಸುನಂದಮ್ಮನವರ ಬರವಣಿಗೆ ವಿವಿಧ ಪತ್ರಿಕೆಗಳಲ್ಲಿ ಹೊಮ್ಮತೊಡಗಿತು.  ಆಗ ಪ್ರಚಲಿತವಿದ್ದ ಕಥಾವಳಿ, ಕಥೆಗಾರ ಮೊದಲಾದ ಮಾಸಪತ್ರಿಕೆಗಳಲ್ಲಿ ಅವರ ಕಥೆಗಳೂ, ಅನುವಾದ ಬರಹಗಳೂ ಪ್ರಕಟವಾದವು.

1942ರಲ್ಲಿ ಕನ್ನಡ ವಿನೋದ ಸಾಹಿತ್ಯಕ್ಕೆ ಒಂದು ವಿಶೇಷ ನೆಲೆಗಟ್ಟನ್ನು ಒದಗಿಸಿದ ಪತ್ರಿಕೆಯೊಂದು ಪ್ರಾರಂಭವಾಯ್ತು.  ಆ ಕಾಲಕ್ಕೆ ವಿನೋದ ಪ್ರಜ್ಞೆಯುಳ್ಳ ಲೇಖಕರೆಲ್ಲರ ಬರವಣಿಗೆಗೆ ಒಂದು ವೇದಿಕೆಯನ್ನು ಒದಗಿಸಿ ಒಂದು ವಿನೋದ ವಿಶ್ವವಿದ್ಯಾಲಯವೋ ಎಂಬಂತೆ ಅನೇಕ ಹಾಸ್ಯ ಲೇಖಕರನ್ನು ಸೃಷ್ಟಿಸಿದ ಪತ್ರಿಕೆ ಡಾ. ಶಿವರಾಂ ಅವರ ಕೊರವಂಜಿ.  ರಾಶಿಯವರ ಈ ಪತ್ರಿಕೆಯಿಂದ ಕನ್ನಡದಲ್ಲಿ ಹಾಸ್ಯಲೇಖಕರ ಒಂದು ದಂಡೇ ನಿರ್ಮಾಣವಾಯಿತು.  ಅದರಲ್ಲಿದ್ದ ಏಕೈಕ ಮಹಿಳಾ ಹಾಸ್ಯ ಸಾಹಿತಿ ಟಿ. ಸುನಂದಮ್ಮ.  ‘ನಾನ್ಕಾರಿಟ್ಟಿದ್ದು’ ಎಂಬ ಪ್ರಥಮ ನಗೆಲೇಖನ ಕೊರವಂಜಿಯಲ್ಲಿ ಪ್ರಕಟವಾದಾಗ ನಾ. ಕಸ್ತೂರಿ, ಜಿ. ಪಿ. ರಾಜರತ್ನಂ ಮತ್ತು ರಾಶಿ ಅವರಿಂದ ಸಿಕ್ಕ ಪ್ರಶಂಸೆ ಪ್ರೋತ್ಸಾಹಗಳು ಸುನಂದಮ್ಮನವರು ಮೊದಲ ಮಣೆಯನ್ನು ಹಾಸ್ಯ ಸಾಹಿತ್ಯಕ್ಕೇ ಹಾಕುವಂತೆ ಮಾಡಿದವು.  

1942ರಲ್ಲಿ ಮೊದಲುಗೊಂಡು ಕೊರವಂಜಿ ಜೀವಂತವಾಗಿರುವ 25 ವರ್ಷಗಳ ಕಾಲ ಸುನಂದಮ್ಮ ಅವ್ಯಾಹತವಾಗಿ ನಗೆಬರಹಗಳನ್ನು ಬರೆದರು.  ಅವರ ಕಲ್ಪನೆಯ ದಂಪತಿಗಳಾದ ‘ಮೈಲಾರಯ್ಯ - ಸರಸು’ ಕನ್ನಡದ ಹಾಸ್ಯಪ್ರಿಯರನ್ನು ತಲುಪಿ ಕಚಗುಳಿ ಇಟ್ಟು ನಗಿಸಿದರು, ಚುಚ್ಚಿದರು, ತಿದ್ದಿದರು.  ತಮ್ಮ ಈ ಪಾತ್ರಗಳಿಂದಾಗಿ ಸುನಂದಮ್ಮನವರಿಗೆ ಅಪಾರ ಜನಪ್ರಿಯತೆಯೂ ಪ್ರಾಪ್ತವಾಯಿತು.  ಆಯಾ ಕಾಲದ ಪ್ರಚಲಿತ ವಿದ್ಯಮಾನಗಳೇ ಅವರ ಹಾಸ್ಯ ಬರಹಗಳ ವಸ್ತುವಾಗಿರುತ್ತಿದ್ದು, ಜನ ಫಕ್ಕನೆ ಅವನ್ನು ಗುರುತಿಸಿ ನಗುತ್ತಿದ್ದರು.  

ಸುನಂದಮ್ಮನವರ ನಾಯಕಿ ಸರಸು ಭಾಷಣ ಮಾಡಿದಳು, ಸಾಹಿತ್ಯ ಪ್ರಚಾರ ನಡೆಸಿದಳು, ಪುಸ್ತಕ ಮಾರಾಟ ಮಾಡಿದಳು, ಬರ ಪರಿಹಾರ ನಿಧಿ ಶೇಖರಣೆಗೂ ಹೊರಟಳು.  ವಿದೇಶಿ ಅಳಿಯನ ದೀಪಾವಳಿ, ಬೇಟಿ ಸ್ಕ್ಯಾಮ್, ನೂರಾರು ಕೆಂದ್ರ ಬಿಂದುಗಳು, ನೂರಾರು ವಿನೋದ ಮಹಲುಗಳು ಸುನಂದನಮ್ಮನವರಿಂದ ನಿರ್ಮಾಣಗೊಂಡಿತು.  

1967ರಲ್ಲಿ ‘ಕೊರವಂಜಿ’ಯ ಪ್ರಕಟಣೆ ನಿಲುಗಡೆಯಾದಾಗ ಸುನಂದಮ್ಮ ತಮ್ಮ ಬರವಣಿಗೆಯ ದಿಕ್ಕನ್ನೇ ಬದಲಿಸಬೇಕೇನೋ ಅಂದುಕೊಂಡಿದ್ದರು.  ಆದರೆ ಅದೇ ಸಮಯಕ್ಕೆ ಪ್ರಾರಂಭವಾಗಿದ್ದ ಸುಧಾ, ಮಲ್ಲಿಗೆ, ಪ್ರಜಾಮತ.... ಮುಂತಾದ ಪತ್ರಿಕೆಗಳು ಸುನಂದಮ್ಮನವರ ಲೇಖನಗಳನ್ನು ಪ್ರಕಟಿಸತೊಡಗಿದವು.

ಕನ್ನಡದ ಎಲ್ಲ ಪತ್ರಿಕೆಗಳೂ ತಮಗೆ ಅವಕಾಶ ನೀಡಿದವು ಎಂದು ಕೃತಜ್ಞರಾಗಿದ್ದ ಸುನಂದಮ್ಮನವರಿಗೆ ಆಕಾಶವಾಣಿಯ ಜತೆಗೂ ಗಾಢವಾದ ನಂಟಿತ್ತು.  ಮೈಸೂರು, ಬೆಂಗಳೂರು ಆಕಾಶವಾಣಿಗಳು ಸುನಂದಮ್ಮನವರಿಂದ ಅನೇಕ ನಾಟಕ, ಭಾಷಣ, ಪ್ರಹಸನ, ಮಹಿಳಾ ಕಾರ್ಯಕ್ರಮಗಳನ್ನು ಬರೆಸಿವೆ.  ನೃತ್ಯ ರೂಪಕಗಳು, ಮಾಸ್ತಿ  ಅವರ ಕತೆಗಳ ರೇಡಿಯೋ ರೂಪಾಂತರ... ಇವೆಲ್ಲವನ್ನೂ ಆಕಾಶವಾಣಿಗಾಗಿ ಸುನಂದಮ್ಮನವರು ಬರೆದಿದ್ದರು.

ಹಾಸ್ಯಸಾಹಿತಿ ಎಂದೇ ಗುರುತಿಸಲ್ಪಡುತ್ತಿದ್ದ ಸುನಂದಮ್ಮನವರು ಗಂಭೀರ ಸಾಹಿತ್ಯದಲ್ಲೂ ಕೈಯಾಡಿಸಿದ್ದಾರೆ.  ದ್ರೌಪದಿ, ಸೀತಾ, ಮಹಿಷಾಸುರ ಮರ್ಧಿನಿ ಮುಂತಾದ ರೇಡಿಯೋ ರೂಪಕಗಳು ‘ಕಣ್ಣೀರು’ ಹರಿಸುವಂತ ನಾಟಕಗಳು. ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ‘ಆಧುನಿಕ ನಗೆ ಸಾಹಿತ್ಯ’, ‘ಡಾ. ಎಂ. ಶಿವರಾಂ’ ಹೀಗೆ ಹಲವಾರು ಕೃತಿಗಳು ಮತ್ತು ನಾಟಕಗಳನ್ನು ಅವರು ರಚಿಸಿದ್ದಾರೆ.

ಆರೇಳು ದಶಕಗಳಿಗೂ ಹೆಚ್ಚು ಕನ್ನಡ ಸಾಹಿತ್ಯ ಸೇವೆಗೈದಿರುವ ಸುನಂದಮ್ಮನರ ಸಮಗ್ರ ಹಾಸ್ಯ ಸಾಹಿತ್ಯ ಕೂಡಾ ಹೊರಬಂದಿದೆ.  “ನನ್ನ ಕನ್ನಡಬಾಂಧವರನ್ನು ನಗಿಸಿದ್ದೇನೆ.  ಅವರ ಮಾನಸಿಕ ದೈಹಿಕ ಬಿಗುವನ್ನು ಹಗುರಾಗಿಸಿದ್ದೇನೆ.  ಪರಿಣಾಮವಾಗಿ ಬೆಲೆ ಕಟ್ಟಲಾಗದ ಅವರ ಪ್ರೀತಿ ವಿಶ್ವಾಸ ಸಂಪಾದಿಸಿಕೊಂಡಿದ್ದೇನೆ” ಎನ್ನುತ್ತಿದ್ದ ಸುನಂದಮ್ಮನವರ ಕನ್ನಡದ ಕುರಿತಾದ ಪ್ರೀತಿ, ಮಮತೆ ಹುಟ್ಟಿಸುವಂತದ್ದು. 

ಸಾಹಿತಿಯಾಗಿ ಸಿಹಿಯೇ ಹೆಚ್ಚಾಗಿ ಸಿಕ್ಕಿರುವುದು ನನ್ನ ಸೌಭಾಗ್ಯ. ಹವ್ಯಾಸವಾಗಿ ಆರಂಭಿಸಿದ ಕಾಯಕ ನಿರೀಕ್ಷೆಗೂ ಮೀರಿದ ಫಲ ಕೊಟ್ಟಿದೆ ಎನ್ನುತ್ತಿದ್ದ ಸುನಂದಮ್ಮ ಅವರಿಗೆ ಸಾಹಿತಿಯೊಬ್ಬರಿಗೆ ಸಲ್ಲಬಹುದಾದ ಎಲ್ಲ ರೀತಿಯ ಪ್ರಶಸ್ತಿಗಳೂ ಸಂದ ತೃಪ್ತಿಯಿತ್ತು.  ಟಿ. ಸುನಂದಮ್ಮನವರು ಲೇಖಕಿಯರ ಸಂಘದ ಪ್ರಥಮ ಅಧ್ಯಕ್ಷರಾಗಿದ್ದರು.

ಹೀಗೆ ಕನ್ನಡಿಗರನ್ನು ಅಸ್ಥೆಯಿಂದ ಕಂಡಿದ್ದ ಸುನಂದಮ್ಮನವರು ಸುನಂದಮ್ಮನವರು ತಮ್ಮ 88ನೆಯ ವಯಸ್ಸಿನಲ್ಲಿ 2006ರ ಜನವರಿ 27ರಂದು ನಿಧನರಾದರು.  ಕನ್ನಡ ಹೃನ್ಮನಗಳನ್ನು ಮುದದಿಂದ ಮಿಡಿದ ರೀತಿ ಅವರನ್ನು ನಿತ್ಯ ಸ್ಮರಣೀಯರನ್ನಾಗಿಸಿದೆ.

(ಆಧಾರ:  ಈ ಲೇಖನ ಭುವನೇಶ್ವರಿ ಹೆಗ್ಗಡೆ Bhuvaneshwari Hegde ಅವರು ಬರೆದ ಸುನಂದಮ್ಮನವರ ಲೇಖನವನ್ನು ಗೌರವ  ಕೃತಜ್ಞತೆಗಳೊಂದಿಗೆ ಆಧರಿಸಿದೆ).

On the birth anniversary of our writer T. Sunandamma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ