ಆಶಾ ಬೋಸ್ಲೆ
ಆಶಾ ಬೋಸ್ಲೆ
ಆಶಾ ಬೋಸ್ಲೆ ಸಿನಿಮಾ ಸಂಗೀತ ಲೋಕದ ಮಹಾನ್ ಸಾಮ್ರಾಜ್ಞಿ. 88 ತುಂಬಿರುವ ಆಶಾ ಅವರ ಶರೀರಕ್ಕೆ ವರುಷಗಳು ಸೇರ್ಪಡೆಯಾಗುತ್ತಿವೆಯೇ ವಿನಃ ಶಾರೀರಕ್ಕಲ್ಲ ಎಂಬುದನ್ನು ಅವರ ಇನಿಧ್ವನಿ ಈಗಲೂ ನಿರೂಪಿಸುತ್ತಲೇ ಸಾಗಿದೆ.
ಸಂಗೀತ ಲೋಕದ ಮಹಾನ್ ಸಾಮ್ರಾಜ್ಞಿಯಾದ ಆಶಾ ಬೋಸ್ಲೆ 1933ರ ಸೆಪ್ಟೆಂಬರ್ 8ರಂದು ಜನಿಸಿದರು. ದೀನನಾಥ ಮಂಗೇಶ್ಕರ್ ಅವರ ಮಗಳಾಗಿ ಅಕ್ಕ ಲತಾ ಮಂಗೇಶ್ಕರ್ ಜೊತೆಯಲ್ಲಿ ಸಿನಿಮಾದಲ್ಲಿ ಒಂದಷ್ಟು ಕೂಲಿಗಾಗಿ ಅಭಿನಯ ಮತ್ತು ಗಾಯನಗಳಲ್ಲಿ ಚಿಕ್ಕಂದಿನಲ್ಲೇ ಆಶಾ ತೊಡಗಿಕೊಂಡರು. ಬದುಕಿನಲ್ಲಿ ಕವಿದ ಹಲವು ಕಾರ್ಮೋಡಗಳ ಹಿನ್ನಲೆಯಲ್ಲಿ ಆಶಾ ತಮ್ಮ ಆಶಯಗಳಿಗಾಗಿ ಸಂಗೀತವನ್ನೇ ಸಂಗಾತಿಯನ್ನಾಗಿ ಮಾಡಿಕೊಂಡು ಮುಂದುವರೆದರು.
ಅಂದು ಅಕ್ಕ ಲತಾ ಮಂಗೇಶ್ಕರ್ ಅವರಿಗಿದ್ದ ಅಸಾಮಾನ್ಯ ಪ್ರತಿಭೆ ಮತ್ತು ಬೇಡಿಕೆಗಳ ದೆಸೆಯಿಂದ, ಆಶಾ ಅವರ ಪ್ರತಿಭೆ ಕೆಲವೊಂದು ಸೀಮಿತ ಅವಕಾಶಗಳನ್ನು ಮಾತ್ರಾ ಗಳಿಸಿತ್ತು. ಆಶಾ ಅವರ ಧ್ವನಿಯಲ್ಲಿ ಕೆಲವೊಂದು ಮಾದಕತೆ ತುಂಬಿದ ಹಾಡುಗಳಿಗೆ ದೊರೆತ ಯಶಸ್ಸು, ಅವರ ಪ್ರತಿಭೆಯನ್ನು ಬಹಳಷ್ಟು ಕಾಲ ಅಂತಹ ಹಾಡುಗಳಿಗೇ ಸೀಮಿತಗೊಳಿಸಿಬಿಟ್ಟಿತ್ತು. ವಿ. ಶಾಂತಾರಾಂ ಅವರ 'ನವರಂಗ್' ಅಂತಹ ಚಿತ್ರದಲ್ಲಿ 'ಮಹೇಂದ್ರ ಕುಮಾರ್' ಅವರೊಂದಿಗೆ ಹಾಡಿದಂತಹ ಸುಶ್ರಾವ್ಯ ಗೀತೆ 'ಆದಾ ಹೈ ಚಂದ್ರಮಾ'ದಂತಹ ಗೀತೆಗಳಿಗೆ ಹೆಚ್ಚು ಪ್ರಚಾರ ಸಿಗದೇ ಇದ್ದದ್ದು ಕೂಡಾ ಅಚ್ಚರಿಯ ವಿಷಯವೇ!
ನಂತರದ ದಿನಗಳಲ್ಲಿ ಸಜ್ಜದ್ ಹುಸೇನ್, ಓ ಪಿ ನಯ್ಯರ್ ಮುಂತಾದ ಸಂಗೀತ ನಿರ್ದೇಶಕರು ಆಶಾ ಅವರಿಗೆ ಪ್ರೋತ್ಸಾಹ ನೀಡಿದರು. ಮುಂದೆ 'ತೀಸ್ರಿ ಮಂಜಿಲ್' ಚಿತ್ರದ 'ಆಜಾ ಆಜಾ ಮೈ ಹೂಂ ಪ್ಯಾರ್ ತೆರಾ' ಹಾಡು ಆಶಾ ಅವರಿಗೆ ಬಹಳಷ್ಟು ಪ್ರಖ್ಯಾತಿ ತಂದುಕೊಟ್ಟಿತು. ಮುಂದೆ ಆಶಾ ಅವರಿಗೆ ಜೀವನ ಸಂಗಾತಿಯೂ ಆದ ಆರ್. ಡಿ. ಬರ್ಮನ್ ಅವರಿಗೆ ಮೊದಲ ಗಣನೀಯ ಯಶಸ್ಸು ದೊರೆತದ್ದೂ ‘ತೀಸ್ರೀ ಮಂಜಿಲ್’ ಚಿತ್ರದಲ್ಲೇ. ಆ ಚಿತ್ರದ 'ಓ ಹಸೀನಾ ಝುಲ್ಫೋನ್‌ವಾಲಿ' ಮತ್ತು 'ಓ ಮೇರ ಸೋನಾ ರೆ' ಹಾಡುಗಳು ಅತ್ಯಂತ ಜನಪ್ರಿಯವಾದವು. ಕ್ಯಾರವಾನ್ ಚಿತ್ರದ 'ಪಿಯಾ ತೂ ಅಬ್ ತೊ ಆಜಾ', 'ಡಾನ್' ಚಿತ್ರದ 'ಏ ಮೆರಾ ದಿಲ್ ', 'ಯಾದೋಂ ಕಿ ಬಾರಾತ್' ಚಿತ್ರದ 'ಚುರಾಲಿಯಾ ಹೈ ತುಮ್ ನೆ ಜೋ ದಿಲ್ ಕೊ', 'ಶಿಖಾರ್' ಚಿತ್ರದ 'ಪರ್ದೆ ಮೆ ರೆಹನೆ ದೋ' ಮುಂತಾದ ಹಲವಾರು ಹಾಡುಗಳು ಆಶಾ ಅವರನ್ನು ಅತ್ಯಂತ ಜನಪ್ರಿಯವಾಗಿಸಿದವು.
ಸಂಗೀತ ನಿರ್ದೇಶಕ ಖಯ್ಯಾಮ್ ಅವರು ಆಶಾ ಬೋಸ್ಲೆ ಅವರ ಧ್ವನಿಗೆ ಹೊಸ ತಿರುವು ತಂದವರಲ್ಲಿ ಪ್ರಮುಖರು. ಅವರ 'ಉಮ್ರಾವ್ ಜಾನ್' ಚಿತ್ರ ಎರಡು ರೀತಿಯ ಆಶ್ಚರ್ಯಗಳನ್ನು ಸೃಷ್ಟಿಸಿತ್ತು. ಮೊದಲನೆಯದು, ಗ್ಲಾಮರ್ ನಟಿ ರೇಖಾ 'ಉಮ್ರಾವ್ ಜಾನ್' ಪಾತ್ರದಲ್ಲಿ ನಟಿಸುತ್ತಾರೆ ಎಂಬುದು. ಎರಡನೆಯದು, ಆಶಾ ಬೋಸ್ಲೆ ಅವರ ಧ್ವನಿಯಲ್ಲಿ ಈ ಚಿತ್ರಕ್ಕೆ ಬೇಕಾದ ಸಂಗೀತ ಹೊರಹೊಮ್ಮಲಿದೆಯೇ ಎಂಬ ಪ್ರಶ್ನೆ! ಖಯ್ಯಾಮ್ ಆ ಚಿತ್ರದ ಹಾಡುಗಳನ್ನು ಆಶಾರಿಂದ ಹಾಡಿಸುತ್ತೇನೆ ಎಂದಾಗ ಉದ್ಯಮದ ಮಂದಿ ದಂಗಾದರು. ಖಯ್ಯಾಮ್ 'ಉಮ್ರಾವ್ ಜಾನ್' ಬಗೆಗಿನ ಪುಸ್ತಕವನ್ನು ಆಶಾರಿಗೆ ಓದಲು ಕೊಟ್ಟರು. 'ಉಮ್ರಾವ್ ಜಾನ್' ಬಗ್ಗೆ ತಿಳಿದುಕೊಳ್ಳಲು ಅದು ನೆರವಾಯಿತು. ಈ ಚಿತ್ರದ ಅಭಿನಯಕ್ಕೆ ರೇಖಾ ರಾಷ್ಟ್ರೀಯ ಪ್ರಶಸ್ತಿ ಪಡೆದರೆ, ಆಶಾ ಅವರು 'ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲಿಜೀಯೆ…' ಹಾಡಿಗೆ ತಮ್ಮ ಮೊಟ್ಟ ಮೊದಲ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡರು. ಕೆಲವು ವರ್ಷಗಳ ನಂತರ, 'ಇಜಾಝತ್' ಚಿತ್ರದ 'ಮೇರಾ ಕುಚ್ ಸಮಾನ್' ಹಾಡಿಗಾಗಿ ಅವರು ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು.
ಆಶಾ ತಮ್ಮ 62ನೆಯ ವಯಸ್ಸಿನಲ್ಲಿ ಹಾಡಿದ 'ರಂಗೀಲಾ' ಚಿತ್ರದ 'ತನ್ಹಾ ತನ್ಹಾ', 'ರಂಗೀಲಾರೆ' ಗೀತೆಗಳು ಸಂಗೀತಪ್ರಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದವು. ಅವರು ತಮ್ಮ 72ನೆಯ ವಯಸ್ಸಿನಲ್ಲಿ ಹಾಡಿದ ತಮಿಳು ಚಿತ್ರ 'ಚಂದ್ರಮುಖಿ' ಚಿತ್ರದ ಹಾಡುಗಳು ಮತ್ತು ಕೆಲವು ವರ್ಷದ ಹಿಂದೆ ಯಶಸ್ಸು ಕಂಡ 'ಲಕ್ಕಿ' ಚಿತ್ರಕ್ಕಾಗಿ ಹಾಡಿದ ಪಾಪ್ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟವನ್ನು ಕಂಡ ಧ್ವನಿಮುದ್ರಣಗಳಾಗಿವೆ.
ಇಂದು ಆಶಾ ಬೋಸ್ಲೆ ಅವರು ಹಾಡದ ಸಂಗೀತ ವಿಭಾಗವಿಲ್ಲ ಮತ್ತು ಧ್ವನಿ ಹೊರಡಿಸದೆ ಇರುವ ಭಾಷೆಗಳೂ ಇಲ್ಲ. ಅವರು ದಾಟದ ಸಂಗೀತದ ಗಡಿಗಳೇ ಇಲ್ಲ. ಕನ್ನಡದ 'ಬಂಗಾರದ ಮನುಷ್ಯ' ಮತ್ತು 'ಮತ್ತೆ ಮುಂಗಾರು' ಅಂತಹ ಚಿತ್ರಗಳಿಗೆ ಅವರು ಅಲ್ಲಲ್ಲಿ ಧ್ವನಿ ನೀಡಿದ್ದಿದೆ.
ಭಾರತ ಸರ್ಕಾರದ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ, 'ಪದ್ಮವಿಭೂಷಣ', 'ಏಷ್ಯಾದ ಕೋಗಿಲೆ', 'ಗ್ರಾಮಿ' ಪ್ರಶಸ್ತಿಗಳಿಗೆ ಹಲವು ನಾಮನಿರ್ದೇಶಗಳು ಹೀಗೆ ವಿಶ್ವದಾದ್ಯಂತದ ಹಲವು ರೀತಿಯ ಪ್ರತಿಷ್ಠಿತ ಗೌರವಗಳು ಆಶಾ ಅವರನ್ನು ಕೂಗಿ ಕರೆದಿವೆ. ಈಗಲೂ ಮಾಧ್ಯಮಗಳಲ್ಲಿನ ಎಲ್ಲಾ ರೀತಿಯ ಸಂಗೀತ ಕಾರ್ಯಕ್ರಮಗಳಿಗೆ ಅವರು ನಿರಂತರ ಅತಿಥಿ. 2009ರ ವರ್ಷದಲ್ಲಿ ‘ವರ್ಲ್ಡ್ ರೆಕಾರ್ಡ್ ಅಕಾಡೆಮಿ’ ಮತ್ತು 2011ರ ವರ್ಷದಲ್ಲಿ ‘ಗಿನ್ನಿಸ್ ವಿಶ್ವ ದಾಖಲೆ’ ಸಂಸ್ಥೆಗಳು ಅದುವರೆವಿಗೂ ಅತ್ಯಂತ ಹೆಚ್ಚು ಧ್ವನಿಮುದ್ರಿತ ಗೀತೆಗಳಿಗೆ ಧ್ವನಿ ನೀಡಿರುವವರು ಆಶಾ ಬೋಂಸ್ಲೆ ಎಂದು ಘೋಷಿಸಿದ್ದವು.
ಬಡತನದ ಬವಣೆಯಿಂದ ಪಾರಾಗಲು ಚಿತ್ರರಂಗಕ್ಕೆ ಬಂದು, ಬದುಕಿನಲ್ಲಿ ಹಲವು ರೀತಿಯ ನೋವು, ಸೋಲು, ಏರಿಳಿತಗಳನ್ನು ಕಂಡು ತಮ್ಮ ಪಾಲಿಗೆ ಬಂದದ್ದನ್ನು ಶ್ರದ್ಧೆಯಿಂದ ತಪಸ್ಸಿನಂತೆ ಮಾಡಿ, ಇಂದು ಯಶಸ್ಸಿನ ಹಿರಿಯ ಶಿಖರವನ್ನು ಏರಿರುವ ಈ ಸಂಗೀತದ ಧ್ರುವತಾರೆಯ ಸಾಧನೆ ಅಭಿನಂದಾರ್ಹವಾದದ್ದು. ಈ ಮಹಾನ್ ಸಾಧಕಿಯ ಬರಲಿರುವ ದಿನಗಳು ಸಹ್ಯವಾಗಿ ಸಂತಸಕರವಾಗಿರಲಿ ಎಂದು ಶುಭ ಹಾರೈಸುತ್ತಾ ನಮ್ಮ ಗೌರವಗಳನ್ನು ಸಲ್ಲಿಸೋಣ.
On the birth day of great playback singer Asha Bhosle
ಕಾಮೆಂಟ್‌ಗಳು