ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ರಾಧಾಕೃಷ್ಣನ್


 ಡಾ. ಎಸ್. ರಾಧಾಕೃಷ್ಣನ್


ಆದರ್ಶ ಶಿಕ್ಷಕ, ವಿಶ್ವ ವಿಖ್ಯಾತ ತತ್ವಜ್ಞಾನಿ, ಭಾರತದ ಎರಡನೆಯ ರಾಷ್ಟ್ರಪತಿಗಳಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್.  ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿಯೂ ಶ್ರೇಷ್ಠ ಅಧ್ಯಾಪಕರಾಗಿ ಮಾನ್ಯರಾದವರು.  

ರಾಧಾಕೃಷ್ಣನ್  1888ರ ಸೆಪ್ಟಂಬರ್ 5ರಂದು ತಮಿಳುನಾಡಿನ ತಿರುತ್ತಣಿಯಲ್ಲಿ ಜನಿಸಿದರು. ತಂದೆ ವೀರಸಾಮಯ್ಯ ತಹಸೀಲ್‌ದಾರರಾಗಿದ್ದರು. ತಿರುಪತಿ, ವೆಲ್ಲೂರು ಮತ್ತು ಮದರಾಸಿನಲ್ಲಿ ವಿದ್ಯಾರ್ಜನೆ ಮಾಡಿದ ರಾಧಾಕೃಷ್ಣನ್ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ. ಪ್ರತಿಯೊಂದು ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಅವರಿಗೇ ಕಟ್ಟಿಟ್ಟದ್ದು. ಆಕಸ್ಮಿಕವಾಗಿ ನೆಂಟರೊಬ್ಬರು ಓದಲು ಕೊಟ್ಟ ಮೂರು ಪುಸ್ತಕಗಳು ಅವರ ಬಾಳಿನ ಗುರಿಯನ್ನೇ ನಿರ್ಧರಿಸಿಬಿಟ್ಟವು. ಅವುಗಳಿಂದ ಪ್ರಭಾವಿತರಾಗಿ, ಉನ್ನತ ಶಿಕ್ಷಣಕ್ಕಾಗಿ ತತ್ವಶಾಸ್ತ್ರವನ್ನು ಆರಿಸಿಕೊಂಡು ಬಿ.ಎ.  ಮತ್ತು ಎಂ.ಎ. ಪದವಿಗಳನ್ನು ಪಡೆದರು. ಇಪ್ಪತ್ತನೆಯ ವಯಸ್ಸಿನಲ್ಲೇ ವೇದಾಂತದ ನೀತಿಸಾರಗಳ ಕುರಿತಾಗಿ ಮಹಾಪ್ರಬಂಧವನ್ನು ಬರೆದರು.

ಚಿಕ್ಕ ವಯಸ್ಸಿನಿಂದಲೂ ರಾಧಾಕೃಷ್ಣನ್ ಪುಸ್ತಕ ಪ್ರಿಯರು. ವೇದ, ಉಪನಿಷತ್ತುಗಳನ್ನು ಒಳಗೊಂಡ  ಸಂಸ್ಕೃತವನ್ನು ಮಾತ್ರವಲ್ಲದೆ ಹಿಂದಿ ಭಾಷೆಯನ್ನೂ ಕಲಿತರು. ಪೌರ್ವಾತ್ಯ – ಪಾಶ್ಚಿಮಾತ್ಯ ತತ್ವಶಾಸ್ತ್ರಗಳೆರಡರಲ್ಲಿಯೂ ಅವರಿಗೆ ಅಗಾಧ ಪಾಂಡಿತ್ಯವಿತ್ತು. ಪಾಶ್ಚಿಮಾತ್ಯ ರೀತಿಯ ಶಿಕ್ಷಣ ಸಂಸ್ಥೆಗಳಲ್ಲಿದ್ದ  ಶಿಸ್ತು, ಸಮಯ ಪರಿಪಾಲನೆ, ನಡೆನುಡಿಗಳಲ್ಲಿನ ಗಾಂಭೀರ್ಯ ಮೊದಲಾದವು ಅವರಲ್ಲಿ ರೂಪುಗೊಂಡಿತ್ತಾದರೂ, ಆ ಸಂಸ್ಥೆಗಳಲ್ಲಿ ಬೇರೂರಿದ್ದ  ಹಿಂದೂ ಧರ್ಮದ ಬಗೆಗಿನ ತಪ್ಪು ತಿಳುವಳಿಕೆಗಳನ್ನು ಗಮನಿಸಿದ್ದ ಅವರಿಗೆ  ಇಂತಹ ಸೀಮಿತ ಚಿಂತನೆಗಳನ್ನು ತಿದ್ದಬೇಕೆಂಬ ಹಂಬಲ ಪುಟಿದೇಳತೊಡಗಿತು. ಅವರ ಹಂಬಲಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಒತ್ತಾಸೆಯಾದವು.  ಹೀಗೆ ಹಿಂದೂ ಧರ್ಮ, ಸಮಗ್ರ ಭಾರತೀಯ ಚಿಂತನ ಪರಂಪರೆ ಮತ್ತು ತತ್ವಶಾಸ್ತ್ರಗಳ ಆಳವಾದ ಅಧ್ಯಯನ ಕೈಗೊಂಡ ಅವರು ಮುಂದೆ  ಅವುಗಳ ಬಗೆಗಿನ  ನಿಖರವಾದ ನಿರೂಪಣೆಗಳನ್ನೊಳಗೊಂಡ ನೂರಾರು  ಲೇಖನ ಹಾಗೂ ಪುಸ್ತಕಗಳನ್ನು  ಪ್ರಕಟಿಸಿದರು.

ರಾಧಾಕೃಷ್ಣನ್ ಅವರ ವೃತ್ತಿ ಜೀವನವು 1909ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಿರಿಯ ಉಪನ್ಯಾಸಕರಾಗಿ ಆರಂಭಗೊಂಡಿತು. ಮರುವರ್ಷ, ಆ ಕಾಲದಲ್ಲಿ ಶಿಕ್ಷಕರಿಗೆ ಕಡ್ಡಾಯವಾಗಿದ್ದ ಎಲ್. ಟಿ  ಪದವಿ ಗಳಿಸಲು ಶಿಕ್ಷಕರ ತರಬೇತಿ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದರು. ಆದರೆ, ತತ್ವಶಾಸ್ತ್ರದಲ್ಲಿ ಇವರಿಗಿದ್ದ ಜ್ಞಾನದ ಆಳವನ್ನು ಕಂಡುಕೊಂಡ ಅಲ್ಲಿನ ಪ್ರಾಧ್ಯಾಪಕರು, ಇವರು ಪಾಠ ಕಲಿಯುವ ಅವಶ್ಯಕತೆ ಇಲ್ಲ;  ಅದರ ಬದಲು, ತಮ್ಮ ಸಹ ವಿದ್ಯಾರ್ಥಿಗಳಿಗೆ ಪಾಠ ಕಲಿಸಲಿ ಎಂದು ತೀರ್ಮಾನಿಸಿದರು. ಇವರು ಕಲಿಸುವ ರೀತಿ ಎಷ್ಟು ವಿಶಿಷ್ಟವಾಗಿತ್ತೆಂದರೆ,  ಅವರ ಬೋಧನೆಯಲ್ಲಿ ಕಬ್ಬಿಣದ ಕಡಲೆಯಂತಹ ತತ್ವಶಾಸ್ತ್ರ ಕೂಡಾ ಮೃದು ಮಧುರವಾಗಿರುತ್ತಿತ್ತು  ಎಂದು ಪ್ರಖ್ಯಾತಿಪಡೆದಿತ್ತು.   1917ರಲ್ಲಿ ರಾಜಮಹೇಂದ್ರಿಯಲ್ಲಿ ಅವರು ಉಪನ್ಯಾಸಕರಾದರು.

1918ರಿಂದ 1921ರವರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ರಾಧಾಕೃಷ್ಣನ್, ಅಲ್ಲಿಂದ ಮುಂದೆ ಕೋಲ್ಕೊತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅಂದಿನ  ದಿನಗಳಲ್ಲಿ ಕವಿ ರವೀಂದ್ರರ ಸಂಪರ್ಕ ಅವರಿಗೆ ಲಭಿಸಿತ್ತು. ಆನಂತರ, ಇಂಗ್ಲೆಂಡಿನ ಆಕ್ಸಫರ್ಡ್ ವಿಶ್ವವಿದ್ಯಾಲಯವೂ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅವರು  ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.   ಆಂಧ್ರ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳ ಉಪಕುಲಪತಿಯಾಗಿ, ದಿಲ್ಲಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಆಡಳಿತದಲ್ಲೂ ತಮ್ಮ ಪ್ರಾವೀಣ್ಯವನ್ನು ರಾಧಾಕೃಷ್ಣನ್ ಮೆರೆದಿದ್ದರು. 

ಯನೆಸ್ಕೋದ ಅಧ್ಯಕ್ಷ ಸ್ಥಾನ, ಬ್ರಿಟಿಷ್ ಅಕಾಡೆಮಿಯ ಫೆಲೋಷಿಪ್, ಬ್ರಿಟನ್ನಿನ ರಾಣಿಯಿಂದ ದತ್ತವಾದ ಆರ್ಡರ್ ಆಫ್ ಮೆರಿಟ್, ಬ್ರಿಟಿಷ್ ಚಕ್ರಾಧಿಪತ್ಯದ ನೈಟ್‌ಹುಡ್, ಟೆಂಪಲಟನ್ ಅವಾರ್ಡ್, ವಿವಿಧ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಜರ್ಮನಿಯ ಪುಸ್ತಕ ಮಾರಾಟಗಾರರ ಕೂಟದ ಶಾಂತಿ ಪುರಸ್ಕಾರ - ಇವು ಅವರಿಗೆ ಸಂದ ಕೆಲವು ಪ್ರಮುಖ ಗೌರವಗಳು. 1954ರಲ್ಲಿ ಭಾರತದ ಅತ್ಯುಚ್ಚ ಪುರಸ್ಕಾರವಾದ “ಭಾರತ ರತ್ನ” ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

1915ರಲ್ಲೇ ಡಾ. ರಾಧಾಕೃಷ್ಣನ್ ಗಾಂಧೀಜಿಯವರನ್ನು ಭೇಟಿಯಾಗಿದ್ದರು. ಅವರ ಚಿಂತನೆ ಮತ್ತು ಕಾರ್ಯವಿಧಾನಗಳನ್ನು ಸಮರ್ಥಿಸಿ ಲೇಖನಗಳನ್ನೂ ಬರೆದಿದ್ದರು. ಭಾರತವು ಸ್ವತಂತ್ರ ರಾಷ್ಟ್ರವಾಗಬೇಕೆಂದು ಹಂಬಲಿಸುತ್ತಿದ್ದರು. 1947ರಲ್ಲಿ ಭಾರತವು ಸ್ವತಂತ್ರವಾದಾಗ ನೇಮಕಗೊಂಡ ಸಂಸತ್ತಿನ ಸದಸ್ಯರಾದರು. ಅನಂತರ ಸ್ವತಂತ್ರ ಭಾರತದ ರಾಯಭಾರಿಯಾಗಿ ಸೋವಿಯಟ್ ರಷ್ಯಾದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. 1952 ರಿಂದ 1962ರವರೆಗೆ 5 ವರ್ಷಗಳ ಎರಡು ಅವಧಿಗೆ ಇವರು ಉಪರಾಷ್ಟ್ರಪತಿಯಾಗಿ ನಿಯುಕ್ತರಾದರು. ಉಪರಾಷ್ಟ್ರಪತಿಗಳೇ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವುದರಿಂದ ಅಲ್ಲಿನ ಕಾರ್ಯಕಲಾಪಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. 1962ರಲ್ಲಿ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿ ಮೇ, 13ನೆಯ ತಾರೀಖು ಅಧಿಕಾರ ವಹಿಸಿಕೊಂಡರು. ಅವರು ರಾಷ್ಟ್ರಪತಿಗಳಾಗಿದ್ದ ಕಾಲದಲ್ಲಿ, ಚೀನಾ ಮತ್ತು ಪಾಕಿಸ್ಥಾನಗಳೆರಡರೊಂದಿಗೂ ಯುದ್ಧಗಳಾದವು. ಪ್ರಧಾನಿ ನೆಹರೂ, ನಂತರ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ-ಇಬ್ಬರೂ ನಿಧನರಾದರು. ಆ ಕಷ್ಟದ ದಿನಗಳಲ್ಲಿ ದೇಶದ ಆಡಳಿತ ಸುಸೂತ್ರವಾಗಿ ನಡೆಯಲು ಅವರು ಪ್ರಧಾನಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. 1967ರಲ್ಲಿ ಮತ್ತೆ ರಾಷ್ಟ್ರಪತಿಗಳಾಗಬೇಕೆಂಬ ಒತ್ತಡಕ್ಕೆ ಮಣಿಯದೆ, ನಿವೃತ್ತರಾಗಿ ಮದರಾಸಿನಲ್ಲಿ ನೆಲೆಸಿದರು. ಹಲವು ಕಾಲದ ಅನಾರೋಗ್ಯದಿಂದಾಗಿ 1975ರಲ್ಲಿ ನಿಧನರಾದರು.

ಡಾ.  ರಾಧಾಕೃಷ್ಣನ್ ಅವರು ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ, ಅವರ  ಶಿಷ್ಯರೊಬ್ಬರು “ಹೆಚ್ಚಿನ ಶಿಕ್ಷಣ ಪಡೆಯಲು ನೀವು ವಿದೇಶಕ್ಕೆ ಹೋಗುತ್ತೀರಾ?” ಎಂದು ಕೇಳಿದರಂತೆ. ಅದಕ್ಕೆ ಅವರು “ಇಲ್ಲ, ಹೋಗುತ್ತೇನೆ, ಆದರೆ ಶಿಕ್ಷಣ ಪಡೆಯಲಲ್ಲ, ಶಿಕ್ಷಣ ನೀಡಲು ಹೋಗುತ್ತೇನೆ” ಎಂದು ಉತ್ತರಿಸಿದರು. ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ‘ದಿ ಹಿಂದೂ ವ್ಯೂ ಆಫ್ ಲೈಫ್’ ಎಂಬ ವಿಷಯವಾಗಿ ಅವರು ಉಪನ್ಯಾಸ ಮಾಡಿದಾಗ ಅವರ ಭವಿಷ್ಯವಾಣಿ ನಿಜವಾಯಿತು. ಬ್ರಿಟಿಷ್ ಚಕ್ರಾಧಿಪತ್ಯದ ವಿಶ್ವವಿದ್ಯಾಲಯಗಳ ಸಮ್ಮೇಳನ ಹಾಗೂ ಹಾರ್ವರ್ಡನಲ್ಲಿ ಅಂತರ್ರಾಷ್ಟ್ರೀಯ ತತ್ವಶಾಸ್ತ್ರ ಸಮ್ಮೇಳನ ಇವುಗಳಲ್ಲಿ ಭಾಗವಹಿಸಲು ಯುರೋಪ್ ಮತ್ತು ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ವಿಶ್ವದ ಅನೇಕ ಪ್ರಮುಖ ರಾಷ್ಟ್ರಗಳಿಗೆ ಸೌಹಾರ್ದ ಭೇಟಿ ನೀಡಿದ್ದರು. ಅವರು ಹೋದಲ್ಲೆಲ್ಲ, ಭಾರತೀಯ ಚಿಂತನೆ ಹಾಗೂ ತತ್ವಶಾಸ್ತ್ರಗಳ ಸಾರವನ್ನು ಅಲ್ಲಿಯ ಜನತೆಗೆ ತಿಳಿಹೇಳುತ್ತಿದ್ದರು. ಡಾ. ರಾಧಾಕೃಷ್ಣನ್ ಬರೆದ ಲೇಖನಗಳು ಮತ್ತು ಪುಸ್ತಕಗಳು ಸೇರಿ ಸುಮಾರು 150ಕ್ಕೂ ಹೆಚ್ಚು ಪ್ರಕಟಣೆಗಳಿವೆ. ಬೌದ್ಧಿಕ ಪ್ರಪಂಚದಲ್ಲಿ ತತ್ವಶಾಸ್ತ್ರವನ್ನು ಅವರಷ್ಟು ಸರಳವಾಗಿ, ನಿಖರವಾಗಿ ಪ್ರತಿಪಾದಿಸಿದವರು ವಿರಳ.  ಅವರ ‘ಇಂಡಿಯನ್ ಫಿಲಾಸಫಿ’ ಎಂಬ ಬೃಹದ್ಗ್ರಂಥ ಇಂದಿಗೂ ಒಂದು ಗೌರವಯುತ ಕೃತಿಯಾಗಿದೆ.

ಡಾ|| ರಾಧಾಕೃಷ್ಣನ್ ಒಬ್ಬ ಸರಳ, ಮಾನವೀಯ ವ್ಯಕ್ತಿ. ಅವರ ವೇಷ ಭೂಷಣವೂ ಅಷ್ಟೇ ಸರಳ. ಶುಭ್ರವಾದ ಪಂಚೆ, ಉದ್ದನೆಯ ಕೋಟು, ಬಿಳಿಯ ಪೇಟಾ, ಎತ್ತರದ ನೇರ ನಿಲುವು, ನೋಡಿದ ಕೂಡಲೆ ಗೌರವ ಹುಟ್ಟಿಸುವ ವ್ಯಕ್ತಿತ್ವ. ವಿದ್ವತ್ತಿನ ಭಾರ ಅವರ ಸರಳತೆಯನ್ನು ಮರೆಮಾಡಲಿಲ್ಲ. ಚರ್ಚೆಯ ವಿಷಯ ಎಷ್ಟೇ ಲಘುವಾಗಿರಲಿ, ಕಠಿಣವಾಗಿರಲಿ, ಅವರು  ವಿದ್ಯಾರ್ಥಿಗಳೊಂದಿಗೆ ಬೆರೆತು ಮುಕ್ತವಾಗಿ ಚರ್ಚಿಸಬಲ್ಲವರಾಗಿದ್ದರು. 

ರಾಷ್ಟ್ರಪತಿಯಾಗಿ ಅವರಿಗೆ ಸಲ್ಲುತ್ತಿದ್ದ ಮಾಸಿಕ ಸಂಬಳವನ್ನು 10,000 ರೂ.ಗಳಿಂದ ರೂ.2000ಕ್ಕೆ ಸ್ವ-ಇಚ್ಚೆಯಿಂದ ಇಳಿಸಿಕೊಂಡದ್ದು ಅವರ ಋಜು ಸ್ವಭಾವಕ್ಕೆ ಸಾಕ್ಷಿ.

ಡಾ. ರಾಧಾಕೃಷ್ಣನ್ ಅವರ ಬಹುಮುಖ ಪ್ರತಿಭೆಯನ್ನು ವಿಶ್ವದ ಅನೇಕ ಗಣ್ಯರು ಪ್ರಶಂಸಿಸಿದ್ದಾರೆ.  “ಮಹಾನ್ ತತ್ವಜ್ಞಾನಿ, ಶಿಕ್ಷಣವೇತ್ತ, ಮಹಾಮಾನವತಾವಾದಿಯಾದ ಇಂತಹ ಒಬ್ಬ ಶ್ರೇಷ್ಠ ವ್ಯಕ್ತಿ ನಮ್ಮ ರಾಷ್ಟ್ರಪತಿಯಾಗಿರುವುದೇ ನಮ್ಮ ಸೌಭಾಗ್ಯ” ಎಂದು ಪಂಡಿತ್ ಜವಹರಲಾಲ್ ನೆಹರೂ ಹೇಳಿದ್ದರು. ಆಧುನಿಕ ಯುಗದ ಮಹಾ ತತ್ವಜ್ಞಾನಿ ಬರ್ಟ್ರಂ ಡ್ ರಸಲ್, “ಭಾರತವು ಒಬ್ಬ ತತ್ವಜ್ಞಾನಿಯನ್ನು ತನ್ನ ರಾಷ್ಟ್ರಪತಿಯಾಗಿ ಆಯ್ಕೆಮಾಡಿಕೊಂಡಿರುವುದೇ  ಆ ದೇಶದ ಹೆಗ್ಗಳಿಕೆ” ಎಂದು ಬಣ್ಣಿಸಿದ್ದರು.

ವಾಕ್ಪಟುತ್ವದಲ್ಲಿ ರಾಧಾಕೃಷ್ಣನ್ ಅವರನ್ನು ಸರಿದೂಗಿಸುವವರು ಇಡೀ ಜಗತ್ತಿನಲ್ಲಿಯೇ ವಿರಳವೆಂದು ಹೇಳಲಾಗುತ್ತಿತ್ತು.  ಭಾರತೀಯ ಪರಂಪರೆಗಳನ್ನು ತನ್ನ ಶಿಕ್ಷಕವರ್ಗ ಮಾತ್ರವಲ್ಲದೆ ಇಡೀ ಜಗತ್ತಿಗೇ ತಿಳಿಯಹೇಳುವುದರಲ್ಲಿ ಮಹತ್ಕಾರ್ಯ ಕೈಗೊಂಡ ಪ್ರಮುಖರಲ್ಲಿ ಡಾ. ರಾಧಾಕೃಷ್ಣನ್ ಅವರ ಸಾಧನೆಗಳು ಚಿರಂತನವಾಗಿವೆ.  

"ಮೈಸೂರಿನಲ್ಲಿ ಡಾ. ರಾಧಾಕೃಷ್ಣನ್ ಅವರು ಮಹಾರಾಜಾಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ  ಅಪಾರ ಪ್ರಖ್ಯಾತಿಯನ್ನು ಸಂಪಾದಿಸಿದ್ದರು.  ಅತ್ಯುತ್ತಮ ಪ್ರಾಧ್ಯಾಪಕರೆಂದೂ ಮಹಾವಿದ್ವಾಂಸರೆಂದೂ ಗೌರವವನ್ನು ಗಳಿಸಿದ್ದ ಅವರು ಪೌರಾಣಿಕ ವ್ಯಕ್ತಿಯಂತೆ ಕಂಗೊಳಿಸುತ್ತಿದ್ದರು. ರಾಧಾಕೃಷ್ಣನ್ ಅವರು 1921ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ, ಅವರನ್ನು ಅವರ ವಿದ್ಯಾರ್ಥಿಗಳೇ ಬೀಳ್ಕೊಂಡ ಸನ್ನಿವೇಶವನ್ನು ಪ್ರೊ. ಎ. ಎನ್. ಮೂರ್ತಿರಾಯರು ಚಿತ್ರವತ್ತಾಗಿ ವರ್ಣಿಸಿದ್ದಾರೆ.  ಕೋಚ್ ಗಾಡಿಯನ್ನು ಹೂವಿನಿಂದ ಅಲಂಕರಿಸಿ ರಾಧಾಕೃಷ್ಣನ್ ಕುಳಿತ ಆ ಗಾಡಿಯನ್ನು ವಿದಾರ್ಥಿಗಳೇ ಎಳೆದುಕೊಂಡು ಹೋದರಂತೆ.  ದೈವಮಂದಿರವನ್ನು ಭಕ್ತರು ಅಲಂಕರಿಸುವಂತೆ ರೈಲುಗಾಡಿಯನ್ನು ವಿದಾರ್ಥಿಗಳು ಅಲಂಕರಿಸಿದ್ದರಂತೆ.  ವಿದಾರ್ಥಿಗಳ ‘ಜೈ’ಕಾರ ಮೊಳಗುತ್ತಿತ್ತು.  ರಾಧಾಕೃಷ್ಣನ್ ಅವರಿಗೆ ‘ಗುಡ್ ಬೈ’ ಹೇಳಲು ಹಿರಿಯ ಅಧ್ಯಾಪಕರೇ ವಿದ್ಯಾರ್ಥಿಗಳ ಸಹಾಯದಿಂದ ಅವಕಾಶವನ್ನು ಕಲ್ಪಿಸಿಕೊಳ್ಳಬೇಕಾಯಿತು.  ವಿದ್ಯಾರ್ಥಿಗಳನೇಕರು ಭಾವೋದ್ರೇಕದಿಂದ ಅತ್ತರು.  ರಾಧಾಕೃಷ್ಣನ್ ಅವರ ಕಣ್ಣಿನಲ್ಲಿಯೂ ನೀರು ಬಂದಿರಬೇಕು.  ಇಂಥ ವಿಶ್ವಾಸವನ್ನು ಗಳಿಸಿದ ಅಧ್ಯಾಪಕರಿಂದ ವಿದ್ಯೆಗಳಿಸುವ ಸದವಕಾಶವನ್ನು ಪಡೆದ ವಿದ್ಯಾರ್ಥಿಗಳೇ ಧನ್ಯರು". (ಉಲ್ಲೇಖ: ಪ್ರೊ. ಜಿ. ವೆಂಕಟಸುಬ್ಬಯ್ಯನವರ ‘ಸಿರಿಗನ್ನಡ ಸಾರಸ್ವತರು’).  

ಹೀಗೆ ಎಲ್ಲ ರೀತಿಯಲ್ಲೂ ಗೌರವಯುತರಾದ ಗುರುವರ್ಯರಾದ ಅವರ ಹುಟ್ಟಿದ ಹಬ್ಬ ಶಿಕ್ಷಕರ ದಿನಾಚರಣೆಯಾಗಿ ಆಚರಣೆಗೊಳ್ಳುತ್ತಿರುವುದು ಸಮರ್ಪಕವೆನಿಸಿದೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

On Teachers’ Day and birthday of great philosopher, teacher and 2nd President of India Bharataratna Dr. S. Radhakrishnan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ