ಪುಷ್ಪಾ ಶ್ರೀನಿವಾಸನ್
ನಾದತಪಸ್ವಿ ಪುಷ್ಪಾ ಶ್ರೀನಿವಾಸನ್
ಲೇಖನ: ಸಾಯಿಲಕ್ಷ್ಮೀ ಎಸ್. ಅಯ್ಯರ್
ಹೀಗೊಂದು ಕಾರ್ಯಕ್ರಮ 'ವಾಸ್ತವ ಬದುಕಿಗೆ ಅಧ್ಯಾತ್ಮ' ಕುರಿತು ಕ್ಷೇಮ ಭವನದ ಯೋಗಶಾಲೆಯಲ್ಲಿ ಆಯೋಜಿಸಲಾಗಿತ್ತು. ಜಪಾನಿನಲ್ಲಿ ಗುರುಗಳ ಬಳಿ ಜೆನ್ ಫಿಲಾಸಫಿ ನೇರವಾಗಿ ಅಭ್ಯಸಿಸಿದ ಆತ್ಮೀಯ ಸುರೇಂದ್ರನಾಥ ಈ ವಿಷಯದ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳಲು ನಮ್ಮೊಂದಿಗಿದ್ದರು. ಸಭಾಂಗಣದ ಆವರಣ ದೊಡ್ಡದು. ಹೀಗಾಗಿ ಸುತ್ತಮುತ್ತಲಿನ ಅನೇಕ ಆಸಕ್ತರನ್ನು ಆಹ್ವಾನಿಸಲಾಗಿತ್ತು. ನಮ್ಮ ಯೋಗಗುರುಗಳಾದ ಆನಂದ ಕೃಷ್ಣಯ್ಯನವರ ಹಸನ್ಮುಖಿ ಮಾರ್ಗದರ್ಶನ. ನಡುನಡುವೆ ನುಡಿಮಾಲೆ ಕಟ್ಡುವ ಕೆಲಸ ನನ್ನದಾಗಿತ್ತು. ಉಸುಲಿ ಪ್ರಸಾದವು ಕಾರ್ಯಕ್ರಮದ ಕಡೆಯ ಭಾಗವಾಗಿತ್ತು. ಒಂದೈವತ್ತು ಜನ ಸೇರಿದ್ದೆವು. ಯಶಸ್ವೀ ಕಾರ್ಯಕ್ರಮ.
ಅಲ್ಲಿ ಸೇರಿದವರಲ್ಲಿ ಪ್ರಮುಖರಾಗಿ ಕಂಗೊಳಿಸುತ್ತಿದ್ದವರು 85 ರ ಪ್ರಾಯದ ಸುರದ್ರೂಪಿ ಪುಷ್ಪಾ ಮಾಮಿ. ವಜ್ರದ ಓಲೆಯ ಬೆಳಕಲ್ಲಿ ಶೋಭಿಸುವ ವದನ ಹಾಗೆಯೇ ವಿದ್ಯೆಯ ಪ್ರಾವೀಣ್ಯದಲ್ಲಿ ಸರಸ್ವತಿಯ ಕಟಾಕ್ಷದಲ್ಲಿ ಹೊಳೆಯುವ ಹೃದಯ. ಅವರನ್ನು ಕಂಡ ನನ್ನ ಆನಂದ ಊಹಿಸಲಾಗದು. ಅವರ ಕಣ್ಣಲ್ಲೂ ಪ್ರೀತಿಯ ಹೊಳಪು.
ಕಾರ್ಯಕ್ರಮ ಸಂಪನ್ನಗೊಳ್ಲುವ ಮುನ್ನ 'ಮಾಮಿ ಈ ಮಹಡಿ ಹತ್ತಿ ಬರೋಕ್ಕೆ ಆಯ್ತಾ ನಿಮಗೆ?' ಎಂದಾಗ 'ನೀವು ಕರೆದ ಮೇಲೆ ಯಾಕಾಗೋಲ್ಲ ಹೇಳಿ' ಎಂದರು ಉತ್ಸಾಹಿ ತರುಣಿಯಂತೆ ಖುಷಿಯಿಂದ. ಬೆಂಗಾವಲಿಗೆ ಮಗ ಸೊಸೆ ನಳಿನಿಯು ಇದ್ದರು.
ಈ ಪುಷ್ಪಾ ಮಾಮಿ ಸಂಗೀತ ಶಾಸ್ತ್ರಜ್ಞೆ. ಅವರು ಆಗ ವಾಸವಿದ್ದ ನಮ್ಮ ಸಹಕಾರನಗರದ ಸಮೀಪದ ಕೆನರಾ ಬ್ಯಾಂಕ್ ಬಡಾವಣೆಯಲ್ಲಿ ಮಹಿಳೆಯರಿಗೆ ಮಕ್ಕಳಿಗೆ ಉಚಿತವಾಗಿ ಸಂಗೀತ ವಿದ್ಯೆ ಕಲಿಸುತ್ತಿದ್ದರು. ಬಹುಶ: ಮಾಮಿ ಹಣ ಸಂಪಾದನೆಗಾಗಿ ತಮ್ಮ ಆತ್ಮವಿದ್ಯೆಯನ್ನು ಎಂದೂ ಬಳಸಿದವರಲ್ಲ. ಸದಾ ಸಂತೋಷಿ. ಸಂತೃಪ್ತೆ. ಬದುಕನ್ನು ಉದಾತ್ತವಾಗಿ ನೋಡುವ ಕಲಾವಿದೆ. ಉನ್ನತವಾದ ರಸರುಚಿಯ ಉಪಾಸಕಿ. ಹೆಸರಿಗೆ ಅನ್ವಯವಾಗಿ ಕುಸುಮ ಕೋಮಲ ಗುಣ. ನಾದಸೌರಭವನ್ನು ಕಣಕಣದಲ್ಲೂ ತುಂಬಿಕೊಂಡ ಶಾರದೆ.
ಸಂಸ್ಕೃತ ಸಂಗೀತ ಸಾಹಿತ್ಯ ಕಲೆ ವೇದ ವೇದಾಂತಗಳಲ್ಲಿ ಪ್ರಕಾಂಡ ಪಾಂಡಿತ್ಯ ಹೊಂದಿದ್ದ ಆಳ್ವಾರ್ ತಿರುಮಲ ಐಯಂಗಾರ್ ಮತ್ತು ಶಿಂಗಮ್ಮ ದಂಪತಿಯ ವಂಶದ ಹಿರಿಯ ಕುಡಿ ಪುಷ್ಪಾ ಶ್ರೀನಿವಾಸನ್. ಬಾಲ್ಯಕಾಲಕ್ಕೆ ಸಂಗೀತ ಕಲಿಕೆಗಾಗಿ ಮೈಸೂರಿನಲ್ಲಿದ್ದ ಸೋದರತ್ತೆ ಎಗ್ಗಮ್ಮನವರ ಮನೆಯಲ್ಲಿ ಆಶ್ರಯ ಪಡೆದ ಪುಷ್ಪಾ ಆಕಾಶವಾಣಿ ಕಲಾವಿದರಾದ ಹಾಗು ಮೇರು ವಿದ್ವಾಂಸರಾದ ಶೆಳ್ಳುಪಿಳ್ಳೆ ಅಯ್ಯಂಗಾರ್ ಅವರಲ್ಲಿ ಶಿಷ್ಯವೃತ್ತಿ ಪಡೆದು ಕಣಕಣದಲ್ಲೂ ಸಂಗೀತ ಶಾರದೆಯನ್ನು ಆಹ್ವಾನಿಸಿಕೊಂಡರು. ರೇಡಿಯೋದಲ್ಲಿ ಗುರುಗಳು ನಡೆಸಿಕೊಡುತ್ತಿದ್ದ ಸಂಗೀತ ಪಾಠದಲ್ಲೂ ಭಾಗವಹಿಸುವ ಅವಕಾಶ ಪ್ರಾಪ್ತವಾಯಿತು. ಕ್ರಮೇಣ ಈ ಪುಟ್ಟ ಹುಡುಗಿಗೆ ಅನೇಕ ಕ್ಲಿಷ್ಟ ಕೃತಿಗಳನ್ನು ಪ್ರಬುದ್ಧವಾಗಿ ಹಾಡುವ ಸಾಮರ್ಥ್ಯ ಸಿದ್ಧಿಸಿತು.
ಕಾಲಕ್ಕೆ ತಕ್ಕಂತೆ 15 ನೆಯ ವಯಸ್ಸಿಗೆ ಪುಷ್ಪಾ ಅವರ ವಿವಾಹ ಮತ್ತೊಂದು ಸುಸಂಸ್ಕೃತ ಮನೆತನದ ಶ್ರೀನಿವಾಸನ್ ಅವರೊಂದಿಗೆ. ಕಲೆ ಸಂಗೀತ ಸಾಹಿತ್ಯ ಮೈದುಂಬಿದ ಜೀವನದಿಯೊಂದು ದೇಶಪ್ರೇಮಭರಿತ ಸುಸಂಸ್ಕೃತಿಯ ಕಡಲೊಂದನ್ನು ಸೇರಿದಂತಹ ಸಾಂಗತ್ಯದ ದಾಂಪತ್ಯ ದೀಕ್ಷೆ. ದೇಶದ ಸ್ವಾತಂತ್ರದ ಹೋರಾಟಕ್ಕಾಗಿ ತನುಮನದನ ಮುಡಿಪಾಗಿಟ್ಟ ಮನೆತನ. ದೇಶಭಕ್ತ ಖ್ಯಾತಿಯ ತಮಿಳು ಕವಿ ಸುಬ್ರಮಣ್ಯ ಭಾರತಿಯವರ ಸನ್ನಿಧಿ. ಅವರೊಡನೆ ಕುಟುಂಬದ ಆತ್ಮೀಯ ಒಡನಾಟ. ಸುಬ್ರಮಣ್ಯ ಭಾರತಿ ಅವರ ಗೀತೆಗಳಿಗೆರಾಗ ಹಾಕಿ ಮಕ್ಕಳಿಗೆ ಕಲಿಸಿ ನೃತ್ಯ ರೂಪಕಗಳನ್ನು ಅರ್ಪಿಸುತ್ತಿದ್ದ ಪತಿಗೃಹ. ಸಾಲದೇ ಪುಷ್ಪಾ ವಿಕಸಿಸಿ ಕುಸುಮವಾಗಿ ಬಿರಿಯಲು. ಮುಂದೆ ಪುಷ್ಪಾ ಮಾಮಿ ಸುಬ್ರಮಣ್ಯ ಭಾರತಿಯವರ ಬಗ್ಗೆ ತಮ್ಮ ತಾಯಿ ರಚಿಸಿದ ತಮಿಳು ಕೃತಿಯನ್ನು ಕನ್ನಡಕ್ಕೆ ತಂದರು. ಅದು ಅವರ ಅಂತರ್ಗತ ಸಂಗೀತದಂತೆ ಕಾವ್ಯಮಯ ಶೈಲಿ ಹೊಂದಿದೆ. ಇನ್ನು ಪುಷ್ಪಾ ಅವರ ನಾದಿನಿ ಕಲಾಶ್ರೀ ದ್ವಾರಕಿ ಕೃಷ್ಣಸ್ವಾಮಿ. ಸಂಗೀತ ಹಾಗು ನೃತ್ಯ ಕ್ಷೇತ್ರದಲ್ಲಿ ಇವರದು ಬಹು ದೊಡ್ಡ ಹೆಸರು. ಅತ್ತಿಗೆ ನಾದಿನಿ ಕೂಡಿ ವಿದ್ವತ್ ಪರೀಕ್ಷೆಗೆ ತಯಾರಾಗಿದ್ದು ಪಾಕಶಾಲೆಯಲ್ಲಿ ತುಂಬು ಸಂಸಾರದ ಗೃಹಕೃತ್ಯ ಗಮನಿಸುತ್ತ.
ಸಂಗೀತ ದಿಗ್ಗಜರಾದ ಶ್ಯಾಮಾಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು, ಸ್ವಾತಿ ತಿರುನಾಳರು ಹಾಗು ಅನ್ನಮಾಚಾರ್ಯ ಇವರ ಅಪೂರ್ವ ಕೃತಿಗಳ ಭಂಡಾರದ ಒಡತಿ ಪುಷ್ಪಾ. ಈ ಮಹಾನುಭಾವರ ರಚನೆಗಳಲ್ಲಿ ಅಡಕವಾಗಿರುವ ನವಿರಾದ ಅಂಶಗಳನ್ನು ನಾದ ರಸಭಾವವನ್ನು ಶಿಷ್ಯವೃಂದಕ್ಕೆ ತಮಗೆ ಪ್ರಿಯವಾದ ಅಧ್ಯಾಪನದ ಮೂಲಕ ಮನದಟ್ಟು ಮಾಡಿಸುವಲ್ಲಿ ಮಾಮಿಗೆ ವಿಶೇಷ ನೈಪುಣ್ಯ ಹಾಗಾಗಿ ಒಂದು ಸಂಪ್ರದಾಯಬದ್ಧ ಸಂಗೀತ ಪರಂಪರೆಯನ್ನೇ ಪುಷ್ಪಾ ಹುಟ್ಟುಹಾಕಿದ್ದಾರೆ.
ಕುಸುಮಾಂಜಲಿ ಎಂಬ ಹೆಸರಲ್ಲಿ ಮಹಿಳಾ ತಂಡವನ್ನು ಕಟ್ಟಿಕೊಂಡಿದ್ದೇ ಅಲ್ಲದೆ ಅನೇಕ ಗೀತ ನೃತ್ಯ ರೂಪಕಗಳನ್ನು ರಚಿಸಿ ಸಂಗೀತ ಸಂಯೋಜಿಸಿ ತಮ್ಮ ತಂಡದೊಡನೆ ದೇಶದ ಹಲವೆಡೆ ಪ್ರಸ್ತುತಪಡಿಸಿದ್ದಾರೆ. ಮಹಿಳಾ ಕಲಾವಿದರ ಪಕ್ಕವಾದ್ಯದಲ್ಲಿ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಮಾಮಿ ಸಂಗೀತ ಕಚೇರಿ ಮಾಡಿದ್ದಾರೆ. 'ಕುಸುಮ' ಎಂಬುದು ಪುಷ್ಪಾ ಅವರ ನಾದೋಪಾಸನೆಯ ಅಂಕಿತ ಕಾವ್ಯನಾಮ. ಇವರ ಸುಮನ ಸಂಜೀವಿನಿ ರಾಗರಚನೆಯ 'ಸಂಗೀತ ದೇವಿ ಸರಸ್ವತಿ' ಬಹು ಜನಪ್ರಿಯ ಕೃತಿ. ಅಂತೆಯೇ ಆ ಹಾಡಿಗೆ ಒಪ್ಪುವಂತೆ ಜೀವಿಸಿದ ಕಲಾ ತಪಸ್ವಿ ಎಂ ಎಸ್ ಸುಬ್ಬಲಕ್ಷ್ಮಿ ಮಾಮಿಯ ಬಾಳಿನ ಆರಾಧ್ಯ ದೈವ. ಆ ಗಾನ ಸರಸ್ವತಿಗೆ ತಮ್ಮ ಹೃದಯ ಸಿಂಹಾಸನದಲ್ಲಿ ದೇವತೆಯ ಸ್ಥಾನ ನೀಡಿ ಪೂಜಿಸುವಂತೆ ದೇವರ ಸಾಲಿನಲ್ಲಿ ಆಕೆಯ ಪಟವಿಟ್ಟು ನಿತ್ಯ ದೀಪ ಬೆಳಗಿ ಕೈಮುಗಿಯುವ ಪರಿಪಾಠವು ಅನುಷ್ಠಾನದಲ್ಲಿದೆ. ಪುಷ್ಪಾ ಆ ನಾದದೇವಿಯನ್ನು ಕಂಡು ಆಶೀರ್ವಾದ ಪಡೆದಿರುವುದೇ ಅಲ್ಲದೇ 'ಗಾನಕಲಾ ಮೇರು ಸುಬ್ಬಲಕ್ಷ್ಮಿ' ಎಂಬ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಅರ್ಪಿಸಿದ್ದಾರೆ. ಇಲ್ಲಿಯ ಬರಹವು ಸಂಗೀತವನ್ನು ಅಕ್ಷರರೂಪದಲ್ಲಿ ಆರಾಧಿಸಿದಂತಹ ಆಸ್ವಾದಿಸಿದಂತಹ ಅನುಭವವನ್ನು ನಮ್ಮದಾಗಿಸುತ್ತದೆ.
ಎಂ.ಎಸ್ ಅವರು ಪುಪ್ಪಾರ ಮಾನಸ ಗುರು. ನೇರ ಪರಿಚಯಕ್ಕೂ ಮುನ್ನವೇ ಗಾನ ಸರಸ್ವತಿಯ ವಿದ್ಯೆ, ಪ್ರಸ್ತುತಿಗೆ ಶರಣಾಗಿಹೋಗಿದ್ದರು. ಎಂ ಎಸ್ ಎಸ್ ಕುರಿತಾದ ಈ ಬರವಣಿಗೆಗೆ ತಮ್ಮ ಆಯುಷ್ಯದ ಹದಿನೈದು ವರುಷ ಧಾರೆ ಎರೆದಿದ್ದಾರೆ. ಮಾಧುರ್ಯಮಯ ಕಲಾವಿದೆಯ ಅಂತರಂಗದಿಂದ ಹೊಮ್ಮಿರುವ ಸಂಗೀತ ಗಂಗೆಯ ನಾದತಪಸ್ವೀ ವ್ಯಕ್ತಿತ್ವ ನಮ್ಮೆಲ್ಲರ ಗ್ರಹಿಕೆಗೆ ಅಕ್ಷರ ರೂಪ ತಾಳಿದೆ. ಪುಷ್ಪಾ ಅವರ ಬರಹ ಕಾವ್ಯದ ಅಂಗಿ ತೊಟ್ಟಿದೆ. ಇವರ ಭಾಷೆ ಲಾಲಿತ್ಯಪೂರ್ಣ. ಎಂ.ಎಸ್ ಅವರ ಜೀವನದ ಘಟನೆಗಳನ್ನು ಲೇಖನಿಯಲ್ಲಿ ಸೆರೆಹಿಡಿದ ಪರಿ ಅನನ್ಯ. ಒಬ್ಬ ಮೇರು ಕಲಾವಿದೆಗೆ ಮತ್ತೊಬ್ಬ ಜ್ಞಾನಸ್ಥ ಮಹಾನ್ ಕಲಾವಿದೆಯ ಶ್ರದ್ಧಾಭಕ್ತಿ ತುಂಬಿದ ಗುರು ಕಾಣಿಕೆ. ಆ ಸಂಗೀತ ನಿಧಿಯ ಶರದಿಗೆ ಈ ನಾದನದಿಯ ಉಡುಗೊರೆ.
ಬಹುಮುಖ ಪ್ರತಿಭೆಯ ಪುಷ್ಪಾ ಮಾಮಿ ವರ್ಣಚಿತ್ರಕಲೆ, ಕಸೂತಿ ಹಾಗು ಪಾಕಕಲೆಯಲ್ಲೂ ಪ್ರವೀಣರು. ನಾದಮಯ ಬದುಕಲ್ಲಿ ಕಲೆತು ಆನಂದವಾಗಿ ಸಂಗೀತವನ್ನು ಆಸ್ವಾದಿಸುವ ಮನಸ್ಸಿಗೆ ತಾಳ ಹಾಕಿ ಸಹಕರಿಸುವ ಇವರ ಕಲಾವಿದ ಕೈಬೆರಳುಗಳು ತಂಜಾವೂರು ಮತ್ತು ಮೈಸೂರು ಶೈಲಿಯ ಚಿತ್ರಕಲೆಯ ಮೂಲಕ ಕಲಾಕೃತಿಗಳಲ್ಲಿ ಜೀವಕಳೆ ಹೊಮ್ಮಿಸಬಲ್ಲದು. ಜೊತೆಗೆ ವರ್ಲಿ, ರಾಜಾಸ್ಥಾನಿ, ಮಧುಬನಿ, ಕಲಂಕಾರಿ ಪದ್ದತಿಗಳಲ್ಲಿ ಚಿತ್ರ ಬಿಡಿಸುವುದರಲ್ಲೂ ನಿಸ್ಸೀಮರಿವರು. ತರಾವರಿ ಸ್ವೆಟರ್ ಹಾಕುವುದು ಸಹ ಇವರ ಪ್ರಿಯ ಹವ್ಯಾಸ
ಈಗ 90ರ ಪ್ರಾಯದ ಮಾಮಿ ಕಳೆದ ವರ್ಷ ನಮ್ಮಉದ್ಯಾನನಗರಿಯಿಂದ ಸಾಂಸ್ಕೃತಿಕ ಪ್ರಶಾಂತ ಅರಮನೆನಗರಿಗೆ ವಾಸ ಬದಲಾಯಿಸಿದರು. ಸೊಸೆಯಾಗಿ ಬಂದು ಮಗಳಂತೆ ಜೋಪಾನ ಮಾಡುವ ನಳಿನಿ ಮಾಮಿಯನ್ನು ಮಗುವಂತೆ ಕಾಪಾಡುವ ಗುಣಸಂಪನ್ನೆ. ಮೈಸೂರಿನ ಜನ ಮಾಮಿಯ ಜ್ಞಾನ ಭಂಡಾರದ ಸದುಪಯೋಗ ಮಾಡಿಕೊಳ್ಳಬಹುದು. ಮಾಮಿಯ ಚೈತನ್ಯವೇ ಮಾಮಿಯ ಅರೋಗ್ಯ ಸಂಪತ್ತು. ವಿಷ್ಣು ಸಹಸ್ರನಾಮ ಪಾರಾಯಣ, ಪೂಜೆ, ಜಪತಪಗಳು ಮಾಮಿಯ ದಿನನಿತ್ಯದ ಬದುಕಿಗೆ ದೈವೀಕ ದೀವಿಗೆ.
ಮಾಮಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯೆ. ಇಂದು ಶಾಸ್ತ್ರೀಯ ಸಂಗೀತಲೋಕದಲ್ಲಿ ಮುನ್ಚೂಣಿಯಲ್ಲಿರುವ ಅಪ್ರತಿಮ ಕಲಾವಿದರ ಕೃತಿಗಳ ಬಗ್ಗೆ ಮಾಮಿಯ ವಿಶ್ಲೇಷಣೆ ಕೇಳುವುದೇ ಒಮದು ಸೊಗಸು. ರೇಡಿಯೋ, ಯೂಟ್ಯೂಬ್ ಸಂಗೀತ ಸಾಧನವಾಗಿ ಬಳಸಿ ಆಲಿಸುತ್ತಾರೆ. ಸಂಜಯ ಸುಬ್ರಮಣ್ಯಂ ಇವರ ಆದರಾಭಿಮಾನದ ಗಾಯಕರು.
ಪುಷ್ಪಾ ತಮ್ಮ ತೌರಿನ ಬೃಹತ್ ಕುಟುಂಬದ ಹಿರಿಯ ಪ್ರೀತಿಯ ಸಹೃದಯಿ ಅಕ್ಕ ಹಾಗು ಒಡಹುಟ್ಟಿದವರಿಗೆ ಸಂಗೀತ ಪ್ರೀತಿ ಹಿಡಿಸಿದ ಗುರು. ಅಪ್ತರು, ಸಂಬಂಧಿಕರು ಸ್ನೇಹಿತರೊಡನೆ ಮಾಮಿ ಸಂವಹನ ನಡೆಸುವುದೇ ವಿಡಿಯೋ ಕರೆ ಮುಖಾಂತರ. ನೇರವಾಗಿ ನೋಡಿದ ಖುಷಿ ಸಿಗುವುದು ಎಂಬುದು ಈ ಹಿರೀಜೀವದ ಅಭಿಪ್ರಾಯ. ಹಾಗೆಯೇ ಹಲವಾರು ಸಂಘ ಹಾಗು ಸಂಗೀತ ಸಂಸ್ಥೆಗಳು ಈ ಪ್ರತಿಭಾವಂತೆಗೆ ಗೌರವ ಸನ್ಮಾನ ನೀಡಿವೆ.
ಆಕಾಶವಾಣಿಯ ಸಂಗೀತವಾಹಿನಿ ಅಮೃತವರ್ಷಿಣಿಯ ಸಂಪಥ ಕಾರ್ಯಕ್ರಮಕ್ಕೆ ಪುಷ್ಪಾ ಅವರನ್ನು ಮಾತನಾಡಿಸಿ ಅವರ ಸಂಗೀತ ರಸಯಾತ್ರೆಯನ್ನು ಕೇಳುಗರಿಗೆ ವಿಸ್ತಾರವಾಗಿ ಪರಿಚಯ ಮಾಡಿಕೊಟ್ಟ ಪುಣ್ಯ ನನ್ನದು.
ಪುಷ್ಪಾ ಇವರ ಹೂಮನಸು ಹುಮ್ಮಸ್ಸು ಎರಡು ನಮ್ಮ ಹೃದಯವನ್ನು ಅರಳಿಸುತ್ತದೆ. ಭಗವಂತ ಈ ಮಾತೃಸ್ವರೂಪಿಣಿಯನ್ನು ಆಯುರಾರೋಗ್ಯದಿಂದ ಹರಸಲಿ ಎಂಬುದು ನನ್ನ ಪ್ರಾರ್ಥನೆ.
ಲೇಖನ ಕೊಡುಗೆ: ಸಾಯಿಲಕ್ಷ್ಮೀ ಎಸ್ ಅಯ್ಯರ್
Thanks for the article Sayilakshmi S Iyer 🌷🙏🌷
On the birthday of great musician and musicologist Pushpa Srinivasan
ಕಾಮೆಂಟ್ಗಳು