ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸದಾನಂದ ಕನವಳ್ಳಿ


 ಸದಾನಂದ ಕನವಳ್ಳಿ


ಕೆಲವೊಂದು ವಿದ್ವತ್ಪೂರ್ಣ ಬರಹಗಳನ್ನು ಓದಿದಾಗ ಇದನ್ನು ಬರೆದವರು ಸದಾನಂದ ಕನವಳ್ಳಿ ಅವರೇ ಎಂದೆನಿಸುವಷ್ಟು ವೈಶಿಷ್ಟತೆ ಸದಾನಂದ ಕನವಳ್ಳಿ ಅವರ ಬರಹಗಳ ಮೋಡಿ.  ಅಧ್ಯಾಪನದ ಜೊತೆಗೆ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಚೆಲುವನ್ನು ಬಿಂಬಿಸುವ ಕಾರ್ಯ ಮತ್ತು ಕೃತಿಗಳನ್ನು ಮಾಡಿಹೋದವರು ಸದಾನಂದ ಕನವಳ್ಳಿ.

ಸದಾನಂದ ಕನವಳ್ಳಿಯವರು 1935ರ ಸೆಪ್ಟೆಂಬರ್ 18ರಂದು  ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಜನಿಸಿದರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣವನ್ನು  ಹಾವೇರಿಯಲ್ಲಿ ನಡೆಸಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವಿಗಳನ್ನು ಗಳಿಸಿದರು. ಡಾ. ವಿ.ಕೃ. ಗೋಕಾಕ್ ಮತ್ತು ಅರಮೆಂಡೊ ಮೆನೆಜಿಸ್ ಅಂತಹ ವಿದ್ವಾಂಸರ ಶಿಷ್ಯತ್ವ ಅವರಿಗೆ ಲಭಿಸಿತ್ತು. 

ಸದಾನಂದ ಕನವಳ್ಳಿಯವರು ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜು ಮುಂತಾದೆಡೆ ಅಧ್ಯಾಪನ ನಡೆಸಿದರು. ವಿಜಾಪುರದಲ್ಲಿ ಉಪನ್ಯಾಸಕರಾಗಿ, ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. 

ಸದಾನಂದ ಕನವಳ್ಳಿಯವರು 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ ಈ ಅಲ್ಪಾವಧಿಯಲ್ಲೇ  110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. 

ಸದಾನಂದ ಕನವಳ್ಳಿ ಅವರಿಗೆ 
ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟವಿತ್ತು. ಕರ್ನಾಟಕ, ಗುಲ್ಬರ್ಗಾ ವಿಶ್ವವಿದ್ಯಾಲಯ ಕಾಲೇಜುಗಳ ಪ್ರಾಚಾರ‍್ಯರು ಮತ್ತು ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಧಾರವಾಡದ ಸಿತಾರ ರತ್ನ ರಹೀಮ್ ಖಾನ್ ಸಮಿತಿ ಅಧ್ಯಕ್ಷರಾಗಿ, ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷರಾಗಿ, ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್ ಸದಸ್ಯರಾಗಿ ಮುಂತಾದ   ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 

ಸದಾನಂದ ಕನವಳ್ಳಿ ಅವರು  ಹಲವಾರು ಜೀವನ ಚರಿತ್ರೆಗಳು, ಸಂಪಾದಿತ ಕೃತಿಗಳು ಮತ್ತು ಅನುವಾದಿತ ಕೃತಿಗಳ ರಚನೆ ಮಾಡಿದ್ದಾರೆ. 

ಸದಾನಂದ ಕನವಳ್ಳಿ ಅವರ ಅನುವಾದಗಳಲ್ಲಿ ವಾಣಿಜ್ಯ ಮತ್ತು ಬ್ಯಾಂಕಿಂಗ್, ರೊಮಿಲಾ ಥಾಪಸ್, ಸಂಗೀತ ಕೋಣೆ, ಭೀಮಸೇನ ಜೋಶಿ, ರಾಬರ್ಟ್ ಸಿವೆಲ್, ಮಿಥಿಲೆಯನ್ನಾಳಿದ ಕರ್ನಾಟರು, ಹಿಮಾಚಲವನ್ನಾಳಿದ ಸೇನರು, ವಿಜಯನಗರದ ಆರಂಭಿಕ ಇತಿಹಾಸ, ಸಾವಿಗೆ ಆಹ್ವಾನ, ಮರೆತುಹೋದ ವಿಜಯನಗರ ಸಾಮ್ರಾಜ್ಯ ಮೊದಲಾದುವು ಸೇರಿವೆ. ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಮಾತ್ರವಲ್ಲದೆ, ಕನ್ನಡದಿಂದ ಇಂಗ್ಲಿಷಿಗೆ ಹಾಗೂ ಇಂಗ್ಲಿಷಿನಿಂದ ಹಿಂದಿಗೆ ಕೂಡ ಭಾಷಾಂತರ ಮಾಡಿ ಪುಸ್ತಕಗಳನ್ನು ಪ್ರಕಟಿಸಿದ್ದರು. 

ಸದಾನಂದ ಕನವಳ್ಳಿ ಅವರ ಸಂಪಾದಿತ ಕೃತಿಗಳಲ್ಲಿ ಲಕ್ಷ್ಮೇಶ್ವರದ ಇತಿಹಾಸದ ‘ಪುಲಿಗೆರೆ’, ವೀರಶೈವ ಸಾಹಿತ್ಯ ಸಮೀಕ್ಷೆ, ಪ್ರೊ. ಸ.ಸ. ಮಾಳವಾಡರ ‘ವ್ಯಾಸಂಗ’, ಡಾ. ಎಂ.ಎಂ. ಕಲಬುರ್ಗಿ ಯವರ ‘ಮಹಾಮಾರ್ಗ’ ಮುಂತಾದವು ಮೂಡಿವೆ.

ಸದಾನಂದ ಕನವಳ್ಳಿ ಅವರು ಮೂಡಿಸಿರುವ  ಜೀವನಚರಿತ್ರೆಗಳಲ್ಲಿ ದೇಶಭಕ್ತ ಕೌಜಲಗಿ ಶ್ರೀನಿವಾಸರಾಯರು, ನಾಟಕ ಸಾರ್ವಭೌಮ, ಶಿರಹಟ್ಟಿ ವೆಂಕೋಬರಾಯರು, ನಾಟಕರತ್ನ ಗುಬ್ಬಿ ವೀರಣ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಮಲ್ಲಿಕಾರ್ಜುನ ಮನಸೂರ, ಸವಾಯಿ ಗಂಧರ್ವ, ಹುಕ್ಕೇರಿ ಬಾಳಪ್ಪ, ಬಸವರಾಜ ರಾಜಗರು, ಗಂಗೂಬಾಯಿ ಹಾನಗಲ, ಕರ್ನಾಟಕದ ಹಿಂದೂಸ್ಥಾನಿ ಸಂಗೀತಗಾರರು ಮುಂತಾದವು ಸೇರಿವೆ.

ಸದಾನಂದ ಕನವಳ್ಳಿ ಅವರು ಕ್ರೀಡೆಗಳ ಬಗ್ಗೆ ಸಹಾ ಬರೆದಿದ್ದು ಒಲಿಂಪಿಕ್ಸ್ ನಡೆದು ಬಂದ ದಾರಿ ಎಂಬ ಕೃತಿ ಪ್ರಸಿದ್ಧವಾಗಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಅವರು ರಚಿಸಿದ ’ಕಿತ್ತುಕೋ ಹಚ್ಚಿಕೋ’ ಗ್ರಂಥವು ಕುಲವಳ್ಳಿ ಗುಡ್ಡದ ಭೂಹೀನರ ಹೋರಾಟವನ್ನು ಕುರಿತಾದದ್ದು.

Quest for Justice, Mallikarjuna Manasur, Karnataka HImdustani Musicians, Eminent Lingayats ಮುಂತಾದವು ಸದಾನಂದ ಕನವಳ್ಳಿ  ಅವರ ಇಂಗ್ಲಿಷ್ ಕೃತಿಗಳು. ಇದಲ್ಲದೆ ಪತ್ರಿಕೆಗಳಿಗೆ, ವಿಶ್ವಕೋಶಕ್ಕೆ ಬರೆದ ಹಲವಾರು ಸಂದರ್ಶನ ಲೇಖನಗಳು, ಮತ್ತು ವ್ಯಕ್ತಿ ಮತ್ತು ವಿಚಾರಗಳ ಬಗ್ಗೆ ಅನೇಕ ಬರಹಗಳನ್ನು ಮಾಡಿದ್ದಾರೆ.

ಸದಾನಂದ ಕನವಳ್ಳಿ ಅವರಿಗೆ ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿಯಿಂದ ಕಲಾವಿಮರ್ಶೆಗೆ ಪ್ರಶಸ್ತಿ, ರಾಣಿಬೆನ್ನೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳು ಸಂದಿದ್ದವು.

ಸದಾನಂದ ಕನವಳ್ಳಿ ಅವರು 2015ರ ಏಪ್ರಿಲ್ 3ರಂದು ಈ ಲೋಕವನ್ನಗಲಿದರು. ಅವರು ತಮ್ಮ ದೇಹವನ್ನು ಸಹಾ ವ್ಯರ್ಥಮಾಡದೆ ಎಸ್‌ಡಿಎಂ ಆಸ್ಪತ್ರೆಗೆ ದಾನಮಾಡಿಹೋದವರು. 

On the birth anniversary of writer, cultural activist Prof. Sadananda Kanavalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ