ನಿಸರ್ಗದತ್ತ ಮಹಾರಾಜ್
ಶ್ರೀ ನಿಸರ್ಗದತ್ತ ಮಹಾರಾಜ್
ಆಧ್ಯಾತ್ಮಲೋಕದಲ್ಲಿ ವಿಶ್ವದಾದ್ಯಂತ ಪ್ರಸಿದ್ಧರಾದವರಲ್ಲಿ ನಿಸರ್ಗ ಮಹಾರಾಜ್ ಒಬ್ಬರು.
ಮೌರೈಸ್ ಫ್ರಿಡ್ಮನ್ ಅವರು 1973 ರಲ್ಲಿ ನಿಸರ್ಗದತ್ತ ಮಹಾರಾಜರ ಬೋಧನೆಗಳನ್ನು ‘I am that!’ ಎಂಬ ಹೆಸರಿನಿಂದ ಇಂಗ್ಲಿಷಿನಲ್ಲಿ ಪ್ರಕಟಿಸಿದಾಗ ಅದು ವಿಶ್ವದೆಲ್ಲೆಡೆ ಪ್ರಸಿದ್ಧಿಗೊಂಡಿತು. ಉತ್ತರ ಅಮೆರಿಕ ಮತ್ತು ಯೂರೋಪಿನ ಅನೇಕರು ಅವರ ಅನುಯಾಯಿಗಳಾದರು.
ನಿಸರ್ಗದತ್ತ ಮಹಾರಾಜರ ಮೂಲ ಹೆಸರು ಮಾರುತಿ ಶಿವರಾಮಪಂತ್ ಕಂಬ್ಲಿ. ಅವರು 1897ರ ಏಪ್ರಿಲ್ 17ರಂದು ಮುಂಬೈನಲ್ಲಿ ಜನಿಸಿದರು. ತಂದೆ ಶಿವರಾಮಪಂತ್. ತಾಯಿ ಪಾರ್ವತಿ ಬಾಯಿ. ಈ ಕುಟುಂಬ ವಿಟ್ಟೋಬನ ಭಕ್ತರಾಗಿ ವೈಷ್ಣವ ಚಿಂತನೆಗಳಲ್ಲಿ ನಿಷ್ಠೆ ಹೊಂದಿತ್ತು. ಹನುಮಜ್ಜಯಂತಿಯಂದು ಜನಿಸಿದ ಮಗನಿಗೆ ಮಾರುತಿ ಎಂದು ಹೆಸರಿಟ್ಟರು. ಶಿವರಾಮ ಪಂತರು ಮನೆಗೆಲಸದ ಕೂಲಿ ಮಾಡುತ್ತಿದ್ದು ಮುಂದೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕಂದಲಗಾವ್ ಎಂಬಲ್ಲಿ ಸಣ್ಣಪ್ರಮಾಣದ ಕೃಷಿಕರಾದರು. ಮಾರುತಿಯ ಬಾಲ್ಯವೆಲ್ಲ ಈ ಊರಿನಲ್ಲಿ ನಡೆಯಿತು. ಇವರಿಗೆ ಇಬ್ಬರು ಸಹೋದರರು ಮತ್ತು ನಾಲ್ಕು ಸಹೋದರಿಯರು.
1915ರಲ್ಲಿ ತಂದೆಯವರ ಮರಣದ ದೆಸೆಯಿಂದ ಮಾರುತಿ ಶಿವರಾಮಪಂತ್ ಕಂಬ್ಲಿ ತಮ್ಮ ಕುಟುಂಬದ ಪೋಷಣೆಗೆ ನೆರವಾಗಲು ಅಣ್ಣನೊಂದಿಗೆ ಮುಂಬೈಗೆ ಬಂದರು. ಕೆಲವು ಕಾಲ ಅಗಡಿಯೊಂದರಲ್ಲಿ ಗುಮಾಸ್ತರಾಗಿ ಕೆಲಸಮಾಡಿ ಮುಂದೆ ತಮ್ಮದೇ ಆದ ಬೀಡಿ ಅಂಗಡಿ ಇಟ್ಟರು. ಮುಂದೆ ಕೆಲವೇ ಕಾಲದಲ್ಲಿ ಎಂಟು ಚಿಲ್ಲರೆ ಅಂಗಡಿಗಳ ಒಡೆಯರಾದರು. 1924ರಲ್ಲಿ ಸುಮತಿಬಾಯಿ ಅವರನ್ನು ವರಿಸಿದರು. ಅವರಿಗೆ ಮೂರು ಹೆಣ್ಣು ಮತ್ತು ಒಂದು ಗಂಡು ಮಗು.
1933ರಲ್ಲಿ ಮಾರುತಿ ಶಿವರಾಮಪಂತ್ ಕಂಬ್ಲಿ ಅವರಿಗೆ ನವನಾಥ ಸಂಪ್ರದಾಯದ ಗುರು ಸಿದ್ಧರಾಮೇಶ್ವರ ಮಹಾರಾಜರ ಭೇಟಿ ಆಯಿತು. ಗುರುಗಳು "ನೀನು ಯಾರನ್ನು ನೀನು ಎಂದು ಭಾವಿಸಿದ್ದೀಯೋ ಅದು ನೀನಲ್ಲ” ಎಂದರು. ನವನಾಥ ಪಂತಕ್ಕೆ ಮಾರುತಿ ಅವರಿಗೆ ಧೀಕ್ಷೆ ಕೊಟ್ಟ ಗುರುಗಳು ಬೋಧಿಸಿದ ಮಂತ್ರವನ್ನು ತಕ್ಷಣವೇ ಪಠಿಸಲಾರಂಭಿಸಿದರು. ಗುರು ಸಿದ್ಧರಾಮೇಶ್ವರರು ನಿಸರ್ಗದತ್ತರಿಗೆ ಆತ್ಮಚಿಂತನೆಗೆ ತೊಡಗಲು ಆದೇಶಿದ್ದನ್ನು ಶಿರಸಾವಹಿಸಿ ಆರಂಭಿಸಿದರು.
ನಿಸರ್ಗದತ್ತರು "ನಾನು” ಎಂಬ ಭಾವದ ಬಗ್ಗೆ ಅರಿವು ಹೊಂದಲು ತಮ್ಮ ಬಿಡುವಿನ ವೇಳೆಯನ್ನೆಲ್ಲ ಮೀಸಲಿಟ್ಟು ಮೌನದಲ್ಲಿ ತಮ್ಮನ್ನು ತಾವು ಶ್ರದ್ಧೆಯಿಂದ ಗಮನಿಸತೊಡಗಿದರು. ಇದು ಅವರ ಮುಂದಿನ ಸಂಪೂರ್ಣ ಬದುಕೇ ಆಯಿತು. ಧ್ಯಾನ ಮತ್ತು ಭಜನೆ ಅವರ ಬದುಕಿನ ಆಳಕ್ಕಿಳಿಯಿತು.
ನಿಸರ್ಗದತ್ತರಿಗೆ ಸಾನ್ನಿಧ್ಯ ನೀಡಿದ ಕೇವಲ ಎರಡೂವರೆ ವರ್ಷಗಳಲ್ಲಿ ಸಿದ್ಧರಾಮೇಶ್ವರ ಮಹಾರಾಜರು 1936ರ ನವೆಂಬರ್ 6 ರಂದು ಈ ಲೋಕವನ್ನಗಲಿದರು.
1937ರಲ್ಲಿ ನಿಸರ್ಗದತ್ತರು ಎಂಟು ತಿಂಗಳಕಾಲ ಅಲೆಮಾರಿಯಾಗಿ ಭಾರತದಲ್ಲೆಲ್ಲ ಅಲೆದು 1938 ರಲ್ಲಿ ತಮ್ಮ ಮನೆಗೆ ಹಿಂದಿರುಗಿ ಬಂದರು. ಈ ಪಯಣದಲ್ಲಿ ಅವರ ಮನಃಸ್ಥಿತಿ ಪೂರ್ಣ ಬದಲಾಗಿತ್ತು. "ಯಾವುದೇ ಆಗಲಿ ಸರಿಯಿಲ್ಲ ಎನ್ನುವ ಪ್ರಶ್ನೆಯೇ ಉದ್ಭವಿಸುವುದು ನಿಂತು ಹೋಯಿತು". ಕೇವಲ ಒಂದು ಅಂಗಡಿಯನ್ನು ಮಾತ್ರಾ ತಮ್ಮ ಜೀವನ ನಿರ್ವಹಣೆಗೆ ಅಗತ್ಯವಾದದ್ದನ್ನು ಸಂಪಾದಿಸಲು ಉಳಿಸಿಕೊಂಡರು.
1942 - 48 ಅವಧಿಯಲ್ಲಿ ನಿಸರ್ಗದತ್ತರ ಹೆಂಡತಿ ಮತ್ತು ಒಬ್ಬ ಪುತ್ರಿ ನಿಧನರಾದರು. 1951 ರಲ್ಲಿ ತಮಗೆ ಅನುಭವವಾದ ಗುರುಪ್ರೇರಣೆಯಿಂದ ಉಪದೇಶ ನೀಡುವುದನ್ನು ಆರಂಭಿಸಿದರು. 1966ರಲ್ಲಿ ತಮ್ಮ ಅಂಗಡಿ ವ್ಯವಹಾರದಿಂದ ನಿವೃತ್ತಿ ಪಡೆದ ನಂತರದಲ್ಲಿ ಪ್ರತಿ ನಿತ್ಯ ದಿನಕ್ಕೆರಡು ವೇಳೆಯಲ್ಲಿ ಆಸಕ್ತರಿಗೆ ಬೋಧಿಸುತ್ತಿದ್ದರು.
ನಿಸರ್ಗದತ್ತ ಮಹಾರಾಜರ ಬೋಧನೆಗಳು 'ನಿಸರ್ಗ ಯೋಗ' ಎಂದೆನಿಸಿವೆ. ನಿಸರ್ಗಕ್ಕೆ 'ತೊಂದರೆಯಾಗದಂತೆ', 'ಸ್ನೇಹದಿಂದ' ಮತ್ತು 'ಆಸಕ್ತಿಯಿಂದ', ಸಹಜ ಅರಿವಿನೊಂದಿಗೆ, ಎಚ್ಚರ ವಹಿಸಿ ಯಾವುದೇ ಶ್ರಮಪಡದಂತೆ ಸಹಜವಾಗಿ ಬದುಕುವಿಕೆಯೇ ನಿಸರ್ಗ ಯೋಗ. ಅದು 'ಸ್ವಯಂ' ನಾನು ಎಂಬ ಅರಿವಿನಲ್ಲಿ ಬದುಕುವುದೇ ಆಗಿದೆ.
ಅವರ ಕೆಲವು ಚಿಂತನೆಗಳು ಇಂತಿವೆ:
ಕೆಲವು ಸಲ ನಾನೇ ಎಲ್ಲಾ ಎನ್ನುವ ಭಾವ ಹೊಮ್ಮುತ್ತದೆ.
ಅದನ್ನ ನಾನು ಪ್ರೀತಿಯೆಂದು ಕರೆಯುತ್ತೇನೆ !
ಮತ್ತೆ ಕೆಲವು ಸಲ ನಾನೇನೂ ಅಲ್ಲ ಎನ್ನುವ ಭಾವ ಹೊಮ್ಮುತ್ತದೆ
ಅದನ್ನ ನಾನು ಬುದ್ದಿವಂತಿಕೆ ಎಂದು ಕರೆಯುತ್ತೇನೆ !
ಈ ಪ್ರೀತಿ ಹಾಗೂ ಬುದ್ದಿವಂತಿಕೆಗಳ ನಡುವೆಯೇ
ನಿರಂತರವಾಗಿ ಬದುಕು ಸಾಗುತ್ತದೆ.
ನಿನ್ನಷ್ಟಕ್ಕೆ ನೀನೇ ನೀನು ಜಗತ್ತಿನಿಂದ ಭಿನ್ನನಾದವನೆಂದು ಭಾವಿಸಿದರೆ
ಜಗತ್ತು ನಿನ್ನ ಹೊರತಾಗಿದೆ ಎನ್ನುವಂತೆ ಗೋಚರವಾಗುತ್ತದೆ;
ಹಾಗೂ
ನಿನಗೆ ಮೋಹ ಮತ್ತು ಭಯದ ಅನುಭವವಾಗುತ್ತದೆ!
ನಾನು ಹಾಗೂ ಈ ಜಗತ್ತು ಭಿನ್ನವೇ ಅಲ್ಲವೆಂದು ಭಾವಿಸುತ್ತೇನೆ.
ಹಾಗಾಗಿ ನಾನು ಮೋಹ – ಭಯಗಳ ಅನುಭವಕ್ಕೆ ಈಡಾಗುವುದೇ ಇಲ್ಲ.
ನಿನ್ನಲ್ಲಿ ಏನಿಲ್ಲವೋ ಅದರ ಬಗ್ಗೆ ಚಿಂತಿಸುವುದರ ಬದಲು,
ಯಾವುದನ್ನ ನೀನು ಎಂದೆಂದಿಗೂ ಕಳೆದುಕೊಳ್ಳದಂತೆ ಇರಿಸಿಕೊಂಡಿರುವೆಯೋ
ಅದನ್ನ ನಿನ್ನೊಳಗೆ ಶೋಧಿಸಿಕೋ.
ನಿನ್ನ ಎಚ್ಚರದ ಆವಸ್ಥೆಯನ್ನ ಪದಗಳಾಚೆಗಿನ ಶಾಂತಿಯೆಡೆಗೆ ಹರಿಸು.
ಆಗ ನೀನು ಸತ್ಯವನ್ನ ಆಲಿಸಲು ಶಕ್ತನಾಗುವೆ.
ನಿನಗೆ ಅಗತ್ಯವೇ ಇಲ್ಲದ್ದನ್ನು ಬೇಡುವುದು ಎಂದು ನಿಲ್ಲಿಸುವೆಯೋ
ಆಗ ಮಾತ್ರ ನಿನಗೆ ಅವಶ್ಯವಿರುವುದನ್ನ ಪಡೆಯುವೆ !!
ಏನು ಘಟಿಸುತ್ತದೆಯೋ, ಅದು ಘಟಿಸುವುದು ನಿನ್ನಿಂದಲೇ, ನಿನ್ನ ಮೂಲಕವೇ.
ನಿನಗೆ ನೀನೇ ಸೃಷ್ಟಿಕರ್ತ.
ಸಂತಸಪಡುವವನು, ನಿರ್ನಾಮ ಮಾಡುವವನು ನೀನೇ… ನೀನಷ್ಟೇ !!
ನಿಸರ್ಗದತ್ತ ಮಹಾರಾಜರ ಬೋಧನೆಗಳನ್ನು ಅವರ ಅನುಯಾಯಿಗಳು ಗ್ರಂಥ ಮತ್ತು ಅಭಿವ್ಯಕ್ತಿ ಮಾಧ್ಯಮಗಳ ಅನೇಕ ರೂಪದಲ್ಲಿ ವಿಶ್ವದೆಲ್ಲೆಡೆ ಪಸರಿಸುತ್ತಾ ಬಂದಿದ್ದಾರೆ.
ನಿಸರ್ಗದತ್ತ ಮಹಾರಾಜ್ ಅವರು 1981ರ ಸೆಪ್ಟೆಂಬರ್ 8 ರಂದು ಈ ಲೋಕವನ್ನಗಲಿದರು.
On the birth anniversary of Sri Nisargadatta Maharaj
ಕಾಮೆಂಟ್‌ಗಳು