ಯಾಮುನಾಚಾರ್ಯ
ಎಂ. ಯಾಮುನಾಚಾರ್ಯ
ಕನ್ನಡಿಗರೇ ಆದ ಎಂ. ಯಾಮುನಾಚಾರ್ಯ ನಮ್ಮ ನಾಡಿನ ಮಹಾನ್ ತತ್ತ್ವಶಾಸ್ತ್ರಜ್ಞರೂ ಮತ್ತು ಲೇಖಕರೂ ಆಗಿ ವಿಶ್ವಪ್ರಸಿದ್ಧರು.
ಪ್ರೊ. ಯಾಮುನಾಚಾರ್ಯರು 1899ರ ಸೆಪ್ಟೆಂಬರ್ 3ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ನಾರಣೈಯ್ಯಂಗಾರ್. ತಾಯಿ ಮಾಣಿಕ್ಯಮ್ಮ.
ಯಾಮುನಾಚಾರ್ಯರ ತಾತ ಅಲ್ಕೊಂಡವಿಲ್ಲಿ ಗೋವಿಂದಾಚಾರ್ಯ ಸ್ವಾಮಿಗಳು ಪೂರ್ವಾಶ್ರಮದಲ್ಲಿ ಮೈಸೂರು ಸರ್ಕಾರದ ಇಂಜಿನಿಯರ್ ಆಗಿದ್ದರು. ಅವರು ಅನುಭಾವಿಗಳು ಮತ್ತು ನಿಮ್ನವರ್ಗದವರ ಏಳಿಗೆಗಾಗಿ ತುಂಬಾ ಶ್ರಮಿಸಿ ನೂರಾರು ಆದಿದ್ರಾವಿಡ ಶಿಷ್ಯವರ್ಗವನ್ನು ಬೆಳೆಸಿದ್ದರು. ವೈಷ್ಣವ ಅನುಭಾವವನ್ನು ಕುರಿತು ಇಂಗ್ಲಿಷ್‍ನಲ್ಲಿ ಅವರು ಒಂದು ಪ್ರಮಾಣ ಗ್ರಂಥವನ್ನೂ ಬರೆದಿದ್ದಾರೆ. ತಮ್ಮ ತಾತಂದಿರ ಪ್ರಭಾವದಿಂದ ಯಾಮುನಾಚಾರ್ಯರಿಗೆ ಚಿಕ್ಕಂದಿನಲ್ಲಿಯೇ ತತ್ತ್ವಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಬೆಳೆಯಿತು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದ ಯಾಮುನಾಚಾರ್ಯರು, ಆ ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ತತ್ತ್ವಶಾಸ್ತ್ರದ ಅಧ್ಯಾಪಕರಾಗಿದ್ದರು. ಅನಂತರ ಹಾಸನದ ಇಂಟರ್‍ಮೀಡಿಯೆಟ್ ಕಾಲೇಜಿನ ಸೂಪರಿಂಟೆಂಡೆಂಟಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು (1956). ಮುಂದೆ ಮೈಸೂರಿನಲ್ಲಿ ಸ್ಥಾಪಿತವಾದ ಗಾಂಧೀ ವಿಚಾರ ಸಂಸ್ಥೆಯ ಅಧ್ಯಕ್ಷರಾಗಿ ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಕೆಲಸದಲ್ಲಿ ನಿರತರಾಗಿದ್ದ ಇವರು ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಾಲ್ಕುತಿಂಗಳ ಕಾಲ ಗಾಂಧೀತತ್ತ್ವ ಮತ್ತು ಭಾರತೀಯ ತತ್ತ್ವಗಳನ್ನು ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದರು. 1967-68ರಲ್ಲಿ ದೆಹಲಿಯ ಗಾಂಧೀ ಪೀಸ್ ಫೌಂಡೇಷನ್ ಅಧ್ಯಕ್ಷರಾಗಿಯೂ ಯಾಮುನಾಚಾರ್ಯರು ಕಾರ್ಯ ನಿರ್ವಹಿಸಿದರು. ಇಂಗ್ಲಿಷ್, ಕನ್ನಡ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯಗಳಿಸಿಕೊಂಡಿದ್ದ ಯಾಮುನಾಚಾರ್ಯರು ಜನಪ್ರಿಯ ಭಾಷಣಕಾರರೂ ಆಗಿದ್ದರು.
ಯಾಮುನಾಚಾರ್ಯರು ತತ್ತ್ವಶಾಸ್ತ್ರ, ಗಾಂಧೀಸಾಹಿತ್ಯ ಮುಂತಾದ ಅನೇಕ ವಿಷಯಗಳನ್ನು ಕುರಿತು ಅನೇಕ ಲೇಖನಗಳನ್ನೂ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ಪಾಶ್ಚಾತ್ಯ ರಾಜಕೀಯ ತತ್ತ್ವಗಳು, ನಮ್ಮ ಆಳ್ವಾರುಗಳು, ಆಧುನಿಕ ತರ್ಕಶಾಸ್ತ್ರ ಸಂಗ್ರಹ, ಮತಧರ್ಮ ತತ್ವಶಾಸ್ತ್ರ, ಆಚಾರ್ಯ ರಾಮಾನುಜರು ಮುಂತಾದ ಕೃತಿಗಳು ಇವುಗಳಲ್ಲಿ ಸೇರಿವೆ. ಮತಧರ್ಮದ ಪುನರುಜ್ಜೀವನ ಮತ್ತು ಮನಸ್ಸು ಎಂಬ ಎರಡು ಪುಸ್ತಕಗಳನ್ನು ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದರು.
Studies in Philosophy, Religion and Literature, Ramunuja’s teachings in his own words ಮುಂತಾದ ಅನೇಕ ಇಂಗ್ಲಿಷ್ ಗ್ರಂಥಗಳನ್ನೂ ಯಮುನಾಚಾರ್ಯರು ಪ್ರಕಟಿಸಿದ್ದರು.
ಪ್ರೊ. ಎಂ. ಯಮುನಾಚಾರ್ಯರು ಎಂತಹ ಹಿರಿಮೆ ಗಳಿಸಿದ್ದರು ಎಂಬುದನ್ನು ನಮ್ಮ ಹಿರಿಯರ ಈ ಮಾತುಗಳು ನೆನಪಿಸುತ್ತವೆ:
"ಯಾಮುನಾಚಾರ್ಯರು ಅಮೇರಿಕಾಕ್ಕೆ ಹೋಗುತ್ತಿರುವುದು ಅಲ್ಲಿಯವರಿಂದ ಕಲಿಯುವುದಕ್ಕಲ್ಲ. ಅಲ್ಲಿನವರಿಗೆ ಕಲಿಸುವುದಕ್ಕೆ. ವಿವೇಕಾನಂದರ ದಿವ್ಯಪರಂಪರೆಯೇ ಇವರಿಗೆ ದಾರಿದೀಪ. ಇವರ ಕೈಯಲ್ಲಿ ವೇದಾಂತದ ಭರ್ಜಿ ಇದ್ದು, ಈ ಭರ್ಜಿಯ ಹಿಡಿಯಾಗಿ ಭಾರತೀಯರಾದ ನಾವೆಲ್ಲ ನಿಂತಿದ್ದೇವೆ" - ಕುವೆಂಪು.
“ಶ್ರೀ ಯಾಮುನಾಚಾರ್ಯರು ಸರ್ವರೀತಿಯಿಂದಲೂ ಆದರ್ಶವಾದ ಬಾಳನ್ನು ಬಾಳಿದರು. ಪ್ರಯತ್ನವಿಲ್ಲದೆ ಸ್ವಾಭಾವಿಕವಾಗಿಯೇ ಅವರು ಸರಳ ಜೀವನ ಮತ್ತು ಉನ್ನತ ಆಲೋಚನೆಗೆ ಉದಾಹರಣೆಯಾಗಿದ್ದರು. 30 ವರುಷಗಳ ಕಾಲ ಅಧ್ಯಾಪಕರಾಗಿ ಶಿಷ್ಯರಿಂದ ಒಂದೇ ಸಮನಾದ ಗೌರವವನ್ನೂ, ಮನ್ನಣೆಯನ್ನೂ ಪಡೆದ ಅವರನ್ನು, ಜೀವನದ ವಿವಿಧ ರಂಗಗಳಲ್ಲಿ ಉನ್ನತ ಜವಾಬ್ಧಾರಿಯನ್ನು ವಹಿಸಿ ಜೀವಿಸುತ್ತಿರುವ ಅವರ ಶಿಷ್ಯರು ಇಂದಿಗೂ ಕೃತಜ್ಞತೆಯಿಂದ ನೆನೆಯುತ್ತಾರೆ. ಅವರು ನಿಜವಾದ ಅರ್ಥದಲ್ಲಿ ಗುರುಗಳಾಗಿದ್ದರು" - ಗೊರೂರು ರಾಮಸ್ವಾಮಿ ಅಯ್ಯಂಗಾರ್
"ಫಿಲಾಸಫಿಯಲ್ಲಿ ಯಾಮುನಸಚಾರ್ಯರಂತೆ ಬೇರೆ ಯಾವ ಮೇಷ್ಟರೂ ನನ್ನ ಬುದ್ಧಿ ಭಾವಗಳನ್ನು ವಿಸ್ತರಿಸಿ ಮೇಲೆತ್ತಲಿಲ್ಲ" - ಎಸ್. ಎಲ್ ಭೈರಪ್ಪ
“After the passing away of A. Govindacharya there was a gap which was later filled by his grandson Prof. M. Yamunacharya. Low emoluments did not damp his enthusiasm for his studies and for teaching. There was hardly a subject in the field of philosophy that he did not handle with a thoroughness that marked him as a born teacher. Popularity among his students was inevitable.” - A. R. Wadia
ಪ್ರೊ. ಎಂ. ಯಾಮುನಾಚಾರ್ಯರು 1970ರ ಜನವರಿ 4ರಂದು ಮೈಸೂರಿನಲ್ಲಿ ನಿಧನರಾದರು.
On the birth anniversary of great philosopher Prof. M. Yamunacharya
ಕಾಮೆಂಟ್‌ಗಳು