ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೇಮಾ ಭಟ್


 ಪ್ರೇಮಾ ಭಟ್


ಪ್ರೇಮಾ ಭಟ್ ಕನ್ನಡದ ಕಾದಂಬರಿ ಮತ್ತು ಕತೆಗಾರ್ತಿಯಾಗಿ ಪ್ರಸಿದ್ಧರು.

ಪ್ರೇಮಾ ಭಟ್‌ 1941ರ ಸೆಪ್ಟಂಬರ್ 22ರಂದು ಉಡುಪಿ ಜಿಲ್ಲೆಯ ಹೆರ್ಗ ಎಂಬಲ್ಲಿ ಜನಿಸಿದರು. ತಂದೆ ಜನಾರ್ದನ ಭಟ್‌, ತಾಯಿ ವನಜಾಕ್ಷಿ. ಬಹು ಬಡತನದ ಬದುಕು. ಬದುಕನ್ನರಸಿಕೊಂಡು ಬಂದುದು ಬೆಂಗಳೂರಿಗೆ. ಅಂದು ಓದಿದ್ದು ಎಸ್‌.ಎಸ್‌.ಎಲ್‌.ಸಿ.ವರೆಗೆ. ತಾಯಿ ತಂದೆಯರಿಬ್ಬರು ದುಡಿದರೂ ಎರಡು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುವಲ್ಲಿ  ಪರದಾಟವಾಗುತ್ತಿತ್ತು.  ಹಿರಿಯ ಮಗಳಾದುದರಿಂದ ಸಂಸಾರದ ಭಾರ ಹೊರಲು ದೂರದ ಗುಲ್ಬರ್ಗದ ಮಾಧ್ಯಮಿಕ ಶಾಲೆಯೊಂದರಲ್ಲಿ ಕೆಲಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ನಂತರ 1962ರಲ್ಲಿ  ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಿಯಾಗಿ ಸೇರಿದರು.  ಕಾರ್ಯನಿರ್ವಹಿಸುತ್ತಲೇ  ಎಂ.ಎ.ವರೆಗೆ ಓದಿದರು. ವಿವಿಧ ಹುದ್ದೆಗಳನ್ನು ನಿರ್ವಹಿಸಿ ಶಾಖಾಧಿಕಾರಿಯವರೆಗೆ ಮೇಲೇರಿ  ನಂತರ ಸ್ವಇಚ್ಛೆಯಿಂದ  ನಿವೃತ್ತಿ ಪಡೆದರು.

ಹುಟ್ಟಿದೂರಿನ ಸುತ್ತಮುತ್ತಲ ಚೆಲುವು, ಹಸಿರು ತುಂಬಿದ ವನಸಿರಿ, ಇದಕ್ಕೆ ವ್ಯತಿರಿಕ್ತವಾಗಿ ಬೆವರು ಸುರಿಸುವ ಜೀತದಾಳುಗಳು, ಗುಲಾಮಗಿರಿಯಿಂದ ಕಂಗೆಡುತ್ತಿದ್ದ ತರುಣರು, ಶೋಷಣೆಗೊಳಪಡುತ್ತಿದ್ದ ಕೂಲಿಯಾಳುಗಳು ಮುಂತಾದವರ ಬವಣೆಗಳನ್ನು ಕಂಡಿದ್ದ ಪ್ರೇಮಾಭಟ್‌ ಅವರ ಕಥೆಗಳಿಗೆ ಇವೇ ಮೂಲ ದ್ರವ್ಯವಾಗಿ ಕಥಾರೂಪ, ಕಾದಂಬರಿ ರೂಪ ಪಡೆಯತೊಡಗಿದವು.  ಅಜ್ಜಿಯಿಂದ ಕಲಿತು  ಸಂಜೆಯ ವೇಳೆ ಸುಶ್ರಾವ್ಯವಾಗಿ ಹಾಡುವುದು ವಾಡಿಕೆಯಾಗಿತ್ತು.  ರಾಮಾಯಣ – ಮಹಾಭಾರತಾದಿಯಾಗಿ ಕಥೆಗಳು ಮತ್ತು ತಂದೆಯವರು ತಮ್ಮ  ಕಷ್ಟದ ದಿನಗಳಲ್ಲಿಯೂ ಮನೆಗೆ ತರುತ್ತಿದ್ದ ದಿನಪತ್ರಿಕೆ, ವಾರಪತ್ರಿಕೆಗಳು, ನಾಲ್ಕಾಣೆ, ಎಂಟಾಣೆಯ ಕಥೆಪುಸ್ತಕಗಳು - ಇವುಗಳನ್ನೆಲ್ಲಾ ಓದುತ್ತಾ ಬಂದ ಪ್ರೇಮಾಭಟ್ ಅವರ ಮನಸ್ಸಿನಲ್ಲಿಯೂ ಕಥೆಯ ಹಂದರದ ಹುತ್ತ ಕಟ್ಟತೊಡಗಿ ಬರೆದ ಮೊದಲ ಕಥೆ ‘ಗಾಜಿನ ಬಳೆ’.  ಇದು ಜನಪ್ರಗತಿ ಪತ್ರಿಕೆಯಲ್ಲಿ 1970ರಲ್ಲಿ ಪ್ರಕಟಗೊಂಡಿತು.  ಬಾಲವಿಧವೆಯರಾಗಿ ತೌರಿಗೆ ಹಿಂದಿರುಗಿದ ಬಾಲೆಯರು ಹೂಬತ್ತಿ ಹೊಸೆಯುತ್ತಲೇ ಬದುಕನ್ನು ಕಳೆದುಬಿಡುತ್ತಿದ್ದ  ಕಥೆ ಇದಾಗಿದ್ದು ಓದುಗರಲ್ಲಿ ಸಂಚಲನವನ್ನುಂಟುಮಾಡಿ, ಪರ-ವಿರೋಧದ ಪ್ರತಿಕ್ರಿಯೆಗೆ ಒಳಗಾಗಿತ್ತು. ಧೃತಿಗೆಡದ ಪ್ರೇಮಾಭಟ್‌ ಅವರು ಮುಂದೆಯೂ ಸಹ ಹಲವಾರು ಕತೆಗಳನ್ನು ಬರೆಯತೊಡಗಿದರು.

ವಿವಾಹನಂತರ ಪತಿ ಶ್ರೀನಿವಾಸಭಟ್ಟರಿಂದ ದೊರೆತ ಪ್ರೋತ್ಸಾಹದಿಂದ ಪ್ರೇಮಾರವರ  ಹಲವಾರು ಕತೆ, ಕಾದಂಬರಿಗಳು ಪ್ರಕಟವಾಗತೊಡಗಿದವು. ಪತಿಯೇ ಪ್ರಕಾಶಕರಾಗಿ ಇವರ ಕೃತಿಗಳನ್ನಲ್ಲದೆ ಇತರ ಲೇಖಕರ ಹಲವಾರು ಕೃತಿಗಳನ್ನೂ ಪ್ರಕಟಿಸಿದ್ದಾರೆ.  ಇವರ ಪತಿಯವರ ಅಣ್ಣ ಎ.ಎಸ್‌. ರಾಮಕೃಷ್ಣ (ರಾಮಿ) ಹಾಗೂ ದೊಡ್ಡಪ್ಪನ ಮಗ ಕು.ಗೋ (ಎಚ್‌.ಗೋಪಾಲಭಟ್‌) ಹಾಸ್ಯಸಾಹಿತ್ಯದಲ್ಲಿ ಹೆಸರು ಮಾಡಿದವರು.

ನಾಡಿನ ಪ್ರಸಿದ್ಧ ಪತ್ರಿಕೆಗಳಿಗೆಲ್ಲಾ ಪ್ರೇಮಾ ಭಟ್ ಅವರು ಬರೆದ ಕಥೆಗಳು ಸುಮಾರು 12 ಕಥಾ ಸಂಕಲನಗಳಲ್ಲಿ ಸೇರ್ಪಡೆಯಾಗಿದ್ದು 108 ಕಥೆಗಳ ‘ಅಕ್ಷತೆ’, ಪಂಚಾಮೃತ, ಪ್ರೇಮಾಭಟ್‌ 108 ಕಥೆಗಳು ಮತ್ತು 2007ರಲ್ಲಿ 365 ಕಥೆಗಳ ಬೃಹತ್‌ ಕಥಾ ಸಂಕಲನ ‘ಕಥಾವರ್ಷ’ ಪ್ರಕಟಗೊಂಡಿವೆ.  ಹಲವಾರು ಕಥೆಗಳು ಟಿವಿ ಧಾರಾವಾಹಿಯಾಗಿಯೂ, ಎರಡು ಕತೆಗಳು ಇಂಗ್ಲಿಷ್‌ ಭಾಷೆಗೂ ಭಾಷಾಂತರವಾಗಿದೆ.  ಸರ್ಕಾರದ ಪಠ್ಯ ಪುಸ್ತಕಗಳಲ್ಲಿ, ಕನ್ನಡ ಭಾರತಿ ಸಂಕಲನದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ  ಪಠ್ಯಗಳಲ್ಲಿ  ಇವರ ಕಥೆಗಳು ಸೇರಿವೆ.  

ಸುಮಾರು ಐವತ್ತಕ್ಕೂ ಹೆಚ್ಚು ಕಾದಂಬರಿಗಳನ್ನೂ ಪ್ರೇಮಾ ಭಟ್ ಅವರು ರಚಿಸಿದ್ದು ಅವುಗಳಲ್ಲಿ ನಲವತ್ತಕ್ಕೂ ಹೆಚ್ಚು ಕಾದಂಬರಿಗಳು ಗೋಕುಲ, ಪ್ರಜಾಮತ, ಕರ್ಮವೀರ, ಸಂಯುಕ್ತ ಕರ್ನಾಟಕ, ಮಂಗಳ, ತರಂಗ, ಪ್ರಿಯಾಂಕ, ಸೌಂದರ್ಯ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಗಳಾಗಿ ಪ್ರಕಟಗೊಂಡಿವೆ.   ‘ಒಲಿದು ಬಂದವನು’ ಕಾದಂಬರಿಯು ‘ಆಡಿಬಾ ಅರಗಿಣಿಯೇ’ ಎಂಬ ಹೆಸರಿನಿಂದ ಮತ್ತು ‘ಸುಜಾತ’ ಕಾದಂಬರಿಯು ‘ಬೆಕ್ಕಿನ ಕಣ್ಣು’ ಹೆಸರಿನಿಂದ ಚಲನಚಿತ್ರವಾಗಿ ಜನಮನ ಸೆಳೆದಿವೆ.  ನಂದಿನಿ ಕಾದಂಬರಿಯು ಇಂಗ್ಲಿಷ್‌ ಭಾಷೆಗೂ, ಆಯ್ದಕ್ಕಿ ಮಾರಯ್ಯ, ಕೊಟ್ಟೂರು ಬಸವೇಶ್ವರ, ಹೆಳವನ ಕಟ್ಟೆ ಗಿರಿಯಮ್ಮ ಕೃತಿಗಳು ಇತರ ಭಾಷೆಗಳಿಗೆ ಅನುವಾಗೊಂಡಿವೆ.

ಪ್ರೇಮಾ ಭಟ್ ಅವರ ಬರಹಗಳು ಕಥೆ, ಕಾದಂಬರಿಗಳಿಗೇ ಮೀಸಲಾಗದೆ ವಿಚಾರ ಚಿಂತನೆಯ ‘ಗೃಹಿಣಿ’, ವ್ಯಕ್ತಿಚಿತ್ರಣ, ಬದುಕು-ಬರಹಗಳ ಕೃತಿಗಳಾದ ಕಯ್ಯಾರ ಕಿಞ್ಙಣ್ಣರೈ, ಕೊಟ್ಟೂರು ಬಸವೇಶ್ವರ, ದೊಡ್ಡರಂಗೇಗೌಡ ಮೊದಲಾದ 7 ವ್ಯಕ್ತಿ ಚಿತ್ರಗಳು; ಮನೆ, ಮದುಮಗಳು, ಹೆರ್ಗದ ದುರ್ಗಾಮಾತೆ, ಪೂರ್ಣಕುಂಭ ಮೊದಲಾದ 8 ಕವನ ಸಂಕಲನಗಳು ಹೀಗೆ ವಿವಿಧ ಶಾಖೆಗಳಲ್ಲಿ ವ್ಯಾಪಿಸಿವೆ.  ಬರಹಗಳ ಅನುಭವಕ್ಕಾಗಿ ದೇಶ ಸುತ್ತುವ ಹವ್ಯಾಸವಿದ್ದು ಪತಿಯೊಡನೆ ಭಾರತ, ನೇಪಾಳ, ಕಾಶ್ಮೀರ ಸುತ್ತಿದ್ದಲ್ಲದೆ ಲಂಡನ್‌ನಿಂದ ದುಬೈವರೆಗೆ ಸುತ್ತಿ ಬರೆದ ಪ್ರವಾಸಾನುಭವದ ಸಾಹಿತ್ಯ ಕೃತಿಗಳು ‘ಪೂರ್ವಾಂಚಲದಲ್ಲಿ ಕೆಲವು ದಿನಗಳು’ ಹಾಗೂ ‘ಲಂಡನ್‌ನಿಂದ ದುಬೈವರೆಗೆ…’ ಮುಂತಾದ ರೂಪ ತಳೆದಿವೆ.  ದಿಬ್ಬಣ, ದಾಸಯ್ಯನ ಬಸ್ಸು, ಸುಬ್ಬತ್ತೆಯ ಪರಿವಾರ ಇವರ ಪ್ರಮುಖ ನಗೆಬರಹಗಳ ಸಂಕಲನಗಳು.

ಪ್ರೇಮಾ ಭಟ್ ಅವರು ಕರ್ನಾಟಕ ಸರ್ಕಾರದ  ಚಲನಚಿತ್ರ ಆಯ್ಕೆ ಸಮಿತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಮುಂತಾದವುಗಳಲ್ಲಿ ಸದಸ್ಯರಾಗಿ ಸಹಾ ಕಾರ್ಯ ನಿರ್ವಹಿಸಿದ್ದಾರೆ.  ಹಲವಾರು ಸಮ್ಮೇಳನಗಳಲ್ಲಿ ಉಪನ್ಯಾಸ, ಕವನವಾಚನ, ಪ್ರಬಂಧ ಮಂಡನೆ, ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ ಮುಂತಾದವುಗಳ ಜವಾಬ್ದಾರಿಗಳನ್ನೂ ನಿರ್ವಹಿಸಿದ್ದಾರೆ.  ಪತ್ರಿಕೆಗಳು ಏರ್ಪಡಿಸುವ ಕಥಾಸ್ಪರ್ಧೆಗಳಲ್ಲಿ ಹಲವಾರು ಬಾರಿ ಬಹುಮಾನಿತರಾಗಿರುವರಲ್ಲದೆ ‘ಮಿಣುಕು ಹುಳು’ ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ‘ಗೊಂದಲ’ ಕಾದಂಬರಿಗೆ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಕ.ಸಾ.ಪ), ‘ಕಾಡುಕಡಿದು ಊರು ಮಾಡಿದರು’ ಕಾದಂಬರಿಗೆ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ, ‘ಗಾದಿ’ ಕಾದಂಬರಿಗೆ ರಾಮಕ್ಕ ಪದ್ಮಕ್ಕ ಟ್ರಸ್ಟ್‌ ಪ್ರಶಸ್ತಿ, ‘ಪ್ರೇಮಾಭಟ್‌ 108 ಕಥೆಗಳು’ ಕಥಾ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ಭೂಮಿಕಾ ಕೃತಿಗೆ ಅಳಸಿಂಗ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ದತ್ತಿ ಪ್ರಶಸ್ತಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಸ್ನೇಹಿತರು, ಅಭಿಮಾನಿಗಳು 70ರ ಸಂಭ್ರಮದಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಸಂಸ್ಕೃತಿ’ (2011).

ಕನ್ನಡದ ಹಿರಿಯ ಲೇಖಕಿ ಪ್ರೇಮಾ ಭಟ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಅರ್ಪಿಸೋಣ.

On the birth day of novelist Prema Bhat

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ