ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೌರೀಶ ಕಾಯ್ಕಿಣಿ


 ಗೌರೀಶ ಕಾಯ್ಕಿಣಿ


ಪ್ರಸಿದ್ಧ ವಿದ್ವಾಂಸ, ಬರಹಗಾರ, ಶಿಕ್ಷಕರೆನಿಸಿದ್ದ ಗೌರೀಶ ಕಾಯ್ಕಿಣಿ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆ ಅತ್ಯಂತ ಮಹತ್ವಪೂರ್ಣವಾದದ್ದು.

ಗೌರೀಶ ಕಾಯ್ಕಿಣಿಯವರು 1912ರ  ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಜಾಪುರದಲ್ಲಿ ತಹಸೀಲ್‌ದಾರರಾಗಿದ್ದ ವಿಠಲರಾವ್‌ ಕಾಯ್ಕಿಣಿ,  ತಾಯಿ ಸೀತಾಬಾಯಿ. ಹುಟ್ಟಿದ ಮೂರು ತಿಂಗಳಲ್ಲೆ ತಂದೆ ನಿಧನರಾದಾಗ ಗೌರೀಶರು ಬೆಳೆದದ್ದು ಅಜ್ಜಿ ಸಾವಿತ್ರಿಬಾಯಿ ಅವರ ಪ್ರೀತಿಯ ಮಡಿಲಲ್ಲಿ.

ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿ ನಡೆಯಿತು. ಕುಮಟಾ, ಧಾರವಾಡಗಳಲ್ಲಿ  ಮುಂದಿನ ವಿದ್ಯಾಭ್ಯಾಸವನ್ನು ನಡೆಸಿದ ಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  1937ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು 1976ರಲ್ಲಿ ನಿವೃತ್ತರಾದರು.

ಗೌರೀಶ ಕಾಯ್ಕಿಣಿಯವರ ಬರವಣಿಗೆ  1930ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ 'ಶಾಂಡಿಲ್ಯ ಪ್ರೇಮಸುಧಾ' ಅವರ ಮೊದಲ ಕವನಸಂಕಲನ. ಗಂಡು ಹೆಣ್ಣು, ಪ್ರೀತಿ ಇವು ಗೌರೀಶರ ಪ್ರಬಂಧ  ಸಂಕಲನಗಳು.  

ಒಲವಿನ ಒಗಟು ಗೌರೀಶರ ನಾಟಕ.  ಕ್ರೌಂಚಧ್ವನಿ ಗೀತರೂಪಕ ನಾಟಕ.  ಕರ್ಣಾಮೃತ, ಆಕಾಶ ನಾಟಕಗಳು  ರೇಡಿಯೋ ನಾಟಕಗಳು.

ವಿಶ್ವದ ಆಖ್ಯಾಯಿಕೆಗಳು ಅವರ ಕಥಾ ಸಂಕಲನ.  ಹಿಮಾಲಯದ ವರ್ಣನೆಯನ್ನು ಒಳಗೊಂಡ  ದೇವತಾತ್ಮ ಪ್ರವಾಸ ಸಾಹಿತ್ಯ.  

ವ್ಯಕ್ತಿಚಿತ್ರಣಗಳಲ್ಲಿ ಪಶ್ಚಿಮದ ಪ್ರತಿಭೆ ಎಂಬ ಎರಡು ಭಾಗಗಳೂ, ಸತ್ಯಾರ್ಥಿ, ಭಾರತೀಯ ವಿಜ್ಞಾನಿಗಳು, ಕೇಶವಸುತ, ನಾನಾಲಾಲ, ಶ್ಯಾಮರಾವ ವಿಠ್ಠಲ ಕಾಯ್ಕಿಣಿ, ಥಾಮಸ್ ಎಡಿಸನ್, ಪಾಂಡೇಶ್ವರ ಗಣಪತಿರಾವ್, ಗ್ರೀಕ್ ದಾರ್ಶನಿಕರು  ಅವರು ಮೂಡಿಸಿರುವ ವ್ಯಕ್ತಿಚಿತ್ರಣಗಳಲ್ಲಿ ಸೇರಿವೆ.

ಗೋಕರ್ಣದ ಕಥೆ, ಕರ್ನಾಟಕದ ಸಿಂಡ್ರೆಲ್ಲಾ, ಸಾಂಸ್ಕೃತಿಕ ಪರಿಚಯದ ತಳಹದಿಯದ್ದಾಗಿವೆ.  

ಪ್ರಜ್ಞಾನೇತ್ರದ ಬೆಳಕಿನಲ್ಲಿ ಶಂ.ಬಾ.ಜೋಶಿ ಕೃತಿಗಳ ಸಮೀಕ್ಷೆಯಾಗಿದೆ.  ಕಣವಿ ಕಾವ್ಯದೃಷ್ಟಿ ಚನ್ನವೀರ ಕಣವಿಯವರ ಕಾವ್ಯ ಸಮೀಕ್ಷೆಯಾದರೆ,    ಕಂಪಿನ ಕರೆ  ಎಂಬುದು ಬೇಂದ್ರೆ ಕಾವ್ಯಸಮೀಕ್ಷೆ.   ಇವಲ್ಲದೆ   ದಿನಕರ ದೇಸಾಯಿಯವರ ಕಾವ್ಯ, ವಾಲ್ಮೀಕಿ ತೂಕಡಿಸಿದಾಗ ಎಂಬ ವಿಚಾರ ವಿಮರ್ಶೆ, ನವ್ಯದ ನಾಲ್ಕು ನಾಯಕರು, ನವ್ಯ ಕವಿ ಬಿ.ಎ.ಸನದಿಯವರ ಕಾವ್ಯ ಸಮೀಕ್ಷೆ, ಉತ್ತರಣ ವಿಷ್ಣು ನಾಯ್ಕರ ಕಾವ್ಯ ಸಮೀಕ್ಷೆ ಹೀಗೆ ಸಾಹಿತ್ಯದಲ್ಲಿ ಅವರ ಶ್ರದ್ಧಾಪೂರ್ವಕ ಸಾಹಿತ್ಯ ಚಿಂತನೆಗಳು ಒಂದಕ್ಕಿಂದ ಒಂದು ಅಮೂಲ್ಯವಾದುದು.

ವೈಚಾರಿಕ ಮನೋವಿಜ್ಞಾನದ ರೂಪರೇಷೆಗಳು, ಮಾರ್ಕ್ಸ್ ವಾದ, ಬಾಳಿನ ಗುಟ್ಟು, ವಿಚಾರವಾದ, ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ, ಸಂಪ್ರದಾಯ ಮತ್ತು ಸಣ್ಣ ಕುಟುಂಬ, ಕಟಾಕ್ಷ ಎಂಬ ವೈಚಾರಿಕ ಲೇಖನಗಳ ಸಂಕಲನ, ನವ ಮಾನವತಾವಾದ, ನಾಸ್ತಿಕ ಮತ್ತು ದೇವರು, ಆರ್ಕೆಸ್ಟ್ರಾ ಮತ್ತು ತಂಬೂರಿ, ಲೋಕಾಯತ ಎಂಬ ಚಾರ್ವಾಕ ದರ್ಶನ ಹೀಗೆ ಅವರ ವಿಚಾರ ಸಾಹಿತ್ಯದ ಸಾಧನೆ ವಿಶಾಲ ಹರವಿನಿಂದ ಕೂಡಿದೆ.

ಭಾರತೀಯ ತತ್ವಜ್ಞಾನದ ಇತಿಹಾಸ, ಪಂಜಾಬಿ ಕತೆಗಳು, ಬಿಳಿಯ ಕೊಕ್ಕರೆ, ಮಣ್ಣಿನ ಮನುಷ್ಯ, ಮಲೆನಾಡಿಗರು, ಬರ್ಲಿನ್ ಬಂದಿತು ಗಂಗೆಯ ತಡಿಗೆ, ವ್ಯಾಸಪರ್ವ ಇವೆಲ್ಲಾ ಅನುವಾದಿತ ಸಾಹಿತ್ಯಕ್ಕೆ ಸೇರಿವೆ. 

ಇಂಗ್ಲಿಷಿನಲ್ಲಿ ಶ್ಯಾಮರಾವ ವಿಠ್ಠಲ ಕಾಯ್ಕಿಣಿ, ಕೊಂಕಣಿಯಲ್ಲಿ ಮೀನಾಕ್ಷಿ  ಎಂಬ ಕವನ ಸಂಕಲನ, ಮರಾಠಿಯಲ್ಲಿ  ಕನ್ನಡ ಸಾಹಿತ್ಯ ಇತಿಹಾಸ, ಭಗವಾನ್ ನಿತ್ಯಾನಂದ, ಮಾಝೀ ರಸಯಾತ್ರಾ (ಕನ್ನಡ ಮೂಲ: ಮಲ್ಲಿಕಾರ್ಜುನ ಮನಸೂರರ ಆತ್ಮಚರಿತ್ರೆ), ಅಗ್ನಿವರ್ಣ  ಮುಂತಾದವು ಗೌರೀಶ ಕಾಯ್ಕಿಣಿ ಅವರ ಬಹುಭಾಷಾ ಸಾಮರ್ಥ್ಯಕ್ಕೆ ಕನ್ನಡಿಯಾಗಿವೆ.  

ಗೌರೀಶ ಕಾಯ್ಕಿಣಿ ಅವರ ಸಮಗ್ರ ಗ್ರಂಥಗಳೇ ಎಂಟು ಬೃಹತ್ ಸಂಪುಟಗಳಾಗಿ ಬಂದಿವೆ.  ಇದಲ್ಲದೆ ಅವರು ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಹಸ್ರಾರು ಲೇಖನಗಳನ್ನು ಬರೆದಿದ್ದಾರೆ.  ಅವರ ಸಮಗ್ರ ಸಾಹಿತ್ಯದಿಂದ ವಸ್ತು ವೈವಿಧ್ಯ ಅನುಸಾರ ಆಯ್ದು ಸಂಪಾದಿಸಿದ ( ಸಂಪಾದಕ : ಡಾ  ಎಂ ಜಿ ಹೆಗಡೆ ) ಸಾಹಿತ್ಯ ಸಂಚಯದ ಮೂರು ಸಂಪುಟಗಳು ಕನ್ನಡ  ಪುಸ್ತಕ ಪ್ರಾಧಿಕಾರದಿಂದ 2023 ವರ್ಷ ಪ್ರಕಟಗೊಂಡಿವೆ. ಇನ್ನೆರಡು ಸಂಪುಟ ಅಚ್ಚಿನಲ್ಲಿವೆ.

ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನೂ ಹೊತ್ತುಕೊಂಡಿದ್ದರು.  ಅವರು  ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು. ಧಾರವಾಡದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು.

ಉತ್ತರ ಕನ್ನಡ ಜಿಲ್ಲಾ ಲೇಖಕರು, ಪ್ರಕಾಶಕರು ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು. ಗೌರೀಶ ಕಾಯ್ಕಿಣಿಯವರು ನಾಗರಿಕ ಹಾಗು ಬೆಳಕು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು

ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ನವ ಮಾನವತಾವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, ಮೀನಾಕ್ಷಿ ಕೊಂಕಣಿ ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ ಶಂಬಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಗೌರೀಶ ಕಾಯ್ಕಿಣಿ ಅವರಿಗೆ ಸಂದವು.  

ಗೌರೀಶ ಕಾಯ್ಕಿಣಿಯವರು 2002ರ  ನವೆಂಬರ್ 14ರಂದು ನಿಧನರಾದರು.   ಅವರು ಉಳಿಸಿಹೊಗಿರುವ ಸಾಹಿತ್ಯ ಸಂಪತ್ತು ಅಪಾರ.  ನಮ್ಮ ಇಂದಿನ ಬರಹಗಾರರಲ್ಲಿ ಪ್ರಮುಖರಾದ ಜಯಂತ ಕಾಯ್ಕಿಣಿ ಅವರು  ಗೌರೀಶ ಕಾಯ್ಕಿಣಿ ಅವರ ಪುತ್ರರು.  2012 ವರ್ಷದಲ್ಲಿ  ಗೌರೀಶ ಕಾಯ್ಕಿಣಿ ಅವರ ಶತಮಾನೋತ್ಸವ ಆಚರಣೆ ಸಮಾರಂಭವನ್ನು ಅವರ ಅಭಿಮಾನಿಗಳು ಏರ್ಪಡಿಸಿದ್ದರು.  ಈ ಮಹಾನ್ ಚೇತನಕ್ಕೆ ನಮ್ಮ ಗೌರವಗಳು.


On the birth anniversary of great scholar, writer and teacher Gourish Kaikini...

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ