ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ವೆಂಕಟಾಚಾರ್ಯ


 ಬಿ. ವೆಂಕಟಾಚಾರ್ಯ


ಬಿ. ವೆಂಕಟಾಚಾರ್ಯರು ಕನ್ನಡ ಕಾದಂಬರಿಗಳ ಪಿತಾಮಹರು.  ಈಗ ಕನ್ನಡದಲ್ಲಿ ಸೊಗಸಾದ ಕಥೆಗಳ ಪುಸ್ತಕಗಳಿವೆ, ಕಾದಂಬರಿಗಳಿವೆ. ಓದಿ ಸಂತೋಷ ಪಡುತ್ತೇವೆ. ಆದರೆ ಒಂದು ಕಾಲ ಇತ್ತು, ಆಗ ಕನ್ನಡದಲ್ಲಿ ಕಾದಂಬರಿಗಳೇ ಇರಲಿಲ್ಲ. ಅಂತಹ ಕಾಲದಲ್ಲಿ ಕನ್ನಡಿಗರಿಗೆ ಕಾದಂಬರಿಗಳನ್ನು ಕೊಟ್ಟವರು ಬಿ.ವೆಂಕಟಾಚಾರ್ಯರು.

ವೆಂಕಟಾಚಾರ್ಯರ ಸಾಹಿತ್ಯದ ಸೇವೆಯು ಆರಂಭವಾದದ್ದು ಹೀಗೆ - ವೆಂಕಟಾಚಾರ್ಯರು ಕಲ್ಕತ್ತೆಯಿಂದ ಔಷಧಿಗಳನ್ನು ತರಿಸಿದರು; ಕಳುಹಿಸಿದವರು ಆ ಔಷಧಿಗಳನ್ನು ಬಂಗಾಳಿ ಪತ್ರಿಕೆಗಳ ಹಾಳೆಗಳಲ್ಲಿ ಸುತ್ತಿದ್ದರು. ವೆಂಕಟಾಚಾರ್ಯರು ಹಾಳೆಗಳನ್ನು ಬಹು ಆಸಕ್ತಿಯಿಂದ ನೋಡಿದರು. ‘‘ನನಗೂ ಈ ಭಾಷೆಯನ್ನು ಕಲಿಯಬೇಕು, ಓದಬೇಕು ಅಂತ ಅನ್ನಿಸುತ್ತದೆ’’ ಎಂದು, ನಾರಾಯಣ ಅಯ್ಯಂಗಾರ್ ಎಂಬುವರಲ್ಲಿ ಹೇಳಿಕೊಂಡರು.  ನಾರಾಯಣ ಅಯ್ಯಂಗಾರ್ ಅವರ ಬಂಧುಗಳು, ಅಲ್ಲೇ ಶಿರಸ್ತೇದಾರರಾಗಿದ್ದರು. ‘‘ಅದಕ್ಕೇನಂತೆ,, ನಾನು ಹೇಗಿದ್ದರೂ ಕಲ್ಕತ್ತೆಗೆ ಹೊರಟಿದ್ದೇನೆ. ಅಲ್ಲಿಂದ ಬಂಗಾಳಿ ಭಾಷೆಯ ಕೆಲವು ಪುಸ್ತಕಗಳನ್ನು ತಂದುಕೊಡುತ್ತೇನೆ, ಕಲಿತುಕೊಳ್ಳಿ’’ ಎಂದರು ಅವರು.

ನಾರಾಯಣ ಅಯ್ಯಂಗಾರ್ ಕಲ್ಕತ್ತೆಯಲ್ಲಿ ಸ್ವಲ್ಪ ಕಾಲ ತಂಗಿದ್ದು, ಅಲ್ಲಿಯ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಹಿಂತಿರುಗುವಾಗ ಮಾತುಕೊಟ್ಟಂತೆ ಬಂಗಾಳಿ ಪುಸ್ತಕಗಳನ್ನು ತಂದುಕೊಟ್ಟರು. ‘‘ಅಹಾ, ಎಷ್ಟು ಸೊಗಸಾಗಿದೆ ಗೊತ್ತೇ ಈ ಬಂಗಾಳಿಭಾಷೆ! ಅದರ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ-ಏನು ಕಥೆ!’’  ಎಂದೆಲ್ಲ ವಿಶದವಾಗಿ ವರ್ಣಿಸಿದರು.

ಮೊದಲೇ ಸರಿ, ವೆಂಕಟಾಚಾರ್ಯರು ಸಾಹಿತ್ಯಾಭಿಮಾನಿ. ಇದನ್ನೆಲ್ಲ ಕೇಳಿದ ಮೇಲಂತೂ, ಆದಷ್ಟು ಬೇಗ ಬಂಗಾಳಿ ಭಾಷೆಯನ್ನು ಕಲಿತು, ಆ ಪುಸ್ತಕಗಳನ್ನೆಲ್ಲ ಓದಿ ಅರ್ಥಮಾಡಿಕೊಳ್ಳಬೇಕು ಎಂದು ಮನಸ್ಸು ಮಾಡಿದರು. ಹಾಗವರು ಮನಸ್ಸು ಮಾಡಿದ್ದೇ ಮಾಡಿದ್ದು, ಬಂಗಾಳಿ ಭಾಷೆಯನ್ನು ಓದಿ ಅರ್ಥಮಾಡಿ ಕೊಳ್ಳುವುದಷ್ಟೇ ಅಲ್ಲ, ಆ ಭಾಷೆಯಲ್ಲಿ ಪರಿಣತರೂ ಆಗಿ ಬಿಟ್ಟರು!

ಪ್ರಸಿದ್ಧ ಬಂಗಾಳಿ ವಿದ್ವಾಂಸ ಈಶ್ವರಚಂದ್ರ ವಿದ್ಯಾಸಾಗರ ಅವರೊಂದಿಗೆ ಪತ್ರವ್ಯವಹಾರ ಆರಂಭಿಸಿದರು. ಈ ಪತ್ರವ್ಯವಹಾರಕ್ಕೂ ನಾರಾಯಣ ಅಯ್ಯಂಗಾರ್ ಅವರೇ ಸಹಾಯ ಮಾಡಿದರು. ಬಂಗಾಳಿಯನ್ನು ಕಲಿಯಲು ಆವಶ್ಯಕವಾದ ಪುಸ್ತಕಗಳನ್ನೆಲ್ಲ ಈಶ್ವರಚಂದ್ರ ವಿದ್ಯಾಸಾಗರರು  ಕಳುಹಿಸಿಕೊಟ್ಟರು ಮತ್ತು ತಮ್ಮ ಪತ್ರವ್ಯವಹಾರದ ಮೂಲಕವೇ ಶಿಕ್ಷಣವನ್ನಿತ್ತರು. ಕೇವಲ ಆರೇ ತಿಂಗಳಲ್ಲಿ ವೆಂಕಟಾಚಾರ್ಯರು ಬಂಗಾಳಿಯನ್ನು ಕಲಿತುಬಿಟ್ಟರು! ಇದರಿಂದ ವಿದ್ಯಾಸಾಗರರಿಗೆ ಬಹಳ ಸಂತೋಷವಾಯಿತು. ತಮ್ಮ ಮೆಚ್ಚುಗೆಯ ಸೂಚಕವಾಗಿ ‘‘ನನ್ನ ಈ ಕಾದಂಬರಿಯನ್ನ ತಮ್ಮ ಭಾಷೆಗೆ ಅನುವಾದ ಮಾಡಿಕೊಡಿ’’ ಎಂದು, ‘ಭ್ರಾಂತಿವಿಲಾಸ’ ಎಂಬ ತಮ್ಮ ಬಂಗಾಳಿ ಕಾದಂಬರಿಯನ್ನು ವೆಂಕಟಾಚಾರ್ಯರಿಗೆ ಕಳುಹಿಸಿಕೊಟ್ಟರು.

ಆ ‘ಭ್ರಾಂತಿವಿಲಾಸ’ ಎಂಬ ಕಾದಂಬರಿಯು ಇಂಗ್ಲೆಂಡಿನ ಪ್ರಸಿದ್ಧ ಕವಿಯಾದ ಷೇಕ್ಸ್‌ಪಿಯರ್‌ನ ಸುಂದರ ನಾಟಕವಾದ ‘ಕಾಮಿಡಿ ಆಫ್ ಎರರ್ಸ್’ ಕಥೆ. ಕಾದಂಬರಿಯ ರೂಪದಲ್ಲಿ ಬರೆದ ಆ ಕಥೆ ವೆಂಕಟಾಚಾರ್ಯರಿಗೆ ಬಹಳವೇ ಹಿಡಿಸಿತು.

‘‘ನಮ್ಮ ಕನ್ನಡದಲ್ಲಿ ಇಂತಹ ಕಾದಂಬರಿಗಳೇ ಇಲ್ಲವಲ್ಲ! ನಮ್ಮವರು ಇಂತಹ ಕಾದಂಬರಿಗಳನ್ನು ಓದಿಯೇ ಇಲ್ಲ; ನಾನಾದರೂ ಇದರ ಪರಿಚಯವನ್ನು ಅವರಿಗೆ ಮಾಡಿಕೊಡಲೇಬೇಕು; ಕನ್ನಡದಲ್ಲೂ ಒಳ್ಳೆಯ ಕಾದಂಬರಿಗಳು ಬರಲೇಬೇಕು’’ ಎಂದು ನಿರ್ಧರಿಸಿದರು. ಆದರೆ ಈ ನಿರ್ಧಾರವನ್ನು ನಡೆಸುವುದು ಸುಲಭವಾಗಿರಲಿಲ್ಲ.

ಆಗೆಲ್ಲ ಕನ್ನಡ ಓದುವವರು ಬಹಳ ಕಡಿಮೆ, ಎಲ್ಲೆಲ್ಲೂ ಇಂಗ್ಲಿಷಿನ ವ್ಯಾಮೋಹವೇ ವ್ಯಾಮೋಹ! ಹೀಗಾಗಿ, ‘‘ಕನ್ನಡದಲ್ಲಿ ಓದುವುದು ಏನಿದೆ?’’ ಎಂದು ಜನ ಕೇಳುವಂತಾಗಿತ್ತು. ಅಂಥಾದ್ದರಲ್ಲಿ, ಮುದ್ರಿಸುವವರಾರು? ಕೊಳ್ಳುವವರಾರು?

ವೆಂಕಟಾಚಾರ್ಯರಿಗೂ ಈ ಕಷ್ಟಗಳೆಲ್ಲ ತಿಳಿದದ್ದೇ. ಆದರೂ, ದೇವರ ಮೇಲೆ ಭಾರಹಾಕಿ, ಬಲುಶ್ರದ್ಧೆಯಿಂದ ಆ ‘ಭ್ರಾಂತಿವಿಲಾಸ’ ವನ್ನು ಕನ್ನಡಕ್ಕೆ ಅನುವಾದಿಸಿಯೇ ಬಿಟ್ಟರು! ಅದನ್ನು ಅಚ್ಚುಮಾಡಿಸಬೇಕಲ್ಲ? ಅದು ಬಹಳ  ಕಷ್ಟದ ಕೆಲಸ! ಆದ್ದರಿಂದ ಪುಸ್ತಕ ಹೊರಬರುವುದು ಸ್ವಲ್ಪ ತಡವಾಯಿತು. ‘‘ನಾನು ನಿನಗೆ ಸಹಾಯ ಮಾಡುತ್ತೇನೆ, ಯೋಚನೆ ಮಾಡಬೇಡ’’ – ಎಂದು ವಿ.ಎನ್.ನರಸಿಂಹ ಅಯ್ಯಂಗಾರ್ ‌ ಮುಂದೆ ಬಂದರು. ಅವರು ವೆಂಕಟಾಚಾರ್ಯರ ನೆಂಟರು. ಅವರ ನೆರವಿನಿಂದ 1876 ನೆಯ ಇಸವಿಯಲ್ಲಿ ‘ಭ್ರಾಂತಿ ವಿಲಾಸ’  ಕನ್ನಡಿಗರ ಕೈ ಸೇರಿತು; ಜನಪ್ರಿಯವಾಯಿತು.

‘ಭ್ರಾಂತಿ ವಿಲಾಸ’ವನ್ನು ಮದ್ರಾಸ್ ವಿಶ್ವವಿದ್ಯಾನಿಲಯದವರು ಮೂರುನಾಲ್ಕು ಪರೀಕ್ಷೆಗಳಿಗೆ ಕನ್ನಡ ಪಠ್ಯಗ್ರಂಥವಾಗಿ ಇಟ್ಟರು. ಅದೂ, ಅದು ಹೊರಬಂದ ಮರುವರ್ಷವೇ! ಕೇಳಬೇಕೇ ಈಶ್ವರಚಂದ್ರ ವಿದ್ಯಾಸಾಗರರ ಆನಂದವನ್ನು? ಹೆಮ್ಮೆಯನ್ನು? ವೆಂಕಟಾಚಾರ್ಯರಿಗೆ ತಮ್ಮ ಬಂಗಾಳಿ ಭಾಷೆಯನ್ನು ಹೇಳಿಕೊಟ್ಟದ್ದು ಸಾರ್ಥಕವಾಯಿತು ಎನ್ನಿಸಿರಬೇಕು.  ಅವರಿಗೆ ತಮ್ಮ ಎಲ್ಲ ಪುಸ್ತಕಗಳನ್ನೂ ಅನುವಾದ ಮಾಡಲು ಒಪ್ಪಿಗೆ ಕೊಟ್ಟುಬಿಟ್ಟರು!

ಸ್ವಲ್ಪ ಕಾಲದಲ್ಲಿಯೇ, ಈಶ್ವರಚಂದ್ರರ ‘ಸೀತಾ ವನವಾಸ’ ಮತ್ತು ‘ಶಾಕುಂತಲ’ ಗ್ರಂಥಗಳು ವೆಂಕಟಾಚಾರ್ಯರ ಲೇಖನಿಯಿಂದ ಹೊರಬಂದವು. ಅವೂ ಸಹ ಕನ್ನಡಿಗರ ಮೆಚ್ಚುಗೆ ಪಡೆದವು, ‘‘ಇನ್ನಷ್ಟು ನಮಗೆ ಇಂತಹ ಬಂಗಾಳಿ ಗ್ರಂಥಗಳ ಅನುವಾದಗಳು ಬೇಕು. ನಾವವನ್ನು ಓದಲೇಬೇಕು’’  ಎಂಬ ಬೇಡಿಕೆ ವೆಂಕಟಾಚಾರ್ಯರನ್ನು ಮುಟ್ಟಿತು. ಹೀಗೆ, ವೆಂಕಟಾಚಾರ್ಯರು ಬಂಗಾಳಿ ಮತ್ತು ಕನ್ನಡ ಭಾಷೆಗಳ ನಡುವೆ ಸೇತುವೆಯಾದರು.

ವೆಂಕಟಾಚಾರ್ಯರ ಪೂರ್ವಜರ ಸ್ಥಳ ಕೊಳ್ಳೇಗಾಲ. ಅವರ ತಂದೆಯವರ ಹೆಸರು ಗರುಡಾಚಾರ್ಯರು ಎಂದು. ಗರುಡಾಚಾರ್ಯರಿಗೆ ಆರು ಜನ ಗಂಡುಮಕ್ಕಳು. ವೆಂಕಟಾಚಾರ್ಯರು ಎರಡನೆಯವರು. ಅವರು ಹುಟ್ಟಿದ್ದು 1845ನೆಯ ಇಸವಿಯಲ್ಲಿ.  ಗರುಡಾಚಾರ್ಯರು ಸಂಸ್ಕೃತ ಪಂಡಿತರು. ಪ್ರತಿನಿತ್ಯ ಬೆಳಗಿನ ಜಾವ ಹನ್ನೆರಡು ಮೈಲಿ ದೂರದಲ್ಲಿದ್ದ ಕಾವೇರಿನದಿಗೆ ಹೋಗಿ ಸ್ನಾನ ಮಾಡುವುದು ಅವರ ಪದ್ಧತಿ. ಈ ಮಗನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ, ದಾರಿಯಲ್ಲಿ ಅಮರಪಾಠವನ್ನು ಹೇಳಿಕೊಡುತ್ತಿದ್ದರು.

ವೆಂಕಟಾಚಾರ್ಯರ ತಂದೆಯವರು ಕೊಳ್ಳೇಗಾಲವನ್ನು ಬಿಟ್ಟು, ಚಿತ್ರದುರ್ಗಕ್ಕೆ ಬಂದರು. ‘‘ಭೇಷ್, ಯಾವ ಪ್ರಸಂಗವನ್ನಾಗಲಿ ಸ್ವಾರಸ್ಯವಾಗಿ ಹೇಳಬಲ್ಲ!’’ ಎಂದು ಮಗನ  ಶಕ್ತಿಯನ್ನು ಗುರುತಿಸಿದರು; ಅವನ ವಿದ್ಯಾಭ್ಯಾಸದಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದರು. ಅವರ ಪ್ರಾರಂಭಿಕ ಶಿಕ್ಷಣವು ಮನೆಯಲ್ಲಿಯೇ ನಡೆಯಿತು. ಅನಂತರ ವೆಂಕಟಾಚಾರ್ಯರು ತುಮಕೂರಿನ ಇಂಗ್ಲಿಷ್ ಶಾಲೆಗೆ ಸೇರಿ, ನಾಲ್ಕು-ಆರು ವರ್ಷಗಳಲ್ಲಿ ಜೂನಿಯರ್ ಸೀನಿಯರ್ ಪರೀಕ್ಷೆಗಳನ್ನೂ ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಮದುವೆಯೂ ನಡೆಯಿತು.

ವೆಂಕಟಾಚಾರ್ಯರು ಸರಕಾರದಲ್ಲಿ ಗುಮಾಸ್ತೆ ಕೆಲಸಕ್ಕೆ ಸೇರಿದಾಗ, ಅವರಿಗೆ ಕೇವಲ ಹದಿನಾರು ಹದಿನೇಳು ವರ್ಷ  ಅಷ್ಟೇ. ಎರಡುಮೂರು ವರ್ಷಗಳಲ್ಲೇ ಅಕೌಂಟೆಂಟರಾಗಿ ಚಿತ್ರದುರ್ಗಕ್ಕೆ ಬಂದರು. ಬಳಿಕ ಶಿವಮೊಗ್ಗೆಯಲ್ಲಿ ಡಿವಿಜನ್ ಹೆಡ್‌ಮುನ್ಷಿ ಕೆಲಸ, ಆಮೇಲೆ ಡಿಸ್ಟ್ರಿಕ್ಟ್ ಕೋರ್ಟ್ ಶಿರಸ್ತೇದಾರ್, ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳು. ಈ ರೀತಿಯಾಗಿ  ಬೇಗಬೇಗನೆ ಮೇಲಿನ ಹುದ್ದೆಗಳು ದೊರೆಯಲು ಕಾರಣ?ಅವರ ಕಾರ್ಯನಿಷ್ಠೆ ಮತ್ತು ಕಾರ್ಯದಕ್ಷತೆ.

ಶಿವಮೊಗ್ಗದಿಂದ ಎಡೆಹಳ್ಳಿಗೆ ಅಂದರೆ, ಈಗಿನ ನರಸಿಂಹರಾಜಪುರಕ್ಕೆ, ಮುನ್ಸೀಫರಾಗಿ ಬಂದರು. ಅಷ್ಟು ಹೊತ್ತಿಗೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡಿದ್ದರು. ತಮ್ಮ ಕಾದಂಬರಿಗಳನ್ನು ಆಗಿನ ಮೈಸೂರು ಸಂಸ್ಥಾನದ ಯುವರಾಜರಾಗಿದ್ದ (ಎಂದರೆ ಮಹಾರಾಜರ ತಮ್ಮ) ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರಿಗೆ ಅರ್ಪಿಸಿದರು. ಆದರಿಂದಲೇ ಅವುಗಳಿಗೆ ‘ಶ್ರೀ ನರಸಿಂಹರಾಜ ಒಡೆಯರ್‌ರವರ ಪರಂಪರೆ’ ಎಂತಲೇ ಹೆಸರು. ಸ್ವಲ್ಪ ಕಾಲವಾದ ಮೇಲೆ ವೆಂಕಟಾಚಾರ್ಯರಿಗೆ ಚಿಕ್ಕಬಳ್ಳಾಪುರ, ಅಲ್ಲಿಂದ ಕೋಲಾರ, ಅಲ್ಲಿಂದ ಮೈಸೂರಿಗೆ ವರ್ಗವಾಯಿತು. ಮೈಸೂರಿಗೆ ಬಂದವರೇ, ಪಟ್ಟಾಗಿ ಕುಳಿತು, ಅನೇಕ ಪುಸ್ತಕಗಳನ್ನು ಬರೆದರು. 1902ನೆಯ ಇಸವಿ ಅಕ್ಟೋಬರ್ ತಿಂಗಳಲ್ಲಿ, ಪ್ರಥಮದರ್ಜೆ ಮುನ್ಸೀಫರಾಗಿದ್ದಾಗ, ಸರ್ಕಾರಿ ಕೆಲಸದಿಂದ ನಿವೃತ್ತರಾದರು. ಅನಂತರ ತಮ್ಮ ವಿರಾಮಕಾಲವನ್ನೆಲ್ಲ ಕನ್ನಡಸಾಹಿತ್ಯ ಸೇವೆಗೆಂದೇ ಮೀಸಲಾಗಿಟ್ಟುಬಿಟ್ಟರು.

ವೆಂಕಟಾಚಾರ್ಯರ ಕೋಣೆಯಲ್ಲಿ ಒಂದು ಭೂತಾಕಾರದ, ಕಬ್ಬಿಣದ ತಿರುಗುವ ಪುಸ್ತಕ ಬೀರುವಿತ್ತು. ಅದರ ಭರ್ತಿ ಸಹಸ್ರಾರು ರೂಪಾಯಿ ಬೆಲೆಬಾಳುವ ಗ್ರಂಥಗಳು. ನಿಘಂಟುಗಳು, ವಂಗೀಯ ವಿಶ್ವಕೋಶಗಳು; ಬರೆಯಲು ಒಂದು ತಗ್ಗಿನ ಡೆಸ್ಕು; ನೆಲದ ಮೇಲೆ ಕೃಷ್ಣಾಜಿನ ಹಾಕಿಕೊಂಡು ಕೂತು ಬರೆಯುತ್ತಿದ್ದರು. ಬರೆಯುತ್ತಿದ್ದಂತೆಯೇ ಕೈನೀಡಿ, ಆ ಪುಸ್ತಕ ಬೀರುವನ್ನು ತಿರುಗಿಸುತ್ತಿದ್ದರು; ತಿರುಗಿಸುತ್ತಾ ತಿರುಗಿಸುತ್ತಾ ತಮಗೆ ಬೇಕಾದ ಪುಸ್ತಕಗಳನ್ನು ಒಂದೊಂದಾಗಿ ತೆಗೆಯುತ್ತಿದ್ದರು-ಓದುತ್ತಿದ್ದರು -ಇಡುತ್ತಿದ್ದರು-ಬರೆಯುತ್ತಿದ್ದರು.

ಬಂಗಾಳಿಭಾಷೆಯ ಬಗ್ಗೆ ಅವರಿಗಿದ್ದ ಈ ಪ್ರೇಮ-ಶ್ರದ್ಧೆ, ಅವರ ಈ ಸಾಹಸ-ಸಾಧನೆ ಇವುಗಳು ಬಂಗಾಳದ ಹಲವು ಹಿರಿಯರಿಗೇ ವಿಸ್ಮಯವನ್ನು ಉಂಟುಮಾಡಿದವು. ಕನ್ನಡನಾಡಿಗೆ ಬಂದಾಗ, ಅವರು ವೆಂಕಟಾಚಾರ್ಯರನ್ನು ಹುಡುಕಿಕೊಂಡು ಬಂದರು, ಅವರ ಪುಸ್ತಕ ಭಂಡಾರವನ್ನು ಕಂಡು ದಂಗಾದರು. ‘‘ನಾವೇ ಕೇಳಿಲ್ಲ-ಕಂಡಿಲ್ಲ, ಅಂಥಾ ಅಪೂರ್ವ ಗ್ರಂಥಗಳು! ಎಲ್ಲಿಂದ ಸಂಪಾದಿಸಿದಿರಿ?’’ ಎಂದು ಅವರು ವೆಂಕಟಾಚಾರ್ಯರನ್ನು ಅಭಿನಂದಿಸುತ್ತಿದ್ದರಂತೆ! ರವೀಂದ್ರನಾಥ ಠಾಕೂರರ ತಂದೆ ಮಹರ್ಷಿ ದೇವೇಂದ್ರನಾಥರು, ಸ್ವಾಮಿ ವಿವೇಕಾನಂದರು ವೆಂಕಟಾಚಾರ್ಯರ ಮನೆಗೆ ಬಂದು ಹೋದವರಲ್ಲಿ ಮುಖ್ಯರಾದವರು.  ಶ್ರೀರಾಮಕೃಷ್ಣ ಮಠದ ಸಂನ್ಯಾಸಿಗಳಂತೂ ಅವರ ಸಂದರ್ಶನಕ್ಕೆ ಬರುತ್ತಲೇ ಇದ್ದರು.

ಕನ್ನಡಿಗರು ಕನ್ನಡದಲ್ಲಿ ಮಾತನಾಡುವುದು ಸಹ ಅಪಮಾನವೆಂದುಕೊಂಡು, ಇಂಗ್ಲಿಷಿನಲ್ಲಿ ಮೆರೆಯುತ್ತಿದ್ದ ಕಾಲ ಅದು! ಹಾಗಿರುವಲ್ಲಿ, ವೆಂಕಟಾಚಾರ್ಯರು ಕನ್ನಡದಲ್ಲಿ ಕಾದಂಬರಿ ಯುಗವನ್ನೇ ನಿರ್ಮಿಸಿಬಿಟ್ಟರು. ಯಾರ ಕೈಯಲ್ಲಿ ನೋಡಲಿ, ವೆಂಕಟಾಚಾರ್ಯರ ಕಾದಂಬರಿಗಳು. ಅವರು ಬರೆದಿರುವುದು ಒಂದಲ್ಲ, ಎರಡಲ್ಲ, ಸುಮಾರು ಎಪ್ಪತ್ತೆ ದು ಕೃತಿಗಳು! ಅವುಗಳಲ್ಲಿ ಅರವತ್ತು ಕೃತಿಗಳು ಕಾದಂಬರಿ ಹಾಗೂ ಇತರ ಕಥನಗಳೇ ಆಗಿವೆ.

ನಿಜ, ಅವರ ಕಾದಂಬರಿಗಳು ಬಂಗಾಳಿ ಕಾದಂಬರಿಗಳ ಅನುವಾದಗಳು. ಆದರೆ, ಅವನ್ನು ಓದಿದರೆ ಅವು ಅನುವಾದಗಳೆಂದು ಯಾರಿಗೂ ಅನ್ನಿಸುವುದೇ ಇಲ್ಲ! ನಾವೇ ಆ ವಾತಾವರಣದಲ್ಲಿ ಒಂದಾಗಿ, ಕಥಾನಾಯಕ ನಾಯಕಿಯರ ಜೊತೆಗೂ ಓಡಾಡುತ್ತಿದ್ದೇವೆಯೇನೋ ಎಂದೆನ್ನಿಸುತ್ತದೆ.

 ‘ವಂದೇ ಮಾತರಂ’ ಮೊದಲು ಪ್ರಕಟವಾದದ್ದು ಬಂಕಿಮಚಂದ್ರರ ‘ಆನಂದ ಮಠ’  ಕಾದಂಬರಿಯಲ್ಲಿ; ಕನ್ನಡಿಗರಿಗೆ ಲಭ್ಯವಾದದ್ದು ವೆಂಕಟಾಚಾರ್ಯರು ಆ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದಾಗ.  ಮುಂದೆ ವೆಂಕಟಾಚಾರ್ಯರು ಹರಪ್ರಸಾದ ಶಾಸ್ತ್ರಿ, ರಮೇಶಚಂದ್ರದತ್ತ, ಯೋಗೀಂದ್ರನಾಥ ಚಟ್ಟೋಪಾಧ್ಯಾಯ, ಯೋಗಿಂದ್ರನಾಥ ಬಸು ಇವರುಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದರು. ಹಾಗೂ ಲೆಕ್ಕವಿಲ್ಲದಷ್ಟು ಬಂಗಾಳಿ ಗ್ರಂಥಗಳನ್ನು ತರಿಸಿಕೊಂಡು ಓದಲಾರಂಭಿಸಿದರು. ಬಂಗಾಳದ ಖ್ಯಾತ ಸಾಹಿತಿ ಬಂಕಿಮಚಂದ್ರರ ಪ್ರಭಾವ ಅವರಮೇಲೆ ಬಹಳವೇ ಆಯಿತು. ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಒಂದೊಂದು ಕಾದಂಬರಿಯೂ ಜನರಲ್ಲಿ ರಾಷ್ಟ್ರಪ್ರಜ್ಞೆಯನ್ನು ಎಚ್ಚರಿಸುವ ಒಂದು ಶಕ್ತಿ. ಅವನ್ನೆಲ್ಲ ಕನ್ನಡಿಗರ ಮುಂದೆ ಇಡದಿದ್ದಲ್ಲಿ, ಬಂಗಾಳಿ ಕಲಿತೇನು ಸಾರ್ಥಕ? ಸರಿ-ನೋಡ ನೋಡುವಲ್ಲಿ ಬಂಕಿಮಚಂದ್ರರ ಅಮೋಘ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಯೇಬಿಟ್ಟರು!

ವೆಂಕಟಾಚಾರ್ಯರು ಬರೀ ಕಾದಂಬರಿಗಳನ್ನಷ್ಟೇ ಅನುವಾದಿಸಲಿಲ್ಲ, ಹಾಸ್ಯಮಯವಾದ ಕಥೆಗಳನ್ನೂ, ವಿಚಾರಮಯ ಗ್ರಂಥ ಹಾಗೂ ಪ್ರಬಂಧಗಳನ್ನೂ ಕನ್ನಡಕ್ಕೆ ತಂದಿರುವರು.ಇವರು ಅನುವಾದಿಸಿರುವ ‘ಲೋಕ ರಹಸ್ಯ’ ಎಂಬುದು ಕನ್ನಡದಲ್ಲಿ ಮೊದಲನೆಯ ಪ್ರಬಂಧ ಸಂಕಲನ ಎಂದು ಕಾಣುತ್ತದೆ. ‘ಮಕ್ಕಳ ಸಾಹಿತ್ಯ’ ದಲ್ಲೂ ಇವರು ಕೈಯಾಡಿಸಿರುವರು. ‘ಯವನಯಾಮಿನೀವಿನೋದ’ ಎಂಬ ಹೆಸರಿನಲ್ಲಿ ‘ಅರೇಬಿಯನ್ ನೈಟ್ಸ್’ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.  ‘ಅಮೃತಪುಲಿನ’  ಶ್ರೀ ನನಿಲಾಲವಂದ್ಯೋಪಾಧ್ಯಾಯರ ಕೃತಿಯ ಅನುವಾದ. ಅದೊಂದು ರೋಮಾಂಚಕಾರಕ ಐತಿಹಾಸಿಕ ಕಾದಂಬರಿ. ಅವರು ಬಂಕಿಮಚಂದ್ರರ ನಂತರ ಪ್ರಸಿದ್ಧ ಲೇಖಕರೆಂದು ಪ್ರಖ್ಯಾತರಾಗಿದ್ದರು. ವೆಂಕಟಾಚಾರ್ಯರೇ ಮುನ್ನುಡಿಯಲ್ಲಿ ಹೇಳಿರುವಂತೆ, ಆ ಕಾದಂಬರಿಯ ನಾಯಕನಾದ ಅಜಯಸಿಂಹನು ರಜಪೂತ ವೀರತ್ವದ ಸಜೀವ ವಿಗ್ರಹ!  ‘ಚಂದ್ರಶೇಖರ’  ಎಂಬುವುದು ಇನ್ನೊಂದು ಅತ್ಯುತ್ತಮ ಕಾದಂಬರಿ. ಕಾದಂಬರಿಯ ಉದ್ದಕ್ಕೂ ಬಂಗಾಳದ ಸಾಮಾನ್ಯ ವ್ಯಕ್ತಿಗಳ ಜೀವನ, ವರ್ತಕರಾಗಿ ಬಂದ ಇಂಗ್ಲಿಷರ ದರ್ಪ, ನವಾಬರ ಅಸಹಾಯಕತೆ, ಆಗಿನ ಕಾಲದ ದೇಶಸ್ಥಿತಿ, ಇತ್ಯಾದಿಗಳ ಚಿತ್ರ ಕಣ್ಣಿಗೆ ಕಟ್ಟುವಂತಿದೆ. ಈ ಕಾದಂಬರಿಯಲ್ಲಿ ಎದ್ದು ಕಾಣುವುದು ಪ್ರತಾಪನ ತ್ಯಾಗ.  ‘ದಾಡಿಯ ಹೇಳಿಕೆ’ ಎಂಬ ಅವರ ಒಂದು ಪ್ರಬಂಧ ಓದಲು ತಮಾಷೆಯಾಗಿದೆ. 

ವೆಂಕಟಾಚಾರ್ಯರಿಗೆ ಸ್ತ್ರೀಯರ ಬಗ್ಗೆ, ಅದರಲ್ಲೂ ಭಾರತೀಯ ಸ್ತ್ರೀಯರ ಬಗ್ಗೆ ಅಪಾರ ಗೌರವ ಹಾಗೂ ಅನುಕಂಪ. ಇದನ್ನು  ‘ನೊಂದ ನುಡಿ’ ಇತ್ಯಾದಿ ಅವರ ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಅದರಿಂದಲೇ ಹರಪ್ರಸಾದ ಶಾಸ್ತ್ರಿಯ ‘ಭಾರತಮಹಿಳೆ’  ಎಂಬ ಪುಸ್ತಕವನ್ನು ಅನುವಾದ ಮಾಡಲು ಮುಂದಾದರು. ಅದರಲ್ಲಿ ಸಂಸ್ಕೃತ ಕಾವ್ಯನಾಟಕಗಳೊಳಗೆ ಬಂದಿರುವ ಮಹಿಳೆಯರ ವಿಷಯ ಬಂದಿದೆ; ಸೀತೆ ಮತ್ತು ಶಕುಂತಲೆಯರ ಚರಿತ್ರೆಯು ತುಂಬು ಅಭಿಮಾನದಿಂದ ಹೇಳಲ್ಪಟ್ಟಿದೆ.

ವೆಂಕಟಚಾರ್ಯರಿಗೆ ಇಂಗ್ಲಿಷಿನಲ್ಲಿಯೂ ಒಳ್ಳೆಯ ಪಾಂಡಿತ್ಯವಿತ್ತು. ಬೇಕಾದಷ್ಟು ಜನ ಆಂಗ್ಲೇಯ ಅಧಿಕಾರಿಗಳು ಸ್ನೇಹಿತರಾಗಿದ್ದರು. ಸ್ವತಃ ವೆಂಕಟಾಚಾರ್ಯರೇ ಒಳ್ಳೆಯ ಹುದ್ದೆಯಲ್ಲಿದ್ದರು, ಹಾಯಾಗಿ ಇಂಗ್ಲಿಷಿನಲ್ಲೇ ಬರೆಯ ಬಹುದಿತ್ತು. ನಿರಾಯಾಸವಾಗಿ ಮುದ್ರಣವಾಗುತ್ತಿತ್ತು; ಇನ್ನೂ ಹೆಚ್ಚಿನ ಐಶ್ವರ್ಯ ಕೀರ್ತಿ ಅವರದಾಗುತ್ತಿತ್ತು. ಆದರೂ ಕನ್ನಡದಲ್ಲಿಯೇ ಯಾಕೆ ಕಷ್ಟಪಟ್ಟರು?  ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಅಭಿಮಾನವೊಂದೇ ಕಾರಣ; ಕನ್ನಡ ಭಾಷೆಯನ್ನು ಮುಂದಕ್ಕೆ ತರಬೇಕೆಂಬ ಧ್ಯೇಯವೊಂದೇ ಸ್ಫೂರ್ತಿ; ನಮ್ಮ ಕನ್ನಡಿಗರಲ್ಲಿ ಜ್ಞಾನ ತುಂಬಬೇಕೆಂಬ ಆಸೆಯೊಂದೇ ಶಕ್ತಿ.

ವೆಂಕಟಾಚಾರ್ಯರು ಅಧಿಕಾರದಿಂದ ನಿವೃತ್ತರಾದ ಮೇಲೆ ಪತ್ರಿಕೋದ್ಯಮವನ್ನು ಕೈಗೊಂಡರು. ‘‘ಅವಕಾಶ ತೋಷಿಣಿ’’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಅದರಲ್ಲಿ ಕಥೆ, ಲಘು ಲೇಖನಗಳನ್ನು ಬರೆಯುತ್ತಿದ್ದರು. ‘‘ಸೂರ್ಯಪೂಜೆ’’ ಅವರು ಬರೆದಿರುವ ಉತ್ತಮ ಲೇಖನಗಳಲ್ಲಿ ಒಂದು; ಅದು ‘ಶ್ರೀಕೃಷ್ಣ ಸೂಕ್ತಿ’  ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು.  ರಾತ್ರಿಯೆಲ್ಲಾ ಕುಳಿತು ಬರೆಯುವ-ಓದುವ ಸ್ವಭಾವ ಸರಿ- ತಿಂಗಳಿಗೊಂದು ಕಾದಂಬರಿ! ಜನ ಆತುರದಿಂದ ಕಾಯುತ್ತಿದ್ದರಂತೆ – ಅವರ ಕಾದಂಬರಿಗಳು ಹೊರಬಂದ ತಕ್ಷಣ ಕೊಂಡು ಓದುವುದಕ್ಕೆ.  ‘‘ಹೀಗೆಲ್ಲ ರಾತ್ರಿ ಹಗಲೂ ಶ್ರಮ ಪಡುತ್ತೀರಲ್ಲ, ಆರೋಗ್ಯ ಕೆಡುವುದಿಲ್ಲವೇ?’’ – ಎಂದು ಯಾರಾದರೂ ಆತಂಕ ತೋರಿದರೆ, ಮುಗುಳುನಕ್ಕು ನುಡಿಯುತ್ತಿದ್ದರಂತೆ – ‘‘ನನಗೆ ಇದೊಂದು ಶ್ರಮ ಅಂತ ಅನ್ನಿಸುವುದೇ ಇಲ್ಲ. ಅಲ್ಲದೆ, ಹೀಗೆ ಶ್ರಮಪಟ್ಟರೆ ತಾನೆ ಫಲ ಕಾಣುವುದು? ಗುರಿ-ಆಸೆ, ಎರಡೂ ಇರೋವಾಗ, ಶ್ರಮ ಕಷ್ಟ ಅಂತ ಕೂರಬಾರದು ಮನುಷ್ಯ.’’

ಕನ್ನಡಕ್ಕೆ ಮಹತ್ವದ ಪ್ರಥಮಗಳನ್ನು ದಯಪಾಲಿಸಿದ ಈ ಸಾಹಸಿ  ವೆಂಕಟಾಚಾರ್ಯರು 1914ರ ಜೂನ್ 26ರಂದು ಬೆಂಗಳೂರಿನಲ್ಲಿ ಕಣ್ಣುಮುಚ್ಚಿದರು.  ಆದರೆ, ಅವರ ಕೃತಿಗಳಿಂದ ನಮ್ಮ ಕನ್ನಡಿಗರ ಕಣ್ಣುಗಳು ತೆರೆದವು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಆಧಾರ: ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ಎನ್ ಪಂಕಜ ಅವರ ಲೇಖನ. 

On the birth anniversary of first modern novelist in Kannada B. Venkatacharya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ