ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಫುಲ್ಲಚಂದ್ರ ರೇ


ಪ್ರಫುಲ್ಲಚಂದ್ರ ರೇ


ಪ್ರಫುಲ್ಲಚಂದ್ರ ರೇ ಭಾರತದ ರಸಾಯನ ವಿಜ್ಞಾನದ ಪಿತಾಮಹರೆಂದು ಖ್ಯಾತರಾಗಿದ್ದಾರೆ.  ಇವರು ಭಾರತೀಯ ನೆಲದಲ್ಲೇ ಅನೇಕ ಔಷದಿಗಳ ತಯಾರಿಕೆಗೆ ಆರಂಭಕೊಟ್ಟ ಮಹಾನ್ ಸಂಶೋಧಕರು ಮತ್ತು ಕರ್ಮಯೋಗಿಗಳು.

ಪ್ರಫುಲ್ಲಚಂದ್ರ ರೇ ಭಾರತದಲ್ಲಿ ಆಧುನಿಕ ರಸಾಯನ ವಿಜ್ಞಾನದ ಸಂಶೋಧನೆಯನ್ನು ಆರಂಭಿಸಿ, ಅಭಿವರ್ಧಿಸಿ ಮೊದಲನೆಯ ಸಂಶೋಧನ ತಂಡ ರೂಪಿಸಿದ ವಿಜ್ಞಾನಿ. ಮರ್ಕ್ಯುರಸ್ ನೈಟ್ರೈಟ್ ಬಲು ಅಸ್ಥಿರ ಎಂಬ ಸಂಶಯದಿಂದ ಅದನ್ನು ತಯಾರಿಸುವ ವಿಧಾನದ ಅನ್ವೇಷಣೆಗೆ ಯಾರೂ ಪ್ರಯತ್ನಿಸಿರಲಿಲ್ಲ. ಆ ಬಗ್ಗೆ ಒಂದು ವಿಧಾನ ರೂಪಿಸಿ ಸ್ಥಿರ ಸ್ಫಟಿಕರೂಪೀ ಮರ್ಕ್ಯುರಸ್ ನೈಟ್ರೈಟನ್ನು ಮೊದಲು ಪಡೆದ (1896) ಖ್ಯಾತಿ ಇವರದು.   ಮರ್ಕ್ಯುರಸ್ ನೈಟ್ರೈಟ್‍ಜನ್ಯ ಸಂಯುಕ್ತಗಳು ಹಾಗೂ ಇತರ ನೈಟ್ರೈಟುಗಳಿಗೆ ಸಂಬಂಧಿಸಿದ ಅನೇಕ ಗಮನಾರ್ಹ ಸಂಶೋಧನೆಗಳನ್ನು ಇವರು ಮಾಡಿದರು.  ಹೀಗಾಗಿ ಪ್ರಸಿದ್ಧ ಬ್ರಿಟಿಷ್ ರಸಾಯನವಿಜ್ಞಾನಿ ಆರ್ಮ್‍ಸ್ಟ್ರಾಂಗ್ ಅವರು (1848-1937) ಪ್ರಫುಲ್ಲಚಂದ್ರ ರೇಯವರಿಗೆ ನೈಟ್ರೈಟುಗಳ ಪ್ರಭು ಎಂಬ ಅನ್ವರ್ಥನಾಮ ನೀಡಿದರು. 

ಭಾರತದಲ್ಲಿ ರಸಾಯನವಿಜ್ಞಾನ ಬೋಧನೆ ಮತ್ತು ಸಂಶೋಧನೆ ಅಭಿವರ್ಧಿಸಲು ದೇಶೀಯ ರಾಸಾಯನಿಕ ಉದ್ಯಮಗಳು ಬೆಳೆಯಬೇಕು ಎಂದು ಪ್ರಫುಲ್ಲಚಂದ್ರ ರೇ ತರ್ಕಿಸಿದರು. ಆ ನಿಟ್ಟಿನಲ್ಲಿ ಅಗತ್ಯ ಶಿಕ್ಷಣ ಪಡೆದಿದ್ದ ಹಲವಾರು ಮಿತ್ರರನ್ನು ಕಲೆಹಾಕಿ ಮನೆಯಲ್ಲಿಯೇ ಕೆಲವು ರಾಸಾಯನಿಕ ಔಷಧಿಗಳನ್ನು ತಯಾರಿಸಿ ಮಾರುಕಟ್ಟೆಗೆ ಸರಬರಾಜು ಮಾಡತೊಡಗಿದರು. ಮುಂದೆ ಇದು ಬೆಂಗಾಲ್ ಕೆಮಿಕಲ್ ಅ್ಯಂಡ್ ಫಾರ್ಮಸ್ಯೂಟಿಕಲ್ ವರ್ಕ್ಸ್ ಎಂಬ ಪ್ರತಿಷ್ಠಿತ ಕಂಪನಿಯಾಯಿತು (1901). ಅಪಾರ ದೇಶಪ್ರೇಮ, ದೇಶದ ಚರಿತ್ರೆಯಲ್ಲಿ ಆಸಕ್ತಿ ಮತ್ತು ಸಂಸ್ಕೃತಜ್ಞಾನ  ಇವುಗಳಿಂದ ಪ್ರೇರಿತರಾಗಿ ರಸಾಯನ ವಿಜ್ಞಾನಕ್ಷೇತ್ರದಲ್ಲಿ ಪ್ರಾಚೀನ ಭಾರತೀಯರ ಸಾಧನೆಯ ಬಗ್ಗೆ ಇವರು ಮಾಡಿದ ಅಧ್ಯಯನ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿತು. ಈ ಅಧ್ಯಯನದ ಫಲಿತವೇ 'ದಿ ಹಿಸ್ಟರಿ ಆಫ್ ಹಿಂದು ಕೆಮಿಸ್ಟ್ರಿ' ಎಂಬ ಎರಡು ಸಂಪುಟಗಳ ಬೃಹದ್ಗ್ರಂಥ (1902).

ಪ್ರಫುಲ್ಲಚಂದ್ರ ರೇ ಬಾಂಗ್ಲಾ ದೇಶದ ಜೆಸ್ಸೂರ್ (ಈಗಿನ ಬುಲ್ನ) ಜಿಲ್ಲೆಯ ಕುಗ್ರಾಮ ರರೂಲಿಯಲ್ಲಿ 1861ರ ಆಗಸ್ಟ್ 2ರಂದು ಜನಿಸಿದರು. ಅಲ್ಲಿಯೇ ಅವರ ವಿದ್ಯಾಭ್ಯಾಸ ಆರಂಭಗೊಂಡಿತು. ಕುಟುಂಬ ಕೊಲ್ಕತ್ತಕ್ಕೆ ವಲಸೆ ಬಂದದ್ದರಿಂದ ಅಲ್ಲಿಯ ಹೇರ್ ಶಾಲೆಗೆ ದಾಖಲಾದರು (1870). ಶಾಲಾ ಪಠ್ಯಕ್ರಮ ಕಡೆಗಣಿಸಿ ಸದಾ ಭಾಷೆ ಮತ್ತು ಸಾಹಿತ್ಯ ಪುಸ್ತಕಗಳ ವಾಚನ ಅವರ ಅಭಿರುಚಿಯಾಯಿತು. ತೀವ್ರ ಆಮಶಂಕೆಗೆ ತುತ್ತಾಗಿ (1872) ಎರಡು ವರ್ಷಕಾಲ ವಿದ್ಯಾಭ್ಯಾಸ ಸ್ಥಗಿತಗೊಂಡಿತು. ಆ ಅವಧಿಯಲ್ಲಿ ಇಂಗ್ಲಿಷ್ ಮತ್ತು ಬಂಗಾಲಿ ಸಾಹಿತ್ಯದ ಅಧ್ಯಯನ ಮತ್ತು ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳ ಸ್ವಯಂಕಲಿಕೆ ಮಾಡಿದರು. ಮುಂದೆ ಬ್ರಹ್ಮಸಮಾಜದ ಕೇಶಬ್ ಚಂದ್ರಸೇನರ ಆಲ್ಬರ್ಟ್ ಶಾಲೆಗೆ ಸೇರ್ಪಡೆಯಾದರು (1874). ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವ ಸಾಮರ್ಥ್ಯವಿದ್ದರೂ ಅಂತಿಮ ಪರೀಕ್ಷೆಗೆ ಕೂರದೆಯೇ ತಮ್ಮ ಹಳ್ಳಿಗೆ ಹಿಂತಿರುಗಿ ಜನಸಾಮಾನ್ಯರ ಸುಖದುಃಖಗಳ ಸಹಭಾಗಿ ಆದರು. ಪುನಃ ಆಲ್ಬರ್ಟ್ ಶಾಲೆಗೆ ಸೇರಿ(1876) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದರು (1878). 

ಪ್ರಫುಲ್ಲಚಂದ್ರ ರೇ ಅವರು ಮುಂದೆ ಈಶ್ವರಚಂದ್ರ ವಿದ್ಯಾಸಾಗರರಿಂದ ಸ್ಥಾಪಿತವಾದ ವಿದ್ಯಾಸಾಗರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಅಲೆಕ್ಸಾಂಡರ್ ಪೆಡ್ಲರ್ ಎಂಬಾತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನೀಡುತ್ತಿದ್ದ ಉಪನ್ಯಾಸಗಳಿಂದ ಪ್ರಭಾವಿತರಾಗಿ ಕಾಲೇಜಿನಲ್ಲಿ ರಸಾಯನವಿಜ್ಞಾನ ಅಧ್ಯಯನಾರಂಭ ಮಾಡುವುದರ ಜೊತೆಗೆ ಹವ್ಯಾಸವಾಗಿ ಸಾಹಿತ್ಯಾಭ್ಯಾಸ ಮುಂದುವರಿಸಿದರು. 

ಪ್ರಫುಲ್ಲಚಂದ್ರ ರೇ ಅವರು ಸ್ನಾತಕಪೂರ್ವ ವಿದ್ಯಾರ್ಥಿಯಾಗಿದ್ದಾಗಲೇ ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ ಗಿಲ್‍ಕ್ರೈಸ್ಟ್ ಬಹುಮಾನ ಗಳಿಸಿದರು. ಅದರ ಫಲವಾಗಿ ದೊರೆತ ವಿದ್ಯಾರ್ಥಿವೇತನದ ನೆರವಿನಿಂದ ಎಡಿನ್‍ಬರೊ ವಿಶ್ವವಿದ್ಯಾಲಯದಲ್ಲಿ ಬಿ.ಎಸ್‍ಸಿ. ರಸಾಯನವಿಜ್ಞಾನ ವಿದ್ಯಾರ್ಥಿಯಾಗಿ ಸೇರ್ಪಡೆ ಆದರು (1882). ಆ ಅವಧಿಯಲ್ಲಿ “ಇನ್ನೆಲ್ಲೂ ಸಿಕ್ಕಲಾರದಷ್ಟು ವ್ಯಾಪಕ ಮಾಹಿತಿ” ಇರುವ ಪ್ರಬಂಧ ಎಂದು ಹೊಗಳಿಸಿಕೊಂಡ “ಇಂಡಿಯ-ಬಿಫೋರ್ ಅ್ಯಂಡ್ ಆಫ್ಟರ್ ದಿ ಮ್ಯೂಟಿನಿ” ಎಂಬ ಪ್ರಬಂಧ ಪ್ರಕಟಿಸಿದರು (1885). ಬಿ.ಎಸ್‍ಸಿ. ಸ್ನಾತಕ ಪದವಿ ಗಳಿಸಿ (1885) ತದನಂತರದ ಎರಡೇ ವರ್ಷಗಳಲ್ಲಿ ಡಿ. ಎಸ್‍ಸಿ. ಪದವಿಯನ್ನೂ ಪಡೆದರು. (1887). ಬಹುಮಾನವಾಗಿ ದೊರೆತ ಹೋಪ್ ವಿದ್ಯಾರ್ಥಿವೇತನದ ನೆರವಿನಿಂದ ಮತ್ತೊಂದು ವರ್ಷ ಸಂಶೋಧನೆ ಮುಂದುವರಿಸಿ, ಅನಂತರ ಭಾರತಕ್ಕೆ ಮರಳಿದರು.

ಪ್ರಫುಲ್ಲಚಂದ್ರ ರೇ ಅವರು ಮುಂದೆ ಕೊಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಸಾಯನವಿಜ್ಞಾನದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ವೃತ್ತಿಜೀವನಾರಂಭ ಮಾಡಿದರು (1889). ಕೊಲ್ಕತ್ತ ವಿಶ್ವವಿದ್ಯಾಲಯದ ಯೂನಿವರ್ಸಿಟಿ ವಿಜ್ಞಾನ ಕಾಲೇಜಿನ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು (1916). ಕಾಲೇಜಿನ ಮೊದಲ ಅಂತಸ್ತಿನ ಮೂಲೆಯ ಕೊಠಡಿಯಲ್ಲಿ ಆಜೀವ ಬ್ರಹ್ಮಚಾರಿ ಪ್ರಾಧ್ಯಾಪಕ ಪ್ರಫುಲ್ಲಚಂದ್ರರ ವಾಸ. 20 ವರ್ಷ ಸೇವಾನಂತರ ನಿವೃತ್ತರಾದರು (1936). ಮುಂದೆ ಪ್ರೊಫೆಸರ್ ಎಮೆರಿಟಸ್ ಆಗಿ ಅಲ್ಲಿಯೇ ವಾಸ.

ಪ್ರಫುಲ್ಲಚಂದ್ರ ರೇ ಅವರು ರಸಾಯನವಿಜ್ಞಾನದಲ್ಲಿ ಮಾಡಿದ ಸಾಧನೆಗಳಿಗಿಂತ ಮಿಗಿಲಾಗಿ ಭಾರತದಲ್ಲಿ ಅದರ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಸ್ಮರಣೀಯರೆನಿಸಿದರು.

ಪ್ರಫುಲ್ಲಚಂದ್ರ ರೇ ಅವರಿಗೆ ಕೊಲ್ಕತ್ತ, ಢಾಕಾ ಮತ್ತು ಡರ್‍ಹ್ಯಾಮ್ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟೊರೇಟ್; ಮ್ಯೂನಿಚ್ನ ಡಾಯಿಷ್ ಅಕಾಡೆಮಿ ಮತ್ತು ಲಂಡನ್ನಿನ ಕೆಮಿಕಲ್ ಸೊಸೈಟಿಯ ಗೌರವ ಸದಸ್ಯತ್ವ; ಬ್ರಿಟಿಷ್ ಆಡಳಿತ ವಿರೋಧಿಯಾಗಿದ್ದರೂ ಸರ್ ಬಿರುದು  (1912) ಮುಂತಾದ ಗೌರವಗಳು ಸಂದವು. ಉಪನ್ಯಾಸ ನೀಡಲು ಏಳು ಬಾರಿ ಯುರೋಪ್ ಪ್ರವಾಸ ಆಹ್ವಾನ ಬಂತು; 1920ರ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಆಯ್ಕೆ ಆದರು; ಇಂಡಿಯನ್ ಕೆಮಿಕಲ್ ಸೊಸೈಟಿಯ ಪ್ರಥಮ ಅಧ್ಯಕ್ಷರು (1935) ಎಂಬ ಗೌರವ ಸ್ಥಾನ ನೀಡಲಾಯಿತು.

ಪ್ರಫುಲ್ಲಚಂದ್ರ ರೇ ಅವರು ಲೇಖನ ಮತ್ತು ಭಾಷಣಗಳ ಮೂಲಕ ಅಸ್ಪೃಷ್ಯತೆ, ಜಾತಿ ಪದ್ಧತಿ, ಬಾಲ್ಯ ವಿವಾಹ, ವರದಕ್ಷಿಣೆ ಕೋಮುಭಾವನೆ ಮುಂತಾದ ಸಾಮಾಜಿಕ ಜಾಡ್ಯಗಳ ವಿರುದ್ಧ ಸಮರ ಸಾರಿದರು. ತರಗತಿಯಲ್ಲಿ ಬೋಧಿಸುವಾಗ ಈ ಸಾಮಾಜಿಕ ಪಿಡುಗುಗಳ ಪ್ರಸ್ತಾಪ ಬಂದರೆ ಅವನ್ನು ತೊಡೆದುಹಾಕಲು ಯುವಪೀಳಿಗೆಯನ್ನು ಪ್ರೇರಿಸಲು ಶ್ರಮ ಪಡುತ್ತಿದ್ದರು. 1922 ಮತ್ತು 1931ರಲ್ಲಿ ಬಂಗಾಲದ ಪ್ರವಾಹಪೀಡಿತರ ನೆರವಿಗೆ ಸ್ವಪ್ರೇರಣೆಯಿಂದ ಕಾರ್ಯೊನ್ಮುಖರಾದರು. ಇವು ಅವರ ತೀವ್ರ ಸಾಮಾಜಿಕ ಕಳಕಳಿಯ ಪ್ರತೀಕಗಳು. ಪ್ರವಾಹಗಳ ಡಾಕ್ಟರ್ ಎಂದು ಗಾಂಧೀಜಿ ಇವರನ್ನು ಸಂಬೋಧಿಸಿದ್ದೂ ಉಂಟು. ಗ್ರಾಮೀಣ ಭಾರತದ ಸಮಸ್ಯೆಗಳಿಗೆ ಚರಕ ಮತ್ತು ಖಾದಿಯೇ ಔಷಧಿ ಎಂದು ನಂಬಿ ನಿತ್ಯವೂ ಚರಕದಿಂದ ನೂಲು ತೆಗೆದು ಖಾದಿ ಧರಿಸಲಾರಭಿಸಿದ್ದರಿಂದ ಚರಕ ಋಷಿ ಎಂಬ ಅಡ್ಡಹೆಸರೂ ಇವರಿಗಿತ್ತು. ಸಂಪಾದಿಸಿದ ಪ್ರತಿ 1000ರೂದಲ್ಲಿ 800ನ್ನು ವಿಧವೆಯರ, ಅನಾಥರ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿಯೋ, ಉದ್ಯಮಗಳ ಸ್ಥಾಪನೆಗಾಗಿಯೋ ವ್ಯಯಿಸುತ್ತಿದ್ದ ಸಾಮಾಜಿಕ ಕಳಕಳಿಯ ಈ ರಸಾಯನವಿಜ್ಞಾನಿ ತಮ್ಮ 83ನೆಯ ವರ್ಷದಲ್ಲಿ 1944ರ ಜೂನ್ 16ರಂದು ನಿಧನರಾದರು. 

ಪ್ರಫುಲ್ಲಚಂದ್ರ ರೇ ಅಂತಹ ಮಹನೀಯರ ಪ್ರೇರಣೆಯ ದೆಸೆಯಿಂದ ಇಂದು ಭಾರತ ವಿಶ್ವದ ಕಾಲುಭಾಗಕ್ಕೂ ಹೆಚ್ಚು ಸಾಮಾನ್ಯ ಉಪಯೋಗಿ ಔಷಧಿಗಳನ್ನು ತಯಾರಿಸುವ ಸಾಮರ್ಥ್ಯಶಾಲಿ ಎನಿಸಿದೆ.
 
ಭಾರತದ ಹಿತ್ತಲಿನಿಂದ ಮೂಡಿದ ಗಿಡಮೂಲಿಕೆ ಔಷದಗಳು ಇಂದೂ ಸಮಸ್ತ ವಿಶ್ವಕ್ಕೆ ಒಂದು ರಕ್ಷೆಯ ಆಶಯವಾಗಿದೆ. ಪ್ರಫುಲ್ಲಚಂದ್ರ ರೇ ಅಂತಹ ಋಷಿಮುನಿಗಳು, ವಿಜ್ಞಾನಿಗಳು ಇಲ್ಲಿ ಬೆಳಗಿಸಿದ ಜ್ಯೋತಿಯನ್ನು ನಾವು ಪುನಃ ಪ್ರಜ್ವಲಿಸಬೇಕಾಗಿದೆ.

ಸ್ವಾಮಿ ವಿವೇಕಾನಂದರ ಮಾತು ನೆನಪಾಯ್ತು "ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ.  ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ.  ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.” 

On the birth anniversary of Acharya Sir Prafulla Chandra Ray, an eminent chemist, educationist, historian, industrialist and philanthropist.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ