ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಕೆಮಾನಿ


 ಕಾಕೆಮಾನಿ 


ಕಾಕೆಮಾನಿ ಎಂದು ಪ್ರಸಿದ್ದರಾದ ಬಿ. ಡಿ. ಸುಬ್ಬಯ್ಯನವರು, ಹದಿಹರೆಯದಲ್ಲಿ ಹುಲಿ ಬೇಟೆಗಿಳಿದು, ಬೇಟೆಯ ತಮ್ಮ ರೋಮಾಂಚಕಾರಿ ಅನುಭವವನ್ನು ಓದುಗರ ಎದೆ ಝೆಲ್ಲೆನ್ನುವಂತೆ ನಿರೂಪಿಸಿದವರು.

ಸುಬ್ಬಯ್ಯನವರು ವಿರಾಜಪೇಟೆ ತಾಲ್ಲೂಕಿನ ಬೆಸಗೂರು ಗ್ರಾಮದ ಬಾಚಮಾಡ ಮನೆತನದ ‘ಕಾಕೆಮಾನಿ’ ಎಂಬ ಸ್ಥಳದಲ್ಲಿ 1927ರ ಜನವರಿ 27ರಂದು ಜನಿಸಿದರು. ತಂದೆ ದೇವಯ್ಯ, ತಾಯಿ ಮಾಚವ್ವ. ತಾವು ಹುಟ್ಟಿದ ಸ್ಥಳವಾದ ಕಾಕೆಮಾನಿಯನ್ನು ತಮ್ಮ ಕಾವ್ಯನಾಮವನ್ನಾಗಿ ಬಳಸಿದರು. 

ಕಾಕೆಮಾನಿ ಅವರು ಡ್ರಾಯಿಂಗ್ ಮಾಸ್ತರಾಗಿ ಕೆಲಕಾಲ ಉದ್ಯೋಗಕ್ಕಾಗಿ ಸೇರಿದ್ದು ಪೊನ್ನಂಪೇಟೆಯ ಹೈಸ್ಕೂಲಿನಲ್ಲಿ.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅರಣ್ಯ ಇಲಾಖೆಯನ್ನು ಸೇರಿದ ನಂತರ ರೇಂಜರ್ ಆಗಿ ಬಡ್ತಿನೀಡಿ ಇವರನ್ನು ಅಂಡಮಾನಿಗೆ ಕಳುಹಿಸಿದರು. ಅಲ್ಲಿನ ತಮ್ಮ ಅನುಭವಗಳಲ್ಲಿ ಕಂಡುಬಂದ ‘ಜರುವಾ’ ಮತ್ತು ‘ಸಾಂಪೆನ್ಸ್’ ಆದಿವಾಸಿಗಳ ಬದುಕನ್ನು ತಮ್ಮ  ‘ಬಿಲ್ಲು – ಬಾಣ’ ಗಳ ಕಥಾ ಸಂಕಲನದಲ್ಲಿ ಮೈನವಿರೇಳಿಸುವಂತೆ ಚಿತ್ರಿಸಿದರು.

ಕಾಕೆಮಾನಿಯವರು ಕೃತಿಗಳಲ್ಲಿ ‘ಬೇಟೆ ನೆನಪು’, ‘ಕವನ ಗುಚ್ಛ’, ‘ತುಳುನಾಡಿನ ವೀರನಾದ ಕೋಟಿ ಚನ್ನಯ್ಯ’; ಕಥಾಸಂಕಲನ ‘ಬಿಲ್ಲು – ಬಾಣ’; 'ಧ್ರುವ’, ‘ಪಣಿಯ ಸಮಾಜ ಪರಿಚಯ',  ‘ಕೊಡಗಿನ ಇತಿಹಾಸ ಪುಟಗಳಿಂದ’ ಮುಂತಾದವು ಸೇರಿವೆ. 1978-79ರಲ್ಲಿ ಕೊಡಗು ಪತ್ರಿಕೆಯ ಸಂಪಾದಕರಾಗಿಯೂ ಕಾರ‍್ಯನಿರ್ವಹಿಸಿದರು.

ಕಾಕೆಮಾನಿ ಅವರ 'ಬೇಟೆ ನೆನಪು’ ಕೃತಿಯನ್ನು 2006ರಲ್ಲಿ ಸುವರ್ಣ ಕರ್ನಾಟಕ ಸಂದರ್ಭಕ್ಕಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮರು ಮುದ್ರಣ ಮಾಡಿದೆ. ಮಡಿಕೇರಿಯಲ್ಲಿದ್ದ ‘ಈಶ್ ಮಿತ್ರ ಮಂಡಳಿ’ ಎಂಬ ನಾಟಕ ಕಂಪನಿಯು ಪ್ರದರ್ಶಿಸುತ್ತಿದ್ದ ಹಲವಾರು ನಾಟಕಗಳಲ್ಲಿ ಇವರು ಪಾತ್ರವಹಿಸಿದ್ದರು. ಕಾಕೆಮಾನಿಯವರು ಹಲವಾರು ಕತೆಗಳನ್ನು ಕೊಡವ ಭಾಷೆಯಲ್ಲಿಯೆ ಬರೆದಿದ್ದು ಅವುಗಳು ಕೇರೂ ಪಾಂಬಾಚಿ (ಹಗ್ಗವೂ ಹಾವಾಯಿತು), ಆಕಲ್ ಎಣ್ಣಿನ ಕಥೆ (ಆ ಕಲ್ಲು ಹೇಳಿದ ಕಥೆ), ಪೊಂದೇನ್ ಪಡೆ ಪೊತ್ತದ್ (ಹೆಜ್ಜೇನ ಧಾಳಿ), ಮಿತ್ರ ದ್ರೋಹ, ಚತ್ತ್ ಬದ್‌ಕ್ ನಾವೆಯ (ಸತ್ತು ಬದುಕಿದ ಆನೆಗಳು), ಕಾಂಗತ ಕೈರ ಕೈವಾಡ (ಕಾಣದ ಕೈಯ ಕೈವಾಡ), ಮದಿಚಾನೆರ ಪೋಕ್ಂಗಾಲ್ (ಮದಿಸಿದ ಆನೆಯ ಕೊನೆಗಾಲ), ಒಳ ಜಗಳ ಮುಂತಾದವು ಸೇರಿವೆ.

B. D. Subbaiah popularly known as Kaakemani

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ