ಪುಟ್ಟರಾಜ ಗವಾಯಿ
ಪಂಡಿತ ಪುಟ್ಟರಾಜ ಗವಾಯಿ
ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದವರು.
ಪುಟ್ಟರಾಜ ಗವಾಯಿಗಳು 1914ರ ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನಗಲ್‌ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ. ತಾಯಿ ಸಿದ್ಧಮ್ಮ. ಇವರ ಮೂಲ ಹೆಸರು ಪುಟ್ಟಯ್ಯಜ್ಜ. ಹುಟ್ಟಿದ ಆರು ತಿಂಗಳಲ್ಲಿಯೇ ಸಿಡುಬಿನ ತೊಂದರೆಯಿಂದಾಗಿ ಬಾಲಕ ಪುಟ್ಟಯ್ಯಜ್ಜ ಅಂಧನಾಗಿದ್ದ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅಂಧ ಪುಟ್ಟಯ್ಯಜ್ಜನ ಜೀವನದ ಹೊಣೆಗಾರಿಕೆಯನ್ನು ಹೊತ್ತಿದ್ದ ಮಾವ ಚಂದ್ರಶೇಖರರು ಪುಟ್ಟಯ್ಯಜ್ಜನಿಗೆ ಸಂಗೀತ ಶಿಕ್ಷಣ ನೀಡುವಂತೆ ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿಸಿದರು.
ತಮ್ಮ ಗುರುಗಳಲ್ಲಿ ಭಕ್ತಿ ಶ್ರದ್ಧೆಗಳಿಂದ ಸಾಧನೆಮಾಡಿದ ಅಂಧ ಪುಟ್ಟಯ್ಯಜ್ಜ ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಹಾರ್ಮೋನಿಯಂ ಕಲಿಯುವ ಮೂಲಕ ಸಂಗೀತ ಸಾಮ್ರಾಟ್ ಎಂಬ ಕೀರ್ತಿಗೆ ಭಾಜನರಾದರು. ಗಾಯನವಷ್ಟೇ ಅಲ್ಲದೆ ಸಂಗೀತ ಲೋಕದ ಅನೇಕ ವಾದ್ಯಗಾರಿಕೆಯಲ್ಲೂ ಅವರಿಗೆ ಅಪ್ರತಿಮ ಸಾಧನೆಯಿತ್ತು.
ತಮ್ಮ ಗುರುಗಳಂತೆಯೇ ಬ್ರಹ್ಮಚರ್ಯ, ನೇಮನಿಷ್ಠೆ, ಆಚಾರಗಳಿಂದ ನಡೆದ ಪುಟ್ಟರಾಜ ಗವಾಯಿಗಳು 1944ರಲ್ಲಿ ವೀರೇಶ್ವರ ಆಶ್ರಮದ ಪೀಠಾಧಿಪತಿಗಳಾಗಿ ಹೊಣೆಗಾರಿಕೆ ವಹಿಸಿಕೊಂಡರು. ಐದು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ಅಂಧರಿಗೆ ಶಿಕ್ಷಣ ನೀಡುವ ಮೂಲಕ ಅಂಧರ ಪಾಲಿನ ದೇವರೇ ಆಗಿದ್ದರು. ತಾವು ಕಲಿತ ವಿದ್ಯೆಯನ್ನು ಶಿಷ್ಯರಿಗೆ ಕಲಿಸಲು ಗುರುಗಳಿಂದ ಸ್ಥಾಪಿತವಾದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತು ನೂರಾರು ಅಂಧರು, ಅನಾಥರು, ವಿಕಲಚೇತನರಿಗೆ ಸಂಗೀತ ಶಿಕ್ಷಣ ದೊರಕುವಂತೆ ಮಾಡಿದರು.
ಪುಟ್ಟರಾಜರು ತಾರುಣ್ಯದಲ್ಲೇ ಪಂಡಿತ, ಗವಾಯಿ ಬಿರುದು ಪಡೆದಿದ್ದರು. ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ಕೃತಿ ರಚಿಸಿದ್ದ ಗವಾಯಿಗಳಿಗೆ ಸಂಗೀತವೇ ಪ್ರಾಣವಾಗಿತ್ತು.
ಪುಟ್ಟರಾಜ ಗವಾಯಿಗಳಿಗೆ ಭಾರತ ಸರಕಾರದ ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಸಂಗೀತ ವಿದ್ವಾನ್ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ನಾಡೋಜ ಗೌರವ, ಕನಕ ಪುರಂದರ ಪ್ರಶಸ್ತಿ, ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಸನ್ಮಾನ, ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರೋಟರಿ ಸಂಸ್ಥೆಯ ಪಾಲ್ ಹ್ಯಾರಿಸ್ ಪ್ರಶಸ್ತಿ, ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಫೆಲೊಷಿಪ್, ಕಾಳಿದಾಸ ಸಮ್ಮಾನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಪಂಡಿತ ಪುಟ್ಟರಾಜ ಗವಾಯಿ ಅವರನ್ನು ಅರಸಿ ಬಂದಿದ್ದವು.
ನಾಟಕ, ಸಾಹಿತ್ಯ ಸೇರಿದಂತೆ ಪುಟ್ಟರಾಜ ಗವಾಯಿಗಳು ಮೂರೂ ಭಾಷೆಗಳಲ್ಲಿ ಬಹಳಷ್ಟು ಕೃತಿ ರಚಿಸಿದ್ದಾರೆ. ಬಹುಭಾಷಾ ಪಂಡಿತರಾಗಿದ್ದ ಗವಾಯಿಗಳು ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ ರಚಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಅವರಿಗೆ ಅದ್ಭುತ ಕವಿತಾಶಕ್ತಿಯಿತ್ತು. ಹಲವಾರು ಚೀಜುಗಳನ್ನು ರಚಿಸಿದ್ದರು. ಅವರ ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರಗೊಂಡವು. ಪುಟ್ಟರಾಜ ಗವಾಯಿಗಳ ಬಸವೇಶ್ವರ ಪುರಾಣವನ್ನು ನೋಡಿದ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದರು ಮುಕ್ತಕಂಠದಿಂದ ಪ್ರಶಂಸಿಸಿ, ರಾಷ್ಟ್ರಪತಿ ಭವನದಲ್ಲಿ ಸತ್ಕಾರ ನಡೆಸಿದರು.
ಮಹಾನ್ ವಿದ್ವಾಂಸರಾದ ಪುಟ್ಟರಾಜ ಗವಾಯಿಗಳು ಕನ್ನಡದಲ್ಲಿ 20, ಹಿಂದಿಯಲ್ಲಿ 5 ಮತ್ತು ಸಂಸ್ಕೃತದಲ್ಲಿ 6 ಕೃತಿಗಳ ರಚನೆ ಮಾಡಿದ್ದರು.
ಪುಟ್ಟರಾಜ ಗವಾಯಿಗಳು 2010ರ ಸೆಪ್ಟೆಂಬರ್ 17ರಂದು ತಮ್ಮ 97ನೆಯ ವಯಸ್ಸಿನಲ್ಲಿ ನಿಧನರಾದರು.

ಕಾಮೆಂಟ್‌ಗಳು