ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸದಾಶಿವ ಬ್ರಹ್ಮೇಂದ್ರ


 ಸದಾಶಿವ ಬ್ರಹ್ಮೇಂದ್ರರು


ಇಂದು ಸದಾಶಿವ ಬ್ರಹ್ಮೇಂದ್ರರ ಆರಾಧನೆ ಎಂಬ ಅಭಿಪ್ರಾಯವಿದೆ. 

ಮಹಾನ್ ತಪಸ್ವಿಗಳೂ, ವಾಗ್ಗೇಯಕಾರರೂ ಆದ ಸದಾಶಿವ ಬ್ರಹ್ಮೇಂದ್ರರು 'ಪಿಬರೇ ರಾಮ ರಸಂ' ಅಂತಹ ಅನೇಕ  ಭವ್ಯ ಕೃತಿಗಳನ್ನು ರಚಿಸಿದ ಸಂತರು. ಅವರಿದ್ದ ಕಾಲ 17-18ನೇ ಶತಮಾನ. ಅವರು ತಮಿಳುನಾಡಿನ ಕುಂಭಕೋಣಂ ಬಳಿಯಲ್ಲಿ ನೆಲೆಸಿದ್ದರಂತೆ. ಅವರು ಬಹುತೇಕ ಕೀರ್ತನೆಗಳನ್ನು ಸಂಸ್ಕೃತದಲ್ಲಿ ರಚಿಸಿದ್ದು,  ಅವುಗಳಲ್ಲಿ ಕೆಲವೊಂದು ಮಾತ್ರವೇ ಲಭ್ಯವಿವೆ. ಈ ಕೆಲವು ಮುತ್ತುಗಳು ಸಂಗೀತಲೋಕದ ಅನರ್ಘ್ಯ ರತ್ನಗಳಾಗಿವೆ.

ಸದಾಶಿವ ಬ್ರಹ್ಮೇಂದ್ರರು ಆಂಧ್ರದಿಂದ ಮಧುರೈ ಪ್ರಾಂತ್ಯಕ್ಕೆ ಬಂದು ನೆಲೆಸಿದ್ದ ಮೋಕ್ಷಯಿಂಟಿ ಸೋಮಸುಂದರ ಅವಧಾನಿ - ಪಾರ್ವತಿ ದಂಪತಿಗಳ ಪುತ್ರರಾಗಿ ಜನಿಸಿದರು. ಅವರ ಅಂದಿನ ಹೆಸರು ಶಿವರಾಮಕೃಷ್ಣ.  ತಂದೆ ಸೋಮಸುಂದರ ಅವಧಾನಿಗಳು ಗೃಹಸ್ಥರಾದರೂ ಯೋಗ ಸಾಧನೆಯಲ್ಲೇ ನಿರತರಾಗಿದ್ದ ಋಷಿಸಮಾನರು. ಪುತ್ರ ಸಂತಾನಕ್ಕಾಗಿ ರಾಮನಾಥೇಶ್ವರನಲ್ಲಿ ಪ್ರಾರ್ಥಿಸಿದ್ದರ ಫಲವೋ ಎಂಬಂತೆ  ಮಹಾನ್ ಬ್ರಹ್ಮಜ್ಞಾನಿಯೇ ಆದ ಶಿವರಾಮಕೃಷ್ಣ  ಅವರ ಸುಪುತ್ರನಾಗಿ ಜನಿಸಿದ್ದ.  ತರ್ಕಶಾಸ್ತ್ರ ನಿಷ್ಣಾತರಾಗಿ, ವಾಗ್ಗೇಯಕಾರರಾಗಿ ಬಾಳಿದ  ಶಿವರಾಮಕೃಷ್ಣರು ಕೊನೆಗೆ ಸಕಲವನ್ನೂ ತೊರೆದು ಸಂತರಾಗಿ ಯತಿರಾಜ ಸದಾಶಿವ ಬ್ರಹ್ಮೇಂದ್ರರೆಂಬ ಪ್ರಸಿದ್ಧಿಯಿಂದ ಕಂಗೊಳಿಸಿದರು. 

ವೇದಗಳನ್ನು ಅಭ್ಯಾಸ ಮಾಡಿದ್ದ ವಿದ್ವಾಂಸರಾದ ತಂದೆಯೇ ಶಿವರಾಮಕೃಷ್ಣರ ಮೊದಲ ಗುರು. ತಿರುವಿಶೈನಲ್ಲೂರಿನ ರಾಮಭದ್ರ ದೀಕ್ಷಿತರಲ್ಲಿ ಶಾಸ್ತ್ರಾಧ್ಯಯನ ನಡೆಯಿತು. ಜೊತೆ ಜೊತೆಗೇ ಮರುದಾನಲ್ಲೂರು ಸದ್ಗುರು ಸ್ವಾಮಿಗಳು, ಬೋಧೇಂದ್ರ ಸರಸ್ವತಿಗಳು ಹಾಗೂ ಶ್ರೀಧರ ವೆಂಕಟೇಶ ಅಯ್ಯವಾಳರೆಂಬ ಸಂಕೀರ್ತನ ಸಂಪ್ರದಾಯದ ತ್ರಿಮೂರ್ತಿಗಳ ಸಂಪರ್ಕವೂ ಬೆಳೆಯಿತು. 17ನೇ ವಯಸ್ಸಿನಲ್ಲಿ ಶಿವರಾಮಕೃಷ್ಣರಿಗೆ ವಿವಾಹವೂ ಆಯಿತು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಶಿವರಾಮಕೃಷ್ಣರಲ್ಲಿದ್ದ ಶಾಸ್ತ್ರಗಳ ಮೇಲಿನ ಅದ್ಭುತ ಪಾಂಡಿತ್ಯ, ಆಧ್ಯಾತ್ಮ ಜ್ಞಾನವನ್ನು ಕಂಡು ಅವರ ಗುರುಗಳೂ ಅಚ್ಚರಿಗೊಂಡಿದ್ದರು. 

ಶಿವರಾಮಕೃಷ್ಣರು ಮನೆಬಿಟ್ಟು ಸತ್ಯವನ್ನರಸಿ ಹೊರಟರು. ಕಂಚಿಕಾಮಕೋಟಿ ಪೀಠದ ಶ್ರೀ ಪರಮಶಿವೇಂದ್ರ ಸ್ವಾಮಿಗಳ ಶಿಷ್ಯರಾದರು. ಗುರುಗಳ ಉಪದೇಶದಂತೆ ಆತ್ಮವಿಚಾರ ಮತ್ತು ಮಹಾಕಾವ್ಯ ಉಪದೇಶಗಳ ಅವಲೋಕನದಲ್ಲಿ ತೊಡಗಿದರು.  ಯತಿಗಳಿಂದ ಶಿಷ್ಯತ್ವ ಪಡೆದ ನಂತರದ ದಿನಗಳಲ್ಲಿ ಶಿವರಾಮಕೃಷ್ಣರ ಪಾಂಡಿತ್ಯಶಕ್ತಿ, ಮತ್ತು ತರ್ಕಶಕ್ತಿ ಮತ್ತಷ್ಟು ತೀಕ್ಷ್ಣವಾಯಿತು. ಅವರನ್ನು ವಾದದಲ್ಲಿ ಸೋಲಿಸುವವರಿರಲಿಲ್ಲ.
 
ಶಿವರಾಮಕೃಷ್ಣರನ್ನು ವಾದದಲ್ಲಿ ಸೋಲಿಸಲಾಗದ ಕೆಲವು ಒಣಪಂಡಿತರು, ಆತನಿಗೆ ತನ್ನ ಪಾಂಡಿತ್ಯದ ಬಗ್ಗೆ ಅಹಂಕಾರವಿದೆ, ಆತ ಸಾಧನೆಯ ಮುಂದಿನ ಹಂತಕ್ಕೆ ಹೋಗಬೇಕೆಂದರೆ ಈ ಅಹಂಕಾರದಿಂದ ಅವನನ್ನು ಹೊರತರಬೇಕು ಎಂದು ಪರಮ ಶಿವೇಂದ್ರರ ಬಳಿ ಉಸುರಿದರಂತೆ. ಶಿವರಾಮಕೃಷ್ಣರನ್ನುದ್ದೇಶಿಸಿ "ವಾದದಲ್ಲಿ ಬೇರೆಯವರನ್ನು ಮೌನಿಯಾಗಿಸುವುದು ಹೇಗೆ ಎಂಬುದು ನಿನಗೆ ಚೆನ್ನಾಗಿಯೇ ತಿಳಿದಿದೆ, ಆದರೆ ನೀನು ಮೌನಿಯಾಗಿ ಜ್ಞಾನಕ್ಕೆ ಪ್ರಯತ್ನಿಸುವುದು,  ಸಾಕ್ಷಾತ್ಕಾರ ಪಡೆಯುವುದು ಯಾವಾಗ? ಇನ್ನೂ ಎಷ್ಟು ಅಂತ ವಾದ ಮಾಡುತ್ತೀಯ?” ಎಂದರು ಪರಮಶಿವೇಂದ್ರರು. ಆ ಘಟನೆಯೇ ವಾಚಾಳಿಯಾಗಿದ್ದ ಶಿವರಾಮಕೃಷ್ಣರನ್ನು ಅಂತರ್ಮುಖಿ, ಮೌನಿ ಸದಾಶಿವ ಬ್ರಹ್ಮೇಂದ್ರರನ್ನಾಗಿ ಮಾಡಿತು. ಬ್ರಹ್ಮಜ್ಞಾನ ಪಡೆಯುವ ಹಾದಿಯನ್ನು ತೋರಿತು. ಗುರುವಿನ ಕೃಪೆಯ ನಂತರ ಶಿವರಾಮಕೃಷ್ಣ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು. 
 
ಜೀವಂತವಿದ್ದ ಮೇಲೆ ಪ್ರಾಪಂಚಿಕತೆಗೆ ಬಿದ್ದು ತೊಳಲುತ್ತಿರಬೇಕು.  ಹಾಗಿದ್ದಾಗಲೇ ಸಮಾಜ 'ಸಹಜ'ವೆನ್ನುವಂತೆ ಮರ್ಯಾದೆ ಕೊಡುವ ಹಾಗೆ ನೋಡುತ್ತದೆ. ಎಲ್ಲ ಬಂಧಗಳಿಂದ ಕಳಚಿಕೊಂಡವನನ್ನು ಹುಚ್ಚನೆಂಬಂತೆ ನೋಡುತ್ತದೆ. ಗುರುವಿನ ಉಪದೇಶ ಪಡೆದು ಮೌನಿ, ಅಂತರ್ಮುಖಿಯಾದ ಸದಾಶಿವ ಬ್ರಹ್ಮೇಂದ್ರರನ್ನು ಅಂದಿನ ಸಮಾಜ  ಮರುಳ ಎಂದು ಕರೆಯಿತು.  ಸದಾಶಿವ ಬ್ರಹ್ಮೇಂದ್ರರ ಈ ಸ್ಥಿತಿಯನ್ನು ಕಂಡು ಪರಮ ಶಿವೇಂದ್ರರ ಬಳಿ ಓಡಿದ ಕೆಲವರು ಸದಾಶಿವ ಬ್ರಹ್ಮೇಂದ್ರರಿಗೆ ಮತಿಭ್ರಮಣೆಯಾಗಿದೆ, ತಲೆ ಕೆಟ್ಟಿದೆ ಎಂದರು. 

ಈ ಮಾತನ್ನು ಕೇಳಿದ ಪರಮಶಿವೇಂದ್ರರು ಅಯ್ಯೊ... ಆತನಿಗೆ ಬಂದ ಮತಿಭ್ರಮಣೆ (ಬ್ರಹ್ಮಜ್ಞಾನ) ನನಗೆ ಉಂಟಾಗಲಿಲ್ಲವೇ! ಎಂದರಂತೆ. ಬ್ರಹ್ಮಜ್ಞಾನ ಪಡೆದು ಅಲೆಯುತ್ತಿರುವವರಿಗೆ ಪ್ರಪಂಚದ ಅರಿವು ಇರುವುದಿಲ್ಲ. ಹೀಗೆ ಎಲ್ಲೆಂದರಲ್ಲಿ ಮೈ ಮೇಲೆ ವಸ್ತ್ರವೂ ಇಲ್ಲದೆ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರು, ಒಮ್ಮೆ ಊರಿನ ನವಾಬ ತನ್ನ ರಾಣಿಯರೊಂದಿಗೆ ಕ್ರೀಡಾಸಕ್ತನಾಗಿದ್ದ ಸಂದರ್ಭದಲ್ಲಿ ಅವನ ಮುಂದೆ ಹಾದುಹೋದರು.  ಹೀಗೆ ಬ್ರಹ್ಮೇಂದ್ರರನ್ನು ಕಂಡ ನವಾಬ ಕೆಂಡಾಮಂಡಲನಾಗಿ ಬ್ರಹ್ಮೇಂದ್ರರ ಕೈ ಕತ್ತರಿಸಿದನಂತೆ. ಆದರೆ ದೇಹಧರ್ಮವನ್ನು ಮೀರಿದ್ದ ಸದಾಶಿವ ಬ್ರಹ್ಮೇಂದ್ರರು ಏನೂ ಆಗೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಸದಾಶಿವ ಬ್ರಹ್ಮೇಂದ್ರರ ಈ ನಿರ್ಲಿಪ್ತ ಸ್ಥಿತಿಯನ್ನು ಕಂಡು ನಡುಗಿದ ನವಾಬ ಓಡಿಹೋಗಿ ಬ್ರಹ್ಮೇಂದ್ರರ ಕ್ಷಮೆ ಕೋರಿದನಂತೆ.
 
ಸದಾಶಿವಬ್ರಹ್ಮೇಂದ್ರರು ಎಲ್ಲವನ್ನೂ ಕಿತ್ತೊಗೆದು, ಪ್ರಪಂಚದ ಸಂಪರ್ಕವನ್ನು ಬಿಟ್ಟರೂ ಅವರನ್ನು ಈ ಪ್ರಪಂಚ ಬಿಡಲಿಲ್ಲ.  ಪೂರ್ವಾಶ್ರಮದಲ್ಲಿ ವಾದದಲ್ಲಿ ಇವರಿಂದ ಸೋತಿದ್ದ ವಿದ್ವಾಂಸನೊಬ್ಬ ಇವರನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಉದ್ದೇಶದಿಂದ ಬಂದನಂತೆ. ಬ್ರಹ್ಮೇಂದ್ರರ ಮೌನಕ್ಕೆ ಭಂಗ ಉಂಟುಮಾಡುವುದೇ ಆತನ ಉದ್ದೇಶ.  "ನೀನು ಸಂನ್ಯಾಸಿಯೇ? ನಿಮ್ಮ ಗುರುಗಳು ಶ್ರೇಷ್ಠ ಗುರುಗಳೋ? ಅವರು ಶ್ರೇಷ್ಠರಾಗಿದ್ದರೆ ಅವರ ಶ್ರೇಷ್ಠತೆಯನ್ನು ಹೇಳು ನೋಡೋಣ ಎಂದ. ಆತನ ಮಾತನ್ನು ಕೇಳಿದ ಮೇಲೆಯೂ ಸದಾಶಿವ ಬ್ರಹ್ಮೇಂದ್ರರು ಮೌನ ಮುರಿಯಲಿಲ್ಲ.  ಅಲ್ಲೇ ನದಿಯ ಪಕ್ಕದಲ್ಲೇ ಓರ್ವ ಬಟ್ಟೆ ಒಗೆಯುತ್ತಿದ್ದ ಅಗಸನನ್ನು ಕರೆದು ತಲೆ ಮೇಲೆ ಕೈ ಇಟ್ಟರು. ಬಟ್ಟೆ ಒಗೆಯುತ್ತಿದ್ದವನ ಬಾಯಲ್ಲಿ ಸಂಸ್ಕೃತ ನಿರರ್ಗಳವಾಗಿ ಮೂಡಿತು. ನಿಂತಲ್ಲೇ  ಅತನ ಬಾಯಿಂದ ಸದಾಶಿವ ಬ್ರಹ್ಮೇಂದ್ರರ ಗುರುಗಳ ಶ್ರೇಷ್ಠತೆಯನ್ನು ಸ್ತುತಿಸುವ ಆಶು ಶ್ಲೋಕ ಹೊರಟಿತು.
 
ಮಾನಸ ಸಂಚರರೆ, ಪಿಬರೆ ರಾಮರಸಂ, ಖೇಲತಿ ಮಮ ಹೃದಯೇ, ತುಂಗಾ ತರಂಗೆ, ಗಾಯತಿ ವನಮಾಲಿ ಸೇರಿದಂತೆ ಸದಾಶಿವ ಬ್ರಹ್ಮೇಂದ್ರರಿಂದ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಅನೇಕ ಭವ್ಯ ಕೀರ್ತನೆಗಳ ರಚನೆಯಾದದ್ದು ಈ ಕೆಳಕಂಡ ಘಟನೆಯ ನಂತರ ಎಂಬ ಅಭಿಪ್ರಾಯವಿದೆ.  

ಸದಾಶಿವ ಬ್ರಹ್ಮೇಂದ್ರರು ಮೌನ ಸಾಧನೆ ಕೈಗೊಂಡು ಅದೆಷ್ಟೋ ವರ್ಷಗಳು ಕಳೆದಿತ್ತಂತೆ. ಗುರುಗಳೂ ಬ್ರಹ್ಮೈಕ್ಯರಾಗಿದ್ದರು.  ಆದರೂ ಅವರ ಉಪದೇಶದಂತೆಯೇ ಸದಾಶಿವ ಬ್ರಹ್ಮೇಂದ್ರರ ಮೌನ ವ್ರತ ಮುಂದುವರೆದಿತ್ತು. ಈ ನಡುವೆ ಮತ್ತೋರ್ವ ಶ್ರೇಷ್ಠ ವಿದ್ವಾಂಸರಾಗಿದ್ದ ಶ್ರೀಧರ ಅಯ್ಯವಾಳ್ ಸ್ವಾಮಿ ಎಂಬುವವರು ಸದಾಶಿವ ಬ್ರಹ್ಮೇಂದ್ರರನ್ನು ಭೇಟಿಯಾಗಿ "ಧ್ಯಾನದಲ್ಲಿದ್ದಾಗ ನಿಮ್ಮ ಗುರುಗಳ ಪ್ರೇರಣೆಯಾಯಿತು. ನಿನಗೆ ಮಾತನಾಡಬೇಡ ಎಂದು ಹೇಳಿದ್ದು ವಾದ ಮಾಡಬೇಡ ಎಂದೇ ಹೊರತು ಸದಾ ಮೌನಿಯಾಗಿರು ಎಂದಲ್ಲವಂತೆ. ನೀನು ಕೀರ್ತನೆಗಳನ್ನು ರಚಿಸಬೇಕು, ಆದರೆ ನೀನು ಮಾತನಾಡದೇ ಇರುವುದರಿಂದ ಕೀರ್ತನೆಗಳು ಮೂಡುವುದಿಲ್ಲವಂತೆ" ಎಂದರಂತೆ.  ಈ ಪ್ರೇರಣೆಯ ಮೂಲಕ ಸದಾಶಿವ ಬ್ರಹ್ಮೇಂದ್ರರ ಧ್ವನಿಯಿಂದ ಮೂಡಿದ ಮೊತ್ತ ಮೊದಲ ಕೀರ್ತನೆಯೇ "ಪಿಬರೇ ರಾಮ ರಸಂ” ಎಂಬ ಅದ್ಭುತ ಕಾವ್ಯವಂತೆ. 
 
ಸದಾಶಿವ ಬ್ರಹ್ಮೇಂದ್ರರ ಮೌನದ ತಪಸ್ಸಿನ ಫಲವಾಗಿ ಕೀರ್ತನೆಗಳಷ್ಟೇ ಅಲ್ಲದೇ ಆತ್ಮ ವಿದ್ಯಾವಿಲಾಸ ಎಂಬ ಅದ್ವೈತ ಗ್ರಂಥವೂ ರಚನೆಯಾಯ್ತು. ಅದು ಅದ್ವೈತಿಗಳಿಗೆ, ಆತ್ಮಸಾಕ್ಷಾತ್ಕಾರಕ್ಕಾಗಿ ತಪಿಸುವವರಿಗೆ ದಾರಿ ದೀವಿಗೆಯಾಯ್ತು. ಅವಧೂತ ಸ್ಥಿತಿಗೆ ತಲುಪಿದ್ದ ಶೃಂಗೇರಿಯ ಚಂದ್ರಶೇಖರ ಭಾರತೀ ಸ್ವಾಮಿಗಳು ಸದಾಶಿವ ಬ್ರಹ್ಮೇಂದ್ರರ ಆತ್ಮ ವಿದ್ಯಾವಿಲಾಸವನ್ನು ಅನುಸಂಧಾನ ಮಾಡಿಕೊಂಡಿದ್ದರು. ಚಂದ್ರಶೇಖರ ಭಾರತಿ ಸ್ವಾಮಿಗಳಷ್ಟೇ ಅಲ್ಲ. ಅವರ ಗುರುಗಳಾಗಿದ್ದ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳವರೂ, ಉಗ್ರನೃಸಿಂಹ ಭಾರತೀ ಸ್ವಾಮಿಗಳೂ ಸಹ ಸದಾಶಿವ ಬ್ರಹ್ಮೇಂದ್ರರನ್ನು ಆರಾಧಿಸುತ್ತಿದ್ದರಂತೆ. 

ಹಿಂದೊಮ್ಮೆ ಶೃಂಗೇರಿಯ ಗುರುಗಳಾಗಿದ್ದ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ತಮಿಳುನಾಡಿನಲ್ಲಿ ವಿಜಯಯಾತ್ರೆಯ ವೇಳೆ ತಿರುಚ್ಚಿಯ ಸಮೀಪ ಪಯಣಿಸುತ್ತಿದ್ದಾಗ ಅವರ ಪಲ್ಲಕ್ಕಿ ಹಠಾತ್ತನೆ ನಿಂತು ಬಿಟ್ಟಿತ್ತಂತೆ. ಪಲ್ಲಕ್ಕಿ ಹೊತ್ತವರು ತಮ್ಮನ್ಯಾವುದೋ ಶಕ್ತಿ ಎಳೆದು ನಿಲ್ಲಿಸಿದೆ ಎಂದು ಅಳಲು ತೋಡಿಕೊಂಡಾಗ ಧ್ಯಾನಸ್ಥರಾದ ಗುರುಗಳಿಗೆ ಸದಾಶಿವ ಬ್ರಹ್ಮೇಂದ್ರರ ಶಕ್ತಿ ಅರಿವಾಯ್ತಂತೆ. ಸಮಾಧಿಯ ದರ್ಶನ ಪಡೆದು ಮೂರು ದಿನ ಅಲ್ಲೇ ಉಪವಾಸವಿದ್ದು ಧ್ಯಾನಾವಸ್ಥೆಯಲ್ಲಿದ್ದರು. ಕೊನೆಗೆ ಸ್ವತಃ ಸದಾಶಿವ ಬ್ರಹ್ಮೇಂದ್ರರು ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳೊಂದಿಗೆ ಮಾತನಾಡಿದ ಅನುಭಾವ ಮೂಡಿತು. ಹೀಗೆ ಶಿವಾಭಿನವ ನೃಸಿಂಹ ಭಾರತಿಗಳು ಸದಾಶಿವ ಬ್ರಹ್ಮೇಂದ್ರರನ್ನು ಕುರಿತು ಸದಾಶಿವೇಂದ್ರ ಸ್ತವ ಹಾಗೂ ಸದಾಶಿವೇಂದ್ರ ಪಂಚರತ್ನ ಎಂಬ ಶ್ಲೋಕಗಳನ್ನೂ ರಚಿಸಿದರು.

ಸದಾಶಿವ ಬ್ರಹ್ಮೇಂದ್ರರು  1755 ವರ್ಷದಲ್ಲಿ ನೆರೂರಿನಲ್ಲಿ ಜೀವ ಸಮಾಧಿಸ್ಥರಾದರಂತೆ. ಸದಾಶಿವ ಬ್ರಹ್ಮೇಂದ್ರರು ಸಜೀವ ಸಮಾಧಿಸ್ಥರಾದ ಕುರಿತು ಪರಮಹಂಸಯೋಗಾನಂದರು ಸಹಾ ತಮ್ಮ 'ಯೋಗಿಯೊಬ್ಬರ ದಿನಚರಿ' ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಮಾಹಿತಿ ಕೃಪೆ: ಶ್ರೀನಿವಾಸ ರಾವ್ 
Srinivas Rao
Manthana.blogspot.com


Sadasiva Brahmendra - a saint, music composer and Advaita philosopher 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ