ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಲಾಶ್ರೀ


ಮಾಲಾಶ್ರೀ

ಮಾಲಾಶ್ರೀ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ.

ಮಾಲಾಶ್ರೀ ಜನಿಸಿದ್ದು ಆಗಸ್ಟ್ 10ರಂದು. ಮಾಲಾಶ್ರೀ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಿದ ರೀತಿಯೇ ವಿಶೇಷವಾದದ್ದು.  ಡಾ. ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ನಾಯಕನಾಗಿ ಚಿತ್ರರಂಗಕ್ಕೆ ಬಂದ ‘ನಂಜುಂಡಿ ಕಲ್ಯಾಣ’ ಚಿತ್ರದಲ್ಲಿ ನಾಯಕನ ಪಾತ್ರ ಹೆಚ್ಚಿನ ಪೋಷಣೆ ಪಡೆದಿತ್ತಾದರೂ, ಉತ್ತಮ ಅಭಿನಯಕ್ಕೆ ದೊರೆತ ವಿಭಿನ್ನ ಭಾವಗಳಾದ ಅಹಂ, ಚೆಲ್ಲುತನ, ಕೆಲವಡೆ ಕತೆಯ ಓಘಕ್ಕೆ ತಕ್ಕ ಅಸಹಾಯಕತೆ, ಪ್ರೀತಿ, ಪ್ರೇಮ, ವಿವಶತೆ ಇತ್ಯಾದಿ ಎಲ್ಲಾ ಭಾವಗಳನ್ನೂ ತನ್ನ ಸುರದ್ರೂಪಿನ ಜೊತೆಗೆ ಅಂದಿನ ದಿನದಲ್ಲಿ ಸಮರ್ಥವಾಗಿ ಪ್ರತಿಬಿಂಬಿಸಿದ ಮಾಲಾಶ್ರೀ, ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಾಯಕರ ಸಮ ಸಮಕ್ಕೆ ದೊರೆತ ಜನಪ್ರಿಯತೆಗಳನ್ನು ಪಡೆದ ಅಪರೂಪದ ನಾಯಕನಟಿ.

‘ನಂಜುಂಡಿ ಕಲ್ಯಾಣ’, ‘ಗಜಪತಿಯ ಗರ್ವಭಂಗ’, ‘ಪೊಲೀಸನ ಹೆಂಡತಿ’ ಮುಂತಾದ ಚಿತ್ರಗಳು ಅಂದಿನ ದಿನದಲ್ಲಿ ಜನಪ್ರಿಯತೆ ಮತ್ತು ಪ್ರತಿಭೆಯ ಸಮರ್ಥ ಅಭಿವ್ಯಕ್ತಿಗಳೆರಡೂ ದೃಷ್ಟಿಯಿಂದ ಮಾಲಾಶ್ರೀ ಅವರನ್ನು, ಕನ್ನಡ ಚಿತ್ರರಂಗದಲ್ಲಿ ಪ್ರಮುಖರನ್ನಾಗಿಸಿತು.  ಅವರ ಮುಂದಿನ ಹಲವಾರು ಚಿತ್ರಗಳು ಕೂಡ ಒಂದರ ಹಿಂದೆ ಒಂದು ನಿರಂತರವಾಗಿ ಜನಪ್ರಿಯಗೊಂಡವು.

ಹಿಂದೆ ಕನ್ನಡ ಚಿತ್ರರಂಗದಲ್ಲಿ ‘ಸಂಪತ್ತಿಗೆ ಸವಾಲ್’, ‘ಗಲಾಟೆ ಸಂಸಾರ’ ಮುಂತಾದ ಚಿತ್ರಗಳಲ್ಲಿ ಒಂದಿಷ್ಟು ಗಡಸು – ಮೆದು ಭಾವಗಳ ವಿಭಿನ್ನ ಅಭಿವ್ಯಕ್ತಿಯನ್ನು  ಸಮರ್ಥವಾಗಿ ಬಿಂಬಿಸುತ್ತಿದ್ದ ಮಂಜುಳಾ ಅವರ ನಂತರದಲ್ಲಿ, ಮಾಲಾಶ್ರೀ ಅವರು ಸಹಾ ಇಂತಹ ಹಾದಿಯಲ್ಲಿ ಯಶಸ್ಸು ಕಂಡದ್ದು ಒಂದು ವಿಶೇಷ.  

ಮಾಲಾಶ್ರೀ ಅವರು ಕೇವಲ ನಾಯಕಿ ಪ್ರಧಾನ ಗಡಸು ಪಾತ್ರಗಳೇ ಅಲ್ಲದೆ ಭಾವಪ್ರಧಾನ ಪಾತ್ರಗಳಾದ ಬೆಳ್ಳಿ ಕಾಲುಂಗುರ, ಮನ ಮೆಚ್ಚಿದ ಸೊಸೆ, ಹೃದಯ ಹಾಡಿತು, ರಾಮಾಚಾರಿ; ಹಾಸ್ಯ ಪಾತ್ರಗಳಾದ ರೆಡಿಮೇಡ್ ಗಂಡ, ಹಳ್ಳಿ ರಂಭೆ ಬೆಳ್ಳಿ ರಂಭೆ, ಮಾಲಾಶ್ರೀ ಮಾಮಾಶ್ರೀ, ಕನಸಿನ ರಾಣಿ; ಮಿಶ್ರ ಪಾತ್ರಗಳಾದ ರಾಣಿ ಮಹಾರಾಣಿ  ಮುಂತಾದ ಚಿತ್ರಗಳಲ್ಲೂ ಜನಮನಗೆದ್ದು ವೈವಿಧ್ಯತೆ ಮೂಡಿಸಿದ್ದರೆನ್ನುವುದು ಗಮನಾರ್ಹವಾದದ್ದು.  ಮೇಲೆ ಹೆಸರಿಸಿದ ‘ಬೆಳ್ಳಿ ಕಾಲುಂಗುರ’, ‘ರಾಮಾಚಾರಿ’, ‘ಹೃದಯ ಹಾಡಿತು’ ಚಿತ್ರಗಳಲ್ಲಂತೂ ಅವರ ಸುಂದರ ಅಭಿನಯ ಸ್ಮರಣೀಯವಾಗಿದ್ದು, ಅವು  ಎಲ್ಲ ವರ್ಗದ ಪ್ರೇಕ್ಷಕರ ಜೊತೆ ಜೊತೆಗೆ  ವಿಮರ್ಶಕರ ಮೆಚ್ಚುಗೆಯನ್ನೂ ಆಕರ್ಷಿಸಿತ್ತು.

ಮುಂದೆ ಅವರು ತೆಲುಗಿನ ವಿಜಯಶಾಂತಿ  ಆವರಂತೆ ನ್ಯಾಯ ಒದಗಿಸಲು ಏಕಾಂಗಿಯಾಗಿ ಹೋರಾಡುವ ಹಲವಾರು ಡಿಶುಂ ಡಿಶುಂ ಚಿತ್ರಗಳಿಗೆ, ಚಿತ್ರರಂಗದಲ್ಲಿ  ಬ್ಯುಸಿಯಾಗಿದ್ದಾಗ ಮಾತ್ರವಲ್ಲದೆ  ಮನೆಯಲ್ಲಿದ್ದಾಗಲೂ ಆಗಾಗ ಬಂದು ಯೂನಿಫಾರಂ ಹಾಕಿ ಗೆದ್ದವರು.   2015-16 ಸಾಲಿನ  ಕರ್ನಾಟಕ  ರಾಜ್ಯ ಪ್ರಶಸ್ತಿಗಳಲ್ಲಿ  ‘ಗಂಗಾ’  ಚಿತ್ರಕ್ಕಾಗಿ  ಅವರು  ಶ್ರೇಷ್ಠ  ನಟಿ ಪ್ರಶಸ್ತಿ ಸಹಾ  ಗಳಿಸಿದ್ದರು.  

ಕನ್ನಡ ಚಲನಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ವಾತಾವರಣದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿ ವಿಭಿನ್ನ ಪಾತ್ರಗಳನ್ನು  ನಿರ್ವಹಿಸಿದ ಮಾಲಾಶ್ರೀ ಖಂಡಿತವಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಮುಖವಾಗಿ ಜನಮನ ಗೆದ್ದವರ ಪಟ್ಟಿಯಲ್ಲಿ ನೆನಪಿನಲ್ಲುಳಿಯುತ್ತಾರೆ.  ಕನ್ನಡದಲ್ಲಿ ಮಾತ್ರವಲ್ಲದೆ ಹಲವಾರು ತೆಲುಗು ಮತ್ತು ಒಂದೆರಡು ಮಲಯಾಳಂ, ತಮಿಳು ಚಿತ್ರಗಳಲ್ಲೂ ಮಾಲಾಶ್ರೀ ಇಣುಕಿದ್ದರು

On the birth day of our actress Malashri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ