ಎಚ್. ಎಲ್. ಪುಷ್ಪ
ಎಚ್. ಎಲ್. ಪುಷ್ಪ
ಡಾ. ಎಚ್. ಎಲ್. ಪುಷ್ಪ ಕನ್ನಡದ ವಿಶಿಷ್ಟ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಳ್ಳಿ ಉಜ್ಜನಿಯಲ್ಲಿ 1962 ಸೆಪ್ಟಂಬರ್ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ವಿಜ್ಞಾನದಲ್ಲಿ ಪದವಿ ಶಿಕ್ಷಣ, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯ ನಂತರ ರಾಜ್ಯದ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ಪ್ರಸ್ತುತ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ 'ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ'ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಸಂದಿದೆ.
'ಅಮೃತಮತಿಯ ಸ್ವಗತ’ ಕಾವ್ಯ ಸಂಕಲನದಿಂದ ಹೆಸರಾದ ಎಚ್.ಎಲ್.ಪುಷ್ಪ ಅವರಿಗೆ 'ರಾತ್ರಿ ರಾಣಿ' ಇಂಗ್ಲಿಷ್ ರೂಪದ ಅನುವಾದಕ್ಕೆ ಒರಿಸ್ಸಾದ ಉದಯ ಭಾರತಿ ರಾಷ್ಟ್ರೀಯ ಪುರಸ್ಕಾರ ಒಳಗೊಂಡಂತೆ ಹಲವು ಪ್ರಶಸ್ತಿಗಳು ಸಂದಿವೆ. ‘ಗಾಜುಗೋಳ’ ಸಂಕಲನಕ್ಕೆ ಮಹತ್ವದ ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಡಾ. ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಸಾರಂಗಮಠ ಪಾಟೀಲ ಪುರಸ್ಕಾರ ಒಳಗೊಂಡಂತೆ ಹಲವು ಪ್ರಶಸ್ತಿಗಳು ಸಂದಿವೆ. 'ಭೂಮಿಯಲ್ಲಿ ಇವಳು’ ಎಂಬ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ‘ಲೋಹದ ಕಣ್ಣು’ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದಿನಕರ ದೇಸಾಯಿ ಕಾವ್ಯ ಪುರಸ್ಕಾರಗಳು ಸಂದಿವೆ. 'ಸ್ತ್ರೀ ಎಂದರೆ ಅಷ್ಟೇ ಸಾಕೆ’ ವಿಮರ್ಶಾ ಸಂಕಲನಕ್ಕೆ 2015ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ‘ಸಾಹಿತ್ಯ ಶ್ರೀ’ ಗೌರವ ಪ್ರಶಸ್ತಿ ಸಂದಿದೆ. ಮಂತ್ರಂ ಆರ್ಟ್ಸ್ ಸಂಸ್ಥೆಯ ಆಫ್ರಿಕಾದ ಪ್ರಸಿದ್ದ ಕವಿಯತ್ರಿ ‘ಮಾಯಾ ಏಂಜಲೋ’ ಹೆಸರಿನ ಕಾವ್ಯ ಪುರಸ್ಕಾರ, ನಾಡಚೇತನ ಸಂಸ್ಥೆಯ ಗೌರವ ಪುರಸ್ಕಾರಗಳೂ ಸಂದಿವೆ.
ಪುಷ್ಪ ಅವರು ದೆಹಲಿ, ಸಿಕ್ಕಿಂ, ಭುವನೇಶ್ವರಗಳಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿಗಳೂ ಸೇರಿದಂತೆ ಅನೇಕ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.
ಕಾವ್ಯಾಸಕ್ತಿಯ ಜೊತೆಗೆ ನಾಟಕ ರಚನೆ, ವಿಮರ್ಶೆ ಮತ್ತು ಅಂಕಣ ಬರಹಗಳು ಹೀಗೆ ಪುಷ್ಪ ಅವರ ಬರಹ ಕ್ಷೇತ್ರ ವ್ಯಾಪಿಸಿದೆ. ಇವರ ಕೃತಿಗಳಲ್ಲಿ ಅಮೃತಮತಿ ಸ್ವಗತ, ಗಾಜುಗೋಳ, ಲೋಹದ ಕಣ್ಣು, ಸೊಲಾಬರಸ್ ಹುಡುಗರು ಹಾಗೂ – ಎಕ್ಕದ ಬೀಜ ಮುಂತಾದ ಕಾವ್ಯ ಸಂಕಲನಗಳಿವೆ. ಮದರಂಗಿ ವೃತ್ತಾಂತ ಸಮಗ್ರ ಕಾವ್ಯ. 'ಕವಿತೆ-1992' ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಇವರು ಸಂಪಾದಿಸಿದ ಕವಿತೆಗಳು. ಇದಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರಕ್ಕಾಗಿ ‘ಗಂಗಾಧರ ಚಿತ್ತಾಲ ಸಮಗ್ರ ಕಾವ್ಯ' ಸಂಪಾದಿಸಿದ್ದಾರೆ. ಡಾ. ಎಸ್.ವಿ. ಪ್ರಭಾವತಿ ಜೊತೆ ಸೇರಿ 50 ಲೇಖಕಿಯರ ಕೃತಿ ಸಂಪಾದನೆ ಮಾಡಿದ್ದಾರೆ. ‘ಅನ್ವೇಷಣೆ’ ಸಾಹಿತ್ಯ ಪತ್ರಿಕೆಯ ಗೌರವ ಸಂಪಾದಕಿಯಾಗಿದ್ದಾರೆ. ಪುಷ್ಪ ಅವರ ನಾಟಕಗಳಲ್ಲಿ ಭೂಮಿಯಲ್ಲಿ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ (ಪಂಪನ ಆದಿಪುರಾಣ ಆಧಾರ), ಪರ್ವಾಪರ್ವ (ಕುಮಾರವ್ಯಾಸನ ಗದುಗಿನ ಭಾರತ ಆಧಾರ) ಮುಂತಾದವು ಸೇರಿವೆ ವಿಮರ್ಶೆ ಕೃತಿಗಳಲ್ಲಿ ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ, ಗಂಧಗಾಳಿ, ಸ್ತ್ರೀ ಅಂದರೆ ಅಷ್ಟೇ ಸಾಕೆ? ಇವೆ. ‘ಸುಧಾ’ ವಾರಪತ್ರಿಕೆಯೂ ಸೇರಿದಂತೆ ಹಲವು ನಿಯತಕಾಲಿಕಗಳಲ್ಲಿ ಅವರ ಅಂಕಣಗಳು ಮತ್ತು ಇತರ ಬರಹಗಳು ಮೂಡಿವೆ. ಪ್ರಸ್ತುತದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇವರ 'ರಸಗ್ರಹಣ' ಅಂಕಣ ಪ್ರಕಟಗೊಳ್ಳುತ್ತಿದೆ.
ಪುಷ್ಪ ಅವರು 2022ರ ಸೆಪ್ಟೆಂಬರ್ 18ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಡಾ. ಎಚ್. ಎಲ್. ಪುಷ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Pushpa HL Madam 🌷🙏🌷
ಕಾಮೆಂಟ್‌ಗಳು