ಮಳವಳ್ಳಿ ಸುಂದರಮ್ಮ
ಮಳವಳ್ಳಿ ಸುಂದರಮ್ಮ
ಮಳವಳ್ಳಿ ಸುಂದರಮ್ಮನವರು ಕರ್ನಾಟಕ ರಂಗಭೂಮಿಯನ್ನು ಬೆಳಗಿದ ಮಹಾನ್ ತಾರೆ. ಅವರು ವೃತ್ತಿ ರಂಗಭೂಮಿಗೆ ಹೇಳಿ ಮಾಡಿಸಿದಂತಹ ಶಾರೀರ, ಶರೀರ ಎರಡೂ ಕೂಡಿ ದಂತಹ ಅಪ್ರತಿಮ ಕಲಾವಿದೆ ಎನಿಸಿದ್ದವರು.
ಮಳವಳ್ಳಿ ಸುಂದರಮ್ಮನವರು 1905ರ ಸೆಪ್ಟೆಂಬರ್ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಪಿಟೀಲು ವಿದ್ವಾಂಸರಾಗಿದ್ದ ಮಳವಳ್ಳಿ ಸುಬ್ಬಣ್ಣನವರು. ತಾಯಿ ಲಕ್ಷ್ಮೀದೇವಮ್ಮನವರು. ಸುಂದರಮ್ಮನವರು ತಂದೆಯವರಿಂದ ಹಲವು ವರ್ಷ ಕರ್ನಾಟಕ ಸಂಗೀತದ ಪಾಠ ಕಲಿತರು.
ಏಳನೆಯ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದ ಸುಂದರಮ್ಮನವರು ತಮ್ಮ ತಂದೆಯವರು ನಡೆಸಲು ಪ್ರಾರಂಭಿಸಿದ ಶ್ರೀಕೃಷ್ಣ ವಿಲಾಸ ನಾಟಕ ಸಭಾ ಮಂಡಲಿಯ ನಾಟಕಗಳಾದ ಪಾಂಡುವಿಜಯ, ಸದಾರಮೆ, ಗುಲೇಬಕಾವಲಿ, ಚೋರಕಥೆ, ಸಾರಂಗಧರ, ವಸಂತ ಮಿತ್ರವಿಜಯ, ಮುಂತಾದ ನಾಟಕಗಳಲ್ಲಿ ಬಾಲನಟಿ ಪಾತ್ರ ನಿರ್ವಹಿಸಿದರು. ವಿರಾಟಪರ್ವದ ದ್ರೌಪದಿ, ಸುಭದ್ರಾ ಪರಿಣಯದ ಸುಭದ್ರೆ ಮುಂತಾದ ಪಾತ್ರಗಳು ಅವರಿಗೆ ಬಹು ಹೆಸರು ತಂದು ಕೊಟ್ಟ ನಾಟಕಗಳು. ಕೊಟ್ಟೂರಪ್ಪ, ಜಿ. ನಾಗೇಶರಾಯರು, ಬಿ.ಎ. ಗುರುಮೂರ್ತಪ್ಪ, ಚಿಕ್ಕಬಸವರಾಜು ಮುಂತಾದ ನಟ ಭಯಂಕರರೊಡನೆ ನಾಯಕಿಯಾಗಿದ್ದ ಖ್ಯಾತಿ ಸುಂದರಮ್ಮನವರದು.
ಮಳವಳ್ಳಿ ಸುಂದರಮ್ಮನವರು ಮೈಸೂರು ವಾಸುದೇವಾಚಾರ್ಯರು ಮತ್ತು ಪಿಟೀಲು ತಾಯಪ್ಪನವರು ಮುಂತಾದ ಮಹಾನ್ ಸಂಗೀತ ದಿಗ್ಗಜರ ಬಳಿ ಸಂಗೀತಾಭ್ಯಾಸ ನಡೆಸಿದರು. ತಮ್ಮ 18ನೆ ವಯಸ್ಸಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದೆ ನಾಟಕದಲ್ಲಿ ಪಾತ್ರವಹಿಸಿದ್ದಲ್ಲದೆ ಬೇಸಿಗೆ ಅರಮನೆಯಲ್ಲಿ ಸಂಗೀತ ಕಚೇರಿ ನಡೆಸಿಕೊಟ್ಟರು. ಮದರಾಸಿನ ಓರಿಯನ್ ಕಂಪನಿಯಿಂದ ಅವರ ರಂಗ ಗೀತೆಗಳ ಧ್ವನಿಮುದ್ರಿಕೆ ಹೊರಬಂತು. ಮಾರ್ಕಂಡೇಯ ಚಲನಚಿತ್ರದಲ್ಲಿ ಪಾತ್ರಧಾರಿಯಾಗಿದ್ದರು. ಇದಲ್ಲದೆ ಚಾಮುಂಡೇಶ್ವರಿ ನಾಟಕಸಭಾ ಆಡಳಿತ ವಹಿಸಿಕೊಂಡು ರಾಜ್ಯದ ಹಲವಾರು ಕಡೆ ಅನೇಕ ನಾಟಕಗಳ ಪ್ರದರ್ಶನ ನಡೆಸಿದರು. ಅವರು ಕೆಲವೊಂದು ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು.
ಸುಂದರಮ್ಮನವರು ತಾವು ಸಂಪಾದಿಸಿದ ಅಂದಿನ ಕಾಲದ ಸಹಸ್ರಾರು ರೂಪಾಯಿಗಳನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ಮಾಡಿದರು. 1962ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಸುಂದರಮ್ಮನವರಿಗೆ ಪ್ರಶಸ್ತಿ ಸಂದಿತು. ಅವರ ಜೀವನ ಚರಿತ್ರೆ ಅಭಿನಯ ಶಾರದೆ ಪ್ರಕಟಗೊಂಡಿದೆ.
ಮಳವಳ್ಳಿ ಸುಂದರಮ್ಮನವರು 1995ರ ಅಕ್ಟೋಬರ್ 11ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
On birth anniversary of great theatre artiste and musician Malavalli Sundaramma 🌷🙏🌷
ಕಾಮೆಂಟ್‌ಗಳು