ಪೆರಿಯಾರ್ ರಾಮಸ್ವಾಮಿ
ಪೆರಿಯಾರ್ ರಾಮಸ್ವಾಮಿ
ಪೆರಿಯಾರ್ ರಾಮಸ್ವಾಮಿ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ. ಜಾತೀಯತೆ, ಮೂಢ ನಂಬಿಕೆಗಳು, ಸ್ತ್ರೀ ಮತ್ತು ಕೆಳವರ್ಗದ ಜನಜೀವನದ ಶೋಷಣೆಯಲ್ಲಿ ತತ್ತರಿಸಿ ಕೊಳೆತು ನಾರುತ್ತಿದ್ದ ಭಾರತೀಯ ಜನಜೀವನದಲ್ಲಿ ಪೆರಿಯಾರ್ ರಾಮಸ್ವಾಮಿಯವರು ಮಾಡಿದ ಕ್ರಾಂತಿ ಮಹತ್ವಪೂರ್ಣವಾದುದು.
ಪೆರಿಯಾರ್ ರಾಮಸ್ವಾಮಿ ಕನ್ನಡ ಮಾತೃಭಾಷೆಯಾಗಿ ಹೊಂದಿದ್ದ ಕುಟುಂಬದಲ್ಲಿ 1879ರ ಸೆಪ್ಟೆಂಬರ್ 17ರಂದು ಈರೋಡಿನಲ್ಲಿ ಜನಿಸಿದರು. ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಎಂದೆನಿಸಿದ್ದ ಅವರು ತಮ್ಮ ಸಿದ್ಧಾಂತಗಳಿಗೆ ಮಹತ್ವ ನೀಡಿ ತಮ್ಮ ಜಾತಿಯ ಹಿರಿತನದ ಮಹತ್ವವನ್ನು ಪ್ರಚಾರ ಪಡಿಸುತ್ತಿದ್ದ 'ನಾಯ್ಕರ್' ಪದವನ್ನು ಕಿತ್ತುಹಾಕಿದರು.
'ದ್ರಾವಿಡರ ಸ್ವಾಭಿಮಾನ' ಎಂಬುದು ರಾಮಸ್ವಾಮಿ ಅವರ ಕ್ರಾಂತಿಕಾರಕ ಮಾತು. ಅಂದು ಮದ್ರಾಸು ಪ್ರಾಂತ್ಯದಲ್ಲಿದ್ದ ಅವರ ಚಳುವಳಿ ಹೆಚ್ಚಾಗಿ ತಮಿಳಿಗರನ್ನು ಒಳಗೊಂಡಿತ್ತಾದರೂ ಅವರ ಹಲವಾರು ಹೋರಾಟಗಳಾದ ಕೇರಳದ 'ವೈಕೊಂ'ನಲ್ಲಿನ ದೇವಸ್ಥಾನಗಳಲ್ಲಿ ಹಿಂದುಳಿದವರಿಗೆ ಪ್ರವೇಶ ಮುಂತಾದ ವಿಚಾರಗಳಲ್ಲಿ ಅವರ ಹೋರಾಟ ಆ ಗಡಿಗಳಿಗೆ ಸೀಮಿತವಾಗಿರಲಿಲ್ಲ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರಭಾಷೆಯ ಕುರಿತಾದ ಸಮಾವೇಶದಲ್ಲಿ ಕೂಡಾ ಪ್ರಮುಖರಾಗಿ ಭಾಗವಹಿಸಿದ್ದ ಪೆರಿಯಾರರು, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಮಾಡಿ ಅದರಡಿಯಲ್ಲಿ ದ್ರಾವಿಡ ಸಂಸ್ಕೃತಿಯನ್ನು ನಾಶಮಾಡುವ ಪ್ರವೃತ್ತಿಗೆ ಎಡೆಕೊಡದೆ, ಒಂದು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನೇ ಅಳವಡಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬಂದಿದ್ದರು.
ಸ್ವಾತಂತ್ರ ಹೋರಾಟದ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ಪೆರಿಯಾರರು ಕಾಂಗ್ರೆಸ್ಸಿನಲ್ಲಿ ಹಲವಾರು ವರ್ಷವಿದ್ದು ಜೈಲುವಾಸ ಅನುಭವಿಸಿದರಾದರೂ ತಮ್ಮ ನಿಲುವುಗಳಿಗೆ ಸೂಕ್ತ ಸಹಸ್ಪಂದನವಿಲ್ಲದಿದ್ದಾಗ ಅದರಿಂದ ಹೊರಬಂದರು.
ದೇವರ ಬಗ್ಗೆ ನಂಬಿಕೆ ಹೊತ್ತು ಕಾಶಿ ವಿಶ್ವನಾಥ ದೇವಾಲಯವನ್ನು ಅತ್ಯಂತ ಭಕ್ತಿಯಿಂದ ಸಂದರ್ಶಿಸಲು ಹೊರಟ ರಾಮಸ್ವಾಮಿ ನಾಯ್ಕರ್ ಅವರಿಗೆ ಅಲ್ಲಿ ಕಂಡ ಬ್ರಾಹ್ಮಣೀಯ ಪಂಡರ ಪುಂಡಾಟ, ಇತರ ಜನರ ಶೋಷಣೆ, ಅಸಹ್ಯ ಹುಟ್ಟಿಸುವ ಗಲೀಜುತನ, ಹೆಣಗಳನ್ನು ಅರ್ಧ ಸುಟ್ಟು ನೀರಿನಲ್ಲಿ ಬಿಸಾಡುವ ಹೇಯತನ ಇವುಗಳನ್ನೆಲ್ಲಾ ಕಂಡು ಮನನೊಂದಿತು. ಜೊತೆಗೆ ಹಸಿವಿನಿಂದ ಅನ್ನ ಛತ್ರಕ್ಕೆಂದು ಹೋದ ಇವರನ್ನು ಬೇರೆ ಜಾತಿಯವನೆಂದು ಅನ್ನ ನೀಡದೆ ಕ್ರೂರವಾಗಿ ಹೊರಗೆ ತಳ್ಳಲಾಯಿತು. ಇದರಿಂದ ಅವರಿಗೆ ದೇವರ ಮೇಲಿನ ನಂಬಿಕೆ ಹೋದುದು ಮಾತ್ರವಲ್ಲ, ಮನುಷ್ಯನಿಗೆ ಕಳೆದು ಹೋಗಿರುವ ಸ್ವಾಭಿಮಾನವನ್ನು ಮರಳಿಸುವಲ್ಲಿ ಪ್ರಯತ್ನಶೀಲರಾಗುವ ಅದಮ್ಯ ದೃಢ ಸಂಕಲ್ಪ ಮೂಡಿಬಂತು. ಮೊದಲು ತಮ್ಮ ಗುಂಪನ್ನು 'ಜಸ್ಟಿಸ್ ಪಾರ್ಟಿ' ಎಂದು ಕರೆದರು. ಮುಂದೆ ಅದನ್ನು ದ್ರಾವಿಡರ ಮನೋಭಾವನೆಯ ಸಂಕೇತ ಎಂಬ ನಿಟ್ಟಿನಲ್ಲಿ 'ದ್ರಾವಿಡ ಕಳಗಂ' ಎಂದು ಬದಲಿಸಿದರು.
ರಾಮಸ್ವಾಮಿ ನಾಯ್ಕರ್ ಅವರ ಹಿಂದಿ ವಿರೋಧ, ಬ್ರಾಹ್ಮಣ ಜನಸಮುದಾಯದ ಆಚರಣೆಗಳ ವಿರೋಧ, ದೇವರ ಚಿತ್ರವನ್ನು ಸಾರ್ವಜನಿಕವಾಗಿ ಸುಡುವ ರೀತಿ ಇವೆಲ್ಲಾ ಕ್ರಾಂತಿಕಾರಕ ವ್ಯಕ್ತಿ ನಡೆಸುವ ಉಗ್ರಸ್ವರೂಪಗಳನ್ನು ಪಡೆದುಕೊಂಡವು ಎಂಬ ನಿಟ್ಟಿನಲ್ಲಿ ಭಾರತೀಯತೆ ಎಂಬ ಸಂಮಿಶ್ರ ಸಮಾಜದಲ್ಲಿ ಹಲವು ವಿಭಿನ್ನ ನಿಲುವುಗಳು ಮೂಡಿರುವುದು ಸಹಜವಾದರೂ, ನಮ್ಮ ಜಾತೀಯ ಪದ್ಧತಿಯಲ್ಲಿ ಕೆಲವೊಂದು ಮೂಲಭೂತ ಬದಲಾವಣೆಗಳು ಅವಶ್ಯವಿದ್ದ ಕಾಲದಲ್ಲಿ 'ಮನುಷ್ಯ ಮನುಷ್ಯನನ್ನು ಮನುಷ್ಯನಂತೆ ಕಾಣುವ' ಅನಿವಾರ್ಯತೆ ನಿರ್ಮಾಣವಾಗಬೇಕಿದ್ದ ಕಾಲದ ಹಿನ್ನಲೆಯಲ್ಲಿ ರಾಮಸ್ವಾಮಿ ನಾಯ್ಕರ್ ಅಂತಹವರ ಸಮಾಜ ಸುಧಾರಣಾ ಕಾರ್ಯಗಳನ್ನು ಅರ್ಥೈಸುವುದು ಕೂಡಾ ಮಹತ್ವದ ವಿಚಾರವಾಗಬೇಕಾಗುತ್ತದೆ.
ಬಡಜನರ, ಶೋಷಿತ ಜನಾಂಗದ ಪರ ಧ್ವನಿಯಾಗಿ, ಶೋಷಿತ ಜನಾಂಗ ಮತ್ತು ಸ್ತ್ರೀಯರಿಗೆ ಸಮಾನತೆ ಇಲ್ಲದಿದ್ದ ಕಾಲದಲ್ಲಿ ಅವರು ತಂದ ಸಮಾಜದ ಸುಧಾರಣೆಗಳ ಪ್ರಯತ್ನವನ್ನು ಇಂದಿನ ಸಮಾಜ ಪಡೆದಿದೆ. ಸಮಾಜ ಸುಧಾರಣೆಗಳ ಬಗೆಗೆ ಆಸ್ಥೆ ಹೊಂದಿದ್ದ ರಾಮಸ್ವಾಮಿ ನಾಯ್ಕರ್ ಅವರಿಗೆ ರಾಜಕೀಯ ಲಾಭ ಪಡೆದು ಅಧಿಕಾರ ನಡೆಸುವುದು ಬೇಕಿರಲಿಲ್ಲ. ಆದರೆ ಅವರ ಅನುಯಾಯಿಗಳಾಗಿದ್ದ ಅಣ್ಣಾ ದುರೈ ಮುಂತಾದವರಿಗೆ ರಾಜಕೀಯ ಆಕಾಂಕ್ಷೆ ಇದ್ದದ್ದರಿಂದ ಅವರೆಲ್ಲಾ ದ್ರಾವಿಡ ಮುನ್ನೇತ್ತರ ಕಳಗಂ ನಿರ್ಮಿಸಿಕೊಂಡು ಆಚೆ ಬಂದು ರಾಜಕೀಯಕ್ಕೆ ಇಳಿದರು. ನಂತರದ ಮುಂದಿನ ತಲೆಮಾರುಗಳಲ್ಲಿ ಹಲವು 'ಕಳಗಂ'ಗಳ ಕಾಳಗ ಮಾಡಿಕೊಂಡು ಬದುಕಿದ ರಾಜಕಾರಣಿಗಳಿಗಿಂತ ಪೆರಿಯಾರ್ ರಾಮಸ್ವಾಮಿ ಅವರು ವಿಭಿನ್ನ ಮತ್ತು ಸಾಮಾಜಿಕ ನಿಲುವಿನವರಾಗಿದ್ದರು ಎಂಬುದು ಕೂಡಾ ಮಹತ್ವಪೂರ್ಣ.
ರಾಮಸ್ವಾಮಿ ಪೆರಿಯಾರರು 1973ರ ಡಿಸೆಂಬರ್ 24ರಂದು ತಮ್ಮ 94ನೆಯ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಮಾಜದಲ್ಲಿ ಮೂಲಭೂತ ಬದಲಾವಣೆಗಳಿಗಾಗಿ ತಮ್ಮ ಸ್ವಾರ್ಥ ತ್ಯಜಿಸಿ ತಾವು ನಂಬಿದ್ದ ಧ್ಯೆಯ, ಮಾನವೀಯತೆ, ಸಮಾನತೆ, ಸ್ವಾಭಿಮಾನಗಳಿಗಾಗಿ ಶ್ರಮಿಸಿದ ರಾಮಸ್ವಾಮಿ ನಾಯ್ಕರ್ ಅವರು ಹಲವು ನಿಟ್ಟಿನಲ್ಲಿ ಸ್ಮರಣೀಯರಾಗಿದ್ದಾರೆ.
On the birth anniversary of great social reformist Periyar Ramswamy...
ಕಾಮೆಂಟ್‌ಗಳು