ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀಲ್ ಆರ್ಮ್‍ ಸ್ಟ್ರಾಂಗ್



ನೀಲ್ ಆರ್ಮ್‍ ಸ್ಟ್ರಾಂಗ್

ನೀಲ್ ಆರ್ಮ್‍ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊಟ್ಟ ಮೊದಲ ಮಾನವವರಾಗಿ ಖ್ಯಾತರಾಗಿದ್ದಾರೆ. ಚಂದ್ರಲೋಕ ಯಾತ್ರೆಯನ್ನು ಮೂವರು ಖಗೋಳಯಾತ್ರಿಗಳು ಅಪೋಲೋ 11 ಎಂಬ ಗಗನ ನೌಕೆಯಲ್ಲಿ 1969ರ ಜುಲೈ ತಿಂಗಳಲ್ಲಿ ಯಶಸ್ವಿಯಾಗಿ ಪೂರೈಸಿದರು.  ನೀಲ್ ಎ ಆರ್ಮ್‌ಸ್ಟ್ರಾಂಗ್ ಅವರೊಂದಿಗಿದ್ದವರು ಎಡ್ವಿನ್ ಆಲ್ಡ್ರಿನ್ ಮತ್ತು ಮೈಕೇಲ್ ಕಾಲಿನ್ಸ್.  ಇವರಲ್ಲಿ ಮೊದಲ ಇಬ್ಬರು ಚಂದ್ರನ ಮೇಲಿಳಿದು ವಿಜ್ಞಾನಯುಗದಲ್ಲಿ ದಾಖಲೆಯೊಂದನ್ನು ಸ್ಥಾಪಿಸಿದರು.

ನೀಲ್ ಆರ್ಮ್‍ ಸ್ಟ್ರಾಂಗ್ 1930ರ ಆಗಸ್ಟ್ 5ರಂದು ಅಮೆರಿಕದ ಓಹಿಯೋನಲ್ಲಿನ ವಪಕೋನೆಟಾ ಎಂಬ ಒಂದು ಚಿಕ್ಕ ಪಟ್ಟಣದಲ್ಲಿ ಜನಿಸಿದರು.  ಚಿಕ್ಕಂದಿನಿಂದಲೇ ಭೂಮಿಯನ್ನು ಬಿಟ್ಟು ಗಾಳಿಯಲ್ಲಿ ತೇಲಬೇಕೆಂಬ ಹಂಬಲ ಇವರಲ್ಲಿತ್ತು. ಇದಲ್ಲದೆ ಇವರಿಗೆ ತಮ್ಮ 9ನೆಯ ವಯಸ್ಸಿನಿಂದಲೂ ನಾನಾಬಗೆಯ ವಿಮಾನಗಳನ್ನು ನೋಡಿ ಅದರಲ್ಲಿ ಕುಳಿತು ಹಾರಾಡಬೇಕೆಂಬ ಬಯಕೆಯಿತ್ತು. ವಿಮಾನ ನಡೆಸುವುದರಲ್ಲಿ ವಿಶೇಷ ಅಭಿರುಚಿಯನ್ನು ಹೊಂದಿದ್ದು, ಆ ವಿಭಾಗದಲ್ಲಿ ಶಿಕ್ಷಣ ಪಡೆದು ತಮ್ಮ 16ನೆಯ ವಯಸ್ಸಿನಲ್ಲೇ ವಿಮಾನಚಾಲಕನ ರಹದಾರಿಯನ್ನು ಪಡೆದರು. ಅಮೆರಿಕದ ಪಡೂರ್ಯ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷಗಳ ಅಧ್ಯಯನ ನಡೆಸಿ, ಏರೊನಾಟಿಕಲ್ ಎಂಜಿಯರಿಂಗ್ನಲ್ಲಿ ವಾಯುಯಾನ ಶಿಕ್ಷಣ ಪಡೆವ ಸಲುವಾಗಿ ಪೆನ್ಸ್‌ಕೊಲಕ್ಕೆ ಹೋದರು. ಶಿಕ್ಷಣ ಮುಗಿಸಿ ಪದವಿ ಗಳಿಸುವ ವೇಳೆಗೆ ಕೊರಿಯ ಯುದ್ಧ ಪ್ರಾರಂಭವಾಗಿತ್ತು.  

ಆರ್ಮ್‍ ಸ್ಟ್ರಾಂಗ್ ತಮ್ಮ 21ನೆಯ ವಯಸ್ಸಿನಲ್ಲೇ ಕೊರಿಯ ಯುದ್ಧದಲ್ಲಿ ಪ್ಯಾಂಥರ್ ಜೆಟ್ ವಿಮಾನಗಳನ್ನು ನಡೆಸಿದರು.  ಇವರು ನಡೆಸಿದ 78 ಕಾಂಬ್ಯಾಟ್ ವಿಮಾನಹಾರಾಟಗಳಿಗಾಗಿ ಪ್ರಶಂಸಾತ್ಮಕವಾಗಿ ಮೂರು ವಾಯುಪದಕಗಳನ್ನು ಗಳಿಸಿದರು. ಈ ಹಾರಾಟಗಳ ಸಮಯದಲ್ಲಾದ ಆಕಸ್ಮಿಕಗಳನ್ನು ಧೈರ್ಯದಿಂದ ಎದುರಿಸಿದರು. ಇದರಿಂದಾಗಿ ಅಮೆರಿಕ ನಾಸಾ ಸಂಸ್ಥೆಯಲ್ಲಿ ಇವರಿಗೆ ಏರೊನಾಟಿಕಲ್ ಸಂಶೋಧನಾ ಚಾಲಕರ ಹುದ್ದೆ ಲಭಿಸಿತು. 

ಪ್ರಪಂಚದಲ್ಲಿಯೇ ಅತ್ಯಧಿಕ ವೇಗದಿಂದ ಹಾರಾಟ ನಡೆಸುವ x-15 ಎಂಬ ರಾಕೆಟ್ ವಿಮಾನವನ್ನು ಆರ್ಮ್‍ ಸ್ಟ್ರಾಂಗ್ ಅನೇಕ ಸಲ ನಡೆಸಿದರು. 1962ರಲ್ಲಿ ಇವರು ನಡೆಸಿದ x-15 ಹಾರಾಟದಲ್ಲಿ ಅದು ಭೂಮಿಯಿಂದ ಸುಮಾರು 40 ಮೈಲುಗಳೆತ್ತರದವರೆಗೂ ಹೋಗಿ ಗಂಟೆಗೆ ಸುಮಾರು 4000 ಮೈಲಿ ವೇಗದಲ್ಲಿ ಹಾರಿತು. ಇದಲ್ಲದೆ F-100 , F-101,  F-102, F-104, B-47 ಮುಂತಾದ ಕಠಿಣ ತರಹದ ವಿಮಾನಗಳನ್ನೂ ಅವರು ನಡೆಸಿದರು. B-29 ಎಂಬ ಬೃಹತ್ ವಿಮಾನದಲ್ಲಿ ನೂರಕ್ಕೂ ಹೆಚ್ಚು ಸಲ ಹಾರಿದ್ದರು. 1966ರ ಮಾರ್ಚ್ನಲ್ಲಿ ಅಮೆರಿಕ ನಡೆಸಿದ ಜೆಮಿನಿ 8 ಅಂತರಿಕ್ಷ ನೌಕೆಯ ಪ್ರಧಾನ ಚಾಲಕರಾಗಿದ್ದರು. ಇವರ ಸಹಚಾಲಕರಾಗಿದ್ದ ಡೇವಿಡ್ ಸ್ಕಾಟ್ ಜೊತೆಗೆ ಭೂಕಕ್ಷೆಯಲ್ಲಿ (ಭೂಮಿಯಿಂದ ನೂರುಮೈಲುಗಳೆತ್ತರದಲ್ಲಿ) ಸಂಚರಿಸುತ್ತಿದ್ದ ಅಜೆನಾ ರಾಕೆಟ್ ಗುರಿವಾಹನವನ್ನು ಗುರುತಿಸಿ, ಮೊದಲಬಾರಿಗೆ ಕೂಡಿಕೆಯನ್ನು (ಡಾಕಿಂಗ್) ಯಶಸ್ವಿಯಾಗಿ ಸಾಧಿಸಿದರು. ದುರದೃಷ್ಟವಶಾತ್ ಜೆಟ್ನೂಕು ಯಂತ್ರದಲ್ಲಿ (ಜೆಟ್ ಥ್ರಸ್ಟರ್) ಕಂಡುಬಂದ ವಿದ್ಯುತ್ ದೋಷದಿಂದಾಗಿ, ಇವರು ನಡೆಸುತ್ತಿದ್ದ ವಾಹನ ಹತೋಟಿ ತಪ್ಪಿ, ಬೆಂಕಿ ಕಾರಿಕೊಂಡು ಗಿರಗಿರನೆ ಸುತ್ತತೊಡಗಿತು. ಇದರಿಂದಾಗಿ ಮೂರು ದಿವಸಗಳಿಗೆಂದು ಮೊದಲು ಗೊತ್ತುಪಡಿಸಿದ್ದ ಹಾರಾಟವನ್ನು ಮೊಟಕುಮಾಡಿ ಧರೆಗಿಳಿದರು. ಈ ಪರಿಸ್ಥಿತಿಯಲ್ಲಿ ಅವರ ಅದ್ಭುತ ಕೌಶಲ, ಸಮಯ ಸ್ಪೂರ್ತಿ ಪ್ರಕಟವಾದಂತಾಯಿತು. ಈ ಧೈರ್ಯಸಾಹಸ, ಸಮಯ ಪ್ರಜ್ಞೆಗಳಿಂದಾಗಿ ಇವರಿಗೆ ಅಮೆರಿಕದ ಅಂತರಿಕ್ಷಯಾನ ವಿಜ್ಞಾನದ ಸಂಸ್ಥೆಯ ಆಕ್ವೀವ್ ಛಾನ್ಯೂಟ್ ಬಹುಮಾನ ದೊರೆಯಿತು. 

1957ರಲ್ಲಿ ಸೋವಿಯತ್ ಯೂನಿಯನ್ ಸ್ಪುಟ್ನಿಕ್ 1 ಗಗನ ನೌಕೆಯನ್ನು ಚಂದ್ರನಲ್ಲಿ ಇಳಿಸುವ ಮೂಲಕ ಜಗತ್ತಿನಲ್ಲಿ ಸಂಚಲನ ಹುಟ್ಟಿಸಿತ್ತು. ಬಳಿಕ ಜಾನ್.ಎಫ್.ಕೆನಡಿ 1960ರಲ್ಲಿ ಚಂದ್ರನ ಮೇಲೆ ಮಾನವನನ್ನು ಇಳಿಸುವ ಯೋಜನೆಗೆ ಚಾಲನೆ ನೀಡಿದರು.

1969ರ ಜುಲೈ 18ರಂದು ಅಮೆರಿಕ ಹಾರಿಸಿದ ಅಪೊಲೊ 11 ಅಂತರಿಕ್ಷ ನೌಕೆಯಲ್ಲಿ ಎಡ್ವಿನ್ ಆಲ್ಡ್ರಿನ್ ಮತ್ತು ಮೈಕೇಲ್ ಕಾಲಿನ್ಸ್ ಅವರೊಂದಿಗೆ ಆರ್ಮ್ಸ್ಟ್ರಾಂಗ್ ಚಂದ್ರಲೋಕ ಪ್ರಯಾಣ ಮಾಡಿದರು. ಜುಲೈ 21ರಂದು ಚಂದ್ರನ ಮೇಲಿಳಿದು ವಿಶ್ವದ ಇತಿಹಾಸದಲ್ಲೇ ಒಂದು ಮಹತ್ಸಾಧನೆಯನ್ನು ಮಾಡಿ ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಿದರು. ಈ ಯಶಸ್ವೀ ಸಾಧನೆಗೋಸ್ಕರ ನೀಡಲಾದ ಗಾಲ್ಬರ್ಟ್ ಅಂತರ ರಾಷ್ಟ್ರೀಯ ವೈಮಾನಿಕ ಬಹುಮಾನದ ಒಬ್ಬ ಪಾಲುಗಾರರಾದರು.

ನಾಸಾದಲ್ಲಿ ಕೆಲಸ ಮಾಡುತ್ತಿದ್ದ ನೀಲ್ ಆರ್ಮ್ ಸ್ಟ್ರಾಂಗ್ 1971ರಲ್ಲಿ ನಿವೃತ್ತಿ ಪಡೆದು ಸಿನ್‍ಸಿನಾಟಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 1978ರ ನಂತರ ಉದ್ಯೋಗ ತ್ಯಜಿಸಿದರು.

ಚಂದಮಾಮನ ಕುರಿತಂತೆ ಇದ್ದ ಕಥೆ, ಊಹಾಪೋಹಗಳಿಗೆ ಕೊನೆ ಹಾಡಿದ ಆರ್ಮ್ ಸ್ಟ್ರಾಂಗ್ ಚಂದ್ರಯಾನದ ಕುರಿತು ಯಾವುದೇ ಅಹಂಕಾರ ಹೊಂದಿರದೆ ಅದನ್ನು ಸಹಜ ಘಟನೆ ಎಂಬುದಾಗಿ ಪರಿಗಣಿಸಿದ್ದರು ಎಂಬುದು ವಿಶೇಷ.

'ಚಂದ್ರನ ಮೇಲೆ ಇಂದು ಮಾನವ ಇಟ್ಟ ಈ ಸಣ್ಣ ಹೆಜ್ಜೆ ಮನುಕುಲದ ಪಾಲಿಗೆ ಮಹತ್ವದ ಹೆಜ್ಜೆ' ಎಂದು  1969ರಲ್ಲಿ ಚಂದ್ರನ ಮೇಲೆ ಮೊದಲ ಹೆಜ್ಜೆಯಿರಿಸಿದ ಸಂದರ್ಭದಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಉದ್ಘರಿಸಿದ್ದರು.

1969ರಲ್ಲಿ ಚಂದ್ರನಲ್ಲಿ ಇಳಿದ ಆರ್ಮ್‌ಸ್ಟ್ರಾಂಗ್ ಮತ್ತು ಅವರ ಸಹ ಯಾನಿ ಬಜ್ ಆಲ್ಡ್ರಿನ್ ಮೂರು ಗಂಟೆಗಳಷ್ಟು ಕಾಲ ಅಲ್ಲಿನ ಮಾದರಿ, ಛಾಯಾಚಿತ್ರ ಸಂಗ್ರಹಿಸಿದಲ್ಲದೆ ಪ್ರಯೋಗವನ್ನೂ ನಡೆಸಿದ್ದರು.

ನೀಲ್ ಆರ್ಮ್ ಸ್ಟ್ರಾಂಗ್ 2012 ವರ್ಷದ ಆಗಸ್ಟ್ 25ರಂದು ಈ ಲೋಕವನ್ನಗಲಿದರು.  ಬಹುತೇಕವಾಗಿ ಯಾವುದೇ ಪ್ರಚಾರ ಪ್ರಿಯತೆಗೆ ಬಲಿಬೀಳದೆ ಬದುಕನ್ನು ಸಹಜವಾಗಿ ಕರ್ಮಯೋಗಿಯಂತೆ ಬಾಳಿದ ಮಹತ್ವದ ವ್ಯಕ್ತಿ.

On the birth anniversary of Astronaut and aeronautical engineer Neil Alden Armstrong, first person to walk on the Moon.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ