ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಾಲ್ಗುಡಿ ಜಯರಾಮನ್



 ಲಾಲ್ಗುಡಿ ಜಯರಾಮನ್


ಕರ್ನಾಟಕ ಸಂಗೀತದ ಕಲಾವಿದರಲ್ಲಿ ಲಾಲ್ಗುಡಿ ಜಯರಾಮನ್ ಪ್ರಮುಖ ಹೆಸರು.  ಘನತೆಯೇ ಮೈವೆತ್ತಂತ ಪ್ರಶಾಂತತೆ, ಯಾವುದೇ ಆಡಂಭರ ತೋರದ ಸರಳ ವ್ಯಕ್ತಿತ್ವ,  ಅಂತೆಯೇ ಯಾವುದೇ ಅತಿಯಿಲ್ಲದ ವಿದ್ವತ್ಪೂರ್ಣ, ಶಿಸ್ತುಬದ್ಧ, ಜೊತೆಗೆ ಸಂಗೀತದ ರಸೋಲ್ಲಾಸದಲ್ಲಿ ಶ್ರೋತೃವನ್ನು  ತಲ್ಲೀನನನ್ನಾಗಿಸುವ  ಮೋಹಕ ಪಿಟೀಲು ವಾದನ ಇವು ಲಾಲ್ಗುಡಿ ಜಯರಾಮಾನ್  ಅಂದರೆ ತಕ್ಷಣ ನೆನಪಿಗೆ ಬರುವಂತಹ ವಿಚಾರಗಳು.  

ಭಾರತದಲ್ಲಿ ಅನೇಕ ಊರುಗಳು ಅಲ್ಲಿನ ಮಹಾನ್ ಕಲಾವಿದರುಗಳಿಂದ ಪ್ರಖ್ಯಾತಿ ಪಡೆದಿವೆ.  ಅರಿಯಾಕುಡಿ, ಮಹಾರಾಜಪುರಂ. ಹಾನಗಲ್, ಚೆಂಬೈ, ಶೆಮ್ಮಂಗುಡಿ, ಮುಸುರಿ ಮುಂತಾದ ಊರುಗಳಂತೆ ‘ಲಾಲ್ಗುಡಿ’ ಕೂಡ ಜಯರಾಮನ್ ಅವರಿಂದ ಲೋಕಖ್ಯಾತಿ ಗಳಿಸಿದೆ. ಪ್ರಧಾನವಾಗಿ ಪಿಟೀಲು ವಾದನದಲ್ಲಿ ಹೆಸರಾದರೂ, ಲಾಲ್ಗುಡಿ ಜಯರಾಮನ್ ಗಾಯನ ಮತ್ತು ವಾಗ್ಗೆಯಕಾರಿಕೆಯಲ್ಲೂ ಹೆಸರಾದ ಮೇರು ಪರಂಪರೆಯ  ಕಲಾವಿದರಲ್ಲೊಬ್ಬರು.  

ಲಾಲ್ಗುಡಿ ಜಯರಾಮನ್  1930ರ ಸೆಪ್ಟೆಂಬರ್ 17ರಂದು ಜನಿಸಿದರು.  ಜಯರಾಮನ್ ಅವರ ಹಿರಿಯ ತಲೆಮಾರಿನ ಲಾಲ್ಗುಡಿ ಶ್ರೀರಾಮ ಅಯ್ಯರ್ ತ್ಯಾಗರಾಜರ ನೇರ ಶಿಷ್ಯರಾಗಿದ್ದವರು.  ಲಾಲ್ಗುಡಿ ಜಯರಾಮನ್ ಅವರ  ತಂದೆ ಲಾಲ್ಗುಡಿ ಗೋಪಾಲ ಅಯ್ಯರ್ ಸಹಾ ಸಂಗೀತ ಲೋಕದಲ್ಲಿ ಬಹಳಷ್ಟು ಸಾಧನೆ ಮಾಡಿದ್ದವರು.  ಅವರೇ ಜಯರಾಮನ್ ಅವರ ಗುರುವೂ ಹೌದು. ಶಿಸ್ತು ಮತ್ತು ಕಾಳಜಿಗಳ ಪ್ರತೀಕವೇ ಆಗಿದ್ದ   ತಂದೆಯವರಿಗೆ, ತಮ್ಮ ಮಗ ಜಯರಾಮನ ಸೂಕ್ಷ್ಮ  ಕೈ ಬೆರಳುಗಳು ಸಂಗೀತ ಲೋಕಕ್ಕೆ ಮಹತ್ವದ್ದೆಂಬ ಕಾರಣಕ್ಕಾಗಿ ಆತ, ಪೆನ್ಸಿಲ್ ಚೂಪುಗೊಳಿಸುವುದಕ್ಕೂ ಆಸ್ಪದವೀಯುತ್ತಿರಲಿಲ್ಲವಂತೆ. 

ಪಕ್ಕವಾದ್ಯದಲ್ಲಿ ಪಿಟೀಲು ವಾದಕರಾಗಿ ವೃತ್ತಿಪರ ಸಂಗೀತದ ವೇದಿಕೆ ಹತ್ತಿದಾಗ ಜಯರಾಮನ್ ಇನ್ನೂ ಹನ್ನೆರಡರ ಬಾಲಕ. ತಮ್ಮ ಕಾಲದ  ಎಲ್ಲ ಶ್ರೇಷ್ಟರ ಜೊತೆಗೆ  ಪಕ್ಕವಾದ್ಯದಲ್ಲಿ ಪಿಟೀಲು ವಾದನಕ್ಕೆ ಬಹುಬೇಡಿಕೆ ಹೊಂದಿದ್ದ ಅವರು ಶ್ರೀಘ್ರದಲ್ಲಿಯೇ  ಸೋಲೋ ವಾದಕರಾಗಿ ಸಹಾ ಪ್ರವರ್ಧಮಾನಕ್ಕೆ ಬಂದರು.   ಹಿರಿಯ ಸಂಗೀತ ವಿದ್ವಾಂಸರನ್ನು ಗಮನಿಸಿ, ಅವರಲ್ಲಿನ ಒಳ್ಳೆಯ ಅಂಶಗಳನ್ನು ಗ್ರಹಿಸುವ ವಿನಯವಂತಿಕೆ ಅವರದ್ದಾಗಿತ್ತು. ಆದರೆ ಅದು ಅಂಧಾನುಕರಣೆಯಾಗಿರಲಿಲ್ಲ.  ಪ್ರತಿಯೊಂದರ ಮೇಲೂ ಛಾಪು ಮೂಡಿಸುವ ಪ್ರತಿಭಾವಂತರಾದ ಜಯರಾಮನ್ ನಿತ್ಯ ಪ್ರಯೋಗಶೀಲರಾಗಿದ್ದರು. ಅವರ ಪ್ರಯೋಗಳನ್ನೂ,  ಸಿದ್ಧಿಯನ್ನೂ ಸಂಗೀತ ಕ್ಷೇತ್ರದ ಹಿರಿಯರಾದ ಪಿಟೀಲು ಚೌಡಯ್ಯ, ದ್ವಾರಂ ವೆಂಕಟಸ್ವಾಮಿ ನಾಯ್ಡು, ಗೋವಿಂದರಾಜ ಪಿಳ್ಳೈ, ಸುಂದರೇಶ ಆಯ್ಯರ್ ಮುಂತಾದವರೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದರು. ವಯಲಿನ್ ವಾದನದಲ್ಲಂತೂ ಜಯರಾಮನ್ ಅವರದು ಸವ್ಯಸಾಚಿ ಸಾಧನೆ. ಕೊಳಲು ಹಾಗೂ ವೀಣೆಗಳೊಂದಿಗೆ ಕೂಡ ಅವರಿಗೆ ಸ್ನೇಹವಿತ್ತು. ಸ್ವರ ಸಂಯೋಜನೆ, ಬೋಧನೆ, ಸಂಘಟನೆಗಳಲ್ಲೂ ಅವರದು ಮಹತ್ವದ ಸಾಧನೆ. ನೃತ್ಯ ಪ್ರಕಾರಕ್ಕೂ ಅವರ ಕೊಡುಗೆ ಸಂದಿದೆ. ಲಾಲ್ಗುಡಿಯವರ ಸಂಗೀತವನ್ನು ‘ನಾದದ ನೃತ್ಯ’ ಎಂದು  ಸಹೃದಯರು ಬಣ್ಣಿಸುವುದಿತ್ತು. ಅಪೂರ್ವ ತಿಲ್ಲಾನಗಳು ಹಾಗೂ ವರ್ಣಗಳು ಕರ್ನಾಟಕ ಸಂಗೀತಕ್ಕೆ ಲಾಲ್ಗುಡಿ ಅವರು ನೀಡಿದ ಬಹು ಅಮೂಲ್ಯ ಕೊಡುಗೆಗಳು.

ದೇಶದ ಉದ್ದಗಲ ಮಾತ್ರವಲ್ಲದೆ ಲಾಲ್ಗುಡಿ ಜಯರಾಮನ್  ವಿದೇಶಗಳಲ್ಲೂ  ಜನಪ್ರಿಯರಾಗಿದ್ದರು. 1965ರಲ್ಲಿ ಎಡಿನ್ಬರ್ಗ್ ಸಂಗೀತ ಹಬ್ಬದಲ್ಲಿ ಅವರ ವಯಲಿನ್ ವಾದನ ಕೇಳುಗರ ಮನಸೂರೆಗೊಂಡಿತ್ತು. ಈ ನಾದ ಮಾಧುರ್ಯಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ವಯಲಿನ್ ವಾದಕ ಯೆಹೂದಿ ಮೆನುಹಿನ್ ಮನಸೋತಿದ್ದರು. ಈ ಗುಂಗಿನಲ್ಲೇ ಅವರು, ಲಾಲ್ಗುಡಿ ಅವರಿಗೆ ವಯಲಿನ್ ಒಂದನ್ನು ಕೊಡುಗೆಯಾಗಿ ಕಳುಹಿಸಿದ್ದರು. 1971ರಲ್ಲಿ ಲಾಲ್ಗುಡಿ ಅಮೇರಿಕಾ, ಕೆನಡಾ ಪ್ರವಾಸ ಕೈಗೊಂಡಿದ್ದರು. ಪೂರ್ವ-ಪಶ್ಚಿಮ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿ ಅವರು 24 ಕಛೇರಿಗಳು ಮತ್ತು ಉಪನ್ಯಾಸಗಳನ್ನು ನೀಡಿದರು. ಭಾರತೀಯ ಸಾಂಸ್ಕೃತಿಕ ನಿಯೋಗದ ಸದಸ್ಯರಾಗಿ ರಷ್ಯಕ್ಕೆ ಭೇಟಿ ನೀಡಿದ್ದರು. ಒಮಾನ್, ಕತಾರ್, ಬಹರೈನ್, ಸಿಂಗಪುರ, ಮಲೇಷಿಯ, ಬ್ರಿಟನ್, ಬೆಲ್ಗಿಯಂ, ಫ್ರಾನ್ಸ್ ಸೇರಿದಂತೆ ಭೂಗೋಳವನ್ನು ಸಂಗೀತದ ಮೂಲಕ ಹಲವು ಬಾರಿ ಪ್ರದಕ್ಷಿಣೆ ಹಾಕಿದ್ದರು.

ಸಣ್ಣಪುಟ್ಟ ವಿವರಗಳಿಗೂ ಅತೀವ ಗಮನ ನೀಡುತ್ತಿದ್ದ ಲಾಲ್ಗುಡಿ ಅವರ ಕಛೇರಿಗಳು ಶಿಸ್ತಿಗೆ ಹೆಸರಾಗಿದ್ದವು. ಈ ಶಿಸ್ತು ಸಂಗೀತಕ್ಕೆ ಭಾರ ಎನ್ನುವ ಮಾತುಗಳೂ ಇದ್ದವು. ಸಹೃದಯನಿಗೆ ರಸಭಂಗವಿಲ್ಲದ, ಪರಿಪೂರ್ಣ ನಾದಸುಧೆ ಉಣಿಸಬಯಸುವ ಉದ್ದೇಶದ ಲಾಲ್ಗುಡಿ ಈ ಅಡ್ಡಮಾತುಗಳಿಗೆ ಕಿವಿಕೊಟ್ಟವರಲ್ಲ. ಒಮ್ಮೆ ಅವರೇ ಹೇಳಿಕೊಂಡಂತೆ ಸಣ್ಣಪುಟ್ಟ ತಪ್ಪುಗಳೂ ಅವರನ್ನು ಘಾಸಿಗೊಳಿಸುತ್ತಿದ್ದವು. ಈ ಬದ್ಧತೆಯಿಂದಾಗಿಯೇ ಅವರು ತಮ್ಮ ಕಛೇರಿಗಳಿಗೆ ವಿಪರೀತ ಸಿದ್ಧತೆ ನಡೆಸುತ್ತಿದ್ದರು.

ಜಯರಾಮನ್ ಒಳ್ಳೆಯ ಗುರುವೂ ಹೌದು. ಅವರ ಗರಡಿಯಲ್ಲಿ ಅನೇಕ ಸಂಗೀತಗಾರರು ಪಳಗಿದ್ದಾರೆ.     ಲಾಲ್ಗುಡಿ ಜಿ.ಜೆ.ಆರ್. ಕೃಷ್ಣನ್, ಲಾಲ್ಗುಡಿ ವಿಜಯಲಕ್ಷ್ಮಿ, ಲಾಲ್ಗುಡಿ ಶ್ರೀಮತಿ ಬ್ರಹ್ಮಾನಂದಮ್, ಎಸ್.ಪಿ. ರಾಮ್ಹ್, ವಿಶಾಕಾ ಹರಿ, ಸಾಕೇತರಾಮನ್, ವಿಠ್ಠಲ ರಾಮಮೂರ್ತಿ, ಬಾಂಬೆ ಜಯಶ್ರೀ ರಾಮನಾಥ್  ಮುಂತಾದ ಅನೇಕ ಹೆಸರುಗಳು ಸಾಲು ಸಾಲಾಗಿ ಗೋಚರಿಸುತ್ತವೆ. ‘ಲಾಲ್ಗುಡಿ ಬನಿ’ ಚೌಕಟ್ಟುಗಳನ್ನು ಮೀರಿ ಬೆಳೆದಿದೆ. ಸಾಮಾಜಿಕ ಚಟುವಟಿಕೆಗಳಲ್ಲೂ ಲಾಲ್ಗುಡಿ ಅವರಿಗೆ ಆಸಕ್ತಿಯಿತ್ತು. ಹುಟ್ಟೂರು ಲಾಲ್ಗುಡಿಯ ಸರ್ಕಾರಿ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ಸಂಗ್ರಹಿಸಿಕೊಟ್ಟಿದ್ದರು. ಅವರ ಹೆಸರಿನ ‘ಲಾಲ್ಗುಡಿ ಟ್ರಸ್ಟ್’ ಸಂಗೀತಾಸಕ್ತರ ಪ್ರತಿಭೆಯನ್ನು ಹದಗೊಳಿಸುವಲ್ಲಿ ಬಹಳಷ್ಟು ಕೆಲಸ ಮಾಡಿದೆ. ವಿವಿಧ ಸಭಾಗಳಲ್ಲಿ ದತ್ತಿ ಸ್ಥಾಪಿಸುವ ಮೂಲಕ ಯುವ ಸಂಗೀತಗಾರರನ್ನು ಉತ್ತೇಜಿಸಿದೆ.
ಪದ್ಮಶ್ರೀ, ಪದ್ಮಭೂಷಣ,  ಪ್ರಪ್ರಥಮ  ಚೌಡಯ್ಯ ರಾಷ್ಟ್ರೀಯ ಪುರಸ್ಕಾರ ಮುಂತಾದ ಅನೇಕ ಪ್ರತಿಷ್ಟಿತ ಪುರಸ್ಕಾರಗಳಲ್ಲದೆ, ‘ಸಿಂಗಾರಂ’ ಎಂಬ ಚಲನಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಂತಹ ಗೌರವಗಳೂ ಅವರನ್ನರಸಿ ಬಂದಿದ್ದವು.  

"ಸಂಗೀತ ಬಿಟ್ಟರೆ ನನ್ನ ಬದುಕಿನಲ್ಲಿ ಇನ್ನೇನಿದೆ. ಮುಂದೆ ಎಷ್ಟು ಬಾರಿ ಹುಟ್ಟಿದರೂ ಸಂಗೀತಗಾರನಾಗಿಯೇ ಹುಟ್ಟಬಯಸುವೆ. ಸಂಗೀತ ನನ್ನ ಬದುಕಷ್ಟೇ ಅಲ್ಲ, ಅದು ಆಧ್ಯಾತ್ಮದತ್ತ ನನ್ನ ಪಯಣದ ದಾರಿಯೂ ಹೌದು" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಲಾಲ್ಗುಡಿ 2013ರ  ಏಪ್ರಿಲ್ 22ರಂದು ಈ ಲೋಕಕ್ಕೆ ವಿದಾಯ ಹೇಳಿದರು. ಆದರೆ ಅವರ ಸಂಗೀತವನ್ನು ಕೇಳಿದ ನಮ್ಮಂತಹ ಅನೇಕರ ಅಂತರಂಗದಲ್ಲಿ   ಒಂದು ಅಮರತ್ವದ ಧ್ವನಿ ಆಗಾಗ ಮಾರ್ದನಿಸುತ್ತಿರುತ್ತದೆ ಎಂಬುದಂತೂ ಸುಳ್ಳಲ್ಲ.  ಈ ಮಹಾನ್ ನಾದ ಚೇತನಕ್ಕೆ ನಮೋ ನಮೋ.  


On the birth anniversary of Lalgudi Jayaraman 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ