ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಮ್ಮೂಟ್ಟಿ



 ಮಮ್ಮೂಟ್ಟಿ


ಮಮ್ಮೂಟ್ಟಿ ಚಲನಚಿತ್ರರಂಗದ ಪ್ರತಿಭಾನ್ವಿತ ಕಲಾವಿದರಲ್ಲೊಬ್ಬರು. ಇಂಗ್ಲಿಷಿನಲ್ಲಿ Mammootty ಎಂದಿರುವುದರಿಂದ ಮಮ್ಮೂಟ್ಟಿ ಎನ್ನುತ್ತಿದ್ದೇನೆ. ಮಮುಟ್ಟಿ ಎಂದು ಕೂಡಾ ಬಹುತೇಕರು ಬರೆದಿದ್ದಾರೆ.ಅವರಿಗಿರುವ ಎತ್ತರದ ಸಹಜ ಸುರದ್ರೂಪಿನೊಂದಿಗೆ ಅವರ ಅಭಿನಯದಲ್ಲಿ ಸಹಜತೆ ಸಹಾ ಎದ್ದು ಕಾಣುವಂತದ್ದು.

ಮುಹಮ್ಮದ್ ಕುಟ್ಟಿ ಎಂಬ ಮೂಲ ಹೆಸರಿನ ಮಮ್ಮೂಟ್ಟಿ 1953ರ ಸೆಪ್ಟೆಂಬರ್ 7ರಂದು ಜನಿಸಿದರು. ಕೊಟ್ಟಾಯಂ ಜಿಲ್ಲೆಯ ವೈಕೋಮ್ ಬಳಿಯ ಚೆಂಪು ಅವರು ಹುಟ್ಟಿ ಬೆಳೆದ ಊರು. ತಂದೆ ಇಸ್ಮೇಲ್ ಕೃಷಿಕರು. ತಾಯಿ ಫಾತಿಮಾ. ಮಮ್ಮೂಟ್ಟಿ ಕೊಚ್ಚಿಯ ಮಹಾರಾಜ ಕಾಲೇಜಿನಲ್ಲಿ ಓದಿದ ನಂತರ ಎರ್ನಾಕುಲಂ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಪೂರೈಸಿ, ಮಂಜೇರಿಯಲ್ಲಿ ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿದರು. 

ಮಮ್ಮೂಟ್ಟಿ ತಮ್ಮ ಓದಿನ ದಿನಗಳಲ್ಲೇ  1971ರಲ್ಲಿ ಅನುಭವಾಂಗಳ್ ಎಂಬ ಕೆ.ಎಸ್. ಸೇತುಮಾಧವನ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದರು. 1973ರಲ್ಲಿ ಕಾಲಚಕ್ರಂ ಎಂಬ  ಪ್ರೇಮ್ ನಜೀರ್ ನಟಿಸಿದ್ದ ಚಿತ್ರದಲ್ಲೂ ಕಂಡಿದ್ದರು. ಆಗ ಅವರು ತಮ್ಮ  ಹೆಸರನ್ನು  ಸಜಿನ್ ಎಂದು ಇಟ್ಟುಕೊಂಡಿದ್ದರು.

ಮಮ್ಮೂಟ್ಟಿ 1979ರಲ್ಲಿ ದೇವಲೋಕಂ ಎಂಬ ಎಂ.ಟಿ. ವಾಸುದೇವನ್ ನಾಯರ್ ನಿರ್ದೇಶನದಲ್ಲಿ ನಟಿಸಿದ ಚಿತ್ರ ತೆರೆಕಾಣಲಿಲ್ಲ. 1980ರ ಸಮಯದಲ್ಲಿ ಎಂ.ಆಜಾದ್ ನಿರ್ದೇಶನದ ಎಂ.ಟಿ.ವಾಸುದೇವನ್ ನಾಯರ್ ಅವರು ಚಿತ್ರಕಥೆ ಬರೆದ 'ವಿಲ್ಕಾನುಂಡು ಸ್ವಪ್ನಂಗಳ್' ಮಮ್ಮೂಟ್ಟಿ ಅವರ ಗಣನೀಯ ಚಿತ್ರ. ಮುಂದೆ ಯವನಿಕಾ, ಅಹಿಂಸಾ,  ಕೂಡೆವಿಡೆ, ಆ ರಾತ್ರಿ, ಆಲ್‌ಕೂತತಿಲ್ ತನಿಯೆ,  ಆದಿಯೋಳುಕ್ಕುಕಳ್, ಯಾತ್ರಾ, ನಿರಾಕ್ಕೂಟ್ಟು, ನ್ಯೂ ಡೆಲ್ಲಿ, ತನಿವರತನಂ, ಸಿಬಿಐ ಡೈರಿ ಕುರಿಪ್ಪು, ಜಾಗೃತಾ, ಸೇತುರಾಂ ಐಯರ್ ಸಿಬಿಐ, ನೆರಾರಿಯನ್ ಸಿಬಿಐ, ಅಕ್ಷರಾಂಗಳ್, ಒರು ವಡಕ್ಕನ್ ವೀರಗಥಾ, ಮಥಿಲುಕಾಲ್, ಮೃಗಯಾ, ಮಹಾಯಾನಂ, ಅಮರಮ್‌, ವಿಧೇಯನ್, ಪೊಂಥನ್ ಮಾದಾ, ವಾತ್ಸಲ್ಯಂ, ಕಾಜ್‌ಚಾ, ತೊಮ್ಮನುಂ ಮಕ್ಕಳುಂ, ರಾಜಾಮಾಣಿಕ್ಯಂ,  ಥುರುಪ್ಪು ಗುಲಾನ್ ಮಾಯಾವಿ, ಬಿಗ್ ಬಿ, ಅಣ್ಣನ್ ತಂಬಿ,  ಲೌಡ್‌ಸ್ಪೀಕರ್, ಪಜಸಿ ರಾಜಾ, ಪ್ರಾಂಚಿಯೇತನ್ ಎಂಡ್ ದಿ ಸೇಂಟ್ , ಪೆರನ್ನು, ಉಂಡಾ, ಮಧುರ ರಾಜಾ, ಭೀಷ್ಮ ಪರ್ವಂ, ಕಣ್ಣೂರ್ ಸ್ಕ್ವಾಡ್ ಮುಂತಾದ ಚಿತ್ರಗಳ ಮೂಲಕ ನಿರಂತರ ಏರುತ್ತಲೇ ಬಂದಿದ್ದಾರೆ.

ಪ್ರಧಾನವಾಗಿ ಮಲೆಯಾಳಂ ಚಲನಚಿತ್ರಗಳಲ್ಲಿ ತೊಡಗಿಕೊಂಡಿರುವ ಮಮ್ಮೂಟ್ಟಿ  ತಮಿಳು, ಹಿಂದಿ, ತೆಲುಗು ಚಲನಚಿತ್ರಗಳಲ್ಲಿ ಮತ್ತು ಒಂದು ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಇಂಗ್ಲಿಷ್ ಚಿತ್ರದ ಅಭಿನಯಕ್ಕೂ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ.

ನಾಲ್ಕು ದಶಕಗಳ  ವೃತ್ತಿಜೀವನದಲ್ಲಿ ಮಮ್ಮೂಟ್ಟಿ 400ಕ್ಕೂ  ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೇಷ್ಠ ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು, ಏಳು ಕೇರಳ ರಾಜ್ಯ ಪ್ರಶಸ್ತಿಗಳು ಮತ್ತು ಹತ್ತಾರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸ್ವೀಕರಿಸಿರುವ ಮಮ್ಮೂಟ್ಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹಾಸಂದಿದೆ.

ಮಮ್ಮೂಟ್ಟಿ ಮಲಯಾಳಂ ಕಮ್ಯುನಿಕೇಷನ್ಸ್ ಸಂಸ್ಥೆಗಳ ಅಧ್ಯಕ್ಷರೂ ಆಗಿದ್ದು, ಇದು ಮಲಯಾಳಂ ಕಿರುತೆರೆಯ ವಾಹಿನಿಗಳಾದ ಕೈರಾಲಿ ಟಿವಿ, ಪೀಪಲ್ ಟಿವಿ ಮತ್ತು ವಿ ಟಿವಿ ಮುಂತಾದವುಗಳನ್ನು ನಿರ್ವಹಿಸುತ್ತಿದೆ.

ಹಲವು ಸದ್ಭಾವನಾ ಮತ್ತು ಸಾರ್ವಜನಿಕ ಹಿತೋದ್ದೇಶದ ಕಾರ್ಯಗಳಲ್ಲಿ ಪಾಲ್ಗೊಂಡಿರುವ ಮಮ್ಮೂಟ್ಟಿ ಅಕ್ಷಯ ಪಾತ್ರಾ ಯೋಜನೆಗೂ ರಾಯಭಾರಿ ಆಗಿದ್ದಾರೆ.

ಒಂದು ರೀತಿಯಲ್ಲಿ ವಾಣಿಜ್ಯ ಮತ್ತು ಕಲಾತ್ಮಕತೆಗಳ ಚಿತ್ರಗಳ ನಡುವಿನ ವೆತ್ಯಾಸಗಳನ್ನು ನೀಗಿಸಿ ಉತ್ತಮ ಚಿತ್ರಗಳ ನಿರ್ಮಾಣಕ್ಕೆ  ಮಮ್ಮೂಟ್ಟಿ ಮತ್ತು ಮೋಹನ್ ಲಾಲ್ ಅವರುಗಳು ಮಲಯಾಳಂ ಚಿತ್ರರಂಗದಲ್ಲಿ ನೀಡಿರುವ ಕೊಡುಗೆ ಅಪಾರ.


On the birthday of great actor Mammotty 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ